ನಿಜವಾದ ಧರ್ಮವನ್ನು ಕುರಿತಂತೆ ವೈದಿಕ ಧರ್ಮಗ್ರಂಥಗಳಲ್ಲಿನ ಪಂಥೀಯವಲ್ಲದ ನಿರೂಪಣೆಯು ಎಲ್ಲ ಶ್ರದ್ಧೆಯ ಜನರಿಗೆ ಪ್ರೋತ್ಸಾಹದಾಯಕವಾಗಿದೆ.
ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪನಾಚಾರ್ಯರಾದ ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮಾಡಿದ ಉಪನ್ಯಾಸ.

ಗೌರವಾನ್ವಿತ ಮಹಿಳೆಯರೇ, ಮಹನೀಯರೇ, ಅಮೇರಿಕ ಮತ್ತು ಯೂರೋಪಿನ ನನ್ನ ಶಿಷ್ಯರ ಸಹಾಯದಿಂದ ವಿಶ್ವಾದ್ಯಂತ ಪಸರಿಸಿರುವ ಕೃಷ್ಣಪ್ರಜ್ಞೆ ಆಂದೋಲನವನ್ನು ಕುರಿತಂತೆ ಮಾತನಾಡಲು ಅವಕಾಶ ಕಲ್ಪಿಸಿರುವುದಕ್ಕಾಗಿ ನಿಮಗೆ ಕೃತಜ್ಞತೆಗಳು.
ಸುಮಾರು ಐದು ಸಾವಿರ ವರ್ಷಗಳ ಹಿಂದೆ ನೈಮಿಷಾರಣ್ಯದಲ್ಲಿ ಒಂದು ಸಭೆ ನಡೆಯಿತು. ಅದು ಅತ್ಯಂತ ಪವಿತ್ರವಾದ ಸ್ಥಳ. ಜನರು ಈಗಲೂ ಅಲ್ಲಿಗೆ ಹೋಗಿ ಧ್ಯಾನ ನಿರತರಾಗುತ್ತಾರೆ. ಒಮ್ಮೆ ಅಲ್ಲಿ ಶುಕದೇವ ಗೋಸ್ವಾಮಿಯವರ ಶಿಷ್ಯ ಸೂತ ಗೋಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಕೃಷ್ಣಪ್ರಜ್ಞೆಯನ್ನು ಕುರಿತ ಸಭೆ ನಡೆಯುತ್ತಿತ್ತು. ಶ್ರೇಷ್ಠ ಸಂತರು ಅದರಲ್ಲಿ ಪಾಲ್ಗೊಂಡಿದ್ದರು.
ಈ ಲೋಕದಿಂದ ಶ್ರೀ ಕೃಷ್ಣನ ನಿರ್ಗಮನದ ಅನಂತರ ಯಾರಿಗೆ ಧರ್ಮ ಮತ್ತು ಜ್ಞಾನವನ್ನು ಒಪ್ಪಿಸಲಾಯಿತು? ಹೀಗೆ ಸಂತರು ಅನೇಕ ಪ್ರಶ್ನೆಗಳನ್ನು ಕೇಳಿದರು.
ಶ್ರೀ ಕೃಷ್ಣನು ಈ ಲೋಕದಲ್ಲಿ ಆವಿರ್ಭಾವಿಸಿದಾಗ ಹೇಳಿದನು,
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ
ಸಜ್ಜನರನ್ನು ರಕ್ಷಿಸಲು, ದುಷ್ಟರನ್ನು ನಾಶ ಮಾಡಲು ಮತ್ತು ಧರ್ಮದ ತತ್ತ್ವಗಳನ್ನು ಮತ್ತೆ ಸ್ಥಾಪಿಸಲು ನಾನು ಯುಗ ಯುಗದಲ್ಲಿಯೂ ಅವತರಿಸುತ್ತೇನೆ. ವೇದಗಳ ಪ್ರಕಾರ ಕೃಷ್ಣನು ಬ್ರಹ್ಮನ ಪ್ರತಿಯೊಂದು ದಿನದಂದು ಈ ಲೋಕದಲ್ಲಿ ಅವತರಿಸುತ್ತಾನೆ. ಬ್ರಹ್ಮನ ಜೀವತಾವಧಿಯು ಸುದೀರ್ಘವಾಗಿದ್ದು ಅದನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ.
ಸಹಸ್ರ ಯುಗ ಪರ್ಯಂತಂ ಅಹರ್ ಯದ್ ಬ್ರಹ್ಮಣೋ ವಿದುಃ
ವೈದಿಕ ಸಂಸ್ಕೃತಿಯ ಪ್ರಕಾರ, ಪ್ರಸ್ತುತ ಯುಗದ ಹೆಸರು ಕಲಿಯುಗ. ಒಟ್ಟಾರೆ ನಾಲ್ಕು ಯುಗಗಳಿವೆ. ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ. ಈ ಎಲ್ಲ ಯುಗಗಳ ಸರಾಸರಿಯು ಸುಮಾರು 4.3 ಮಿಲಿಯನ್ ವರ್ಷಗಳು. ಅದನ್ನು ಒಂದು ಸಾವಿರದಿಂದ ಗುಣಿಸಿದರೆ, ಅದರ ಮೊತ್ತವು ಬ್ರಹ್ಮನ 12 ಗಂಟೆಯ ಅವಧಿ. ಅಂತಹ ಲೆಕ್ಕಾಚಾರದಲ್ಲಿ ಅವನು ಒಂದು ನೂರು ವರ್ಷ ಬದುಕಿರುತ್ತಾನೆ. ಊಹೆಗೂ ನಿಲುಕದ್ದು.
ಕೃಷ್ಣನು ಬ್ರಹ್ಮನ ಪ್ರತಿದಿನ ಆವಿರ್ಭಾವಿಸುತ್ತಾನೆ. ಅದನ್ನು ನಾವು ವೈದಿಕ ಸಾಹಿತ್ಯದಿಂದ ಅರಿತಿದ್ದೇವೆ. ಇಲ್ಲಿಗೆ ಬರುವ ತನ್ನ ಧ್ಯೇಯವನ್ನು ಕೃಷ್ಣನು ವಿವರಿಸಿದ್ದಾನೆ. ಕೃಷ್ಣನು ದೇವರು. ಅವನು ಇಲ್ಲಿಗೆ ಬರಬೇಕಾಗಿರಲಿಲ್ಲ. ಆದರೆ ಕೆಲವು ಉದ್ದೇಶಗಳಿಗಾಗಿ ಬರುತ್ತಾನೆ. ದೇವರಿಗೆ ಬರಬೇಕೆನ್ನಿಸಿದರೆ ಯಾರೂ ಅವನನ್ನು ತಡೆಯುವುದು ಸಾಧ್ಯವಿಲ್ಲ.
ದೇವರೇಕೆ ಬರುತ್ತಾನೆ?
ಕೆಲವು ಬಾರಿ ಜನರು ಪ್ರಶ್ನಿಸುತ್ತಾರೆ : ದೇವರು ಏಕೆ ಬರಬೇಕು?
ನಮ್ಮ ಉತ್ತರ : ದೇವರು ಏಕೆ ಬರಬಾರದು?
ದೇವರು ಸರ್ವಶಕ್ತನಾದರೆ, ಅವನು ಇಲ್ಲಿಗೆ ಬರುವುದನ್ನು ಯಾರು ತಡೆಯುವುದು ಸಾಧ್ಯ? ದೇವರು ಬರಬಾರದೆಂದು ಹೇಳಿದರೆ, ಅವನು ನಮ್ಮ ನಿಯಮ ಮತ್ತು ನಿರ್ಬಂಧಗಳಂತೆ ನಡೆದುಕೊಳ್ಳುಬೇಕು ಎಂದು ಅರ್ಥ.
