ವೃತ್ರ ವಧೆ (ಭಾಗ-2)

ಆಧಾರ : ಭಾಗವತ 6ನೇ ಸ್ಕಂಧ, ಅಧ್ಯಾಯ 10-12

ವೃತ್ರಾಸುರನು ಒಬ್ಬ ರಾಕ್ಷಸನಾಗಿ ಹುಟ್ಟಿದ್ದರೂ ಯಾವುದೋ ಪೂರ್ವಜನ್ಮ ವಿಶೇಷದಿಂದ ಭಕ್ತನಾಗಿದ್ದನು. ಆದ್ದರಿಂದ ಅವನು ಯುದ್ಧದಲ್ಲಿ ವಿಜಯ ಗಳಿಸುವುದಕ್ಕಿಂತಲೂ ಮರಣಹೊಂದಿ ಪರಮಪದ ಪಡೆಯುವುದೇ ಲೇಸೆಂದು ಭಾವಿಸಿ, ಇಂದ್ರನನ್ನು ಕೆರಳಿಸಲು ತನ್ನ ತ್ರಿಶೂಲವನ್ನು ಅವನತ್ತ ಬೀಸಿದನು ! ಹಿಂದೆ, ಸೃಷ್ಟಿಯ ಆದಿಯಲ್ಲಿ, ಕಾರಣ ಜಲದಲ್ಲಿ ಪವಡಿಸಿದ್ದ ಮಹಾವಿಷ್ಣುವನ್ನು ಕೈಟಭನೆಂಬ ದಾನವನು ಆಕ್ರಮಿಸಿದ್ದಂತೆಯೇ ಈಗ ವೃತ್ರಾಸುರನು ಇಂದ್ರನನ್ನು ಆಕ್ರಮಿಸಿದನು! ಪ್ರಳಯ ಕಾಲದ ಅಗ್ನಿಯ ತೀಕ್ಷ್ಣ ಜ್ವಾಲೆಗಳಂತಹ ತುದಿಗಳನ್ನು ಹೊಂದಿದ್ದ ಆ ತ್ರಿಶೂಲವು ಇಂದ್ರನತ್ತ ಒಂದು ಉಲ್ಕೆಯಂತೆ ಧಾವಿಸಿ ಹೋಗುತ್ತಿರಲು, ವೃತ್ರನು, “ಲೋ ಇಂದ್ರ ! ನೀನೀಗ ಸತ್ತೆ!!” ಎಂದು ಗಟ್ಟಿಯಾಗಿ ಗರ್ಜಿಸಿದನು ! ಆದರೆ ಇಂದ್ರನು ಹೆದರದೇ ಅದನ್ನು ತನ್ನ ವಜ್ರಾಯುಧದಿಂದ ತುಂಡುತುಂಡಾಗಿ ಕತ್ತರಿಸಿ ಹಾಕಿದನು! ಅನಂತರ, ಅದೇ ವಜ್ರಾಯುಧದಿಂದ ಸರ್ಪಗಳ ರಾಜ ವಾಸುಕಿಯಂತೆ ಬಲಿಷ್ಠವಾಗಿದ್ದ ವೃತ್ರನ ಒಂದು ತೋಳನ್ನು ಕತ್ತರಿಸಿಬಿಟ್ಟ! ವೃತ್ರನು ಒಂದು ತೋಳನ್ನು ಕಳೆದುಕೊಂಡರೂ ತನ್ನ ಇನ್ನೊಂದು ಕೈಯಿಂದ ಪರಿಘಾಯುಧವನ್ನು ಹಿಡಿದು ಇಂದ್ರನ ದವಡೆಗೂ ಅವನ ಆನೆ ಐರಾವತಕ್ಕೂ ಬಲವಾಗಿ ಹೊಡೆದ ! ಆಗ ಇಂದ್ರನ ಕೈಯಿಂದ ಅವನ ವಜ್ರಾಯುಧವು ಜಾರಿ ಕೆಳಗೆ ಬಿದ್ದುಹೋಯಿತು!

“ಅಬ್ಬಾ…! ಈ ವೃತ್ರನು ಎಂಥ ಬಲಶಾಲಿ ! ಎಂಥ ಅದ್ಭುತ ಕಾರ್ಯ ಮಾಡಿದನು!” ದೇವದಾನವರೂ ಸಿದ್ಧಚಾರಣರೂ ವೃತ್ರನನ್ನೇ ಪ್ರಶಂಸಿಸಿದರು! ಆದರೆ ಮರುಕ್ಷಣ ಇಂದ್ರನ ಕೈಯಿಂದ ವಜ್ರಾಯುಧವು ಜಾರಿಹೋದುದನ್ನು ನೋಡಿ ದೇವತೆಗಳು, “ಅಯ್ಯೊಯ್ಯೋ…. ! ಎಂಥ ಅನಾಹುತವಾಗಿ ಹೋಯಿತು…..!” ಎಂದು ಪರಿತಪಿಸತೊಡಗಿದರು!

ಶತ್ರುವಿನ ಎದುರಿಗೇ ತನ್ನ ಆಯುಧವು ಜಾರಿ ಬೀಳಲು, ಇಂದ್ರನಿಗೆ ನಿಜವಾಗಿ ಸೋಲಾಗಿತ್ತು! ಅವಮಾನವಾದಂತಾಗಿ, ಲಜ್ಜಿತನಾದ ಅವನು, ತನ್ನ ವಜ್ರಾಯುಧವನ್ನು ಎತ್ತಿಕೊಳ್ಳಲು ಅಂಜುತ್ತಾ ಸುಮ್ಮನೆ ನಿಂತುಬಿಟ್ಟನು!

