ಸ್ವತಂತ್ರವಾಗಿ ನೀವು ಸುಖವಾಗಿರಲಾರಿರಿ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಅವರ ಕೆಲವು ಶಿಷ್ಯರ ಮಧ್ಯೆ ಕೆನ್ಯಾದ ನೈರೋಬಿಯಲ್ಲಿ, 1975ರ ಅಕ್ಟೋಬರ್‌ನಲ್ಲಿ ಬೆಳಗಿನ ವಾಯು ಸಂಚಾರದ ವೇಳೆ ನಡೆದ ಸಂವಾದ.

ಶ್ರೀಲ ಪ್ರಭುಪಾದ : (ನಾಸ್ತಿಕನ ಪಾತ್ರ ವಹಿಸುತ್ತ) ಆಧ್ಯಾತ್ಮಿಕ ಗುರುವನ್ನು ತೃಪ್ತಿಗೊಳಿಸುತ್ತ ನೀವು ಕೃಷ್ಣನನ್ನು ಸಂತೋಷಪಡಿಸುವಿರಿ. ಅದು ಒಳ್ಳೆಯದು. ಆದರೆ ಕೃಷ್ಣನನ್ನು ಏಕೆ ಸಂತೋಷಪಡಿಸಬೇಕು? ಕೃಷ್ಣನನ್ನು ಆನಂದಪಡಿಸಲು ನೀವು ಏಕೆ ತೊಂದರೆ ತೆಗೆದುಕೊಳ್ಳುವಿರಿ? ಉತ್ತರಿಸಿ.

ಭಕ್ತ : ಏಕೆಂದರೆ ಕೃಷ್ಣನ ಸೇವೆಯೇ ನಮ್ಮ ನಿಜವಾದ ಸ್ಥಾನ. ಸೇವಕರಾಗಿ ನಮ್ಮ ಸ್ಥಾನವನ್ನು ಮರೆತಿರುವುದರಿಂದ ನಾವು ಈ ಲೌಕಿಕ ಶಕ್ತಿಯ ಮಾಯೆಯಲ್ಲಿ ಸಿಲುಕಿದ್ದೇವೆ.

ಶ್ರೀಲ ಪ್ರಭುಪಾದ : ನಾವು ವೈಜ್ಞಾನಿಕ ಪ್ರಗತಿ ಸಾಧಿಸುತ್ತಿದ್ದೇವೆ. ದೇವರನ್ನು ಇಲ್ಲಿ ತರುವ ಪ್ರಯೋಜನ ಏನು?

ಭಕ್ತ : ಏಕೆಂದರೆ ಭಗವಂತನಿಗೆ ಸೇವೆ ಸಲ್ಲಿಸದೆ ನಾವು ಪರಿಪೂರ್ಣರಾಗುವುದು ಸಾಧ್ಯವಿಲ್ಲ.

ಶ್ರೀಲ ಪ್ರಭುಪಾದ : ಅದು ಹೇಗೆ?

ಭಕ್ತ : ಪ್ರತಿಯೊಬ್ಬರೂ ಯಾರಿಗಾದರೂ ಸೇವೆ ಸಲ್ಲಿಸಲೇ ಬೇಕು. ಕೃಷ್ಣನು ಎಲ್ಲ ಆನಂದಗಳ ಭಂಡಾರವಾಗಿರುವುದರಿಂದ ಮತ್ತು ಎಲ್ಲವೂ ಅವನಿಂದ ಹೊರಹೊಮ್ಮುವುದರಿಂದ ಯಾರೋ ಸಾಮಾನ್ಯ ವ್ಯಕ್ತಿಯ ಸೇವೆ ಮಾಡುವ ಬದಲು ನಾವು ಕೃಷ್ಣನಿಗೆ ಸೇವೆ ಸಲ್ಲಿಸಬೇಕು.

ಶ್ರೀಲ ಪ್ರಭುಪಾದ : ಆದರೆ ಕೃಷ್ಣನಿಗೆ ಸೇವೆ ಸಲ್ಲಿಸದೆಯೇ ನನಗೆ ಸಾರಾಯಿ ಕುಡಿಯುವುದರಿಂದ ಸಂತೋಷ ಲಭಿಸುತ್ತಿದೆ. ಆದುದರಿಂದ ನಾನು ಯಾಕೆ ಅವನ ಸೇವೆ ಮಾಡಬೇಕು?