ವೈದಿಕ ಧರ್ಮಗ್ರಂಥಗಳ ಪ್ರಕಾರ, ದೇವರು ಬರುತ್ತಾನೆ ಮತ್ತು ತಾನು ಏಕೆ ಬರುತ್ತೇನೆ ಎಂದೂ ಹೇಳುತ್ತಾನೆ, ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ ಭವತಿ. ಎಲ್ಲೆಲ್ಲಿ ಯಾವಾಗ ಧರ್ಮತತ್ತ್ವದ ಅವನತಿಯಾಗುತ್ತದೆಯೋ ಆಗ ಅವನು ಬರುತ್ತಾನೆ. ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ ಭವತಿ . . . . . ಅಭ್ಯುತ್ಥಾನಂ ಅಧರ್ಮಸ್ಯ , ಎಲ್ಲೆಲ್ಲಿ ಯಾವಾಗ ಧರ್ಮತತ್ತ್ವದ ಅವನತಿಯಾಗುತ್ತದೆಯೋ ಆಗ ಅಧರ್ಮವು ಹೆಚ್ಚುತ್ತದೆ. ಅದು ಸಹಜ.
ದುರ್ಬಲ ಸರಕಾರವಿದ್ದಾಗ ದುಷ್ಟರ ಮತ್ತು ಕಳ್ಳರು ಹೆಚ್ಚಾಗುತ್ತಾರೆ. ಸರಕಾರವು ಕಠಿಣವಾಗಿದ್ದರೆ ಅವರು ಪ್ರಬಲರಾಗುವುದಿಲ್ಲ. ಆದುದರಿಂದ ಕೃಷ್ಣನು ಬಂದಾಗ, ಅವನದು ಎರಡು ವ್ಯವಹಾರ : ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ, ಭಕ್ತರಿಗೆ ರಕ್ಷಣೆ, ದುಷ್ಟರ ಸಂಹಾರ.
ಕೃಷ್ಣನು ಇಲ್ಲಿ ಉಪಸ್ಥಿತನಿದ್ದಾಗ ಅವನು ಈ ಎರಡು ವಿಷಯಗಳನ್ನು ಪ್ರದರ್ಶಿಸಿದನು. ಬಹುಶಃ ನೀವು ನಾರಾಯಣ ಅಥವಾ ವಿಷ್ಣುವಿನ ನಮ್ಮ ಚಿತ್ರವನ್ನು ನೋಡಿರಬಹುದು. ವಿಷ್ಣುವಿಗೆ ನಾಲ್ಕು ಕೈಗಳು. ಎರಡು ಕೈಗಳಲ್ಲಿ ಕಮಲ ಮತ್ತು ಶಂಖ. ಇನ್ನೆರಡು ಕೈಗಳಲ್ಲಿ ಚಕ್ರ ಮತ್ತು ಗದೆ. ಚಕ್ರ ಮತ್ತು ಗದೆಯು ವಿನಾಶಾಯ ಚ ದುಷ್ಕೃತಾಂ – ರಾಕ್ಷಸರು ಮತ್ತು ದುಷ್ಟರನ್ನು ಸಂಹರಿಸಲು. ಕಮಲ ಮತ್ತು ಶಂಖವು ಭಕ್ತರಿಗೆ ವರ ನೀಡಲು ಮತ್ತು ಅನುಗ್ರಹಿಸಲು.
ಭಗವದ್ಗೀತೆಯಿಂದ ನಾವು ಕೃಷ್ಣನನ್ನು ಕುರಿತು ತಿಳಿದುಕೊಳ್ಳುತ್ತೇವೆ. ವಿಶ್ವಾದ್ಯಂತ ಭಗವದ್ಗೀತೆಯು ಹೆಚ್ಚು ಜನರು ಓದಿರುವ ಗ್ರಂಥವಾಗಿದೆ. ನೀವು ಯಾವುದೇ ದೇಶದಲ್ಲಿ ನೋಡಿ, ಆಯಾ ದೇಶದ ಭಾಷೆಯಲ್ಲಿ ಭಗವದ್ಗೀತೆಯ ಮುದ್ರಣವನ್ನು ಕಾಣಬಹುದು. ಕೃಷ್ಣನು ಧರ್ಮವನ್ನು ಕುರಿತಂತೆ ಉಪದೇಶ ನೀಡುತ್ತಿರುವುದನ್ನು ನಾವು ಭಗವದ್ಗೀತೆಯಲ್ಲಿ ಕಾಣುತ್ತೇವೆ. ಉಪದೇಶದ ಕೊನೆಯಲ್ಲಿ ಅವನು ಹೇಳುತ್ತಾನೆ, ಸರ್ವ ಧರ್ಮಾನ್ ಪರಿತ್ಯಜ್ಯ ಮಾಂ ಏಕಂ ಶರಣಂ ವ್ರಜ , “ಉಳಿದೆಲ್ಲಾ ಧಾರ್ಮಿಕ ತತ್ತ್ವಗಳನ್ನು ತ್ಯಜಿಸಿ, ಸುಮ್ಮನೆ ನನಗೆ ಶರಣಾಗಿ.”
ಮತ್ತೊಂದು ಕಡೆ, ಭಾಗವತದಲ್ಲಿ ಹೇಳಿದೆ, ಧರ್ಮಮ್ ತು ಸಾಕ್ಷಾದ್ ಭಗವತ್ ಪ್ರಣೀತಂ, “ಧರ್ಮಎಂದರೆ ಭಗವಂತ ನೀಡಿದ ಸಂಹಿತೆ.” ಧರ್ಮದ ಸಂಹಿತೆಗಳೆಂದರೆ ಸರ್ಕಾರದ ಕಾನೂನುಗಳಂತೆ. ನಮ್ಮ ಬದುಕಿಗಾಗಿ ಸರ್ಕಾರವು ನಿಯಮ ಮತ್ತು ನಿರ್ಬಂಧಗಳನ್ನು ನೀಡುತ್ತದೆ. ಯಾರು ಈ ಕಾನೂನುಗಳನ್ನು ಅನುಸರಿಸುವರೋ ಅವರು ಒಳ್ಳೆಯ ಪ್ರಜೆಗಳು. ಯಾರು ಅನುಸರಿಸುವುದಿಲ್ಲವೋ ಅವರು ಕಾನೂನು ಉಲ್ಲಂಘಕರು ಅಥವಾ ದುಷ್ಟ ಪ್ರಜೆಗಳಾಗುತ್ತಾರೆ.
ಅದೇ ರೀತಿ ಧರ್ಮವು ಸರಳ ವಿಷಯ : ಭಗವಂತನ ಆದೇಶಗಳನ್ನು ಸ್ವೀಕರಿಸುವುದು. ಅಷ್ಟೆ. ನೀವು ಯಾವ ಧರ್ಮವನ್ನು ಅನುಸರಿಸುತ್ತೀರೆನ್ನುವುದು ಮುಖ್ಯವಲ್ಲ. ನೀವು ಕ್ರಿಶ್ಚಿಯನ್, ನಾನು ಹಿಂದೂ, ಅವರು ಮುಸ್ಲಿಮ್ ಆಗಿರಬಹುದು. ಆದರೆ ಧರ್ಮದ ಪರೀಕ್ಷೆ ಎಂದರೆ ವ್ಯಕ್ತಿಯು ತನ್ನ ದೈವಪ್ರಜ್ಞೆಯನ್ನು ಹೇಗೆ ಬೆಳೆಸಿಕೊಂಡಿದ್ದಾನೆ ಎನ್ನುವುದೇ ಆಗಿದೆ.
