ಓ ಜೀವಿಗಳೇ, ದುರದೃಷ್ಟದ ಅಲೆಗಳಿಂದ ತುಂಬಿರುವ ಲೌಕಿಕ ಅಸ್ತಿತ್ವದ ಸಾಗರದಲ್ಲಿ ನೀವು ಮುಳುಗಿರುವಿರಿ. ಪರಮ ಲಾಭವನ್ನು ಹೇಗೆ ಹೊಂದಬೇಕೆಂಬುದನ್ನು ನಾನು ಸಂಕ್ಷಿಪ್ತವಾಗಿ ಹೇಳುವೆ ಕೇಳಿ. ಜ್ಞಾನವನ್ನು ಪಡೆಯುವ ನಿಮ್ಮ ಅನೇಕ ಪ್ರಯತ್ನಗಳನ್ನು ಬದಿಗಿಡಿ. ಅದಕ್ಕೆ ಬದಲಾಗಿ ಓಂ ನಮೋ ನಾರಾಯಣಾಯ ಮಂತ್ರವನ್ನು ನಿರಂತರವಾಗಿ ಜಪಿಸಲು ಮತ್ತು ಭಗವಂತನಿಗೆ ತಲೆಬಾಗಿ ನಮಸ್ಕರಿಸಲು ಆರಂಭಿಸಿ.
– ಮುಕುಂದಮಾಲಾ, ಸ್ತೋತ್ರ 16
* * * *
ಹೇ ಪ್ರಭುವೇ, ದೇವೋತ್ತಮ ಪರಮ ಪುರುಷನಾದ ನೀನು ಬ್ರಾಹ್ಮಣರನ್ನು ಪೂಜಾರ್ಹ ದೇವತೆಗಳೆಂದು ಸ್ವೀಕರಿಸಿರುವೆ. ನಿನ್ನ ಜ್ಞಾನವಾಗಲಿ, ನೆನಪಿನ ಶಕ್ತಿಯಾಗಲಿ ಉದ್ವೇಗದಿಂದ ಕಳಂಕಿತವಾಗುವುದಿಲ್ಲ. ಈ ಜಗತ್ತಿನ ಸಮಸ್ತ ಖ್ಯಾತ ವ್ಯಕ್ತಿಗಳ ಮುಖ್ಯಸ್ಥನೂ ನೀನಾಗಿರುವೆ. ಶಿಕ್ಷೆಯ ಪರಿಯಲ್ಲಿ ಬಾರದ ಖ್ಯಾತ ಮಹರ್ಷಿಗಳು ನಿನ್ನ ಪಾದ ಕಮಲಗಳನ್ನು ಪೂಜಿಸುವರು. ಹೇ ಪ್ರಭು ರಾಮಚಂದ್ರನೇ, ನಿನಗೆ ನಮ್ಮ ಗೌರವಯುತವಾದ ನಮಸ್ಕಾರಗಳನ್ನು ಸಮರ್ಪಿಸುವೆವು.
– ಶ್ರೀಮದ್ ಭಾಗವತ 9.11.7
* * * *
ಹರೇ ಕೃಷ್ಣ ಮಂತ್ರದ ಸಾಮೂಹಿಕ ಸಂಕೀರ್ತನೆಯನ್ನು ನಡೆಸುವುದರಿಂದ ವ್ಯಕ್ತಿಯು ಐಹಿಕ ಅಸ್ತಿತ್ವದ ಪಾಪಮಯ ಪರಿಸ್ಥಿತಿಗಳನ್ನು ನಾಶಮಾಡಬಹುದು, ಅಶುಚಿಯಾದ ಹೃದಯವನ್ನು ಶುದ್ಧಗೊಳಿಸಬಹುದು ಮತ್ತು ಎಲ್ಲ ಬಗೆಯ ಭಕ್ತಿಸೇವೆಗಳನ್ನು ಜಾಗೃತಗೊಳಿಸಬಹುದು.
– ಶ್ರೀ ಚೈತನ್ಯ ಚರಿತಾಮೃತ, ಅಂತ್ಯ 20.13
* * * *
ಯಾರು ಸದಾ ಪ್ರೀತಿಯ ಭಾವಪರವಶತೆಯಲ್ಲಿರುವರೋ ಯಾರು ಸದಾ ವೃಂದಾವನದಲ್ಲಿ ನೆಲೆಸಿರುವರೋ ಯಾರ ಸೌಂದರ್ಯವು ಎಲ್ಲರನ್ನೂ ಆಕರ್ಷಿಸುವುದೋ ಅಂತಹ ಕೃಷ್ಣ ವರ್ಣದ ಕೃಷ್ಣ ಮತ್ತು ಸುವರ್ಣ ವರ್ಣದ ರಾಧಾರ ಅಲೌಕಿಕ ಲೀಲೆಗಳು ಸದಾ ನನ್ನ ಹೃದಯದಲ್ಲಿ ಪ್ರಕಟಗೊಳ್ಳುತ್ತಿರಲಿ.
– ಶ್ರೀಲ ಪ್ರಭೋದಾನಂದ ಸರಸ್ವತೀ, ಶ್ರೀ ವೃಂದಾವನ ಮಹಿಮಾಮೃತ, 17.4
* * * *