ಶ್ರೀಮದ್ಭಾಗವತವು ವಿಜಯದ ಶ್ರೇಷ್ಠ ಸಾಧನ. ಅದನ್ನು ಪಠಿಸುವ ಮೊದಲು ದೇವೋತ್ತಮ ಪರಮ ಪುರುಷನಾದ ನಾರಾಯಣನಿಗೂ, ಸರ್ವಶ್ರೇಷ್ಠರಾದ ನರ-ನಾರಾಯಣ ಋಷಿಗಳಿಗೂ, ವಿದ್ಯಾದೇವತೆಯಾದ ತಾಯಿ ಸರಸ್ವತಿಗೂ, ಗ್ರಂಥಕರ್ತರಾದ ಶ್ರೀ ವ್ಯಾಸ ಮುನಿಗಳಿಗೂ ಗೌರವಪೂರ್ಣ ಪ್ರಣಾಮಗಳನ್ನು ಸಲ್ಲಿಸಬೇಕು.
– ಶ್ರೀಮದ್ ಭಾಗವತ, 1.2.4
* * * *
ದಾನವಾಗಿ ಕೊಡುಗೆಗಳನ್ನು ಕೊಡುವುದು, ದಾನಗಳನ್ನು ಸ್ವೀಕರಿಸುವುದು, ತನ್ನ ಮನಸ್ಸನ್ನು ಬಿಚ್ಚಿ ಹೇಳುವುದು, ವಿಶ್ವಾಸದಿಂದ ಕೇಳಿ ತಿಳಿದುಕೊಳ್ಳುವುದು, ಪ್ರಸಾದ ಸ್ವೀಕರಿಸುವುದು ಮತ್ತು ಕೊಡುವುದು ಇವು ಭಕ್ತರ ಮಧ್ಯೆ ನಡೆಯುವ ಆರು ಪ್ರೇಮ ಸಂಕೇತಗಳು.
– ಶ್ರೀಲ ರೂಪ ಗೋಸ್ವಾಮಿ, ಉಪದೇಶಾಮೃತ, ಶ್ಲೋಕ 4
* * * *
ಶ್ರೀಮತಿ ಶಚೀದೇವಿಯ ಮಗನೆಂದು ಪ್ರಸಿದ್ಧನಾಗಿರುವ ಪರಮ ಪ್ರಭುವು ನಿಮ್ಮ
ಹೃದಯಗಳಲ್ಲಿ ದಿವ್ಯವಾಗಿ ನೆಲಸಿರಲಿ. ಹಿಂದೆ ಅವತರಿಸಿದ ಯಾರೂ ಅನುಗ್ರಹಿಸದ್ದನ್ನು – ಅದೆಂದರೆ ಲೋಕೋತ್ತರವೂ ಉಜ್ಜ್ವಲವೂ ಆದ ಭಕ್ತಿಸೇವಾರಸವನ್ನು, ಮಾಧುರ್ಯ ಪ್ರೇಮ ರಸವನ್ನು – ಹಂಚಲು ಉಜ್ಜ್ವಲ ಸುವರ್ಣಕಾಂತಿಯಿಂದ ಅವನು ಕಲಿಯುಗದಲ್ಲಿ ಅವತರಿಸಿದ್ದಾನೆ.
– ಚೈತನ್ಯ ಚರಿತಾಮೃತ, ಆದಿ ಲೀಲ, 1.4
* * * *
ಅಜ್ಞಾನವನ್ನು ನಾಶ ಮಾಡುವ ಜ್ಞಾನದ ಬೆಳಕನ್ನು ಮನುಷ್ಯನು ಪಡೆದುಕೊಂಡಾಗ ಹಗಲು ಹೊತ್ತಿನಲ್ಲಿ ಸೂರ್ಯನು ಎಲ್ಲದರ ಮೇಲೂ ಬೆಳಕು ಹರಿಸುವಂತೆ ಅವನ ಜ್ಞಾನವು ಎಲ್ಲವನ್ನೂ ಪ್ರಕಾಶಗೊಳಿಸುತ್ತದೆ.
– ಭಗವದ್ಗೀತೆ, 5.16
* * * *