ನಿಮ್ಮ ದೈವ ಪ್ರೀತಿ ಎಲ್ಲಿ?

ಶ್ರೀ ಶ್ರೀಮದ್‌ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಅವರ ಶಿಷ್ಯರ ನಡುವೆ
ಹೈದರಾಬಾದಿನಲ್ಲಿ, 1974ರ ಏಪ್ರಿಲ್‌ನಲ್ಲಿ ನಡೆದ ಸಂಭಾಷಣೆ.

ಶ್ರೀಲ ಪ್ರಭುಪಾದ  : ಸಾಮಾನ್ಯವಾಗಿ ನೀವು ಜನರಿಗೆ ಯಾವ ರೀತಿ ಬೋಧಿಸುತ್ತೀರಾ?

ಭಕ್ತ  :  ಶ್ರೀ ಚೈತನ್ಯರು ಬೋಧಿಸಿರುವುದನ್ನು ಮತ್ತು ಎಲ್ಲ ವೈದಿಕ ಸಾಹಿತ್ಯಗಳಲ್ಲಿ ಬೋಧಿಸಿರುವುದನ್ನು ಅನುಸರಿಸಲು ಪ್ರಯತ್ನಿಸುವೆ – ಜನರು ಭಗವಂತನೊಂದಿಗಿನ ತಮ್ಮ ಬಾಂಧವ್ಯವನ್ನು ಅರ್ಥಮಾಡಿಕೊಳ್ಳಬೇಕು, ಆ ಬಾಂಧವ್ಯದಲ್ಲಿ  ಹೇಗೆ ವರ್ತಿಸಬೇಕು ಮತ್ತು ಬದುಕಿನ ಧ್ಯೇಯವು ಭಗವಂತನ ಪರಿಶುದ್ಧ ಪ್ರೇಮದ ಹಂತಕ್ಕೆ ಬರುವುದು. ಈ ರೀತಿ ನಾವು ಧಾರ್ಮಿಕ ಸೇವೆಯ ತತ್ತ್ವಗಳನ್ನು ಜನರಿಗೆ ಶ್ರುತಪಡಿಸುವುದು.

ಶ್ರೀಲ ಪ್ರಭುಪಾದ  : ಆದರೆ ಜನರು ಹೇಳುತ್ತಾರೆ, “ನಾವು ದೇವರನ್ನು ಮರೆತಿಲ್ಲ. ನಾವು ಚರ್ಚಿಗೆ ಹೋಗುತ್ತೇವೆ. ಆದುದರಿಂದ ನಾವೆಲ್ಲಿ ದೇವರನ್ನು ಮರೆತಿದ್ದೇವೆ?”

ಭಕ್ತ  : ಸರಿಯೇ. ಅವರು ತಮ್ಮ ಧರ್ಮ ಬದಲಿಸಿಕೊಳ್ಳಲು ನಾವು ಉತ್ತೇಜಿಸುವುದಿಲ್ಲ. . .

ಶ್ರೀಲ ಪ್ರಭುಪಾದ  : ಇಲ್ಲ, ನಿಮ್ಮ ಆರೋಪವೆಂದರೆ, ಅವರು ದೇವರನ್ನು ಮರೆತಿದ್ದಾರೆ. ಅವರು ಉತ್ತರಿಸುತ್ತಾರೆ, “ನಾವು ದೇವರನ್ನು ಮರೆತಿಲ್ಲ. ನಾವು ಚರ್ಚಿಗೆ ಹೋಗುತ್ತೇವೆ. ನಾವೆಲ್ಲಿ ಭಗವಂತನನ್ನು ಮರೆತಿದ್ದೇವೆ?”

ಭಕ್ತ  : ಏಕೆಂದರೆ ಅವರು ಅವನ ಸೇವೆಯಲ್ಲಿ ಕ್ರಿಯಾಶೀಲರಾಗಿಲ್ಲ. ತಾವು ಆಸ್ತಿಕರೆಂದು ಹೇಳಿಕೊಳ್ಳುವವರನ್ನು ನಾವು ನೋಡುತ್ತೇವೆ. ಆದರೆ ಅವರು ಆಚರಣೆಯಲ್ಲಿ ಭಗವಂತನಿಗೆ ಏನೂ ಸೇವೆ ಸಲ್ಲಿಸುವುದಿಲ್ಲ.

ಶ್ರೀಲ ಪ್ರಭುಪಾದ  : ಆದರೆ ಸೇವೆಯ ಅರ್ಥವೇನು?