“ಹೇ ಇಂದ್ರ ! ನಿನ್ನ ವಜ್ರಾಯುಧವನ್ನೆತ್ತಿಕೊಂಡು ಶತ್ರುವನ್ನು ಸಂಹರಿಸು! ಇದು ವಿಷಾದಪಡುವ ಕಾಲ ಅಲ್ಲ” ವೃತ್ರಾಸುರನೇ ಇಂದ್ರನನ್ನು ಪ್ರೋತ್ಸಾಹಿಸಿದನು, “ಹೇ ಇಂದ್ರ! ಯುದ್ಧ ಮಾಡುವಾಗ, ಒಬ್ಬನನ್ನು ಹೊರತುಪಡಿಸಿ ಇನ್ನಾರಿಗೂ ಜಯವು ಶತಃಸಿದ್ಧವೆಂದು ಹೇಳಲಾಗುವುದಿಲ್ಲ! ಆ ಒಬ್ಬನು ಯಾರು ಗೊತ್ತೇ? ಈ ಸೃಷ್ಟಿ, ಸ್ಥಿತಿ, ಲಯಗಳನ್ನು ಮಾಡುತ್ತಿರುವ ಆದಿಪುರುಷನಾದ ಭಗವಂತ ! ಅವನನ್ನು ಬಿಟ್ಟು ಇನ್ನಾರಾದರೂ ಪರತಂತ್ರ ಜೀವಿಗಳಿಗೆ ಜಯವಾದರೂ ಆಗಬಹುದು, ಇಲ್ಲವೇ ಅಪಜಯವಾದರೂ ಆಗಬಹುದು! ಅವನೊಬ್ಬ ಮಾತ್ರ ಸರ್ವತಂತ್ರಸ್ವತಂತ್ರ! ಪಕ್ಷಿಗಳು ಬಲೆಯಲ್ಲಿ ಸಿಕ್ಕಿಕೊಂಡಂತೆ, ಸಕಲ ಲೋಕಗಳೂ ಲೋಕಪಾಲಕರೂ ಕಾಲರೂಪದ ಅವನಿಗೆ ವಶರಾಗಿ ಬಾಳುತ್ತಾರೆ! ಇಂದ್ರಿಯಶಕ್ತಿ, ಮನಃಶ್ಶಕ್ತಿ, ಬಲ, ಪ್ರಾಣ, ಅಮೃತತ್ವ, ಮೃತ್ಯು, ಇವೆಲ್ಲವೂ ಭಗವಂತನಿಗೆ ಅಧೀನವಾಗಿವೆ ! ಇದನ್ನು ಅರಿಯದ ಜನರು, ಇವಕ್ಕೆಲ್ಲಾ ನಿಜವಾಗಿ ಜಡವಾದ ದೇಹವೇ ಕಾರಣವೆಂದು ತಿಳಿಯುತ್ತಾರೆ! ಓ ಇಂದ್ರ, ಮರದಿಂದ ಮಾಡಿರುವ ಹೆಣ್ಣು ಬೊಂಬೆಯಾಗಲೀ ಎಲೆಗಳಿಂದ ಮಾಡಿರುವ ಪ್ರಾಣಿಬೊಂಬೆಯಾಗಲೀ, ತಾವಾಗಿಯೇ ಕುಣಿಯದೇ ಸೂತ್ರಧಾರನ ನಿಯಂತ್ರಣಕ್ಕೊಳಗಾಗಿರುವಂತೆ ನಾವೂ ಆ ಭಗವಂತನೆಂಬ ಮಹಾಸೂತ್ರಧಾರನ ನಿಯಂತ್ರಣಕ್ಕೊಳಗಾಗಿರುತ್ತೇವೆ! ನಾವ್ಯಾರೂ ಸ್ವತಂತ್ರರಲ್ಲ! ಈ ಪ್ರಕೃತಿಯ ಅಂಶಗಳಾದ ಪಂಚಭೂತಗಳು, ಪಂಚೇಂದ್ರಿಯಗಳು, ಮೊದಲಾದವುಗಳು, ಆ ಪರಮಪುರುಷನ ನಿರ್ದೇಶನವಿಲ್ಲದೇ ತಾವಾಗಿಯೇ ಸೃಷ್ಟಿ ಮಾಡಲಾರವು! ಬುದ್ಧಿಹೀನನಾದವನು, ತಾನು ನಿಜವಾಗಿ ಸದಾ ಇತರರನ್ನು ಅವಲಂಬಿಸುತ್ತಿದ್ದರೂ ತಾನೇ ಈಶ್ವರನೆಂದು ಭಾವಿಸುತ್ತಾನೆ. ಜೀವಿಗಳು ಇತರ ಜೀವಿಗಳನ್ನು ಸೃಷ್ಟಿಸುತ್ತಿದ್ದರೂ, ಜೀವಿಗಳು ಜೀವಿಗಳನ್ನು ಕೊಲ್ಲುತ್ತಿದ್ದರೂ, ಈ ಸೃಷ್ಟಿ, ಸಂಹಾರಗಳನ್ನು ಅವುಗಳ ಮೂಲಕ ಮಾಡುತ್ತಿರುವುದು ಭಗವಂತನೇ!”

