ನೈಮಿಷಾರಣ್ಯದಲ್ಲಿ ಇನ್ನೊಂದು ಬೆಳಗು !

ಸೂತಮುನಿಗಳು ತಮ್ಮ ವಿವರಣೆ ಮುಂದುವರಿಸಿದರು. ಅವರು ಶುಕಮುನಿಗಳು ಹಾಗೂ ಪರೀಕ್ಷಿತನ ಸಂವಾದವನ್ನು ಉಲ್ಲೇಖಿಸುತ್ತ ತಮ್ಮ ಕಥೆ ಮುಂದುವರಿಸಿದರು. ‘ಈ ದಿನ ಮಹಾಪುರುಷನಾದ ನಹುಷನ ಕಥೆಯನ್ನು ಹೇಳುತ್ತೇನೆ. ಶ್ರೀಮದ್ಭಾಗವತದ ಸ್ಕಂಧ 9ರ ಅಧ್ಯಾಯ 18 ಮತ್ತು 19 ರಲ್ಲಿ ನಹುಷನಿಗಿಂತಲೂ ಅವನ ಮಗ ಯಯಾತಿಯ ಕಥೆಯೇ ಮುಖ್ಯವಾಗಿ ಕಾಣಿಸುತ್ತದೆ. ನಹುಷರಾಜ ಅತ್ಯಂತ ಶಕ್ತಿಶಾಲಿ. ತನ್ನ ಶಕ್ತಿ ಸಾಮರ್ಥ್ಯಗಳ ಫಲವಾಗಿ ಅವನು ದೇವೇಂದ್ರನನ್ನೂ ಲೆಕ್ಕಿಸಲಿಲ್ಲ. ಸ್ವರ್ಗ ಲೋಕವನ್ನು ಆಕ್ರಮಿಸಿಕೊಂಡ. ದೇವೇಂದ್ರ ಪರಾರಿಯಾದ.
ಆಗಲೇ ನಹುಷನ ವಿಧಿ ಅವನನ್ನು ಕಾಡಿತು. ತನ್ನಷ್ಟು ಬಲಶಾಲಿ ಬೇರೆಯಾರೂ ಇಲ್ಲ ಎಂದುಕೊಂಡು ದೇವೇಂದ್ರನ ಸಿಂಹಾಸನವನ್ನು ಆಕ್ರಮಿಸಿಕೊಂಡ, ಅವನ ಹೆಂಡತಿ ಶಚಿಯೂ ತನ್ನವಳಾಗಬೇಕು ಎಂದು ಬಯಸಿದ. ಮಹಾನ್ ಋಷಿಗಳು ತನ್ನ ಪಲ್ಲಕ್ಕಿ ಹೊರಬೇಕೆಂದು ಆಜ್ಞೆ ಮಾಡಿ ಬಲವಂತಮಾಡಿ, ಅವರ ಶಾಪದಿಂದ ಉರಗ ರೂಪ ತಾಳಿದ!’
ನಹುಷನಿಗೆ ಆರು ಜನ ಗಂಡು ಮಕ್ಕಳು – ಯತಿ, ಯಯಾತಿ, ಸಂಯಾತಿ, ಆಯತಿ, ವಿಯತಿ ಮತ್ತು ಕೃತಿ.
ನಹುಷ ಶಾಪಗ್ರಸ್ತನಾಗಿ ಉರಗನಾದಾಗ, ಹಿರಿಮಗ ಯತಿ ಸಿಂಹಾಸನವೇರಬೇಕಾಗಿತ್ತು. ಆದರೆ, ಯತಿಗೆ ಈ ಲೌಕಿಕ ಸಂಪತ್ತು ಮತ್ತು ಇಂದ್ರಿಯ ತೃಪ್ತಿಯ ಭೋಗ ಎನ್ನುವುದೆಲ್ಲ ಬೇಡವಾಗಿತ್ತು. ಅವನು ತಮ್ಮ ಯಯಾತಿಯನ್ನು ಕರೆದು ಹೇಳಿದ: ಪ್ರಿಯ ಸೋದರ, ಯಯಾತಿ, ತಂದೆಯವರ ಅತಿ ಆಸೆಯ ಫಲವಾಗಿ ಇಂದು ನಮ್ಮ ಸಿಂಹಾಸನ ಬರಿದಾಗಿದೆ.
ಶಾಸ್ತ್ರಪ್ರಕಾರ ಹಿರಿಮಗನಾಗಿ ನಾನು ಈ ಸ್ಥಾನವನ್ನು ತುಂಬಬೇಕು. ಆದರೆ, ಪ್ರಿಯ ಸೋದರ, ನನಗೆ ಖಂಡಿತವಾಗಲೂ ಈ ಲೌಕಿಕ ಬದುಕಿನಲ್ಲಿ ಸ್ವಲ್ಪವೂ ಮನಸ್ಸಿಲ್ಲ ನನ್ನ ಬದುಕಿನ ಗುರಿ – ಆತ್ಮ ಸಾಕ್ಷಾತ್ಕಾರದ ಅರ್ಥವನ್ನು ಅರಿಯುವುದು. ಆಧ್ಯಾತ್ಮಿಕವಾಗಿ ಪ್ರಗತಿಯನ್ನು ಸಾಧಿಸುವುದು. ಆದ್ದರಿಂದ ಯಯಾತಿ, ನಾನಾದ ಮೇಲೆ ನೀನು ಹಿರಿಯ ಪುತ್ರನಾಗಿರುವುದರಿಂದ, ಈ ಸಿಂಹಾಸನ ನಿನ್ನದು. ನೀನು ರಾಜನಾಗಿ ನಮ್ಮ ತಂದೆಯ ವಂಶದ ಕೀರ್ತಿಯನ್ನು ಬೆಳಗಿಸು!
ಯಯಾತಿ ಅಣ್ಣನ ಮಾತಿಗೆ ಒಪ್ಪಿಕೊಳ್ಳಲೇಬೇಕಾಯಿತು. ಅವನು ತನ್ನ ನಾಲ್ಕು ಜನ ತಮ್ಮ೦ದಿರಿಗೆ ನಾಲ್ಕು ದಿಕ್ಕುಗಳಲ್ಲಿ ಆಳಲು ರಾಜ್ಯವನ್ನು ವಹಿಸಿಕೊಟ್ಟನು. ಉಳಿದ ಬೃಹತ್ ಭೂಮಂಡಲವನ್ನು ತನ್ನದಾಗಿಸಿಕೊಂಡು ಆಳಿದನು. ಮತ್ತೆ, ಶುಕ್ರಾಚಾರ್ಯರ ಮಗಳಾದ ದೇವಯಾನಿಯನ್ನೂ ಮತ್ತು ವೃಷಪರ್ವರಾಜನ ಮಗಳಾದ ಶರ್ಮಿಷ್ಠೆಯನ್ನೂ ವಿವಾಹವಾದನು.
ಪರೀಕ್ಷಿತ ಮಹಾರಾಜನಿಗೆ ಅನುಮಾನ ಬಂದಿತು. ಅವನು ಶುಕಮುನಿಗಳನ್ನು ಹೀಗೆ ಪ್ರಶ್ನಿಸಿದನು : “ಪೂಜ್ಯರೇ, ಶುಕ್ರಾಚಾರ್ಯರು ಬಹಳ ಓಜಸ್ವಿಯಾದ ಬ್ರಾಹ್ಮಣರು. ಯಯಾತಿ ಮಹಾರಾಜನೋ ಕ್ಷತ್ರಿಯ ! ಆದುದರಿಂದ ಕ್ಷತ್ರಿಯ – ಬ್ರಾಹ್ಮಣರ ನಡುವೆ ಈ ಪ್ರತಿಲೋಮ ವಿವಾಹ ಹೇಗೆ ಸಾಧ್ಯವಾಯಿತು ಎಂದು ತಿಳಿದುಕೊಳ್ಳಲು ನಾನು ಬಹಳ ಕುತೂಹಲಿಯಾಗಿದ್ದೇನೆ !” ಶುಕಮುನಿಗಳು ಈ ಪ್ರತಿಲೋಮ ವಿವಾಹದ ಹಿನ್ನೆಲೆಯನ್ನು ಹೇಗೆ ವಿವರಿಸಿದರು ಎನ್ನುವುದನ್ನು ನೈಮಿಷಾರಣ್ಯದ ತಪಸ್ವಿಗಳಿಗೆ ಸೂತಮುನಿಗಳು ವಿವರಿಸಿದರು.