ಭಕ್ತ  : ಸೇವೆಯೆಂದರೆ ಪ್ರೇಮದ ಬಾಂಧವ್ಯದಲ್ಲಿ ಪಾತ್ರವಹಿಸುವುದು. ಆದರೆ ಜನರು ತಮ್ಮ ಉದರ ಸೇವೆಯನ್ನಷ್ಟೇ ಮಾಡಿಕೊಳ್ಳುತ್ತಿದ್ದಾರೆ.

ಶ್ರೀಲ ಪ್ರಭುಪಾದ : “ಆದರೆ ನನಗೆ ಭಗವಂತನ ಮೇಲೆ ಪ್ರೇಮವಿಲ್ಲದಿದ್ದರೆ, ನಾನು ಯಾಕೆ ಚರ್ಚ್‌ಗೆ ಬರುತ್ತಿರುವೆ?”

ಭಕ್ತ : ದೇವರು ಯಾರೆಂಬುದರ ಬಗೆಗೆ ನಾವು ಅವರಿಗೆ ಅರಿವು ಉಂಟುಮಾಡುತ್ತಿದ್ದೇವೆ. ಅವರು ಚರ್ಚ್‌ಗೆ ಹೋಗುತ್ತಾರೆ, ಆದರೆ ವಾಸ್ತವವಾಗಿ ಅವರಿಗೆ ದೇವರು ಯಾರೆಂದು ತಿಳಿಯದು.

ಶ್ರೀಲ ಪ್ರಭುಪಾದ  : “ಅವನು ಏನೇ ಆಗಿದ್ದರೂ, ನಾನು ಪ್ರಾರ್ಥನೆ ಸಲ್ಲಿಸುವಾಗ ನಾನು ಭಗವಂತನನ್ನು ಸ್ಮರಿಸಿಕೊಳ್ಳುತ್ತೇನೆ. ನನಗೆ ಸ್ಪಷ್ಟ ವಿಚಾರ ಇಲ್ಲದಿರಬಹುದು, ಆದರೆ ದೇವರನ್ನು ಕುರಿತಂತೆ ನನಗೆ ನನ್ನದೇ ಆದ ಕಲ್ಪನೆ ಉಂಟು.” ಹಾಗಾದರೆ, ಏನು ಉತ್ತರ?

ಭಕ್ತ : ಆದರೆ ಭಗವಂತನ ಸೇವೆಯ ಲಕ್ಷಣಗಳಿವೆ. ಚರ್ಚ್‌ನಲ್ಲಿ ದೇವರನ್ನು ಪೂಜಿಸಲು ಕ್ರೈಸ್ತರನ್ನು ನಾವು ನಿರುತ್ಸಾಹಗೊಳಿಸುವುದಿಲ್ಲ. ಆದರೆ, ಅವರು ನಿಜವಾಗಿಯೂ ದೇವರ ಸೇವೆ ಮಾಡುತ್ತಿದ್ದರೆ ಅವರು ಭಗವಂತನ ಕುರಿತ ಪ್ರೇಮ ವಿಕಸನದ ಲಕ್ಷಣಗಳನ್ನು ತೋರಬೇಕು.

ಶ್ರೀಲ ಪ್ರಭುಪಾದ  : ಹೌದು. ಅದಕ್ಕೆ ಆಗಲೇ ಉತ್ತರಿಸಲಾಗಿದೆ, “ದೇವರನ್ನು ಕುರಿತು ನನ್ನಲ್ಲಿ ಪ್ರೇಮ ಇಲ್ಲದಿದ್ದರೆ ನಾನು ಚರ್ಚ್‌ಗೆ ಏಕೆ ಬರುತ್ತಿರುವೆ? ಚರ್ಚ್‌ನಲ್ಲಿ ಕಳೆಯುವ ಸಮಯವನ್ನು ನಾನು ಹಣ ಸಂಪಾದನೆಗೆ ಬಳಸಬಹುದಲ್ಲವೇ?”

ಭಕ್ತ  : ಆದರೆ ಪ್ರೀತಿ, ಪ್ರೇಮವು ಭಾವನೆಗಳ ಮೇಲೆ ಆಧಾರಿತವಾಗಿಲ್ಲ. ಪ್ರೇಮ ಆಚರಣೆ. ಒಬ್ಬನ ಚಟುವಟಿಕೆಗಳಿಂದ ಅವನು ದೇವರನ್ನು ಕುರಿತಂತೆ ಎಷ್ಟು ಪ್ರೇಮವನ್ನು ಬೆಳೆಸಿಕೊಂಡಿದ್ದಾನೆ ಎಂಬುವುದನ್ನು ತೀರ್ಮಾನಿಸಬಹುದು.