ವೃತ್ರನ ಮಾತುಗಳನ್ನು ಕೇಳುತ್ತಿದ್ದ ಇಂದ್ರನಿಗೆ ಹಿಂದೆ ನಡೆದ ಘಟನಾವಳಿಗಳು ಸುರುಳಿಸುರುಳಿಯಾಗಿ ಬಿಚ್ಚಿಕೊಂಡವು! ಅಂದು ತಾನೇ ಸ್ವರ್ಗಭೋಗಗಳಿಗೆಲ್ಲಾ ಈಶ್ವರನೆಂದು ಅಹಂಕಾರಪಟ್ಟಿದ್ದರಿಂದಲ್ಲವೇ ಇಷ್ಟೆಲ್ಲಾ ತೊಂದರೆಗಳಾದದ್ದು? ಈ ದಾನವನಿಗಿರುವ ಜ್ಞಾನ ತನಗಿಲ್ಲದಂತಾಯಿತೇ….?! ಅವನು ಹೀಗೆ ಯೋಚಿಸುತ್ತಿದ್ದಂತೆ ವೃತ್ರನು ಪುನಃ ಹೇಳಿದ, “ಓ ಇಂದ್ರ! ವ್ಯಕ್ತಿಯು ಸಾಯುವಾಗ, ಅವನು ತನ್ನ ಆಯುಷ್ಯ, ಐಶ್ವರ್ಯ, ಕೀರ್ತಿ, ಮೊದಲಾದವುಗಳೆಲ್ಲವನ್ನೂ ಬಿಡಬೇಕು! ಅಂತೆಯೇ ಭಗವಂತನು ಸೂಕ್ತ ಕಾಲಕ್ಕೆ ಇವೆಲ್ಲವನ್ನೂ ಅವನಿಗೆ ಕೊಡುತ್ತಾನೆ! ಆದ್ದರಿಂದ ಕೀರ್ತಿ ಮತ್ತು ಕೀರ್ತಿರಾಹಿತ್ಯ, ಜಯ ಮತ್ತು ಅಪಜಯ, ಸುಖ ಮತ್ತು ದುಃಖ, ಮೃತ್ಯು ಮತ್ತು ಜೀವಿತ, ಇವುಗಳ ವಿಷಯದಲ್ಲಿ ಸಮಭಾವದಿಂದಿರಬೇಕು! ಓ ಇಂದ್ರ, ಸತ್ತ್ವ, ರಜಸ್ಸು, ಮತ್ತು ತಮೋಗುಣಗಳು ನಿಜವಾಗಿ ಪ್ರಕೃತಿಯ ಗುಣಗಳೇ ಹೊರತು, ಆತ್ಮನ ಗುಣಗಳಲ್ಲ! ವ್ಯಕ್ತಿಯೂ, ಆತ್ಮನಾದ ತಾನು ಬರಿಯ ಸಾಕ್ಷಿಯೆಂದು ಅರಿತರೆ, ಆಗ ಬದ್ಧನಾಗುವುದಿಲ್ಲ! ಈಗ ನನ್ನನ್ನೇ ನೋಡು! ಒಂದು ಕೈಯನ್ನೂ ಆಯುಧವನ್ನೂ ಕತ್ತರಿಸಿಕೊಂಡು ನಾನು ನಿನ್ನಿಂದ ಸೋತಿದ್ದರೂ ಇನ್ನೂ ನಿನ್ನ ಪ್ರಾಣ ತೆಗೆಯಲು ಯಥಾಶಕ್ತಿ ಹೋರಾಡುತ್ತಿದ್ದೇನೆ! ಹಾಗೆಯೇ ನೀನೂ ವಿಷಾದಪಡದೇ ಹೋರಾಡು ! ಓ ಇಂದ್ರನೇ, ಈ ಯುದ್ಧವನ್ನೊಂದು ದ್ಯೂತಕ್ರೀಡೆಯಂತೆ ಪರಿಗಣಿಸು! ಇಲ್ಲಿ ನಮ್ಮ ಪ್ರಾಣಗಳೇ ಪಣಗಳು! ಬಾಣಗಳೇ ದಾಳಗಳು! ಈ ವಾಹನಗಳೇ ಚದುರಂಗ ನಕ್ಷೆಗಳು! ಇಲ್ಲಿ ಯಾರಿಗೆ ಜಯ, ಯಾರಿಗೆ ಪರಾಜಯ ಎಂದು ಹೇಳುವುದು ಕಷ್ಟ!”

ವೃತ್ರಾಸುರನು ಜ್ಞಾನಯುಕ್ತವಾಗಿಯೂ ಸಮಯೋಚಿತವಾಗಿಯೂ ಹೇಳಿದ ಮಾತುಗಳು ಇಂದ್ರನಿಗೆ ಬಹಳ ಮೆಚ್ಚುಗೆಯಾದವು! ಈಗ ಅವನು ಹೆದರದೇ ತನ್ನ ವಜ್ರಾಯುಧವನ್ನೆತ್ತಿಕೊಂಡು ಮುಗುಳ್ನಗುತ್ತಾ, ವೃತ್ರನನ್ನು ನಿಜವಾಗಿ ಪ್ರಶಂಸಿಸುತ್ತಾ ಹೇಳಿದ, “ಹೇ ದಾನವ! ನಿನ್ನ ಬುದ್ಧಿಯು ಈ ರೀತಿಯಿರುವುದನ್ನು ನೋಡಿ ನನಗೆ ಆಶ್ಚರ್ಯವಾಗಿದೆ! ನೀನೊಬ್ಬ ಸಿದ್ಧಪುರುಷ! ನೀನು ನಿನ್ನ ಪೂರ್ಣ ಮನಸ್ಸಿನಿಂದ ಭಗವದ್ಭಕ್ತನಾಗಿದ್ದೀಯೆ! ಜಗತ್ತನ್ನೇ ವಿಮೋಹಗೊಳಿಸುವ ವಿಷ್ಣುವಿನ ಮಾಯೆಯನ್ನು ನೀನು ಮೀರಿರುವೆ! ಈ ಕಾರಣದಿಂದ ನೀನು ಆಸುರಭಾವವನ್ನು ತ್ಯಜಿಸಿ ಮಹಾಪುರುಷನಾಗಿರುವೆ! ಇದು ನಿಜಕ್ಕೂ ಮಹದಾಶ್ಚರ್ಯ ! ನಿನ್ನಂಥ ರಾಕ್ಷಸರು ರಜೋಗುಣದಲ್ಲಿರುತ್ತಾರೆ, ಆದರೆ ನೀನು, ಸದಾ ಶುದ್ಧಸತ್ತ್ವಗುಣದಲ್ಲಿರುವ ವಿಷ್ಣುವಿನಲ್ಲಿ ಭಕ್ತಿಯನ್ನು ಹೊಂದಿದ್ದೀಯೆ! ಅತ್ಯಂತ ಮಂಗಳಕರವಾದುದಕ್ಕೂ ಪ್ರಭುವಾದ ಶ್ರೀಹರಿಯಲ್ಲಿ ಯಾರು ಭಕ್ತಿಯನ್ನು ಹೊಂದಿರುವರೋ, ಅವರು ಅಮೃತದ ಸಾಗರದಲ್ಲಿ ಈಜುತ್ತಿರುತ್ತಾರೆ! ಅಂಥವರಿಗೆ ಇತರ ಪುಟ್ಟ ಹಳ್ಳಕೊಳ್ಳಗಳ ನೀರಿನಿಂದೇನುಪಯೋಗ?!”