ಭಾಗವತದಲ್ಲಿ ನೀಡಿರುವ ನಿರೂಪಣೆ ಅದು : ಸ ವೈ ಪುಂಸಾಂ ಪರೋ ಧರ್ಮಃ ಧರ್ಮದ ಅನೇಕ ವಿಧಗಳಿವೆ. ಪರಾ ಎಂದರೆ ಅತ್ಯುತ್ತಮ ಎಂದು ಅರ್ಥ. ಸ ವೈ ಪುಂಸಾಂ ಪರೋ ಧರ್ಮೋ ಯತೋ ಭಕ್ತಿರ್ ಅಧೋಕ್ಷಜೇ. ಅಧೋಕ್ಞಜ ಎನ್ನುವುದು ಭಗವಂತನ ಒಂದು ವರ್ಣನೆ. “ಐಹಿಕ ಇಂದ್ರಿಯಗಳು ತಲಪಲಾರದ ಕಡೆ” ಎಂದು ಅದರ ಅರ್ಥ. ನೇರವಾದ ಪ್ರಯೋಗಾತ್ಮಕ ಜ್ಞಾನದಿಂದ ಭಗವಂತನನ್ನು ಅರಿಯುವುದು ಸಾಧ್ಯವಿಲ್ಲ.
ಭಗವದ್ಗೀತೆಯಲ್ಲಿ ಹೀಗೆ ಹೇಳಿದೆ,
ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ ಯತತಿ ಸಿದ್ಧಯೇ |
ಯತತಾಂ ಅಪಿ ಸಿದ್ಧಾನಾಂ ಕಶ್ಚಿನ್ ಮಾಂ ವೇತ್ತಿ ತತ್ತ್ವತಃ ||
“ಸಾವಿರಾರು ಜನರಲ್ಲಿ ಒಬ್ಬನು ಪರಿಪೂರ್ಣತೆಗಾಗಿ ಪ್ರಯತ್ನಿಸಬಹುದು. ಪರಿಪೂರ್ಣತೆಯನ್ನು ಸಾಧಿಸಿರುವವರಲ್ಲಿ ಒಬ್ಬನು ದೇವರನ್ನು ನಿಜವಾಗಿ ಅರ್ಥಮಾಡಿಕೊಂಡಿದ್ದಾನೆ ಎಂದು ಹೇಳುವುದೂ ಕಷ್ಟ.”

ವಾಸ್ತವವಾಗಿ, ಜನರು ಆರ್ಥಿಕ ಬೆಳವಣಿಗೆ ಮತ್ತು ಇಂದ್ರಿಯ ತೃಪ್ತಿಯಲ್ಲಿ ಸಾಮಾನ್ಯವಾಗಿ ಆಸಕ್ತಿ ಹೊಂದಿರುತ್ತಾರೆ. ಅಷ್ಟೆ. ನಾನು ವಿಶ್ವಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಜನರು ಆಹಾರ ಮತ್ತು ಆಶ್ರಯವನ್ನು ಹುಡುಕಲು ತುಂಬಾ ಗಡಿಬಿಡಿಯಲ್ಲಿರುವುದನ್ನು ನಾನು ನೋಡುತ್ತೇನೆ.
ಆದರೆ ವೈದಿಕ ಧರ್ಮಗ್ರಂಥಗಳ ಪ್ರಕಾರ, ಆಹಾರ ಮತ್ತು ಆಶ್ರಯ ಈಗಾಗಲೇ ಇದೆ, ಭಗವಂತನೇ ನೀಡಿದ್ದಾನೆ. 84,00,000 ಜೀವ ಜಾತಿಗಳಿವೆ. ಅವುಗಳಲ್ಲಿ ಮಾನವ ಜೀವಿಗಳ ಸಂಖ್ಯೆ ಕಡಮೆ – ವಿವಿಧ ಲೋಕಗಳಲ್ಲಿ 400,000 ಮಾನವ ಜೀವ ಜಾತಿಗಳು. ಅವುಗಳಲ್ಲಿ ನಾಗರಿಕ ವ್ಯಕ್ತಿಗಳ ಸಂಖ್ಯೆ ತುಂಬಾ ಕಡಮೆ. ಆದರೆ ಭಗವಂತನು ಎಲ್ಲರಿಗೂ ಆಹಾರವನ್ನು ಒದಗಿಸುತ್ತಾನೆ.
ವೇದಗಳು ಹೇಳುತ್ತವೆ, ನಿತ್ಯೋ ನಿತ್ಯಾನಾಂ ಚೇತನಶ್ಚೇತನಾನಾಂ ಏಕೋ ಬಹೂನಾಂ ಯೋ ವಿದಧಾತಿ ಕಾಮಾನ್, “ಎಲ್ಲ ಜೀವಿಗಳಲ್ಲಿ ಭಗವಂತನು ಪರಮ ಜೀವಿ. ಮತ್ತು ಅವನು ಶಾಶ್ವತರಲ್ಲಿ ಪರಮ ಶಾಶ್ವತ.” ನಾವೂ ಶಾಶ್ವತರು. ನಾವು ಭಗವಂತನ ವಿಭಿನ್ನಾಂಶವಾಗಿರುವುದರಿಂದ ಭಗವಂತನ ಎಲ್ಲ ಗುಣಗಳೂ ನಮ್ಮಲ್ಲಿವೆ. ಆದರೆ ನಾವು ಭಗವಂತನ ಅತಿ ಚಿಕ್ಕ ವಿಭಿನ್ನಾಂಶವಾಗಿರುವುದರಿಂದ ಭಗವಂತನ ಗುಣಗಳು ಸಣ್ಣ ಪ್ರಮಾಣದಲ್ಲಿವೆ.
ಇದಕ್ಕೆ ಸಾಗರವನ್ನು ಉದಾಹರಣೆಯನ್ನಾಗಿ ನೀಡಬಹುದು. ಸಾಗರದಲ್ಲಿನ ಎಲ್ಲ ರಾಸಾಯನಿಕ ವಸ್ತುಗಳೂ ಅದರ ಹನಿ ನೀರಿನಲ್ಲಿಯೂ ಇವೆ. ವ್ಯತ್ಯಾಸ ಕಾಣುವುದು ಅದರ ಪ್ರಮಾಣದಲ್ಲಿ. ಹನಿ ನೀರಿನಲ್ಲಿಯೂ ಉಪ್ಪು ಇರುತ್ತದೆ ಮತ್ತು ಅಗಾಧ ಸಮುದ್ರದ ನೀರಿನಲ್ಲಿಯೂ ಉಪ್ಪು ಇರುತ್ತದೆ. ಆದರೆ ಸಮುದ್ರದ ನೀರಿನಲ್ಲಿ ಇರುವ ಉಪ್ಪಿನ ಪ್ರಮಾಣ ತುಂಬಾ ಹೆಚ್ಚು.
ಮತ್ತೊಂದು ಉದಾಹರಣೆಯನ್ನು ನೀಡಬಹುದು. ಬೆಂಕಿ ಮತ್ತು ಅದರ ಕಿಡಿಗಳು. ಇವು ವೇದಗಳ ಉದಾಹರಣೆಗಳು. ಬೆಂಕಿ ಕಂಡು ಬಂದಾಗ, ಒಂದು ರೀತಿಯ ಶಬ್ದವಾಗುತ್ತದೆ ಮತ್ತು ಸಾವಿರಾರು ಕಿಡಿಗಳು ಹೊರಬರುತ್ತವೆ. ಈ ಕಿಡಿಗಳೂ ಬೆಂಕಿಯೇ. ಆದರೆ ಮೂಲ ಬೆಂಕಿಯಷ್ಟು ದೊಡ್ಡದಲ್ಲ.
