ಒಂದು ದಿನ ಮಧ್ಯಾಹ್ನ. ಕೃಷ್ಣ ಮತ್ತು ಅವನ ಪುಟ್ಟ ಗೋಪಾಲಕ ಗೆಳೆಯರು ಹುಲ್ಲುಗಾವಲಿನಲ್ಲಿದ್ದ ಒಂದು ಮರದ ಸುತ್ತ ಓಡುತ್ತಿದ್ದರು. ಅಲ್ಲೇ ಅವರ ಕರುಗಳು ಹುಲ್ಲು ಮೇಯುತ್ತಿದ್ದವು. ಅವರು ಯಾವಾಗಲೂ ವಿವಿಧ ಆಟಗಳನ್ನು ಆಡುತ್ತ ತಮ್ಮ ಕಾಲವನ್ನು ಸಂತೋಷವಾಗಿ ಕಳೆಯುತ್ತಿದ್ದರು. ಆಗ ಅಲ್ಲಿ ಇದ್ದಕ್ಕಿದ್ದಂತೆಯೇ ಒಂದು ಅಪರಿಚಿತ ಕರು ಕಾಣಿಸಿಕೊಂಡಿತು. ಮಕ್ಕಳು ಮತ್ತು ಇತರ ಕರುಗಳನ್ನು ಎದುರಿಸುವ ರೀತಿಯಲ್ಲಿ ಅದು ನೋಡುತ್ತಿತ್ತು. ಓಡಿ ಓಡಿ ಸಾಕಾದ ಕೃಷ್ಣ ಉಸಿರೆಳೆದುಕೊಳ್ಳಲು ಒಂದು ಕ್ಷಣ ನಿಂತ. ಆ ಕರುವು ಕೃಷ್ಣನ ಕಡೆಗೆ ದಿಟ್ಟತನದಿಂದ ಕುಕ್ಕುಲೋಟದಲ್ಲಿ ನುಗ್ಗಿತು. ದಿಟದಲ್ಲಿ ಆ ಕರು ಒಬ್ಬ ರಾಕ್ಷಸ. ವತ್ಸಾಸುರ ಎಂದು ಅವನ ಹೆಸರು. ಕೃಷ್ಣನನ್ನು ಕೊಲ್ಲಲು ಅವನನ್ನು ಕಳಿಸಲಾಗಿತ್ತು.

