ಕೃಷ್ಣನ ಬಾಯಲ್ಲಿ ವಿಶ್ವರೂಪ ದರ್ಶನ

ಇನ್ನೊಂದು ದಿನ ಕೃಷ್ಣ ಮತ್ತು ಬಲರಾಮರು ತಮ್ಮ ಗೆಳೆಯರೊಂದಿಗೆ ಆಡುತ್ತಿದ್ದಾಗ, ಬಲರಾಮನೂ ಸೇರಿದಂತೆ ಎಲ್ಲ ಹುಡುಗರೂ ಯಶೋದೆಯ ಬಳಿಗೆ ಬಂದು ಕೃಷ್ಣನು ಮಣ್ಣನ್ನು ತಿಂದಿದ್ದಾನೆ ಎಂದು ಹೇಳಿದರು. ಇದನ್ನು ಕೇಳಿದ ಆ ತಾಯಿಯು ಕೃಷ್ಣನ ಕೈಯನ್ನು ಹಿಡಿದುಕೊಂಡು “ಮುದ್ದು ಕೃಷ್ಣ, ಯಾರೂ ಇಲ್ಲದ ಸ್ಥಳದಲ್ಲಿ ಮಣ್ಣನ್ನೇಕೆ ತಿಂದೆ? ನೋಡು, ಬಲರಾಮನು ನಿನ್ನ ಇತರ ಸ್ನೇಹಿತರೂ ನಿನ್ನ ಮೇಲೆ ದೂರು ಹೇಳುತ್ತಿದ್ದಾರೆ” ಎಂದಳು. ಆಗ ಕೃಷ್ಣನು “ಪ್ರೀತಿಯ ಅಮ್ಮ, ನನ್ನ ಅಣ್ಣ ಬಲರಾಮ ಮತ್ತು ಇವರೆಲ್ಲ ಸೇರಿ ನನ್ನ ಮೇಲೆ ಸುಳ್ಳು ಹೇಳುತ್ತಿದ್ದಾರೆ. ನಾನು ಮಣ್ಣನ್ನು ತಿಂದೇ ಇಲ್ಲ. ಬಲರಾಮನು ನನ್ನ ಜೊತೆ ಆಡುವಾಗ ನನ್ನ ಮೇಲೆ ಸಿಟ್ಟು ಮಾಡಿಕೊಂಡ. ಆದ್ದರಿಂದ ತನ್ನ ಗೆಳೆಯರನ್ನು ಕೂಡಿಕೊಂಡು ಬಂದು ನನ್ನ ಮೇಲೆ ಚಾಡಿ ಹೇಳುತ್ತಿದ್ದಾನೆ. ನೀನು ಸಿಟ್ಟು ಮಾಡಿಕೊಂಡು ನನಗೆ ಶಿಕ್ಷೆ ಕೊಡಬೇಕೆಂಬುದು ಅವರೆಲ್ಲರ ಆಸೆ. ಅವರು ಹೇಳುವುದು ನಿಜ ಎಂದು ನೀನು ನಂಬುವುದಾದರೆ ನನ್ನ ಬಾಯಿಯೊಳಗೆ ನೋಡು. ನಾನು ಮಣ್ಣು ತಿಂದಿದ್ದೇನೆಯೋ ಇಲ್ಲವೋ ಎಂದು ನಿನಗೇ ತಿಳಿಯುತ್ತದೆ” ಎಂದು ಹೇಳಿದ.

