ಆಧಾರ : ಭಾಗವತ 6ನೇ ಸ್ಕಂಧ, ಅಧ್ಯಾಯ 10-12
ಅದೊಂದು ಪ್ರಶಾಂತ ಆಶ್ರಮ, ಗಿಡಮರಗಳ ಹಸಿರು ವಾತಾವರಣ, ಪಕ್ಷಿಗಳ ಚಿಲಿಪಿಲಿ ಗಾಯನ, ಝಳುಝಳು ನಾದದ ರಮ್ಯ ತಟಾಕ, ತಂಗಾಳಿಯ ಹಿತಸ್ಪರ್ಶ, ಇವುಗಳಿಂದ ಸಾಧು ಪ್ರಾಣಿಗಳೂ ಹಿಂಸ್ರಪಶುಗಳೂ ಸಾಮರಸ್ಯದಿಂದ ಬದುಕುವಂತಾಗಿದ್ದ ಮನೋಹರ ಋಷ್ಯಾಶ್ರಮ ಅದು…. ! ಇದಕ್ಕೆ ಕಾರಣ, ತಪೋನಿಧಿಗಳಾದ ದಧೀಚಿ ಮಹರ್ಷಿಗಳ ತಪಶ್ಯಕ್ತಿ!
ಮಹೇಂದ್ರನನ್ನು ಮುಂದೆ ಮಾಡಿಕೊಂಡ ದೇವತೆಗಳ ದಂಡು, ಭಾರವಾದ ಹೃದಯದಿಂದ ದಧೀಚಿಗಳ ಆಶ್ರಮಕ್ಕೆ ಆಗಮಿಸಿದರು. ಧ್ಯಾನಾಸಕ್ತರಾಗಿದ್ದ ಮಹರ್ಷಿಗಳು ಕಣ್ತೆರೆಯುವುದನ್ನೇ ಕಾಯುತ್ತಾ ನಿಂತರು; ಅಷ್ಟರಲ್ಲಿ ದೇವ ವೈದ್ಯರಾದ ಅಶ್ವಿನಿಗಳನ್ನು ಮುಂದೆ ಬಿಟ್ಟರು.
ಸ್ವಲ್ಪ ಹೊತ್ತಿನ ಬಳಿಕ ಧ್ಯಾನದಿಂದ ವಿಮುಖರಾದ ದಧೀಚಿಗಳು ನಿಧಾನವಾಗಿ ಕಣ್ತೆರೆದು ದೇವತೆಗಳನ್ನು ಕಂಡು ಅವರನ್ನು ಸ್ವಾಗತಿಸಿದರು, “ಓ! ನನ್ನ ಪ್ರಿಯ ಶಿಷ್ಯರಾದ ಅಶ್ವಿನಿಗಳು! ಸ್ವಾಗತ ….! ಮಘವಾನ್, ದೇವತೆಗಳೇ ! ನಿಮಗೂ ಸ್ವಾಗತ! ನಿಮ್ಮನ್ನು ನೋಡಿದರೆ ಯಾವುದೋ ಮಹತ್ಕಾರ್ಯಕ್ಕೆ ಬಂದಂತಿದೆ…..! ನನ್ನಿಂದೇನಾಗಬೇಕು?”
“ಮಹರ್ಷಿಗಳೇ…..,” ದೇವತೆಗಳು ಸ್ವಲ್ಪ ಅಂಜುತ್ತಾ ತಡವರಿಸುತ್ತಾ ಹೇಳಿದರು,
“ನಾವು ಮಹಾವಿಷ್ಣುವಿನ ಆಜ್ಞೆಯಂತೆ ಬಂದಿದ್ದೇವೆ! ವೃತ್ರನೆಂಬ ಮಹಾದೈತ್ಯನ ಬಾಧೆಯಿಂದ ಬಳಲಿರುವ ನಮಗೆ ಅವನನ್ನು ಸಂಹರಿಸಲು ಸೂಕ್ತ ಆಯುಧವೊಂದು ಬೇಕು. ತಪಸ್ಸಿನಿಂದ ಶಕ್ತಿಯುತವಾದ ನಿಮ್ಮ ಮೂಳೆಗಳಿಂದ ಅದು ಸಾಧ್ಯ. ಅದಕ್ಕಾಗಿ ನಿಮ್ಮ ದೇಹವನ್ನು ಯಾಚಿಸಲು ಬಂದಿದ್ದೇವೆ…..!
ಇದನ್ನು ಕೇಳಿ ದಧೀಚಿಗಳು ಮುಗುಳ್ನಕ್ಕು ತಮಾಷೆ ಮಾಡಲೆಂದು ಹೇಳಿದರು, “ನೀವು ಶ್ರೇಷ್ಠ ದೇವತೆಗಳೇ ಆದರೂ, ಸಾವಿನ ಸಮಯದಲ್ಲಿ ಜೀವಿಗೆ ಎಂಥ ನೋವಾಗುವುದೆಂದು ತಿಳಿದಿಲ್ಲವೇ?! ಬದುಕಿರುವ ಜೀವಿಗಳಿಗೆ ತಮ್ಮ ದೇಹಕ್ಕಿಂತ ಪ್ರಿಯವಾದುದಾವುದೂ ಇರುವುದಿಲ್ಲ! ಮಹಾವಿಷ್ಣುವೇ ಬಂದು ಬೇಡಿದರೂ ಅದನ್ನು ಕೊಡಲು ಯಾರಿಗೆ ತಾನೇ ಮನಸ್ಸಾಗುತ್ತದೆ?!”