ಇಂದ್ರ ವೃತ್ರರು ಆ ರಣರಂಗದಲ್ಲೇ ಸ್ವಲ್ಪ ಹೊತ್ತು ಹೀಗೆ ಧರ್ಮಜಿಜ್ಞಾಸೆ ಮಾಡಿ, ಅನಂತರ ಪುನಃ ಯುದ್ಧ ಮಾಡತೊಡಗಿದರು! ವೃತ್ರನು ಭಯಂಕರವಾದ ತನ್ನ ಕಬ್ಬಿಣದ ಪರಿಘಾಯುಧವನ್ನು ಇಂದ್ರನತ್ತ ಎಡಗೈಯಿಂದಲೇ ಎಸೆದ! ಆದರೆ ಇಂದ್ರನು ಏಕಕಾಲಕ್ಕೇ ತನ್ನ ವಜ್ರಾಯುಧದಿಂದ ವೃತ್ರನ ಪರಿಘಾಯುಧವನ್ನೂ ಆನೆಯ ಸೊಂಡಿಲಿನಂಥ ಅವನ ಎಡತೋಳನ್ನೂ ತುಂಡರಿಸಿದ! ಈಗ ವೃತ್ರನು ವಿಪುಲವಾಗಿ ರಕ್ತಕಾರುತ್ತಿರಲು, ಎರಡೂ ತೋಳುಗಳನ್ನು ಕಳೆದುಕೊಂಡ ಅವನು, ಇಂದ್ರನ ವಜ್ರಾಯುಧದಿಂದ ರೆಕ್ಕೆಗಳನ್ನು ಕತ್ತರಿಸಿಕೊಂಡ ಒಂದು ದೊಡ್ಡ ಹಾರುವ ಪರ್ವತದಂತೆ ಕಾಣುತ್ತಿದ್ದ! ಆದರೂ ಮಹಾಬಲಿಷ್ಠನಾಗಿದ್ದ ಅವನು, ತನ್ನ ಕೆಳದವಡೆಯನ್ನು ನೆಲದ ಮೇಲೂ ಮೇಲ್ದವಡೆಯನ್ನು ಆಕಾಶದಲ್ಲೂ ಇರಿಸಿ ತನ್ನ ಬಾಯನ್ನು ಆಕಾಶದಂತೆಯೇ ಬಹಳ ಅಗಲವಾಗಿ ತೆರೆದನು! ಮಹಾ ಸರ್ಪದಂತಿದ್ದ ಅವನ ಉದ್ದವಾದ ನಾಲಗೆಯೂ ತೀಕ್ಷ್ಣವಾದ ಹಲ್ಲುಗಳೂ, ಜಗತ್ತನ್ನೇ ನುಂಗುವ ಪ್ರಳಯಕಾಲವನ್ನು ಜ್ಞಾಪಿಸುತ್ತಿದ್ದವು! ಹೀಗೆ ತನ್ನ ಬಾಯನ್ನು ದೊಡ್ಡ ಗುಹೆಯಂತೆ ತೆರೆದುಕೊಂಡು, ತನ್ನ ಕಾಲುಗಳಿಂದ ಗಿರಿಪರ್ವತಗಳನ್ನೂ ಭೂಮಿಯನ್ನೂ ಕಂಪಿಸುತ್ತಾ, ಇಂದ್ರನ ಸಮೀಪಕ್ಕೆ ಬಂದು, ಅವನನ್ನು ಐರಾವತದ ಸಮೇತ ನುಂಗಿಬಿಟ್ಟನು!

“ಅಯ್ಯಯ್ಯೋ! ಕಷ್ಟ ಕಷ್ಟ ! ಇದೇನಾಯಿತು?!” ಇಂದ್ರನಿಗಾದ ಗತಿಯನ್ನು ಕಂಡು ದೇವತೆಗಳೂ ಪ್ರಜಾಪತಿಗಳೂ ಮಹರ್ಷಿಗಳೂ ಹಾಹಾಕಾರ ಮಾಡತೊಡಗಿದರು!

