ಗುರುವಿನ ಅಗತ್ಯ ಯಾರಿಗೆ?

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು 1966ರ ಆಗಸ್ಟ್‌ 15 ರಂದು ನ್ಯೂಯಾರ್ಕ್‌ನಲ್ಲಿ ಮಾಡಿದ ಉಪನ್ಯಾಸ.

ತದ್‌ ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ ।

ಉಪದೇಕ್ಷ್ಯನ್ತಿ ತೇ ಜ್ಞಾನಂ ಜ್ಞಾನಿನಸ್ತತ್ತ್ವದರ್ಶಿನಃ ॥

ಗುರುವಿನ ಬಳಿಗೆ ಹೋಗಿ ಸತ್ಯವನ್ನು ತಿಳಿದುಕೊಳ್ಳಲು ಪ್ರಯತ್ನಿಸು. ನಮ್ರನಾಗಿ ಅವರಿಗೆ ಪ್ರಶ್ನೆಮಾಡು ಮತ್ತು ಅವರಿಗೆ ಸೇವೆ ಮಾಡು. ಆತ್ಮಸಾಕ್ಷಾತ್ಕಾರ ಪಡೆದ ವ್ಯಕ್ತಿಗಳು ಸತ್ಯವನ್ನು ಕಂಡಿದ್ದಾರೆ. ಆದುದರಿಂದ ಅವರು ನಿನಗೆ ಜ್ಞಾನೋಪದೇಶ ಮಾಡಬಲ್ಲರು. (ಭಗವದ್ಗೀತೆ 4.34)

ನಾವು ಮಾಡಬೇಕೆಂದು ನಿರೀಕ್ಷಿಸುವ ಯಜ್ಞಗಳಲ್ಲಿ ಜ್ಞಾನ ಪ್ರಾಪ್ತಿಯ ಯಜ್ಞವೇ ಅತ್ಯುತ್ತಮ ಎಂದು ಶ್ರೀಕೃಷ್ಣನು ಅಂತಿಮವಾಗಿ ಹೇಳುತ್ತಾನೆ. ಮೌಢ್ಯವೇ ನಮ್ಮ ಲೌಕಿಕ ಬದ್ಧ ಜೀವನಕ್ಕೆ ಕಾರಣ. ಆದುದರಿಂದ ಯಜ್ಞ, ತಪಸ್ಯೆ, ಯೋಗ ಮತ್ತು ಅಧ್ಯಾತ್ಮ ಸಂವಾದದ ಉದ್ದೇಶವು ಜ್ಞಾನ ಸಂಪಾದನೆಯಾಗಿದೆ.

ಅಲೌಕಿಕ ಜ್ಞಾನವನ್ನು ಮೂರು ದೃಷ್ಟಿಕೋನದಿಂದ ನೋಡಲಾಗುವುದು: ಬ್ರಹ್ಮನ್‌ ಜ್ಞಾನ ಅಥವಾ ನಿರಾಕಾರ ಪರಮ ಸತ್ಯ; ಅಂತರ್ಯಾಮಿಯಾದ ಪರಮಾತ್ಮನ ಜ್ಞಾನ ಮತ್ತು ದೇವೋತ್ತಮ ಪರಮ ಪುರುಷನಾದ ಭಗವಂತನ ಜ್ಞಾನ. ಜ್ಞಾನಾಭಿವೃದ್ಧಿಯ ಮೊದಲ ಹಂತದಲ್ಲಿ ನಾವು ಏನನ್ನು ಅರ್ಥ ಮಾಡಿಕೊಳ್ಳಬೇಕು? `ನಾನು ದೇಹವಲ್ಲ. ನಾನು ಆಧ್ಯಾತ್ಮಿಕ ಆತ್ಮ. ನನ್ನ ಬದುಕಿನ ಪರಮ ಗುರಿ ಎಂದರೆ ಈ ಲೌಕಿಕ ಜಗತ್ತಿನ ಸರಪಳಿಯಿಂದ ಮುಕ್ತಿ ಪಡೆಯುವುದು’ ಇದು ಮನವರಿಕೆಯಾಗಬೇಕು.

ತತ್ತ್ವ, ಪರಮ ಸತ್ಯವನ್ನು ನಾವು ಮೂರು ದೃಷ್ಟಿಯಿಂದ ಗ್ರಹಿಸಬಹುದೆಂದು ಶ್ರೀಮದ್‌ ಭಾಗವತದಿಂದ ನಾವು ಅರಿಯುತ್ತೇವೆ. ಅವುಗಳೆಂದರೆ, ಬ್ರಹ್ಮೇತಿ ಪರಮಾತ್ಮೇತಿ ಭಗವಾನ್‌ ಇತಿ ಶಬ್ದ್ಯತೇ ಬ್ರಹ್ಮನ್‌, ಪರಮಾತ್ಮ ಮತ್ತು ಭಗವಾನ್‌. ವಿಷ್ಣು ಅಥವಾ ದೇವರ ವಿವಿಧ ರೂಪಗಳನ್ನು ವರ್ಣಿಸಿದ ಮೇಲೆ ಭಾಗವತ ಹೇಳುತ್ತದೆ, ಕೃಷ್ಣಸ್ತು ಭಗವಾನ್‌ ಸ್ವಯಂ ಶ್ರೀ ಕೃಷ್ಣನು ದೇವೋತ್ತಮ ಪರಮ ಪುರುಷನಾದ ಭಗವಂತ.

ಭಗವಂತನು ಅನೇಕ ರೀತಿಯಲ್ಲಿ ವಿಸ್ತಾರಗೊಳ್ಳುತ್ತಾನೆ. ಜೀವಿಗಳಾದ ನಾವೂ ಕೂಡ ಭಗವಂತನ ವಿಸ್ತರಣೆಗಳು. ವಿಸ್ತರಣೆಯ ವಿವಿಧ ಹಂತಗಳಿವೆ, ಆದರೆ ಕೇಂದ್ರಬಿಂದು ಶ್ರೀ ಕೃಷ್ಣನೇ. ದೇವೋತ್ತಮ ಪರಮ ಪುರುಷನ ಸಾವಿರಾರು ಅವತಾರಗಳಿವೆ. ಶ್ರೀಮದ್‌ ಭಾಗವತದಲ್ಲಿ ಆವಿರ್ಭಾವದ ಪಟ್ಟಿ ನೀಡಿದ ಮೇಲೆ ಈ ನಿರ್ಣಯ ಕೊಡಲಾಗಿದೆ; ಏತೇ ಚಾಂಶ ಕಲಾಃ ಪುಂಸಃ ಕೃಷ್ಣಸ್ತು ಭಗವಾನ್‌ ಸ್ವಯಂ. ದೇವೋತ್ತಮ ಪರಮ ಪುರುಷನ ಎಲ್ಲ ಅವತಾರಗಳು ಕೃಷ್ಣನ ಸ್ವಾಂಶ ಸ್ವರೂಪಗಳು ಅಥವಾ ಸ್ವಾಂಶ ಸ್ವರೂಪದ ರೂಪಗಳು ಎಂದು ಭಾಗವತದ ಕರ್ತೃ ಹೇಳುತ್ತಾರೆ. ಅವತಾರಗಳು ಆಗುತ್ತಿದ್ದಂತೆ ಕೃಷ್ಣನೂ ಪ್ರತ್ಯಕ್ಷನಾಗಿದ್ದಾನೆ. ಅಧರ್ಮ ಹೆಚ್ಚಾದಾಗ ತಾನು ಬರುವುದಾಗಿ ಅವನು ಸಾರಿದ್ದಾನೆ. ಆದುದರಿಂದ ಅವನನ್ನು ಮೂಲ ದೇವೋತ್ತಮ ಪರಮ ಪುರುಷನೆಂದು ಒಪ್ಪಿಕೊಳ್ಳಲಾಗಿದೆ.