“ಮಹರ್ಷಿಗಳೇ!” ದೇವತೆಗಳು ಹೇಳಿದರು, “ನಿಮ್ಮಂತಹ ಮಹಾತ್ಮರು ಇತರರ ಪ್ರಯೋಜನಾರ್ಥವಾಗಿ ಏನನ್ನು ತಾನೇ ತ್ಯಜಿಸುವುದಿಲ್ಲ? ಪರರಲ್ಲಿ ಸದಾ ಅನುಕಂಪ, ಹಿತಚಿಂತನೆ ತೋರುವ ತಮ್ಮಂಥವರು ಎಲ್ಲರಿಂದಲೂ ಪ್ರಶಂಸನೀಯರು! ಸ್ವಾರ್ಥಪರ ಜನರು ಇತರರ ಸಂಕಟವನ್ನು ಅರ್ಥಮಾಡಿಕೊಳ್ಳದೇ ಸುಮ್ಮನೆ ಬೇಡುತ್ತಾರೆ! ಅದು ತಿಳಿದಿದ್ದರೆ ಹಾಗೆ ಬೇಡುವುದಿಲ್ಲ. ಅಂತೆಯೇ, ಬೇಡುವವನ ಕಷ್ಟವನ್ನರಿಯದ ಉಳ್ಳವರು ಹಾಗೆ ಕೊಡುವುದಿಲ್ಲ! ಅದು ತಿಳಿದಿದ್ದರೆ ಕೊಡುತ್ತಾರೆ.”
“ಸುರಶ್ರೇಷ್ಠರೇ! ನೀವು ಹೇಳಿದುದು ನಿಜ! ನಾನೂ ಬಲ್ಲೆ; ಆದರೂ ನಿಮ್ಮಿಂದಲೇ ಧರ್ಮವತ್ತಾದ ಈ ಮಾತನ್ನು ಕೇಳಲು ನಾನು ಹಾಗೆ ಹೇಳಿದೆ!” ದಧೀಚಿಗಳು ಹೇಳಿದರು, “ಈ ದೇಹವು ನನಗೆ ಬಹಳ ಪ್ರಿಯವಾದರೂ, ಎಂದಾದರೂ ಬಿದ್ದು ಹೋಗುವ ಇದನ್ನು ಒಂದು ಉತ್ತಮ ಕಾರ್ಯಕ್ಕಾಗಿ ತ್ಯಜಿಸುತ್ತೇನೆ ! ಓ ದೇವತೆಗಳೇ, ಪರರ ಸಂಕಟಕ್ಕೆ ಕರಗದವನನ್ನೂ, ಧರ್ಮಕ್ಕಾಗಿಯೂ ಯಶಸ್ವಿಗಾಗಿಯೂ ಅಶಾಶ್ವತವಾದ ತನ್ನ ದೇಹವನ್ನು ತ್ಯಜಿಸದವನನ್ನೂ ಕಂಡು ಸ್ಥಾವರಗಳೂ ಮರುಗುತ್ತವೆ ! ಇತರರ ಶೋಕವನ್ನು ಕಂಡು ಶೋಕಿಸುವವನೂ ಇತರರ ಸಂತೋಷವನ್ನು ಕಂಡು ಹರ್ಷಿಸುವವನೂ ನಿಜವಾಗಿ ಧರ್ಮಾತ್ಮನು ! ಮಹಾನ್ ವ್ಯಕ್ತಿಗಳು ಇಂಥವನನ್ನೇ ಕೀರ್ತಿಸುವುದು ! ಎಲೈ ಸುರರೇ, ಈ ದೇಹವೆಂಬುದು ಕ್ಷಣಭಂಗುರವಾದುದು! ನಾಯಿ, ನರಿಗಳ ಪಾಲಾಗಿಹೋಗುವಂಥದ್ದು! ವ್ಯಕ್ತಿಯು ತನ್ನ ಜ್ಞಾತಿಬಾಂಧವರ ಸಹಿತ, ತನ್ನ ದೇಹದ ಬಲದಿಂದ ಸಾಧ್ಯವಾದಷ್ಟೂ ಪರೋಪಕಾರ ಮಾಡಬೇಕು! ಇಲ್ಲವಾದರೆ ಅವನ ಸ್ಥಿತಿ ಶೋಚನೀಯವಾಗುತ್ತದೆ!”
ಹೀಗೆ ಹೇಳಿ ದಧೀಚಿ ಮುನಿಗಳು ತಮ್ಮ ದೇಹವನ್ನು ತ್ಯಜಿಸಲು ನಿರ್ಧರಿಸಿ ಕಣ್ಮುಚ್ಚಿಕೊಂಡು ಭಗವಂತನನ್ನು ಧ್ಯಾನಿಸುತ್ತಾ ಯೋಗಸ್ಥರಾದರು. ಅವರು ತಮ್ಮ ಇಂದ್ರಿಯಗಳನ್ನು ಅವುಗಳ ವಿಷಯಗಳಿಂದ ಹಿಂದೆಗೆದು ಮಹತ್ತತ್ವದಲ್ಲಿ ಲೀನವಾಗಿಸಿ, ಪ್ರಾಣ, ಮನೋಬುದ್ಧಿಗಳನ್ನೂ ನಿಯಂತ್ರಿಸುತ್ತಾ ತಮ್ಮ ಆತ್ಮದಿಂದ ಬೇರ್ಪಡಿಸಿದರು. ಹೀಗೆ ಯೋಗದಿಂದ ಅವರು ದೇಹತ್ಯಾಗ ಮಾಡಿ ಪರಲೋಕವನ್ನೈದಿದರು! ಅವರ ದೇಹ ಬಿದ್ದುಹೋದುದು ಅವರಿಗೇ ತಿಳಿಯಲಿಲ್ಲ!