ವೃಷಪರ್ವರಾಜನ ಮಗಳು ಶರ್ಮಿಷ್ಠೆ ಮತ್ತು ಶುಕ್ರಾಚಾರ್ಯರ ಮಗಳು ದೇವಯಾನಿ ಅರಮನೆಯ ಉದ್ಯಾನದಲ್ಲಿ ತಮ್ಮ ಸಖಿಯರೊಂದಿಗೆ ಆಟವಾಡುತ್ತಿದ್ದರು. ಅಲ್ಲೊಂದು ಕೊಳ ನೋಡಿದಾಗ ಅವರೆಲ್ಲರಿಗೂ ಅದರಲ್ಲಿ ಸ್ನಾನ ಮಾಡಬೇಕೆನಿಸಿತು. ತಮ್ಮ ವಸ್ತ್ರಗಳನ್ನು ಕಳಚಿ ನೀರಿಗಿಳಿದು ಜಲಕ್ರೀಡೆಯಾಡತೊಡಗಿದರು. ಯಾವುದೊ ಕ್ಷಣದಲ್ಲಿ ಅವರಿಗೆ, ಪಾರ್ವತಿಯೊಂದಿಗೆ ನಂದಿಯ ಮೇಲೆ ಕುಳಿತು ಸಾಗಿಹೋಗುತ್ತಿರುವ ಶಿವದೇವರ ದರ್ಶನವಾಯಿತು.
ನಗ್ನರಾಗಿದ್ದ ಅವರು ಲಜ್ಜೆಗೊಂಡು ತಮ್ಮ ತಮ್ಮ ವಸ್ತ್ರಗಳನ್ನು ತೆಗೆದು ಉಡಲು ದಡಕ್ಕೆ ಓಡಿಬಂದರು ಆದರೆ, ಶರ್ಮಿಷ್ಠೆ ತಿಳಿಯದೆ ದೇವಯಾನಿಯ ವಸ್ತ್ರವನ್ನು ಧರಿಸಿಬಿಟ್ಟಿದ್ದಳು. ದೇವಯಾನಿಗೆ ಕೋಪಬಂತು. ಕೂಡಲೇ ಬಡಬಡಿಸಿಬಿಟ್ಟಳು : ‘ಅಯ್ಯೋ, ಯಜ್ಞದಲ್ಲಿ ಅರ್ಪಿಸಲು ಇಟ್ಟುಕೊಂಡ ಹವಿಸ್ಸನ್ನು ನಾಯಿ ಹೊತ್ತುಕೊಂಡು ಹೋಗುವಂತಾಗಿ ಹೋಯಿತು, ನನ್ನ ಮರ್ಯಾದೆ ಗಾಳಿಗೆ ತೂರಿ ಹೋಯಿತು!’

ಹೀಗೊಂದು ನಿಂದನೆ ಕೇಳಿದ ರಾಜಪುತ್ರಿ ಶರ್ಮಿಷ್ಠೆ ಸುಮ್ಮನಿರುತ್ತಾಳೆಯೇ?
“ಏಯ್, ಹೊಟ್ಟೆಪಾಡಿಗಾಗಿ ಕಾಗೆಗಳ ಹಾಗೆ ನಮ್ಮನ್ನು ಅವಲಂಬಿಸಿ ನಮ್ಮ ಮನೆ ಬಾಗಿಲ ಬಳಿ ಕಾಯುವ ಭಿಕ್ಷುಕಿ ನೀನು…’ ಎಂದೆಲ್ಲ ಹೇಳಿಬಿಟ್ಟಳು. ಮತ್ತೆ ನಗ್ನಳಾಗಿದ್ದ ದೇವಯಾನಿಯನ್ನು ಅಲ್ಲೇ ಇದ್ದ ಒಂದು ಬರಡು ಬಾವಿಗೆ ತಳ್ಳಿ ಬಿಟ್ಟಳು. ಸಖಿಯರೆಲ್ಲರೂ ಹೊರಟುಹೋದರು.
ಅದಾದ ಸ್ವಲ್ಪ ಹೊತ್ತಿಗೆ ಮೃಗಯಾ ವಿಹಾರಕ್ಕಾಗಿ ಅಲ್ಲಿಗೆ ಬ೦ದ ಯಯಾತಿ ಮಹಾರಾಜ ಆಕಸ್ಮಿಕವಾಗಿ ದೇವಯಾನಿಯನ್ನು ಬಾವಿಯಲ್ಲಿ ನೋಡಿ, ಕೈನೀಡಿ ಮೇಲಕ್ಕೆಳೆದು, ಉತ್ತರೀಯವನ್ನು ಧರಿಸಲು ಕೊಟ್ಟ.
ಹೊರಬಂದ ದೇವಯಾನಿ ಹೇಳಿದಳು: ‘ಹೇ ರಾಜನ್, ನನ್ನ ಕೈಹಿಡಿದದ್ದರಿಂದ ನನ್ನನ್ನು ಪಾಣಿಗ್ರಹಣ ಮಾಡಿದಂತಾಯಿತು. ದೈವೇಚ್ಛೆಯಿಂದಲೇ ನಾವಿಬ್ಬರೂ ಪತಿಪತ್ನಿಯರಾದಂತಾಯಿತು!’ ಯಯಾತಿ ಅವಳ ಅನಿಸಿಕೆಯನ್ನು ಒಪ್ಪಿ ಅವಳನ್ನು ಸ್ವೀಕರಿಸಿದನು. ಆದರೆ, ಈ ವಿವಾಹಕ್ಕೆ ತನ್ನದೊಂದು ನಿಯಮವನ್ನು ಮುಂದಿಟ್ಟಳು. ದೇವಯಾನಿ : ‘ನನ್ನ ತಂದೆಯ ಆದೇಶದಂತೆ ನನ್ನ ವಿವಾಹವಾದಾಗ ನನ್ನ ಗೆಳತಿ ಶರ್ಮಿಷ್ಠೆಯು ನನ್ನ ದಾಸಿಯಾಗಿ ತನ್ನ ಸಖಿಯರೊಂದಿಗೆ ಬರಬೇಕು!
ಶರ್ಮಿಷ್ಠೆಹೀಗೆ ಯಯಾತಿಯ ಹೆಂಡತಿಯಾಗಿ ಬಂದರೂ, ದೇವಯಾನಿಯ ದಾಸಿಯಾದಳು.
ಆದರೆ, ಈ ಆಗುಹೋಗುಗಳೆಲ್ಲ ಇವರೆಲ್ಲರ ಮಹಾಸಂಕಟಕ್ಕೆ ದಾರಿಯಾಗುವುದು ವಿಧಿಯ ಸಂಕಲ್ಪವಾಗಿತ್ತು. ಈ ದುರಂತ ಶುಕ್ರಾಚಾರ್ಯರ ಆಜ್ಞೆಯಿಂದಲೇ ಮೊದಲಾಯಿತು. ಮದುವೆ ಮುಗಿದಕೂಡಲೇ ಅವರು ಯಯಾತಿಗೆ ಹೇಳಿದರು : ‘ಯಯಾತಿ, ಈ ಕನ್ಯೆ ಶರ್ಮಿಷ್ಠೆಯು ನಿನ್ನ ತಲ್ಪದಲ್ಲಿ ನಿನ್ನೊಡನೆ ಮಲಗಲು ಎಂದೂ ಅವಕಾಶ ಕೊಡಬೇಡ!’
ದೇವಯಾನಿಗೆ ಕಾಲಾನಂತರದಲ್ಲಿ ಮುದ್ದಾದ ಗಂಡುಮಗುವೊಂದು ಹುಟ್ಟಿದಾಗ, ಶರ್ಮಿಷ್ಠೆಗೂ ಮಗು ಬೇಕೆನಿಸಿತು. ಯಯಾತಿಯನ್ನು ಬೇಡಿದಳು. ಧರ್ಮತತ್ತ್ವಗಳನ್ನು ಖಚಿತವಾಗಿ ಅರಿತುಕೊಂಡಿದ್ದರೂ, ಸ್ತ್ರೀ ಮೋಹಿ ಯಯಾತಿ ಶರ್ಮಿಷ್ಠೆಯನ್ನು ಕೂಡಿಬಿಟ್ಟ.
ದೇವಯಾನಿಗೆ ಯದು ಮತ್ತು ತುರ್ವಸು ಎನ್ನುವ ಮಕ್ಕಳು ಹುಟ್ಟಿದರೆ, ಶರ್ಮಿಷ್ಠೆಗೆ, ದ್ರುಹ್ಯು, ಅನು ಮತ್ತು ಪೂರು ಎನ್ನುವ ಮಕ್ಕಳು ಹುಟ್ಟಿದರು.