ಮತ್ತೊಂದು ವೈದಿಕ ಸಾಹಿತ್ಯವಾದ ಬ್ರಹ್ಮ ಸಂಹಿತೆಯಲ್ಲಿ ಕೂಡ ಕೃಷ್ಣನ ಸ್ಥಾನವನ್ನು  ಸ್ಪಷ್ಟಪಡಿಸಲಾಗಿದೆ:

ಈಶ್ವರಃ ಪರಮಃ ಕೃಷ್ಣಃ ಸತ್‌-ಚಿದ್‌-ಆನಂದ ವಿಗ್ರಹಃ ।

ಅನಾದಿರ್‌ ಆದಿರ್‌ ಗೋವಿಂದಃ ಸರ್ವ ಕಾರಣ ಕಾರಣಂ ॥

ಅನೇಕ ದೇವರುಗಳುಂಟು. ಒಂದು ದೃಷ್ಟಿಯಲ್ಲಿ ನಾವೂ ಕೂಡ ದೇವರೇ. ಅಕ್ಷರಶಃ `ದೇವರು’ ಎಂದರೆ ನಿಯಂತ್ರಕ, ಈಶ್ವರ. ನಮ್ಮಲ್ಲಿ ಪ್ರತಿಯೊಬ್ಬರಿಗೂ ಸ್ವಲ್ಪವಾದರೂ ನಿಯಂತ್ರಣ ಶಕ್ತಿ ಇದೆ. ನಾವು ಮನೆಯನ್ನು ಅಥವಾ ಕಚೇರಿಯನ್ನು ಅಥವಾ ರಾಜ್ಯವನ್ನು ಅಥವಾ ಪುರಸಭೆಯನ್ನು ನಿಯಂತ್ರಿಸುತ್ತೇವೆ. ಪ್ರತಿಯೊಬ್ಬರೂ ನಿಯಂತ್ರಕರೇ ಆದರೆ ನಾವು ಯಾರೂ ಪರಮ ನಿಯಂತ್ರಕರಲ್ಲ.

ಇಡೀ ವಿಶ್ವದ ನಿಯಂತ್ರಣ ಬ್ರಹ್ಮನಲ್ಲಿದೆ. ಅನೇಕ ವಿಶ್ವಗಳಿದ್ದು ಅನೇಕ ಬ್ರಹ್ಮಗಳಿದ್ದಾರೆ. ಅವರನ್ನು ನಿಯಂತ್ರಿಸುವವನು  ಗರ್ಭೋದಕಶಾಯಿ ವಿಷ್ಣು. ಈ ಗರ್ಭೋದಕಶಾಯಿ ವಿಷ್ಣುವನ್ನು ನಿಯಂತ್ರಿಸುವವನು ಮಹಾವಿಷ್ಣು. ಮಹಾವಿಷ್ಣುವು ಸಂಕರ್ಷಣನ ಹತೋಟಿಯಲ್ಲಿರುತ್ತಾನೆ. ನಾರಾಯಣನು ಸಂಕರ್ಷಣನನ್ನು ನಿಯಂತ್ರಿಸುತ್ತಾನೆ.  ನಾರಾಯಣನನ್ನು ನಿಯಂತ್ರಿಸುವವನು ವಾಸುದೇವ. ಬಲದೇವನು ವಾಸುದೇವನನ್ನು ನಿಯಂತ್ರಿಸುತ್ತಾನೆ.  ಮತ್ತು ಶ್ರೀ ಕೃಷ್ಣನು ಬಲದೇವನನ್ನು ನಿಯಂತ್ರಿಸುತ್ತಾನೆ. ಆದುದರಿಂದ ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ, ಮತ್ತಃ ಪರತರಂ ನಾನ್ಯತ್‌ ಕಿಂಚಿದಸ್ತಿ ಧನಂಜಯ: `ನನ್ನ ಪ್ರೀತಿಯ ಅರ್ಜುನ, ನನಗಿಂತ ಶ್ರೇಷ್ಠರಾದವರು ಇಲ್ಲ.’ ಅದಕ್ಕೆ ಅರ್ಜುನ ಉತ್ತರಿಸುತ್ತಾನೆ, `ನೀನು ಅಸಮೋರ್ದವ – ಯಾರೂ ನಿನಗೆ ಸಮಾನರಲ್ಲ. ಮತ್ತು ಯಾರೂ ನಿನಗಿಂತ ಶ್ರೇಷ್ಠರಲ್ಲ.’

ನಮ್ಮ ಆಧ್ಯಾತ್ಮಿಕ ಮಾರ್ಗದಲ್ಲಿ, ವೃಂದಾವನದ ಆರು ಗೋಸ್ವಾಮಿಗಳು ಶ್ರೇಷ್ಠ ವಿದ್ವಾಂಸರು. ಅದರಲ್ಲಿಯೂ ವಿಶೇಷವಾಗಿ, ಜೀವ ಗೋಸ್ವಾಮಿಯವರು. ಅವರು ಪರಮ ಸತ್ಯವಾದ ದೇವೋತ್ತಮ ಪರಮ ಪುರುಷನ ಲಕ್ಷಣಗಳನ್ನು ವಿಶ್ಲೇಷಿಸಿ, ದೇವೋತ್ತಮ ಪರಮ ಪುರುಷನಿಗೆ ಇರಬೇಕಾದ ಎಲ್ಲ ಅಲೌಕಿಕ ಗುಣಗಳು ಕೃಷ್ಣನಲ್ಲಿ ಇದೆ ಎಂದು ಸ್ಥಾಪಿಸಿದರು. ಪರಮ ಸತ್ಯದ ಅಲೌಕಿಕ ಲಕ್ಷಣಗಳಲ್ಲಿ ನಾರಾಯಣನಲ್ಲಿ ಶೇಕಡ 94ರಷ್ಟು ಇದೆ. ಶಿವನಲ್ಲಿ ಶೇಕಡ 84 ಮತ್ತು ಜೀವಿಗಳಾದ ನಮ್ಮಲ್ಲಿ ಶೇಕಡ 78ರಷ್ಟಿದೆ. ಮತ್ತು ನಮಗೆ ಈ ಗುಣಗಳಿರುವುದು ಭಾಗಶಃ, ಪೂರ್ಣವಲ್ಲ.

ಜ್ಞಾನ ಪ್ರಾಪ್ತಿಯೇ ಅತ್ಯುತ್ತಮ ಯಜ್ಞ ಎಂದು ಕೃಷ್ಣ ಹೇಳಿದ್ದಾನೆ. ಅನೇಕ ವಿಧವಾದ ತ್ಯಾಗ ಅಥವಾ ಯಜ್ಞಗಳಿವೆ. ಅವುಗಳ ಬಗೆಗೆ ಗೀತೆಯಲ್ಲಿ ಹೇಳಲಾಗಿದೆ: ದ್ರವ್ಯ-ಯಜ್ಞ (ತನ್ನ ಸ್ವತ್ತನ್ನು ತ್ಯಜಿಸುವುದು), ಜ್ಞಾನ-ಯಜ್ಞ (ದಿವ್ಯ ಜ್ಞಾನ ಪ್ರಗತಿಯ ಯಜ್ಞ), ಯೋಗ-ಯಜ್ಞ (ಅಷ್ಟಾಂಗ ಯೋಗದ ಯಜ್ಞ). ಆದರೆ ಇಲ್ಲಿ ಕೃಷ್ಣ ಹೇಳುವುದು ಏನೆಂದರೆ, ಈ ರೀತಿಯಲ್ಲಿ: ಎಲ್ಲ ಯಜ್ಞಗಳೂ ನಿಜವಾದ ಜ್ಞಾನದತ್ತ ಬರುವ ಹೆಜ್ಜೆಗಳು. ಇಲ್ಲಿ, ನ್ಯೂಯಾರ್ಕಿನಲ್ಲಿ, ನಿಮ್ಮ ಎಂಪೈರ್‌ ಸ್ಟೇಟ್‌ ಕಟ್ಟಡವಿದೆ. ನೀವು 25, 50, 70, 75, 80ನೇ ಮಹಡಿವರೆಗೆ ಹೋಗಬಹುದು. ಆದರೆ ನೀವು 102ನೇ ಮಹಡಿಯನ್ನು ಮುಟ್ಟುವವರೆಗೂ ನೀವು ಪೂರ್ಣ ಪ್ರಗತಿ ಸಾಧಿಸಿರುವುದಿಲ್ಲ. ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ, ಬಹೂನಾಂ ಜನ್ಮನಾಮನ್ತೇ ಜ್ಞಾನವಾನ್ಮಾಂ ಪ್ರಪದ್ಯತೇ ಅನೇಕ ಜನ್ಮಗಳ ಅನಂತರ ವಾಸ್ತವದಲ್ಲಿ ಜ್ಞಾನದಲ್ಲಿರುವವನು ದೇವೋತ್ತಮ ಪರಮ ಪುರುಷ ಶ್ರೀಕೃಷ್ಣನಿಗೆ ಶರಣಾಗುತ್ತಾನೆ. ಅದೇ ಜ್ಞಾನದ ಅತ್ಯುನ್ನತ ಹಂತ. ಕೃಷ್ಣ ಅರ್ಜುನನಿಗೆ ಬುದ್ಧಿವಾದ ಹೇಳುತ್ತಾನೆ, ಸರ್ವ-ಧರ್ಮಾನ್‌ ಪರಿತ್ಯಜ್ಯ ಮಾಮ್‌ ಏಕಂ ಶರಣಂ ವ್ರಜ : `ನೀನು ನನ್ನ ಆತ್ಮೀಯ ಮಿತ್ರನಾದ ಕಾರಣ ನಾನು ನಿನಗೆ ಹೇಳುತ್ತಿದ್ದೇನೆ, ಯಾವುದರ ಬಗೆಗೂ ಹೆದರ ಬೇಡ. ಸುಮ್ಮನೆ ನನಗೆ ಶರಣಾಗು.’ ಇದು ಅತ್ಯಂತ ಗೌಪ್ಯವಾದ ಜ್ಞಾನ.

