ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಅವರ ಕೆಲವು ಶಿಷ್ಯರ ನಡುವೆ 1975ರ ಜುಲೈನಲ್ಲಿ, ಷಿಕಾಗೋದಲ್ಲಿ ಬೆಳಗಿನ ವಾಯು ಸಂಚಾರದ ವೇಳೆ ನಡೆದ ಸಂವಾದ.
ಶ್ರೀಲ ಪ್ರಭುಪಾದ : ಡಾರ್ವಿನ್ ಆರಂಭಿಸಿದ್ದು ಎಲ್ಲಿಂದ?
ಭಕ್ತ : ಯಾವುದೋ ಮೀನಿನಂತಹ ಪ್ರಾಣಿಯು ಸಾಗರದೊಳಗಿನಿಂದ ಹೊರಬಂದು ಸ್ವಚ್ಛ ಗಾಳಿಯನ್ನು ಸೇವಿಸಲಾರಂಭಿಸಿತೆಂದು ಅವನು ಹೇಳಿದ್ದಾನೆ.
ಶ್ರೀಲ ಪ್ರಭುಪಾದ : ಹಾಗಾದರೆ ಸಾಗರವು ಎಲ್ಲಿಂದ ಬಂತು?
ಭಕ್ತ : ಅವನು ಹೇಳುವುದಿಲ್ಲ.
ಶ್ರೀಲ ಪ್ರಭುಪಾದ : ಹಾಗಾದರೆ ಅವನ ಸಿದ್ಧಾಂತ ಪರಿಪೂರ್ಣವಲ್ಲ.
ಭಕ್ತ : ಆರಂಭದಲ್ಲಿ ಈ ಗ್ರಹದಲ್ಲಿ ಭಾರಿ ಪ್ರಕ್ಷುಬ್ಧ ಪರಿಸ್ಥಿತಿ ಇತ್ತೆಂದು ವಿಜ್ಞಾನಿಗಳು ಹೇಳಿದ್ದಾರೆ. ಸಾಗರಗಳು ಪ್ರಕೋಪಗೊಳ್ಳುತ್ತಿದ್ದವು. ಅನಂತರ ಮಿಂಚು ಉಂಟಾಯಿತು.
ಶ್ರೀಲ ಪ್ರಭುಪಾದ : ಮಿಂಚು ಎಲ್ಲಿಂದ ಬಂತು? ಸಾಗರ ಎಲ್ಲಿಂದ ಬಂತು? ಅವರ ಸಿದ್ಧಾಂತ ಎಲ್ಲಿದೆ? ಇದು ಊಹಾಪೋಹ.
ಭಕ್ತ : ಇವೆಲ್ಲಾ ಆದಿಯುಗದ ಸ್ಫೋಟದಿಂದ ಆರಂಭವಾಯಿತೆಂದು ಅವರು ಹೇಳುತ್ತಾರೆ.
ಶ್ರೀಲ ಪ್ರಭುಪಾದ : ನಾನು ಅದೇ ಪ್ರಶ್ನೆ ಕೇಳುವೆ. ಸ್ಫೋಟ ಎಲ್ಲಿಂದ ಬಂತು?
ಭಕ್ತ : ಸ್ಫೋಟವು ಶೂನ್ಯ ಕಾಲದಲ್ಲಿ ಸಂಭವಿಸಿತೆಂದು ಅವರು ಹೇಳುತ್ತಾರೆ. (ನಗು)
ಶ್ರೀಲ ಪ್ರಭುಪಾದ : ಶೂನ್ಯ ಕಾಲ?
ಭಕ್ತ : ಸಮಯವು ಆಗ, ಶೂನ್ಯ ಕಾಲದಲ್ಲಿ ಆರಂಭವಾಯಿತು. “ಅದಕ್ಕಿಂತ ಮೊದಲು ಏನು?” ಎಂಬ ಪ್ರಶ್ನೆ ತರ್ಕಬದ್ಧ, ಸೂಕ್ಷ್ಮವಾದ ಪ್ರಶ್ನೆಯಲ್ಲ ಎಂದು ಅವರು ಹೇಳುತ್ತಾರೆ.
ಶ್ರೀಲ ಪ್ರಭುಪಾದ : ಏಕೆ?