ಇಂದ್ರನು ವೃತ್ರನಿಂದ ನುಂಗಲ್ಪಟ್ಟಿದ್ದರೂ, ಅವನು ನಾರಾಯಣಕವಚ ಮಹಾಮಂತ್ರದಿಂದ ರಕ್ಷಿಸಲ್ಪಟ್ಟಿದ್ದನಾದ್ದರಿಂದ ಸಾಯಲಿಲ್ಲ! ತನ್ನ ಯೋಗಶಕ್ತಿಯ ಬಲದಿಂದಲೂ ತನ್ನನ್ನು ರಕ್ಷಿಸಿಕೊಂಡು, ವಜ್ರಾಯುಧದಿಂದ ವೃತ್ರನ ಹೊಟ್ಟೆಯನ್ನು ಸೀಳಿಕೊಂಡು ಹೊರಬಂದ ! ಅನಂತರ, ತನ್ನ ಬಲವನ್ನೆಲ್ಲಾ ಬಳಸಿ ಗಿರಿಶೃಂಗವನ್ನು ಕತ್ತರಿಸುವಂತೆ ಅವನ ಶಿರಚ್ಛೇದನ ಮಾಡಿದ! ಅವನು ವಜ್ರಾಯುಧವನ್ನು ಬಹಳ ಬಲವಾಗಿ ಪ್ರಯೋಗಿಸಿದ್ದರೂ, ಮಹಾಪರಾಕ್ರಮಿಯಾದ ವೃತ್ರನ ಶಿರಚ್ಛೇದನ ಮಾಡಲು ಅದಕ್ಕೆ ಸೂರ್ಯಚಂದ್ರಾದಿ ಗ್ರಹಗಳು ಎರಡು ಅಯನಗಳನ್ನು ಸುತ್ತು ಹಾಕುವಷ್ಟು ಕಾಲ, ಅಂದರೆ ಒಂದು ವರ್ಷವೇ ಹಿಡಿಯಿತು!

ಅಂತೂ ಇಂತೂ ಮಹಾದೈತ್ಯನಾದ ವೃತ್ರಾಸುರನು ಸಾಯಲು, ಇಂದ್ರಾದಿ ದೇವತೆಗಳು ನಿಟ್ಟುಸಿರುಬಿಟ್ಟರು! ಸಿದ್ಧಚಾರಣಗಂಧರ್ವರು ದುಂದುಭಿಗಳನ್ನು ಮೊಳಗಿಸುತ್ತಾ, ವೇದಮಂತ್ರಗಳನ್ನುಚ್ಚರಿಸುತ್ತಾ, ಇಂದ್ರನನ್ನು ಕೀರ್ತಿಸುತ್ತಾ ಅವನ ಮೇಲೆ ಅತ್ಯಾನಂದದಿಂದ ಪುಷ್ಪವೃಷ್ಟಿ ಮಾಡಿದರು! ಆಗ ವೃತ್ರಾಸುರನ ಮೃತದೇಹದಿಂದ ಆತ್ಮಜ್ಯೋತಿಯು ಹೊರಹೊರಟು, ಸಕಲ ದೇವತೆಗಳೂ ನೋಡುತ್ತಿದ್ದಂತೆಯೇ ಆಕಾಶಕ್ಕೇರಿ, ಭಗವಂತನ ಧಾಮವನ್ನು ಪ್ರವೇಶಿಸಿತು!

ವೃತ್ರ ಸಂಹಾರವು ಹೀಗೆ ಯಶಸ್ವಿಯಾಗಿ ಆಗಲು, ರುದ್ರಬ್ರಹ್ಮರೇ ಮೊದಲಾಗಿ ಸಕಲ ದೇವತೆಗಳೂ ಋಷಿಮುನಿಗಳೂ ಸಿದ್ಧಚಾರಣಗಂಧರ್ವರೂ ಅತ್ಯಾನಂದದಿಂದ ತಂತಮ್ಮ ಲೋಕಗಳಿಗೆ ಹೋದರು. ಆದರೆ ಇಂದ್ರನು ಮಾತ್ರ ಒಂದು ಹೆಜ್ಜೆಯನ್ನೂ ಮುಂದಿಡಲಾರದೇ ಖಿನ್ನಮನಸ್ಕನಾಗಿ ಅಲ್ಲೇ ನಿಂತಿದ್ದನು! ದುರ್ಜಯನಾದ ವೃತ್ರನನ್ನು ಸಂಹರಿಸಿದ್ದರೂ ಒಂದು ಅವ್ಯಕ್ತ ಭೀತಿ ಅವನನ್ನು ಕಾಡತೊಡಗಿತು!