ಕೃಷ್ಣನಿಗೆ ಶರಣಾಗುವುದೇ ಅಂತಿಮ ಜ್ಞಾನ ಎಂಬುವುದು ವೈದಿಕ ಸಾಹಿತ್ಯದ ವಿಶ್ಲೇಷಣೆಯಿಂದ ತಿಳಿದುಬರುತ್ತದೆ. ಯಾವ ರೀತಿಯ ಶರಣಾಗತಿ? ಸಂಪೂರ್ಣ ಜ್ಞಾನದಿಂದ ಶರಣಾಗು. ವಾಸುದೇವಃ ಸರ್ವಂ ಇತಿ, ಎಲ್ಲವೂ ವಾಸುದೇವ, ಕೃಷ್ಣ ಎಂಬುವುದು ಯಾವಾಗ ಅರ್ಥವಾಗುತ್ತದೆ? ಸ್ವಯಂ ಸಾಕ್ಷಾತ್ಕಾರ ಅಥವಾ ಅಲೌಕಿಕ ಸಾಕ್ಷಾತ್ಕಾರದ ಎಲ್ಲ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಿ, ಪರಿಶೀಲಿಸಿ ಪರಿಪೂರ್ಣತೆಯತ್ತ ಅವರಿಗೆ ಇದು ಅರ್ಥವಾಗುತ್ತದೆ. ಬ್ರಹ್ಮ ಸಂಹಿತೆಯಲ್ಲಿಯೂ ಇದನ್ನು ಸ್ಪಷ್ಟಪಡಿಸಲಾಗಿದೆ.

ಈಶ್ವರಃ ಪರಮಃ ಕೃಷ್ಣಃ ಸತ್‌-ಚಿದ್‌-ಆನಂದ ವಿಗ್ರಹಃ ।

ಅನಾದಿರ್‌ ಆದಿರ್‌ ಗೋವಿಂದಃ ಸರ್ವ ಕಾರಣ ಕಾರಣಂ ॥

ಸರ್ವ ಕಾರಣ ಕಾರಣಂ ಎಂದರೆ `ಎಲ್ಲ ಕಾರಣಗಳ ಕಾರಣ.’ ಇದು ಹೀಗೆ. ನನ್ನ ಬಳಿ ನನ್ನ ದೇಹವಿದೆ. ಅದಕ್ಕೆ ಕಾರಣರಾರು? ಅದಕ್ಕೆ ನನ್ನ ತಂದೆ ಕಾರಣರು. ನನ್ನ ತಂದೆಯ ದೇಹಕ್ಕೆ ಅವರ ತಂದೆ ಕಾರಣರು. ಈ ರೀತಿ ನಾವು ಕಾರಣ ಹುಡುಕುತ್ತಾ ಹೋಗುತ್ತೇವೆ – ತಂದೆ, ಅವರ ತಂದೆ, ಮತ್ತವರ ತಂದೆ… ನೀವು ನಿಮ್ಮ ಮುತ್ತಾತನನ್ನು ನೋಡಿಲ್ಲವೆಂದು ನಿಮ್ಮ ತಾತನಿಗೆ ತಂದೆ ಇರಲಿಲ್ಲವೆಂದು ಯೋಚಿಸಬಾರದು. `ನನ್ನ ದೃಷ್ಟಿಗೆ ಗೋಚರವಾಗದ್ದು ಅಸ್ತಿತ್ವದಲ್ಲೇ ಇಲ್ಲ’ ಎಂದು ಖಂಡಿತ ಯೋಚಿಸಬಾರದು. ಅದು ಬುದ್ಧಿವಂತಿಕೆಯ ನಿರ್ಣಯವಲ್ಲ. ಈ ಗೋಡೆಯಾಚೆ ಏನು ನಡೆಯುತ್ತಿದೆ ಎಂಬುವುದನ್ನು ನೋಡಲಾಗುವುದಿಲ್ಲ ಎಂದರೆ ಗೋಡೆಯಾಚೆ ಏನೂ ಇಲ್ಲವೆಂದು ಅರ್ಥವಲ್ಲ.

ಎಲ್ಲರಿಗೂ ಅಷ್ಟೆ, ದೇವರನ್ನು ತತ್‌ಕ್ಷಣ ನೋಡಬೇಕೆಂಬುದೇ ಆಗಿದೆ. ನೀವು ದೇವರನ್ನು ನೋಡಬೇಕೆಂದರೆ ನೀವು ಸಂಪೂರ್ಣವಾಗಿ ಅರ್ಹರಾಗಿರಬೇಕು. ನೀವು ಪರಿಪೂರ್ಣ ಜ್ಞಾನ ಹೊಂದಿದರೆ ನೀವು ಭಗವಂತನನ್ನು ನಿಮ್ಮೆದುರಿಗೇ ನೋಡಬಹುದು. ನಾನೂ ನೀವೂ ಈಗ ಪರಸ್ಪರ ನೋಡುತ್ತಿಲ್ಲವೆ, ಅದೇ ರೀತಿ ನೀವು ಭಗವಂತನನ್ನು ನೋಡುವುದು ಸಾಧ್ಯ. ಆದರೆ ಅದಕ್ಕೆ ಅರ್ಹತೆ ಬೇಕು. ಯಾವುದು ಆ ಅರ್ಹತೆ? ಕೃಷ್ಣ ಪ್ರಜ್ಞೆಯೇ ಆ ಅರ್ಹತೆ.

ಕೃಷ್ಣ ಪ್ರಜ್ಞೆ ಆರಂಭವಾಗುವುದು ಶ್ರವಣಂ ಕೀರ್ತನಂನಿಂದ ಅಂದರೆ, ಕೇಳುವುದು ಮತ್ತು ಜಪಿಸುವುದರಿಂದ. ನಾವು ಕೃಷ್ಣನನ್ನು ಕುರಿತು ಕೇಳಬೇಕು. ಕೃಷ್ಣನನ್ನು ಅರ್ಥ ಮಾಡಿಕೊಳ್ಳಲು ಅಥವಾ ಕೇಳಲು ಭಗವದ್ಗೀತೆಯು ಪ್ರಾಥಮಿಕ ಅಧ್ಯಯನವಾಗಿದೆ.

ನಾನು ನಿಮ್ಮ ದೇಶ, ಅಮೆರಿಕದ ಬಗ್ಗೆ ಕೇಳಿದ ಅನಂತರ ಬಂದೆ – ಶಾಲೆಯಲ್ಲಂತೂ ಅಮೆರಿಕದ ಇತಿಹಾಸ, ಭೂಗೋಳ ಓದಿದ್ದೆವಲ್ಲ. ಸಾಕಷ್ಟು ಕೇಳಿದ ಮೇಲೆಯೆ ಇಲ್ಲಿಗೆ ಬಂದದ್ದು.  `ಓ! ಅದ್ಭುತ ದೇಶ! ಅದೆಷ್ಟು ದೂರದಲ್ಲಿದೆ… ನನಗೆ ಹೋಗುವುದು ಸಾಧ್ಯವಾದರೆ’ ಎಂದು ಆಗ ಅಂದುಕೊಂಡಿದ್ದೆ. ಅದೇ ರೀತಿ ನೀವೂ ಕೂಡ ಭಾರತದ ಬಗೆಗೆ ಕೇಳಿರುತ್ತೀರಿ. ಅದನ್ನು ಕುರಿತು ಅರಿತಿರುತ್ತೀರಿ. ಅಲ್ಲಿಗೆ ಹೋಗುವ ಯೋಚನೆಯನ್ನೂ ಮಾಡಿರುತ್ತೀರಿ.