ಭಕ್ತ : ಈ ಪ್ರಶ್ನೆಯನ್ನು ಕೇಳಲೂಬಾರದೆಂದು ಅವರು ಹೇಳುತ್ತಾರೆ.
ಶ್ರೀಲ ಪ್ರಭುಪಾದ : ಇಲ್ಲ, ಹಾಗಾದರೆ ಅವರು ಮೂರ್ಖರು. ಅವರು ಶೂನ್ಯದಿಂದ ಆರಂಭಿಸುತ್ತಿದ್ದಾರೆ. ನೀವು ಅದ್ಹೇಗೆ ಸೊನ್ನೆಯಿಂದ ಆರಂಭಿಸುವಿರಿ?
ಭಕ್ತ : ಹಾಗಾದರೆ ಎಲ್ಲವೂ ಇಲ್ಲದ್ದರಿಂದ ಬಂದಿದೆ.
ಶ್ರೀಲ ಪ್ರಭುಪಾದ : ಅದು ಸಿದ್ಧಾಂತವಲ್ಲ.
ಭಕ್ತ : ಅದೆಲ್ಲ ಆದಿ ಕಾಲದ ವಸ್ತುವಿನ ಬೃಹತ್ ರಾಶಿಯಿಂದ ಸೃಷ್ಟಿಯಾಗಿದೆ ಎಂದು ಅವರು ಹೇಳುತ್ತಾರೆ.
ಶ್ರೀಲ ಪ್ರಭುಪಾದ : ಪುನಃ ಅದೇ ಪ್ರಶ್ನೆ ಏಳುತ್ತದೆ. ವಸ್ತು ಎಲ್ಲಿಂದ ಬಂತು?
ಭಕ್ತ : ಅದೊಂದು ಆಕಸ್ಮಿಕ ಎಂದವರು ಹೇಳುತ್ತಾರೆ.
ಶ್ರೀಲ ಪ್ರಭುಪಾದ : ಅದು ಮೂರ್ಖತನ. ಆಕಸ್ಮಿಕವೆಲ್ಲಿದೆ? ಯಾವುದೂ ಆಕಸ್ಮಿಕವಲ್ಲ.
ಎಲ್ಲವೂ ಕಾರಣ ಮತ್ತು ಪರಿಣಾಮದಿಂದ ಸಂಭವಿಸುತ್ತದೆ. ಆರಂಭದಲ್ಲಿ ದೇವರಿದ್ದನು ಅಥವಾ ದೇವರ ಮಾತಿತ್ತು ಎಂದು ಬೈಬಲ್ ಹೇಳುತ್ತದೆ. ಅಂದರೆ ದೇವರಿದ್ದ. ಅದೇ ಆರಂಭ. ನಮ್ಮ ಸಿದ್ಧಾಂತದಲ್ಲಿಯೂ ಕೂಡ ಅದೇ ಆರಂಭ. ಶ್ರೀಮದ್ ಭಾಗವತವು ಪುರಾವೆ ನೀಡುತ್ತದೆ : ಜನ್ಮಾದಿ ಅಸ್ಯ ಯತಃ… ಅಹಂ ಏವಾಸಂ ಏವಾಗ್ರೇ. ಮತ್ತು ಭಗವದ್ಗೀತೆಯಲ್ಲಿ : ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ. ಇದು ನಮ್ಮ ಸಿದ್ಧಾಂತ. ಎಲ್ಲವೂ ದೇವರಿಂದ ಆರಂಭವಾಗುತ್ತದೆ.
“ದೇವರು ಎಲ್ಲಿಂದ ಬಂದ?” ಎಂದು ನೀವು ಈಗ ಕೇಳಬಹುದು. ಆದರೆ ಅದು ಭಗವಂತ. ದೇವರು ಅಸ್ತಿತ್ವದಲ್ಲಿದ್ದಾನೆ. ಅವನು ಯಾವುದೇ ಇತರೆ ಕಾರಣಗಳಿಂದ ಸೃಷ್ಟಿಯಾದವನಲ್ಲ. ಅವನೇ ಮೂಲ ಕಾರಣನು. ಅನಾದಿರ್ ಆದಿರ್ ಅವನಿಗೆ ಆರಂಭ ಎಂಬುದಿಲ್ಲ. ಆದರೆ ಅವನೇ ಎಲ್ಲದರ ಆರಂಭ. ಆ ಆದಿಯು ಮೂಲ ವ್ಯಕ್ತಿ, ಗೋವಿಂದ, ಕೃಷ್ಣ. ನಾವು ಇದನ್ನು ವೈದಿಕ ಚರಿತ್ರೆಯಲ್ಲಿ ಕಾಣುತ್ತೇವೆ. ಆರಂಭದಲ್ಲಿ ಬ್ರಹ್ಮನು ಇದ್ದ. ಅವನು ಮೊದಲನೆಯ ದೇವತೆ.