ತಮ್ಮ ಆಜ್ಞೆಯನ್ನು ಮೀರಿ ಶರ್ಮಿಷ್ಠೆಗೆ ತನ್ನ ತಲ್ಪದಲ್ಲಿ ಎಡೆಕೊಟ್ಟಿದ್ದರಿಂದ ಯಯಾತಿ ಮಹಾರಾಜ, ಶುಕ್ರಾಚಾರ್ಯರ ಕೋಪವನ್ನು ಇನ್ನೊಮ್ಮೆ ಎದುರಿಸಬೇಕಾಯಿತು. ‘ಅಸತ್ಯವಂತನಾದ ಮೂರ್ಖನೇ, ಸ್ತ್ರೀ ಕಾಮಿಯೇ, ನೀನು ದೊಡ್ಡ ತಪ್ಪನ್ನು ಮಾಡಿದ್ದೀಯೆ. ಆದುದರಿಂದ ನಿನಗೆ ಮುಪ್ಪು ಮತ್ತು ವಿಕಲತೆಯು ಆವರಿಸಿ ನೀನು ಕುರೂಪಿಯಾಗಿ – ಹೋಗು!’ ಎಂದು ಶುಕ್ರಾಚಾರ್ಯರು ಶಪಿಸಿಬಿಟ್ಟರು.
ಆದರೆ ಕಾಲಿಗೆಬಿದ್ದ ಅಳಿಯ ಆದರೆ ಕಾಲಿಗೆಬಿದ್ದ ಅಳಿಯ ಯಯಾತಿಗೊಂದು ಯಯಾತಿಗೊಂದು ಉಪಶಾಪ ನೀಡಿದರು : ‘ಯಾರಾದರೂ ನಿನ್ನ ಮುಪ್ಪನ್ನು ಸ್ವೀಕರಿಸಿದರೆ, ನಿನ್ನ ಯೌವನ ಮರುಕಳಿಸುತ್ತದೆ!’
ಯೌವನವನ್ನು ಕೊಡು ಎಂದು ಬೇರೆಯವರನ್ನು ಕೇಳಲಾಗುತ್ತದೆಯೇ? ಯಯಾತಿಗೆ ಯೌವನದ ವಿನಿಮಯಕ್ಕೆ ತನ್ನ ಮಕ್ಕಳೇ ತಕ್ಕವರಾಗಿ ಕಂಡರು.
ಯಯಾತಿ ತನ್ನ ಹಿರಿಮಗ ಯದುವನ್ನು ಪ್ರಾರ್ಥಿಸಿದ : ‘ನನ್ನ ಪ್ರಿಯ ಪುತ್ರ ಯದು, ನನಗೊದಗಿರುವ ಶಾಪದ ವಿಷಯ ನಿನಗೆ ತಿಳಿದಿದೆ. ನಾನಿನ್ನೂ ಕಾಮ-ಮೋಹಗಳಿಂದ ಮುಕ್ತನಾಗಿಲ್ಲ. ನನ್ನ ಈ ಮುಪ್ಪು ಮತ್ತು ವಿಕಲತೆಗೆ ಬದಲಾಗಿ ದಯವಿಟ್ಟು ನಿನ್ನ ಯೌವನವನ್ನು ಕೊಡು!
ಯದು ಬೆಚ್ಚಿದ. ಅವನ ಮುಖ ಕಂಗೆಟ್ಟಿತು. ತಂದೆಗೆ ಎಂದೂ ಎದುರಾಡದ, ಪ್ರತಿ ಮಾತನ್ನೂ ಆಜ್ಞೆಯಂತೆ ಸ್ವೀಕರಿಸುವ ಯದು ಇಂದು ಪಿತೃವಾಕ್ಯ ಪರಿಪಾಲಕನಾಗುವುದು ಸಾಧ್ಯವಾಗಲಿಲ್ಲ. ಅವನು ಮನಸ್ಸು ಮುದುಡಿದವನಾಗಿ ಸಂಕೋಚದಿಂದಲೇ ಹೇಳಿದ :

‘ಪ್ರಿಯ ತಂದೆ, ನಿಮ್ಮ ಮಾತು ಕೇಳಿ ನನ್ನ ಎದೆಯಲ್ಲಿ ಭತ್ತ ಕುಟ್ಟಿದಂತಾಗಿದೆ. ನಿಮಗಾಗಿ ಏನು ಬೇಕಾದರೂ ಮಾಡಬಲ್ಲೆ ಎನ್ನುವ ನಿರ್ಧಾರ ನನ್ನದಾಗಿದ್ದರೂ, ಗ೦ಡಸೊಬ್ಬನ ಬದುಕಿನ ಅತಿ ಅಮೂಲ್ಯ ಅಂಶವಾದ ಯೌವನವನ್ನೇ ನೀವು ಕೇಳಿದಾಗ ಕೊಟ್ಟುಬಿಡಲು ಖಂಡಿತ ಮನಸ್ಸಾಗುತ್ತಿಲ್ಲ. ನೀವಾದರೂ ಸಾವಿರಾರು ವರ್ಷಗಳು ದಾಂಪತ್ಯ ಸುಖ ಅನುಭವಿಸಿದ್ದೀರಿ. ನನಗೆ ಎಲ್ಲವೂ ಇನ್ನೂ ಹೊಸದು. ಮತ್ತೆ, ಲೌಕಿಕ ಸುಖಗಳನ್ನು ಉಪಭೋಗಿಸದೆ ವೈರಾಗ್ಯವನ್ನು ಹೊಂದಲಾಗುವುದಿಲ್ಲ ಎನ್ನುವುದು ನಿಮಗೆ ಗೊತ್ತೇ ಇದೆ!”
ಯಯಾತಿಗೆ ಮಗನ ಮಾತಿನ ಅ೦ತರಾಳ ಅರ್ಥವಾಯಿತು. ಇನ್ನೂ ಚರ್ಚೆ ಮಾಡಿದರೆ ಮಾತುಗಳು ಎಲ್ಲೆಲ್ಲಿಗೂ ಹೋಗಬಹುದು ಎನಿಸಿತು. ಮತ್ತೆ ಇದೇ ಕೋರಿಕೆಯನ್ನೆ ತನ್ನ ಇತರ ಮಕ್ಕಳಾದ, ತುರ್ವಸು, ದ್ರುಹ್ಯು ಮತ್ತು ಅನು ಅವರನ್ನೂ ಕೇಳಿದಾಗ, ಅವರಿಂದಲೂ ಯದು ಕೊಟ್ಟ ಉತ್ತರವೇ ಬಂದಿತು.
ಧರ್ಮಶಾಸ್ತ್ರ ಪರಿಚಯವಿರುವ, ಜೀವನದ ಅನಿಶ್ಚಿತತೆ ಪರಿಚಯವಿದ್ದ ಈ ರಾಜಕುಮಾರರು ತಂದೆಯ ದೃಷ್ಟಿಯಲ್ಲಿ ಆ ಕೋರಿಕೆಯನ್ನು ಪರಿಶೀಲಿಸಲಿಲ್ಲ. ಬದಲಿಗೆ ತಮ್ಮ ಯೌವನಕ್ಕೆ ಮುಪ್ಪು ಬರಬಾರದು. ತಮ್ಮ ಯೌವನವನ್ನು ತಾವು ಅನುಭವಿಸುತ್ತಲೇ ಇರಬೇಕು ಅಂದುಕೊಂಡರು. ಯಾವುದೂ ಶಾಶ್ವತವಲ್ಲ ಎನ್ನುವ ಯೋಚನೆಯನ್ನು ಅವರು ಮಾಡಲಿಲ್ಲ. ತಂದೆಯ ಆಜ್ಞೆಯನ್ನೂ ಅವರಯ ಧಿಕ್ಕರಿಸಿದರು.
ಯಯಾತಿಗೆ ಈಗ ಪ್ರಾರ್ಥಿಸಲು ಉಳಿದವರು, ಕಟ್ಟಕಡೆಯ ಮಗ, ಪೂರು. ಇವನು ಎಲ್ಲರಿಗಿಂತಲೂ ಗುಣವಂತ. ಆಲೋಚಿಸಬಲ್ಲವನು.