ದೇವರನ್ನು ನೋಡಬೇಕೆನಿಸಿದರೆ ಮೊದಲು ನಾವು ಅವನ ಬಗೆಗೆ ಕೇಳಿಸಿಕೊಳ್ಳಬೇಕು. ಅದೇ ಸೂಕ್ತ ವಿಧಾನ. ಕೃಷ್ಣ ಪ್ರಜ್ಞೆಯ ವಿಧಿ ವಿಧಾನವು ಕೇಳುವುದರಿಂದಲೇ ಆರಂಭವಾಗುತ್ತದೆ, ಶ್ರವಣಂ. ಅನಂತರ ಕೀರ್ತನೆ. ಕೀರ್ತನೆ ಎಂದರೇನು? ಕೃಷ್ಣನ ವೈಭವ, ಪವಿತ್ರ ನಾಮ, ಸ್ವರೂಪ, ಗುಣಗಳನ್ನು ಪಠಿಸುವುದೇ ಕೀರ್ತನೆ. ಇದು ಕೃಷ್ಣನೊಂದಿಗಿನ ಸಂಪರ್ಕ. ಏಕೆಂದರೆ ಕೃಷ್ಣ ಅಥವಾ ಭಗವಂತ ಪರಾತ್ಪರ. ಅವನು ತನ್ನ ಹೆಸರಿನಿಂದ, ಗುಣಗಳಿಂದ, ಸ್ವರೂಪದಿಂದ, ಲೀಲೆಗಳಿಂದ ಭಿನ್ನನಲ್ಲ. ಆದುದರಿಂದ ಪರಮ, ಪರಾತ್ಪರನ ಗುಣಗಳು ಅಥವಾ ನಾಮವನ್ನು ಕೇಳುವುದು ಮತ್ತು ಸಂಕೀರ್ತನೆ ಮಾಡುವುದು ಎಂದರೆ ದೇವೋತ್ತಮ ಪರಮ ಪುರುಷನೊಂದಿಗೆ ಸಂಪರ್ಕ ಎಂದೇ ಅರ್ಥ. ಅದು ನೇರವಾದ ಅಲೌಕಿಕ ಸಂಪರ್ಕ. ನಾವು ಕೃಷ್ಣನ ಸಂಪರ್ಕ ಸಾಧಿಸುತ್ತಾ ಹೋದಂತೆ, ಅವನನ್ನು ಅರ್ಥಮಾಡಿಕೊಳ್ಳಲು ಅವನು ನಮಗೆ ನೆರವಾಗುತ್ತಾನೆ.

ಶೃಣ್ವತಾಂ ಸ್ವಕಥಾಃ ಕೃಷ್ಣಃ ಪುಣ್ಯಶ್ರವಣಕೀರ್ತನಃ ।

ಹೃದ್ಯಂತಃಸ್ಥೋ ಹ್ಯಭದ್ರಾಣಿ ವಿಧುನೋತಿ ಸುಹೃತ್ಸತಾಮ್‌ ॥

“ಪರಮ ಪುರುಷ ಶ್ರೀ ಕೃಷ್ಣ ಎಲ್ಲರ ಹೃದಯದಲ್ಲಿ ನೆಲಸಿರುವ ಪರಮ ಆತ್ಮ.  ಸತ್ಯನಿಷ್ಠರಾದ ಭಕ್ತರಿಗೆ ಉಪಕಾರಿ.  ಆತನ ಸಂದೇಶವನ್ನು ಕೇಳಲು ಆಸೆಯನ್ನು ಬೆಳೆಸಿಕೊಂಡಿರುವ ಭಕ್ತರ ಮನಸ್ಸಿನಿಂದ ಐಹಿಕ ಭೋಗಲಾಲಸೆಯನ್ನು ದೂರಮಾಡುವನು.  ಆ ಸಂದೇಶವನ್ನು ಸಮರ್ಪಕವಾಗಿ ಕೇಳುವುದೇ ಪಠಿಸುವುದೇ ಪುಣ್ಯಕಾರಕವಾಗಿದೆ.”

ಕೃಷ್ಣನು ನಿಮ್ಮ ಹೃದಯದಲ್ಲಿ ಕುಳಿತಿದ್ದಾನೆ. ಅವನು ನಿಮ್ಮ ಆಧ್ಯಾತ್ಮಿಕ ಗುರುವಾಗಿ ಚೈತ್ಯ ಗುರುವಾಗಿ ವರ್ತಿಸುತ್ತಿದ್ದಾನೆ. ಕೃಷ್ಣ ಕಥೆಯನ್ನು ಕೇಳುವುದು ಪುಣ್ಯ ಶ್ರವಣ ಕೀರ್ತನಃ ಅದು ನಿಮಗೆ ಅರ್ಥವಾಗದಿದ್ದರೂ ನಿಮ್ಮ ಪುಣ್ಯವನ್ನು ವರ್ಧಿಸುತ್ತದೆ. ಎಷ್ಟೋ ವರ್ಷಗಳ ಭೌತಿಕ ಪ್ರಕೃತಿಯ ಸಹವಾಸದಿಂದ ನಮ್ಮ ಹೃದಯದಲ್ಲಿ ಕಲ್ಮಷವನ್ನು ನಾವು ಸಂಗ್ರಹಿಸಿದ್ದೇವೆ. ಕೃಷ್ಣನ ಕುರಿತು ಕೇಳುವುದರಿಂದ ಹೃದಯವು ಕ್ರಮೇಣ ಪರಿಶುದ್ಧವಾಗುತ್ತದೆ.

ಶ್ರೀಕೃಷ್ಣನು ಎಲ್ಲರಿಗೂ ಮಿತ್ರ. ಆದರೆ ಅವನು ಭಕ್ತರಿಗೆ ಮಾತ್ರ ವಿಶೇಷ ಸ್ನೇಹಿತ.  ಇದನ್ನು ನೀವು ಭಗವದ್ಗೀತೆಯಲ್ಲಿ ನೋಡಬಹುದು:

ಸಮೋಽಹಂ ಸರ್ವಭೂತೇಷು ನ ಮೇ ದ್ವೇಷ್ಯೋಽಸ್ತಿ ನ ಪ್ರಿಯಃ ।

“ನನಗೆ ಯಾರ ವಿಷಯದಲ್ಲಿಯೂ ಅಸೂಯೆಯಿಲ್ಲ. ನಾನು ಯಾರ ಪರವಾಗಿಯೂ ಪಕ್ಷಪಾತ ಮಾಡುವುದಿಲ್ಲ. ನಾನು ಎಲ್ಲರ ವಿಷಯದಲ್ಲಿಯೂ ಸಮನಾಗಿ ಇರುತ್ತೇನೆ. ಆದರೆ ಯಾವಾತನು ನನ್ನ ಭಕ್ತಿಸೇವೆಯನ್ನು ಮಾಡುವನೋ ಆತನು ನನ್ನ ಸ್ನೇಹಿತನು, ನನ್ನಲ್ಲಿದ್ದಾನೆ ಮತ್ತು ನಾನು ಅವನಿಗೆ ಸ್ನೇಹಿತ.” (ಭಗವದ್ಗೀತೆ  9.29)

ಆದ್ದರಿಂದ ಸುಹೃತ್‌ ಸತಾಮ್‌ ಕೃಷ್ಣನ ಒಂದು ಹೆಸರು. ಸುಹೃತ್‌ ಎಂದರೆ ಮಿತ್ರ ಮತ್ತು ಸತಾಮ್‌ ಎಂದರೆ ಶಾಶ್ವತ ಜೀವನಕ್ಕಾಗಿ ಪ್ರಯತ್ನಿಸುತ್ತಿರುವವರು.

ಲೌಕಿಕ ಜಗತ್ತಿನಲ್ಲಿ ನಮಗೆ ಶಾಶ್ವತವಾದದ್ದು ಏನೂ ಲಭ್ಯವಾಗುವುದಿಲ್ಲ; ಎಲ್ಲವೂ ತಾತ್ಕಾಲಿಕ. ಆದುದರಿಂದ ಲೌಕಿಕ ಜಗತ್ತನ್ನು ಅಸತ್‌ ಎಂದು ಕರೆಯುತ್ತಾರೆ. ವೇದದ ಆದೇಶವು ಅಸತೋ ಮಾ ಸದ್‌ ಗಮಃ  `ತಾತ್ಕಾಲಿಕ ಜಗತ್ತಿನಲ್ಲಿಯೇ ಇರಬೇಡಿ. ಶಾಶ್ವತ ವಿಶ್ವಕ್ಕೆ ಹೋಗಲು ಪ್ರಯತ್ನಿಸಿ.’  ತಮಸೋಮಾ ಜ್ಯೋತಿರ್‌ ಗಮಯ `ಕತ್ತಲಿನಲ್ಲಿಯೇ ಇರಬೇಡಿ. ಬೆಳಕಿನ ಸಾಮ್ರಾಜ್ಯಕ್ಕೆ ಹೋಗಿ.’ ಇವು ವೇದದ ಆದೇಶಗಳು.