ಆದುದರಿಂದ ಶ್ರೀ ಚೈತನ್ಯ ಮಹಾಪ್ರಭುಗಳನ್ನು ಅನುಸರಿಸುವ ನಮ್ಮ ಸಿದ್ಧಾಂತ ಏನೆಂದರೆ, ಅಚಿಂತ್ಯ ಭೇದಾಭೇದ ತತ್ತ್ವ – ನಾವು ಜೀವಿಗಳು ಏಕಕಾಲಕ್ಕೆ ಭಗವಂತನಲ್ಲಿ ಒಂದು ಮತ್ತು ಅದೇ ಕಾಲಕ್ಕೆ ಅವನಿಗಿಂತ ಭಿನ್ನರು. ನಾವು ಗುಣದಲ್ಲಿ ಒಂದು. ದೇವರು ಆತ್ಮ, ನಾವೂ ಆತ್ಮ. ದೇವರು ಪರಮಾತ್ಮ, ನಾವು ಜೀವಾತ್ಮ. ದೇವರು ಶ್ರೇಷ್ಠ, ನಾವು ಚಿಕ್ಕ ಭಾಗಗಳು. ಅದೇ ವ್ಯತ್ಯಾಸ.
ಆದುದರಿಂದ ಏಕಕಾಲಕ್ಕೆ ನಾವು ಏಕ ಮತ್ತು ಭಿನ್ನ. ಏಕವು ಗುಣದಲ್ಲಿಯಾದರೆ, ವ್ಯತ್ಯಾಸವು ಪ್ರಮಾಣದಲ್ಲಿ. “ದೇವರು ದೊಡ್ಡವನು” ಎನ್ನುವುದನ್ನು ನೀವು ಸ್ವೀಕರಿಸಿ. ಯಾರೂ ಕೂಡ ದೇವರಿಗಿಂತ ದೊಡ್ಡವರಲ್ಲ ಮತ್ತು ದೇವರಿಗೆ ಸಮಾನರಲ್ಲ ಎಂದು ನಾವು ಹೇಳುತ್ತೇವೆ. ಅದು ನಮ್ಮ ಸಿದ್ಧಾಂತ.
ಯಾರೂ ಕೂಡ ದೇವರಿಗೆ ಸಮಾನರಾಗುವುದು ಸಾಧ್ಯವಿಲ್ಲ. ಅದು ಸಾಧ್ಯವಿಲ್ಲ. ದೇವರು ಒಬ್ಬನೇ. ವೈದಿಕ ಸಾಹಿತ್ಯದಲ್ಲಿ ಅನೇಕ ದೇವತೆಗಳನ್ನು ಉಲ್ಲೇಖಿಸಲಾಗಿರುವುದನ್ನು ನೀವು ಗ್ರಹಿಸಿರಬಹುದು. ಆದರೆ ದೇವತೆಗಳೂ ಜೀವಿಗಳು, ಮಾನವ ಜೀವಿಗಿಂತ ಸ್ವಲ್ಪ ಹೆಚ್ಚು ಪ್ರಬಲರು. ಇಲ್ಲಿ, ಭೂಮಿಯಲ್ಲಿ ಕೂಡ ಕೆಲವರು ಮತ್ತೊಬ್ಬರಿಗಿಂತ ಹೆಚ್ಚು ಶಕ್ತಿಶಾಲಿಗಳಾಗಿರುವುದನ್ನು ನಾವು ನೋಡುತ್ತೇವೆ. ಹಾಗೆಂದು ಅವರು ದೇವರೆಂದು ಅರ್ಥವಲ್ಲ. ದೇವರು ಪರಮ, ಸರ್ವಶಕ್ತ.
ಇಲ್ಲಿ ನೀವು ನನಗಿಂತ ಹೆಚ್ಚು ಶಕ್ತಿಶಾಲಿಯಾಗಿರಬಹುದು, ಅವನು ನಿಮಗಿಂತ ಹೆಚ್ಚು ಶಕ್ತಿಶಾಲಿಯಾಗಿರಬಹುದು ಮತ್ತು ಮತ್ತೊಬ್ಬರು ಹೀಗೆ. ಅದಕ್ಕೆ ಮಿತಿ ಇಲ್ಲ. ಯಾರನ್ನಾದರೂ ಗಮನಿಸಿ, ಅವರಿಗಿಂತ ಕೆಳಮಟ್ಟದಲ್ಲಿ ಇರುವವರನ್ನು ಮತ್ತು ಅವರಿಗಿಂತ ಮೇಲ್ಮಟ್ಟದವರನ್ನು ನೋಡುವಿರಿ. ಆದರೆ ಯಾರೂ ಕೂಡ “ನಾನು ಪರಮ” ಎಂದು ಹೇಳುವುದು ಸಾಧ್ಯವಿಲ್ಲ.
ವೈದಿಕ ಸಾಹಿತ್ಯದ ಪ್ರಕಾರ, ಈ ವಿಶ್ವದ ಸೃಷ್ಟಿಕರ್ತ ಬ್ರಹ್ಮನು ವಿಶ್ವದೊಳಗೇ ಅತ್ಯುನ್ನತ ಜೀವಿ ಎಂದು ಪರಿಗಣಿಸಲಾಗಿದೆ. ಆದರೆ ಬ್ರಹ್ಮನು ಭಗವಂತನಲ್ಲ. ಅದನ್ನು ಭಾಗವತದಲ್ಲಿ ಹೇಳಲಾಗಿದೆ. ತೇನೇ ಬ್ರಹ್ಮ ಹೃದಾ ಯ ಆದಿ ಕವಯೇ ಮುಹ್ಯಂತಿ ಯತ್ ಸೂರಯಃ – ಭಗವಂತನು ಬ್ರಹ್ಮನಿಗೆ ಸೃಷ್ಟಿಸಲು ಆದೇಶಿಸಿದ. ಆದಿ ಕವಿ – ಐಹಿಕ ಜಗತ್ತಿನೊಳಗೆ ಬ್ರಹ್ಮನು ಮೂಲ ಜೀವಿ.
“ಅವನು ಮೂಲ ಜೀವಿಯಾಗಿದ್ದರೆ, ಅದು ಹೇಗೆ ಅವನಿಗೆ ಸೃಷ್ಟಿಸುವ ಜ್ಞಾನ ಲಭಿಸಿತು?” ಎಂದು ಕೇಳಬಹುದು. ಅದನ್ನು ವಿವರಿಸಲಾಗಿದೆ. ತೇನೇ ಬ್ರಹ್ಮ ಹೃದಾ ಯ ಆದಿ ಕವಯೇ. ಹೃದಾ ಎಂದರೆ ಹೃದಯ. ಭಗವಂತನು ಹೃದಯದೊಳಗಿನಿಂದ ಬ್ರಹ್ಮನಿಗೆ ಆದೇಶಿಸಿದ.
ದೇವರ ಮೂರು ಲಕ್ಷಣಗಳು
ಭಗವಂತನು ಎಲ್ಲರ ಹೃದಯದಲ್ಲಿಯೂ ನೆಲೆಸಿದ್ದಾನೆ. ಭಗವಂತನ ಆ ರೂಪವನ್ನು ಪರಮಾತ್ಮ ಎಂದು ಕರೆಯುತ್ತಾರೆ. ಭಗವಂತನಿಗೆ ಮೂರು ಲಕ್ಷಣಗಳಿವೆ – ಬ್ರಹ್ಮನ್, ಪರಮಾತ್ಮ ಮತ್ತು ಭಗವಾನ್. ಬ್ರಹ್ಮನ್ ಎನ್ನುವುದು ಅವನ ನಿರಾಕಾರ ಲಕ್ಷಣ. ಪರಮಾತ್ಮ ಎನ್ನುವದು ಅಂತರಾತ್ಮ ಲಕ್ಷಣ. ಭಗವಾನ್ ಎನ್ನುವುದು ಆಕಾರ ಲಕ್ಷಣ.