ಭಕ್ತ : ಅಂತಹ ಸಂತೋಷ ಹೆಚ್ಚು ದಿನ ಉಳಿಯದು. ಅದು ತಾತ್ಕಾಲಿಕ.

ಶ್ರೀಲ ಪ್ರಭುಪಾದ : ಆದರೆ ನಾನೂ ಕೂಡ ಹೆಚ್ಚು ದಿನ ಉಳಿಯುವುದಿಲ್ಲ. ಆದುದರಿಂದ ನಾನು ನನ್ನ ಮದ್ಯವನ್ನು ಆನಂದಿಸುತ್ತಿರುವೆ.

ಭಕ್ತ : ಅಂತಹ ಧೋರಣೆ ಕೀಳು ಮಟ್ಟದ್ದು. ವಾಸ್ತವವಾಗಿ ನಮ್ಮ ಬದುಕು ಶಾಶ್ವತ.

ಶ್ರೀಲ ಪ್ರಭುಪಾದ : ಕೀಳು ಮಟ್ಟ ಎನ್ನುವುದು ನಿಮ್ಮ ಹೇಳಿಕೆ. ಆದರೆ “ಅದು ಮೇಲ್ಮಟ್ಟದ್ದು” ಎಂಬುವುದು ನನ್ನ ಹೇಳಿಕೆ.

ಭಕ್ತ : ಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ (10.10) “ನನ್ನ ಪ್ರೀತಿ ಪೂರ್ವಕ ಸೇವೆಗೆ ಸದಾ ಅರ್ಪಿಸಿಕೊಂಡವರಿಗೆ, ಅವರು ನನ್ನ ಬಳಿಗೆ ಬರಲು ಅಗತ್ಯವಾದ ಬುದ್ಧಿಯೋಗವನ್ನು ಕೊಡುತ್ತೇನೆ.” ಆದುದರಿಂದ ಇದು ನಮ್ಮ ಅಪೇಕ್ಷೆ.

ಶ್ರೀಲ ಪ್ರಭುಪಾದ : ನನಗೆ ಹೋಗಲು ಇಷ್ಟವಿಲ್ಲ.

ಭಕ್ತ : ಏನು, ನಿಮಗೆ ಕೃಷ್ಣನ ಬಳಿಗೆ ಹೋಗಲು ಇಷ್ಟವಿಲ್ಲವೆ?

ಶ್ರೀಲ ಪ್ರಭುಪಾದ : ಇಲ್ಲ.

ಭಕ್ತ : ಹಾಗಾದರೆ (ನೋವು) ಅನುಭವಿಸಿ.

ಶ್ರೀಲ ಪ್ರಭುಪಾದ : ನೀವು `ಅನುಭವಿಸಿ’ ಎಂದು ಹೇಳುತ್ತ ನನ್ನ ಮೇಲೆ ಪ್ರಭಾವ ಉಂಟುಮಾಡಲು ಯತ್ನಿಸುತ್ತಿರುವಿರಿ. ಆದರೆ ನಾನು ಆನಂದಿಸುತ್ತಿರುವೆ.

ಭಕ್ತ : ನಿಮಗೆ ಮಂಡಿ ನೋವಿದೆ. ಅದು ಸಂತೋಷಪಡುವಂತಹುದೇ?

ಶ್ರೀಲ ಪ್ರಭುಪಾದ : ಅದನ್ನು ನಾನು ಗುಣಪಡಿಸಿಕೊಳ್ಳುತ್ತಿರುವೆ. ಅದೂ ಚೆನ್ನಾಗಿದೆ. (ನಗು)

ಭಕ್ತ : ನಾವು ದೇಹದ ಅಂಗಗಳಂತೆ ಮತ್ತು ಕೃಷ್ಣನು ಉದರದಂತೆ ಎಂದು ಭಾಗವತದಲ್ಲಿ ಹೇಳಲಾಗಿದೆ. ಎಲ್ಲ ಅವಯವಗಳು ಉದರದ ಬಗೆಗೆ ಅಸೂಯೆಪಡಬಹುದು ಮತ್ತು ಹೊಟ್ಟೆಗೆ ಆಹಾರ ನೀಡಲು ಅವುಗಳಿಗೆ ಇಷ್ಟ ಇಲ್ಲದಿರಬಹುದು. ಆದರೆ ಕಾಲು, ಕೈ ಮತ್ತು ಬಾಯಿ ಮುಷ್ಕರ ಹೂಡಿ ಹೊಟ್ಟೆಗೆ ಆಹಾರ ನೀಡದಿದ್ದರೆ ಅಂತಿಮವಾಗಿ ಅವುಗಳೇ ನಾಶವಾಗುತ್ತವೆ.

