ಶ್ರೀ ಚೈತನ್ಯ ಮಹಾಪ್ರಭುಗಳು ಅತಿ ಶ್ರೇಷ್ಠವಾದ ಮತ್ತು ನಿರಾಕರಿಸಲಾಗದಂತಹ ಕೊಡುಗೆಯನ್ನು ನೀಡಿದ್ದಾರೆ. ಅದುವೇ ಪವಿತ್ರ ನಾಮಗಳ ಸಂಕೀರ್ತನೆ.
ಚಿಲ್ಲರೆ ಉದ್ಯಮದಲ್ಲಿ ಉತ್ಪನ್ನಗಳಿಗೆ ಬೆಲೆ ನಿಗದಿ ಪಡಿಸುವಾಗ ಅಪಾರವಾದ ಯೋಜನೆ ಮತ್ತು ತಂತ್ರಗಾರಿಕೆ ಒಳಗೊಂಡಿರುತ್ತದೆ. ಗಿರಾಕಿಗಳ ಯೋಚನಾ ರೀತಿಗಳನ್ನು ಕುರಿತ ಸಂಶೋಧನೆಯನ್ನು ಬಳಸಿ ಪ್ರತಿಯೊಂದು ಚಿಲ್ಲರೆ ಕಂಪನಿಯೂ ಕೊಳ್ಳುಗರನ್ನು ಸೆಳೆಯಲು ಆಕರ್ಷಕ ಕೊಡುಗೆಗಳ ಆಮಿಷ ಒಡ್ಡುತ್ತದೆ. ಚಿಲ್ಲರೆ ಉದ್ಯಮದಲ್ಲಿ ಬೆಲೆ ನಿಗದಿಯ ಒಂದು ಮಾರ್ಗವೆಂದರೆ ರಿಯಾಯಿತಿಗಳು. ರಿಯಾಯಿತಿ ಕೇಂದ್ರೀಕೃತ ದರ ತಂತ್ರದಲ್ಲಿ ನಿಯತಕಾಲಿಕವಾಗಿ ವಿವಿಧ ವಸ್ತುಗಳಿಗೆ ರಿಯಾಯಿತಿಯನ್ನು ಘೋಷಿಸುವುದು ಸೇರಿದೆ. ಉತ್ಪನ್ನಗಳು ಮಾರಾಟಕ್ಕಿರುವ ಅಲ್ಪ ಕಾಲಾವಧಿಯಲ್ಲಿ, ಕೊಳ್ಳುವವರಲ್ಲಿ ತುರ್ತಿನ ಭಾವನೆಯನ್ನು ಮೂಡಿಸಲಾಗುವುದು. ಇದು ಜನರು ಅಂಗಡಿಗಳಿಗೆ ಮುಗಿಬೀಳುವಂತೆ ಮಾಡುತ್ತದೆ. ಜನರು ವಿಶೇಷ ದಿನಗಳಲ್ಲಿ ಅಂಗಡಿಗಳತ್ತ ಧಾವಿಸಿ ಸರದಿ ಸಾಲಿನಲ್ಲಿ ನಿಂತು ರಿಯಾಯಿತಿ ವಸ್ತುಗಳನ್ನು ಕೊಳ್ಳುತ್ತಾರೆ.
ಏನನ್ನಾದರೂ ಪಡೆಯಲು ಅತಿ ಕಡಮೆ ಶ್ರಮದ ಮಾರ್ಗವನ್ನು ಹುಡುಕುವುದು ಜನರ ಪ್ರವೃತ್ತಿಯಾಗಿದೆ. ಬೃಹತ್ ವ್ಯಾಪಾರವು ಆಗಿಂದಾಗ್ಗೆ ಈ ಆಲೋಚನೆಯ ಲಾಭವನ್ನು ಪಡೆದುಕೊಳ್ಳುತ್ತದೆ.