ಯಯಾತಿ ಇವನ ಮುಂದೆ ಭಿಕ್ಷುಕನ ಹಾಗೆ ಬಂದು ನಿಂತು ಬೇಡಿದ : ‘ಪ್ರಿಯ ಪೂರು, ನೀನು ನಿನ್ನ ಅಣ್ಣಂದಿರಂತೆ ಅವಿಧೇಯನಾಗುವುದಿಲ್ಲ ಎಂದು ಭಾವಿಸಿದ್ದೇನೆ. ಪಿತೃವಾಕ್ಯವನ್ನು ಪಾಲಿಸುವೆ ಎಂದುಕೊಂಡು ಕೋರುತ್ತಿದ್ದೇನೆ; ನನ್ನ ಮುಪ್ಪಿನ ಬದಲಿಗೆ ನಿನ್ನ ಯೌವನವನ್ನು ಕೊಡು! ಒಂದಿಷ್ಟು ವರ್ಷಗಳು ಅನುಭವಿಸಿ ಹಿಂತಿರುಗಿಸುತ್ತೇನೆ!’
ಪೂರುವಿಗೆ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ಭಾರವಾದ ಎದೆಯ ಮಾತುಗಳನ್ನಾಡಿದನು:
‘ಪೂಜ್ಯ ತಂದೆ, ಇಂತಹ ಸಂದರ್ಭ ಯಾವ ತಂದೆ-ಮಗನಿಗೂ ಬರಬಾರದು. ಮಗ ಯೌವನದ ಘಟ್ಟ ತಲಪಿದಾಗ ಸುಖಭೋಗಗಳ ಶಿಖರವೇರಬೇಕು ಎಂದೇ ಎಲ್ಲ ಹೆತ್ತವರೂ ಬಯಸುತ್ತಾರೆ. ಅವನಿಗೆ ವಯಸ್ಸಾಗುವ ಮೊದಲೇ ದಾಂಪತ್ಯಕ್ಕಿಳಿಸುತ್ತಾರೆ. ಆದರೆ, ನೀವಿಂದು ತಂದೆಯಾಗಿ ಮಗನ ಆ ಯೌವನವನ್ನೇ ಬೇಡುತ್ತಿದ್ದೀರಿ.
ಎಂತಹ ವಿಪರ್ಯಾಸ ಇದು! ತಂದೆಯ ಋಣ ತೀರಿಸುವ ಅವಕಾಶವನ್ನು ತಪ್ಪಿಸಿಕೊಳ್ಳುವಂತಿಲ್ಲ. ಬದುಕಿನಲ್ಲಿ ಆಶಾಶ್ವತವಾದ ಯೌವನವನ್ನು ಅನುಭವಿಸುವಂತಿಲ್ಲ. ನಿಮ್ಮ ಆಜ್ಞೆಯನ್ನು ನಾನು ಪಾಲಿಸುತ್ತೇನೆ. ನನ್ನ ಯೌವನವನ್ನು ತೆಗೆದುಕೊಂಡು ನನಗೆ ನಿಮ್ಮ ಮುಪ್ಪು ಕೊಡಬಹುದು!’
ಹೃದಯಕ್ಕೆ ಕೊಡಲಿ ಪೆಟ್ಟು ಬಿದ್ದಷ್ಟು ನೋವಾದರೂ, ಯಯಾತಿ ಮಗನನ್ನು ಬಿಗಿದಪ್ಪಿಕೊಂಡು ಕಣ್ಣೀರು ಸುರಿಸುತ್ತಲೇ ಅವನ ಯೌವನವನ್ನು ಪಡೆದುಕೊಂಡ. ಅತ್ಯಂತ ಸುಂದರ, ಬಲಶಾಲಿಯಾಗಿದ್ದ ಪ್ರೀತಿಯ ಪುತ್ರ ದಿಢೀರನೆ ಬೆನ್ನುಬಾಗಿ, ತಲೆ ನೆರೆತು ಸುಕ್ಕುಗಟ್ಟಿ ಹೋದಾಗ, ಯಯಾತಿ ತನ್ನ ಅತೃಪ್ತ ಕಾಮನೆಗಳನ್ನು ಮನಸ್ಸಿನಲ್ಲೇ ಶಪಿಸಿಕೊಂಡ.
ಮರುಕ್ಷಣವೇ ಅವನ ಮನಸ್ಸು ದೇವಯಾನಿಯ ಯುವ ದೇಹದತ್ತ ಹಾರಿತ್ತು. ಯಯಾತಿ ಮುಂದಿನ ನೂರಾರು ವರ್ಷಗಳು ಮನಬಂದಂತೆ ಲೌಕಿಕ ಸುಖ ಸಂತೋಷಗಳನ್ನು ಉಪಭೋಗಿಸಿದನು. ಜೊತೆ ಜೊತೆಗೆ, ಅನೇಕ ಯಜ್ಞಗಳನ್ನೂ ಆಚರಿಸಿದನು. ಅದರಲ್ಲಿ ಸಕಲ ದೇವತೆಗಳ ನಿಧಿಯೂ, ಸಕಲ ವೇದ ಜ್ಞಾನದ ಗುರಿಯೂ ಆದ ಪರಮ ಪ್ರಭು ಹರಿಯನ್ನು ಸಂತೃಪ್ತಿಗೊಳಿಸಲು ಬ್ರಾಹ್ಮಣರಿಗೆ ಭೂರಿದಕ್ಷಿಣೆಯನ್ನು ನೀಡಿದನು.

ಎಲ್ಲರ ಹೃದಯಗಳಲ್ಲೂ ನಾರಾಯಣನಾಗಿ ನೆಲೆಸಿರುವ ಪರಮ ಪ್ರಭುವನ್ನು ಲೌಕಿಕ ಕಾಮನೆಗಳಿಂದ ವಿರಹಿತನಾಗಿ ಆರಾಧಿಸಿದನು.
ಆದರೆ, ಒಂದು ವಿಷಯವಂತೂ ಅವನ ಗಮನಕ್ಕೆ ಬಂದಿತು: ‘ಸಾವಿರ ಸಾವಿರ ವರ್ಷಗಳು ಲೌಕಿಕ ಸಂಪತ್ತುಗಳ ಉಪಭೋಗದಲ್ಲಿ ತೊಡಗಿದ್ದರೂ, ತೃಪ್ತಿ ಎನ್ನುವುದು ಖಂಡಿತ ಎಟುಕುವುದಿಲ್ಲ!’
ಅವನಿಗೂ ಈ ಭೋಗಜೀವನದಲ್ಲಿ ಜುಗುಪ್ಪೆ ಬಂದಿತು.
ಅವನ ಮನಸ್ಸಿನ ಉಪಭೋಗಾಕಾಂಕ್ಷೆಗಳು ತಣಿದಿದ್ದವು.
ಇವುಗಳಿಂದ ತಾನು ಬಿಡಿಸಿಕೊಂಡಿದ್ದರೂ, ತನ್ನ ಹೆಂಡತಿಯರು, ಮುಖ್ಯವಾಗಿ ದೇವಯಾನಿ ಈ ಕಾಮಮೋಹಗಳಿಂದ ಬಿಡಿಸಿಕೊಳ್ಳುವಂತಾಗಬೇಕು ಎಂದನ್ನಿಸಿತವನಿಗೆ ಭೋಗ ಜೀವನದ ಉತ್ಕಂಠದಲ್ಲಿದ್ದ ದೇವಯಾನಿಗೆ ನೇರವಾಗಿ ಇವೆಲ್ಲವನ್ನು ಹೇಳಿದರೆ, ಅವಳಿಗೆ ಅರ್ಥವಾಗದು. ಆದ್ದರಿಂದ ಸಾದೃಶ್ಯದ ಕಥೆಯೊಂದನ್ನು ಕಟ್ಟಿ ಹೇಳಿ ಅವಳಿಗೆ ಮನಗಾಣಿಸಬೇಕು ಎಂದುಕೊಂಡು, ಒಂದು ಹೋತ-ಮೇಕೆಯ ಕಥೆಯನ್ನು ಸೃಷ್ಟಿಸಿದ.
ದೇವಯಾನಿಯನ್ನು ಆತ್ಮೀಯವಾಗಿ ಹತ್ತಿರವಿರಿಸಿಕೊಂಡು ಯಯಾತಿ ಹೇಳಿದ:
‘ನನ್ನ ಪ್ರೀತಿಯ ದೇವಯಾನಿ, ನಿನಗೆ ಇವತ್ತೊಂದು ಕಥೆಯನ್ನು ಹೇಳಬೇಕು ಅನ್ನಿಸಿದೆ. ಮನಸ್ಸುಕೊಟ್ಟು ಕೇಳು.”