ಅನಂತರ, ದೇವಶಿಲ್ಪಿಯಾದ ವಿಶ್ವಕರ್ಮನು ದಧೀಚಿಗಳ ದೇಹದ ಮೂಳೆಗಳಿಂದ ಶಕ್ತಿಯುತವಾದ ವಜ್ರಾಯುಧವನ್ನು ನಿರ್ಮಿಸಿದ. ಆ ಮಹಾಯುಧವನ್ನು ಹಿಡಿದ ದೇವೇಂದ್ರನು, ದಧೀಚಿಗಳ ತಪಶ್ಯಕ್ತಿಯಿಂದಲೂ ಭಗವಂತನ ಶಕ್ತಿಯಿಂದಲೂ ಯುಕ್ತನಾಗಿ ನವತೇಜೋಬಲಗಳಿಂದ ಕಂಗೊಳಿಸಿ ತನ್ನ ಗಜವಾಹನವಾದ ಐರಾವತವನ್ನೇರಿ, ದೇವತೆಗಳಿಂದ ಆವೃತನಾಗಿ, ಮುನಿಗಳಿಂದ ಸ್ತುತಿಸಲ್ಪಡುತ್ತಾ, ತ್ರಿಲೋಕಗಳಿಗೂ ಹರ್ಷವನ್ನುಂಟುಮಾಡುತ್ತಾ, ವೃತ್ರಾಸುರನೊಂದಿಗೆ ಪುನಃ ಯುದ್ಧ ಮಾಡಲು ಹೊರಟ.
* * *
ಸತ್ಯಯುಗದ ಕೊನೆಯಲ್ಲೂ ತ್ರೇತಾಯುಗದ ಆರಂಭದಲ್ಲೂ, ನರ್ಮದಾ ನದಿಯ ದಂಡೆಯ ಮೇಲೆ ದೇವಾಸುರರಿಗೆ ಪರಮದಾರುಣವಾದ ಯುದ್ಧ ನಡೆಯಿತು! ರುದ್ರಾದಿತ್ಯರಿಂದಲೂ, ವಸುಗಳಿಂದಲೂ, ಅಶ್ವಿನೀದೇವತೆಗಳಿಂದಲೂ, ಪಿತೃವಹ್ನಿಗಳಿಂದಲೂ, ಮರುದೃಭುಗಳಿಂದಲೂ, ಸಾಧ್ಯರಿಂದಲೂ, ವಿಶ್ವೇದೇವತೆಗಳಿಂದಲೂ ಆವರಿಸಲ್ಪಟ್ಟಿದ್ದ ವಜ್ರಪಾಣಿಯಾದ ದೇವೆಂದ್ರನ ತೇಜಸ್ಸನ್ನು ಈಗ ದಾನವರಿಗೆ ತಡೆಯಲಾಗುತ್ತಿರಲಿಲ್ಲ! ದಾನವರಾದರೋ, ಸಾವಿರೋಪಾದಿ ಸಂಖ್ಯೆಗಳಲ್ಲಿದ್ದರು! ಮಾಲಿ, ಸುಮಾಲಿಗಳೊಂದಿಗೆ ಯಕ್ಷರಾಕ್ಷಸರೂ ಅಸಂಖ್ಯಾತರಿದ್ದರು! ನಮುಚಿ, ಶಂಬರ, ಅನರ್ವ, ಹಯಗ್ರೀವ, ಶಂಖಾಸುರ, ವಿಪ್ರಚಿತ್ತಿ, ಅಯೋಮುಖ, ಪುಲೋಮ, ವೃಷಪರ್ವ, ಹೇತಿ, ಪ್ರಹೇತಿ, ಉತ್ಕಲ, ಮೊದಲಾದ ರಾಕ್ಷಸರು ವೃತ್ರಾಸುರನ ನಾಯಕತ್ವದಲ್ಲಿ, ಸಿಂಹಗರ್ಜನೆ ಮಾಡುತ್ತಾ ಶೂಲ, ಪರಶು, ಖಡ್ಗ, ಶತಘ್ನೀ, ಭುಶುಂಡಿ, ಗದೆ, ಪರಿಘ, ಬಾಣ, ಮುದ್ಗರ, ತೋಮರಾದಿ ಭಯಂಕರ ಆಯುಧಗಳನ್ನು ಹಿಡಿದು ವಿವಿಧ ದಿಕ್ಕುಗಳಿಂದ ದೇವತೆಗಳನ್ನು ಆಕ್ರಮಿಸಿದರು! ಪುಂಖಾನುಪುಂಖವಾಗಿ ಅವರು ಶರಪ್ರಯೋಗ ಮಾಡತೊಡಗಲು, ಮೋಡಗಳಿಂದ ಆವರಿಸಲ್ಪಟ್ಟ ನಕ್ಷತ್ರಗಳಂತೆ, ಅಸಂಖ್ಯಾತ ಶರಗಳಿಂದ ಆವೃತರಾಗಿ ದೇವತೆಗಳು ಕಾಣದಂತಾದರು!
ಆದರೆ ಬಹುಬೇಗನೆ ದೇವತೆಗಳು ಚುರುಕಾಗಿ ದಾನವರ ಶಸ್ತ್ರಾಸ್ತ್ರಗಳನ್ನು ತುಂಡು ತುಂಡಾಗಿ ಭೇದಿಸಿಬಿಟ್ಟರು! ಇದರಿಂದ ದೇವತೆಗಳಿಗೆ ಯಾವ ಬಾಧೆಯೂ ಆಗಲಿಲ್ಲ! ಶಸ್ತ್ರಾಸ್ತ್ರಗಳೆಲ್ಲವೂ ಕ್ರಮೇಣ ಕ್ಷೀಣಿಸಲು, ಅಸುರರು ಈಗ ಬೆಟ್ಟಗಳನ್ನೂ ವೃಕ್ಷಗಳನ್ನೂ ಕಲ್ಲುಗಳನ್ನೂ ಬಳಸಿ ಯುದ್ಧ ಮಾಡತೊಡಗಿದರು! ಆದರೆ ದೇವತೆಗಳು ಅವನ್ನೂ ಮೊದಲಿನಂತೆಯೇ ಛಿದ್ರಛಿದ್ರಗೊಳಿಸಿದರು!