ಸಿಹಿ ಸುದ್ದಿ
ಆಧ್ಯಾತ್ಮಿಕ ಕುಸಿತದ ಪ್ರಸ್ತುತ ಕಲಿಯುಗದ ಜನರಾದ ನಮಗೆ ಒಳ್ಳೆಯ ಸುದ್ದಿ ಎಂದರೆ ಮುಕ್ತಿಯ ಪಥ ಮತ್ತು ಆಧ್ಯಾತ್ಮಿಕ ಪರಿಪೂರ್ಣತೆಗೆ ರಿಯಾಯಿತಿ ಇದೆ! ಈ ರಿಯಾಯಿತಿಯು ನಿಯತಕಾಲಿಕವಲ್ಲ, ನಮಗೆ ಯಾವಾಗಲೂ ಲಭ್ಯ. ಇದು ನಮ್ಮನ್ನು ಅನಗತ್ಯ ಖರ್ಚಿಗೆ ಸೆಳೆಯಲೆಂದಲ್ಲ, ಬದಲಿಗೆ ಈ ಲೋಕದ ಆಕರ್ಷಣೆ, ಪ್ರಲೋಭನೆಯನ್ನು ಬಿಟ್ಟುಬಿಡಲು ನಮಗೆ ನೆರವಾಗಲೆಂದು ಇದೆ. ಇದು ಭಗವಂತನ ಪರಮ ಕರುಣೆಯನ್ನು ಸೂಚಿಸುತ್ತದೆ ಮತ್ತು ಆಧ್ಯಾತ್ಮಿಕ ವಿಮೋಚನೆಯತ್ತ ಸಾಗಲು ನಮ್ಮನ್ನು ಉತ್ತೇಜಿಸುತ್ತದೆ.
ಕೃತೇ ಯದ್ ಧ್ಯಾಯತೋ ವಿಷ್ಣುಂ ತ್ರೇತಾಯಾಂ ಯಜತೋ ಮಖೈಃ ।
ದ್ವಾಪರೇ ಪರಿಚರ್ಯ್ಯಾಂ ಕಲೌ ತದ್ ಹರಿಕೀರ್ತನಾತ್ ।।
“ಸತ್ಯಯುಗದಲ್ಲಿ ವಿಷ್ಣುವಿನ ಧ್ಯಾನ. ತ್ರೇತಾಯುಗದಲ್ಲಿ ಯಜ್ಞಗಳ ಆಚರಣೆ, ದ್ವಾಪರಯುಗದಲ್ಲಿ ಪ್ರಭುವಿನ ಪಾದಕಮಲಗಳ ಸೇವೆ – ಇವುಗಳಿಂದ ಯಾವ ಫಲಗಳನ್ನು ಪಡೆಯಬಹುದೋ ಅದನ್ನೇ ಕಲಿಯುಗದಲ್ಲಿ ಕೇವಲ ಹರೇಕೃಷ್ಣ ಮಹಾಮಂತ್ರವನ್ನು ಜಪಿಸುವುದರಿಂದ ಪಡೆಯಬಹುದು. (ಭಾಗವತಂ 12.3.52)“
ರೋಗಿಯ ತಡೆದುಕೊಳ್ಳುವ ಶಕ್ತಿಯನ್ನು ಆಧರಿಸಿ ವೈದ್ಯರು ರೋಗಿಗೆ ಔಷಧವನ್ನು ಸೂಚಿಸುವಂತೆ, ಆಯಾ ಯುಗಗಳ ಜನರ ಶಕ್ತಿಗೆ ಅನುಗುಣವಾಗಿ ಧರ್ಮಗ್ರಂಥಗಳು ಮುಕ್ತಿಯ ವಿಧಾನಗಳನ್ನು ಸೂಚಿಸಿವೆ. ಶ್ರೀ ವಿಷ್ಣುವನ್ನು ಕುರಿತಾದ ಧ್ಯಾನವು ಸತ್ಯಯುಗದಲ್ಲಿ ಮುಕ್ತಿಯ ವಿಧಾನವಾಗಿತ್ತು. ನಾರದ ಮುನಿಗಳ ಶಿಷ್ಯನಾದ ಧ್ರುವನು ಸೂಕ್ತವಾದ ಭಂಗಿ ಮತ್ತು ಶರೀರ ನಿಯಂತ್ರಣದಿಂದ ಈ ರೀತಿಯ ಧ್ಯಾನದಲ್ಲಿ ತೊಡಗಿ ಶ್ರೀ ವಿಷ್ಣುವಿನ ಅನುಗ್ರಹವನ್ನು ಪಡೆದನು ಎಂದು ಭಾಗವತವು ಉಲ್ಲೇಖಿಸಿದೆ.
