ಪ್ರೇಮವೆಂದರೇನು?

ನಮ್ಮ ಬಾಂಧವ್ಯಗಳು ಈ ಲೋಕದಲ್ಲಿ ಪ್ರೇಮ ನಿಜವಾಗಿ ಇದೆಯಾ ಎಂದು ಪ್ರಶ್ನಿಸುವಂತೆ ಮಾಡಬಹುದು.

– ಅರ್ಚನಾ ಸಿದ್ಧಿ ದೇವಿ ದಾಸಿ

ಅಂದು ನನ್ನ ಗೆಳೆಯನ ಜೊತೆ ಅವನ ವಿದ್ಯಾರ್ಥಿ ನಿಲಯದಲ್ಲಿ ಕುಳಿತು ಇತಿಹಾಸ ಪರೀಕ್ಷೆಗೆ ಓದುತ್ತಿದ್ದದ್ದು ಈಗಲೂ ನನಗೆ ನೆನಪಾಗುತ್ತಿದೆ. ಮುಂದಿದ್ದ ಪಠ್ಯದಲ್ಲಿ ಗಮನ ಕೇಂದ್ರೀಕರಿಸಲು ಶ್ರಮಪಡುತ್ತಿದ್ದೆ.

ಆಗ ಟಿಮ್‌ ನಿರ್ಭಾವುಕನಾಗಿ ಹೇಳಿದ, “ನೋಡು, ನಿನಗೂ ತಿಳಿದಿದೆ. ನನಗೆ ನಿಜವಾಗಿಯೂ ಪ್ರೇಮ ಎಂದರೆ ಏನೆಂದೇ ತಿಳಿಯದು.”

ಅವನ ಜಾಣತನದ ಪ್ರಶ್ನೆಗೆ ಮೆಚ್ಚುಗೆ ಅಥವಾ ಅನುಮೋದನೆ ಸೂಚಿಸುವ ಬದಲು ನಾನು ಆತಂಕಗೊಂಡೆ. ಕಳೆದ ಎರಡು ವರ್ಷಗಳಿಂದ ನನ್ನ ಗೆಳೆಯನಾಗಿರುವ, ಪ್ರತಿದಿನ ಎರಡು ಅಥವಾ ಮೂರು ಬಾರಿ ತಾನು ನನ್ನನ್ನು ಅದೆಷ್ಟು ಪ್ರೀತಿಸುವೆನೆಂದು ಹೇಳುತ್ತಿರುವ ಟಿಮ್‌ ಈಗ ನಮ್ಮ ಬಾಂಧವ್ಯದ ಇಡೀ ಆಧಾರಸ್ತಂಭವನ್ನೇ ಪ್ರಶ್ನಿಸುತ್ತಿದ್ದಾನೆ. ನಾನು ಆಕ್ರಮಣಕಾರಿ ಮನೋಭಾವದಲ್ಲಿ ಉತ್ತರಿಸಿದೆ, “ಪ್ರೀತಿ ಎಂದರೆ ಏನೆಂದು ತಿಳಿದಿಲ್ಲವೆಂದರೆ, ಏನು ನೀನು ಹೇಳುವುದು? ಹಾಗಾದರೆ ಕಳೆದ ಎರಡು ವರ್ಷಗಳಿಂದ ನೀನು ನನಗೆ ಸುಳ್ಳು ಹೇಳುತ್ತಿದ್ದೆಯಾ?”

ಅವನಿಗೆ ಏನಾದರೂ ಹೇಳಲು ಅವಕಾಶ ಸಿಗುವ ಮುನ್ನವೇ ನಾನು ನನ್ನ ಪುಸ್ತಕಗಳನ್ನು ಜೋಡಿಸಿಕೊಂಡು ರಭಸದಿಂದ ಹೊರಗೆ ನಡೆದೆ.

