ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್ ಎ.ಸಿ. ಭಕ್ತವೇದಾಂತ ಸ್ವಾಮಿ ಪ್ರಭುಪಾದ ಅವರು
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ, ಮಾರ್ಚ್ 26, 1968 ರಲ್ಲಿ ಮಾಡಿದ ಉಪನ್ಯಾಸ.
ಶ್ರೀ ಭಗವಾನುವಾಚ
ಮಯ್ಯಾಸಕ್ತಮನಾಃ ಪಾರ್ಥ ಯೋಗಂ ಯುಞ್ಜನ್ಮದಾಶ್ರಯಃ ।
ಅಸಂಶಯಂ ಸಮಗ್ರಂ ಮಾಂ ಯಥಾಜ್ಞಾಸ್ಯಸಿ ತಚ್ಛೃಣು ॥
ದೇವೋತ್ತಮ ಪರಮ ಪುರುಷನು ಹೀಗೆ ಹೇಳಿದನು – ಪಾರ್ಥ, ನನ್ನಲ್ಲಿ ಆಸಕ್ತವಾದ ಮನಸ್ಸಿನಿಂದ ನನ್ನನ್ನೊಳಗೊಂಡ ಸಂಪೂರ್ಣ ಪ್ರಜ್ಞೆಯಲ್ಲಿ ಯೋಗಾಭ್ಯಾಸವನ್ನು ಮಾಡುವುದರಿಂದ, ನೀನು ನನ್ನನ್ನು ಸಂಪೂರ್ಣವಾಗಿಯೂ, ಸಂಶಯವಿಲ್ಲದಂತೆಯೂ ತಿಳಿದುಕೊಳ್ಳಬಹುದು. ಅದು ಹೇಗೆ ಎನ್ನುವುದನ್ನು ಕೇಳು. (ಭಗವದ್ಗೀತೆ, 7.1)

ಕೃಷ್ಣನೇ ಸ್ವತಃ ಯೋಗದ ಬಗೆಗೆ ಮಾತನಾಡುತ್ತಿದ್ದಾನೆ. ಕೃಷ್ಣನ ಹೆಸರುಗಳಲ್ಲಿ ಯೋಗೇಶ್ವರ ಕೂಡ ಒಂದು. `ಸಕಲ ಯೋಗ ಪದ್ಧತಿಯ ಗುರು.’ ಯೋಗ ಎಂದರೆ `ಆತ್ಮ ಮತ್ತು ಪರಮಾತ್ಮನ ನಡುವಣ ಸಂಪರ್ಕ’ ಮತ್ತು ಈಶ್ವರ ಎಂದರೆ `ಒಡೆಯ.’ ಅಂದರೆ ಯೋಗದ ಅಂತಿಮ ಧ್ಯೇಯೋದ್ದೇಶ ಕೃಷ್ಣ. ಆ ಕಾರಣಕ್ಕಾಗಿಯೇ ಕೃಷ್ಣನ ಹೆಸರು ಯೋಗೇಶ್ವರ.
ಭಗವದ್ಗೀತೆಯ ಮುಕ್ತಾಯದಲ್ಲಿ ಸಂಜಯ ಹೇಳುತ್ತಾನೆ, ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್-ಧರಃ. “ಯೋಗೇಶ್ವರನಾದ ಕೃಷ್ಣನು ಎಲ್ಲಿರುವನೋ ಮತ್ತು ಧನುರ್ಧಾರಿಯಾದ ಅರ್ಜುನನಿರುವನೋ ಅಲ್ಲಿ ನಿಸ್ಸಂಶಯವಾಗಿ ಜಯವಿರುತ್ತದೆ.”
ಭಗವದ್ಗೀತೆಯನ್ನು ಸಂಜಯನು ಮಹಾರಾಜ ಧೃತರಾಷ್ಟ್ರನಿಗೆ ನಿರೂಪಣೆ ರೂಪದಲ್ಲಿ ತಿಳಿಸಿದ. ಸಂಜಯನು ಧೃತರಾಷ್ಟ್ರನ ಕಾರ್ಯದರ್ಶಿ. ಆಧ್ಯಾತ್ಮಿಕ ದೃಷ್ಟಿಯಿಂದ ಸಂಜಯನಿಗೆ ಯುದ್ಧ ಭೂಮಿಯಲ್ಲಿ ಏನಾಗುತ್ತಿದೆ ಎಂಬುವುದನ್ನು ನೋಡುವುದು ಸಾಧ್ಯ – ಟಿವಿಯಲ್ಲಿ ನೋಡುವಂತೆ – ಮತ್ತು ಅಂಧನಾದ ಧೃತರಾಷ್ಟ್ರನಿಗೆ ಅವನು ನಿರೂಪಿಸಿದ. ಸಂಜಯನ ತೀರ್ಮಾನವೆಂದರೆ ಯೋಗೇಶ್ವರ ಕೃಷ್ಣ ಇರುವ ಪಕ್ಷವು ವಿಜಯಿ.
ಅನೇಕ ಯೋಗ ಪದ್ಧತಿಗಳಿವೆ ಮತ್ತು ಅನೇಕ ರೀತಿಯ ಯೋಗಿಗಳಿದ್ದಾರೆ. ಯೋಗವು ಒಂದು ಪದ್ಧತಿಗೆ ಸಂಬಂಧಿಸಿದ್ದರೆ ಯೋಗಿಯು ಆ ಪದ್ಧತಿಯನ್ನು ಆಚರಿಸುವವನು. ಯೋಗದ ಉದ್ದೇಶ, ಅಂತಿಮ ಗುರಿಯು ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು. ಆದುದರಿಂದ ಕೃಷ್ಣಪ್ರಜ್ಞೆ ಎಂದರೆ ಅತ್ಯುತ್ತಮ ಯೋಗ ಪದ್ಧತಿಯ ಆಚರಣೆ. ಆ ಯೋಗ ಪದ್ಧತಿಯನ್ನು ಕೃಷ್ಣನೇ ವಿವರಿಸಿದ್ದಾನೆ. ಏಕೆ? ಏಕೆಂದರೆ ಅವನು ತನ್ನ ಅತ್ಯಂತ ಆಪ್ತ ಗೆಳೆಯ ಅರ್ಜುನನಿಗೆ ಬೋಧಿಸುತ್ತಿದ್ದಾನೆ.
ಕೃಷ್ಣನಲ್ಲಿ ಆಸಕ್ತಿ
ತನ್ನ ವಿವರಣೆಯ ಆರಂಭದಲ್ಲಿ ಭಗವಂತ ಹೇಳುತ್ತಾನೆ, “ಯಾರು ನನ್ನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೋ ಅಂತಹ ವ್ಯಕ್ತಿಗಳು ಈ ಯೋಗ ಪದ್ಧತಿಯನ್ನು ಆಚರಿಸಬಹುದು.” ಈ ಅತ್ಯುನ್ನತ ಯೋಗ ಪದ್ಧತಿಯನ್ನು ಕೃಷ್ಣನಲ್ಲಿ ಆಸಕ್ತಿ ಇಲ್ಲದ ಸಾಮಾನ್ಯ ವ್ಯಕ್ತಿ ಆಚರಿಸಲಾರ. ಕೃಷ್ಣನಲ್ಲಿ ಆಸಕ್ತಿ ಇಲ್ಲದ ಯೋಗಿಯೊಬ್ಬ ಬೇರೆ ಭಿನ್ನವಾದ ಯೋಗ ಪದ್ಧತಿಯನ್ನು ಆಚರಿಸುತ್ತಿದ್ದಾನೆ.