‘ಒಂದಾನೊಂದು ಕಾಲದಲ್ಲಿ ಹೋತವೊಂದು ಬಗೆಬಗೆಯ ಸಸ್ಯಗಳನ್ನು ಅರಸುತ್ತ ಕಾಡಿನಲ್ಲಿ ಅಲೆದಾಡುತ್ತ ಬಾವಿಯೊಂದರ ಬಳಿಗೆ ಬಂದಿತು. ಅಲ್ಲಿ ಸುಂದರ ಮೇಕೆಯೊಂದನ್ನು ಕಂಡಿತು. ಮೇಕೆಯನ್ನು ಹೇಗೊ ಮೇಲಕ್ಕೆತ್ತಿತು. ಆ ಕೂಡಲೇ ಅದಕ್ಕೆ ಆ ಮೇಕೆಯ ಮೇಲೆ ಆಕರ್ಷಣೆ ಮೂಡಿತು.
ಮೇಕೆಗೂ ದಷ್ಟಪುಷ್ಟವಾಗಿದ್ದ ಹೋತವನ್ನು ಮೋಹಿಸುವಂತಾಯಿತು. ಮೇಕೆ ಹೋತನ ಹತ್ತಿರ ಬಂದು ನಿಂತಾಗ, ಅಲ್ಲಿನ ಅನೇಕ ಮೇಕೆಗಳೂ ಈ ಹೋತನತ್ತ ಆಕರ್ಷಣೆಗೊಂಡು ಬಂದವು. ಹೋತದ ಪ್ರಣಯದಾಟಕ್ಕೆ ಮೇಕೆಗಳೆಲ್ಲವೂ ಆಹಾರವಾದವು. ಆದರೆ, ಬಾವಿಯಲ್ಲಿ ಬಿದ್ದಿದ್ದ ಮೇಕೆ ಈ ಹೋತ ತನ್ನದು ಮಾತ್ರ ಎಂದು ಅಂದುಕೊಂಡಿತ್ತು.
ಉಳಿದೆಲ್ಲ ಮೇಕೆಗಳ ಆಟ ಇದಕ್ಕೆ ಸಹಿಸಲಾಗಲಿಲ್ಲ. ಹೋತನಿಂದ ಬಿಡಿಸಿಕೊಂಡು ದೂರ ಹೊರಟುಹೋಯಿತು. ಆದರೆ, ಹೋತನಿಗೆ ಈ ಮೇಕೆಯಿಲ್ಲದೆ ಬದುಕಿರಲಿಲ್ಲ. ಅದರ ಹಿಂದೆ ಹಿಂದೆ ಹೋಯಿತು. ಅದರ ಮನ ಒಲಿಸಿಕೊಳ್ಳಲು ಪ್ರಯತ್ನಿಸಿತು. ಆದರೆ, ಮೇಕೆ ಸಮಾಧಾನಗೊಳ್ಳಲಿಲ್ಲ. ಈ ಮೇಕೆಯ ಪೋಷಕನಾದ ಬ್ರಾಹ್ಮಣ ರೋಷದಿಂದ ಹೋತನ ವೃಷಣಗಳನ್ನು ಕತ್ತರಿಸಿ ಹಾಕಿದ. ಆದರೆ, ಹೋತ ದುಃಖದಿಂದ ಪ್ರಾರ್ಥನೆ ಮಾಡಿದ ಮೇಲೆ, ತನ್ನ ಯೋಗಶಕ್ತಿಯಿಂದ ಅವನ್ನು ಮತ್ತೆ ಜೋಡಿಸಿದ.

‘ಪ್ರಿಯ ದೇವಯಾನಿ, ಆ ಹೋತ ಹೀಗೆ ವೃಷಣಗಳನ್ನು ಮರಳಿ ಪಡೆಯಿತು. ಮತ್ತೆ ಮೇಕೆಯೊಂದಿಗೆ ಕಾಮೋಪಭೋಗಗಳಲ್ಲಿ ತೊಡಗಿತು. ಅನೇಕ ವರ್ಷಗಳು ಹೀಗೆ ಭೋಗದಲ್ಲಿ ತೊಡಗಿದ್ದರೂ ಇಂದಿಗೂ ಅದರ ಆಕಾಂಕ್ಷೆ ತೃಪ್ತಿಗೊಂಡಿಲ್ಲ!”
ಯಯಾತಿ ಮಾತು ನಿಲ್ಲಿಸಿ ದೇವಯಾನಿಯ ಮುಖವನ್ನೇ ನೋಡಿದ.
ದೇವಯಾನಿ ಕಸಿವಿಸಿಗೊಂಡಂತೆ ಕಂಡಳು. ಅವಳಿಗೆ ಈ ಹೋತ-ಮೇಕೆ ಕಥೆಗೂ, ಯಯಾತಿ ಮತ್ತು ತನ್ನ ಬದುಕಿಗೂ ಸಾಮ್ಯ ಕಂಡಿತು. ಕೂಡಲೇ ಕೇಳಿದಳು: ‘ಪ್ರಿಯ, ಪತಿದೇವ, ಕ್ಷುಲ್ಲಕವೆಂಬಂತೆ ಕಾಣುವ ಈ ಹೋತ-ಮೇಕೆ ಕಥೆಯನ್ನು ನನಗೆ ಹೇಳಿದ್ದಾದರೂ ಏಕೆ? ಇದರಲ್ಲಿ ನಮ್ಮಿಬ್ಬರ ಸಂಬಂಧದ ನೋಟಗಳನ್ನು ಹೆಣೆದಿದ್ದೇತಕ್ಕೆ?”
ಯಯಾತಿ ಗಂಭೀರವಾಗಿ ಹೇಳಿದ:
‘ಪ್ರಿಯ ದೇವಯಾನಿ, ನನ್ನ ನಿನ್ನ ಸಂಬಂಧ, ನಿನ್ನ ತಂದೆಯ ಶಾಪ ಮತ್ತು ಯೋಗಶಕ್ತಿಯ ಪ್ರದರ್ಶನ, ಹೋತ-ಮೇಕೆಗಳ ಪ್ರಸಂಗಕ್ಕಿಂತಲೂ ಉತ್ತಮವಾದುದೇನಲ್ಲ ಎಂದು ನಿನಗೆ ತಿಳಿಸಲು ಈ ಯಃಕಶ್ಚಿತ್ ಕಥೆಯನ್ನು ಸೃಷ್ಟಿಸಬೇಕಾಯಿತು. ಪ್ರಿಯ ದೇವಯಾನಿ, ನಾನು ಮಂದಮತಿಯ ಹಾಗೆ ನಿನ್ನ ಸೌಂದರ್ಯದ ಮೋಡಿಗೊಳಗಾದೆ.
ಇದೇ ಸರ್ವಸ್ವ ಎಂದುಕೊಂಡು, ಸಾಕ್ಷಾತ್ಕಾರವೆಂಬ ನನ್ನ ನಿಜವಾದ ಕಾರ್ಯವನ್ನು ಮರೆತೇಬಿಟ್ಟೆ. ಕಾಮಮೋಹಿತನಾದ ಮನುಷ್ಯನ ಮನಸ್ಸು, ಬತ್ತ, ಜವೆ, ಇತರ ಧಾನ್ಯಗಳು, ಚಿನ್ನ, ಪಶುಗಳು, ಸ್ತ್ರೀಯರು ಮೊದಲಾದವನ್ನು ಒಳಗೊಂಡಂತೆ ಈ ಪ್ರಪಂಚದ ಸಮಸ್ತ ವಸ್ತುಗಳಿಂದಲೂ ತೃಪ್ತಿಯನ್ನು ತಾಳದು, ಯಾವುದೂ ಅವನನ್ನು ತೃಪ್ತಿಗೊಳಿಸಲಾರದು.
‘ಪ್ರಿಯೆ, ಅಗ್ನಿಗೆ ತುಪ್ಪವನ್ನು ಸುರಿದರೆ ಉರಿಯನ್ನು ನಂದಿಸುವ ಬದಲು ಇನ್ನೂ ಹೆಚ್ಚು ಉಜ್ವಲಗೊಳ್ಳುವಂತೆ ಮಾಡುತ್ತದೆ. ಸತತವಾಗಿ ಉಪಭೋಗವನ್ನು ಪಡೆಯುತ್ತಾ ಕಾಮೇಚ್ಛೆಗಳನ್ನು ತಡೆಯಲು ಪ್ರಯತ್ನಿಸಿದರೆ, ಅದು ಎಂದೂ ಯಶಸ್ವಿಯಾಗುವುದಿಲ್ಲ. ನಿರ್ಮತ್ಸರವಾದ ಮನುಷ್ಯನು ಯಾರಿಗೂ ಅಮಂಗಳವನ್ನು ಬಯಸುವುದಿಲ್ಲ.