ಶ್ರೀಲ ಪ್ರಭುಪಾದ : ಇದು ಸರಿಯಾದ ಉತ್ತರ. ಪ್ರತಿಯೊಂದು ಅಂಗವೂ ಉದರದೊಂದಿಗೆ ಸಹಕರಿಸಬೇಕು. “ನಾನು ಸ್ವತಂತ್ರವಾಗಿ ಉಳಿದು ಸಂತೋಷದಿಂದಿರುವೆ” ಎಂದು ಬೆರಳು ಯೋಚಿಸಿದರೆ, ಅದು ಸಾಧ್ಯವಿಲ್ಲ. ಹೊಟ್ಟೆಗೆ ಆಹಾರ ಪೂರೈಸಬೇಕು, ಆಗ ದೇಹದ ಇತರ ಎಲ್ಲ ಅಂಗಗಳೂ ಸಂತೋಷದಿಂದ ಇರುತ್ತವೆ.

ಅದೇ ರೀತಿ, ಕೃಷ್ಣನು ಭೋಕ್ತ. ಹೇಗೆ ಆಫ್ರಿಕಾ ಸರ್ಕಾರವು ಇಲ್ಲಿನ ಜನರ ಚಟುವಟಿಕೆಗೆ ಕೇಂದ್ರವೋ ಹಾಗೆ ಕೃಷ್ಣನು ಎಲ್ಲರ ಚಟುವಟಿಕೆಗೆ ಕೇಂದ್ರ. ನೀವು ಸರ್ಕಾರ, ರಾಜ್ಯ ಅಥವಾ ಅಧ್ಯಕ್ಷರನ್ನು ತೃಪ್ತಿಪಡಿಸದಿದ್ದರೆ ನೀವು ಸುಖ ಸಂತೋಷದಿಂದ ಉಳಿಯಲಾರಿರಿ. ಸ್ವತಂತ್ರವಾಗಿ ನೀವು ಸುಖವಾಗಿರಲಾರಿರಿ. ಉದಾಹರಣೆಗೆ, ನಾವು ಈ ಉದ್ಯಾನಕ್ಕೆ ಬಂದಿದ್ದೇವೆ, ಏಕೆಂದರೆ ಸರ್ಕಾರವು ಇದನ್ನು ನಿರ್ವಹಿಸುತ್ತಿದೆ. ನಾವು ಕಾಡಿಗೇನೂ ಹೋಗಿಲ್ಲ. ಆದುದರಿಂದ, ನಿಜವಾಗಿಯೂ ನಮಗೆ ಸಂತೋಷ ಬೇಕಾಗಿದ್ದರೆ ನಾವು ಸರ್ಕಾರದೊಂದಿಗೆ ಸಹಕರಿಸಬೇಕು.

ಅದೇ ರೀತಿ ನಮ್ಮ ಅಂತಿಮ ಗುರಿಯು ಸುಖ ಸಂತೋಷವಾಗಿದ್ದರೆ, ನಾವು ಕೃಷ್ಣನೊಂದಿಗೆ ಸಹಕರಿಸಬೇಕು. ಇದು ಕಡ್ಡಾಯ. ನೀವು ಪಾರಾಗಲಾಗದು. ನೀವು ಪಾರಾಗಲು ಪ್ರಯತ್ನಿಸಿದರೆ, ಅಸುಖಿಗಳಾಗುವಿರಿ.