ಕೃಷ್ಣ ನಮ್ಮ ಹೃದಯದಲ್ಲಿ ಇದ್ದಾನೆ. ಆದುದರಿಂದ ನಾವು ಸ್ವಲ್ಪ ಅವನತ್ತ ಒಲವು ತೋರಿದ ಕೂಡಲೇ ಅವನು ನಮ್ಮ ಹೃದಯದಿಂದಲೇ ಒಳ್ಳೆಯ ಸೂಚನೆಗಳನ್ನು ನೀಡುತ್ತಾನೆ. ಇದರಿಂದ ನಾವು ಕ್ರಮೇಣ ಪ್ರಗತಿ ಸಾಧಿಸಬಹುದು. ಕೃಷ್ಣನು ಮೊದಲ ಆಧ್ಯಾತ್ಮಿಕ ಗುರು. ನಾವು ಹೆಚ್ಚು ಆಸಕ್ಕಿ ಹೊಂದಿದಾಗ, ನಾವು ಶಾರೀರಿಕ ಆಧ್ಯಾತ್ಮಿಕ ಗುರುವಿನತ್ತ ಸಾಗಬೇಕು. ಕೃಷ್ಣನ ಬುದ್ಧಿವಾದವಿದು, `ಅಲೌಕಿಕ ವಿಜ್ಞಾನವನ್ನು ಅರಿಯಬೇಕೇ? ಹಾಗಾದರೆ ಅದನ್ನು ಬಲ್ಲವರನ್ನು ಸಂಪರ್ಕಿಸಲು ಪ್ರಯತ್ನಿಸಿ.’

ಕೃಷ್ಣನು ಪ್ರಣಿಪಾತೇನ, ಪರಿಪ್ರಶ್ನೇನ ಮತ್ತು ಸೇವಯಾ ಇವುಗಳನ್ನು ಪ್ರಸ್ತಾಪಿಸುತ್ತಾನೆ. ಪ್ರಣಿಪಾತ ಎಂದರೆ ಶರಣಾಗುವುದು. ನೀವು ಯಾರಿಗೆ ಶರಣಾಗಬೇಕೆಂದು ಬಯಸುವಿರೋ ಅವರನ್ನು ನೀವೇ ಆಯ್ಕೆ ಮಾಡಿಕೊಳ್ಳಿ. ಶರಣಾಗುವುದು ಯಾರಿಗೂ ಇಷ್ಟವಿರುವುದಿಲ್ಲ. ನಾವು ನಮ್ಮಲ್ಲಿರುವ ಜ್ಞಾನದಿಂದಲೇ ಉಬ್ಬಿಹೋಗಿರುತ್ತೇವೆ.  `ಓ! ನನಗೆ ಯಾರು ಜ್ಞಾನ ನೀಡಬಲ್ಲರು?’ ಎಂದು ಉದ್ಗರಿಸುತ್ತೇವೆ. ಆಧ್ಯಾತ್ಮಿಕ ಅರಿವಿಗೆ ಆಧ್ಯಾತ್ಮಿಕ ಗುರುವಿನ ಅಗತ್ಯವಿಲ್ಲ ಎಂಬ ಪ್ರಚಾರ ನಡೆಯುತ್ತಲೇ ಇರುತ್ತದೆ. ಆದರೆ ವೈದಿಕ ಸಾಹಿತ್ಯಗಳಾದ ಭಗವದ್ಗೀತೆ, ಭಾಗವತ ಮತ್ತು ಉಪನಿಷತ್ತುಗಳು ಹಾಗೇನೂ ಹೇಳುವುದಿಲ್ಲ. ಆಧ್ಯಾತ್ಮಿಕ ಗುರುವಿನ ಅಗತ್ಯವಿದೆ ಎಂದೇ ಅವು ಹೇಳಿವೆ.

ಉದಾಹರಣೆಗೆ ಉಪನಿಷತ್ತುಗಳನ್ನೇ ತೆಗೆದುಕೊಳ್ಳಿ. ವೈದಿಕ ಉಪನಿಷತ್ತಿನಲ್ಲಿ ಹೀಗೆ ಹೇಳಲಾಗಿದೆ, ತದ್ವಿಜ್ಞಾನಾರ್ಥಂ ಸ ಗುರುಮೇವಾಭಿಗಚ್ಛೇತ್‌ ಶ್ರೋತ್ರೀಯಂ ಬ್ರಹ್ಮನಿಷ್ಠಂ `ಅಲೌಕಿಕ ವಿಷಯವನ್ನು ನೀವು ಕಲಿಯಬೇಕಾದರೆ, ಗುರುವಿನ ಹತ್ತಿರ ಹೋಗಿ.’

ಲೌಕಿಕ ಜಗತ್ತಿನಲ್ಲಿಯೂ ಅಷ್ಟೆ. ಏನಾದರು ಕಲಿಯಬೇಕೆಂದರೆ ನಾವು ಗುರುವಿನ ಬಳಿಗೆ ಹೋಗಬೇಕು. ನನಗೆ ಸಂಗೀತ ಕಲಿಯುವ ಆಸೆ ಇದ್ದರೆ ನಾನು ಸಂಗೀತ ಶಿಕ್ಷಕರ ಬಳಿಗೆ ಹೋಗಬೇಕು. ಸಂಗೀತ ಗುರುಗಳ ಜೊತೆ ಸಂಪರ್ಕವಿಲ್ಲದೆ ಯಾರೂ ಸಂಗೀತ ಕಲಿಯಲಾಗದು.

ನಿಮಗೆ ಎಂಜನಿಯರ್‌ ಆಗಬೇಕೆಂದಿದೆ ಎಂದುಕೊಳ್ಳಿ. ಅದಕ್ಕಾಗಿ ನೀವು ತಾಂತ್ರಿಕ ಶಿಕ್ಷಣ ಕಾಲೇಜಿಗೆ ಸೇರಿ ಕಲಿಯಬೇಕು. ಇನ್ನು, ಡಾಕ್ಟರ್‌ ಹೇಗೆ ಆಗುತ್ತಾರೆ? ಪುಸ್ತಕಗಳನ್ನು ತಂದು ಓದಿ ಯಾರೂ ವೈದ್ಯರಾಗುವುದು ಸಾಧ್ಯವಿಲ್ಲ. ನೀವು ವೈದ್ಯ ಕಾಲೇಜಿಗೆ ಸೇರಿಕೊಳ್ಳಬೇಕು. ತರಬೇತಿ ಪಡೆಯಬೇಕು ಮತ್ತು ಪ್ರಾಯೋಗಿಕ ಪರೀಕ್ಷೆ ತೆಗೆದುಕೊಳ್ಳಬೇಕು. ಅದೇ ರೀತಿ, ಭಗವದ್ಗೀತೆ ಅಥವಾ ಇನ್ನಾವುದೇ ಅಲೌಕಿಕ ವಿಷಯಗಳ ಅಧ್ಯಯನ ಮಾಡಬೇಕೆಂದರೆ ನೀವು ಅದನ್ನು ಕೃಷ್ಣ ಬೋಧಿಸಿರುವಂತೆ ಮಾಡಬೇಕು. ಅವನೇ ಗೀತೆಯ ವಕ್ತಾರ. ಅವನು ಹೇಳುತ್ತಾನೆ, ತದ್‌ ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ `ಯಾರಿಗೆ ಶರಣಾಗುವುದು ಸಾಧ್ಯವೋ ಅವರಲ್ಲಿಗೆ ನೀವು ಹೋಗಬೇಕು.’

`ಭಗವದ್ಗೀತೆ ಕುರಿತಂತೆ ನನಗೆ ಬೋಧಿಸುವ ನಿಜವಾದ ಗುರು ಯಾರು’ ಎಂಬುವುದನ್ನು ನೀವು ನಿರ್ಧರಿಸಬೇಕು.  ನೀವು ಯಾರನ್ನೋ ಹುಚ್ಚುಹುಚ್ಚಾಗಿ ಹುಡುಕಬಾರದು. ನಿಜವಾದ ಜ್ಞಾನ ಉಳ್ಳವರನ್ನೇ ನೀವು ಹುಡುಕಬೇಕು. ಇಲ್ಲವಾದರೆ, ಶರಣಾಗತಿ ಹೇಗೆ ಸಾಧ್ಯ?  ಆದರೆ, ಗೀತೆಯಲ್ಲಿ ಹೇಳಿರುವುದು, `ನೀವು ಗುರುವಿಗೆ ಶರಣಾಗಲೇ ಬೇಕು’ ಎಂದು. ಅಂದರೆ ನೀವು ಸ್ವಯಂ ಇಚ್ಛೆಯಿಂದ ಶರಣಾಗಲು ಸೂಕ್ತ ವ್ಯಕ್ತಿಯನ್ನು ಕಂಡುಕೊಳ್ಳಬೇಕು. ಅಂತಹ ವ್ಯಕ್ತಿಯನ್ನು ಹುಡುಕದಿದ್ದರೆ  ನಿಮ್ಮ ಉದ್ದೇಶ ಸಫಲವಾಗದು.