ಆಗ ಅವನು ಸಮದೃಷ್ಟಿಯನ್ನು ಹೊಂದಿರುತ್ತಾನೆ. ಅಂತಹವನಿಗೆ ಎಲ್ಲ ದಿಕ್ಕುಗಳೂ ಸುಖಮಯವಾಗಿಯೇ ಕಾಣುತ್ತವೆ. ಲೌಕಿಕ ಉಪಭೋಗಗಳಲ್ಲಿ ಅತ್ಯಾಸಕ್ತರಾದವರಿಗೆ ಇಂದ್ರಿಯ ತೃಪ್ತಿಯನ್ನು ತ್ಯಜಿಸುವುದು ಬಹಳ ಕಷ್ಟ. ವ್ಯಕ್ತಿಯು ಮುಪ್ಪಿನಿಂದ ಶಕ್ತಿಗುಂದಿದವನಾಗಿದ್ದರೂ ಇಂದ್ರಿಯ ತೃಪ್ತಿಯ ಆಸೆಗಳನ್ನು ಬಿಡಲಾರ. ಆದುದರಿಂದ ದಿಟವಾಗಿಯೂ ಸುಖವನ್ನು ಬಯಸುವವರು ಅಂತಹ ಅತೃಪ್ತ ಕಾಮನೆಗಳನ್ನು ತ್ಯಜಿಸಬೇಕು. ಅವು ಸಕಲ ದುಃಖಗಳಿಗೆ ಕಾರಣ!
ಯಯಾತಿ ಮಹಾರಾಜ ತನ್ನ ಬದುಕಿನ ಅತಿ ಅಮೂಲ್ಯ ಮಾತುಗಳನ್ನಾಡುತ್ತಿದ್ದ. ಬದುಕಿನಲ್ಲಿ ಮೊಟ್ಟ ಮೊದಲ ಬಾರಿಗೆ ತನ್ನ ಹೃದಯದಲ್ಲಿ ಅದುಮಿಕೊಂಡಿದ್ದ ಮಾತುಗಳನ್ನು ಹೊರಹಾಕಿದ್ದ. ಮುಖವಾಡದೊಂದಿಗೆ ಕಾಲ ತಳ್ಳುವುದು ಅವನಿಗೂ ಅಸಹನೀಯವಾಗಿತ್ತು.
ಈ ಸಂದರ್ಭದಲ್ಲಿ ಶುಕ ಮುನಿಗಳು ಹೇಳಿದರು :
ಅನೇಕ ರಾಜಮಹಾರಾಜರು ರಾಜರ್ಷಿಗಳಾಗಿ ಬಾಳಿದ್ದಾರೆ: ಯಯಾತಿಗೆ ಅವರಂತೆಯೇ ಅವಕಾಶವಿತ್ತು. ಮೂಲತಃ ದೇವಭಕ್ತನೂ, ಯಜ್ಞಯಾಗಾದಿ ನಿರತನೂ, ಧರ್ಮಿಷ್ಟನೂ ಆಗಿದ್ದ ಯಯಾತಿ ಹೆಣ್ಣಿನ ಅತಿ ಮೋಹಕ್ಕೆ ಒಳಗಾಗಿದ್ದೊಂದು ದುರಂತ. ವ್ಯಕ್ತಿಯೊಬ್ಬ ತನ್ನ ಪತ್ನಿಯ ವ್ಯಾಮೋಹದಲ್ಲಿ ಕಟ್ಟುಬಿದ್ದಿರುವಾಗ ಅಜೇಯವಾದ ಕಾಮೇಚ್ಛೆಗೆ ಬದ್ಧನಾಗಿರುತ್ತಾನೆ.
ಹೀಗೆ ಪತ್ನಿಯ ಸೌಂದರ್ಯಕ್ಕೆ ಬಲಿಯಾಗಿ ಉಳಿದುಬಿಟ್ಟರೆ, ಅವನ ಕುಟುಂಬ ಜೀವನವು ಅಂಧಕಾರ ಕೂಪವಲ್ಲದೆ ಮತ್ತೇನೂ ಅಲ್ಲ. ಅಂತಹದೊಂದು ಕತ್ತಲ ಕೂಪದಲ್ಲಿರುವುದು ಖಂಡಿತವಾಗಿಯೂ ಒಂದು ರೀತಿಯ ಆತ್ಮಹತ್ಯೆ. ವ್ಯಕ್ತಿಯೊಬ್ಬನ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದೇ ಲೌಕಿಕವಾದಿಯ ಗುರಿ ಮತ್ತು ಉದ್ದೇಶ.
ಆದರೆ ಈ ಲೌಕಿಕ ಪ್ರಗತಿಗೆ ಕೊನೆಯೆಂಬುದೇ ಇಲ್ಲ. ಏಕೆಂದರೆ ವ್ಯಕ್ತಿಯು ತನ್ನ ಕಾಮೇಚ್ಛೆಗಳನ್ನು ನಿಯಂತ್ರಿಸಲಾಗದಿದ್ದರೆ, ಪ್ರಪ೦ಚದ ಭೌತಿಕ ಸಂಪತ್ತೆಲ್ಲವೂ ಅವನಿಗೆ ದೊರೆತರೂ, ಅವನೆಂದೂ ತೃಪ್ತನಾಗುವುದಿಲ್ಲ!”

‘ಪ್ರಿಯ ರಾಜನೇ, ಯಾವುದರಲ್ಲಿ ಮನುಷ್ಯ ಮೈಮರೆಯಬಾರದು, ತೊಡಗಬಾರದು ಎಂದು ಹಿರಿಯರು ಹೇಳಿದ್ದಾರೆಯೊ, ಅದರಲ್ಲೇ ಯಯಾತಿ ಮುಳುಗಿಕೊಂಡ. ಅದು ಹಸಿಕೆಸರು ಎಳೆಯುವಂತೆ ಅವನನ್ನು ಎಳೆದುಕೊಂಡಿತು. ಅದರಿಂದ ಬಿಡಿಸಿಕೊಳ್ಳಲಾಗದೆ, ಮೇಲೇಳಲಾಗದೆ, ಹೊರಬರಲಾಗದೆ ಯಯಾತಿ ಚಡಪಡಿಸಿದ.
ಜೊತೆಗೆ ಆ ಮೋಹದ, ಸುಖದ ರುಚಿಯನ್ನು ದೇವಯಾನಿಯಾದಿಯಾಗಿ ತನ್ನಹೆಂಡತಿಯರೆಲ್ಲರಿಗೂ ಅಂಟಿಸಿಬಿಟ್ಟಿದ್ದ. ಈಗ ತಾನು ಬಿಟ್ಟರೂ ತನ್ನನ್ನು ಬಿಡದೆ ಮಾಯೆಯಂತೆ ಅದು ಆವರಿಸಿಕೊಂಡು ಬಿಟ್ಟಿತ್ತು. ಈ ಬಿಗಿ ಬಲೆಯಿಂದಲೂ ಬಿಡಿಸಿಕೊಳ್ಳಲೇಬೇಕಾದ ಕಾಲ ಬಂದಾಗ, ಯಯಾತಿ ಹೆ೦ಡತಿಯ ಮನಗಾಣಿಸಲೇ ಬೇಕಾಯಿತು. ಅವನು ಹೆಂಡತಿಗೆ ಮೋಹದಿಂದ ಹೊರಬೇಕಾದ ವನವಾಸಿಯಾಗಬೇಕಾದ ಬದುಕಿನ ಅಂತಿಮ ಆಶ್ರಮದ ಬಗ್ಗೆ ಹೇಳಲೇಬೇಕಾಯಿತು!’