ವದಂತಿ ತತ್ ತತ್ತ್ವ ವಿದಸ್ ತತ್ತ್ವಂ ಯಜ್ ಜ್ಞಾನಂ ಅದ್ವಯಂ |
ಬ್ರಹ್ಮೇತಿ ಪರಮಾತ್ಮೇತಿ ಭಗವಾನ್ ಇತಿ ಶಬ್ದ್ಯತೇ ||
ಪರಮ ಸತ್ಯನು ಏಕ, ಅದ್ವಯ ಜ್ಞಾನ, ಯಾವುದೇ ದ್ವಿತ್ವ ಇಲ್ಲದಿರುವಿಕೆ. ಆದರೆ ನಾವು ನಮ್ಮ ಸಾಮರ್ಥ್ಯದಂತೆ, ಪರಮ ಸತ್ಯನನ್ನು ಮೂರು ಭಿನ್ನ ದೃಷ್ಟಿಕೋನದಿಂದ ಸಾಕ್ಷಾತ್ಕರಿಸಿಕೊಳ್ಳುತ್ತೇವೆ. ಭಗವಂತನನ್ನು ಅವನ ನಿರಾಕಾರ ಬ್ರಹ್ಮನ್ ಲಕ್ಷಣದಿಂದ ಸಾಕ್ಷಾತ್ಕರಿಸಿಕೊಳ್ಳುವುದು ಅವುಗಳಲ್ಲಿ ಒಂದು.
ಸಾಮಾನ್ಯವಾಗಿ ತತ್ತ್ವಜ್ಞಾನಿಗಳು, ಊಹನಕಾರರಂತಹ ಜ್ಞಾನಿಗಳು ತಮ್ಮದೇ ಜ್ಞಾನದಿಂದ ಪರಮ ಸತ್ಯನನ್ನು ಅವನ ನಿರಾಕಾರ ಬ್ರಹ್ಮನ್ ಲಕ್ಷಣದಲ್ಲಿ ಸಾಕ್ಷಾತ್ಕರಿಸಿಕೊಳ್ಳುತ್ತಾರೆ. ಯೋಗಿಗಳು ಪರಮ ಪ್ರಭುವನ್ನು ಹೃದಯದೊಳಗಿನ ಪರಮಾತ್ಮನ ಲಕ್ಷಣದಲ್ಲಿ ಸಾಕ್ಷಾತ್ಕರಿಸಿಕೊಳ್ಳುತ್ತಾರೆ. ಭಕ್ತರು ದೇವೋತ್ತಮನನ್ನು ಪರಮ ಪುರುಷನ ಲಕ್ಷಣದಲ್ಲಿ ಸಾಕ್ಷಾತ್ಕರಿಸಿಕೊಳ್ಳುತ್ತಾರೆ. ಆದರೆ ಪರಮಾತ್ಮ, ನಿರಾಕಾರ ಬ್ರಹ್ಮನ್ ಮತ್ತು ಪರಮ ಪುರುಷ ಒಂದೇ.
ಈ ಉದಾಹರಣೆಯನ್ನು ನೀಡಲಾಗಿದೆ – ಸೂರ್ಯಪ್ರಕಾಶ, ಸೂರ್ಯಗ್ರಹ ಮತ್ತು ಸೂರ್ಯ ಗ್ರಹದೊಳಗೆ ಸೂರ್ಯದೇವ. ವೈದಿಕ ಕಲ್ಪನೆಯ ಪ್ರಕಾರ, ಪ್ರತಿಯೊಂದು ಲೋಕದಲ್ಲಿಯೂ ಜೀವಿಗಳಿದ್ದಾರೆ. ಹಾಗೆ ನಿರ್ಧರಿಸುವುದು ಸಹಜ.
ಏಕೆಂದರೆ, ಐಹಿಕ ಲೋಕದೊಳಗೆ ಎಲ್ಲವೂ ಐದು ಸ್ಥೂಲ ವಸ್ತುಗಳಿಂದ ಮಾಡಲ್ಪಟ್ಟಿದೆ – ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶ. ಮತ್ತು ಸೂಕ್ಷ್ಮ ಅಂಶಗಳೆಂದರೆ ಮನಸ್ಸು, ಬುದ್ಧಿ ಮತ್ತು ಅಹಂ. ಆದುದರಿಂದ ಕೆಲವು ಲೋಕಗಳಲ್ಲಿ ಭೂಮಿ ಪ್ರಮುಖವಾಗಿದ್ದರೆ ಮತ್ತೂ ಕೆಲವು ಲೋಕಗಳಲ್ಲಿ ನೀರು ಹಾಗೂ ಇನ್ನೂ ಕೆಲವಲ್ಲಿ ಅಗ್ನಿ ಪ್ರಮುಖವಾಗಿರುತ್ತದೆ.
ಐಹಿಕ ಲೋಕದ ಪ್ರತಿಯೊಂದು ಗ್ರಹವೂ ಈ ಐದು ಸ್ಥೂಲ ವಸ್ತುಗಳಿಂದ ಮಾಡಲ್ಪಟ್ಟಿದೆ. ಇಲ್ಲಿ ಕೆಲವು ಜೀವಿಗಳು ನೆಮ್ಮದಿಯಿಂದ ನೀರಿನಲ್ಲಿ ಜೀವಿಸುತ್ತಿರುವುದನ್ನು ನಾವು ಕಾಣುತ್ತೇವೆ. ನಿಮ್ಮನ್ನು ನೀರಿನೊಳಗೆ ಹಾಕಿದರೆ ನೀವು ಆರಾಮವಾಗಿರಲಾರಿರಿ, ಬಹುಶಃ ಸಾಯಲೂ ಬಹುದು.
ಅದೇ ರೀತಿ ಮೀನನ್ನು ನೀರಿನಿಂದ ಹೊರತೆಗೆದರೆ ಅವು ಭೂಮಿಯ ಮೇಲೆ ಸಾಯುತ್ತವೆ. ನಾವು ನೀರಿನಲ್ಲಿ, ಭೂಮಿಯ ಮೇಲೆ, ಗಾಳಿಯಲ್ಲಿ ಬದುಕುತ್ತಿರುವ ಜೀವಿಗಳನ್ನು ನೋಡುತ್ತೇವೆ. ಹಾಗೆಯೇ ಬೆಂಕಿಯ ಮೇಲೆ ಕೂಡ ಕೆಲವು ಬದುಕಬಹುದು. ಬೆಂಕಿ ಕೂಡ ಐಹಿಕ ಅಂಶಗಳಲ್ಲಿ ಒಂದಲ್ಲವೇ?
ವೈದಿಕ ಧರ್ಮಗ್ರಂಥಗಳ ಪ್ರಕಾರ, ಸೂರ್ಯಲೋಕದಲ್ಲಿಯೂ ಜೀವಿಗಳಿದ್ದಾರೆ. ಅಲ್ಲಿರುವ ಜೀವಿಗಳಿಗೆ ಬೆಂಕಿಯಂತಹ ಶರೀರಗಳಿವೆ. ಅಷ್ಟೆ. ಅದೇ ವ್ಯತ್ಯಾಸ. ಇಲ್ಲಿ ಮೀನುಗಳಿಗೆ ನೀರಿನಲ್ಲಿ ಜೀವಿಸುವಂತಹ ದೇಹಗಳಿರುವಂತೆ ಕೆಲವು ಜೀವಿಗಳಿಗೆ ಬೆಂಕಿಯಂತಹ ದೇಹಗಳಿರಬಹುದು. ತಾರ್ಕಿಕವಾಗಿ ನಾವು ಅದನ್ನು ತಳ್ಳಿಹಾಕಲಾಗದು.