ವಿವಿಧ ಶಸ್ತ್ರಾಸ್ತ್ರಗಳ ಪ್ರಹಾರದಿಂದಲೂ ಗಿರಿವೃಕ್ಷಗಳ ತಾಡನದಿಂದಲೂ ದೇವತೆಗಳು ಹಾನಿಗೊಳ್ಳದಿರುವುದನ್ನು ನೋಡಿ ಹೆದರಿದ ಅಸುರರು, ಹಮ್ಮಡಗಿ ಪಲಾಯನ ಮಾಡತೊಡಗಿದರು! ದುರ್ವಾಕ್ಯಗಳು ಮಹಾತ್ಮರ ಮನಶ್ಯಾಂತಿಗೆ ಏನೂ ಭಂಗ ತರದಂತೆ, ರಾಕ್ಷಸರ ಅಟಾಟೋಪಗಳಾಗಲೀ ಶಸ್ತ್ರಾಸ್ತ್ರಕೌಶಲವಾಗಲೀ ಶ್ರೀಕೃಷ್ಣಭಕ್ತರಾದ ದೇವತೆಗಳ ಮೇಲೆ ಯಾವ ಪ್ರಭಾವವನ್ನೂ ಬೀರಲಿಲ್ಲ!
ಭಯಭೀತರಾಗಿ ಓಡಿಹೋಗುತ್ತಿದ್ದ ರಾಕ್ಷಸರನ್ನು ಉದ್ದೇಶಿಸಿ ಮಹಾವೀರನೂ ಸ್ವಾಭಿಮಾನಿಯೂ ಆದ ಅವರ ನಾಯಕ ವೃತ್ರಾಸುರನು ಹೇಳಿದ, “ನಿಲ್ಲಿರೋ! ಹೇ ನಮುಚಿ, ಹೇ ಪುಲೋಮ, ಮಯ, ಶಂಬರ…., ಎಲ್ಲರೂ ನಿಲ್ಲಿರೋ! ಓಡಬೇಡಿ, ನನ್ನ ಮಾತನ್ನು ಸ್ವಲ್ಪ ಕೇಳಿ, ಹುಟ್ಟಿದ ಪ್ರತಿಯೊಂದು ಜೀವಿಯೂ ಸಾಯಲೇಬೇಕು. ಇದನ್ನು ಯಾರಿಂದಲೂ ತಪ್ಪಿಸಲಾಗದು. ಆದರೆ ಸಾಯುವುದರಿಂದ ಯಶಸ್ಸೂ ದೊರೆತು, ಉತ್ತಮ ಲೋಕಗಳ ಪ್ರಾಪ್ತಿಯೂ ಆಗುವುದಾದರೆ, ಅಂಥ ಸಾವನ್ನು ಯಾರು ತಾನೇ ಪಡೆಯಬಾರದು? ಈ ಲೋಕದಲ್ಲಿ ಎರಡು ರೀತಿಗಳಲ್ಲಿ ಯಶಸ್ವಿಯಾಗಿ ಸಾಯಬಹುದು; ಒಂದು, ಪರಬ್ರಹ್ಮನಲ್ಲೆ ಮನಸ್ಸನ್ನು ಕೇಂದ್ರೀಕರಿಸಿ ಯೋಗಸಮಾಧಿಯಿಂದ ಸಾಯುವುದು; ಇನ್ನೊಂದು, ಯುದ್ಧದಲ್ಲಿ ಬೆನ್ನು ತೋರದೇ, ವೀರಾವೇಶದಿಂದ ಕಾದಿ ಮಡಿಯುವುದು. ಆದ್ದರಿಂದ, ಓ ವೀರ ದಾನವರೇ! ಹೆದರಿ ಹಿಮ್ಮೆಟ್ಟದೇ ಧೈರ್ಯದಿಂದ ಕಾದಿ ಮಡಿಯಿರಿ. ಹೇಡಿಗಳಂತೆ ಓಡಬೇಡಿ….!”