ವಿದ್ಯಾರ್ಥಿ ನಿಲಯದಿಂದ ನಾನು ನಿಶ್ಶಬ್ದವಾದ ಸ್ಥಳಕ್ಕೆ, ಸಮೀಪದ ಉದ್ಯಾನಕ್ಕೆ ಹೋದೆ. ನಾನು ಅಲ್ಲಿ ಕುಳಿತು ಅವನ ಪ್ರಶ್ನೆಯ ಬಗೆಗೆ ಯೋಚಿಸಲಾರಂಭಿಸಿದೆ. ಮುಖ್ಯವಾಗಿ ನನ್ನ ಹಠಾತ್ತಾದ ಮತ್ತು ಬಾಲಿಶ ಪ್ರತಿಕ್ರಿಯೆಯ ಬಗೆಗೆ ವಿಚಾರಮಾಡತೊಡಗಿದೆ. ಪ್ರೀತಿ ಎಂದರೆ ಏನೆಂದು ನನಗೂ ಗೊತ್ತಿಲ್ಲ ಅಥವಾ ನನಗೂ ಅರ್ಥವಾಗಿಲ್ಲವಾದ ಕಾರಣ ನಾನು ಹಾಗೆ ವರ್ತಿಸಿದೆ ಎನ್ನುವುದು ನನಗೆ ಈಗ ತಿಳಿಯಿತು. ಆದರೆ ಅರಿವಿಗೆ ನಿಲುಕದ ಅಂತಹ ಭ್ರಮೆಯನ್ನು ಜೀವಂತವಾಗಿಡಲು ನಟಿಸುತ್ತಿದ್ದೆ ಎಂದೂ ಭಾವಿಸಿದೆ. ಯಾರನ್ನೋ ಪ್ರೀತಿಸುವುದೆಂದರೆ, ನೋವು ಪಡೆಯುವುದು ಮತ್ತು ತಿರಸ್ಕರಿಸಲ್ಪಡುವುದು ಅಥವಾ ಅವನಿಗೆ ನೋವುಂಟುಮಾಡುವುದು ಮತ್ತು ಅವನನ್ನು ತಿರಸ್ಕರಿಸುವುದು, ಇಂತಹ ಅಪಾಯಗಳು ಇರುತ್ತವೆ. ಈ ಎಲ್ಲವೂ ನನ್ನ ಗೊಂದಲಮಯ ಮನಸ್ಸಿನಲ್ಲಿ ಸುತ್ತುತ್ತಿದ್ದವು. ಇತ್ತೀಚೆಗೆ ನಾವು ನೋಡಿದ ಜನಪ್ರಿಯ ಚಲನಚಿತ್ರ ಲೌ ಸ್ಟೋರಿಯ ಬಗೆಗೆ ಯೋಚಿಸಿದೆ. ಆಕರ್ಷಕ ಕಾಲೇಜು ಯುವತಿಯು ಸುಂದರ ಕಾಲೇಜು ಯುವಕನನ್ನು ಪ್ರೀತಿಸುತ್ತಾಳೆ. ಅವರು ಆದರ್ಶದಂತೆ ಕಾಣುವ ಬಾಂಧವ್ಯವನ್ನು ಬೆಳೆಸಿಕೊಳ್ಳುತ್ತಾರೆ. ಅನಂತರ ಅವಳಿಗೆ ಕ್ಯಾನ್ಸರ್‌ ಎಂದು ಪತ್ತೆಯಾಗಿ ಅವಳು ಸಾಯುತ್ತಾಳೆ.

ಅನಿವಾರ್ಯವಾದ ಸಾವು ವಾಸ್ತವಾಂಶವಾಗಿದ್ದು, ಸಂಬಂಧಗಳನ್ನು ಮುಂದುವರಿಸಿಕೊಂಡು ಹೋಗುವುದು ಯೋಗ್ಯವೇ ಎಂದು ಯೋಚಿಸಿದೆ. ನಮ್ಮ ಸಂಬಂಧದ ಆರಂಭದ ದಿನಗಳನ್ನು ನೆನಪು ಮಾಡಿಕೊಂಡೆ. ಅದರ ಬಗೆಗೇ ಯೋಚಿಸಿದೆ. ನಾವಿಬ್ಬರೂ ಆಗ ಸುಖದ ಭ್ರಮೆಯ ನೀರ್ಗುಳ್ಳೆಯ ಮೇಲೆ ತೇಲಾಡುತ್ತಿದ್ದೆವು. ನನ್ನ ದೃಷ್ಟಿಯಲ್ಲಿ ಅವನು ಪರಿಪೂರ್ಣ ಮತ್ತು ಅವನ ದೃಷ್ಟಿಯಲ್ಲಿ ನಾನು ಪರಿಪೂರ್ಣ. ಸಂಬಂಧದಲ್ಲಿ ತ್ಯಾಗಗಳನ್ನು ಮಾಡುವುದು ಅನಾಯಾಸ ಎನ್ನಿಸಿತು. ಒಂದು ಹಂತದಲ್ಲಿ ಗುಳ್ಳೆ ಒಡೆಯಿತು ಮತ್ತು ನಾವು ಭಾವಪರವಶತೆಯಿಂದ ಆಘಾತಗೊಂಡು ಕುಸಿದೆವು. ಇದು ಪರಸ್ಪರರಲ್ಲಿನ ಅಪರಿಪೂರ್ಣತೆಯ ಕಟು ವಾಸ್ತವಿಕತೆಯನ್ನು ಎಚ್ಚರಿಸಿತು. ಈ ಆನಂದಪರವಶತೆಯಿಂದ ವಾಸ್ತವಿಕತೆಗೆ ಆಗುವ ಅನಿವಾರ್ಯ ಬದಲಾವಣೆಯು ಸಾಮಾನ್ಯವಾಗಿ ಸಂಬಂಧಗಳ ಅಂತ್ಯ.