ಈಗ ಕೃಷ್ಣನು ಹೇಳುತ್ತಾನೆ, ಅಹಂ ಆದಿರ್ ಹಿ ದೇವಾನಾಂ ಅವನೇ ಎಲ್ಲ ದೇವತೆಗಳ ಮೂಲನು. ಅವನು ಬ್ರಹ್ಮನಿಗೂ ಕಾರಣನು. ಇದು ನಮ್ಮ ತತ್ತ್ವ. ನಾವು ಶೂನ್ಯ ಅಥವಾ ಆಕಸ್ಮಿಕದಿಂದ ಹುಟ್ಟುವುದಿಲ್ಲ.
ಭಕ್ತ : ಡಾರ್ವಿನ್ ವೈದಿಕ ತತ್ತ್ವವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲೇ ಇಲ್ಲ.
ಶ್ರೀಲ ಪ್ರಭುಪಾದ : ಇಲ್ಲ, ಇಲ್ಲ, ತಾನು ಊಹಿಸಿದೆ ಎಂದು ಅವನು ಒಪ್ಪಿಕೊಂಡಿದ್ದ. ಅವನು ತತ್ತ್ವಜ್ಞಾನಿಯಲ್ಲ. ಅವನು ಚಿಂತಕ, ಊಹನಕಾರ. “ಇದು ನನ್ನ ಊಹೆ. ನಾನು ಹೀಗೆ ಭಾವಿಸುವೆ” ಎಂದು ಅವನು ಒಪ್ಪಿಕೊಂಡಿದ್ದಾನೆ.
ಭಕ್ತ : ಅವನು ಜೀವ ಸೃಷ್ಟಿಯಿಂದಲೇ ತನ್ನ ಊಹೆಯನ್ನು ಆರಂಭಿಸಿದ.
ಶ್ರೀಲ ಪ್ರಭುಪಾದ : ಊಹೆ ವಿಜ್ಞಾನವೂ ಅಲ್ಲ ತತ್ತ್ವಶಾಸ್ತ್ರವೂ ಅಲ್ಲ.
ಭಕ್ತ : ಅವರು ವೇದವನ್ನು ಊಹೆ ಎನ್ನುವರು. ಅವರು ಉಪನಿಷದ್‌ಗಳನ್ನೂ ಊಹೆ ಎನ್ನುವರು.
ಶ್ರೀಲ ಪ್ರಭುಪಾದ : ಇಲ್ಲ, ಇಲ್ಲ, ಇಲ್ಲ, ಊಹೆಯಲ್ಲ. ಶ್ರೀ ಈಶೋಪನಿಷದ್ ಹೇಳುತ್ತದೆ, ಈಶಾವಾಸ್ಯಂ ಇದಂ ಸರ್ವಂ : ಎಲ್ಲವೂ ಕೂಡ ಈಶ, ಪರಮ ನಿಯಂತ್ರಕನಿಂದಲೇ ಆರಂಭವಾಗುತ್ತದೆ. ವೇದಗಳಲ್ಲಿ ಊಹಾಪೋಹವೆಲ್ಲಿದೆ?
ಭಕ್ತ : ವೇದಗಳನ್ನು ಮಾನವ ಬರೆದನೆಂದು ಅವರು ಹೇಳುತ್ತಾರೆ. ಆದುದರಿಂದ ಅವು ಪರಿಪೂರ್ಣವಲ್ಲ.