ಶ್ರೀಲ ಪ್ರಭುಪಾದ  : “ನನಗೆ ಭಗವಂತನಲ್ಲಿ ಪ್ರೇಮ ಇಲ್ಲ ಎಂಬ ತೀರ್ಮಾನಕ್ಕೆ ನೀವು ಬರಲು ನನ್ನಲ್ಲಿ ಕಂಡ ಅಂಶಗಳಾವುವು? ನನ್ನಲ್ಲಿ ಏನು ನೋಡಿದಿರಿ?”

ಭಕ್ತ  : ನೀವು ಇಡೀ ವಾರದಲ್ಲಿ ಒಂದು ತಾಸು ಮಾತ್ರ ಚರ್ಚ್‌ಗೆ ಹೋಗುತ್ತೀರ.

ಶ್ರೀಲ ಪ್ರಭುಪಾದ  : ಅದಿರಬಹುದು. . .

ಭಕ್ತ  : ಉಳಿದ ಸಮಯವನ್ನು ದೇವರ ಸೇವೆಗೆ ವಿನಿಯೋಗಿಸುತ್ತಿಲ್ಲ.

ಶ್ರೀಲ ಪ್ರಭುಪಾದ  : “ಆದರೆ ಅದರರ್ಥ ನಾನು ಭಗವಂತನನ್ನು ಪ್ರೇಮಿಸುವುದಿಲ್ಲ ಎಂದಲ್ಲ.”

ಭಕ್ತ  : ಭಗವಂತನಲ್ಲಿ ಪ್ರೇಮ ಬೆಳೆಸಿಕೊಳ್ಳದ ಜನರಲ್ಲಿ ನಾವು ಭಗವಂತನ ಪ್ರೇಮವನ್ನು ಹರಡುತ್ತಿದ್ದೇವೆ. ನೀವು ದೇವರನ್ನು ಪ್ರೀತಿಸುತ್ತಿದ್ದರೆ ನೀವು ನಮ್ಮ ಈ ಕೆಲಸಕ್ಕೆ ಸಂತೋಷದಿಂದ ಬೆಂಬಲಿಸಬೇಕು.

ಶ್ರೀಲ ಪ್ರಭುಪಾದ  : ಆದರೆ ಕ್ರಿಶ್ಚಿಯನ್ನರೂ ಬೋಧಿಸುತ್ತಿದ್ದಾರೆ. ಕ್ರಿಶ್ಚಿಯನ್‌ ಧರ್ಮ ಗುರುಗಳು ಹೇಳುತ್ತಾರೆ, “ನಾವು ಜಗತ್ತಿನಾದ್ಯಂತ ಸಂಚರಿಸುತ್ತೇವೆ. ನಾವು ಎಷ್ಟು ಜನರನ್ನು ಕ್ರಿಶ್ಚಿಯನ್ನರಾಗಿ ಮಾಡಿದ್ದೇವೆ. ಹೀಗಾಗಿ, ನೀವು ನಮಗಿಂತ ಉತ್ತಮ ಎಂದು ಏಕೆ ಹೇಳುವಿರಿ? ನೀವು ಮಾಡುತ್ತಿರುವುದನ್ನೇ ನಾವೂ ಮಾಡುತ್ತಿದ್ದೇವೆ.”

ಭಕ್ತ : ಒಬ್ಬ ವ್ಯಕ್ತಿಗೆ ದೇವರ ಪ್ರೇಮವಿದ್ದರೆ, ಆ ಪ್ರೀತಿಯು ಅವನ ಕೆಲಸಕ್ಕಷ್ಟೇ ಸೀಮಿತವಲ್ಲ. ದೇವರು ಒಬ್ಬನೇ, ಆದುದರಿಂದ ನಮಗೆ ಯಾಕೆ ಸಹಾಯ ಮಾಡಬಾರದು?

ಶ್ರೀಲ ಪ್ರಭುಪಾದ  : “ಇಲ್ಲ, ಇಲ್ಲ. ನಾವು ಈಗಾಗಲೇ ಜಗತ್ತಿನಾದ್ಯಂತ ಕ್ರಿಶ್ಚಿಯನ್‌ ಧರ್ಮವನ್ನು ಬೋಧಿಸುತ್ತಿದ್ದೇವೆ. ಕೃಷ್ಣಭಕ್ತರಿಗಿಂತ ಕ್ರಿಶ್ಚಿಯನ್ನರ ಸಂಖ್ಯೆ ಹೆಚ್ಚು. ನಮ್ಮ ಬೋಧನೆಯು ನಿಮ್ಮದಕ್ಕಿಂತ ಉತ್ತಮ.”