ಶ್ರೀ ಹರಿಯ ಶಕ್ತಿಯಿಂದ ಸಂಪನ್ನನಾಗಿಯೂ ವಜ್ರಾಯುಧದ ಬಲದಿಂದಲೂ ದೇವೇಂದ್ರನು ವೃತ್ರಾಸುರನನ್ನು ಸಂಹರಿಸಿದನು. ಆದರೆ ಬ್ರಾಹ್ಮಣನಾದ ತ್ವಷ್ಟೃವಿನ ಪುತ್ರನಾದ ವೃತ್ರಾಸುರನೂ ಒಬ್ಬ ಬ್ರಾಹ್ಮಣನಲ್ಲವೇ? ಅವನನ್ನು ಕೊಂದ ಇಂದ್ರನಿಗೆ ಬ್ರಹ್ಮಹತ್ಯಾದೋಷ ತಟ್ಟುವುದಿಲ್ಲವೇ? ಈ ಭಯದಿಂದ ಇಂದ್ರನು ನಿಂತಲ್ಲೇ ನಿಂತ! ವೃತ್ರನೊಂದಿಗೆ ಯುದ್ಧಕ್ಕೆ ತೊಡಗುವ ಮುನ್ನವೇ ಈ ವಿಚಾರವನ್ನು ಅವನು ಮಹರ್ಷಿಗಳ ಬಳಿ ಪ್ರಸ್ತಾವಿಸಿದ್ದ. ಆಗ ಅವರು ಹೇಳಿದ್ದ ಉತ್ತರವನ್ನು ಈಗ ಇಂದ್ರ ಸ್ಮರಿಸಿಕೊಂಡ, “ಇಂದ್ರ ! ನಾವು ಅಶ್ವಮೇಧಯಜ್ಞ ಮಾಡಿ ನಿನ್ನನ್ನು ಬ್ರಹ್ಮಹತ್ಯಾದೋಷದಿಂದ ಬಿಡಿಸುತ್ತೇವೆ ! ಬ್ರಹ್ಮಹತ್ಯೆ, ಗೋಹತ್ಯೆ, ಪಿತೃಹತ್ಯೆ, ಮಾತೃಹತ್ಯೆ, ಗುರುಹತ್ಯೆ, ಇಂಥ ಘೋರ ಪಾತಕಗಳನ್ನು ಮಾಡಿದವರೂ, ನಾಯಿಯ ಮಾಂಸ ತಿನ್ನುವ ಚಂಡಾಲರಂಥವರೂ ಶ್ರೀಮನ್ನಾರಾಯಣನ ನಾಮಸಂಕೀರ್ತನೆ ಮಾತ್ರದಿಂದಲೇ ಶುದ್ಧರಾಗಬಹುದು! ನೀನಾದರೋ ಭಕ್ತನಾಗಿರುವೆ! ನಾವು ನಿನಗೆ ಸಹಾಯ ಮಾಡಿ ಅಶ್ವಮೇಧಯಜ್ಞ ಮಾಡಿಸಿ ನಾರಾಯಣನನ್ನು ಸಂಪ್ರೀತಗೊಳಿಸುತ್ತೇವೆ! ಈ ಅಶ್ವಮೇಧಯಜ್ಞ ಮಾಡುವುದರಿಂದ ಇಡೀ ವಿಶ್ವವನ್ನೇ ನಾಶಮಾಡಿದ ಪಾಪಕ್ಕೂ ಪ್ರಾಯಶ್ಚಿತ್ತವಾಗುತ್ತದೆ! ಇನ್ನು ಕಂಟಕನಾದ ವೃತ್ರನನ್ನು ಕೊಂದ ಪಾಪದಿಂದ ಬಿಡಿಸುವುದೇನು ಕಷ್ಟ?!”

“ಅಂದು ಹಾಗೆ ಹೇಳಿದ ಋಷಿಮುನಿಗಳು ಈಗ ಇಲ್ಲಿ ನನ್ನೊಬ್ಬನನ್ನೇ ಬಿಟ್ಟು ಹೊರಟುಹೋದರಲ್ಲಾ…..?!” ಇಂದ್ರನು ಯೋಚಿಸಿದ, “ಗೆಲವು ಸಾಧಿಸಿದ ಬಳಿಕ ನನ್ನನ್ನು ಮರೆತೇಬಿಟ್ಟರೇ…..? ಅಂದು ವಿಶ್ವರೂಪನನ್ನು ಕೊಂದಾಗ ಉಂಟಾದ ಬ್ರಹ್ಮಹತ್ಯಾದೋಷವನ್ನು ನಾನು ಭೂಮಿ, ನೀರು, ವೃಕ್ಷ, ಮತ್ತು ಸ್ತ್ರೀಯರಿಗೆ ಹಂಚಿದೆ! ಈಗ ಬರಲಿರುವ ಪಾಪವನ್ನು ಯಾರೊಡನೆ ಹಂಚಿಕೊಳ್ಳಲಿ….?! ಈ ಮುಖ ಹೊತ್ತುಕೊಂಡು ನಾನು ಅಮರಾವತಿಗೆ ಹೇಗೆ ಹೋಗಲಿ?!”

ಇಂದ್ರನು ಹೀಗೆ ಯೋಚಿಸುತ್ತಿರುವಾಗಲೇ, ಬ್ರಹ್ಮಹತ್ಯಾದೋಷವು ಮೂರ್ತಸ್ವರೂಪದಿಂದ ಅವನತ್ತಲೇ ಬರುತ್ತಿರುವುದನ್ನು ಅವನು ಕಂಡ! ವಿಕಾರವಾದ ಚಾಂಡಾಲ ಸ್ತ್ರೀಯಂತಿದ್ದ ಅದು, ವೃದ್ಧಾಪ್ಯದಿಂದ ಶಿಥಿಲವಾದ ಅಂಗಾಂಗಗಳನ್ನು ಹೊಂದಿದ್ದು, ಕ್ಷಯರೋಗದಿಂದ ನರಳುತ್ತಾ ರಕ್ತವನ್ನು ಕಕ್ಕುತ್ತಾ, ಮೀನಿನ ವಾಸನೆಯಿಂದ ಕೂಡಿದ್ದು, ಮಾರ್ಗವನ್ನೆಲ್ಲಾ ದುರ್ಗಂಧಮಯವಾಗಿಸುತ್ತಾ, `ನಿಲ್ಲು ! ನಿಲ್ಲು!’, ಎಂದು ಕೂಗಿಕೊಳ್ಳುತ್ತಾ ಬರುತ್ತಿತ್ತು!

ಭಯಭೀತನಾದ ಇಂದ್ರ, ಆ ದೋಷದಿಂದ ತಪ್ಪಿಸಿಕೊಳ್ಳಲು ಎಲ್ಲೆಲ್ಲೂ ಓಡತೊಡಗಿದನು! ಅವನು ಎಲ್ಲೆಲ್ಲಿ ಓಡಿದರೂ ಬಿಡದೇ ಅದು ಅವನನ್ನು ಬೆನ್ನಟ್ಟುತ್ತಾ ಹೋಯಿತು! ಕಡೆಗೆ ಇಂದ್ರನು ಈಶಾನ್ಯ ದಿಕ್ಕಿನಲ್ಲಿದ್ದ ಮಾನಸಸರೋವರವನ್ನು ವೇಗವಾಗಿ ಪ್ರವೇಶಿಸಿ, ಯೋಗಶಕ್ತಿಯಿಂದ ಅಲ್ಲಿನ ಒಂದು ಕಮಲದ ದಂಟಿನೊಳಗೆ ಸೇರಿಕೊಂಡ!