ಪ್ರೇಮದ ವ್ಯಾಪ್ತಿ

ಪ್ರೀತಿಯಿಂದ ಗೊಂದಲಗೊಂಡರೂ ನಾನು ಯಾವಾಗಲೂ ಸಂಬಂಧಗಳ ಪ್ರೇರಕಶಕ್ತಿಯಿಂದ ಆಕರ್ಷಿತಳಾಗುತ್ತೇನೆ. ನನ್ನ ಬದುಕಿನ ಆ ಹಂತದಲ್ಲಿ ನನಗೆ ಕೇವಲ ಭೌತಿಕ ಸಂಬಂಧಗಳ ಬಗೆಗೆ ಮಾತ್ರ ತಿಳಿದಿತ್ತು. ಪ್ರೀತಿಯ ಅಖಂಡತೆಯ ಅತ್ಯಂತ ತಳಮಟ್ಟದಲ್ಲಿ ನಾವು ಒಬ್ಬರ ಅಗತ್ಯಗಳನ್ನು ತೃಪ್ತಿಪಡಿಸುವ ಸ್ವಾರ್ಥ, ಆತ್ಮಪ್ರಶಂಸೆಯ ಪ್ರೀತಿಯನ್ನು ಕಾಣುತ್ತೇವೆ. ಈ ಕೆಳ ದರ್ಜೆಯ ಪ್ರೀತಿಯನ್ನು ಹೊಂದಿರುವ ಜನರು ಸಾಮಾನ್ಯವಾಗಿ ತಮ್ಮ ಸಂಗಾತಿಗಳ ಮೇಲೆ ಕೋಪಗೊಳ್ಳುವ ಮತ್ತು ನಿಂದಿಸುವ ಪ್ರವೃತ್ತಿಹೊಂದಿರುತ್ತಾರೆ. ನಾನು ಕೆಲಸ ಮಾಡುವ ಕಡೆ ವೈದ್ಯರಾಗಿದ್ದ ಯುವತಿಯನ್ನು ಇತ್ತೀಚೆಗೆ ಅವಳ ಮಾಜಿ ಗೆಳೆಯ ಕೊಲೆ ಮಾಡಿದ. ಅವಳು ಅವರ ಸಂಬಂಧವನ್ನು ಕೊನೆಗಾಣಿಸಿದ್ದೇ ಅದಕ್ಕೆ ಕಾರಣ. ಇದು ಶೋಷಿಸುವ ಬಾಂಧವ್ಯದ ಸಾಕಾರ ರೂಪ. ಇದರ ಸಾರವೆಂದರೆ, “ನಿನ್ನನ್ನು ನಾನು ಸುಖಿಸದಿದ್ದರೆ, ಯಾರೂ ಕೂಡ ಸುಖಿಸಬಾರದು.” ಈ ಲೋಕದ ಅನೇಕ ಸಂಬಂಧಗಳು ಇಂತಹ ಮನೋಭಾವದ ಲೇಪನದಿಂದ ಕೂಡಿವೆ.

ಹರೇ ಕೃಷ್ಣ ಆಶ್ರಮಕ್ಕೆ ತೆರಳಲು ನಾನು ಕಾಲೇಜನ್ನು ಬಿಟ್ಟು ಹೊರಟಾಗ, ನನ್ನ ಗೆಳೆಯನು, ನಾನು ಸತ್ತಿದ್ದರೆ ಅವನಿಗೆ ಸುಲಭವಾಗುತ್ತಿತ್ತು, ಕೊನೇಪಕ್ಷ ಅವನಿಗೆ ಇತರರಿಂದ ಸಹಾನುಭೂತಿಯಾದರೂ ಸಿಗುತ್ತಿತ್ತು ಎಂದು ಹೇಳಿದ. ಅವನು ನಿಜವಾಗಿಯೂ ನನ್ನನ್ನು ಪ್ರೀತಿಸಿದ್ದರೆ, ಅವನು ನಾನು ಸಂತೋಷವಾಗಿರುವುದನ್ನು ಬಯಸುತ್ತಿದ್ದ.

ಜನರು `ಸ್ವಾರ್ಥ ಪ್ರೀತಿ’ ಕುರಿತು ಮಾತನಾಡುವುದನ್ನು ಕೇಳಿದ್ದೇನೆ. ಆ ಶಬ್ದವು ನನಗೆ ವಿರೋಧಾಭಾಸ ಎನ್ನಿಸಿತು. ನಿಮ್ಮದೇ ಅಗತ್ಯಗಳು ಏನೇ ಇದ್ದರೂ ನೀವು ನಿಜವಾಗಿಯೂ ಪ್ರೀತಿಸುವವರಿಗೆ ಅತ್ಯುತ್ತಮವಾದುದನ್ನೇ ಬಯಸುವಿರಿ. ಆದರೆ ನನ್ನ ಅನುಭವದಲ್ಲಿ ನಿಸ್ವಾರ್ಥ ಪ್ರೀತಿ ಉಳ್ಳವರ ಉದಾಹರಣೆ ವಿರಳ. ಮದರ್‌ ತೆರೇಸಾ ಅವರಂತಹವರು ತಮ್ಮ ದೈಹಿಕ ಹಿತಗಳನ್ನು ತ್ಯಾಗ ಮಾಡಿ ಇತರರಿಗೆ ಸಹಾಯ ಮಾಡಲು ಅಪಾರ ಅಪಾಯಗಳನ್ನು ಎದುರಿಸಿದರು. ಇದು ತುಂಬ ಆದರ್ಶನೀಯ ಮತ್ತು ಪ್ರಶಂಸನೀಯ ಎಂದು ನಾನು ಕಂಡುಕೊಂಡೆ.