ವೃತ್ರಾಸುರನು ಹೀಗೆ ಧರ್ಮಯುಕ್ತವಾದ ಮಾತುಗಳನ್ನಾಡಿದರೂ, ಕದನಭೀತಿಯಿಂದ ಕಂಗೆಟ್ಟಿದ್ದ ದೈತ್ಯರು ಅವನ ಮಾತು ಕೇಳದೇ ಓಡುತ್ತಿದ್ದರು. ಈ ಸುಸಂದರ್ಭವನ್ನು ಬಳಸಿಕೊಂಡ ದೇವತೆಗಳು ಅವರನ್ನು ಹಿಂದಿನಿಂದ ಆಕ್ರಮಿಸಿ ಬಗ್ಗು ಬಡಿಯುತ್ತಾ ದಿಕ್ಕು ದಿಕ್ಕುಗಳಲ್ಲಿ ಚದುರಿಸತೊಡಗಿದರು. ದೈತ್ಯರ ಶೋಚನೀಯ ಸ್ಥಿತಿಯನ್ನು ಕಂಡ ದಾನವಶ್ರೇಷ್ಠ ವೃತ್ರನು ದುಃಖಕೋಪಗಳಿಂದ ವಿಹ್ವಲನಾಗಿ ದೇವತೆಗಳನ್ನು ಬಲವಾಗಿ ತಡೆಯುತ್ತಾ, ಅವರನ್ನು ನಿಂದಿಸುತ್ತಾ ನುಡಿದನು, “ಹೇ ದೇವತೆಗಳೇ ಸುಮ್ಮನೆ ಮಲದಂತೆ ಮಾತೃದೇಹದಿಂದ ಹೊರಬಂದಿರುವ, ಈ ಓಡುತ್ತಿರುವ ತುಚ್ಛ ದೈತ್ಯರನ್ನು ಹಿಂದಿನಿಂದ ಆಕ್ರಮಿಸಿದರೇನು ಪ್ರಯೋಜನ? ಭೀತಗೊಂಡಿರುವವರನ್ನು ವಧಿಸುವುದು ಶ್ಲಾಘ್ಯಕಾರ್ಯವಲ್ಲ. ಹಾಗೆ ಮಾಡುವವನು ಶೂರನೆನಿಸಿಕೊಳ್ಳುವುದಿಲ್ಲ. ಅಂಥವನು ಸ್ವರ್ಗವನ್ನೂ ಹೊಂದುವುದಿಲ್ಲ. ಓ ಕ್ಷುಲ್ಲಕ ದೇವತೆಗಳೇ! ನೀವು ನಿಜವಾಗಿಯೂ ಯುದ್ಧದಲ್ಲಿ ಶ್ರದ್ಧೆಯನ್ನು ಹೊಂದಿದ್ದರೆ, ನಿಮ್ಮ ಹೃದಯಗಳಲ್ಲಿ ತಾಳ್ಮೆಯಿದ್ದರೆ, ಗ್ರಾಮ್ಯಸುಖಗಳಲ್ಲಿ ಆಸೆಯಿರದಿದ್ದರೆ, ನನ್ನ ಮುಂದೆ ಒಂದು ಕ್ಷಣ ನಿಲ್ಲಿರೋ ನೋಡೋಣ!”
ಹೀಗೆ ಹೇಳಿ ವೃತ್ರಾಸುರನು ಭಯಂಕರವಾಗಿ, ಸಕಲ ಲೋಕಗಳೂ ಮೂರ್ಛಿತವಾಗುವಂತೆ ಗರ್ಜಿಸಿದ! ಅವನ ಅಗಾಧ ರೂಪವನ್ನು ನೋಡುತ್ತಲೂ ಅವನ ಭೀಕರ ಗರ್ಜನೆಯನ್ನು ಕೇಳುತ್ತಲೂ ದೇವತೆಗಳು ಸಿಡಿಲು ಬಡಿದವರಂತೆ ಜ್ಞಾನಶೂನ್ಯರಾಗಿ ಬಿದ್ದರು. ಆಗ ವೃತ್ರನು, ಮದ್ದಾನೆಯೊಂದು ಬಿದಿರುಗಳನ್ನು ತನ್ನ ಕಾಲಿನಿಂದ ಹೊಸಕಿಹಾಕುವಂತೆ ಅನೇಕ ದೇವತೆಗಳನ್ನು ತನ್ನ ಕಾಲಿನಡಿಯಲ್ಲಿ ತುಳಿದಾಡಿದನು. ಇದನ್ನು ಕಂಡು ಅತ್ಯಂತ ಕ್ರುದ್ಧನಾದ ದೇವೇಂದ್ರನು ತನ್ನ ಮಹಾಗದೆಯನ್ನು ವೃತ್ರನೆಡೆಗೆ ಬೀಸಿದನು. ಆದರೆ ವೃತ್ರನು ಅದನ್ನು ಲೀಲೆಯೆಂಬಂತೆ ತನ್ನ ಎಡಗೈಯಿಂದ ಹಿಡಿದನು. ಕ್ರೋಧಾಭಿಭೂತನಾದ ಅವನು ಆ ಗದೆಯಿಂದಲೇ ಇಂದ್ರನ ಆನೆ ಐರಾವತದ ಕುಂಭಸ್ಥಳಗಳಿಗೆ ಜೋರಾಗಿ ಬಡಿದನು. ಇದರಿಂದ ಅದರ ದವಡೆ ಮುರಿದು, ರಕ್ತಕಾರುತ್ತಾ, ನೋವಿನಿಂದ ನರಳುತ್ತಾ ಇಂದ್ರಸಮೇತವಾಗಿ ಹದಿನಾಲ್ಕು ಗಜಗಳ ಹಿಂದೆ ಸರಿದು ಬಿದ್ದಿತು. ವೃತ್ರನ ಈ ವಿರೋಚಿತವಾದ ಕಾರ್ಯವನ್ನು ಉಭಯಪಕ್ಷಗಳೂ ಪ್ರಶಂಸಿಸಿದವು.