ಆರಂಭದಲ್ಲಿ ಅರ್ಜುನನು ಕೃಷ್ಣನೊಂದಿಗೆ ಮಿತ್ರನಂತೆ ಮಾತನಾಡುತ್ತಿದ್ದ. ಕೃಷ್ಣ ಅವನಿಗೆ ಹೇಳುತ್ತಿದ್ದ, `ಓ! ನೀನು ಕ್ಷತ್ರಿಯ, ಸೇನೆಗೆ ಸೇರಿದವನು. ನೀನು ಅದು ಹೇಗೆ ಹೋರಾಟವನ್ನು ಬಿಟ್ಟುಬಿಡುವೆ?’ ಅವರಿಬ್ಬರ ನಡುವೆ ಸ್ನೇಹ ಸಂವಾದವಿತ್ತು. ಆದರೆ ಅರ್ಜುನ ಅರಿತುಕೊಂಡುಬಿಟ್ಟ. `ನಮ್ಮ ಮೈತ್ರಿ ಮಾತುಕತೆ ಯಾವ ಪರಿಹಾರವನ್ನೂ ನೀಡದು’ ಎಂದುಕೊಂಡು ಅವನು ಕೃಷ್ಣನಿಗೆ ಶರಣಾದ. ಶಿಷ್ಯಸ್ತೇಽಹಂ ಶಾಧಿ ಮಾಂ ತ್ವಾಂ ಪ್ರಪನ್ನಮ್‌ `ನಾನು ನಿನಗೆ ಶರಣಾಗಿರುವ ಶಿಷ್ಯ. ನನ್ನ ಕರ್ತವ್ಯಗಳೇನು, ದಯಮಾಡಿ ತಿಳಿಸು.’

ಅದೇ ವಿಧಾನ. ಇಲ್ಲಿ ಕೂಡ ಕೃಷ್ಣ ಹೇಳುತ್ತಾನೆ, `ನಿನಗೆ ಭಗವದ್ಗೀತೆ ಕಲಿಯಬೇಕೆಂದಿದ್ದರೆ, ನೀನು ಶರಣಾಗಬಹುದಾದ ವ್ಯಕ್ತಿಯ ಹತ್ತಿರ ಹೋಗಬೇಕು.’ ಆದರೆ ಕಣ್ಣುಮುಚ್ಚಿಕೊಂಡು ಶರಣಾಗಬಾರದು. ನೀವು ವಿಚಾರಿಸುವ ಸಾಮರ್ಥ್ಯ ಹೊಂದಿರಬೇಕು. ಅಂದರೆ ಮುಂದಿನ ಅರ್ಹತೆ ಪರಿಪ್ರಶ್ನೆ, ಮಾಹಿತಿ ವಿಚಾರಣೆ. ಹಾಗೆ ವಿಚಾರಣೆ ಇಲ್ಲದೆ ನೀವು ಮುಂದುವರಿಯಲಾರಿರಿ. ಶಾಲೆಯಲ್ಲಿ ಗುರುಗಳನ್ನು ಪ್ರಶ್ನಿಸಿ ವಿಚಾರಿಸಿಕೊಳ್ಳುವ ವಿದ್ಯಾರ್ಥಿ ಬುದ್ಧಿವಂತ. `ಇದೇನು, ಅದೇನು’ ಎಂದು ತನ್ನ ತಂದೆಯನ್ನು ಪ್ರಶ್ನಿಸುವ ಮಗೂ ಕೂಡ ಬುದ್ಧಿವಂತನೇ.

ವಿಚಾರಣೆ ಅಗತ್ಯ. `ನಾನು ಒಳ್ಳೆಯ ಆಧ್ಯಾತ್ಮಿಕ ಗುರುವನ್ನು ಕಂಡುಕೊಂಡೆ. ಅವರು ಒಳ್ಳೆಯ ವಿದ್ವಾಂಸರು. ಸರಿ, ನಾನು ಶರಣಾದೆ. ಇನ್ನು ನನ್ನ ವ್ಯವಹಾರ ಮುಗಿದಂತೆ’ ಎಂದು ನೀವು ಯೋಚಿಸಬಾರದು. ಅದು ಸರಿಯಾದ ಮಾರ್ಗವಲ್ಲ. ನಿಮಗೆ ಒಳ್ಳೆಯ ಆಧ್ಯಾತ್ಮಿಕ ಗುರು ಸಿಕ್ಕಿರಬಹುದು. ಆದರೆ, ಅವರಿಂದ ಮಾಹಿತಿ ಪಡೆವ ಶಕ್ತಿ ನಿಮಗೆ ಇಲ್ಲವಾದರೆ, ನೀವು ಪ್ರಗತಿ ಸಾಧಿಸಲಾರಿರಿ.

ಯಾವ ರೀತಿ ನೀವು ವಿಚಾರಿಸಿಕೊಳ್ಳುವಿರಿ? ಯಾವುದೇ ಸವಾಲು ಇಲ್ಲದೆ. ಇವರೆಂತಹ ಆಧ್ಯಾತ್ಮಿಕ ಗುರು, ನೋಡೇ ಬಿಡುವೆ. ಅವರಿಗೆ ಸವಾಲು ಹಾಕುವೆ. ಅಸಂಬದ್ಧ ಪ್ರಶ್ನೆಗಳನ್ನು ಕೇಳಿ ಅವಿವೇಕದ ಮಾತುಗಳನ್ನಾಡುವೆ ಎಂದು ನೀವು ಯೋಚಿಸಬಾರದು. ಹಾಗೆಲ್ಲ ಮಾಡಿದರೆ ಅದೇನೂ ನಿಮಗೆ ನೆರವಾಗದು. ನಿಮ್ಮ ವಿಚಾರಣೆ ಅಥವಾ ಪ್ರಶ್ನೆಯು ಸಂದರ್ಭಕ್ಕೆ ಸೂಕ್ತವಾಗಿರಬೇಕು. ಪರಿಪ್ರಶ್ನ ಎಂದರೆ ನಿರ್ದಿಷ್ಟ ಅಂಶ ಕುರಿತಂತೆ ಕೇಳುವುದು ಎಂದು ಅರ್ಥ. ಮತ್ತು ಅದು ಸೇವೆ ಜೊತೆಗೆ ಇರಬೇಕು, ಸೇವಯಾ. `ಅವರ ಬಳಿ ಎಷ್ಟೆಲ್ಲಾ ಕೇಳಿಕೊಂಡೆ. ಅವರಿಗೆ ನಾನು ಯಾವುದೇ ಸೇವೆ ಅಥವಾ ಹಣ ಪಾವತಿ ಮಾಡಲಿಲ್ಲ. ಇದರಿಂದ ನನಗೆ ಲಾಭವಾಗಿದೆ’ ಎಂದು ನೀವು ಅಂದುಕೊಳ್ಳಬಾರದು. ಸೇವೆ ಇಲ್ಲದೆ ನಿಮ್ಮ ಪ್ರಶ್ನೆ ಅಥವಾ ಕೇಳುವುದು ನಿಷ್ಫಲ.

ಆದುದರಿಂದ ಈ ಶ್ಲೋಕದಲ್ಲಿ ಮೂರು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ: ಪ್ರಣಿಪಾತ, ಪರಿಪ್ರಶ್ನ  ಮತ್ತು ಸೇವ. ನಿಮಗೆ ನಿಜವಾದ ಬೋಧನೆ ಮಾಡಬಲ್ಲಂತಹ ಗುರುವನ್ನು ಹುಡುಕುವ ಕನಿಷ್ಠ ಅರ್ಹತೆ ನಿಮಗಿರಬೇಕೆಂದು ಪ್ರಣಿಪಾತ (ಶರಣಾಗತಿ) ಅರ್ಥೈಸುತ್ತದೆ. ಅದು ನಿಮ್ಮ ಮೇಲೆ ಅವಲಂಬಿತ. ನೀವು ಚಿನ್ನ ಅಥವಾ ಬೆಳ್ಳಿ ಖರೀದಿಸಬೇಕಾಗಿದೆ ಎಂದುಕೊಳ್ಳಿ. ಅದನ್ನು ಎಲ್ಲಿ ಕೊಳ್ಳಬೇಕೆಂದು ನಿಮಗೆ ತಿಳಿದಿಲ್ಲದಿದ್ದರೆ ನೀವು ಮೋಸಕ್ಕೆ ಒಳಗಾಗುತ್ತೀರಿ. ನೀವು ದಿನಸಿ ಅಂಗಡಿಗೆ ಹೋಗಿ ಆಭರಣ ಕೊಳ್ಳಲು ಪ್ರಯತ್ನಿಸಿದರೆ ಖಂಡಿತ ನೀವು ಮೋಸಕ್ಕೆ ಸಿಲುಕುತ್ತೀರಿ.