ಯಯಾತಿ ದೇವಯಾನಿಗೆ ಹೇಳಿದ:
‘ಪ್ರಿಯೆ, ಇದನ್ನೆಲ್ಲ ಈಗೇಕೆ ಹೇಳುತ್ತಿದ್ದೇನೆ ಎಂದು ನಿನಗೆ ಆಲೋಚನೆಯಾಗಿರಬಹುದು. ಪ್ರಿಯೆ, ನಮ್ಮ ನಮ್ಮ ಮನಸ್ಸುಗಳನ್ನು ಪರಿಶೋಧನೆ ಮಾಡಿ ನೋಡಿದಾಗ, ನಾವು ಏನನ್ನು ಕಳೆದುಕೊಂಡಿದ್ದೇವೆ, ಯಾವುದೇ ಅನ್ಯಥಾ ಪ್ರಾಮುಖ್ಯ ನೀಡಿದ್ದೇವೆ ಎನ್ನುವುದು ತಿಳಿಯುತ್ತದೆ. ಪ್ರಿಯೆ, ನಾವು ಸಂಪೂರ್ಣವಾಗಿ ಒಂದು ಸಾವಿರ ವರ್ಷಗಳ ಕಾಲ ಇಂದ್ರಿಯ ತೃಪ್ತಿಯನ್ನು ಉಪಭೋಗಿಸುತ್ತ ಕಳೆದಿದ್ದೇವೆ.
ಆದರೂ ಅಂತಹ ಸುಖವನ್ನು ಭೋಗಿಸುವ ಇಚ್ಛೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದುದರಿಂದ ಪ್ರಿಯ ದೇವಯಾನಿ, ನಾವು ಇದಕ್ಕೊಂದು ಮುಕ್ತಾಯವನ್ನು ಹಾಡಬೇಕು. ನಾವು ಎಲ್ಲ ಕಾಮನೆಗಳನ್ನೂ ತ್ಯಜಿಸಿ ದೇವೋತ್ತಮ ಪರಮ ಪ್ರರುಷನನ್ನು ಕುರಿತು ಧ್ಯಾನಿಸಬೇಕು. ಮನಸ್ಸಿನ ಕಲ್ಪಿತ ದ್ವ೦ದ್ವಗಳಿ೦ದ ಮುಕ್ತರಾಗಿ ಹಾಗೂ ಒಣ ಪ್ರತಿಷ್ಠೆಗಳಿಂದ ಬಿಡುಗಡೆ ಹೊಂದಿ, ಅರಣ್ಯ ವಾಸಿಗಳಾಗಬೇಕು, ವನ್ಯಪ್ರಾಣಿಗಳೊಂದಿಗೆ ಸಂಚರಿಸಬೇಕು, ತಪಸ್ವಿಗಳ-ಮುನಿಪತ್ನಿಗಳ ಕಾಲಿಗೆ ಬೀಳಬೇಕು, ಎಲ್ಲ ಆಶಾಪಾಶ-ಕಾಮನೆಗಳಿಂದ ಮುಕ್ತರಾಗಬೇಕು!
ಶುಕ ಮುನಿಗಳು ಮುಂದುವರಿಸಿದರು :
‘ಯಯಾತಿಯ ಮನಸ್ಸು ತಿಳಿಗೊಂಡಿತ್ತು. ಎಲ್ಲವೂ ಅರ್ಥವಾಗಿತ್ತು. ಪ್ರಿಯ ಮುನಿಗಳೆ, ಲೌಕಿಕವಾದ ಸುಖವು ಒಳ್ಳೆಯದಾಗಿರಲಿ ಅಥವಾ ಕೆಟ್ಟದಾಗಿರಲಿ, ಈ ಜನ್ಮದಲ್ಲಾಗಲಿ ಅಥವಾ ಮುಂದಿನ ಜನ್ಮದಲ್ಲಾಗಲಿ, ಈ ಲೋಕದಲ್ಲಾಗಲಿ ಅಥವಾ ಸ್ವರ್ಗಲೋಕದಲ್ಲಾಗಲಿ ಅನಿತ್ಯ ಮತ್ತು ನಿಸ್ಪ್ರಯೋಜಕ ಎಂದು ತಿಳಿದವನು, ಮತ್ತು ಬುದ್ಧಿವಂತನಾದವನು ಅಂತಹ ವಸ್ತುಗಳನ್ನು ಉಪಯೋಗಿಸುವುದಿರಲಿ ಅವುಗಳನ್ನು ಕುರಿತು ಚಿಂತಿಸಲೂಬಾರದು ಎಂದು ತಿಳಿದವನು ನಿಜವಾದ ಆತ್ಮಜ್ಞಾನಿ.
ಲೌಕಿಕ ಸುಖವೇ ಲೌಕಿಕ ಅಸ್ತಿತ್ವದ ಮುಂದುವರಿಕೆಗೆ ಕಾರಣವೆಂದೂ, ತನ್ನ ಮೂಲ ಸ್ಥಿತಿಯ ವಿಸ್ಮೃತಿಗೆ ಕಾರಣವೆಂದೂ ಅಂತಹ ಆತ್ಮಜ್ಞಾನಿಯು ತಿಳಿದಿರುತ್ತಾನೆ!’
ಕೊನೆಗೂ ಯಯಾತಿಯ ಬದುಕಿನಲ್ಲಿ ಅಂತಹ ಆತ್ಮಜ್ಞಾನದ ಸಂದರ್ಭ ಬಂದುಬಿಟ್ಟಿತು. ಅವನು ಪಾಪಪ್ರಜ್ಞೆಯಿಂದ ಪಶ್ಚಾತ್ತಾಪದಿಂದ ನೊಂದಿದ್ದನು. ತನ್ನ ನಿಜರೂಪ ಎಷ್ಟು ಬೇಗ ತನಗೆ ಹಿಂತಿರುಗಿದರೆ ಅಷ್ಟು ಒಳ್ಳೆಯದು ಎಂದುಕೊಳ್ಳುವುದಕ್ಕಿಂತಲೂ, ತನಗೆ ಹೃದಯ ವೈಶಾಲ್ಯದಿಂದ ಅಮೂಲ್ಯವಾದ ತನ್ನ ಯೌವನವನ್ನು ನೀಡಿ ಕುರೂಪಿ ವೃದ್ಧನಾಗಿ ಬದುಕುತ್ತಿರುವ ಪೂರುವಿಗೆ ಅವನ ಜೀವನವನ್ನು ಮರಳಿಸುವ ಕ್ಷಣ ಎಂದು ಬಂದೀತೊ ಎಂದು ಚಡಪಡಿಸುವಂತಾಯಿತು.
ಯಯಾತಿ ಪೂರುವನ್ನು ಹುಡುಕಿಕೊಂಡು ಹೋಗಬೇಕಾಯಿತು. ಅವನು ಅರಮನೆಯ ವೈಭವದಲ್ಲಿರಲಿಲ್ಲ. ವಿರಕ್ತ ಮುನಿಗಳು, ಸಹಜ ವಯೋವೃದ್ಧರು ವಾಸಿಸುತ್ತಿದ್ದ ವನ್ಯ ಪ್ರದೇಶಗಳಲ್ಲಿ ಅಲೆಮಾರಿಯಾಗಿದ್ದ.
ಯಯಾತಿಗೆ ಹೃದಯದ ನೋವು ತಡೆಯಲಾಗಲಿಲ್ಲ ಕೂಡಲೇ ತನ್ನ ಪತ್ನಿಯರು ಪರಿವಾರದವರೊಂದಿಗೆ ಅರಣ್ಯಕ್ಕೆ ನಡೆದು ಪೂರುವನ್ನು ಹುಡುಕಾಡಿದ.
ಕೊನೆಗೂ ಅವನು ಸಿಕ್ಕಿದಾಗ, ಮಡದಿ ಮಕ್ಕಳೊಂದಿಗೆ ಸರ್ವ ಸುಖಭೋಗಗಳನ್ನು ಅನುಭವಿಸಬೇಕಾಗಿದ್ದ ತನಗಿಂತಲೂ ವಯಸ್ಸಿನಲ್ಲಿ ಅನೇಕ ವರ್ಷಗಳು ಕಿರಿಯನಾಗಿದ್ದ ಅವನು ವಯೋವೃದ್ದ ವೃಕ್ಷವೊಂದರ ಅಡಿಯಲ್ಲಿ ಮುದುಡಿಕೊಂಡು ಬಿದ್ದಿರುವುದು ಕಾಣಿಸಿತು.
ಸಾರ್ವಭೌಮನಾಗಿ ಸಕಲ ಸೌಭಾಗ್ಯಗಳೊಂದಿಗೆ ರಸಬದುಕು ಅನುಭವಿಸಬೇಕಾಗಿದ್ದವನು, ಕಾಡಿನ ಮೃಗಪಕ್ಷಿಗಳ ಹಾಗೆ, ಕ್ರಿಮಿಕೀಟಗಳ ಹಾಗೆ ಬಿದ್ದಿರುವುದನ್ನು ನೋಡಿ ಯಯಾತಿ ಮಹಾರಾಜ ಬೆವತುಹೋದ. ಇನ್ನೆಷ್ಟು ಯುಗಗಳು ಯಜ್ಞಯಾಗಾದಿಗಳನ್ನು ಮಾಡಿದರೂ ಈ ಕಳಂಕ ಕಳೆಯುವುದಿಲ್ಲ ಎನ್ನಿಸಿತು.