ವೃತ್ರನು, ತನ್ನ ಗದಾಘಾತದಿಂದ ಐರಾವತವು ಘಾಸಿಗೊಂಡು ಇಂದ್ರನು ವಿಷಣ್ಣನಾದುದನ್ನು ಕಂಡು ಧರ್ಮದಂತೆ ಪುನಃ ಅವನನ್ನು ಗದೆಯಿಂದ ಪ್ರಹರಿಸಲಿಲ್ಲ. ಈ ಅವಕಾಶವನ್ನು ಬಳಸಿಕೊಂಡು ಇಂದ್ರನು ತನ್ನ ಅಮೃತಹಸ್ತದಿಂದ ಐರಾವತವನ್ನು ಸ್ಪರ್ಶಿಸಿದ; ಕೂಡಲೇ ಅದರ ಗಾಯಗಳೆಲ್ಲಾ ಕಳೆದು ಅದು ಪುನಃ ಚೈತನ್ಯಶಾಲಿಯಾಗಿ ಎದ್ದು ನಿಂತಿತು. ಇಂದ್ರನೂ ಚೇತರಿಸಿಕೊಂಡು ಕೈಯಲ್ಲಿ ವಜ್ರಾಯುಧವನ್ನು ಹಿಡಿದು ಪುನಃ ಯುದ್ಧಸನ್ನದ್ಧನಾದ. ಇದನ್ನು ನೋಡುತ್ತಲೇ, ಅವನು ತನ್ನ ಭ್ರಾತೃಹಂತಕನೆಂಬುದನ್ನು ಸ್ಮರಿಸಿಕೊಂಡ ವೃತ್ರನು ದುಃಖಕೋಪಗಳಿಂದ ವಿಹ್ವಲನಾಗಿ ವಿಕಟನಗೆ ನಗುತ್ತಾ ಇಂದ್ರನನ್ನುದ್ದೇಶಿಸಿ ಹೇಳಿದ, “ಎಲವೋ ಇಂದ್ರ! ಇದೆಂಥ ಅದೃಷ್ಟ! ಬ್ರಾಹ್ಮಣಹಂತಕನೂ ಗುರುಹಂತಕನೂ ನನ್ನ ಅಣ್ಣನನ್ನು ಕೊಂದವನೂ ಆದ ನೀನು ಇಂದು ನನ್ನ ಮುಂದೆಯೇ ಶತ್ರುವಿನಂತೆ ನಿಂತಿರುವೆ!! ಏ ಮಹಾಪಾಪಿ, ಪಾಷಾಣದಂಥ ನಿನ್ನ ಹೃದಯವನ್ನು ನನ್ನೀ ಶೂಲದಿಂದ ಭೇದಿಸಿದಾಗಲೇ ನನ್ನ ಅಣ್ಣನ ಋಣ ತೀರಿಸಿದಂತಾಗುತ್ತದೆ! ಅಯ್ಯೊಯ್ಯೋ…! ನನ್ನ ಅಣ್ಣ ಬ್ರಾಹ್ಮಣ ಕುಲದಲ್ಲಿ ಹುಟ್ಟಿದ್ದನು, ಮಹಾಬ್ರಹ್ಮಜ್ಞಾನಿಯಾಗಿದ್ದನು, ನಿಷ್ಪಾಪನಾಗಿದ್ದನು, ಮೇಲಾಗಿ ನಿನ್ನ ಗುರುವೂ ಆಗಿದ್ದನು. ನಿನ್ನಲ್ಲಿ ವಿಶ್ವಾಸವಿಟ್ಟು ನಿನಗಾಗಿ ಯಜ್ಞ ಮಾಡಿಸಿದ ಆ ಮಹಾತ್ಮನನ್ನು ಪಶುವಿನಂತೆ ಕೊಂದುಬಿಟ್ಟೆಯಲ್ಲೋ….. ಛೀ ದುರುಳ!! ಏಕೆ ಹೀಗೆ ಮಾಡಿದೆ…..? ಆ ಸ್ವರ್ಗದ ಆಸೆಗಾಗಿ ಅಲ್ಲವೇ? ನಾಚಿಕೆ, ಕರುಣೆ, ಯಶಸ್ಸು, ಸಂಪತ್ತು ಎಲ್ಲದರಿಂದಲೂ ವಿಹೀನನಾಗಿರುವ ನೀನು, ನಿನ್ನ ದುಷ್ಕರ್ಮಗಳ ಕಾರಣ, ರಾಕ್ಷಸರಿಂದಲೂ ನಿಂದ್ಯನಾಗಿರುವೆ. ಈಗ ನನ್ನ ಶೂಲದಿಂದ ನಿನ್ನನ್ನಿರಿಯುವೆ! ಅನಂತರ ನಿನ್ನ ಸತ್ತ ದೇಹಕ್ಕೆ ಅಗ್ನಿಸಂಸ್ಕಾರವೂ ಇಲ್ಲದಂತಾಗಿ, ರಣಹದ್ದುಗಳಿಗೆ ಅದು ಆಹಾರವಾಗುತ್ತದೆ! ಒಂದು ವೇಳೆ, ನನ್ನ ಶೌರ್ಯವನ್ನರಿಯದೇ, ಮಹಾಕ್ರೂರನಾದ ನಿನ್ನನ್ನು ಅನುಸರಿಸಿ ಇತರ ದೇವತೆಗಳು ನನ್ನ ಮೇಲೆರಗಿದರೆ, ನಾನು ನನ್ನ ನಿಶಿತವಾದ ತ್ರಿಶೂಲದಿಂದ ಅವರ ಶಿರಗಳನ್ನೂ ಕತ್ತರಿಸಿ, ಭೈರವನೇ ಮೊದಲಾದ ಭೂತಪತಿಗಳಿಗೆ ಹೋಮ ಮಾಡುತ್ತೇನೆ. ಆದರೆ ಹೇ ಇಂದ್ರ! ಒಂದು ವೇಳೆ ನೀನೇ ನನ್ನ ಸೈನ್ಯವನ್ನು ನಾಶಪಡಿಸಿ ನನ್ನನ್ನು ಕೊಂದರೆ, ನನ್ನ ಈ ದೇಹವನ್ನೆ ಸಕಲ ಜೀವರಾಶಿಗಳಿಗೂ ಬಲಿಯಾಗಿ ಅರ್ಪಿಸಿ, ಎಲ್ಲ ಋಣಗಳಿಂದಲೂ ಮುಕ್ತನಾಗಿ ನಾರದಮುನಿಗಳೇ ಮೊದಲಾದ ಮಹಾತ್ಮರ ಪಾದಧೂಳಿಯ ಪ್ರಸಾದವನ್ನು ಪಡೆಯುತ್ತೇನೆ!”