ಇಂದ್ರನು ಸಾವಿರ ವರ್ಷಗಳ ಕಾಲ, ಯಾರಿಗೂ ಕಾಣಿಸಿಕೊಳ್ಳದೇ ಆ ಕಮಲದ ದಂಟಿನೊಳಗೇ ಇರುತ್ತಾ ಬ್ರಹ್ಮಹತ್ಯೆಯ ದೋಷದಿಂದ ಪಾರಾಗುವುದು ಹೇಗೆಂದು ಯೋಚಿಸುತ್ತಾ ಕಳೆದ! ಆ ದೀರ್ಘಕಾಲ, ಅವನು ಅಗ್ನಿಮುಖದಿಂದ ಯಾಗಯಜ್ಞಗಳ ಹವಿರ್ಭಾಗವನ್ನೂ ಸ್ವೀಕರಿಸಲಾರದೇ ಭೋಗವಂಚಿತನಾಗಿದ್ದ! ಏಕೆಂದರೆ ಅಗ್ನಿಗೆ ನೀರಿನೊಳಗೆ ಹೋಗಲಾಗುತ್ತಿರಲಿಲ್ಲ! ದೇವೇಂದ್ರನು ಹೀಗೆ ಬ್ರಹ್ಮಹತ್ಯಾದೋಷದ ಭಯದಿಂದ ಅಡಗಿಕೊಳ್ಳಲು ದೇವತೆಗಳು ಕಂಗಾಲಾದರು…..! ಸ್ವರ್ಗವು ಈಗ ಅರಾಜಕವಾಯಿತು! ಆದರೆ ಎಷ್ಟು ದಿನ ಅದನ್ನು ಹಾಗೆ ಅರಾಜಕವಾಗಿ ಬಿಡುವುದು? ದೇವತೆಗಳು ಇಂದ್ರನ ಪಟ್ಟಕ್ಕೆ ಯೋಗ್ಯನಾದ ಒಬ್ಬ ಧಾರ್ಮಿಕ ರಾಜನನ್ನು ಹುಡುಕತೊಡಗಿದರು.

ಆಗ ಅವರ ದೃಷ್ಟಿಗೆ ಗೋಚರವಾದುದು, ಭೂಮಂಡಲವನ್ನಾಳುತ್ತಿದ್ದ ಚಂದ್ರವಂಶದ ರಾಜ ನಹುಷ. ತಪಸ್ಸು, ವಿದ್ಯೆ, ಯೋಗಬಲಗಳಿಂದ ಸಂಪನ್ನನಾಗಿದ್ದ ಅವನನ್ನು ಇಂದ್ರನಾಗುವಂತೆ ದೇವತೆಗಳು ಕೇಳಿಕೊಳ್ಳಲು ಅವನು ಒಪ್ಪಿದ. ದೇವೇಂದ್ರನು ಕಮಲದ ದಂಟಿನಲ್ಲಿ ಅಡಗಿದ್ದ ಸಾವಿರ ವರ್ಷಗಳ ಕಾಲ, ನಹುಷ ಸ್ವರ್ಗಾಧಿಪತ್ಯ ವಹಿಸಿದ. ಆದರೆ ಕ್ರಮೇಣ, ಅಧಿಕಾರ, ಐಶ್ವರ್ಯಗಳ ಮದದಿಂದ ಅಹಂಕಾರ ತಾಳಿ, ದೇವತೆಗಳನ್ನೂ ಋಷಿಗಳನ್ನೂ ಅವಮಾನಿಸುತ್ತಾ, ಇಂದ್ರನ ಪತ್ನಿಯಾದ ಶಚೀದೇವಿಯನ್ನೂ ಕಾಮಿಸಿದ! ತನ್ನನ್ನು ಸೇವಿಸಬೇಕೆಂದು ಅವಳಿಗೆ ಹೇಳಲು, ಹೆದರಿದ ಅವಳು, ಉಪಾಯ ಮಾಡಿ, ಸ್ವಲ್ಪ ಕಾಲಾವಕಾಶ ಕೇಳಿದಳು. ಅನಂತರ ಅವಳು ಬೃಹಸ್ಪತಿಗಳನ್ನು ಪ್ರಾರ್ಥಿಸಲು, ಅವಳ ಕಷ್ಟಕ್ಕೆ ಮರುಗಿ ಅವರು ಪುನಃ ಕಾಣಿಸಿಕೊಂಡರು. ಋಷಿಮುನಿಗಳೊಂದಿಗೆ ಸೇರಿ ಅವರು ಒಂದು ಉಪಾಯ ಮಾಡಿದರು. ಅದರಂತೆ, ಶಚಿಯು ನಹುಷನಿಗೆ, ಅವನು ಸಪ್ತರ್ಷಿಗಳು ಹೊತ್ತ ಪಲ್ಲಕ್ಕಿಯಲ್ಲಿ ಅವಳ ಗೃಹಕ್ಕೆ ಆಗಮಿಸಿದರೆ ಅವನನ್ನು ಸೇವಿಸುವುದಾಗಿ ಹೇಳಿದಳು! ಅಹಂಕಾರದಿಂದ ಕುರುಡಾಗಿದ್ದ ನಹುಷನು ಅದಕ್ಕೂ ಒಪ್ಪಿದನು!