ವೈದಿಕ ಮನಃಶಾಸ್ತ್ರ

ಒಬ್ಬರಿಗಾಗಿ ಮತ್ತೊಬ್ಬರು ತೋರುವ ಒಲವು, ಮಮತೆ ಕುರಿತ ಮನೋವಿಜ್ಞಾನವನ್ನು ಹೆಚ್ಚು ಅರ್ಥಮಾಡಿಕೊಳ್ಳಲು ನನಗೆ  ಭಗವದ್ಗೀತೆಯಂತಹ ವೈದಿಕ ಗ್ರಂಥಗಳ ಅಧ್ಯಯನವು ತುಂಬ ಸಹಾಯಮಾಡಿತು. ಯಾರಾದರೂ ಅಥವಾ ಯಾವುದಾದರೂ ನಮ್ಮ ಇಂದ್ರಿಯಗಳಿಗೆ ಸುಖವನ್ನು ನೀಡುತ್ತದೆ ಎಂಬ ಯೋಚನೆಯಲ್ಲಿ ನಾವು ತಲ್ಲೀನರಾದರೆ, ಆಗ ಸಹಜವಾಗಿ ನಾವು ಒಲವನ್ನು ಬೆಳೆಸಿಕೊಳ್ಳುತ್ತೇವೆ ಮತ್ತು ಆ ವ್ಯಕ್ತಿ ಅಥವಾ ವಸ್ತುವನ್ನು ನಮ್ಮ ಸುಖಕ್ಕಾಗಿ ಬಳಸಿಕೊಳ್ಳಲು ಇಷ್ಟಪಡುತ್ತೇವೆ ಎಂದು ಕೃಷ್ಣನು ಅರ್ಜುನನಿಗೆ ಹೇಳುತ್ತಾನೆ. ನಮಗೆ ಬೇಕಾದ ರೀತಿಯಲ್ಲಿ ಆನಂದಿಸಲು ಸಾಧ್ಯವಾಗದಿದ್ದರೆ ನಾವು ಕೋಪಗೊಳ್ಳುತ್ತೇವೆ. ಈ ಒಲವು ನಿಜವಾಗಿಯೂ ಕಾಮ. ಆದರೆ ಇದು ಪ್ರೇಮವನ್ನು ಹೋಲುವುದರಿಂದ, ಮತ್ತೊಬ್ಬ ವ್ಯಕ್ತಿಯ ಕಾಮಕ್ಕೆ ವಸ್ತುವಾಗುವ ವ್ಯಕ್ತಿಯು ತಾನು ಪ್ರೀತಿಸಲ್ಪಡುತ್ತಿದ್ದೇನೆ ಎಂದು ಮೂರ್ಖತನಕ್ಕೆ ಒಳಗಾಗುತ್ತಾನೆ.

ಕಾಮವು ಬೇರೆಯವರಿಂದ ಪಡೆಯುವುದಾಗಿದೆ. ಅದಕ್ಕೆ ತೃಪ್ತಿ ಎನ್ನುವುದೇ ಇಲ್ಲ ಮತ್ತು ಅದನ್ನು ಬೆಂಕಿಗೆ ಹೋಲಿಸಲಾಗಿದೆ. ಲೌಕಿಕ ಅನುಸರಣೆಯ ಮೂಲಕ ಕಾಮವನ್ನು ತೃಪ್ತಿ ಪಡಿಸುವ ಪ್ರಯತ್ನವು ಬೆಂಕಿಯನ್ನು ನಂದಿಸಲು ಅದರ ಮೇಲೆ ತುಪ್ಪ ಸುರಿದಂತೆ. ಜ್ವಾಲೆಯು ಆ ಕ್ಷಣದಲ್ಲಿ ಕಡಮೆಯಾದಂತೆ ಕಂಡು ಬಂದರೂ ತುಪ್ಪವನ್ನು ನುಂಗಿ ಭೀಕರ ಅಗ್ನಿಯಾಗಿ ಸ್ಫೋಟಗೊಳ್ಳುತ್ತದೆ.

