ಕೃಷ್ಣ ಪಾಕಶಾಲೆ
– ಎಸ್.ವಿ.ಗಾಯತ್ರಿ ಶೆಣೈ
ಶ್ರೀಕೃಷ್ಣನಿಗೆ ಸಮರ್ಪಿಸುವ ರಾಜಭೋಗದ ಬಗೆ ಬಗೆಯ ಭಕ್ಷ್ಯಗಳು ನಮ್ಮ ಪ್ರಿಯ ಓದುಗಾರಿಗಾಗಿ…
ಮನೆಯಲ್ಲಿ ತಾವೂ ಈ ಭಕ್ಷ್ಯಗಳನ್ನು ತಯಾರಿಸಿ. ಶ್ರೀರಾಧಾಕೃಷ್ಣರಿಗೆ ಅನ್ನದೊಂದಿಗೆ ಸಮರ್ಪಿಸಿ ಪ್ರಸಾದ ರೂಪದಲ್ಲಿ ಸವಿಯಿರಿ.
ಜೋಳ – ದಾಳಿಂಬೆ ಕೋಸಂಬರಿ

ಬೇಕಾಗುವ ಪದಾರ್ಥ:
ಅಮೇರಿಕನ್ / ಸಾಧಾರಣ ಜೋಳ -1 (ಹದಗಾತ್ರದ್ದು)
ದಾಳಿಂಬೆ ಹಣ್ಣು – 1 ( ಹದಗಾತ್ರದ್ದು)
ಮೆಂತ್ಯಸೊಪ್ಪು – 1/2 ಬಟ್ಟಲು
ಕೊತ್ತಂಬರಿ ಸೊಪ್ಪು – 1/4 ಬಟ್ಟಲು
ತೆಂಗಿನ ತುರಿ -1 ಬಟ್ಟಲು
ಹಸಿಮೆಣಸಿನಕಾಯಿ – 3-4 (ರುಚಿಗೆ ತಕ್ಕಷ್ಟು)
ಒಣಮೆಣಸಿನಕಾಯಿ – 2 ( ರುಚಿಗೆ ತಕ್ಕಷ್ಟು)
ಉಪ್ಪು- ರುಚಿಗೆ ತಕ್ಕಷ್ಟು
ಇಂಗಿನ ಪುಡಿ – 2 ಚಿಟಿಕೆ
ಅಡಿಗೆ ಎಣ್ಣೆ -1 ದೊಡ್ಡ ಚಮಚ
ಸಾಸಿವೆ -1/2 ಚಿಕ್ಕ ಚಮಚ
ಕರಿಬೇವು -2 ಎಸಳು
ಮಾಡುವ ವಿಧಾನ : ದಾಳಿಂಬೆ ಹಣ್ಣನ್ನು ಬಿಡಿಸಿಟ್ಟುಕೊಳ್ಳಿ. ಮುಸುಕಿನ ಜೋಳದ ಸಿಪ್ಪೆ ತೆಗೆದು ಅದು ಮುಳುಗುವಷ್ಟು ನೀರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುಕ್ಕರಿನಲ್ಲಿ ಬೇಯಿಸಿ. ಕೊತ್ತಂಬರಿ ಸೊಪ್ಪು ಹಾಗೂ ಮೆಂತ್ಯ ಸೊಪ್ಪನ್ನು ಬಿಡಿಸಿ, ತೊಳೆದು ಕತ್ತರಿಸಿಟ್ಟುಕೊಳ್ಳಿ.
ಬೆಂದ ಚೋಳವನ್ನು ಬಿಡಿಸಿಕೊಳ್ಳಿ, ಅನಂತರ ದಾಳಿಂಬೆ, ಬೆಂದ ಜೋಳದ ಕಾಳು, ತೆಂಗಿನ ತುರಿ, ಹೆಚ್ಚಿಟ್ಟ ಕೊತ್ತಂಬರಿ, ಮೆಂತ್ಯ ಸೊಪ್ಪು, ಹಸಿಮೆಣಸಿನಕಾಯಿ ಚೂರುಗಳನ್ನು ಬೆರೆಸಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲೆಸಿ.