ಎರಡನೆಯ ಯುಗವಾದ ತ್ರೇತಾಯುಗದಲ್ಲಿ ಬ್ರಾಹ್ಮಣರು ಮಂತ್ರಗಳನ್ನು ಪಠಿಸುತ್ತ ಅದ್ಭುತವಾದವುಗಳನ್ನೇ ಸಾಧಿಸಿದರು. ಆದುದರಿಂದ ಅವರ ಯಜ್ಞಗಳು ಅಪೂರ್ವ ಸಾಧನವಾಗಿದ್ದವು ಮತ್ತು ನಾವಿಂದು ನೋಡುವ ಯಾವುದೇ ರೀತಿಯ ಯಜ್ಞಗಳು ಅದಕ್ಕೆ ಸಾಟಿಯೇ ಇಲ್ಲದ್ದು. ಸಾಂಪ್ರದಾಯಿಕ ವೈದಿಕ ಯಜ್ಞಗಳಲ್ಲಿ ಪಾಲ್ಗೊಂಡವರು ಕ್ರಮೇಣ ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸಿದರು.
ಮೂರನೆಯ ಯುಗ ದ್ವಾಪರಯುಗ. ಶಿಫಾರಸು ಮಾಡಿದ ಆಧ್ಯಾತ್ಮಿಕ ಆಚರಣೆ ಎಂದರೆ ಶ್ರೀವಿಗ್ರಹ ಆರಾಧನೆ. ದೇವೋತ್ತಮನ ಅವತಾರವಾದ ಶ್ರೀವಿಗ್ರಹವು ಯುಗಯುಗಾಂತರಗಳಿಂದ ಆಧ್ಯಾತ್ಮಿಕ ಸಂಪರ್ಕದ ವಿಧಾನವಾಗಿದೆ. ಆದರೆ ಇಂದಿನ ದಿನಗಳಲ್ಲಿ ನಮಗೆ ಅಸಂಖ್ಯ ಜಟಿಲ ನಿಯಮ ಮತ್ತು ನಿರ್ಬಂಧಗಳ ಕಾರಣ ಸಾಂಪ್ರದಾಯಿಕ ವಿಗ್ರಹ ಪೂಜೆಯು ಅಸಾಧ್ಯವಲ್ಲದಿದ್ದರೂ ಕಷ್ಟಕರವಾಗಿದೆ.
ಹೀಗಾಗಿ ಮೊದಲ ಮೂರು ಯುಗಗಳಿಗೆ ಸೂಚಿಸಿರುವ ವಿಧಾನಗಳನ್ನು ಅನುಸರಿಸುವುದು ಜನಸಾಮಾನ್ಯರಿಗೆ ಸಾಧ್ಯವಿಲ್ಲ ಎನ್ನುವುದು ಸ್ಪಷ್ಟ.
ಬ್ರಹ್ಮ ವೈವರ್ತ ಪುರಾಣ ಹೇಳುತ್ತದೆ, “ಹೀಗಾಗಿ, ಕಲಿಯುಗದಲ್ಲಿ ವ್ರತಗಳ ಆಚರಣೆ, ಯೋಗ ಧ್ಯಾನ, ವಿಗ್ರಹ ಆರಾಧನೆ, ಯಾಗ ಮತ್ತಿತರವುಗಳನ್ನು ಅವುಗಳ ಅನೇಕ ಉಪವಿಧಿಗಳೊಂದಿಗೆ ಸರಿಯಾಗಿ ನಡೆಸಿಕೊಂಡು ಹೋಗುವುದು ಸಾಧ್ಯವಿಲ್ಲವಾಗಿದೆ.”