ಯಯಾತಿ ಕಥೆ

ವೈದಿಕ ಸಾಹಿತ್ಯದ ಅನೇಕ ಕಥನಗಳು ಈ ಅಂಶವನ್ನು ವಿಶದಪಡಿಸುತ್ತವೆ. ಬೋಧನಾ ಪ್ರಧಾನವಾದ ಕಥೆಯೊಂದನ್ನು ನಾನು ಭಾಗವತದಲ್ಲಿ ಕಂಡೆ. ಇದು ರಾಜ ಯಯಾತಿಯನ್ನು ಕುರಿತದ್ದು. ದೇವಯಾನಿ ಎಂಬ ಕನ್ಯೆಯ ಉಡುಪುಗಳನ್ನು ಕಳವು ಮಾಡಿ ಅವಳನ್ನು ಬಾವಿಗೆ ಹಾಕಿದ್ದಾಗ, ರಾಜನು ಅವಳನ್ನು ರಕ್ಷಿಸುತ್ತಾನೆ. ದೇವಯಾನಿಯು ಪ್ರಖ್ಯಾತ ಬ್ರಾಹ್ಮಣ ಶುಕ್ರಾಚಾರ್ಯರ ಪುತ್ರಿ. ವಿಧಿ ಸಂಕಲ್ಪದಂತೆ ಒಂದಾದ ಯಯಾತಿ ಮತ್ತು ದೇವಯಾನಿಯನ್ನು ಶುಕ್ರಾಚಾರ್ಯರು ಅನುಗ್ರಹಿಸಿದರು. ಯಯಾತಿಯು ದೇವಯಾನಿಯನ್ನು ಬಿಟ್ಟು ಬೇರಾವ ಮಹಿಳೆಯ ಜೊತೆಗೂ ಲೈಂಗಿಕ ಸಂಪರ್ಕ ಹೊಂದಬಾರದು ಎಂದು ಅವರು ತಾಕೀತು ಮಾಡಿದರು. ಆ ಕಾಲದಲ್ಲಿ ರಾಜರು ಅನೇಕ ಪತ್ನಿಯರನ್ನು ಹೊಂದಿರುತ್ತಿದ್ದರು. ರಾಜನು ಶುಕ್ರಾಚಾರ್ಯರ ಷರತ್ತಿಗೆ ಒಪ್ಪಿ ದೇವಯಾನಿಯನ್ನು ವರಿಸಿದ. ಆದರೆ ಅನಂತರ ರಾಜನು ಈ ಒಪ್ಪಂದವನ್ನು ಮೀರಿ ದೇವಯಾನಿಯ ದಾಸಿಗಳ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ. ಇದರ ಪರಿಣಾಮವಾಗಿ, ಶುಕ್ರಾಚಾರ್ಯರು ರಾಜನಿಗೆ ಅವನ ಲೈಂಗಿಕ ಶಕ್ತಿ ನಾಶವಾಗಿ ವೃದ್ಧನಾಗುವಂತೆ ಶಾಪವಿತ್ತರು.

ಶಾಪವನ್ನು ತೆಗೆದುಹಾಕಬೇಕೆಂದು ಯಯಾತಿಯು ಪರಪರಿಯಾಗಿ ಬೇಡಿದ. ರಾಜನು ತನ್ನ ವೃದ್ಧಾಪ್ಯವನ್ನು ಬೇರೆಯವರ ಯೌವನದೊಂದಿಗೆ ವಿನಿಮಯ ಮಾಡಿಕೊಳ್ಳಬಹುದೆಂದು ಶುಕ್ರಾಚಾರ್ಯರು ಹೇಳಿದರು. ಯಯಾತಿಯು ತನ್ನ ಪುತ್ರರಲ್ಲಿ ಕೇಳಿದಾಗ, ಹಿರಿಯ ಪುತ್ರರು ಒಪ್ಪಲಿಲ್ಲ. ಆದರೆ ಕಿರಿಯ ಮಗನು ಒಪ್ಪಿ ತನ್ನ ತಂದೆಯ ವೃದ್ಧಾಪ್ಯವನ್ನು ಸ್ವೀಕರಿಸಿ ತನ್ನ ಯೌವನವನ್ನು ಅವನಿಗೆ ನೀಡಿದನು. ಇದರಿಂದ ಯಯಾತಿಯು ದೇವಯಾನಿ ಮತ್ತು ದಾಸಿಯರ ಜೊತೆಗೆ ಪುನಃ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಶಕ್ತಿ ಪಡೆದನು.

ಅಂತಹ ಸುಖವು, ಸುಖಿಸುವ ಅಪೇಕ್ಷೆಯನ್ನು ಹೆಚ್ಚಿಸುತ್ತದೇ ವಿನಾ ಅದು ತೃಪ್ತಿಯನ್ನು ನೀಡುವುದಿಲ್ಲ ಎಂದು ರಾಜನಿಗೆ ಅನೇಕ ವರ್ಷಗಳ ಭೋಗದ ಅನಂತರ ಅರಿವಾಯಿತು. ಆದುದರಿಂದ ಅವನು ತನ್ನ ಯೌವನವನ್ನು ತನ್ನ ಮಗನಿಗೆ ನೀಡಿ ವೃದ್ಧಾಪ್ಯವನ್ನು ಸ್ವೀಕರಿಸಿದನು. ಯಾವಾಗ ರಾಜನು ತನ್ನ ಸುಖಕ್ಕಾಗಿ ತನ್ನ ಪತ್ನಿಯನ್ನು ಶೋಷಿಸುವುದನ್ನು ನಿಲ್ಲಿಸಿದನೋ ಆಗ ಅವನ ನಿಜವಾದ ಅದೃಷ್ಟ ಶುರುವಾಯಿತು.  ಲೌಕಿಕ ಕಾಮದ ಸುಖದಿಂದ ಮುಕ್ತನಾದ ಮೇಲೆ ಅವನು ಶ್ರೀ ಕೃಷ್ಣನನ್ನು ಕುರಿತ ಆಧ್ಯಾತ್ಮಿಕ ಪ್ರೇಮವನ್ನು ಕಂಡುಕೊಂಡ.