ಒಗ್ಗರಣೆ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ, ಕರಿಬೇವು, ಮತ್ತು ಒಣಮೆಣಸಿನಕಾಯಿ ಚೂರು ಮತ್ತು ಇಂಗಿನ ಪುಡಿ ಒಗ್ಗರಣೆ ಮಾಡಿ ಕೋಸಂಬರಿಗೆ ಬೆರೆಸಿ ರುಚಿ ರುಚಿಯಾದ ಕೋಸಂಬರಿ ಸಿದ್ಧ.
ಕ್ಯಾರೆಟ್ ಚಟ್ನಿ

ಬೇಕಾಗುವ ಪದಾರ್ಥ:
ಕ್ಯಾರೆಟ್ – 3 ( ಚಿಕ್ಕದು)
ತೆಂಗಿನತುರಿ -1 ಬಟ್ಟಲು
ಟೊಮ್ಯಾಟೊ – 1 (ಚಿಕ್ಕದು)
ಹಸಿಮೆಣಸಿನಕಾಯಿ – 1-2 (ರುಚಿಗೆ ತಕ್ಕಷ್ಟು)
ಒಣಮೆಣಸಿನಕಾಯಿ – 1-2
ಅಡಿಗೆ ಎಣ್ಣೆ- 2 ದೊಡ್ಡ ಚಮಚ
ಉದ್ದಿನ ಬೇಳೆ – 1 ಚಿಕ್ಕ ಚಮಚ
ಸಾಸಿವೆ -1/2 ಚಿಕ್ಕ ಚಮಚ
ಇಂಗಿನ ಪುಡಿ –2 ಚಿಟಿಕೆ
ಕರಿಬೇವು – 2 ಎಸಳು
ಉಪ್ಪು – ರುಚಿಗೆ ತಕ್ಕಷ್ಟು
ಬೆಲ್ಲ- ಚಿಕ್ಕ ಚೂರು
ಮಾಡುವ ವಿಧಾನ : ಕ್ಯಾರೆಟ್ ಸಿಪ್ಪೆ ತೆಗೆದು ತೊಳೆದು ತುರಿದಿಟ್ಟುಕೊಳ್ಳಿ. ತೆಂಗಿನಕಾಯಿ ತುರಿದಿಟ್ಟಕೊಳ್ಳಿ. ಟೊಮ್ಯೋಟೊ, ಸೊಪ್ಪು, ಹಸಿಮೆಣಸಿನಕಾಯಿಯನ್ನು ತೊಳೆದು ತುರಿದಿಟ್ಟುಕೊಳ್ಳಿ. ಟೊಮ್ಯಾಟೊ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿಯನ್ನು ತೊಳೆದು ಕತ್ತರಿಸಿಟ್ಟುಕೊಳ್ಳಿ.
ಒಗ್ಗರಣೆ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿಮಾಡಿ ಒಣಮೆಣಸಿನಕಾಯಿ ಮತ್ತು ಉದ್ದಿನ ಬೇಳೆ ಹಾಕಿ ಒಗ್ಗರಣೆ ಕೊಡಿ. ಇದನ್ನು ಒಂದು ತಟ್ಟೆಗೆ ಹಾಕಿ ಆರಲು ಬಿಡಿ. ಮತ್ತೆ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಾಯಿಸಿ, ಮೊದಲು ಹಸಿಮೆಣಸಿನಕಾಯಿ, ಅನಂತರ ಕ್ಯಾರೆಟ್ ತುರಿ ಹಾಗೂ ಟೊಮ್ಯಾಟೊ ಚೂರುಗಳನ್ನು ಸೇರಿಸಿ ಅಗತ್ಯಕ್ಕೆ ತಕ್ಕ ಉಪ್ಪು ಬೆರೆಸಿ ಬೇಯಿಸಿ, ಒಂದು ಅಗಲವಾದ ತಟ್ಟೆಗೆ ಹಾಕಿ ಆರಲು ಬಿಡಿ.