ಸೂರ್ಯಲೋಕದಲ್ಲಿ ಪ್ರಧಾನವಾದ ವಿಗ್ರಹ ಅಥವಾ ದೇವರು, ನೀವು ಹೇಗಾದರೂ ಕರೆಯಿರಿ, ಸೂರ್ಯದೇವನಿದ್ದಾನೆ. ಭವದ್ಗೀತೆಯಲ್ಲಿ ಅವನ ಹೆಸರನ್ನು ವಿವಸ್ವಾನ್ ಎಂದು ಉಲ್ಲೇಖಿಸಲಾಗಿದೆ. ಕೃಷ್ಣ ಹೇಳುತ್ತಾನೆ, ಇಮಂ ವಿವಸ್ವತೇ ಯೋಗಂ ಪ್ಫ್ರೋಕ್ತವಾನ್ ಅಹಂ ಅವ್ಯಯಂ , “ಭಗವದ್ಗೀತೆಯ ಈ ಭಕ್ತಿಯೋಗದ ಬೋಧನೆಯನ್ನು ಮೊದಲು ನಾನು ವಿವಸ್ವಾನ್, ಸೂರ್ಯದೇವನಿಗೆ ಮಾಡಿದೆ.”
ಈಗ ಅದು ನಂಬುವ ಅಥವಾ ನಂಬದಿರುವ ಪ್ರಶ್ನೆಯಷ್ಟೆ. ನಮಗೆ ಅದರಲ್ಲಿ ಶ್ರದ್ಧೆ ಇದೆ. ನಾವು ಅದನ್ನು ಸ್ವೀಕರಿಸುತ್ತೇವೆ. ಕೃಷ್ಣನು ಹೇಳಿರುವುದರಿಂದ ನಾವು ಅದನ್ನು ಒಪ್ಪುತ್ತೇವೆ. ನಾವು ನಮ್ಮ ತರ್ಕವನ್ನೂ ಅಳವಡಿಸುತ್ತೇವೆ. ನಾವು ಕಣ್ಣುಮುಚ್ಚಿ ಒಪ್ಪಿಕೊಳ್ಳುವುದಿಲ್ಲ. ಈ ಲೋಕದಲ್ಲಿ ಒಬ್ಬ ಅಧ್ಯಕ್ಷನಿರುವುದನ್ನು ನಾನು ನೋಡುತ್ತೇನೆ. ಈ ಮೊದಲು ಒಬ್ಬನೇ ರಾಜನಿದ್ದ ಮತ್ತು ಇಡೀ ಜಗತ್ತನ್ನು ಆಳುತ್ತಿದ್ದ. ಕ್ರಮೇಣ ಜನರು ತಮ್ಮ ಆಸಕ್ತಿಗಳನ್ನು ವಿಭಾಗಿಸಿಕೊಂಡರು ಮತ್ತು ಭಿನ್ನ ದೇಶಗಳಾದರು. ವೈದಿಕ ಇತಿಹಾಸದಿಂದ ಅದನ್ನು ನಾವು ನೋಡಬಹುದು.
ಆಸ್ಟ್ರೇಲಿಯಾದಲ್ಲಿ ಶಿವ ಮಂದಿರವಿದೆ ಎಂದು ನನಗೆ ಯಾರೋ ಹೇಳುತ್ತಿದ್ದರು. ಪುರಾತತ್ತ್ವಶಾಸ್ತ್ರ ಇಲಾಖೆಯ ಶೋಧನೆಗಳು ಅನೇಕ ಕಡೆಗಳಲ್ಲಿ ವೈದಿಕ ನಾಗರಿಕತೆಯ ಕುರುಹುಗಳನ್ನು ಪತ್ತೆ ಮಾಡಿವೆ. ವೈದಿಕ ಸಾಹಿತ್ಯದಲ್ಲಿ ಏಳು ದ್ವೀಪಗಳ ಉಲ್ಲೇಖವಿದೆ : ಏಷ್ಯಾ, ಯೂರೋಪ್, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಓಷಾನಿಯಾ.
ಆದುದರಿಂದ ವೈದಿಕ ಸಂಸ್ಕೃತಿಗೆ ವಿಶ್ವವು ತಿಳಿಯದ್ದೇನಾಗಿರಲಿಲ್ಲ. ಪರಿಪೂರ್ಣವಾಗಿ ತಿಳಿದಿತ್ತು. ಮಹಾರಾಜ ಪೃಥು ಎನ್ನುವ ರಾಜನು ಇಡೀ ವಿಶ್ವದ ಚಕ್ರವರ್ತಿಯಾಗಿದ್ದನು. ಅವನು ಏಳೂ ದ್ವೀಪಗಳನ್ನು ಆಳಿದನು. ಆದರೆ ಅವನ ಕೇಂದ್ರ ಸ್ಥಾನವು ಗಂಗಾ ಮತ್ತು ಯಮುನಾ ನದಿಯ ಮಧ್ಯೆ, ಬ್ರಹ್ಮವರ್ತದಲ್ಲಿತ್ತು. ಆ ಭೂಮಿಯನ್ನು ಈಗಲೂ ಪವಿತ್ರವೆಂದು ಭಾವಿಸಲಾಗಿದೆ. ವಾಸ್ತವಿಕವಾಗಿ ವೈದಿಕ ಸಂಸ್ಕೃತಿಯು ಅಲ್ಲಿ ಇನ್ನೂ ಇದೆ.
ರಾಜನು ಭಗವಂತನ ಪ್ರತಿನಿಧಿಯಾಗಿರಬೇಕು. ನಿರ್ದಿಷ್ಟ ಲೋಕದ ನಿವಾಸಿಗಳ ಹಿತಗಳನ್ನು ನೋಡಿಕೊಳ್ಳಲು ಭಗವಂತನು ಕೆಲವರಿಗೆ ಅಧಿಕಾರವನ್ನು ನೀಡುತ್ತಾನೆ. ಅದೇ ರೀತಿ ಸೂರ್ಯಲೋಕದಲ್ಲಿ ಒಬ್ಬ ರಾಜನಿದ್ದಾನೆ. ನಾವು ಅವನನ್ನು ಸೂರ್ಯದೇವ ಅಥವಾ ಹಾಗೆ ಏನೋ ಕರೆಯಬಹುದು. ಅವನು ಪ್ರಬಲ ವ್ಯಕ್ತಿ. ಅವನ ಬಳಿ ಅವನ ವೈಯಕ್ತಿಕ ಪ್ರಭೆ ಇದೆ. ಬೆಂಕಿಯಲ್ಲಿ ಶಾಖ ಮತ್ತು ಬೆಳಕು ಎರಡೂ ಇರುವಂತೆ ಸೂರ್ಯದೇವನು ಬೆಂಕಿ-ಪುರುಷ. ಅವನ ಪ್ರಭೆಯು ಇಡೀ ವಿಶ್ವವನ್ನೇ ಆವರಿಸಿದೆ.
