ಶ್ರೀ ಕೃಷ್ಣನ ಪವಿತ್ರ ನಾಮವನ್ನು ಜಪಿಸುವ ಭಕ್ತನನ್ನು ಮನಸ್ಸಿನಲ್ಲಿ ಗೌರವಿಸಬೇಕು. ಆಧ್ಯಾತ್ಮಿಕ ದೀಕ್ಷೆ ಪಡೆದು ವಿಗ್ರಹಾರಾಧನೆ ಮಾಡುವ ಭಕ್ತನಿಗೆ ನಮ್ರ ನಮಸ್ಕಾರಗಳನ್ನು ಸಲ್ಲಿಸಬೇಕು. ಅಚಲ ಭಕ್ತಿಸೇವೆಯಲ್ಲಿ ಮುಂದುವರಿದು, ಇತರರನ್ನು ನಿಂದಿಸುವ ಸ್ವಭಾವವಿಲ್ಲದ ಪರಿಶುದ್ಧ ಭಕ್ತನ ಸಹವಾಸ ಮಾಡಿ ಅವನ ಸೇವೆಯಲ್ಲಿ ನಿಷ್ಠೆಯಿಂದ ತೊಡಗಬೇಕು.
– ಶ್ರೀಲ ರೂಪ ಗೋಸ್ವಾಮಿ, ಉಪದೇಶಾಮೃತ
* * * *
ಪ್ರೀತಿಯ ಪ್ರಭುವೇ, ಅದೃಷ್ಟ ದೇವತೆಯ ಪತಿಯೇ, ನಿನ್ನ ಸೇವೆಯಲ್ಲಿ ತೊಡಗಿರುವ ಭಕ್ತರು, ನಿರಾಕಾರವಾದಿಗಳು ತಮ್ಮ ಉನ್ನತ ಸ್ಥಾನದಿಂದ ಪತನಗೊಳ್ಳುವಂತೆ ಪತನಗೊಳ್ಳುವುದಿಲ್ಲ. ನಿನ್ನಿಂದ ರಕ್ಷಿಸಲ್ಪಟ್ಟಿರುವ ಭಕ್ತರು, ವಿಮೋಚನೆಯ ಹಾದಿಯಲ್ಲಿ ಸದಾ ಮುಗ್ಗರಿಸುವ ಅಡಚಣೆಗಳನ್ನು ಹಾಕುವ ಮಾಯೆಯ ಅನೇಕ ದಂಡನಾಯಕರ ಶಿರದ ಮೇಲೆಯೇ ಪ್ರಯಾಣಿಸಬಹುದು. ಪ್ರೀತಿಯ ಭಗವಂತನೇ, ನೀನು ಜೀವಿಗಳ ಅನುಕೂಲಕ್ಕಾಗಿ ನಿನ್ನ ಶಾಶ್ವತ ಅಲೌಕಿಕ ರೂಪದಲ್ಲಿ ಆವಿರ್ಭವಿಸುವೆ. ಇದರಿಂದ ಅವರು ನಿನ್ನನ್ನು ಪ್ರತ್ಯಕ್ಷ ನೋಡಬಹುದು ಮತ್ತು ಧರ್ಮ ಗ್ರಂಥಗಳಲ್ಲಿ ಶಿಫಾರಸು ಮಾಡಿರುವಂತೆ ವೇದಗಳ ವಿಧಿಗಳ ಆಚರಣೆ, ಧ್ಯಾನ ಮತ್ತು ಭಕ್ತಿ ಸೇವೆಯ ಮೂಲಕ ತಮ್ಮ ಯಜ್ಞವನ್ನು ನಿನಗೆ ಅರ್ಪಿಸಬಹುದು. ಪ್ರೀತಿಯ ಭಗವಂತನೇ, ನಿನ್ನ ಸ್ಥಾನದ ಬಗೆಗಿನ ಎಲ್ಲ ಊಹಾತ್ಮಕ ಅಜ್ಞಾನವನ್ನು ನಿರ್ಮೂಲನ ಮಾಡುವ ರೂಪವಾದ, ಆನಂದಮಯ ಮತ್ತು ಪರಿಪೂರ್ಣ ಜ್ಞಾನಹೊಂದಿದ ನಿನ್ನ ಶಾಶ್ವತ ಅಲೌಕಿಕ ರೂಪದಲ್ಲಿ ನೀನು ಆವಿರ್ಭವಿಸದಿದ್ದರೆ ಜನರೆಲ್ಲ ತಮ್ಮ ತಮ್ಮ ಪ್ರಕೃತಿಯ ಲೌಕಿಕ ಗುಣಗಳಂತೆ ನಿನ್ನ ಬಗೆಗೆ ಸುಮ್ಮನೆ ಊಹಿಸುತ್ತಿದ್ದರು.
– ದೇವತೆಗಳು, ಶ್ರೀಮದ್ ಭಾಗವತ
* * * *
ಲೌಕಿಕವಾಗಿ ದರಿದ್ರರಾದವರ ಸೊತ್ತು ಎನಿಸಿದ ನಿನಗೆ ನನ್ನ ಪ್ರಣಾಮಗಳು. ಪ್ರಕೃತಿಯ ಲೌಕಿಕ ಗುಣಗಳ ಕ್ರಿಯೆ ಮತ್ತು ಪ್ರತಿಕ್ರಿಯೆಗಳೊಂದಿಗೆ ನಿನಗೆ ಯಾವ ಸಂಬಂಧವೂ ಇಲ್ಲ. ನೀನು ಸ್ವಯಂ ತೃಪ್ತ. ಆದುದರಿಂದಲೇ ನೀನು ಅತ್ಯಂತ ಸೌಮ್ಯ ಮತ್ತು ಅದ್ವೈತಿಗಳ ಪ್ರಭು.
– ರಾಣಿ ಕುಂತಿ, ಶ್ರೀಮದ್ ಭಾಗವತ 1.8.27
* * * *
ದೇವೋತ್ತಮ ಪರಮ ಪುರುಷನು ಪರಿಪೂರ್ಣ ಮತ್ತು ಸಂಪೂರ್ಣ. ಅವನು ಸಂಪೂರ್ಣನಾಗಿರುವುದರಿಂದ, ಅವನಿಂದ ಹೊರಹೊಮ್ಮಿದ ಈ ಇಂದ್ರಿಯಗೋಚರವಾದ ವಿಶ್ವವು ಪೂರ್ಣವಾಗಿದೆ. ಈ ಪೂರ್ಣದಿಂದ ಉತ್ಪಾದಿಸಿದುದೆಲ್ಲವೂ ಸಂಪೂರ್ಣವಾಗಿರುತ್ತದೆ. ಅವನೇ ಸಮಗ್ರವಾಗಿರುವುದರಿಂದ, ಅವನಿಂದ ಅಸಂಖ್ಯ ಸಂಪೂರ್ಣ ಘಟಕಗಳು ಹೊರಹೊಮ್ಮಿದರೂ, ಅವನು ಸಂಪೂರ್ಣ ಸಮತೋಲನ, ಸಮಸ್ಥಿತಿಯಲ್ಲಿಯೇ ಉಳಿಯುತ್ತಾನೆ.
– ಈಶೋಪನಿಷದ್ ಪ್ರಾರ್ಥನೆ
* * * *