ಆನಂತರ ತೆಂಗಿನಕಾಯಿಯ ತುರಿ, ಆರಿದ ಕ್ಯಾರೆಟ್, ಟೊಮ್ಯಾಟೊ ಹಾಗೂ ಉದ್ದಿನ ಬೇಳೆ, ಒಣಮೆಣಸಿನಕಾಯಿ ಚೂರು, ಬೆಲ್ಲವನ್ನು ಸೇರಿಸಿ ಚಟ್ನಿಯನ್ನು ರುಬ್ಬಿ ಕೊನೆಯಲ್ಲಿ ಉಳಿದ ಎಣ್ಣೆಯನ್ನು ಬಿಸಿಮಾಡಿ ಕರಿಬೇವು, ಸಾಸಿವೆ ಮತ್ತು ಇಂಗಿನ ಪಡಿ ಒಗ್ಗರಣೆಯನ್ನು ಕೊಡಿ.
ಬೇಳೆ ತೊವ್ವೆ

ಬೇಕಾಗುವ ಪದಾರ್ಥ:
ತೊಗರಿಬೇಳೆ – 2 ಬಟ್ಟಲು
ಒಣಮೆಣಸಿನಕಾಯಿ – 2-3 ( ರುಚಿಗೆ ತಕ್ಕಷ್ಟು)
ಹಸಿಮೆಣಸಿನಕಾಯಿ – 4-5 ( ರುಚಿಗೆ ತಕ್ಕಷ್ಟು)
ಹಸಿ ಶುಂಠಿ ಚೂರು – ಚಿಕ್ಕದು
ಅರಿಶಿನ ಪುಡಿ – 2 ಚಿಟಿಕೆ
ಇಂಗಿನ ಪುಡಿ – 2 ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಅಡಿಗೆ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ – 1 ದೊಡ್ಡ ಚಮಚ
ಸಾಸಿವೆ – 1 ಚಿಕ್ಕ ಚಮಚ
ಕರಿಬೇವು – 2 ಎಸಳು
ಮಾಡುವ ವಿಧಾನ : ತೊಗರಿಬೇಳೆಯನ್ನು ತೊಳೆದು ಬೇಳೆಯ 1 1/2 ಪ್ರಮಾಣದಷ್ಟು ನೀರು ಸೇರಿಸಿ ಜೊತೆಗೆ ಹಸಿಶುಂಠಿ ಚೂರು ಮತ್ತು ಹಸಿಮೆಣಸಿನಕಾಯಿ ಚೂರುಗಳೊಂದಿಗೆ ಅರಿಶಿನಪುಡಿ ಸೇರಿಸಿ ಬೇಯಿಸಿ.
ಕುಕ್ಕರಿನಲ್ಲಿ ಸುಮಾರು 3 ರಿಂದ 4 ಸೀಟಿ ಬಂದರೆ ಬೇಳೆ ಚೆನ್ನಾಗಿ ಬೇಯುವುದು.
ಬೆಂದ ಬೇಳೆಯನ್ನು ಮತ್ತೆ ಸ್ವಲ್ಪ ಸೌಟಿನಿಂದ ಕಡೆಯಿರಿ, ಉಪ್ಪು ಸೇರಿಸಿ 2-3 ಬಟ್ಟಲು ನೀರು ಹಾಕಿ ಕುದಿಸಿ, ಆನಂತರ ಒಗ್ಗರಣೆ ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ, ಕರಿಬೇವು, ಒಣಮೆಣಸಿನಕಾಯಿ ಚೂರು ಮತ್ತು ಇಂಗಿನ ಪುಡಿಯ ಒಗ್ಗರಣೆ ಕೊಡಿ.
ಹುಳಿ

ಬೇಕಾಗುವ ಪದಾರ್ಥ:
ತೊಗರಿಬೇಳೆ – 2 ಬಟ್ಟಲು
ಅರಿಶಿನ ಪುಡಿ – 2 ಚಿಟಿಕೆ
ಅಡಿಗೆ ಎಣ್ಣೆ ತುಪ್ಪ – 2 ದೊಡ್ಡ ಚಮಚ
ತರಕಾರಿಗಳು – ಸುವರ್ಣಗೆಡ್ಡೆ, ಹುರುಳಿಕಾಯಿ, ಕ್ಯಾರೆಟ್, ಬೂದುಗುಂಬಳಕಾಯಿ, ಹೀರೆಕಾಯಿ, ಆಲೂಗಡ್ಡೆ ಅಥವಾ ತಮಗಿಷ್ಟವಿರುವ ಯಾವುದೇ
ತರಕಾರಿ. ಎಲ್ಲಾ ತರಕಾರಿಗಳು ಸೇರಿ 500 ಗ್ರಾಂ.