ಕಲೆ ಮತ್ತು ವಿಜ್ಞಾನ

ಲೌಕಿಕ ಸಂಬಂಧಗಳಲ್ಲಿ ಹತಾಶೆ ಮತ್ತು ಅತೃಪ್ತಿಯನ್ನು ಕುರಿತ ನನ್ನದೇ ಅನುಭವವು ಈ ಪುರಾತನ ಇತಿಹಾಸ ಮತ್ತು ಅದರಲ್ಲಿ ಸೇರಿರುವ ತತ್ತ್ವಜ್ಞಾನದತ್ತ ನನ್ನನ್ನು ಆಕರ್ಷಿಸಿದವು. ನಮ್ಮ ಇಂದ್ರಿಯಗಳ ಮೂಲಕ ಆನಂದವನ್ನು ಕಂಡುಕೊಳ್ಳುವ ಬದುಕಿನ ಪ್ರಲೋಭನೆಗಳ ಬಗೆಗೆ ಅವು ಸ್ಪಷ್ಟವಾಗಿ ಯೋಚಿಸುವಂತೆ ಮಾಡಿವೆ. ವೈದಿಕ ಸಾಹಿತ್ಯವು ಪರ್ಯಾಯವನ್ನೂ ವಿವರಿಸಿದೆ : ಭಕ್ತಿಯೋಗ. ಇದು ಭಗವಂತನಿಗೆ ನಮ್ಮ ಪ್ರೀತಿಯನ್ನು ಪುನರ್‌ಎಚ್ಚರಿಸುವ ಕಲೆ ಮತ್ತು ವಿಜ್ಞಾನ. ಪ್ರೀತಿಯು ನಮ್ಮಲ್ಲಿ ಸುಪ್ತವಾಗಿರುತ್ತದೆ. ಹೇಗೆಂದರೆ, ಒಬ್ಬ ಸ್ತ್ರೀ ಅಥವಾ ಪುರುಷನಿಗೆ ತೋರುವ ಪ್ರೀತಿಯು ಮಗುವಿನಲ್ಲಿಯೇ ಸುಪ್ತವಾಗಿರುತ್ತದೆ ಮತ್ತು ಅದು ಹರಯದಲ್ಲಿ ಹೊರಹೊಮ್ಮುತ್ತದೆ. ಬೇರೆ ಎಲ್ಲದಕ್ಕಿಂತಲೂ ನಮಗೆ ಕೃಷ್ಣಪ್ರೇಮವೇ ಹೆಚ್ಚಾಗಿ ಬೇಕು ಎನ್ನುವುದು ಕೃಷ್ಣನಿಗೆ ಮನವರಿಕೆಯಾದಾಗ ಕೃಷ್ಣನನ್ನು ಕುರಿತ ನಮ್ಮ ಪ್ರೇಮವು ಸ್ವಯಂ ಪುನಶ್ಚೇತನಗೊಳ್ಳುತ್ತದೆ.

ಇನ್ನೂ ಹೇಳಬೇಕೆಂದರೆ, ದೇವರನ್ನು ಪ್ರೀತಿಸುವುದರಿಂದ ನಾವು ಪ್ರತಿಯೊಬ್ಬರನ್ನೂ ಪ್ರೀತಿಸುತ್ತೇವೆ, ಏಕೆಂದರೆ ಎಲ್ಲರೂ ಭಗವಂತನ ಭಾಗವೇ ಆಗಿದ್ದಾರೆ. ಆರಂಭದಲ್ಲಿ, ಇಂತಹ ಪ್ರೀತಿಗೆ ಅಭ್ಯಾಸ ಬೇಕಾಗುತ್ತದೆ, ಆದರೆ ಅಂತಿಮವಾಗಿ ಅದು ಸ್ವಯಂ ಪ್ರೇರಿತ.