ನೀವು ದಿನಸಿ ಅಂಗಡಿಗೆ ಹೋಗಿ, `ಡೈಮಂಡ್‌ ಖರೀದಿಗೆ ಇದೆಯಾ?’ ಎಂದು ಕೇಳಿ. ಅವನಿಗೆ ನೀವು ಮೂರ್ಖರೆಂಬುದು ತಿಳಿದುಬಿಡುತ್ತದೆ. ಇವನಿಗೆ ವಜ್ರದ ಬದಲಿಗೆ ಇನ್ನೇನಾದರೂ ಮಾರಾಟ ಮಾಡೋಣ ಎಂದು ಅವನು ಯೋಚಿಸುತ್ತಾನೆ. ದುಬಾರಿ ಬೆಲೆಯನ್ನೂ ಹಾಕುತ್ತಾನೆ.

ನೀವು ಮನೆಗೆ ವಾಪಸಾದಾಗ, ನಿಮ್ಮ ಬಂಧುಗಳು ಕೇಳುತ್ತಾರೆ, `ಏನು ತಂದಿರುವಿರಿ?’ ಎಂದು.

`ಇದು ವಜ್ರ. ಇದನ್ನು ದಿನಸಿ ಅಂಗಡಿಯಿಂದ ತಂದೆ’ ಎಂದು ನೀವು ಹೇಳಿದರೆ ಆ ಬಂಧುಗಳ ಪ್ರತಿಕ್ರಿಯೆ ಏನಿರಬಹುದು?

ಆ ರೀತಿ ಆಧ್ಯಾತ್ಮಿಕ ಗುರುವನ್ನು ಪತ್ತೆ ಹಚ್ಚಲಾಗದು. ನೀವು ಸ್ವಲ್ಪ ಬುದ್ಧಿವಂತರಾಗಿರಬೇಕು. ಏಕೆಂದರೆ ಬುದ್ಧಿವಂತರಾಗದೆ ಯಾರೂ ಆಧ್ಯಾತ್ಮಿಕ ಪ್ರಗತಿ ಸಾಧಿಸುವುದು ಸಾಧ್ಯವಿಲ್ಲ. ವೇದಾಂತ ಸೂತ್ರ ಹೇಳುತ್ತದೆ, ಅಥಾತೋ ಬ್ರಹ್ಮ-ಜಿಜ್ಞಾಸಾ. ಬ್ರಹ್ಮ-ಜಿಜ್ಞಾಸಾ ಎಂದರೆ ಪರಮ ವಿಷಯವಾದ ಬ್ರಹ್ಮನ್‌ ಕುರಿತಂತೆ ವಿಚಾರಣೆ ಅಥವಾ ಕೇಳುವುದೇ ಆಗಿದೆ. ಅದಕ್ಕೆ ಅರ್ಹತೆ ಬೇಕು. ಆ ಅರ್ಹತೆಯನ್ನು ಅಥ ಶಬ್ದದಿಂದ ವಿವರಿಸಲಾಗಿದೆ. ಲೌಕಿಕ ಬದುಕಿನ ಸಂಕಷ್ಟಗಳ ಅನುಭವಗಳಿಗೆ ಅಥಾ ಶಬ್ದವನ್ನು ಅನ್ವಯಿಸಲಾಗುತ್ತಿದೆ. ಅವರು ಪರಮ ಸತ್ಯ, ಆಧ್ಯಾತ್ಮಿಕ ಬದುಕಿನ ಬಗೆಗೆ ಕೇಳಬಹುದು.

ಅದೇ ರೀತಿ ಭಾಗವತ ಹೇಳುತ್ತದೆ,  ತಸ್ಮಾದ್‌ ಗುರುಂ ಪ್ರಪದ್ಯೇತ ಜಿಜ್ಞಾಸುಃ ಶ್ರೇಯ ಉತ್ತಮಮ್‌. ಉತ್ತಮಮ್‌ ಎಂದರೆ ಉದ್ಗತ-ತಮಮ್‌ : ಅಲೌಕಿಕ. ತಮ ಎಂದರೆ ಕತ್ತಲು. ಇಡೀ ಜಗತ್ತು, ವಿಶ್ವ ಅಂಧಕಾರ. ಆದುದರಿಂದ ನಮಗೆ ಸೂರ್ಯನ ಬೆಳಕು, ಚಂದ್ರನ ಬೆಳಕು, ವಿದ್ಯುತ್‌ ಎಲ್ಲವೂ ಬೇಕು. ಉತ್ತಮಮ್‌ ಎಂದರೆ ಅಲೌಕಿಕ ವಿಷಯಗಳು, ಅವು ಕತ್ತಲಿನಾಚೆಗೆ. ಆಧ್ಯಾತ್ಮಿಕ ಜಗತ್ತಿನಲ್ಲಿ ಕತ್ತಲೆ ಇಲ್ಲ.

ಆಧ್ಯಾತ್ಮಿಕ ಜಗತ್ತಿನ ಬಗೆಗೆ ಅರಿಯಬೇಕೆಂದರೆ, ಅವರು ಆಧ್ಯಾತ್ಮಿಕ ಗುರುವನ್ನು ಕಂಡುಕೊಳ್ಳಬೇಕು. ಹಾಗಿಲ್ಲವಾದರೆ ಆಧ್ಯಾತ್ಮಿಕ ಗುರುವಿನ ಅಗತ್ಯವಿಲ್ಲ. ಹೀಗೆ ಭಾವಿಸಿಕೊಳ್ಳಿ – ನಾನು ಸ್ವಲ್ಪ ಲೌಕಿಕ ಸುಧಾರಣೆ ಮಾಡಿಕೊಳ್ಳಲು ನನಗೆ ಆಧ್ಯಾತ್ಮಿಕ ಗುರು ಬೇಕೆನಿಸಿದರೆ ಅಥವಾ ನನಗೆ ಭಗವದ್ಗೀತೆ ಅಥವಾ ವೇದಾಂತ ಸೂತ್ರ ಓದಬೇಕೆನಿಸಿದರೆ? ಅದು ಅಗತ್ಯವಿಲ್ಲ. ಲೌಕಿಕ ಸುಧಾರಣೆಗೆ ಇತರ ಅನೇಕ ಜನರ ತರಹ ನೀವೂ ಕೆಲಸ ಮಾಡಬಹುದು – ಯಾವುದಾದರೂ ಕಾರ್ಖಾನೆ ಅಥವಾ ಅದರಂತೆ ಇನ್ಯಾವುದೋ. ಅದು ಸಾಧ್ಯ. ಆದರೆ ನಿಮಗೆ ಬ್ರಹ್ಮನ್‌ ವಿಷಯದಲ್ಲಿ ಆಸಕ್ತಿ ಇದ್ದರೆ, ಅದು ಆಧ್ಯಾತ್ಮಿಕ ವಿಷಯವಾಗಿರುವುದರಿಂದ ನಿಮಗೆ ಆಧ್ಯಾತಿಕ ಗುರುವಿನ ಅಗತ್ಯವಿದೆ. ಅದನ್ನು ಸ್ಪಷ್ಟವಾಗಿ ಹೇಳಲಾಗಿದೆ: ತಸ್ಮದ್‌ ಗುರುಂ ಪ್ರಪದ್ಯೇತ. ತಸ್ಮಾದ್‌ ಎಂದರೆ ಆದುದರಿಂದ ಎಂದು ಅರ್ಥ. ಆದುದರಿಂದ ಆಧ್ಯಾತಿಕ ಗುರುವಿಗೆ ಶರಣಾಗಬೇಕು. ಯಾರು ಶರಣಾಗಬೇಕು? ಯಾರು ಜಿಜ್ಞಾಸುಃ ಶ್ರೇಯ ಉತ್ತಮಮ್‌, ಅಲೌಕಿಕ ವಿಷಯ ಅರ್ಥ ಮಾಡಿಕೊಳ್ಳಲು ಯಾರು ಕಾತರರಾಗಿರುತ್ತಾರೋ ಅವರು.