ಬ್ರಹ್ಮಸಂಹಿತೆಯಲ್ಲಿ ಸೂರ್ಯಲೋಕದ ವರ್ಣನೆಯಿದೆ. ಸೂರ್ಯಲೋಕವನ್ನು ಇತರ ಎಲ್ಲ ಲೋಕಗಳ ಕಣ್ಣುಗಳೆಂದು ವಿವರಿಸಲಾಗಿದೆ. ಅದು ವಾಸ್ತವಾಂಶ. ಸೂರ್ಯ ಉದಯಿಸದಿದ್ದರೆ ನಮಗೆ ಏನೂ ಕಾಣುವುದಿಲ್ಲ. ನಮಗೆ ನೋಡುವ ವಿಷಯದಲ್ಲಿ ತುಂಬಾ ಹೆಮ್ಮೆ ಇದೆ. ಆದರೆ ನಮ್ಮ ನೋಡುವ ಶಕ್ತಿಯು ಸೀಮಿತ ಮತ್ತು ನಿರ್ಬಂಧಿತ.
ಸೂರ್ಯೋದಯ ಆಗದಿದ್ದರೆ ನಮ್ಮ ಕಣ್ಣುಗಳು ನಿಷ್ಪ್ರಯೋಜಕ. ಈಗ ರಾತ್ರಿ, ಸ್ವಲ್ಪ ದೂರವೂ ಕಾಣುವುದಿಲ್ಲ. ಆದುದರಿಂದ ಬರೀ ಈ ಕಣ್ಣುಗಳಿಂದ ಏನು ಪ್ರಯೋಜನ? ಸೂರ್ಯ ಉದಯಿಸಿದಾಗ ನೀವು ನೋಡುವಿರಿ. ಆ ನಿರ್ಬಂಧವನ್ನು ಭಗವಂತನು ಮಾಡಿದ್ದಾನೆ. ಆದುದರಿಂದ ಉಪನಿಷತ್ ನಲ್ಲಿ ಹೇಳಿದೆ, “ದೇವರು ನೋಡಿದಾಗ ನೀವು ನೋಡುವಿರಿ. ದೇವರು ನಡೆದಾಗ ನೀವು ನಡೆಯುವಿರಿ.”

ವಾಸ್ತವವಾಗಿ ಅದು ದಿಟ. ನಾವು ಭಗವಂತನ ಮೇಲೆ ಅವಲಂಬಿತರು. “ಭಗವಂತನ ಒಪ್ಪಿಗೆ ಇಲ್ಲದೆ ಒಂದು ಹುಲುಕಡ್ಡಿಯೂ ಚಲಿಸದು” ಎನ್ನುವ ಹೇಳಿಕೆಯು ವಾಸ್ತವ. ಭಗವದ್ಗೀತೆಯಲ್ಲಿಯೂ ಹೇಳಿದೆ, ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟೋ ಮತ್ತಃ ಸ್ಮೃತಿರ್ ಜ್ಞಾನಂ ಅಪೋಹನಂ ಚ, “ನನ್ನಿಂದ ನೆನಪು ಮತ್ತು ಮರೆವು ಬರುತ್ತದೆ.” ನಾವು ಕೆಲವು ಬಾರಿ ಮರೆಯುತ್ತೇವೆ ಮತ್ತು ಕೆಲವು ಬಾರಿ ನೆನಪು ಮಾಡಿಕೊಳ್ಳುತ್ತೇವೆ. ಅದು ಭಗವಂತನ ಕೃಪೆ.
ದಿವ್ಯ ವಿಜ್ಞಾನ
ದೇವರನ್ನು ಕುರಿತು ಅರ್ಥಮಾಡಿಕೊಳ್ಳಲು ಅನೇಕ ವಿಷಯಗಳಿವೆ. ಭಗವತ್ ವಿಜ್ಞಾನದ ಅಧ್ಯಯನಕ್ಕಾಗಿ ಜನರಿಗೆ ಪ್ರೋತ್ಸಾಹಿಸಲು ನಾವು ವಿಶ್ವಾದ್ಯಂತ ದೈವಪ್ರಜ್ಞೆಯನ್ನು ಬೋಧಿಸುತ್ತಿದ್ದೇವೆ. ದಯೆಯಿಟ್ಟು ನಮ್ಮನ್ನು ಪಂಥೀಯರೆಂದು ಭಾವಿಸಬೇಡಿ.
ಉನ್ನತ ವಿಜ್ಞಾನ ಅಥವಾ ಗಣಿತಶಾಸ್ತ್ರವನ್ನು ಕಲಿಯಲು ಆಸಕ್ತಿ ಉಳ್ಳ ವ್ಯಕ್ತಿಯು ಅದು ಎಲ್ಲಿ ಲಭ್ಯವೋ ಅಲ್ಲಿಗೆ ಹೋಗುತ್ತಾನೆ. ಶಿಕ್ಷಕನು ಈ ವಿಷಯಗಳನ್ನು ಬೋಧಿಸಲು ಎಲ್ಲಿಗಾದರೂ ಹೋಗುತ್ತಾನೆ. ಅದೇ ರೀತಿ ದಿವ್ಯ ವಿಜ್ಞಾನವನ್ನು ಕುರಿತಂತೆ ಜನರಲ್ಲಿ ಅರಿವು ಉಂಟುಮಾಡಲು ನಾವು ವಿಶ್ವಾದ್ಯಂತ ಪ್ರವಾಸ ಮಾಡುತ್ತಿದ್ದೇವೆ. ಅದು ನಮ್ಮ ವ್ಯವಹಾರ.
ಧರ್ಮದ ಮೌಲ್ಯೀಕರಣಕ್ಕೆ ನಮ್ಮ ಪರೀಕ್ಷೆ ಎಂದರೆ, ಇದನ್ನು ಅನುಸರಿಸುವುದರಿಂದ ಜನರು ದೈವಪ್ರಜ್ಞೆ ಅಥವಾ ಭಗವತ್ ಪ್ರೇಮವನ್ನು ಬೆಳೆಸಿಕೊಂಡಿದ್ದಾರೆಯೇ ಎಂದು ನೋಡುವುದಾಗಿದೆ. ಜಗತ್ತಿನಾದ್ಯಂತ ಜನರು ದೇವರನ್ನು ತಿರಸ್ಕರಿಸುತ್ತಿದ್ದಾರೆ. ನಿಮಗೆಲ್ಲಾ ಇದು ಚೆನ್ನಾಗಿ ಗೊತ್ತು. ಇಂಗ್ಲೆಂಡ್ ನಲ್ಲಿ ಅನೇಕ ಚರ್ಚ್ ಗಳು ಖಾಲಿ ಇವೆ. ಇವುಗಳನ್ನು ಇತರ ಉದ್ದೇಶಗಳಿಗೆ ಮಾರಾಟ ಮಾಡಲು ಪಾರ್ಲಿಮೆಂಟ್ ಕಾನೂನು ಅಂಗೀಕರಿಸಿತು.
ಒಬ್ಬ ವ್ಯಕ್ತಿಯು ಹಿಂದೂ, ಕ್ರಿಶ್ಚಿಯನ್ ಅಥವಾ ಮುಸ್ಲಿಂ ಎನ್ನುವುದು ಮುಖ್ಯವಲ್ಲ. ನೀವು ಏನೇ ಆಗಿರಿ, ದೈವಪ್ರಜ್ಞೆಯನ್ನು ಬೆಳೆಸಿಕೊಳ್ಳಿ ಎನ್ನುವುದು ನಮ್ಮ ಕಳಕಳಿಯ ಮನವಿ. ಅದು ನಮ್ಮ ಕಾರ್ಯಕ್ರಮ. ದೇವರು ಏನು ಎನ್ನುವುದನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ವೈದಿಕ ಸಾಹಿತ್ಯದ ಸಲಹೆ ಪಡೆದರೆ ನಿಮಗೆ ಕರಾರುವಾಕ್ಕಾದ, ವೈಜ್ಞಾನಿಕವಾದ ಮತ್ತು ಅಧಿಕೃತವಾದ ಮಾಹಿತಿ ಸಿಗುತ್ತದೆ.