ವೃತ್ರಾಸುರನ ಗುಡುಗಿನಂಥ ಮಾತುಗಳನ್ನು ಕೇಳುತ್ತಾ ಇಂದ್ರನಿಗೆ ಕೋಪವು ಉಕ್ಕೇರುತ್ತಿದ್ದರೂ ಅವನ ಈ ಕಡೆಯ ಮಾತನ್ನು ಕೇಳಿ ಇಂದ್ರನು ಅವಾಕ್ಕಾದನು! ವೃತ್ರನಂಥ ಅಸುರನಿಗೆ ನಾರದರಂಥವರಲ್ಲಿ ಭಕ್ತಿಯೇ?!
ಇಂದ್ರನು ಯುದ್ಧಕ್ಕೆ ಮುಂದುವರಿಯದೇ ಸುಮ್ಮನೆ ನಿಂತುದನ್ನು ಕಂಡು ವೃತ್ರನು ಪುನಃ ಗರ್ಜಿಸಿದನು, “ಹೇ ಸುರರಾಜ ! ನಿನ್ನ ಶತ್ರುವಾದ ನಾನು ನಿನ್ನ ಎದುರಿಗೇ ನಿಂತಿದ್ದರೂ ನೀನೇಕೆ ನಿನ್ನ ವಜ್ರಾಯುಧವನ್ನು ನನ್ನತ್ತ ಪ್ರಯೋಗಿಸುತ್ತಿಲ್ಲ?! ಕೃಪಣನ ಬಳಿ ಹಣ ಕೇಳಲು ಹೋದವನಿಗೆ ಆಗುವಂಥ ದುರ್ಗತಿ ನಿನ್ನ ಗದೆಗಾಯಿತು! ಆದರೆ ಈ ವಜ್ರಾಯುಧವು ಹಾಗಲ್ಲವೋ….! ಅದರಲ್ಲಿ ಸಂಶಯವಿಟ್ಟುಕೊಳ್ಳಬೇಡ…..! ಎಲವೋ ಇಂದ್ರ ! ಈ ನಿನ್ನ ವಜ್ರಾಯುಧವು ಶ್ರೀಹರಿಯ ಶಕ್ತಿಯಿಂದಲೂ ದಧೀಚಿ ಮಹರ್ಷಿಗಳ ತಪೋಶಕ್ತಿಯಿಂದಲೂ ಕೂಡಿದೆಯಲ್ಲವೇನೋ….? ಮತ್ತಿನ್ನೇನು ಭಯ ನಿನಗೆ?! ಆ ವಿಷ್ಣುವಿನ ನಿರ್ದೇಶನದಂತೆ ಕೊಲ್ಲು ನನ್ನನ್ನು! ಎಲ್ಲಿ ಶ್ರೀಹರಿಯಿರುವನೋ, ಅಲ್ಲಿ ವಿಜಯವೂ, ಐಶ್ವರ್ಯವೂ ಸಕಲಸದ್ಗುಣಗಳೂ ಇರುತ್ತವೆ! ನಿನ್ನ ವಜ್ರಾಘಾತದ ಪ್ರಭಾವದಿಂದ ನಾನೂ ಈ ಇಹಲೋಕದ ಪಾಶವನ್ನು ಕಳಚಿಕೊಂಡು, ಸಂಕರ್ಷಣ ಪ್ರಭುವಿನಲ್ಲಿ ಮನಸ್ಸನ್ನು ನಿಯೋಜಿಸಿ, ಮಹಾಮುನಿಗಳು ಹೊಂದಿದ ಪರಮಗತಿಯನ್ನು ಹೊಂದುತ್ತೇನೆ!”
ಇಂದ್ರನು ಆಶ್ಚರ್ಯದಿಂದ ನೋಡುತ್ತಾ ನಿಂತಿರಲು, ವೃತ್ರನು ತತ್ತ್ವಜ್ಞಾನಿಯಂತೆ ಮಾತನಾಡತೊಡಗಿದ!
“ಪರಮ ದೇವೋತ್ತಮ ಪುರುಷನು ತನ್ನ ಏಕಾಂತ ಭಕ್ತರನ್ನು ತನ್ನವರೆಂದೇ ಪರಿಗಣಿಸುತ್ತಾನೆ! ಆದರೆ ಅವನು ಇಂಥವರಿಗೆ ಭೂಲೋಕದ, ದೇವಲೋಕಗಳ, ಇಲ್ಲವೇ ಕೆಳಲೋಕಗಳ ಮಹದೈಶ್ವರ್ಯವನ್ನು ನೀಡುವುದಿಲ್ಲ; ಏಕೆಂದರೆ, ಭೌತಿಕ ಸಂಪತ್ತು, ಹೆಚ್ಚಾದಷ್ಟೂ, ದ್ವೇಷ, ಉದ್ವೇಗ, ಮದ, ಕಲಹ, ಮತ್ತು ದುಃಖಗಳನ್ನೇ ಕೊಡುವುದೇ ಹೊರತು ಶಾಂತಿ ಕೊಡುವುದಿಲ್ಲ! ಹೇ ಇಂದ್ರ! ನಮ್ಮ ಪ್ರಭುವು ತನ್ನ ಭಕ್ತರು ವ್ಯರ್ಥವಾಗಿ ಧರ್ಮಾರ್ಥಕಾಮಗಳ ಸಾಧನೆಯಲ್ಲೇ ಮತ್ತೆ ಮತ್ತೆ ತೊಡಗುವುದನ್ನು ಬಯಸುವುದಿಲ್ಲ; ಬದಲಿಗೆ ಅಖಂಡ ಮೋಕ್ಷ ಸಾಮ್ರಾಜ್ಯವನ್ನು ನೀಡುವ ಅವನ ಅಪಾರ ಕರುಣೆ ಎಂಥದೆಂಬುದನ್ನು ನೀನೇ ಅರ್ಥಮಾಡಿಕೋ! ಆದರೆ ಭೌತಿಕ ಆಶಾರಹಿತ ಶುದ್ಧಭಕ್ತರಿಗೆ ಪ್ರಕಟವಾಗುವ ಅವನು, ಬರಿದೇ ಅಂಥ ಭೌತಿಕ ಪ್ರಪಂಚದಲ್ಲೇ ಮುಳುಗಿರುವ ಇತರರಿಗೆ ದುರ್ಲಭನು!”