ಕಡಲೆಕಾಯಿ ಬೀಜ – 1/2 ಬಟ್ಟಲು
ಹುಣಸೆ ಹುಳಿ – ನಿಂಬೆ ಗಾತ್ರದಷ್ಟು
ಬೆಲ್ಲದ ಪುಡಿ – 2 ದೊಡ್ಡ ಚಮಚ
ಸಾರಿನ ಪುಡಿ – 1/2 ದೊಡ್ಡ ಚಮಚ (ತಿಳಿಸಾರಿನ ಪುಡಿ)
ಹುಳಿಪುಡಿ – 1 1/2 ದೊಡ್ಡ ಚಮಚ (ಸಾಂಬಾರ್ ಪುಡಿ)
ಕರಿಬೇವು – 2 ಎಸಳು
ಸಾಸಿವೆ – 1 1/2 ಚಿಕ್ಕ ಚಮಚ
ಇಂಗಿನ ಪುಡಿ – 2-3 ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ : ಬೇಳೆಯನ್ನು ತೊಳೆದು ಸುಮಾರು 1 1/2 ಪ್ರಮಾಣದಷ್ಟು ನೀರು ಸೇರಿಸಿ, ಸ್ವಲ್ಪ ಎಣ್ಣೆ ಹಾಗೂ ಅರಿಶಿನಪುಡಿ ಬೆರೆಸಿ ಬೇಯಿಸಿ ಕಡೆದಿಟ್ಟುಕೊಳ್ಳಿ. ಒಗ್ಗರಣೆ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ ಒಗ್ಗರಣೆ ಕೊಟ್ಟು ಅದಕ್ಕೆ ತರಕಾರಿ ಹಾಕಿ 2-3 ನಿಮಿಷ ಬಾಡಿಸಿ, ಕಡಲೆಕಾಯಿ ಬೀಜ ಸೇರಿಸಿ ಅಗತ್ಯಕ್ಕೆ ತಕ್ಕಷ್ಟು ನೀರು, ಉಪ್ಪು ಸೇರಿಸಿ ಬೇಯಿಸಿ.
ಅನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಬೇಳೆಯನ್ನು ಬೆರೆಸಿ 5-6 ನಿಮಿಷ ಕುದಿಸಿ. ಈಗ ಬೇಳೆ-ತರಕಾರಿ ಚೆನ್ನಾಗಿ ಬೆರೆತ ಅನಂತರ ಬೆಲ್ಲದಪುಡಿ ಕರಿಬೇವು, ಹುಳಿಪುಡಿ ಮತ್ತು ಸಾರಿನ ಪುಡಿಯನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ತೆಳು ದ್ರಾವಣ ಮಾಡಿಕೊಂಡು ಇದಕ್ಕೆ ಸೇರಿಸಿ.
ಮತ್ತೆ 5-6 ನಿಮಿಷ ಕುದಿಯಲು ಬಿಡಿ. ಪದಾರ್ಥಗಳೆಲ್ಲವೂ ಚೆನ್ನಾಗಿ ಕಲೆತನಂತರ ಸ್ವಲ್ಪ ತುಪ್ಪ/ ಎಣ್ಣೆಯನ್ನು ಕಾಯಿಸಿ ಸಾಸಿವೆ, ಇಂಗಿನ ಪುಡಿ ಒಗ್ಗರಣೆ ಮಾಡಿ ಹುಳಿಗೆ ಬೆರೆಸಿ. ಶ್ರೀ ರಾಧಾಕೃಷ್ಣರಿಗಾಗಿ ಘಮಘಮಿಸುವ ಹುಳಿ ಸಿದ್ಧ.






Leave a Reply