ಭಕ್ತ : ಹರೇ ಕೃಷ್ಣ ಮಹಾಮಂತ್ರವನ್ನು ಜಪಿಸಲು ನಾವು ಕೋರುತ್ತಿದ್ದೇವೆ ಅಷ್ಟೆ.

ಶ್ರೀಲ ಪ್ರಭುಪಾದ  : “ಅದು ಒಂದು ವಿಧಾನವಷ್ಟೆ. ಹರೇ ಕೃಷ್ಣ ಜಪಿಸಲು ನೀವು ಜನರನ್ನು ಕೋರುತ್ತಿರುವಿರಿ. ನಾವು ಅವರಿಗೆ `ನಿತ್ಯದ ಆಹಾರ ಕೊಡು’ ಎಂದು ಪ್ರಾರ್ಥಿಸಲು ಮನವಿ ಮಾಡಿಕೊಳ್ಳುತ್ತಿದ್ದೇವೆ. ನಿಮ್ಮ ವಿಧಾನ ಜಪಿಸುವುದು, ನಮ್ಮದು ಪ್ರಾರ್ಥನೆ. ಆದುದರಿಂದ ವ್ಯತ್ಯಾಸವಿಲ್ಲ.”

ಭಕ್ತ : ಆದರೆ ನಾವು ಹರೇ ಕೃಷ್ಣವನ್ನು ಜಪಿಸಿದಾಗ, “ದಯೆಯಿಟ್ಟು ನಿನಗೆ ಸೇವೆ ಸಲ್ಲಿಸುವೆ” ಎಂದು ನಾವು ಭಗವಂತನಿಗೆ ಪ್ರಾರ್ಥನೆ ಸಲ್ಲಿಸುತ್ತೇವೆ.

ಶ್ರೀಲ ಪ್ರಭುಪಾದ  : “ಅದು ಆಗಲೇ ಇತ್ಯರ್ಥವಾಗಿದೆ. ನಾವೂ ಸೇವೆ ಸಲ್ಲಿಸುತ್ತಿದ್ದೇವೆ : ನಾವು ಕ್ರಿಶ್ಚಿಯನ್‌ ಧರ್ಮವನ್ನು ಬೋಧಿಸುತ್ತಿದ್ದೇವೆ.”

ಭಕ್ತ : ಆದರೆ ನಾವು ದಿನದ 24 ತಾಸೂ ಸೇವೆ ಸಲ್ಲಿಸುತ್ತಿದ್ದೇವೆ.

ಶ್ರೀಲ ಪ್ರಭುಪಾದ  : “ಇರಬಹುದು. ನೀವು ದಿನದ 24 ಗಂಟೆಯೂ ಭಗವಂತನ ಸೇವೆಯಲ್ಲಿ ನಿರತರಾಗಿರಬಹುದು. ನಾನು ದಿನಕ್ಕೆ 8 ತಾಸು ಸೇವೆ ಸಲ್ಲಿಸುತ್ತಿರಬಹುದು. ಆದರೆ ಹಾಗೆಂದು ನನಗೆ ಭಗವಂತನಲ್ಲಿ ಪ್ರೀತಿ ಇಲ್ಲವೆಂದಲ್ಲ.”

ಭಕ್ತ : ಈ ವಿಧದಲ್ಲಿ ಭಗವಂತನ ಪವಿತ್ರನಾಮವನ್ನು ಜಪಿಸುವುದನ್ನು ಎಲ್ಲರೂ ಸ್ವೀಕರಿಸುತ್ತಾರೆ ಎಂದು ಶಾಸ್ತ್ರಗಳು, ವೈದಿಕ ಗ್ರಂಥಗಳು ಭವಿಷ್ಯ ನುಡಿದಿದ್ದವು.

ಶ್ರೀಲ ಪ್ರಭುಪಾದ  : “ಅದು ನಿಮ್ಮ ಶಾಸ್ತ್ರದಲ್ಲಿರಬಹುದು. ಆದರೆ ನಾವು ಬೈಬಲ್‌ ಅನ್ನು ಅನುಸರಿಸುತ್ತೇವೆ. ನಾವು ಚರ್ಚ್‌ಗೆ ಹೋಗಿ ಸ್ತುತಿ ಗೀತೆ ಹಾಡುತ್ತೇವೆ.”