ಯಾವುದೇ ವೈದಿಕ ಸಾಹಿತ್ಯದಲ್ಲಿಯೂ ನೀವು ಅದೇ ಬೋಧನೆಯನ್ನು ಕಾಣಬಹುದು. ಉದಾಹರಣೆಗೆ, ಭಗವದ್ಗೀತೆಯಲ್ಲಿ ಹೇಳಿರುವುದು ನೋಡಿ, ಜ್ಞಾನಿನಃ ತತ್ತ್ವ-ದರ್ಶಿನಃ. ಜ್ಞಾನಿ ಎಂದರೆ ಯಾರು? ಪರಿಪೂರ್ಣ ಜ್ಞಾನ ಉಳ್ಳವನು ಎಂದು ಅರ್ಥ. ಪರಿಪೂರ್ಣ ಜ್ಞಾನವೆಂದರೆ ಪಕ್ಕಾ ದೃಷ್ಟಿಕೋನ ಎಂದು. ಇದು ತಾತ್ತ್ವಿಕ ಅಲ್ಲ, ಆದರೆ, ಆಧ್ಯಾತ್ಮಿಕ ವಿಷಯ ಕುರಿತಂತೆ ಸ್ಪಷ್ಟ ದೃಷ್ಟಿ. ತತ್ತ್ವ ಎಂದರೆ ಪರಮ ಸತ್ಯ. ಕೃಷ್ಣನೇ ಪರಮ ತತ್ತ್ವ, ಪರಾತ್ಪರ ಸತ್ಯ ಎಂಬುವುದನ್ನು ನೀವು ಗೀತೆಯಲ್ಲಿ ನೋಡಬಹುದು.

ಕೃಷ್ಣ ಹೇಳುತ್ತಾನೆ, ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್‌ ಯತತಿ ಸಿದ್ಧಯೇ : `ಸಾವಿರಾರು ಜನರಲ್ಲಿ ಕೆಲವರು ಪರಿಪೂರ್ಣತೆಗಾಗಿ ಪ್ರಯತ್ನಿಸಬಹುದು.’  ಪರಿಪೂರ್ಣತೆಗೆ ಪ್ರತಿಯೊಬ್ಭರೂ ಆಸಕ್ತಿ ಹೊಂದಿರುತ್ತಾರೆಂದು ನಿರೀಕ್ಷಿಸಲಾಗದು. ಅಂತಹ ಅಪೇಕ್ಷೆ ಹೊಂದಲು ಎಷ್ಟೋ ವರ್ಷಗಳು ಬೇಕಾಗುತ್ತದೆ. ಸಹಸ್ರ ಸಹಸ್ರ ಜನರಲ್ಲಿ ಒಬ್ಬರು ಪರಿಪೂರ್ಣತೆಗೆ ಆಕಾಂಕ್ಷಿಗಳಾಗಬಹುದು. ಪರಿಪೂರ್ಣತೆಯನ್ನು ಸಾಧಿಸಿರುವವರಲ್ಲಿ ಒಬ್ಬನು ಕೃಷ್ಣನನ್ನು ಅರ್ಥಮಾಡಿಕೊಂಡಿರಬಹುದು. ಆದುದರಿಂದ ಕೃಷ್ಣನ ವಿಷಯ ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ಅದು ತುಂಬಾ ಕಷ್ಟ. ಆದರೆ ಸಾಧ್ಯವಿದೆ. ಭಗವದ್ಗೀತೆಯಲ್ಲಿ ಸೂಚಿಸಿರುವ ವಿಧಾನದಿಂದ ಕೃಷ್ಣನನ್ನು ಅರ್ಥ ಮಾಡಿಕೊಳ್ಳುವುದು ಸುಲಭ.  ಭಗವದ್ಗೀತೆ – 18.55

ಭಕ್ತ್ಯಾ ಮಾಮಭಿಜಾನಾತಿ ಯಾವಾನ್‌ ಯಶ್ಚಾಸ್ಮಿ ತತ್ತ್ವತಃ ।

ತತೋ ಮಾಂ ತತ್ತ್ವತೋ ಜ್ಞಾತ್ವಾ ವಿಶತೇ ತದನನ್ತರಮ್‌ ॥

ಭಕ್ತಿಸೇವೆಯಿಂದ ಮಾತ್ರ, ದೇವೋತ್ತಮ ಪರಮ ಪುರುಷನಾದ ನನ್ನನ್ನು ನಾನಿರುವಂತೆ ಮನುಷ್ಯನು ಅರ್ಥಮಾಡಿಕೊಳ್ಳಬಲ್ಲ. ಇಂತಹ ಭಕ್ತಿಯಿಂದ ಮನುಷ್ಯನು ನನ್ನ ಪೂರ್ಣಪ್ರಜ್ಞೆಯನ್ನು ಪಡೆದಾಗ ಭಗವದ್ಧಾಮವನ್ನು ಪ್ರವೇಶಿಸಬಲ್ಲ.

ಅನೇಕ ಜನ್ಮಗಳ ಅನಂತರ ಜ್ಞಾನದಲ್ಲಿ ನಾನು ಪರಿಪೂರ್ಣನಾದಾಗ, ನಾನು ಕೃಷ್ಣನಿಗೆ ಶರಣಾಗಬೇಕು. ಆದರೆ, ಈಗಲೇ, ಈ ಕ್ಷಣ ಏಕೆ ಶರಣಾಗಬಾರದು? ಅನೇಕಾನೇಕ ಜನ್ಮಗಳಿಗೇಕೆ ನಾನು ಕಾಯಬೇಕು? ಅದು ಜಾಣತನದ ಪ್ರಸ್ತಾವನೆ. ಕೃಷ್ಣನಿಗೆ ಶರಣಾಗುವುದೇ ಪರಿಪೂರ್ಣತೆಯ ಅಂತ್ಯ ಎಂದಾದರೆ, ಆ ಪರಿಪೂರ್ಣತೆಯನ್ನು ತತ್‌ಕ್ಷಣ ಏಕೆ ಒಪ್ಪಿಕೊಳ್ಳಬಾರದು?

ಆದರೆ ಜನರು ಸಂದೇಹ ಉಳ್ಳವರು. ಯಾರೋ ನನ್ನನ್ನು ಕೇಳಿದರು, `ಕೃಷ್ಣ ಪ್ರಜ್ಞೆಯಲ್ಲಿ ಪರಿಪೂರ್ಣತೆ ಪಡೆಯಲು ಎಷ್ಟು ಸಮಯ ಬೇಕು?’ ನಾನೆಂದೆ, ಒಂದು ಕ್ಷಣದಲ್ಲಿ ಕೃಷ್ಣಪ್ರಜ್ಞೆ ಹೊಂದಬಹುದು ಅಥವಾ ಸಾವಿರಾರು ಹುಟ್ಟು ಸಾವಿನ ಅನಂತರವೂ ಸಾಧ್ಯವಾಗದಿರಬಹುದು.

ಪರಿಪೂರ್ಣತೆಯನ್ನು ಸಾಧಿಸಿದ ಮೇಲೆ ಅಂತಿಮವಾಗಿ ನಾನು ಕೃಷ್ಣನಿಗೆ ಶರಣಾಗಬೇಕು ಮತ್ತು ಅದರಿಂದ ನಾನು ಶ್ರೇಷ್ಠ ಆತ್ಮ ಆಗುತ್ತೇನೆ ಎಂಬುವುದನ್ನು ನಾವು ಅರ್ಥಮಾಡಿಕೊಂಡರೆ, ಅಂತಹ ಶರಣಾಗತಿ ಈ ತತ್‌ಕ್ಷಣ ಏಕಾಗಬಾರದು? ಈಗಲೇ ಏಕೆ ಶ್ರೇಷ್ಠ  ಆತ್ಮ ಆಗಬಾರದು? ಆದರೆ ಕೃಷ್ಣನನ್ನು ಪರಮ ಎಂದು ತತ್‌ಕ್ಷಣ ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ. ನಮ್ಮಲ್ಲಿ ಅನೇಕ ಸಂದೇಹಗಳಿವೆ. ಆದುದರಿಂದ, ಎಲ್ಲ ರೀತಿಯ ಶಂಕೆಗಳನ್ನು ಹೊಡೆದೋಡಿಸಲು ನಮ್ಮಲ್ಲಿ ಭಗವದ್ಗೀತೆ ಇದೆ, ಶ್ರೀಮದ್‌ ಭಾಗವತ ಇದೆ. ಈ ಗ್ರಂಥಗಳನ್ನು ನಾವು ಓದಿದರೆ ನಮಗೆ ಕೃಷ್ಣ ವಿಜ್ಞಾನ ಚೆನ್ನಾಗಿ ಅರ್ಥವಾಗುತ್ತದೆ. ಇದರಿಂದ ಕೃಷ್ಣ ಪ್ರಜ್ಞೆಯಲ್ಲಿ ನಮ್ಮ ಪ್ರಗತಿ ಖಚಿತ.

ವಂದನೆಗಳು.

ಈ ಲೇಖನ ಶೇರ್ ಮಾಡಿ