ನೇರ ಮಮತೆ, ಅಕ್ಕರೆ ಅಥವಾ ಆಸಕ್ತಿಯಲ್ಲಿ ಐದು ವಿಧಗಳಿವೆ. ಮತ್ತು ಏಳು ವಿಧದ ಪರೋಕ್ಷ ಆಸಕ್ತಿಗಳಿವೆ. ನೇರ ಆಸಕ್ತಿಯನ್ನು ಭಕ್ತಿ ಎಂದು ಕರೆಯುತ್ತಾರೆ, ಆದರೆ ಪರೋಕ್ಷ ಆಸಕ್ತಿಯು ಭಕ್ತಿಯಲ್ಲ. ನೇರ ವಿಧಾನದಿಂದ ನೀವು ಕೃಷ್ಣನಲ್ಲಿ ಆಸಕ್ತಿ ಹೊಂದಿದ್ದರೆ, ಅದನ್ನು ಭಕ್ತಿ ಸೇವೆ ಎನ್ನುವರು. ಮತ್ತು ನೀವು ಪರೋಕ್ಷ ವಿಧಾನದಿಂದ ಕೃಷ್ಣನಲ್ಲಿ ಆಸಕ್ತಿ ತಳೆದಿದ್ದರೆ ಅದು ಭಕ್ತಿ ಸೇವೆಯಲ್ಲ, ಆದರೆ ಅದೂ ಕೂಡ ಕೃಷ್ಣನಲ್ಲಿ ಆಸಕ್ತಿ ಹೊಂದಿರುವುದೇ. ಉದಾಹರಣೆಗೆ, ಕಂಸನಲ್ಲಿ ಪರೋಕ್ಷ ಆಸಕ್ತಿ ಇತ್ತು. ಕಂಸನು ಕೃಷ್ಣನ ಸೋದರ ಮಾವ. ಕಂಸನ ಸೋದರಿಯ ಎಂಟನೆಯ ಮಗುವಿನಿಂದ ಅವನಿಗೆ ಸಾವು ಎಂದು ಭವಿಷ್ಯವಾಣಿ ನುಡಿದಿತ್ತು. ತೀವ್ರ ಆತಂಕಗೊಂಡಿದ್ದ ಕಂಸ ತನ್ನ ಸೋದರಿ, ಕೃಷ್ಣನ ತಾಯಿ ದೇವಕಿಯನ್ನು ಕೊಲ್ಲಲು ಬಯಸಿದ್ದ. ಕೆಲವು ರಾಜಿ ಸೂತ್ರಗಳ ಮೂಲಕ ಅವಳನ್ನು ಅವಳ ಪತಿ, ಕೃಷ್ಣನ ತಂದೆ ವಸುದೇವನು ಕಾಪಾಡಿದ. ಅದೊಂದು ಅದ್ಭುತವಾದ ಸುದೀರ್ಘ ಕತೆ. ಕೊನೆಯ ರಾಜಿ ಎಂದರೆ, ವಸುದೇವನು ಕಂಸನಿಗೆಂದ, “ನಿನಗೆ ನಿನ್ನ ತಂಗಿಯ ಮಗನ ಬಗೆಗೆ ಭಯವಿದೆ. ನಿನ್ನ ಸೋದರಿ ನಿನ್ನನ್ನು ಕೊಲ್ಲುವುದಿಲ್ಲ. ಆದುದರಿಂದ, ನಿನ್ನ ಸೋದರಿಯನ್ನು ಕೊಲ್ಲಬೇಡ, ಅವಳನ್ನು ಕಾಪಾಡು ಎಂದು ಕೋರುವೆ. ಅವಳಿಗೆ ಹುಟ್ಟುವ ಎಲ್ಲ ಗಂಡು ಮಕ್ಕಳನ್ನು ನಿನಗೆ ಒಪ್ಪಿಸುವೆ. ನಿನಗೆ ಬೇಕೆನಿಸಿದರೆ ಅವುಗಳನ್ನು ನೀನು ಕೊಲ್ಲಬಹುದು.”
ರಾಜನಾದ ವಸುದೇವ ಯೋಚಿಸುತ್ತಿದ್ದ, “ಸದ್ಯಕ್ಕಂತೂ ಈ ಬಡಪಾಯಿಯನ್ನು ಕಾಪಾಡಬಹುದು. ಬಹುಶಃ ಆಗ, ಅನಂತರದಲ್ಲಿ ಕಂಸನ ಮನ ಬದಲಾಗಬಹುದು. ಅವಳ ಮಕ್ಕಳು ಹುಟ್ಟಿದಾಗ, ಅವನು ತನ್ನ ಮನ ಬದಲಿಸಬಹುದು.”
ಆದರೆ ಕಂಸನು ಎಂತಹ ಭಯಂಕರ ರಾಕ್ಷಸನೆಂದರೆ, ಅವನು ದೇವಕಿಯ ಎಲ್ಲ ಮಕ್ಕಳನ್ನು ಕೊಂದು ಹಾಕಿದ. ಹೀಗಾಗಿ, ಕೃಷ್ಣನು ದೇವಕಿ ಗರ್ಭದಲ್ಲಿದ್ದಾಗ ಕಂಸನು ಸದಾ ಕೃಷ್ಣನ ಬಗೆಗೇ ಯೋಚಿಸುತ್ತಿದ್ದ. ನೋಡಿ, ಕಂಸ ಕೂಡ ಕೃಷ್ಣ ಪ್ರಜ್ಞಾವಂತನಾಗಿದ್ದ. ಆದರೆ ಅವನ ಕೃಷ್ಣಪ್ರಜ್ಞೆ ನೇರವಾಗಿರಲಿಲ್ಲ – ಅದು ಪ್ರೀತಿಗಾಗಿ ಅಲ್ಲ – ಆದರೆ ಶತ್ರುತ್ವಕ್ಕಾಗಿ. ಅದು ಭಕ್ತಿ ಸೇವೆಯಲ್ಲ. ಯಾರು ಕೃಷ್ಣ ಪ್ರಜ್ಞಾವಂತ, ಕೃಷ್ಣನ ಮಿತ್ರ, ಕೃಷ್ಣನ ತಂದೆ-ತಾಯಿ, ಕೃಷ್ಣ ಪ್ರೇಮಿಯಾಗಿ ಇರುತ್ತಾರೋ ಅದು ಭಕ್ತಿ.