ಈಗ ವೃತ್ರನು ಶ್ರೀಹರಿಯನ್ನೇ ಪ್ರಾರ್ಥಿಸತೊಡಗಿದನು!
“ಓ ಶ್ರೀಹರಿ! ಓ ನನ್ನ ಪ್ರಾಣದ ಪ್ರಭು ! ನಾನು ಪುನಃ ನಿನ್ನ ಪಾದಪದ್ಮಗಳನ್ನೇ ಏಕೈಕ ಆಶ್ರಯವನ್ನಾಗಿ ಉಳ್ಳ ದಾಸರ ದಾಸನಾದೇನೇ? ನಾನು ಪುನಃ ನಿನ್ನ ದಿವ್ಯಗುಣಗಳನ್ನೇ ನನ್ನ ಮನಸ್ಸಿನಲ್ಲಿ ಸ್ಮರಿಸಿಕೊಳ್ಳಲು ಸಾಧ್ಯವಾದೀತೇ? ನಾನು ಪುನಃ ನಿನ್ನ ಲೀಲೆಗಳನ್ನು ಕೀರ್ತಿಸಲಾದೀತೇ? ಪುನಃ ನನ್ನ ದೇಹವು ನಿನ್ನ ಸೇವೆಯಲ್ಲಿ ತೊಡಗಲಾದೀತೆ? ಹೇ ಪ್ರಭು! ನನಗೆ ಸ್ವರ್ಗಲೋಕ ಬೇಡ! ಬ್ರಹ್ಮಲೋಕವೂ ಬೇಡ! ಅಥವಾ, ಭೂಲೋಕ, ಇಲ್ಲವೇ ರಸಾತಳಾದಿ ಕೆಳಲೋಕಗಳ ಸಾರ್ವಭೌಮಪಟ್ಟವೂ ಬೇಡ! ಯೋಗಸಿದ್ಧಿಯೂ ಬೇಡ! ನಿನ್ನ ಸಾನ್ನಿಧ್ಯವಿಲ್ಲದಿದ್ದರೆ ನನಗೆ ಮೋಕ್ಷವೂ ಬೇಡ! ಓ ಪ್ರಭು, ಪುಟ್ಟಾದ, ರೆಕ್ಕೆ ಬಲಿತಿರದ ಮರಿಪಕ್ಷಿಗಳು ತಾಯಿಪಕ್ಷಿಗಾಗಿ ಕಾತರದಿಂದ ಗೂಡಿನಲ್ಲಿ ಕಾಯುವಂತೆ, ಕಟ್ಟಿಹಾಕಲ್ಪಟ್ಟ ಕರುಗಳು ಕ್ಷುಧಾರ್ತವಾಗಿ ಹಾಲು ಕರೆಯುವ ಸಮಯಕ್ಕಾಗಿ ಕಾಯುವಂತೆ, ಪ್ರಯಾಣ ಹೋಗಿರುವ ಪತಿಯು ಹಿಂದಿರುಗುವುದನ್ನೇ ಅವನ ವಿಷಣ್ಣಳಾದ ಪ್ರಿಯಪತ್ನಿಯು ಕಾಯುವಂತೆ, ನಾನೂ ನಿನ್ನ ದರ್ಶನ ಮತ್ತು ಸೇವೆಗಳಿಗಾಗಿ ಕಾಯುತ್ತಿದ್ದೇನೆ! ಹೇ ಕಮಲಾಕ್ಷ! ನನ್ನ ಪೂರ್ವಾರ್ಜಿತ ಕರ್ಮಗಳಿಂದ ನಾನು ಈ ಸಂಸಾರಚಕ್ರದಲ್ಲಿ ಸುಮ್ಮನೆ ಸುತ್ತುತ್ತಿದ್ದೇನೆ! ನಿನ್ನ ಮಾಯೆಯ ಪ್ರಭಾವದಿಂದ, ಈ ದೇಹ, ಪತ್ನಿ, ಪುತ್ರ, ಗೃಹಾದಿ ಭಾವಗಳಲ್ಲೇ ನನ್ನ ಮನಸ್ಸು ಮುಳುಗಿಹೋಗಿದೆ! ಪ್ರಭು, ಇನ್ನು ಈ ಸಂಸಾರಬಂಧನವು ಸಾಕು! ನಿನ್ನ ಭಕ್ತರ ಸಂಗವನ್ನು ದಯಪಾಲಿಸು!”
ಭಕ್ತಿ ಪರವಶತೆಯಿಂದ ವೃತ್ರನು ಪ್ರಾರ್ಥಿಸುತ್ತಿದ್ದುದನ್ನು ಕಂಡು ಇಂದ್ರಾದಿ ದೇವತೆಗಳು ಆಶ್ಚರ್ಯದಿಂದ ಸ್ತಂಭೀಭೂತರಾದರು!
(ಮುಂದುವರಿಯುವುದು)