ನಮಗಾಗಿನ ವಿಧಾನ
ಭಗವಂತನ ಪವಿತ್ರ ನಾಮಗಳನ್ನು ಜಪಿಸುವುದು – ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ / ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ – ಇದು ಕ್ರಮೇಣ ನಮ್ಮನ್ನು ನಮ್ಮ ಲೌಕಿಕ ಸ್ಥಿತಿಯಿಂದ ಮೇಲಕ್ಕೆತ್ತುವ ಅತ್ಯಂತ ಸುಲಭ ಮತ್ತು ಅದ್ಭುತವಾದ ವಿಧಾನವಾಗಿದೆ. ಭಗವಂತನನ್ನು ಪ್ರಸನ್ನಗೊಳಿಸಲು ಮತ್ತು ಅವನ ಸೇವಕರಾಗಿ ನಮ್ಮ ಸಹಜ ಗುಣವನ್ನು ಪುನರ್ ಸ್ಥಾಪಿಸಲು ನಮಗೆ ಶಕ್ತಿ ನೀಡುತ್ತದೆ. ಭಗವಂತನು ಪರಮಸತ್ಯನಾಗಿರುವುದರಿಂದ, ಅವನು ಮತ್ತು ಅವನ ಹೆಸರು, ಆಕಾರ, ಲೀಲೆಗಳು ಹಾಗೂ ಧಾಮಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಶಿಕ್ಷಾಷ್ಟಕದಲ್ಲಿ (2) ಶ್ರೀ ಚೈತನ್ಯ ಮಹಾಪ್ರಭು ಪ್ರಾರ್ಥಿಸುತ್ತಾರೆ, ನಿಜ ಸರ್ವ ಶಕ್ತಿಃ ತತ್ರಾರ್ಪಿತಾ, ಭಗವಂತನು ತನ್ನ ಎಲ್ಲ ಶಕ್ತಿಗಳನ್ನು ತನ್ನ ಪವಿತ್ರ ನಾಮಗಳಲ್ಲಿ ಹೂಡಿದ್ದಾನೆ. ಆದುದರಿಂದ ಪವಿತ್ರ ನಾಮಗಳನ್ನು ಜಪಿಸಿದಾಗ, ನಾವು ನೇರವಾಗಿ ಕೃಷ್ಣನೊಂದಿಗೆ ಸಂಪರ್ಕ ಹೊಂದುತ್ತೇವೆ. ಮತ್ತು ಜಪವು ಪಕ್ವವಾದಾಗ ಹಾಗೂ ಅಪರಾಧರಹಿತವಾದಾಗ ಭಕ್ತಿ ಅಥವಾ ಭಕ್ತಿಸೇವೆಯ ಪರಮಾನಂದವನ್ನು ಅನುಭವಿಸುತ್ತೇವೆ. ಪವಿತ್ರ ನಾಮಗಳನ್ನು ಜಪಿಸುವ ಈ ಅವಕಾಶವು ದಿಟವಾಗಿಯೂ ಒಂದು ವರವಾಗಿದೆ. ಅವುಗಳನ್ನು ಜಪಿಸಲು ಕಠಿಣ ನಿಯಮವೇನೂ ಇಲ್ಲ.
ಬೃಹದ್ ನಾರದೀಯ ಪುರಾಣದಲ್ಲಿ ಹೇಳಿದೆ,
ಹರೇರ್ ನಾಮ ಹರೇರ್ ನಾಮ ಹರೇರ್ ನಾಮೈವ ಕೇವಲಂ ।
ಕಲೌ ನಾಸ್ತಿಏವ ನಾಸ್ತಿಏವ ನಾಸ್ತಿಏವ ಗತಿರನ್ಯಥಾ ।।
“ಜಗಳ ಮತ್ತು ಕಪಟದ ಈ ಕಲಿಯುಗದಲ್ಲಿ ಭಗವಂತನ ಪವಿತ್ರನಾಮೋಚ್ಚಾರಣೆಯೊಂದೇ ವಿಮೋಚನೆಯ ಮಾರ್ಗ. ಅನ್ಯ ಮಾರ್ಗವಿಲ್ಲ, ಅನ್ಯ ಮಾರ್ಗವಿಲ್ಲ, ಅನ್ಯ ಮಾರ್ಗವಿಲ್ಲ.”
ಆದುದರಿಂದ ಭಗವಂತನ ಪವಿತ್ರನಾಮಗಳನ್ನು ಅಪರಾಧರಹಿತವಾಗಿ ಜಪಿಸುವುದರಿಂದ ನಾವು ಆಧ್ಯಾತ್ಮಿಕ ಪರಿಪೂರ್ಣತೆಯನ್ನು ಪಡೆಯಬಹುದು. ದೀರ್ಘಾವಧಿ ಧ್ಯಾನದಲ್ಲಿ ತೊಡಗಬೇಕಾಗಿಲ್ಲ ಅಥವಾ ಯಜ್ಞ ಯಾಗದಂತಹ ಇತರೆ ಸಂಕೀರ್ಣ ವಿಧಾನಗಳನ್ನು ಅನುಸರಿಸಬೇಕಾಗಿಲ್ಲ. ಇದು ಚಿಲ್ಲರೆ ವ್ಯಾಪಾರದ ರಿಯಾಯಿತಿಯಂತೆ ಅಲ್ಲ. ಈ ದಿವ್ಯ ರಿಯಾಯಿತಿಯು ನಮಗೆ ಸದಾ ಎಲ್ಲೆಲ್ಲೂ ಲಭ್ಯ. ನಾವು ಅದನ್ನು ಪಡೆಯೋಣ ಮತ್ತು ನಮ್ಮ ಬದುಕನ್ನು ಪರಿಪೂರ್ಣಗೊಳಿಸಿಕೊಳ್ಳೋಣ.