ಕೂಡಲೇ ಮೈಮೇಲೆ ಪ್ರಜ್ಞೆಯಿಲ್ಲದವನ ಹಾಗೆ ವೃಕ್ಷದಡಿಗೆ ಓಡಿಬಂದ. ವೇಗದಿಂದ ಮುನ್ನುಗ್ಗಿ ಮಗನನ್ನು ಹಿಡಿದಪ್ಪಿಕೊಂಡ. ಯೌವನರೂಪಿ ಯಯಾತಿಯ ಬಿಗಿಯಪ್ಪುಗೆಯನ್ನು ತಾಳಲಾರದೆ ವೃದ್ಧರೂಪಿ ಪೂರು ನರಳಿದ. ನಿಧಾನ, ನಿಧಾನ, ತಂದೆಯೇ, ಅಷ್ಟೊಂದು ಬಿಗಿಯನ್ನು ನಾನು ತಾಳಲಾರೆ!’ – ಎ೦ದ.
ಯಯಾತಿಗೆ ದುಃಖ ಉಕ್ಕಿಬಂತು. ಪ್ರೀತಿಯ ಮಗನನ್ನು ಎಂತಹದೊಂದು ಅವಸ್ಥೆಗೆ ಈಡುಮಾಡಿಬಿಟ್ಟೆ ಎಂದುಕೊಂಡಾಗ ತನ್ನ ಸ್ವಾರ್ಥಕಾಮನೆಗಳನ್ನು ಶಪಿಸಿದ. ಕೂಡಲೇ ಕಿರಿಚಿದ:
‘ಪ್ರಿಯ ಮಗೂ ಪೂರು, ನನ್ನ ಸುಖಕ್ಕಾಗಿ ನಿನ್ನ ಸುಖವನ್ನು ಕಿತ್ತುಕೊಂಡುಬಿಟ್ಟೆ. ನನ್ನನ್ನು ಕ್ಷಮಿಸು ಮಗು. ಇಗೋ, ನಿನ್ನ ಅಮೂಲ್ಯ ಯೌವನವನ್ನು ಸ್ವೀಕರಿಸು, ನನ್ನ ವೃದ್ಧಾಪ್ಯ ನನ್ನನ್ನು ಆವರಿಸಿಕೊಳ್ಳಲಿ!”
ಏನೊ ಹೇಳಲು ಪೂರು ಬಾಯಿ ತೆಗೆದು, ಕೈಸನ್ನೆ ಮಾಡುವ ಮೊದಲೇ ಯಯಾತಿಯ ಯುವಮೈ ಬಾಗಿ ಮುದುಡಿಕೊಂಡಿತು. ಇಡೀ ದೇಹದ ರೋಮ ರೋಮಗಳೆಲ್ಲವೂ ಬಿಳುಪಾದವು ಕೈಕಾಲು ಮುಖವೆಲ್ಲವೂ ಸುಕ್ಕುಸುಕ್ಕಾದವು!
ಪೂರು ಅತ್ಯಂತ ಸುಂದರ ಪುರುಷನಾಗಿ ಎದ್ದುನಿಂತ.
ಯಯಾತಿ ತನ್ನೆದುರಿಗೆ ಎತ್ತರವಾಗಿ ನಿಂತ ಆ ಸುಂದರ ಪುರುಷನನ್ನು ತನ್ನ ಪ್ರೀತಿಯ ಪುತ್ರನನ್ನು ಹೆಮ್ಮೆಯಿಂದ ನೋಡಿದ.
ಪೂರು ಹೇಳಿದ : ‘ತಂದೆ, ನೀವು ಅವಸರಪಟ್ಟಿರಿ. ಇಷ್ಟು ತುರ್ತಾಗಿ ನನ್ನ ಯೌವನ ಹಿಂತಿರುಗಿಸುವ ಅಗತ್ಯವಿರಲಿಲ್ಲ. ನೀವು ಇನ್ನಿಷ್ಟು ಕಾಲ ಸುಖವಾಗಿರಬಹುದಾಗಿತ್ತು!
ಯಯಾತಿ ಆಯಾಸದಿಂದ ಹೇಳಿದ: ‘ಪ್ರಿಯಪುತ್ರ, ನೀನು ದೀರ್ಘಕಾಲದಿಂದ ವನವಾಸಿಯಾಗಿ ಬದುಕಿನ ರಸಾಕಾಂಕ್ಷೆಗಳನ್ನ ಮರೆತುಬಿಟ್ಟಿದ್ದೀಯ. ಹೀಗಾಗಿ ನಿನಗೆ ಯೌವನ-ವೃದ್ಧಾಪ್ಯಗಳ ನಡುವಿನ ವ್ಯತ್ಯಾಸವೇ ಮುಖ್ಯವಾಗುತ್ತಿಲ್ಲ. ಮಗು, ಇನ್ನು ನನ್ನ ಲೌಕಿಕ ಸಂಭ್ರಮ ಸಾಕು. ನನ್ನ ವಂಶದ ಮಹಾನ್ ರಾಜನೊಬ್ಬನಾಗಿ, ಜನಾನುರಾಗಿಯಾಗಿ ಬದುಕು!”
ಯಯಾತಿ ತನ್ನ ಮಹಾನ್ ಸಾಮ್ರಾಜ್ಯದ ಎಲ್ಲೆ ತುಣುಕುಗಳನ್ನು ತನ್ನ ಉಳಿದ ಮಕ್ಕಳಿಗೆ ನೀಡಿ, ವಿಸ್ತಾರವಾದ ರಾಜ್ಯ ಭಾಗವನ್ನು ಪೂರುವಿಗೆ ನೀಡಿ, ಸಿಂಹಾಸನಾಭಿಷೇಕ ಮಾಡಿದನು. ಅನಂತರ ದೇವೋತ್ತಮ ಪರಮ ಪರುಷನಾದ ವಾಸುದೇವನಿಗೆ ಸಂಪೂರ್ಣವಾಗಿ ಶರಣಾಗತನಾದನು – ಸಕಲ ಪ್ರಕೃತಿಗುಣಗಳ ಕಲ್ಮಷದಿಂದ ಮುಕ್ತನಾದನು. ತನ್ನ ಆತ್ಮಸಾಕ್ಷಾತ್ಕಾರದಿಂದಾಗಿ ಅವನು ಪರಬ್ರಹ್ಮನಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಶಕ್ತನಾದನು.
ದೇವಯಾನಿಯ ತನ್ನ ಶ್ರೇಷ್ಠಪತಿಯ ಅನುಗ್ರಹದಿಂದ ಆತ್ಮ ಸಾಕ್ಷಾತ್ಕಾರವನ್ನು ಪಡೆದಳು, ಪರಿಶುದ್ಧಳಾದಳು.
ನಹುಷ, ಯಯಾತಿ, ಪೂರು ಮಹಾನ್ ವ್ಯಕ್ತಿಗಳೆನಿಸಿದರು, ಮಹತ್ವದ ಬದುಕು ಬದುಕಿದರು. ಪೂರುವಿನ ರಾಜವಂಶದಲ್ಲಿ ದುಷ್ಯಂತನಂತಹ ಮಹಾಪುರುಷ ಕಾಣಿಸಿಕೊಳ್ಳುತ್ತಾನೆ. ಮುಂದಿನೆರಡು ಅಧ್ಯಾಯಗಳಲ್ಲಿ ದುಷ್ಯಂತನ ಕಥೆ, ಅವನ ಮಗ ಭರತನ ವಂಶ ಎಂಬುವೆಲ್ಲ ಸಾಲುಸಾಲಾಗಿ ಬರುತ್ತವೆ. ದುಷ್ಯಂತ – ಶಕುಂತಳೆಯರ ಸ್ವಾರಸ್ಯವಾದ ಒಳಿತು ಕೆಡಕುಗಳ ಘಟನಾವಳಿಗಳು ಬರುತ್ತವೆ – ಮುಂದೆ ಭರತವರ್ಷ ಸ್ಥಾಪನೆಗೆ ನಿಮಿತ್ತನಾಗುವ ಭರತನ ಮತ್ತವನ ವಂಶದ ವಿವರಗಳು ಬರುತ್ತವೆ.






Leave a Reply