ಶ್ರೀಲ ಪ್ರಭುಪಾದ : ನಿಮ್ಮ ಸಿದ್ಧಾಂತವೇನು? ಅದು ಮಾನವನಿಂದ ಬರೆಯಲ್ಪಟ್ಟಿದೆ. ನಿಮ್ಮ ಸಿದ್ಧಾಂತದ ಮೌಲ್ಯವೇನು? ಅದು ಊಹೆ. ವೇದಗಳನ್ನು ಮಾನವನು ರಚಿಸಿದನೆಂದು ನಾವು ಹೇಳುವುದಿಲ್ಲ. ಅವು ಅಲೌಕಿಕ ಮೂಲದಿಂದ ಬಂದವು. ಭಗವಂತನು ನುಡಿಯುವ ಮಾತುಗಳಿಗೆ ಅಪೌರುಷೇಯ ಎಂದು ಕರೆಯುತ್ತಾರೆ. ಅವುಗಳನ್ನು ಯಾವುದೇ ಸಾಮಾನ್ಯ ಮನುಷ್ಯ ನೀಡಲಿಲ್ಲ ಎಂಬುವುದನ್ನು ಅದು ಸೂಚಿಸುತ್ತದೆ.
ಅವರು ಅವರಿಗಿಷ್ಟ ಬಂದದ್ದನ್ನು ಹೇಳಬಹುದು. ಆದರೆ ನಾವು ಅದನ್ನು ಒಪ್ಪುವುದಿಲ್ಲ. ಯಾರಾದರೂ, “ನಿಮ್ಮ ತಂದೆಯ ಹೆಸರು ಇದು” ಎಂದು ಹೇಳಿದರೆಂದುಕೊಳ್ಳಿ. ನನ್ನ ತಂದೆಯ ಹೆಸರು ಏನೆಂದು ಹೇಳಲು ಅವನಿಗೆ ಅಧಿಕಾರವಾದರೂ ಏನು? ನನಗೆ ಚೆನ್ನಾಗಿ ಗೊತ್ತು.
ಆದುದರಿಂದ ಅವರ ಸಲಹೆ ಇದು : “ನಿಮ್ಮ ತಂದೆಯ ಹೆಸರು ಇದು.” ಇದೇನು ಒಳ್ಳೆಯ ಸಲಹೆಯೇ? ನಾವು ಸವಾಲು ಹಾಕಬಹುದು, “ನಿಮಗೆ ನನ್ನ ಕುಟುಂಬದ ಬಗೆಗೆ ಏನೂ ಗೊತ್ತಿಲ್ಲ. ಹೀಗಾಗಿ “ನಿಮ್ಮ ತಂದೆಯ ಹೆಸರು ಇದು” ಎಂದು ನೀವು ಹೇಗೆ ಹೇಳುವಿರಿ?
ಇದು ಮೂರ್ಖತನವಲ್ಲವೇ? ನಿಮಗೆ ನನ್ನ ಕುಟುಂಬದ ಬಗೆಗೆ ಏನೂ ತಿಳಿಯದು. ಆದರೂ ನೀವು “ನಿಮ್ಮ ತಂದೆಯ ಹೆಸರು ಇದು” ಎಂದು ಹೇಳುವಿರಿ. ಏನಿದರ ತರ್ಕ?
ಭಕ್ತ : ಡಾರ್ವಿನ್ನನ ಇಡೀ ಸಿದ್ಧಾಂತವು ಅವನು ತೋರಿದ ಮೂಳೆ ಮತ್ತು ಪುರಾತತ್ತ್ವ ಪುರಾವೆಗಳ ಅಂಶದ ಮೇಲೆ ನಿಂತಿದೆ.
ಶ್ರೀಲ ಪ್ರಭುಪಾದ : ಹೇಗಾದರೂ ಸರಿ, ಅವನು ಎಲ್ಲ ಮೂಳೆಗಳನ್ನೂ ನೋಡಿರುವುದು ಸಾಧ್ಯವಿಲ್ಲ. ಮೂಳೆಗಳನ್ನು ನೋಡಿ ಅವನು ಅಧ್ಯಯನ ಮಾಡಿದ ಎಂಬುವುದನ್ನು ಸ್ವೀಕರಿಸಿದರೂ ಅವನಂತಹ ವ್ಯಕ್ತಿಗೆ ಎಲ್ಲ ಮೂಳೆಗಳನ್ನು ನೋಡುವುದು ಸಾಧ್ಯವಿಲ್ಲ ಎಂದು ನಾನು ಖಚಿತವಾಗಿ ಹೇಳಬಲ್ಲೆ. ಅದು ನನ್ನ ಸವಾಲು.