ಭಕ್ತ  : ವಾಸ್ತವವೇನೆಂದರೆ, ನಿಮಗೆ ದೇವರು ಯಾರೆಂದು ತಿಳಿಯದು ಮತ್ತು ಭಗವಂತನ ಕಾರ್ಯ ನಿರ್ವಹಣೆ ಹೇಗೆಂದು ನಿಮಗೆ ಗೊತ್ತಿಲ್ಲ.

ಶ್ರೀಲ ಪ್ರಭುಪಾದ  : “ಇಲ್ಲ. ನನ್ನದೇ ರೀತಿಯಲ್ಲಿ ನನಗೆ ಗೊತ್ತು.”

ಭಕ್ತ  : ಅವರೆಲ್ಲ ಇಂತಹ ವಾದಗಳನ್ನು ನೀಡಬಹುದು. ಆದರೆ, ನಾವು ನೋಡುತ್ತಿರುವಂತೆ ಅನೇಕ ಕ್ರಿಶ್ಚಿಯನ್ನರು ತಮ್ಮದೇ ಬೈಬಲ್‌ ಬೋಧನೆಯನ್ನೂ ಅನುಸರಿಸುವುದಿಲ್ಲ.

ಶ್ರೀಲ ಪ್ರಭುಪಾದ  : ಇಲ್ಲಿ ನೀವು ವಾಸ್ತವಿಕ ಅಂಶದತ್ತ ಬಂದಿದ್ದೀರಿ. ನೀವು ಭಗವಂತನನ್ನು ಪ್ರೀತಿಸಿದರೆ ಅವನ ಆದೇಶವನ್ನು ಏಕೆ ಪಾಲಿಸುವುದಿಲ್ಲ? ಭಗವಂತನಿಗೆ ನಿಮ್ಮ ಅವಿಧೇಯತನವೆಂದರೆ ನೀವು ಅವನನ್ನು ಪ್ರೀತಿಸುವುದಿಲ್ಲ. ಏಸುಕ್ರಿಸ್ತ ಹೇಳುತ್ತಾನೆ, `ನೀವು ಕೊಲ್ಲಬಾರದು.’ ಆದರೂ ನೀವು ಯಾಕೆ ಲಕ್ಷಾಂತರ ಹಸುಗಳನ್ನು ಕಸಾಯಿಖಾನೆಯಲ್ಲಿ ಕೊಲ್ಲುತ್ತಿರುವಿರಿ? ಕ್ರಿಶ್ಚಿಯನ್ನರಿಗೆ ನಾನು ನೀಡುವ ಆರೋಪವಿದು.

ಭಕ್ತ  : ಆದರೆ ಅವರು ಹೇಳುತ್ತಾರೆ, “ಪ್ರಾಣಿವಧೆಗೆ ನಮಗೆ ಅವಕಾಶ ನೀಡಲಾಗಿದೆ. ಅಲ್ಲದೆ, ನಾನು ಕ್ರಿಸ್ತನನ್ನು ನನ್ನ ರಕ್ಷಕ ಎಂದು ಸ್ವೀಕರಿಸಿದ್ದೇನೆ. ಆದುದರಿಂದ ನಾನು ಬದುಕಿದೆ. ನಾನು ಕ್ರಿಶ್ಚಿಯನ್‌ ಧರ್ಮವನ್ನು ನಿಕಟವಾಗಿ ಅನುಸರಿಸುತ್ತಿರುವೆ.”

ಶ್ರೀಲ ಪ್ರಭುಪಾದ  : ಇಲ್ಲ, ಇಲ್ಲ. ನೀವು ದೇವರನ್ನು ಪ್ರೀತಿಸಿದರೆ ಅವನ ಆದೇಶವನ್ನು ಯಾಕೆ ಉಲ್ಲಂಘಿಸುವಿರಿ? ಜೀಸಸ್‌ ಬಹಿರಂಗವಾಗಿ ಘೋಷಿಸಿದ್ದಾನೆ, `ನೀವು ಕೊಲ್ಲಬಾರದು.’ ಆದರೆ ನೀವು ಉದ್ದೇಶಪೂರಕವಾಗಿ ಅವನಿಗೆ ಅವಿಧೇಯತೆಯನ್ನು ತೋರುತ್ತಿರುವಿರಿ. ಆದುದರಿಂದ ದೇವರಿಗೆ ನಿಮ್ಮ ಪ್ರೀತಿ ಎಲ್ಲಿ?

ಈ ಲೇಖನ ಶೇರ್ ಮಾಡಿ