ಕರುವಿನಂತೆ ವೇಷ ಮರೆಸಿಕೊಂಡಿದ್ದ ವತ್ಸಾಸುರ ಒರಟಾಗಿ ಕೃಷ್ಣನನ್ನು ತಿವಿದು ಕೆಳಗೆ ಬೀಳಿಸಿ ತುಳಿದು ಹಾಕಲು ಪ್ರಯತ್ನಿಸಿದ. “ಅಲ್ನೋಡು ಕೃಷ್ಣ!” ಎಂದು ಕೂಗಿದ ಬಲರಾಮ ಕೃಷ್ಣನನ್ನು ಬೀಳದಂತೆ ಹಿಡಿದುಕೊಂಡ. “ಬಲರಾಮ, ಇದು ಸಾಧಾರಣ ಕರುವಲ್ಲ. ಅವನೊಬ್ಬ ರಾಕ್ಷಸ!” ಎಂದು ಕೃಷ್ಣ ತನ್ನ ಅಣ್ಣನ ಕಿವಿಯಲ್ಲಿ ಪಿಸುಗುಟ್ಟಿದ.
ಕೃಷ್ಣನು ಪುಟ್ಟ ಹುಡುಗನಾಗಿದ್ದರೂ ಆ ರಾಕ್ಷಸನಿಗಿಂತ ಬಲಶಾಲಿಯಾಗಿದ್ದ. ಕೃಷ್ಣನು ವತ್ಸಾಸುರನ ಕೊಂಬುಗಳನ್ನು ಭದ್ರವಾಗಿ ಹಿಡಿದುಕೊಂಡು ಗಿರಗಿರನೆ ಸುತ್ತಿಸಿದ. ಅವನು ವತ್ಸಾಸುರನನ್ನು ಎತ್ತರಕ್ಕೆ ಆಕಾಶದ ಕಡೆಗೆ ಎಸೆದು ಬಿಟ್ಟ. ನೆಲದ ಕಡೆಗೆ ಧಾವಿಸುವಾಗ ವತ್ಸಾಸುರನು ಸುಧಾರಿಸಿಕೊಂಡ. ನಾಲ್ಕು ಕಾಲುಗಳ ಮೇಲೆ ತತ್ತರಿಸುತ್ತಾ ನಿಂತ ಅವನು ಬಹಳ ವೇಗವಾಗಿ ಕೃಷ್ಣನ ಕಡೆಗೆ ನುಗ್ಗಿದ. ತನಗೆ ಇಷ್ಟೊಂದು ಕೋಪ ಬರಿಸಿದ್ದ ಆ ಪುಟ್ಟ ಹುಡುಗನನ್ನು ಕೊಲ್ಲಲು ಅವನು ನಿರ್ಧರಿಸಿದ್ದ.
ಮಿಂಚಿನಷ್ಟು ವೇಗವಾಗಿ ವತ್ಸಾಸುರನು ತನ್ನ ತಲೆಯನ್ನು ಬಗ್ಗಿಸಿ ಚೂಪು ಕೊಂಬುಗಳನ್ನು ಕೃಷ್ಣನ ಹೊಟ್ಟೆಗೆ ತಿವಿಯಲು ಸಜ್ಜಾಗಿ ನಿಂತ. ಆದರೆ ಕೃಷ್ಣನು ಮಿಂಚಿಗಿಂತಲೂ ವೇಗವಾಗಿದ್ದ. ಅವನ ಪುಟ್ಟ ಹೊಟ್ಟೆಯನ್ನು ತಿವಿಯುತ್ತೇನೆಂದು ಭಾವಿಸಿ ರಾಕ್ಷಸನು ನುಗ್ಗಿದ ಕ್ಷಣದಲ್ಲಿ ಕೃಷ್ಣನು ಚಕ್ಕನೆ ಪಕ್ಕಕ್ಕೆ ಸರಿದ. ರಾಕ್ಷಸನು ಎಷ್ಟು ವೇಗವಾಗಿ ನೆಲಕ್ಕೆ ಡಿಕ್ಕಿ ಹೊಡೆದನೆಂದರೆ ಅವನ ಕೊಂಬುಗಳು ಹುಲ್ಲು ಬೆಳೆದಿದ್ದ ನೆಲದಲ್ಲಿ ಆಳವಾಗಿ ಸಿಕ್ಕಿಹಾಕಿಕೊಂಡವು!
ಭಯಭೀತರಾಗಿದ್ದ ಗೋಪಾಲ ಬಾಲಕರೆಲ್ಲ ಈಗ ಗಹಗಹಿಸಿ ನಕ್ಕರು. ರಾಕ್ಷಸನು ಒದ್ದಾಡುತ್ತಿರುವುದನ್ನು ನೋಡಿ ಕೃಷ್ಣನಿಗೆ ಜಯಕಾರ ಮಾಡಿದರು. ವತ್ಸಾಸುರನು ಮಣ್ಣಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ತನ್ನ ಕೊಂಬುಗಳನ್ನು ಹೊರಗೆಳೆದುಕೊಳ್ಳಲು ತನ್ನ ಬಲವನ್ನೆಲ್ಲಾ ಬಿಟ್ಟು ಪ್ರಯತ್ನಿಸುತ್ತಿದ್ದ. ಆ ಕರುವು ಬಿಡುಗಡೆ ಹೊಂದುವವರೆಗೂ ಕೃಷ್ಣನು ತಾಳ್ಮೆಯಿಂದ ಕಾಯುತ್ತಿದ್ದ. ಮತ್ತೆ ಇಬ್ಬರೂ ಮುಖಾಮುಖಿಯಾದರು. ಈ ಬಾರಿ ಕೃಷ್ಣನು ಆ ಕರುವೇಷದ ರಾಕ್ಷಸನ ಬಾಲವನ್ನು ಇನ್ನೂ ಲೀಲಾಜಾಲವಾಗಿ ಹಿಡಿದುಕೊಂಡ. ಅವನು ವತ್ಸಾಸುರನನ್ನು ತಲೆಗಿಂತ ಮೇಲಕ್ಕೆತ್ತಿ ಮರದ ಬುಗುರಿಯಂತೆ ಗಿರಗಿರ ತಿರುಗಿಸತೊಡಗಿದ. ಈ ಬಲಪ್ರಯೋಗದಿಂದ ರಾಕ್ಷಸನು ಸತ್ತೇಹೋದ. ಅವನ ನಿರ್ಜೀವ ದೇಹವು ಹುಲ್ಲಿನ ಮೇಲೆ ಧೊಪ್ಪನೆ ಬಿತ್ತು.

ಸಂತೋಷಗೊಂಡ ಗೋಪಾಲ ಬಾಲಕರು, “ಕೃಷ್ಣನಿಗೆ ಜಯವಾಗಲಿ!” ಎಂದು ಕೂಗಿದರು. ಮತ್ತೊಮ್ಮೆ ಕೃಷ್ಣನು ಅವರ ಪ್ರಾಣವನ್ನು ಉಳಿಸಿದ್ದ. ಅವರು ತಮ್ಮ ವೀರ ನಾಯಕನನ್ನು ಎತ್ತಿಕೊಂಡು ಮರದ ಸುತ್ತ ಸುತ್ತಿದರು. ಅಂತಹ ಅದ್ಭುತ ಬಾಲಕ ತಮ್ಮ ಗೆಳೆಯನಾಗಿರುವುದಕ್ಕೆ ಅವರಲ್ಲಿ ಕೃತಜ್ಞತೆ ತುಂಬಿ ತುಳುಕುತ್ತಿತ್ತು.






Leave a Reply