ದೇವರೊಂದಿಗೆ ಬಾಂಧವ್ಯ
ಇಲ್ಲಿ ಇದನ್ನು ಸ್ಪಷ್ಟವಾಗಿ ಹೇಳಲಾಗಿದೆ, ಮದ್ ಆಶ್ರಯಃ – “ಯಾರಿಗೆ ಕೃಷ್ಣ ಬೇಕೋ ಅವರಿಗೆ.” ನಿಮಗೆ ಪ್ರೇಮಿಯಾಗಿ ಕೃಷ್ಣ ಬೇಕಾಗಬಹುದು. ಅವನು ಮಗನಾಗಿ ನಿಮಗೆ ಬೇಕಾಗಬಹುದು. ನಿಮ್ಮ ಮಿತ್ರನಾಗಿ ಬೇಕಾಗಬಹುದು. ಗುರುವಾಗಿ ಬೇಕಾಗಬಹುದು. ನಿಮಗೆ ಕೃಷ್ಣ ಪರಮ ಸರ್ವೋತ್ತಮನಾಗಿ ಬೇಕಾಗಬಹುದು. ಕೃಷ್ಣನೊಂದಿಗಿನ ಈ ಐದು ವಿಧದ ಬಾಂಧವ್ಯವನ್ನು ಭಕ್ತಿ ಎನ್ನುತ್ತೇವೆ. ಇಂತಹ ಬಾಂಧವ್ಯದಲ್ಲಿ ಭಕ್ತರಿಗೆ ಯಾವುದೇ ಐಹಿಕ ಲಾಭದ ಆಸೆಗಳಿರುವುದಿಲ್ಲ.
ಭಗವಂತನನ್ನು ಮಗನಾಗಿ ಒಪ್ಪಿಕೊಳ್ಳುವುದಕ್ಕಿಂತ ತಂದೆಯಾಗಿ ಸ್ವೀಕರಿಸುವುದು ಹೆಚ್ಚು ಶ್ರೇಷ್ಠ. ತಂದೆ-ಮಗನ ಬಾಂಧವ್ಯದಲ್ಲಿ, ಮಗನಿಗೆ ತಂದೆಯಿಂದ ಏನಾದರೂ ಪಡೆಯಬೇಕೆಂದಿರುತ್ತದೆ. ಆದರೆ ಮಗನಿಗೆ ಸದಾ ಏನಾದರೂ ಕೊಡಬೇಕೆಂಬುದು ತಂದೆಯ ಇಚ್ಛೆಯಾಗಿರುತ್ತದೆ. ಆದುದರಿಂದ ದೇವರು ಅಥವಾ ಕೃಷ್ಣನನ್ನು ತಂದೆಯಾಗಿ ಸ್ವೀಕರಿಸುವ ಬಾಂಧವ್ಯಕ್ಕಿಂತ ಮಗನಾಗಿ ಭಾವಿಸುವ ಸಂಬಂಧವು ಉತ್ತಮವಾಗಿರುತ್ತದೆ. ನಾನು ದೇವರನ್ನು ನನ್ನ ತಂದೆಯಾಗಿ ಸ್ವೀಕರಿಸಿದರೆ, ಆಗ ನಾನು ಮಗನಾಗುತ್ತೇನೆ ಮತ್ತು ನನ್ನ ಅಗತ್ಯಗಳಿಗೆ ತಂದೆಯನ್ನು ಕೇಳುವುದೇ ನನ್ನ ವ್ಯವಹಾರವಾಗಿಬಿಡುತ್ತದೆ. ಆದರೆ ನಾನು ಕೃಷ್ಣನ ತಂದೆಯಾದರೆ, ಆಗ ಕೃಷ್ಣನ ಬಾಲ್ಯದಿಂದಲೇ ಅವನ ಸೇವೆ ನನ್ನ ವ್ಯವಹಾರವಾಗುತ್ತದೆ. ತಂದೆ-ತಾಯಿ ತಮ್ಮ ಮಕ್ಕಳಿಗೆ ಹುಟ್ಟಿನಿಂದಲೇ ಸೇವೆಗೈವರು.

ಆದುದರಿಂದ ಕೃಷ್ಣನ ತಂದೆ-ತಾಯಿ ಮತ್ತು ಸಾಕು ತಂದೆ-ತಾಯಿ – ವಸುದೇವ-ದೇವಕಿ ಮತ್ತು ನಂದ-ಯಶೋದೆಯರ ಆದರ್ಶ ಸರ್ವೋತ್ತಮ. ಯಶೋದ ಯೋಚಿಸುತ್ತಾಳೆ. “ಕೃಷ್ಣನಿಗೆ ನಾನು ಪುಷ್ಕಳವಾಗಿ ಉಣಿಸದಿದ್ದರೆ ಅವನು ಸಾವಿಗೀಡಾಗುತ್ತಾನೆ.” ಆದರೆ, ದೇವೋತ್ತಮನಾದ ಕೃಷ್ಣನು ಮೂರು ಲೋಕಗಳಿಗೆ ಆಸರೆಯಾಗಿದ್ದಾನೆ ಎಂಬುವುದನ್ನು ಯಶೋದ ಮರೆಯುತ್ತಾಳೆ. ನಿತ್ಯೋ ನಿತ್ಯಾನಾಂ ಚೇತನಶ್ ಚೇತನಾನಾಂ ಏಕೋ ಬಹೂನಾಂ ಯೋ ವಿಧದಾತಿ ಕಾಮಾನ್. ಒಬ್ಬನೇ ಒಬ್ಬ ಭಗವಂತನು ಎಲ್ಲ ಜೀವಿಗಳ ಅಗತ್ಯಗಳನ್ನು ಪೂರೈಸುತ್ತಿದ್ದಾನೆ. ಅದೇ ದೇವೋತ್ತಮ ಪರಮ ಪುರುಷನು ಯಶೋದಳ ಮಗನಾಗಿದ್ದಾನೆ ಮತ್ತು ಅವಳು ಯೋಚಿಸುತ್ತಾಳೆ, “ನಾನು ಕೃಷ್ಣನಿಗೆ ಸರಿಯಾಗಿ ಉಣಬಡಿಸದಿದ್ದರೆ ಅವನು ಸತ್ತುಹೋಗುತ್ತಾನೆ.” ಅದೇ ಪ್ರೀತಿ. ತನ್ನ ಮುಂದೆ ಪುಟ್ಟ ಮಗುವಾಗಿ ಪ್ರತ್ಯಕ್ಷನಾಗಿರುವವನು ದೇವೋತ್ತಮ ಪರಮ ಪುರುಷ ಎಂಬುವುದನ್ನು ಅವಳು ಮರೆಯುತ್ತಾಳೆ.
ಆದುದರಿಂದ ಆಸಕ್ತಿ, ಅಕ್ಕರೆಯ ಬಾಂಧವ್ಯ ಅತ್ಯಂತ ಶ್ರೇಷ್ಠವಾದುದು. ಇದನ್ನು ಗ್ರಹಿಸಿಕೊಳ್ಳಲು ಕಾಲಾವಕಾಶ ಬೇಕು. ಆದರೆ, “ದೇವರೇ ನನಗೆ ದಿನ ನಿತ್ಯದ ಅಗತ್ಯ ಪೂರೈಸು” ಎಂದು ಕೇಳುವ ಬದಲು, ಅವನಿಗೆ ನಾನು ನಿತ್ಯ ಉಣಬಡಿಸದಿದ್ದರೆ ಅವನು ಸತ್ತುಹೋಗುತ್ತಾನೆ ಎಂದು ನೀವು ಯೋಚಿಸುವ ಸ್ಥಿತಿಯೊಂದಿದೆ. ಅದು ಪ್ರೀತಿ, ಪ್ರೇಮದ ಪರಮೋತ್ಕಟತೆ. ಕೃಷ್ಣ ಮತ್ತು ಅವನ ಭಕ್ತರ ನಡುವೆ ಅಂತಹ ಅಪೂರ್ವ ಬಾಂಧವ್ಯವಿದೆ.
ಕೃಷ್ಣನ ಶ್ರೇಷ್ಠ ಭಕ್ತೆ, ಶ್ರೇಷ್ಠ ಪ್ರೇಮಿಯಾದ ರಾಧಾರಾಣಿಯು ಅವನನ್ನು ಪ್ರೇಯಸಿಯಾಗಿ ಪ್ರೀತಿಸುತ್ತಾಳೆ. ನಂದ ಮತ್ತು ಯಶೋದ ಅವನನ್ನು ತಂದೆ-ತಾಯಿಯಾಗಿ ಪ್ರೀತಿಸುತ್ತಾರೆ. ಸುದಾಮ ಮತ್ತು ಅರ್ಜುನ ಅವನನ್ನು ಮಿತ್ರನನ್ನಾಗಿ ಪ್ರೀತಿಸುತ್ತಾರೆ. ಅದೇ ರೀತಿ ಕೋಟ್ಯಂತರ ವಿಧದ ಕೃಷ್ಣ ಭಕ್ತರಿದ್ದಾರೆ. ಅವರು ನೇರವಾಗಿ ಕೃಷ್ಣನೊಂದಿಗೆ ಆಡುತ್ತಾರೆ.

ಕೃಷ್ಣನಲ್ಲಿ ಅಂತಹ ಆಸಕ್ತಿ ಬೆಳೆಸಿಕೊಂಡವರು ಇಲ್ಲಿ ವಿವರಿಸಿರುವ ಯೋಗ ಪದ್ಧತಿಯನ್ನು – ಭಕ್ತಿ ಯೋಗವನ್ನು ಆಚರಿಸಬಹುದು. ಬೇರೆಯವರು ಅದನ್ನು ಆಚರಿಸಲಾಗದು. ಅಂತಹ ಆಸಕ್ತಿ, ಅಕ್ಕರೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾದರೆ, ಅಂತಹವರು ದೇವರನ್ನು ಅಥವಾ ಕೃಷ್ಣನನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲರು.
ನಮಗೆಷ್ಟು ಗೊತ್ತು?
ನಮ್ಮದೇ ಸಿದ್ಧಾಂತ ಅಥವಾ ಊಹಾಪೋಹಗಳಿಂದ ದೇವರನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ದೇವರನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಎಂದು ನಾವು ಹೇಳಿಕೊಳ್ಳಬಹುದು. ಆದರೆ, ದೇವನಿರುವಂತೆ ಅವನನ್ನು ಗ್ರಹಿಸಿಕೊಳ್ಳಲಾಗದು. ಏಕೆಂದರೆ ನಮಗೆ ಸೀಮಿತ ಜ್ಞಾನವಿದ್ದರೆ ಅವನದು ಅಸೀಮಿತ. ಅಸೀಮಿತವಾದುದನ್ನು ನಿಮ್ಮ ಸೀಮಿತ ಇಂದ್ರಿಯಗಳಿಂದ ಹೇಗೆ ಸೆರೆಹಿಡಿಯುವಿರಿ?

ದೇವರನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳಬಹುದೆಂಬ ವಿವರಗಳನ್ನು ಶಾಸ್ತ್ರಗಳು ಮತ್ತು ಧರ್ಮ ಗ್ರಂಥಗಳು ನೀಡುತ್ತವೆ – ಅತಃ ಶ್ರೀಕೃಷ್ಣ ನಾಮಾದಿ ನ ಭವೇದ್ ಗ್ರಾಹ್ಯಂ ಇಂದ್ರಿಯೈಃ. ನಮ್ಮ ಇಂದ್ರಿಯಗಳು ಯಾವಾಗಲೂ ಅಪೂರ್ಣ. ಲೌಕಿಕ ಜಗತ್ತನ್ನೇ ಸರಿಯಾಗಿ ಅರ್ಥ ಮಾಡಿಕೊಳ್ಳುವುದು ನಮಗೆ ಸಾಧ್ಯವಿಲ್ಲ. ಇರುಳಿನಲ್ಲಿ ನಾವು ಆಕಾಶದಲ್ಲಿ ಅನೇಕ ಗ್ರಹ ಮತ್ತು ನಕ್ಷತ್ರಗಳನ್ನು ನೋಡುತ್ತೇವೆ. ಆದರೆ ನಮಗೆ ಅವುಗಳ ಬಗೆಗೆ ತಿಳಿಯದು. ಒಂದೇ ಗ್ರಹ-ಚಂದ್ರನ ಬಗೆಗೆ ನಮಗೆ ಗೊತ್ತಿಲ್ಲ. ಅದಿರಲಿ, ಭೂಮಿ ಮೇಲಿನ ಎಲ್ಲ ವೈವಿಧ್ಯಗಳ ಕುರಿತೇ ನಮಗೆ ಅರಿವಿಲ್ಲ.
ನಮ್ಮ ಜ್ಞಾನ ಅಪೂರ್ಣ. ಅದನ್ನು ನಾವು ಒಪ್ಪಿಕೊಳ್ಳಬೇಕು. ಎಲ್ಲ ರೀತಿಯ ಜ್ಞಾನವನ್ನು ಪಡೆದುಕೊಂಡಿದ್ದೇವೆ ಮತ್ತು ವಿಜ್ಞಾನದಲ್ಲಿ ಮುನ್ನಡೆ ಸಾಧಿಸಿದ್ದೇವೆ ಎಂದು ಹೆಮ್ಮೆ ಪಟ್ಟುಕೊಳ್ಳುವುದು ಮೂರ್ಖತನ. ಪ್ರತಿ ದಿನ ನೋಡುವ ಐಹಿಕ ವಸ್ತುಗಳನ್ನೇ ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲದಿರುವಾಗ ಆಧ್ಯಾತ್ಮಿಕದ ಗ್ರಹಿಕೆ ಎಲ್ಲಿ ಸಾಧ್ಯ? ಮತ್ತು ದೇವೋತ್ತಮ ಪರಮ ಪುರುಷನಾದ ಕೃಷ್ಣನು ಆಧ್ಯಾತ್ಮಿಕದ ಸರ್ವೋತ್ತಮ ರೂಪ. ಆದುದರಿಂದ ನಮ್ಮ ಸೀಮಿತ ಇಂದ್ರಿಯಗಳಿಂದ ನಮಗೆ ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ.
ಅದು ಸಾಧ್ಯವಿಲ್ಲವಾದರೆ, ನಾವು ಯಾಕೆ ಕೃಷ್ಣಪ್ರಜ್ಞೆ ಬಗೆಗೆ ಅಷ್ಟೊಂದು ತಲೆಕೆಡಿಸಿಕೊಳ್ಳುತ್ತಿದ್ದೇವೆ? ಶಾಸ್ತ್ರಗಳು ವಿವರಿಸುತ್ತವೆ:
ಅತಃ ಶ್ರೀಕೃಷ್ಣ-ನಾಮಾದಿ ನ ಭವೇದ್ ಗ್ರಾಹ್ಯಂ ಇಂದ್ರಿಯೈಃ ।
ಸೇವೋನ್ಮುಖೇ ಹಿ ಜಿಹ್ವಾದೌ ಸ್ವಯಂ ಏವ ಸುರತಿ ಅದಃ ॥
ನಿಮ್ಮ ಅಪೂರ್ಣ ಇಂದ್ರಿಯಗಳು ಕೃಷ್ಣನ ಯಥಾ ರೂಪವನ್ನು ಅರಿಯಲಾರವು. ಆದರೆ ನೀವು ಶರಣಾದರೆ, ಸೇವಕ ಅಥವಾ ಮಿತ್ರ ಅಥವಾ ಪೋಷಕ ಅಥವಾ ಪ್ರೇಮಿಯಾಗಿ ನೀವು ಕೃಷ್ಣ ಸೇವೆಯ ಮನೋಭಾವವನ್ನು ಬೆಳೆಸಿಕೊಂಡರೆ ಮತ್ತು ನೀವು ದೇವರಿಗೆ ಸೇವೆ ಸಲ್ಲಿಸುವುದನ್ನು ಆರಂಭಿಸಿದರೆ ಅವನು ತಾನೇ ಪ್ರಕಟಗೊಳ್ಳುತ್ತಾನೆ.
ಪ್ರೀತಿಯಿಂದ ಕೃಷ್ಣ ಸೇವೆ
ಸೇವೆಯ ಆರಂಭ ಜಪ. ಆದುದರಿಂದ ಜಿಹ್ವಾದೌ ಎನ್ನುತ್ತಾರೆ. ಜಿಹ್ವಾ ಎಂದರೆ `ನಾಲಗೆ.’ ನಿಮ್ಮ ಸೇವೆಯು ನಾಲಗೆಯಿಂದ ಆರಂಭವಾಗುತ್ತದೆ. ಹೇಗೆ? ನಾಲಗೆಯಿಂದ ನೀವು ಹರೇ ಕೃಷ್ಣ ಮಂತ್ರ ಜಪಿಸಬಹುದು. ಮತ್ತು ಅದೇ ನಾಲಗೆಯಿಂದ ನೀವು ಕೃಷ್ಣ ಪ್ರಸಾದದ ರುಚಿ ನೋಡಬಹುದು.
ಆದುದರಿಂದ ಆರಂಭದ ವಿಧಾನ ತುಂಬ ಚೆನ್ನಾಗಿದೆ. ನೀವು ಹರೇ ಕೃಷ್ಣ, ಹರೇ ಕೃಷ್ಣ ಜಪಿಸಿ ಮತ್ತು ಕೃಷ್ಣನು ಕೃಪೆಯಿಂದ ನೀಡಿದ ಪ್ರಸಾದವನ್ನು ಸ್ವೀಕರಿಸಿ. ನೀವು ಶರಾಣದರೆ, ನೀವು ಜಪ ಮಾಡುತ್ತ ಸೇವೆ ಆರಂಭಿಸಿದರೆ ಮತ್ತು ಪ್ರಸಾದ ಸ್ವೀಕರಿಸಿದರೆ, ಸ್ವಯಂ ಏವ ಸುರತಿ ಅಧಃ – ಈ ಎರಡರ ಆಚರಣೆಯಿಂದಲೇ ಕೃಷ್ಣನು ನಿಮ್ಮ ಮುಂದೆ ಹೊರಹೊಮ್ಮುತ್ತಾನೆ – `ನಾನು ಹೀಗಿದ್ದೇನೆ.’

ಭಗವದ್ಗೀತೆಯಲ್ಲಿ ಕೃಷ್ಣನು ಅರ್ಜುನನಿಗೆ ಪ್ರಕಟಗೊಳ್ಳುತ್ತಾನೆ. ಏಕೆಂದರೆ ಅವನು ಕೃಷ್ಣನ ಭಕ್ತ, ಅವನು ಶರಣಾಗತ ಮತ್ತು ಕೃಷ್ಣನ ಮಿತ್ರ.
ಭಗವದ್ಗೀತೆಯನ್ನು ಅರ್ಜುನನಿಗೆ ಹೇಳಲಾಯಿತು, ಯಾವುದೇ ವೇದಾಂತಿ ಅಥವಾ ಊಹಾಪೋಹಿಗಳಿಗಲ್ಲ. ನಾಲ್ಕನೇ ಅಧ್ಯಾಯದ ಆರಂಭದಲ್ಲಿ ಕೃಷ್ಣ ಹೇಳುತ್ತಾನೆ, “ನಾನು ನಿನಗೆ ಹಳೆಯ ಯೋಗಾ ಪದ್ಧತಿ – ಭಕ್ತಿ ಯೋಗದ ಬಗೆಗೆ ಹೇಳುವೆ.” ಅವನೆನ್ನುತ್ತಾನೆ, `ನಿನಗೆ.’ ಏಕೆ? ಅರ್ಜುನನು ವೇದಾಂತಿಯಾಗಿರಲಿಲ್ಲ ಅಥವಾ ದೊಡ್ಡ ತತ್ತ್ವಜ್ಞಾನಿಯಾಗಿರಲಿಲ್ಲ ಅಥವಾ ಬ್ರಾಹ್ಮಣನಾಗಿರಲಿಲ್ಲ. ಅವನು ಕ್ಷತ್ರಿಯ. ಅವನು ಯೋಧ ಮತ್ತು ಗೃಹಸ್ಥ. ಅವನು ಸಂನ್ಯಾಸಿ ಕೂಡ ಆಗಿರಲಿಲ್ಲ.
ಕೃಷ್ಣನನ್ನು ಅರ್ಥಮಾಡಿಕೊಳ್ಳಲು ವ್ಯಕ್ತಿಯ ಸ್ಥಾನವು ಅರ್ಹತೆಯಲ್ಲ. ನಾನು ಸಂನ್ಯಾಸಿಯಾಗಿರುವೆ, ಭೈರಾಗಿಯಾಗಿರುವೆ ಎಂಬುವುದೆಲ್ಲ ಕೃಷ್ಣನನ್ನು ಅರ್ಥ ಮಾಡಿಕೊಳ್ಳುವ ಅರ್ಹತೆಗಳಲ್ಲ. ಗೃಹಸ್ಥನಾಗಿ ಬಿಳಿ ಉಡುಗೆಯಲ್ಲಿ ನೀವು ನನಗಿಂತ ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು.
ಹಾಗಾದರೆ ಏನು ಅರ್ಹತೆ? ಸೇವೋನ್ಮುಖೇ ಹಿ ಜಿಹ್ವಾದೌ : ಪ್ರೀತಿ ಮತ್ತು ಭಕ್ತಿಯಿಂದ ಸೇವಾ ಭಾವ ಬೆಳೆಸಿಕೊಂಡವರು ಕೃಷ್ಣನನ್ನು ಅರ್ಥಮಾಡಿಕೊಳ್ಳಬಲ್ಲರು. ಬೇರೆ ಯಾರೂ ಅಲ್ಲ. ಅವನಲ್ಲಿ ನಂಬಿಕೆ ಇದ್ದರೆ ಮಗುವೊಂದು ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು ಸಾಧ್ಯ.
ಕೃಷ್ಣನನ್ನು ಅರ್ಥಮಾಡಿಕೊಳ್ಳಲು ನಂಬಿಕೆ ಮತ್ತು ಭಕ್ತಿ ಅರ್ಹತೆಗಳಾಗುತ್ತವೆ. ಈ ಅರ್ಹತೆಗಳನ್ನು ಹೊಂದುವುದಕ್ಕೆ ಮದ್-ಆಶ್ರಯಃ ಎನ್ನುವರು. ನಾವು ಕೃಷ್ಣಪ್ರಜ್ಞೆಯನ್ನು ಬೋಧಿಸುತ್ತಿದ್ದೇವೆ. ನಾವು ನಿಮ್ಮ ಅಥವಾ ನಮ್ಮ ಸಮಯವನ್ನು ಹಾಳುಮಾಡುತ್ತಿಲ್ಲ. ಕೃಷ್ಣ ದೇವೋತ್ತಮ ಪರಮ ಪುರುಷ ಎಂಬ ಬಗ್ಗೆ ನಮಗೆ ಪೂರ್ಣ ಶ್ರದ್ಧೆ ಉಂಟು – ಸೈದ್ಧಾಂತಿಕವಾಗಿ ಮತ್ತು ಪ್ರಾಯೋಗಿಕವಾಗಿ.
ಕೃಷ್ಣನಿಗಿಂತ ಶ್ರೇಷ್ಠರಿಲ್ಲ
“ಕೃಷ್ಣನೆ ದೇವೋತ್ತಮ ಪರಮ ಪುರುಷ ಎಂಬುವುದು ನಿಮಗೆ ಹೇಗೆ ಗೊತ್ತು?” ಎಂದು ನೀವು ಕೇಳಬಹುದು. ಅದಕ್ಕೆ ನಾವು ಉತ್ತರಿಸಬಹುದು. ಪ್ರಕಟಗೊಂಡಿರುವ ಧರ್ಮ ಗ್ರಂಥಗಳಿಂದ – ವೈದಿಕ ಸಾಹಿತ್ಯ ಹಾಗೂ ಹಿಂದಿನ ಮತ್ತು ಪ್ರಸ್ತುತದ ಶ್ರೇಷ್ಠ ವಿದ್ವಾಂಸರಿಂದ ನಮಗೆ ತಾತ್ತ್ವಿಕವಾಗಿ ತಿಳಿದಿದೆ. ಉದಾಹರಣೆಗೆ ಶ್ರೀ ಚೈತನ್ಯರನ್ನು ಶ್ರೇಷ್ಠ ಪ್ರಾಮಾಣ್ಯರೆಂದು ಸ್ವೀಕರಿಸಲಾಗಿದೆ. ಅವರಿಗೆ ಕೃಷ್ಣನೆಂದರೆ ಹುಚ್ಚು. ಅವರ ಅನಂತರ, ಅವರ ಆರು ಶಿಷ್ಯರು, ಆರು ಗೋಸ್ವಾಮಿಗಳು – ಮುಖ್ಯವಾಗಿ ಜೀವ ಗೋಸ್ವಾಮಿ – ಕೃಷ್ಣನನ್ನು ಕುರಿತು ಅಪಾರ ಸಾಹಿತ್ಯ ಸೃಷ್ಟಿಸಿದ್ದಾರೆ. ಅನಂತರ ನಾವು ಶಿಷ್ಯ ಪರಂಪರೆಯಲ್ಲಿ, ಕೃಷ್ಣನನ್ನು ದೇವರೆಂದು ಸ್ವೀಕರಿಸುವ ಹಂತ ತಲಪಿದ್ದೇವೆ.
ಬಹಳ ಹಿಂದೆ ವೇದವ್ಯಾಸರೆಂದೂ ಹೆಸರಾದ ವ್ಯಾಸದೇವ ಕೃಷ್ಣನನ್ನು ಕುರಿತ ಶ್ರೀಮದ್ ಭಾಗವತವನ್ನು ಬರೆದರು. ಕೃಷ್ಣನನ್ನು ವರ್ಣಿಸುವುದೇ ಶ್ರೀಮದ್ ಭಾಗವತ. ವ್ಯಾಸದೇವ ಭಗವದ್ಗೀತೆಯನ್ನೂ ಬರೆದವರು. ಭಗವದ್ಗೀತೆಯು ಕೃಷ್ಣನಿಂದ ಹೇಳಲ್ಪಟ್ಟಿತು ಮತ್ತು ವ್ಯಾಸದೇವ ಬರೆದರು. ಮತ್ತು ವ್ಯಾಸದೇವರು ಗೀತೆಯನ್ನು ಮಹಾಭಾರತದಲ್ಲಿ ಅಳವಡಿಸಿದರು.

ವ್ಯಾಸದೇವರು ಕೃಷ್ಣನನ್ನು ದೇವೋತ್ತಮ ಪರಮ ಪುರುಷನೆಂದು ಸ್ವೀಕರಿಸುತ್ತಾರೆ. ಭಾಗವತದಲ್ಲಿ ಅವರು ವಿಶೇಷವಾಗಿ ಹೇಳಿದ್ದಾರೆ, ಕೃಷ್ಣಸ್ತು ಭಗವಾನ್ ಸ್ವಯಂ. ಭಗವಂತನ ಸುಮಾರು 26 ಅವತಾರಗಳ ಬಗೆಗೆ ಅವರು ವಿವರ ನೀಡಿದ್ದಾರೆ. ಉಪ ಸಂಹಾರದಲ್ಲಿ ಅವರು ಬರೆಯುತ್ತಾರೆ, ಏತೇ ಚಾಂಶ ಕಲಾಃ ಪುಂಸಃ ಕೃಷ್ಣಸ್ತು ಭಗವಾನ್ ಸ್ವಯಂ – ಎಲ್ಲ ಅವತಾರಗಳೂ ಭಗವಂತನ ಭಾಗಶಃ ಪ್ರಾತಿನಿಧ್ಯದ ಭಾಗ. ಆದರೆ ಕೃಷ್ಣನು ಸ್ವತಃ ದೇವೋತ್ತಮ ಪರಮ ಪುರುಷ. ಕೃಷ್ಣ ಭಾಗವಲ್ಲ. ಅವನು ಸಂಪೂರ್ಣ ಭಗವಂತ. ಆದುದರಿಂದ ವಿದ್ವಾಂಸರು ಪುರಾವೆಗಳಿಂದ ತಾತ್ತ್ವಿಕವಾಗಿ ಕೃಷ್ಣನು ದೇವರೆಂದು ಸ್ಥಾಪಿಸುತ್ತಾರೆ.
ಈಗ ನಾವು ಧರ್ಮ ಗ್ರಂಥ ಮತ್ತು ಪ್ರಾಮಾಣ್ಯರನ್ನು ನಂಬುವುದಾದರೆ ಕೃಷ್ಣನಿಗಿಂತ ಶಕ್ತಿವಂತರಿಲ್ಲ, ಸುಂದರರಿಲ್ಲ, ಪ್ರಸಿದ್ಧರಿಲ್ಲ ಎಂಬುವುದನ್ನು ನೋಡಬಹುದು. ಹೀಗೆ ನೋಡುವುದೇ ಕೃಷ್ಣನನ್ನು ದೇವರೆಂದು ಪ್ರಾಯೋಗಿಕವಾಗಿ ಗ್ರಹಿಸಿಕೊಳ್ಳುವುದಾಗಿದೆ. ಕೃಷ್ಣ ಐದು ಸಾವಿರ ವರ್ಷಗಳ ಹಿಂದೆ ಆವಿರ್ಭವಿಸಿದ. ಆದರೆ ಭಗವದ್ಗೀತೆಯ ರೂಪದಲ್ಲಿ ಅವನು ನೀಡಿದ ಜ್ಞಾನವನ್ನು ಇಂದಿಗೂ ಪೂಜಿಸಲಾಗುತ್ತಿದೆ. ಇದನ್ನು ಹಿಂದೂ ಅಥವಾ ಭಾರತೀಯರು ಮಾತ್ರ ಪೂಜಿಸುವುದಿಲ್ಲ, ಇದನ್ನು ಜಗತ್ತಿನಾದ್ಯಂತ ಓದಲಾಗುತ್ತಿದೆ. ಅಮೆರಿಕದ ವಿವಿಧ ಚಿಂತಕರು ಬರೆದ ಭಗವದ್ಗೀತೆಯ ಸುಮಾರು 50 ಆವೃತ್ತಿಗಳು ನಿಮ್ಮದೆ ದೇಶದಲ್ಲಿದೆ. ಅದೇ ರೀತಿ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್ ಮತ್ತಿತರ ಅನೇಕ ದೇಶಗಳಲ್ಲಿ ಭಗವದ್ಗೀತೆಯ ನೂರಾರು ಆವೃತ್ತಿಗಳನ್ನು ನೋಡಬಹುದು.
ಹಾಗಾದರೆ, ಕೃಷ್ಣನಿಗಿಂತ ಯಾರು ಹೆಚ್ಚು ಪ್ರಸಿದ್ಧರು ಮತ್ತು ಜ್ಞಾನಿಗಳು? ಶಾಸ್ತ್ರಗಳನ್ನು ನಂಬುವುದಾದರೆ, ಕೃಷ್ಣನನ್ನು ಕುರಿತಂತೆ ಇತರ ಅನೇಕ ಪುರಾವೆಗಳಿವೆ. ಕೃಷ್ಣನಿಗೆ 16,108 ಪತ್ನಿಯರಿದ್ದರು. ಅವನು ಅವರಿಗೆಲ್ಲಾ ಪ್ರತ್ಯೇಕ ಅರಮನೆಗಳನ್ನು ಒದಗಿಸಿದ್ದ. ಅವರಲ್ಲಿ ಪ್ರತಿಯೊಬ್ಬರಿಗೂ ತಲಾ ಹತ್ತು ಮಕ್ಕಳಿದ್ದವು. ಮತ್ತು ಈ ಹತ್ತು ಮಕ್ಕಳಲ್ಲಿ ಇನ್ನಷ್ಟು ಮಕ್ಕಳು.

ಇವೆಲ್ಲ ಪ್ರಕಟಗೊಂಡಿರುವ ಧರ್ಮ ಗ್ರಂಥಗಳಿಂದ ಹೊರಹೊಮ್ಮಿರುವ ಪುರಾವೆಗಳು. ಮತ್ತು ಬ್ರಹ್ಮ ಸಂಹಿತೆಯಲ್ಲಿ ಕೃಷ್ಣನನ್ನು ದೇವೋತ್ತಮ ಪರಮ ಪುರುಷನೆಂದು ಸ್ವೀಕರಿಸಲಾಗಿದೆ. ಬ್ರಹ್ಮ ರಚಿತವಾದ ಇದು ಅತ್ಯಂತ ಪುರಾತನವಾದ ಗ್ರಂಥ. ಬ್ರಹ್ಮ ಸಂಹಿತೆಯಲ್ಲಿ ಹೇಳಲಾಗಿದೆ, ಈಶ್ವರಃ ಪರಮಃ ಕೃಷ್ಣಃ. ಈಶ್ವರಃ ಎಂದರೆ ದೇವರು. ಅನೇಕ ದೇವತೆಗಳಿದ್ದಾರೆ ಮತ್ತು ಒಬ್ಬ ಪರಮನಾದ ದೇವೋತ್ತಮ. ಬ್ರಹ್ಮ ಸಂಹಿತೆ ಹೇಳುತ್ತದೆ, “ಕೃಷ್ಣನು ದೇವೋತ್ತಮ. ಅವನು ದೇವರಿಗೆ ದೇವರು.” ಸತ್-ಚಿದ್-ಆನಂದ-ವಿಗ್ರಹಃ “ಮತ್ತು ಅವನ ದೇಹ ಶಾಶ್ವತ ಮತ್ತು ಆನಂದ ಹಾಗೂ ಜ್ಞಾನದಿಂದ ತುಂಬಿದೆ.” ಅನಾದಿರ್ ಆದಿರ್ ಗೋವಿಂದಃ “ಅವನಿಗೆ ಆರಂಭ ಎಂಬುದಿಲ್ಲ. ಆದರೆ ಪ್ರತಿಯೊಂದಕ್ಕೂ ಅವನೇ ಆರಂಭ. ಮತ್ತು ಅವನ ಹೆಸರು ಗೋವಿಂದ.”

ಗೋ ಎಂದರೆ `ಇಂದ್ರಿಯಗಳು’, ಗೋ ಎಂದರೆ `ಹಸು’ ಮತ್ತು ಗೋ ಎಂದರೆ `ಭೂಮಿ.’ ಆದುದರಿಂದ ಕೃಷ್ಣನು ಎಲ್ಲ ಗೋವುಗಳ, ಭೂಮಿಯ ಮಾಲೀಕ, ಮತ್ತು ಅವನು ಎಲ್ಲ ಇಂದ್ರಿಯಗಳ ಆನಂದ. ನಾವು ಇಂದ್ರಿಯ ತೃಪ್ತಿಯ ಬೆನ್ನತ್ತಿದ್ದೇವೆ. ಆದರೆ ನಾವು ನಮ್ಮ ಸಂತೋಷವನ್ನು ಕೃಷ್ಣನೊಂದಿಗೆ ಪರಸ್ಪರ ವಿನಿಮಯ ಮಾಡಿಕೊಂಡರೆ ನಮ್ಮ ಇಂದ್ರಿಯ ಆನಂದವನ್ನು ಪರಿಪೂರ್ಣವಾಗಿ ಸಾಧಿಸಬಹುದು. ಆದುದರಿಂದ ಅವನ ಹೆಸರು ಗೋವಿಂದ. ಗೋವಿಂದಂ ಆದಿ ಪುರುಷಂ ತಂ ಅಹಂ ಭಜಾಮಿ “ಗೋವಿಂದನು ಪರಮ, ಮೂಲ ದೇವೋತ್ತಮ ಪರಮ ಪುರುಷ.”
ಬದುಕಿನ ಪರಿಪೂರ್ಣತೆ
ಅದೇ ದೇವೋತ್ತಮ ಪರಮ ಪುರುಷನು ವೈಯಕ್ತಿಕವಾಗಿ ತನ್ನ ಬಗೆಗೇ ಅರ್ಜುನನ ಬಳಿ ಮಾತನಾಡುತ್ತಿದ್ದಾನೆ. ಕೃಷ್ಣನು ತನ್ನನ್ನು ಕುರಿತು ಮಾತನಾಡಿರುವುದಕ್ಕಿಂತ ಮುಖ್ಯವಾಗಿ ದೇವರ ಬಗೆಗೆ ಯಾರು ತಾನೇ ಊಹೆಯಿಂದ ಹೇಳುವುದು ಸಾಧ್ಯ? ದೇವರ ಬಗೆಗೆ ಕೃಷ್ಣನಿಗಿಂತ ಉತ್ತಮವಾಗಿ ಯಾರೂ ಮಾತನಾಡುವುದು ಸಾಧ್ಯವಿಲ್ಲ. ಏಕೆಂದರೆ, ದೇವರೇ ತನ್ನ ಬಗೆಗೆ ಮಾತನಾಡುತ್ತಿದ್ದಾನೆ. ನಿಮ್ಮ ಬಗ್ಗೆ ನೀವು ಮಾತನಾಡಿದರೆ ನಿಮಗಿಂತ ಉತ್ತಮವಾಗಿ ಯಾರು ತಾನೇ ಹೇಳುವುದು ಸಾಧ್ಯ?
ತಾತ್ತ್ವಿಕವಾಗಿ ಮತ್ತು ಪ್ರಾಯೋಗಿಕವಾಗಿ ಕೃಷ್ಣನೆ ದೇವೋತ್ತಮ ಪರಮ ಪುರುಷನೆಂದು ನಾವು ನಂಬಿದರೆ, ಈ ಅಧ್ಯಾಯದಲ್ಲಿನ ಕೃಷ್ಣನ ಬೋಧನೆಗಳಿಂದ ನಾವು ದೇವರನ್ನು ಅರ್ಥಮಾಡಿಕೊಳ್ಳಬಹುದು. ಇದು ಕಷ್ಟವಲ್ಲ. ಅವನು ಹೇಗೆ ಕಾರ್ಯ ನಿರ್ವಹಿಸುತ್ತಾನೆ, ಅವನ ಶಕ್ತಿ ಹೇಗೆ ವ್ಯಯವಾಗುತ್ತದೆ, ಅವನು ಹೇಗೆ ಪ್ರಕಟಗೊಳ್ಳುತ್ತಾನೆ, ಐಹಿಕ ಜಗತ್ತೆಂದರೆ ಏನು, ಆಧ್ಯಾತ್ಮಿಕ ಲೋಕವೆಂದರೇನು, ಜೀವಿಗಳು ಯಾರು, ಭಗವಂತನೊಂದಿಗೆ ಅವರ ಸಂಬಂಧವೇನು ಇಂತಹ ಅನೇಕ ವಿಷಯಗಳನ್ನು ನಾವು ಭಗವಂತನ ಸೃಷ್ಟಿಯಲ್ಲಿ ಅರ್ಥಮಾಡಿಕೊಳ್ಳಬಹುದು.
ಇಡೀ ವೈದಿಕ ಸಾಹಿತ್ಯವು ಮೂರು ವಿಷಯಗಳ ಬಗೆಗೆ ವ್ಯವಹರಿಸುತ್ತದೆ : ದೇವರೊಂದಿಗೆ ನಮ್ಮ ಸಂಬಂಧವನ್ನು ಅರ್ಥಮಾಡಿಕೊಳ್ಳುವುದು, ಆ ಬಾಂಧವ್ಯದಲ್ಲಿ ನಿರ್ವಹಿಸುವುದು ಮತ್ತು ಬದುಕಿನ ಗುರಿ ಸಾಧಿಸುವುದು – ದೇವರ ಪ್ರೀತಿ.
ಮೊದಲನೆಯದು ದೇವರೊಂದಿಗಿನ ನಮ್ಮ ಸಂಬಂಧ. ಅದನ್ನು ಗ್ರಹಿಸಿಕೊಂಡರೆ, ಎರಡನೆಯದಾಗಿ ಅದರೊಂದಿಗಿನ ನಿರ್ವಹಣೆ. ಉದಾಹರಣೆಗೆ, ಒಬ್ಬ ಸ್ತ್ರೀ-ಪುರುಷನ ಮಧ್ಯೆ ಬಾಂಧವ್ಯ ಸ್ಥಾಪಿಸಿದ ಕೂಡಲೇ – ಅವರಲ್ಲಿ ಒಬ್ಬ ಗಂಡ, ಮತ್ತೊಬ್ಬಳು ಹೆಂಡತಿ – ಪರಸ್ಪರ ವಿನಿಮಯ ಪ್ರಕ್ರಿಯೆ ಆರಂಭವಾಗುತ್ತದೆ.

ಆದುದರಿಂದ ಮೊದಲು ನೀವು ದೇವರೊಂದಿಗಿನ ನಿಮ್ಮ ಸಂಬಂಧವನ್ನು ಅರ್ಥಮಾಡಿಕೊಳ್ಳಬೇಕು. ನೀವು ಪರಿಪೂರ್ಣವಾಗಿ ಮುಕ್ತರಾದಾಗ ಆ ಸಂಬಂಧ ಪ್ರಕಟಗೊಳ್ಳುತ್ತದೆ. ಪ್ರತಿಯೊಂದು ಜೀವಿಗೂ ದೇವರೊಂದಿಗೆ ನಿರ್ದಿಷ್ಟ ಸಂಬಂಧವಿರುತ್ತದೆ. ನಾವು ಅದನ್ನು ಮರೆತಿದ್ದೇವೆ. ಧಾರ್ಮಿಕ ಚಟುವಟಿಕೆ ವಿಧಾನಗಳಲ್ಲಿ, ಕೃಷ್ಣಪ್ರಜ್ಞೆಯಲ್ಲಿ, ಆ ಸಂಬಂಧ ಪ್ರಕಟಗೊಂಡಾಗ ನೀವು ನಿಮ್ಮ ಬದುಕಿನ ಪರಿಪೂರ್ಣತೆಯನ್ನು ಹೊಂದಿದ್ದೀರಿ ಎಂಬುವುದನ್ನು ನೀವು ಅರ್ಥಮಾಡಿಕೊಳ್ಳಬೇಕು.
ಕೃಷ್ಣಪ್ರಜ್ಞೆಯು ಶ್ರೇಷ್ಠ ವಿಜ್ಞಾನ. ಇದು ಭಾವನೆಗಳಲ್ಲ ಅಥವಾ ಮಾನಸಿಕ ಊಹಾಪೋಹಗಳಲ್ಲ ಅಥವಾ ಮೋಸ, ವಂಚನೆ ಅಲ್ಲ. ಭಗವದ್ಗೀತೆಯಲ್ಲಿ, ವೇದಗಳಲ್ಲಿ, ಸಂಹಿತೆಗಳಲ್ಲಿ, ಮತ್ತು ಶ್ರೀ ಚೈತನ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯ, ನಾರದ, ವ್ಯಾಸರಂತಹ ವಿದ್ವಾಂಸರು ಒಪ್ಪಿಕೊಂಡಿರುವಂತೆ ವಿಜ್ಞಾನ.
ಕೃಷ್ಣಪ್ರಜ್ಞೆಯು ಮೋಸ ಮಾಡುವ ಅಥವಾ ಹಣ ಮಾಡುವ ವ್ಯವಹಾರವಲ್ಲ. ಇದು ವಾಸ್ತವ. ನೀವು ಇದನ್ನು ಗಂಭೀರವಾಗಿ ಪರಿಗಣಿಸಿದರೆ ನಿಮ್ಮ ಬದುಕು ಸಫಲವಾಗುತ್ತದೆ.






Leave a Reply