ನನ್ನ ಪ್ರೀತಿಯ ನಾಲಗೆಯೇ, ಶ್ರೀಮನ್ನಾರಾಯಣನ ನಾಮವನ್ನು ಜಪಿಸಲು ನಾನು ನಿನ್ನ ಮುಂದೆ ಕೈಜೋಡಿಸಿ ನಿಂತು ಕೇಳಿಕೊಳ್ಳುತ್ತೇನೆ. ಪರಮ ಸತ್ಯವನ್ನು ವಿವರಿಸುವ ಈ ಪವಿತ್ರ ನಾಮಗಳು ಅಮೃತವನ್ನು ಹೊರಸೂಸುತ್ತಿದೆಯೋ ಎಂಬಂತೆ ಪರಮಾನಂದವನ್ನು ತರುತ್ತವೆ.
– ಮುಕುಂದಮಾಲಾ , ಸೂತ್ರ 26
* * * *
ಕೃಷ್ಣನ ಪವಿತ್ರನಾಮ, ಚರಿತ್ರೆ, ಲೀಲೆಗಳು, ಚಟುವಟಿಕೆಗಳು ಎಲ್ಲವೂ ಕಲ್ಲುಸಕ್ಕರೆಯಂತೆ ದಿವ್ಯ ಸಿಹಿಯನ್ನು ಹೊಂದಿವೆ. ಅವಿದ್ಯೆ (ಅಜ್ಞಾನ) ಎಂಬ ಕಾಮಾಲೆ ಹತ್ತಿದವನಿಗೆ ಸಿಹಿ ತಿಂಡಿಯ ಸವಿ ಗೊತ್ತಾಗುವುದಿಲ್ಲ, ಆದರೆ ಈ ಸವಿಯಾದ ನಾಮಗಳನ್ನು ಅವನು ಸುಮ್ಮನೆ ಪ್ರತಿನಿತ್ಯ ಜಪಿಸಿದರೆ ನಾಲಗೆಯಲ್ಲಿ ಸಹಜವಾಗಿ ರುಚಿ ಹುಟ್ಟಿ,
ಅವನ ರೋಗವು ಕ್ರಮೇಣ ಬುಡಸಮೇತ ನಾಶವಾಗುತ್ತದೆ.
– ಉಪದೇಶಾಮೃತ, ಶ್ಲೋಕ 7
* * * *
ನನ್ನ ಪ್ರಿಯ ಪ್ರಭು, ತನ್ನ ಪೂರ್ವ ಪಾಪಕರ್ಮಗಳ ಪ್ರತಿಕ್ರಿಯೆಗಳನ್ನು ಸದಾ ತಾಳ್ಮೆಯಿಂದ ಸಹಿಸಿಕೊಂಡು, ಮನಸಾ, ವಾಚಾ, ಕಾಯ ನಿನಗೆ ಸಮರ್ಪಿಸಿ ನಮಸ್ಕರಿಸುತ್ತಾ, ನೀನು ಅವ್ಯಾಜ ಕರುಣೆ ತೋರುವುದನ್ನೇ ಕಾತರದಿಂದ ನಿರೀಕ್ಷಿಸುವವನು ಖಂಡಿತವಾಗಿಯೂ ಮೋಕ್ಷಕ್ಕೆ ಅರ್ಹನು. ಏಕೆಂದರೆ ಅದು ಅವನ ಹಕ್ಕಾಗಿರುತ್ತದೆ.
– ಶ್ರೀ ಬ್ರಹ್ಮ, ಭಾಗವತ, 10.14.8
* * * *
ಯಾರು ಎಲ್ಲವನ್ನೂ ಪರಮ ಪ್ರಭುವಿಗೆ ಸಂಬಂಧಿಸಿದಂತೆಯೇ ನೋಡುತ್ತಾನೋ, ಎಲ್ಲ ಜೀವಿಗಳನ್ನೂ ಅವನ ವಿಭಿನ್ನಾಂಶಗಳೆಂದು ಕಾಣುತ್ತಾನೋ ಮತ್ತು ಎಲ್ಲದರಲ್ಲೂ ಪರಮ ಪ್ರಭುವನ್ನೇ ಕಾಣುತ್ತಾನೋ ಅವನು ಯಾವ ವಸ್ತುವನ್ನೂ, ಯಾವುದೇ ಜೀವಿಯನ್ನೂ ದ್ವೇಷಿಸುವುದಿಲ್ಲ.
– ಶ್ರೀ ಈಶೋಪನಿಷದ್, ಮಂತ್ರ 6
* * * *