ಉದಾಹರಣೆಗೆ, ವಿಜ್ಞಾನದ ಒಂದು ನಿರ್ದಿಷ್ಟ ವಿಭಾಗದಲ್ಲಿ ಕಲಿಯುವ ಆಸಕ್ತಿ ಉಳ್ಳ ವ್ಯಕ್ತಿಯು ಬೇರೆ ದೇಶದ ವಿಶ್ವವಿದ್ಯಾಲಯಕ್ಕೆ ಹೋಗುತ್ತಾನೆ. ಇದರಿಂದ ಅವನು ಪತನಗೊಂಡಿದ್ದಾನೆ ಎಂದು ಅರ್ಥವಲ್ಲ. ವೈಜ್ಞಾನಿಕ ಜ್ಞಾನವನ್ನು ಹುಡುಕುತ್ತಿದ್ದಾನೆ ಎಂದು ಅರ್ಥ. ಅದೇ ರೀತಿ ನಾವು ಎಲ್ಲರನ್ನೂ ಆಹ್ವಾನಿಸುತ್ತೇವೆ.
ಪ್ರಸ್ತುತದಲ್ಲಿ, ವಿಶ್ವದಲ್ಲಿ ದೈವಪ್ರಜ್ಞೆಯ ಅಗತ್ಯ ತುಂಬಾ ಇದೆ. ದೈವಪ್ರಜ್ಞೆ ಇಲ್ಲದಿದ್ದರೆ ಉಳಿದ ಎಲ್ಲ ಅರ್ಹತೆಗಳು ನಿಷ್ಪ್ರಯೋಜಕ. ಭಗವಂತನ ಚಿಕ್ಕ ಅಂಶವಾದ ಆತ್ಮದ ಉಪಸ್ಥಿತಿಯಿಂದ ದೇಹಕ್ಕೆ ಮೌಲ್ಯ. ಅವರು ಇಂಥವರು, ಅವರು ವಿಜ್ಞಾನಿ, ಅವರು ತತ್ತ್ವಜ್ಞಾನಿ ಎಂದೆಲ್ಲಾ ಹೇಳುತ್ತೇವೆ. ಏಕೆ? ಭಗವಂತನ ಕಿಡಿ ಅಲ್ಲಿರುತ್ತದೆ.
ಆತ್ಮದ ಅಂಶ ಹೊರಟು ಹೋದಕೂಡಲೇ ದೇಹವು ನಿಷ್ಪ್ರಯೋಜಕವಾಗುತ್ತದೆ. ಅದು ಇಂಥವರದ್ದೇ ದೇಹವಾಗಿರಬಹುದು. ಆದರೆ ಅದು ಪ್ರಯೋಜನವಿಲ್ಲದ್ದಾಗುತ್ತದೆ. ಕೇವಲ ವಸ್ತುವಿನ ಮುದ್ದೆಯಾಗುತ್ತದೆ. ಆದರೆ ಜನರು ಆತ್ಮಕ್ಕಿಂತ ದೇಹಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಅವರ ಬಳಿ ಸರಿಯಾದ ಮಾಹಿತಿ ಇಲ್ಲ.
ನಾನು ಅನೇಕ ದೇಶಗಳಲ್ಲಿ ಪ್ರವಾಸ ಮಾಡಿದ್ದೇನೆ ಮತ್ತು ಅನೇಕ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿದ್ದೇನೆ. ದೇವರು ಅಥವಾ ಆತ್ಮವನ್ನು ಕುರಿತಂತೆ ವೈಜ್ಞಾನಿಕ ಅರಿವು ನೀಡುವಂತಹ ವಿಭಾಗವು ಯಾವ ಸಂಸ್ಥೆಯಲ್ಲಿಯೂ ಕಂಡು ಬರಲಿಲ್ಲ. ಮಾನವ ನಾಗರಿಕತೆಗೆ ಅದು ಒಳ್ಳೆಯ ಸೂಚನೆಯಲ್ಲ. ದೇವರನ್ನು ಅರ್ಥಮಾಡಿಕೊಳ್ಳಲೆಂದೇ ಮಾನವ ನಾಗರಿಕತೆ ಇರುವುದು. ಆದುದರಿಂದ ಯಾವುದೇ ನಾಗರಿಕ ಮಾನವ ಸಮಾಜದಲ್ಲಿ ಧರ್ಮದ ವ್ಯವಸ್ಥೆ ಇರುವುದು.
ಈಗಾಗಲೇ ವಿವರಿಸಿರುವಂತೆ ಧರ್ಮ ಎಂದರೆ ಭಗವಂತನ ಆದೇಶವನ್ನು ಪಾಲಿಸುವುದು. ಸಾಮಾನ್ಯ ಕಾನೂನು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವ್ಯತ್ಯಾಸವಾಗುವ ಹಾಗೆ ಧರ್ಮದ ವಿವರಗಳು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸ್ವಲ್ಪ ಬದಲಾವಣೆಯನ್ನು ಕಾಣಬಹುದು.
ಆದರೆ ಸರ್ಕಾರದ ಆಜ್ಞೆ ಪಾಲನೆ ಎಲ್ಲ ಕಡೆ ಇದೆ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಂವಿಧಾನದಲ್ಲಿ ವ್ಯತ್ಯಾಸವಿರಬಹುದು. ಆದರೆ ಸರ್ಕಾರಕ್ಕೆ ವಿಧೇಯರಾಗಿರುವುದು ಅತ್ಯಗತ್ಯ. ಅದೇ ರೀತಿ ಧರ್ಮವು ಕಾಲ, ದೇಶ, ಸ್ಥಾನ ಅಥವಾ ಗ್ರಹಿಕೆಯಲ್ಲಿ ವ್ಯತ್ಯಾಸ ತೋರಬಹುದು. ಆದರೆ ದೇವರಿಗೆ ವಿಧೇಯರಾಗಿರಬೇಕಾದುದು ಅತ್ಯಗತ್ಯ. ಇಲ್ಲವಾದರೆ ಅದು ಮಾನವ ನಾಗರಿಕತೆಯಲ್ಲ.
ಕೃಷ್ಣಪ್ರಜ್ಞೆ ಆಂದೋಲನಕ್ಕೆ ಇದು ನಮ್ಮ ಕಾರ್ಯಕ್ರಮ : ಕೃಷ್ಣಪ್ರಜ್ಞೆಯ ಅಭಾವದಿಂದ ಕುಸಿಯುತ್ತಿರುವ ಜಗತ್ತನ್ನು ಕಾಪಾಡಲು ಎಲ್ಲ ವಿದ್ವಾಂಸರು, ಪುರೋಹಿತರು (ಪಾದ್ರಿ) ಮತ್ತು ತತ್ತ್ವಜ್ಞಾನಿಗಳು ಒಂದಾಗಬೇಕೆಂದು ನಾವು ಆಹ್ವಾನಿಸುತ್ತೇವೆ.
ಅದು ನಮ್ಮ ಮನವಿ. ನೀವು, ಗೌರವಾನ್ವಿತರು ನನಗೆ ನನ್ನ ಈ ಧ್ಯೇಯದಲ್ಲಿ ಸಹಾಯ ಮಾಡುವಿರೆಂದು ಭಾವಿಸುತ್ತೇನೆ ಮತ್ತು ನಾನು ನಿಮಗೆ ಕೃತಜ್ಞತೆ ಸಲ್ಲಿಸುವೆ.
ವಂದನೆಗಳು






Leave a Reply