ಈ ಪ್ರೀತಿಯು ನಾನು ಭಕ್ತಳಾಗುವ ಮುನ್ನ ಅರ್ಥ ಮಾಡಿಕೊಳ್ಳಲು ನಾನು ಹೆಣಗಾಡಿದ ಪ್ರೀತಿಯಿಂದ ಹೇಗೆ ಭಿನ್ನ? ಶ್ರೀ ಚೈತನ್ಯರ ಶ್ಲೋಕಗಳಲ್ಲಿ ನನಗೆ ಈ ಪ್ರಶ್ನೆಗೆ ಉತ್ತರ ದೊರೆತಿದೆ. ಕೃಷ್ಣನ ಅನೇಕ ಅವತಾರಗಳಿವೆ, ಪ್ರತಿಯೊಂದೂ ಒಂದು ವಿಶಿಷ್ಟ ಉದ್ದೇಶಹೊಂದಿದೆ. ಆದರೆ ಅತ್ಯಂತ ಮಹತ್ತ್ವವಾದುದು ಶ್ರೀ ಚೈತನ್ಯರ ಅವತಾರ. ಈ ಘೋರ ಕಲಿಯುಗದಲ್ಲಿ ಅತ್ಯಂತ ಪ್ರೀತ್ಯರ್ಹನಾದ ಶ್ರೀ ಕೃಷ್ಣನನ್ನು ಪ್ರೀತಿಸುವುದು ಹೇಗೆ ಎಂದು ಬೋಧಿಸಲು ಅವರು ಆವಿರ್ಭವಿಸಿದ್ದಾರೆ. ಈ ಅವತಾರದಲ್ಲಿ ಶ್ರೀ ಚೈತನ್ಯರು ಅತ್ಯಂತ ವಿಶೇಷ ಭಕ್ತೆ ಶ್ರೀ ರಾಧಾಳ ಭಾವದೊಂದಿಗೆ ತಮ್ಮದೇ ಭಕ್ತರಾಗಿದ್ದಾರೆ. ಭಗವಂತನ ಈ ಗೂಢ ರೂಪವು ಹೊರಗಿನವರಿಗೆ ಅರ್ಥವಾಗುವುದು ತುಂಬ ಕಷ್ಟ ಮತ್ತು ಈ ದಿವ್ಯ ರೂಪದ ಪರಿಚಯವುಳ್ಳ ನಮ್ಮಂಥವರನ್ನು ಅದೃಷ್ಟಶಾಲಿಗಳೆಂದು ಪರಿಗಣಿಸಿಕೊಳ್ಳಬೇಕು.

ಕೃಷ್ಣನಲ್ಲಿ ನಮ್ಮ ಪ್ರೀತಿಯನ್ನು ಪುನಶ್ಚೇತನಗೊಳಿಸುವ ಬದುಕಿನ ಗುರಿಯನ್ನು ವಿವರಿಸಲು ಶ್ರೀ ಚೈತನ್ಯರ ಶಿಷ್ಯರು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಆದರೆ ಶ್ರೀ ಚೈತನ್ಯರು ಮಾತ್ರ ಎಂಟು ಶ್ಲೋಕಗಳನ್ನು ನಮಗೆ ನೀಡಿದ್ದಾರೆ. ಶಿಕ್ಷಾಷ್ಟಕ ಎಂದು ಪ್ರಸಿದ್ಧವಾದ ಈ ಎಂಟು ಶ್ಲೋಕಗಳಲ್ಲಿ ವೇದಗಳ ಅಪಾರ ಬೋಧನೆಯ ಸಾರವಿದೆ. ಕೊನೆಯ ಶ್ಲೋಕದಲ್ಲಿ ಶ್ರೀ ಚೈತನ್ಯರು ರಾಧಾಳ ಮನೋಭಾವದಲ್ಲಿ ಕೃಷ್ಣನೊಂದಿಗೆ ಮಾತನಾಡುತ್ತ ಹೇಳುತ್ತಾರೆ, “ನನ್ನ ಮುಂದೆ ಉಪಸ್ಥಿತನಿಲ್ಲದೆ ನೀನು ನನ್ನ ಎದೆಯೊಡೆಯುವಂತೆ ಮಾಡಿದರೂ, ಜನ್ಮಜನ್ಮಾಂತರದಲ್ಲಿಯೂ ನೀನೇ ನನ್ನ ಪೂಜಾರ್ಹ ದೇವರು.” ಇದು ಪರಿಶುದ್ಧ, ಬೇಷರತ್ತಿನ ಪ್ರೀತಿ : ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ನೀಡುವ ಪ್ರೀತಿ.