ಯಶೋದೆಯು ದೇವೋತ್ತಮ ಪರಮ ಪುರುಷನಿಗೆ ಬಾಯಿಯನ್ನು ತೋರಿಸುವಂತೆ ಅಪ್ಪಣೆ ಮಾಡಿದಾಗ ಸಾಮಾನ್ಯ ಹುಡುಗನಂತೆ ಅವನು ಬಾಯಿಯನ್ನು ತೆರೆದನು. ಆ ಪುಟ್ಟ ಬಾಯಿಯ ಒಳಗೆ ತಾಯಿ ಯಶೋದೆ ಸೃಷ್ಟಿಯ ಸಕಲ ಸಂಪತ್ತನ್ನು ಕಂಡಳು. ಎಲ್ಲ ದಿಕ್ಕುಗಳನ್ನು, ಆಕಾಶವನ್ನು, ಪರ್ವತಗಳು, ದ್ವೀಪಗಳು, ಸಮುದ್ರಗಳು, ಗ್ರಹಗಳು, ವಾಯು, ಅಗ್ನಿ, ಚಂದ್ರ ಮತ್ತು ನಕ್ಷತ್ರಗಳನ್ನು ಕಂಡಳು. ಎಲ್ಲ ಜೀವಿಗಳು, ಅನಂತ ಕಾಲ, ಭೌತಿಕ ಪ್ರಕೃತಿ, ಆಧ್ಯಾತ್ಮಿಕ ಪ್ರಕೃತಿ, ಸಕಲ ಚರಾಚರಗಳ ಚಟುವಟಿಕೆಗಳು, ಪ್ರಜ್ಞೆ ಮತ್ತು ಸಮಸ್ತ ಬ್ರಹ್ಮಾಂಡದ ವಿವಿಧ ರೂಪಗಳು ಹೀಗೆ ವಿಶ್ವರೂಪ ದರ್ಶನವಾಯಿತು. ಯಶೋದೆ ತನ್ನ ಮಗನ ಬಾಯಲ್ಲಿ  ಇವೆಲ್ಲದರೊಂದಿಗೆ ತಾನು ಕೃಷ್ಣನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಎದೆಯ ಹಾಲನ್ನು ಕುಡಿಸುತ್ತಿರುವುದನ್ನು ಅವನ ಬಾಯಲ್ಲಿ ಕಂಡಳು. ತನಗೆ ಕನಸೋ ಅಥವಾ ಅಸಾಧಾರಣವಾದುದನ್ನೇನಾದರೂ ವಾಸ್ತವವಾಗಿ ಕಾಣುತ್ತಿದ್ದೇನೋ ಎಂದು ಅವಳಿಗೆ ಸಂದೇಹವಾಯಿತು. ತಾನು ಕನಸನ್ನೇ ಕಾಣುತ್ತಿರಬೇಕು. ಇಲ್ಲವಾದರೆ ದೇವೋತ್ತಮ ಪರಮ ಪುರುಷನ ಮಾಯಾಶಕ್ತಿಯ ಆಟವನ್ನು ನೋಡುತ್ತಿದ್ದೇನೆ ಎಂದೆನಿಸಿತು ಅವಳಿಗೆ. ಈ ಅದ್ಭುತ ಸಂಗತಿಗಳನ್ನು ಕಂಡು ತಾನು ಹುಚ್ಚಿಯಾಗಿದ್ದೇನೋ ಎಂಬ ಅನುಮಾನವೂ ಅವಳಿಗೆ ಬಂದಿತು. ಅನಂತರ `ನನ್ನ ಮಗುವು ಪಡೆದುಕೊಂಡ ಯಾವುದೋ ಅದ್ಭುತವಾದ ನಿಗೂಢ ವಿಶ್ವಶಕ್ತಿ ಇದಾಗಿರಬಹುದು. ಆದುದರಿಂದಲೇ ಇಂತಹ ದೃಶ್ಯಗಳನ್ನು ಅವನ ಬಾಯಲ್ಲಿ ಕಂಡು ನನಗೆ ದಿಕ್ಕು ತೋರದಂತಾಗಿದೆ’ ಎಂದಳು.

“ಆ ಪರಮ ದೇವೋತ್ತಮ ಪುರುಷನಿಗೆ ನನ್ನ ವಿನಮ್ರ ಪ್ರಣಾಮಗಳನ್ನು ಸಲ್ಲಿಸಿ, ಅವನು ನನ್ನನ್ನು ರಕ್ಷಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದಳು.

ತಾಯಿ ಯಶೋದೆ ಹೀಗೆ ಉನ್ನತ ಚಿಂತನೆಯಲ್ಲಿ ಮುಳುಗಿರಲು ಶ್ರೀಕೃಷ್ಣನು ಅವಳನ್ನು ಮಾತೃಪ್ರೇಮದಿಂದ ಆಲಂಗಿಸಿಕೊಂಡನು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi