ಶ್ರೀಲ ಪ್ರಭುಪಾದರು ಅತಿಥಿಯೊಬ್ಬರೊಡನೆ ನಡೆಸಿದ ಸಂವಾದ, ಸ್ಥಳ: ವೃಂದಾವನ, ಸೆಪ್ಟೆಂಬರ್ 1975
ಶ್ರೀಲ ಪ್ರಭುಪಾದ: ಜೀವಿ ಹಾಗೂಭಗವಾನ್ ಕೃಷ್ಣ ಇಬ್ಬರೂ ಪ್ರಜ್ಞೆಯುಳ್ಳವರು. ಜೀವಿಯ ಪ್ರಜ್ಞೆ ಅವನಲ್ಲಿಯೇ ಇರುತ್ತದೆ. ಕೃಷ್ಣನ ಪ್ರಜ್ಞೆ ಎಲ್ಲೆಲ್ಲೂ ವ್ಯಾಪಿಸಿರುತ್ತದೆ. ಇದೇ ವ್ಯತ್ಯಾಸ.

ಭಕ್ತ: ನಾವು ಮೋಕ್ಷ ಗಳಿಸಿದಾಗ ನಾವು ಕೂಡ ಎಲ್ಲೆಲ್ಲೂ ವ್ಯಾಪಿಸಿರುತ್ತೇವೆ ಎಂದು ಮಾಯಾವಾದಿಗಳು (ನಿರಾಕಾರವಾದಿಗಳು) ಹೇಳುತ್ತಾರೆ. ನಾವು ಬ್ರಹ್ಮನ್‌ನಲ್ಲಿ ಲೀನರಾಗಿ ನಮ್ಮ ವ್ಯಕ್ತಿಗತ ಅನನ್ಯತೆಯನ್ನು ಕಳೆದುಕೊಳ್ಳುತ್ತೇವೆ ಎನ್ನುವುದು ಅವರ ಮತ.
ಶ್ರೀಲ ಪ್ರಭುಪಾದ : ಹಾಗೆಂದರೆ ನೀವು ಎಲ್ಲವನ್ನೂ ಮರೆತು ಹೋಗುತ್ತೀರಿ ಅಂತ ಆಯಿತು. ನಿಮ್ಮಲ್ಲಿ ಅಲ್ಪ ಸ್ವಲ್ಪ ಪ್ರಜ್ಞೆ ಏನಿತ್ತೋ ಅದು ಬರಿದಾಗಿಬಿಡುತ್ತದೆ.
ಭಕ್ತ: ನಾವು ಏನನ್ನು ಮರೆತುಬಿಡುತ್ತೇವೋ ಅದು ಹೇಗೂ ಭ್ರಮೆಯೇ ಆಗಿರುತ್ತದೆ.
ಶ್ರೀಲ ಪ್ರಭುಪಾದ : ಅದು ಮೋಕ್ಷವಾದರೆ ನಾನೀಗಲೇ ನಿಮ್ಮನ್ನು ಕೊಲ್ಲುವುದೂ ಆಗಿಬಿಡಲಿ. ನೀವು ಎಲ್ಲವನ್ನೂ ಹೇಗೂ ಮರೆತುಬಿಡುತ್ತೀರಲ್ಲ. ಅದೂ ಮೋಕ್ಷವೆ (ನಗು).
(ಹಾದಿ ನಡೆಯುತ್ತಿದ್ದಾತನೊಬ್ಬ ಹಿಂದಿ ಭಾಷೆಯಲ್ಲಿ ಹಾಡುತ್ತಿದ್ದಾನೆ) ಇದೀಗ ಮೋಕ್ಷ. ಆತ “ಓ ನನ್ನ ಪ್ರಭು ಕೃಷ್ಣ ನಾನು ನಿನ್ನ ಪಾದಪದ್ಮಗಳಿಗೆ ಶರಣಾಗತನಾಗುವುದು ಎಂದಿಗೆ ಸ್ವಾಮಿ?” ಎಂದು ಹಾಡುತ್ತಿದ್ದಾನಲ್ಲ ಅದೀಗ ಮೋಕ್ಷ. ತನ್ನ ತ೦ದೆ ತಾಯಿಗಳಿಗೆ ಸಂಪೂರ್ಣವಾಗಿ ಶರಣಾಗತವಾಗಿರುತ್ತದಲ್ಲ ಒಂದು ಮಗು, ಆ ಕೂಸೀಗ, ಮೋಕ್ಷ ಗಳಿಸಿರುವ ಕೂಸು.
ಆ ಮಗುವಿಗೆ ತವಕವಿಲ್ಲ. ‘ನನ್ನನ್ನು ಹೆತ್ತವರಿದ್ದಾರೆ. ಅವರು ನನಗಾಗಿ ಏನೇ ಮಾಡಿದರೂ ಅದು ಸರಿಯಾಗಿರುತ್ತದೆ. ನನಗೆ ಯಾರೂ ಕೇಡು ಮಾಡಲಾರರು’ ಎನ್ನುವುದು ಆ ಮಗುವಿಗೆ ದೃಢಪಟ್ಟಿದೆ.
ಭಕ್ತ: ಮೋಕ್ಷವು ಎಲ್ಲ ಯಾತನೆಗಳನ್ನೂ ತೊಡೆದು ಹಾಕುತ್ತಿದೆ ಎಂದು ಮಾಯಾವಾದಿಗಳು ಹೇಳುತ್ತಾರೆ.
ಶ್ರೀಲ ಪ್ರಭುಪಾದ : ಹೌದು. ನೀವು ಆತಂಕಭರಿತರಾಗಿದ್ದರೆ ನಿಮ್ಮ ಮೋಕ್ಷ ಎಲ್ಲಿದೆ?
ಭಕ್ತ : ನಾವು ಪರಮೋನ್ನತನೊಂದಿಗೆ ಬೆರೆತುಹೋದರೆ ಮೋಕ್ಷವನ್ನು ಸಾಧಿಸಬಹುದು ಎನ್ನುತ್ತಾರೆ ಮಾಯಾವಾದಿಗಳು.
ಶ್ರೀಲ ಪ್ರಭುಪಾದ : ಕೃಷ್ಣನು ಪರಮೋನ್ನತ ಪ್ರಜ್ಞೆ. ನೀವು ನಿಮ್ಮ ಪ್ರಜ್ಞೆಯನ್ನು ಕಳೆದುಕೊಂಡರೆ, ಪರಮೋನ್ನತನಲ್ಲಿ ಹೇಗೆ ಐಕ್ಯವಾಗುತ್ತೀರಿ?
ಭಕ್ತ: ನಾವು ನಮ್ಮ ಪ್ರಜ್ಞೆಯನ್ನು ಕಳೆದುಕೊಳ್ಳುತ್ತೇವೆ ಎನ್ನುವುದು ಅಷ್ಟು ಖಚಿತವಾಗಿ ಅಲ್ಲ. ಆದರೆ ನಾವು ಪರಮೋನ್ನತ ಪ್ರಜ್ಞೆಯಲ್ಲಿ ಲೀನವಾಗುತ್ತೇವೆ ಎನ್ನುವುದು ಇಲ್ಲಿ ಮುಖ್ಯ.
ಶ್ರೀಲ ಪ್ರಭುಪಾದ : ಹಾಗೆಂದರ ನೀವು ದೇವರಾಗಬಯಸುತ್ತೀರಿ ಎಂದು ಅರ್ಥ. ಆದರೆ ಈಗ ನೀವು ದೇವರಿಗಿಂತ ಬೇರೆಯವರಾಗಿದ್ದೀರಲ್ಲ, ಏಕೆ?
ಭಕ್ತ : ಅದು ನನ್ನ ಲೀಲೆ.
ಶ್ರೀಲ ಪ್ರಭುಪಾದ : ಅದು ನಿಮ್ಮ ಲೀಲೆಯಾದರೆ ಮೋಕ್ಷ ಗಳಿಸಲು ನೀವು ಅಷ್ಟೆಲ್ಲ ಉಗ್ರ ತಪಶ್ಚರ್ಯೆಗಳನ್ನು ಆಚರಿಸುವಿರಲ್ಲ. ಏಕೆ?
ಭಕ್ತ: ಮುಖ್ಯವಾದ ಮಾತೆಂದರೆ ಪರಮೋನ್ನತ ಪ್ರಜ್ಞೆಯು ಸಶರೀರಿಯಲ್ಲದ್ದು, ಆದರೆ ತತ್‌ಕ್ಷಣದಲ್ಲಿ ನಾವು ಸಶರೀರಿಗಳು, ಹಾಗಾಗಿ ನಾವು ಪರಮೋನ್ನತ ಪ್ರಜ್ಞೆಯನ್ನು ಸಾಧಿಸಿದಾಗ ನಾವು ಕೂಡ ಅಶರೀರಿಗಳಾಗುತ್ತೇವೆ.
ಶ್ರೀಲ ಪ್ರಭುಪಾದ : ನೀವು ಪರಮೋನ್ನತರಾಗಿದ್ದಲ್ಲಿ ನೀವು ಸಶರೀರಿಗಳಾಗಿದ್ದು ಹೇಗೆ? ನಿಮ್ಮನ್ನು ಸಶರೀರಿಗಳನ್ನಾಗಿ ಮಾಡಿದ್ದು ಯಾವುದು? ಸಶರೀರಿಗಳಾಗಿರಲು ನಿಮಗೆ ಇಷ್ಟವಿಲ್ಲ. ಏಕೆಂದರೆ ದೇಹವು ಅನೇಕ ಯಾತನೆಗಳನ್ನು ತಂದೊಡ್ಡುತ್ತಿದೆ. ಆದ್ದರಿಂದ ನಿಮಗೆ ಮೋಕ್ಷ ಬೇಕು. ಹೀಗಿರುತ್ತ ನಿಮ್ಮನ್ನು ಸಶರೀರಿಗಳನ್ನಾಗಿ ಯಾರು ಮಾಡಿದರೋ ಆತ ಪರಮೋನ್ನತ. ನೀವು ಪರಮೋನ್ನತರಲ್ಲ.
ಭಕ್ತ: ನಾನು ನನ್ನನ್ನು ಭ್ರಮೆಗೆ ಒಳಪಡಿಸಿಕೊಳ್ಳುತ್ತೇನೆ. ಅದರಿಂದ ನನಗೆ ಮೋಕ್ಷ ಸಿಗಲಿ ಎಂಬುದು ನನ್ನ ಉದ್ದೇಶ.
ಶ್ರೀಲ ಪ್ರಭುಪಾದ : ಹುಟ್ಟು ಮುಪ್ಪು, ರೋಗ ಹಾಗೂ ಮರಣಗಳ ರೂಪದಲ್ಲಿ ಐಹಿಕ ಪ್ರಕೃತಿಯು ನಮ್ಮನ್ನು ಮೇಲಿಂದ ಮೇಲೆ ಒಡೆಯುತ್ತಿರುತ್ತದೆ. ಇವೆಲ್ಲವುಗಳನ್ನು ತಾಳಿಕೊಳ್ಳಬೇಕಾದಂಥ ಸ್ಥಾನದಲ್ಲಿ ಯಾವುದೇ ಸ್ವಸ್ಥ ಬುದ್ಧಿಯ ಮನುಷ್ಯ ತನ್ನನ್ನು ಏಕೆ ಇರಿಸಿಕೊಳ್ಳಬೇಕು? ಇದರಲ್ಲಿ ಸುಖಾನುಭವ ಎಲ್ಲಿದೆ?
ಭಕ್ತ: ನೋವನುಭವಿಸದೆ ಇದ್ದಲ್ಲಿ ನಿಮಗೆ ಸುಖದ ಅನುಭವ ಆಗುವುದಾದರೂ ಹೇಗೆ?
ಶ್ರೀಲ ಪ್ರಭುಪಾದ : ಹಾಗಾದರೆ ನಾನೀಗ ನಿಮ್ಮನ್ನು ಒದೆಯುತ್ತೇನೆ. ನಾನು ಒದೆಯುವುದನ್ನು ನಿಲ್ಲಿಸಿದಾಗ ನಿಮಗೆ ಸುಖದ ಅನುಭವ ಆಗುತ್ತದೆ.
ಭಕ್ತ : ಈ ಜಗತ್ತಿನ ಕಷ್ಟಕೋಟಲೆಗಳನ್ನು ಅನುಭವಿಸಿದ ಮೇಲೆ ಮೋಕ್ಷವು ಬಹು ಮಧುರವಾಗಿರುತ್ತದೆ ಎಂಬುದು ಮುಖ್ಯ ವಿಚಾರ.
ಶ್ರೀಲ ಪ್ರಭುಪಾದ : ಆದರೆ ಯಾತನೆ ಇರುವುದಾದರೂ ಏಕೆ? ನೀವು ಪರಮೋನ್ನತರಾದರೆ ನಿಮಗೆ ಯಾತನೆ ಯಾಕಿದೆ? “ಯಾತನೆ ಪಡುವುದು ನನ್ನ ಲೀಲೆ ” ಅಂತೀರಿ. ಎಂಥ ಹುಚ್ಚು ಮಾತಿದು?
ಭಕ್ತ : ತಾವು ಪರಮೋನ್ನತರೆಂದು ಅರ್ಥಮಾಡಿಕೊಂಡಿಲ್ಲದವರಿಗೆ ಯಾತನೆ ಇದೆ. ಕಷ್ಟ ಅನುಭವಿಸುವವರು ಅವರು. ನಾನು ಯಾತನೆ ಅನುಭವಿಸುವುದಿಲ್ಲ.
ಶ್ರೀಲ ಪ್ರಭುಪಾದ : ಹಾಗಾದರೆ ನೀವು ಹಂದಿ ನಾಯಿಗಳಂತೆಯೇ ಆದಿರಿ. ತಾವು ಅನುಭವಿಸುತ್ತಿರುವುದು ಯಾತನೆಯೆಂಬುದನ್ನು ಅವು ಅರ್ಥಮಾಡಿಕೊಳ್ಳುವುದಿಲ್ಲ. ಆದ್ದರಿಂದ ಮಾಯಾವಾದಿಗಳು ಮೂಢರು. ಯಾತನೆ ಯಾವುದು, ಸುಖ ಯಾವುದು ಎಂಬುದನ್ನು ಅರ್ಥಮಾಡಿಕೊಳ್ಳಲಾಗದ ಅವಿವೇಕಿಗಳು, ಬುದ್ಧಿಹೀನರು.
ಮೂಢ’ ಯಮ್ ನಭಿಜಾನತಿ ಮಾಮ್ ಯೇಭ್ಯಃ ಪರಮ್ ಅವ್ಯಯಮ್. ಕೃಷ್ಣನು ಹೇಳುತ್ತಾನೆ: “ಮೂಢರು ಹಾಗೂ ಅವಿವೇಕಿಗಳು ನಾನು ಪರಮೋನ್ನತ ಎಂಬುದನ್ನು ಅರಿಯರು.” ಆದ್ದರಿಂದ ಅನೇಕ ಜನ್ಮಗಳ ಕಾಲ ಯಾತನೆ ಅನುಭವಿಸಿದ್ದೂ, ಬಾಯಿಗೆ ಬಂದಂತೆ ಹರಟಿದ ಆದಮೇಲೆ, ನಿಜವಾಗಿಯೂ ಬುದ್ಧಿವಂತನಾದವನು ಕೃಷ್ಣನಿಗೆ ಶರಣಾಗತನಾಗುತ್ತಾನೆ. (ಬಹೂನಾಮ್ ಜನ್ಮಾನಾಮ್ ಅಂತೇ ಜ್ಞಾನವಾನ್ ಮಾಮ್ ಪ್ರಪದ್ಯಂತೇ). ಅದು ಜ್ಞಾನ. ”ನಾನು ಬರಿದೆ ಯಾತನೆ ಅನುಭವಿಸಿದ್ದೇನೆ. ಅಲ್ಲದೆ ನಾನು ಶಬ್ದಗಳ ಮೋಡಿಗೆ ಮರುಳಾಗಿ ನನ್ನನ್ನು ನಾನೇ ವಂಚಿಸಿಕೊಂಡಿದ್ದೇನೆ” ಎಂಬ ಅರಿವನ್ನು ಗಳಿಸಿದಾಗ ವ್ಯಕ್ತಿಯು ಕೃಷ್ಣನಿಗೆ ಶರಣಾಗುತ್ತಾನೆ.
ಭಕ್ತ: ಹಾಗಾದರೆ ಈ ಮಾಯಾವಾದಿ ಸಿದ್ಧಾಂತ ಎಂಬುದು ವಾಸ್ತವವಾಗಿ ಬಹು ದೊಡ್ಡ ಭ್ರಮೆ, ಹೌದೆ?
ಶ್ರೀಲ ಪ್ರಭುಪಾದ : ಹೌದು. ಮಾಯಾವಾದಿ ಭಾಷ್ಯ ಶುನಿಲೇ ಹಯ ಸರ್ವನಾಶ : ‘ಮಾಯಾವಾದ ಸಿದ್ಧಾಂತವನ್ನು ಅನುಸರಿಸುವ ವ್ಯಕ್ತಿಯು ಹಾಳಾಗುವನು.” ಅವನು ಮುಗಿದು ಹೋಗುವನು. ಆ ಹುಸಿ ಸಿದ್ಧಾಂತದಲ್ಲಿ ಮುಳುಗಿ ಹೋಗುವ ಇಂಥ ವ್ಯಕ್ತಿ ನೈಜ ಸಿದ್ಧಾಂತವನ್ನು ಒಪ್ಪಿಕೊಳ್ಳಲು ಎಂದಿಗೂ ಸಮರ್ಥನಾಗುವುದಿಲ್ಲ.
ಹಾಗಾಗಿ ಅಂಥ ಜನ ಸತತವಾಗಿ ಅಜ್ಞಾನದಲ್ಲೇ ಇರುತ್ತಾರಲ್ಲದೆ ತಾವೇ ದೇವರೆಂದು ಭಾವಿಸಿಕೊಂಡೂ ಇರುತ್ತಾರೆ. “ನೀನು ಪಾಪಿಯೆಂದು ಹಲುಬುತ್ತೀಯೇಕೆ? ನೀನು ದೇವರು ಎಂದು ಘಂಟಾಘೋಷವಾಗಿ ಪ್ರಚಾರ ಮಾಡುತ್ತಾರೆ.
ಭಕ್ತ : ಕ್ರಿಶ್ಚಿಯನ್ನರಿಗೆ ಪಾಪದ ಕಲ್ಪನೆ ಒಂದುಂಟು. ಮಾಯಾವಾದಿಗಳು ಅಮೆರಿಕಕ್ಕೆ ಹೋದಾಗ ಅವರು ಕ್ರಿಶ್ಚಿಯನ್ನರಿಗೆ, ನಿಮ್ಮ ಈ ಪಾಪದ ಕಲ್ಪನೆಯನ್ನು ಮರೆತುಬಿಡಿ. ನೀವು ದೇವರುಗಳು. ಆದ್ದರಿಂದ ನೀವೇನೇ ಮಾಡಿದರೂ ಅದು ಸಮಂಜಸ” ಎಂದು ಹೇಳಿದರು.

ಶ್ರೀಲ ಪ್ರಭುಪಾದ : ಕ್ರಿಶ್ಚಿಯನ್ ಪಾದ್ರಿಗಳು ಮಾಯಾವಾದ ಸಿದ್ಧಾಂತವನ್ನು ಒಪ್ಪಿಕೊಳ್ಳಲಿಲ್ಲ. ಮಾಯಾವಾದಿಗಳು ಬೌದ್ಧರಿಗಿಂತ ಹೆಚ್ಚು ನಾಸ್ತಿಕರು. ಬೌದ್ಧರು ವೇದಗಳನ್ನು ಮಾನ್ಯ ಮಾಡುವುದಿಲ್ಲ. ಆದ್ದರಿಂದ ಅವರನ್ನು ನಾಸ್ತಿಕರೆಂದು ಪರಿಗಣಿಸಲಾಗುತ್ತದೆ. ಆದರೆ ಮಾಯಾವಾದಿ ಮೂಢರು ವೇದಗಳನ್ನು ಒಪ್ಪಿಕೊಂಡರೂ ನಿರೀಶ್ವರವಾದವನ್ನು ಬೋಧಿಸುತ್ತಾರೆ.
ಆದ್ದರಿಂದ ಮಾಯಾವಾದಿಗಳು ಬೌದ್ಧರಿಗಿಂತ ಹೆಚ್ಚು ಅಪಾಯಕಾರಿ ಜನ. ಬೌದ್ಧರನ್ನು ನಾಸ್ತಿಕರೆಂದು ಕರೆಯಲಾಗಿದ್ದರ ಬುದ್ಧನನ್ನು ಪೂಜಿಸುತ್ತಾರೆ. ಬುದ್ಧ ಕೃಷ್ಣನ ಅವತಾರ. ಆದ್ದರಿಂದ ಬೌದ್ಧರಿಗೆ ಒಂದು ದಿನ ವಿಮೋಚನೆ ಸಿಕ್ಕಿಯೇ ಸಿಕ್ಕುತ್ತದೆ. ಆದರೆ ಮಾಯಾವಾದಿಗಳಿಗೆ ವಿಮೋಚನೆ ಎಂದಿಗೂ ಇಲ್ಲ.
ಭಗವದ್ಗೀತೆಯಲ್ಲಿ ಕೃಷ್ಣನು, “ಸುಮ್ಮನೆ ನನಗೆ ಶರಣಾಗತರಾಗಿ ನಿಮಗೊದಗುವ ಎಲ್ಲ ಅಪಾಯಗಳಿಂದ ನಾನು ನಿಮ್ಮನ್ನು ಪಾರು ಮಾಡುತ್ತೇನೆ” ಎಂದು ಭರವಸೆ ನೀಡುತ್ತಾನೆ. ನಾವು ಕೃಷ್ಣನನ್ನು ಒಪ್ಪಿಕೊಳ್ಳುತ್ತೇವೆ. ಅಷ್ಟೆ ನಮ್ಮ ಭಕ್ತಿವಿಧಾನ ಸುಲಭವಾದದ್ದು. ಒಂದು ಮಗು ನಡೆಯಲು ಪ್ರಯತ್ನಪಡುತ್ತಿದೆ. ಆದರೆ ನಡೆಯಲು ಆಗದೆ ಆಗಾಗ ಬೀಳುತ್ತಿದೆ. ಆಗ ಅದರ ತಂದೆ ಹೇಳುತ್ತಾನೆ : “ಮಗು, ನನ್ನ ಕೈ ಹಿಡಿದುಕೋ.” ಈಗ ಆ ಮಗುವಿಗೆ ಕ್ಷೇಮ ದೊರಕಿತು.
ಮಾಯಾವಾದಿಗಳು ದೇವರ ತೀರ್ಪಿನ ವಿರುದ್ಧ ನಡೆಯುತ್ತಾರೆ. ”ಜೀವಿಗಳು ನನ್ನ ಅವಿಭಾಜ್ಯ ಅಂಗಗಳು’ ಎನ್ನುತ್ತಾನೆ ಭಗವಂತ. ಮಾಯಾವಾದಿಗಳಿಗೆ ಈ ಮಾತು ಹಿಡಿಸದು. ಅದು ಅವರ ಮೂರ್ಖತನ. ಅವರು ದೇವರಿಗೆ ಸಮನಾದವರಾಗಿದ್ದರೆ ದೇವರು, “ನನಗೆ ಶರಣಾಗಿ” ಎಂದೇಕೆ ಹೇಳಬೇಕಿತ್ತು? ಮಾಯಾವಾದಿಗಳು ದೇವರಲ್ಲ. ದೇವರಿಗೆ ಶರಣಾಗುವುದು ಅವರಿಗೆ ಇಷ್ಟವಿಲ್ಲ. ಆದ್ದರಿಂದ ನಾವು ದೇವರಿಗೆ ಸಮನಾದವರು ಎಂದು ಹೇಳುವ ಪಕ್ಕಾ ಧೂರ್ತರು ಜನ.
ಆದ್ದರಿಂದ ಈ ಜ್ಞಾನ – ನಾನು ಭಗವಂತನಿಗೆ ಶರಣಾಗತನಾಗಬೇಕು – ಎಂಬ ಜ್ಞಾನ ಅನೇಕ ಜನ್ಮಗಳು ಕಳೆದ ಬಳಿಕ ಬರುತ್ತದೆ. ಆಗ ವ್ಯಕ್ತಿಯು ಈ ಮೂರ್ಖ ಶಬ್ದದಾಟ ನಿಲ್ಲಿಸಿ ಕೃಷ್ಣಪ್ರಜ್ಞೆಯಲ್ಲಿ ನಿಜವಾದ ಮೋಕ್ಷ ಪಡೆಯುತ್ತಾನೆ.






Leave a Reply