ಪ್ರತಿಯೊಂದು ಜೀವಿಯೊಂದಿಗಿನ ತನ್ನ ಬಾಂಧವ್ಯದಲ್ಲಿ ಕೃಷ್ಣನು ಸ್ವತಃ ಈ ರೀತಿಯ ಪ್ರೀತಿಯನ್ನು ನಿದರ್ಶನದ ಮೂಲಕ ನಿರೂಪಿಸುತ್ತಾನೆ. ನಾವು ಎಷ್ಟೇ ಅವನನ್ನು ಉಪೇಕ್ಷಿಸಿದರೂ ನಾವು ಎಷ್ಟೇ ಅವನನ್ನು ತಿರಸ್ಕರಿಸಿದರೂ ಅವನು ಜೀವಿಗಳ ಎಲ್ಲ ವರ್ಗದಲ್ಲಿಯೂ ನಮ್ಮೊಂದಿಗೆ ಇರುತ್ತಾನೆ ಮತ್ತು ನಮ್ಮ ಆಧ್ಯಾತ್ಮಿಕ ಮೂಲಕ್ಕೆ ಹಿಂದಿರುಗಲು ನಮ್ಮನ್ನು ಪ್ರೋತ್ಸಾಹಿಸುತ್ತಾನೆ. ಅವನ ಸೇವಕನಾಗಿ ನಮ್ಮ ಶಾಶ್ವತ ವ್ಯಕ್ತಿತ್ವವನ್ನು ನಾವು ಪುನರಾರಂಭಿಸಿದಾಗ ನಾವೂ ಕೂಡ ಶ್ರೀ ಚೈತನ್ಯರು ತಮ್ಮ ಶಿಕ್ಷಾಷ್ಟಕದ ಕೊನೆಯ ಶ್ಲೋಕದಲ್ಲಿ ವಿವರಿಸಿರುವ ಪ್ರೀತಿಯನ್ನು ಹೊಂದುತ್ತೇವೆ.

ಆಧ್ಯಾತ್ಮಿಕ ಲೋಕದಲ್ಲಿ

ಆಧ್ಯಾತ್ಮಿಕ ಲೋಕದಲ್ಲಿ ಶುದ್ಧ ಪ್ರೇಮ ಮಾತ್ರ ಅಸ್ತಿತ್ವದಲ್ಲಿದೆ. ಆ ವೇದಿಕೆಯಲ್ಲಿ, ಪ್ರೀತಿಯನ್ನು ಕುರಿತು ವ್ಯಾಪಾರಿಯ ಮನೋಭಾವ ಇರುವುದಿಲ್ಲ. ವಿಪರ್ಯಾಸವೆಂದರೆ, ಯಾವುದೇ ನಿರೀಕ್ಷೆ ಇಲ್ಲದೆ ಕೊಡುವುದರಿಂದ, ಎಂದಿಗೂ ಒಡೆಯದ ಆನಂದಮಯ ಪ್ರೀತಿಯ ವ್ಯವಹಾರದಲ್ಲಿ ಸುತ್ತುವರಿಯಲ್ಪಟ್ಟ ಅಮೂಲ್ಯ ಉಡುಗೊರೆಯನ್ನು ಪಡೆಯುತ್ತೇವೆ. ಈ ಸಂತೋಷವು ಹೆಚ್ಚುತ್ತಲೇ ಹೋಗುತ್ತದೆ.

ಕೃಷ್ಣನನ್ನು ಪ್ರೀತಿಸುವುದು ಆಧ್ಯಾತ್ಮಿಕ ಲೋಕಕ್ಕೆ ಮಾತ್ರವಲ್ಲ. ನಮ್ಮ ಎಲ್ಲ ವ್ಯವಹಾರಗಳ ಕೇಂದ್ರಭಾಗದಲ್ಲಿ ಕೃಷ್ಣನ ಪ್ರೀತಿ ಮತ್ತು ಸೇವೆಯನ್ನು ಸ್ಥಾಪಿಸುವುದು, ವಿವಾಹದ ಮತ್ತು ಕುಟುಂಬದ ಯಶಸ್ಸಿನ ಸೂತ್ರ ಕೂಡ. ನಾವು ನಮ್ಮ ಮೇಲೆಯೇ ಕೇಂದ್ರೀಕೃತವಾಗಿರುವುದನ್ನು ಬಿಟ್ಟು ಅದನ್ನು ಭಗವಂತನತ್ತ ತಿರುಗಿಸಿದರೆ ನಮಗೆ ನಾವು ಶೋಷಕ ಎನ್ನುವುದಕ್ಕಿಂತ ಸೇವಕ ಎಂದು ನೆನಪು ಮಾಡಿಕೊಳ್ಳಲು ನೆರವಾಗುತ್ತದೆ. ನಮಗೆ ನಮ್ಮ ಸಮಾಜ, ಮೈತ್ರಿ, ಮತ್ತು ಪ್ರೀತಿಯ ಮಾನಸಿಕ ಅಗತ್ಯಗಳ ತೃಪ್ತಿಗೆ ನಾವು ಭಕ್ತರೊಂದಿಗೆ ಹೊಂದುವ ಪ್ರೀತಿಯ ಬಾಂಧವ್ಯವು ನೆರವಾಗುತ್ತದೆ. ಅದೇ ಸಮಯದಲ್ಲಿ ಕೃಷ್ಣನಿಗೆ ಸಲ್ಲಿಸಬೇಕಾದ ಶುದ್ಧ ಪ್ರೀತಿಯ ಅಂತಿಮ ಗುರಿಯನ್ನು ತಲಪಲು ನಮಗೆ ಅವಕಾಶ ನೀಡುತ್ತದೆ.

ಈ ಲೇಖನ ಶೇರ್ ಮಾಡಿ