ಅವನು “ಕೋಟಿ ಮತ್ತು ಕೋಟ್ಯಂತರ ವರ್ಷಗಳ ಹಿಂದೆ…” ಎಂದು ಹೇಳುತ್ತಾನೆ. ಆದರೆ ಅವನು ಬದುಕಿದ್ದು 50 ವರ್ಷಗಳು ಮಾತ್ರ. ಅವನು ಎಲ್ಲ ಮೂಳೆಗಳನ್ನೂ ಹೇಗೆ ನೋಡಿರುವುದಕ್ಕೆ ಸಾಧ್ಯ? ಅವನು ಸೀಮಿತ ಮನುಷ್ಯ.
ಭಕ್ತ : ತಮಗೆ ಎಲ್ಲ ಮೂಳೆಗಳೂ ದೊರೆತಿಲ್ಲವೆಂದು ಅವರು ಒಪ್ಪಿಕೊಳ್ಳುತ್ತಾರೆ. ಆದರೆ ತಾವು ಪತ್ತೆ ಹಚ್ಚಿರುವುದು ನಿರ್ಣಾಯಕ ಪುರಾವೆ ನೀಡುತ್ತದೆ ಎಂದು ಅವರು ಹೇಳುತ್ತಾರೆ.
ಶ್ರೀಲ ಪ್ರಭುಪಾದ : ಆದರೆ ಅವರು ಹಾಗೆ ಹೇಳುವುದು ಸಾಧ್ಯವಿಲ್ಲ. ನೀವು ಎಲ್ಲ ಮೂಳೆಗಳನ್ನು ನೋಡಿದ್ದರೆ ನೀವು ನಿರ್ಣಯಿಸಬಹುದಿತ್ತು. ಆದರೆ ಕೆಲವು ಮೂಳೆಗಳು ನಾಪತ್ತೆಯಾಗಿವೆ ಎಂದು ಅವರು ಹೇಳುತ್ತಾರೆ. ಆದುದರಿಂದ ಅವರ ಸಿದ್ಧಾಂತವು ಯಾವಾಗಲೂ ಅಪರಿಪೂರ್ಣ.
ಭಕ್ತ : ಈ ವರ್ಷವಷ್ಟೇ ತಲೆಬುರುಡೆಯೊಂದು ಅವರಿಗೆ ದೊರೆತಿದೆ. ಈ ಮುನ್ನ ಸಿಕ್ಕಿದ್ದ ಮಾನವ ತಲೆಬುರುಡೆಗಿಂತ ಇದು ಲಕ್ಷಾಂತರ ವರ್ಷಗಳಷ್ಟು ಪುರಾತನವಾದುದು.
ಶ್ರೀಲ ಪ್ರಭುಪಾದ : ಅದು ಸರಿ. ಆದರೂ ಎಲ್ಲ ತಲೆಬುರುಡೆಗಳೂ ದೊರೆತಿವೆ ಎಂದು ಅವರಿಗೆ ಹೇಳಲಾಗದು. “ಲಕ್ಷಾಂತರ ವರ್ಷಗಳ ಅಂತರವಿದೆ” ಎಂದಷ್ಟೇ ಅವರು ಊಹಿಸಬಹುದು.
ಭಕ್ತ : ಕಳೆದುಕೊಂಡಿರುವ ಕೊಂಡಿಯೇ ಮುಖ್ಯವಾದ ಭಾಗ ಎಂದೂ ಅವರು ಹೇಳುತ್ತಾರೆ.
ಶ್ರೀಲ ಪ್ರಭುಪಾದ : ಅಂದರೆ ಅದು ವಿಜ್ಞಾನವಲ್ಲ. ಆದುದರಿಂದ ನಾವು ಅವರನ್ನು ಮೂರ್ಖರೆನ್ನುತ್ತೇವೆ. ಮತ್ತು ಉಳಿದ ಮೂರ್ಖರು ಅವರನ್ನು ನಂಬುತ್ತಾರೆ.