ನಹುಷೇಂದ್ರನು, ಸಪ್ತರ್ಷಿಗಳು ತನ್ನ ಪಲ್ಲಕ್ಕಿಯನ್ನು ಹೊತ್ತು ನಡೆಯಬೇಕೆಂದು ಆಜ್ಞಾಪಿಸಲು ಅವರು ಹಾಗೆಯೇ ಮಾಡಿದರು. ಆದರೆ ಅಗಸ್ತ್ಯರು ಕುಳ್ಳಗಿದ್ದುದರಿಂದ ವೇಗವಾಗಿ ನಡೆಯಲಾಗುತ್ತಿರಲಿಲ್ಲ. ಇದರಿಂದ ಕುಪಿತನಾದ ನಹುಷನು ಅವರನ್ನು ಒದ್ದನು! ಆಗ ಅಗಸ್ತ್ಯರು ಕೋಪದಿಂದ, ನಹುಷನಿಗೆ ಹೆಬ್ಬಾವಾಗೆಂದು ಶಪಿಸಿದರು! ನಹುಷನು ಕೂಡಲೇ ಹೆಬ್ಬಾವಾಗಿ ಭೂಮಿಯಲ್ಲಿ ಬಿದ್ದನು!

ಹೀಗೆ ನಹುಷನು ತನ್ನ ಅಹಂಕಾರ, ಅಪಚಾರಗಳಿಂದ ಪತನ ಹೊಂದಿದನು.

ಇತ್ತ ದೇವೇಂದ್ರನು, ಸತ್ಯಕ್ಕೆ ಪರಮಾಶ್ರಯನಾದ ಶ್ರೀಹರಿಯ ಧ್ಯಾನ ಮಾಡಿ ಪಾಪವನ್ನು ನಿವಾರಿಸಿಕೊಂಡನು. ವಿಷ್ಣುಪತ್ನಿಯಾದ ಲಕ್ಷ್ಮಿದೇವಿಯೂ ಈಶಾನ್ಯ ದಿಕ್ಕಿಗೆ ಅಧಿಪತಿಯಾದ ರುದ್ರನೂ ಅವನನ್ನು ರಕ್ಷಿಸಿದರು. ರುದ್ರನು ಅವನ ಪಾಪದ ತೇಜಸ್ಸನ್ನು ತೊಡೆದು ಹಾಕಿದನು. ಹಾಗಾಗಿ, ಬ್ರಹ್ಮಹತ್ಯಾದೋಷವು ಅವನನ್ನಾವರಿಸಲಿಲ್ಲ.

ಶುದ್ಧನಾದ ಇಂದ್ರನು ಸ್ವರ್ಗಕ್ಕೆ ಹಿಂದಿರುಗಲು, ಬ್ರಹ್ಮರ್ಷಿಗಳು ಅವನಿಗೆ ಯಜ್ಞದೀಕ್ಷೆ ವಹಿಸಿ ಅವನಿಂದ ಅಶ್ವಮೇಧಯಜ್ಞವನ್ನು ಮಾಡಿಸಿ ಭಗವಂತನ ಪೂಜೆಯನ್ನು ತನ್ಮೂಲಕ ಮಾಡಿಸಿದರು. ಇದರಿಂದ, ಸೂರ್ಯನಿಂದ ಮಂಜು ಕರಗುವಂತೆ ಇಂದ್ರನ ಪಾಪರಾಶಿಯೆಲ್ಲವೂ ಕರಗಿಹೋಗಿ ಅವನು ಪುನಃ ಶುದ್ಧ ಮನಸ್ಕನಾಗಿ ಲೋಕಪೂಜ್ಯನಾದನು! ಗುರುಗಳಾದ ಬೃಹಸ್ಪತಿಗಳನ್ನೂ ಸಂಪೂಜಿಸಿ ಅಂದು ಅವರ ವಿಷಯದಲ್ಲಿ ತಾನು ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದನು. ಅದರಿಂದಲ್ಲವೇ ಅವನು ಇಷ್ಟು ಕ್ಲೇಶಗಳನ್ನು ಅನುಭವಿಸಿದ್ದು? ಅಂತೂ, ಅಹಂಕಾರ ಪಡುವುದರಿಂದ ಎಂತೆಂತಹ ಕಷ್ಟಗಳಾಗಬಹುದೆಂದು ಅವನು ಅರಿತನು!

ಇಂದ್ರವಿಜಯವನ್ನೂ ಅವನ ಪಾಪಪರಿಹಾರ ವಿಚಾರವನ್ನೂ, ಭಗವದ್ಭಕ್ತನೇ ಆದ ವೃತ್ರನ ಕಥೆಯನ್ನೂ, ತೀರ್ಥಗಳಿಗೂ ತೀರ್ಥರೂಪನಾದ ಶ್ರೀಹರಿಯ ಕಲ್ಯಾಣಗುಣಗಳ ವರ್ಣನೆಯನ್ನೂ ಒಳಗೊಂಡಿರುವ ಈ ಮಹಾಖ್ಯಾನವನ್ನು ಬುದ್ಧಿವಂತ ಜನರು ಸದಾ ಕೇಳುತ್ತಲೂ ಪಠಿಸುತ್ತಲೂ ಇರಬೇಕು; ವಿಶೇಷವಾಗಿ ಪರ್ವಕಾಲಗಳಲ್ಲಿ ಇದನ್ನು ಪಠಿಸಬೇಕು. ಈ ಮಹಾಖ್ಯಾನವು ಧನ, ಯಶಸ್ಸು, ಶತ್ರುಜಯ, ಆಯುಷ್ಯ, ಮಂಗಳಗಳನ್ನು ವರ್ಧಿಸುವುದಲ್ಲದೇ ಸಮಸ್ತಪಾಪಗಳನ್ನೂ ಕಳೆಯುತ್ತದೆ.

ಈ ಲೇಖನ ಶೇರ್ ಮಾಡಿ