ಭಕ್ತ : ನಾವು ಕೃಷ್ಣನ ಅವಿಭಾಜ್ಯ ಅಂಗ…

ಶ್ರೀಲ ಪ್ರಭುಪಾದ : ಹೌದು. ಮಗುವೊಂದನ್ನು ನೋಡಿ. ಅದು ಎಲ್ಲವನ್ನೂ ತನ್ನ ಬಾಯಿಗೆ ಹಾಕಿಕೊಳ್ಳುತ್ತದೆ. ಅದು ಎಲ್ಲವನ್ನೂ ಕೈಗೆತ್ತಿಕೊಳ್ಳುತ್ತದೆ, ಅದನ್ನು ಬೇರೆಲ್ಲೋ ಇಡುವುದಿಲ್ಲ. ತತ್‌ಕ್ಷಣ ಅದು ಅದನ್ನು ಬಾಯಿಗೆ ಹಾಕಿಕೊಳ್ಳುತ್ತದೆ. ಅದು ಅದನ್ನು ಕಿವಿಗೆ ಏಕೆ ಹಾಕಿಕೊಳ್ಳುವುದಿಲ್ಲ? ಅದಕ್ಕೆ ಯಾವುದು ಏನೆಂದು ತಿಳಿಯದು ಆದರೆ ಅದಕ್ಕೆ ಏನಾದರೂ ಸಿಕ್ಕಿದ ಕೂಡಲೇ ಅದು ಬಾಯಿಗೆ ಹಾಕಿಕೊಳ್ಳುತ್ತದೆ. ಏಕೆಂದರೆ ಅದರ ಸ್ಥಿತಿಯು ಉಣ್ಣುವುದು. ಎಂದು ಅದಕ್ಕೆ ಗೊತ್ತು. ಅದಕ್ಕೆ ಯಾರೂ ಕಲಿಸಬೇಕಾಗಿಲ್ಲ.

ಹೀಗಾಗಿ, ನಮ್ಮ ಸ್ಥಿತಿಯೂ ಹಾಗೆಯೇ. ಕೃಷ್ಣನ ಒಂದು ಅಂಶವಾಗಿ ಅವನಿಗೆ ಸೇವೆ ಸಲ್ಲಿಸುವುದು ನಮ್ಮ ಸ್ವಾಭಾವಿಕ ಪ್ರವೃತ್ತಿಯಾಗಿದೆ. ಕೃಷ್ಣನಿಗೆ ಸೇವೆ ಸಲ್ಲಿಸುವುದು ಕೃತಕವಲ್ಲ. ನೀವು ಕೃಷ್ಣನನ್ನು ಮರೆತಾಗ, ಅದು ಕೃತಕ. ಕೃಷ್ಣನಿಗೆ ಸೇವೆ ಸಲ್ಲಿಸುವುದು, ಕೃಷ್ಣನನ್ನು ಪ್ರೀತಿಸುವುದು ನಮ್ಮ ಮಾಮೂಲು ಬದುಕು. ನಮ್ಮ ಸೇವೆ ಇಲ್ಲದಿದ್ದರೆ ಕೃಷ್ಣನ ಬದುಕು ಅಸಾಮಾನ್ಯವಾಗುತ್ತದೆ, ಹುಚ್ಚನ ಬದುಕಾಗುತ್ತದೆ.

ಆದುದರಿಂದ ಮಾಮೂಲು ಜೀವನವನ್ನು ಬೋಧಿಸಲು ಕೃಷ್ಣನು ಈ ಲೋಕಕ್ಕೆ ಬರುತ್ತಾನೆ : ಸರ್ವ ಧರ್ಮಾನ್‌ ಪರಿತ್ಯಜ್ಯ ಮಾಂ ಏಕಂ ಶರಣಂ ವ್ರಜ : “ಕರ್ತವ್ಯ ಎನ್ನಿಸಿಕೊಳ್ಳುವ ಇತರ ಎಲ್ಲವನ್ನೂ ಪರಿತ್ಯಜಿಸಿ ನನಗೆ ಶರಣಾಗು.” ಇದು ಸಹಜ ಜೀವನ. ಕೃಷ್ಣನಿಗೆ ನಮ್ಮ ಸಹಾಯ ಬೇಕಾಗಿಲ್ಲ. ಅವನು ಅನೇಕ ಸಹಾಯಕರನ್ನು ಸೃಷ್ಟಿಸಬಲ್ಲ. ಆದರೆ ಅವನು ನಮ್ಮ ಒಳ್ಳೆಯದಕ್ಕಾಗಿಯೇ ಬಂದು ಹೇಳುತ್ತಾನೆ, “ನಿಮಗೆ ಸಂತೋಷದ, ಸಹಜ ಜೀವನ ಬೇಕೆಂದಿದ್ದರೆ ನನಗೆ ಶರಣಾಗಿ.” ಇದು ಅವನ ಸೂಚನೆ.

ಭಕ್ತ : ಆದರೆ ನಮಗೆ ಈ ಸಹಜ ಜೀವನವನ್ನು ಕೊಡಲು ಈಗ ಕೃಷ್ಣ ಇಲ್ಲಿ ಇಲ್ಲವಲ್ಲ. ನಾವೇನು ಮಾಡಬೇಕು?

ಶ್ರೀಲ ಪ್ರಭುಪಾದ : ಆದುದರಿಂದಲೇ ನಾವು ಮರೆತಿರುವ, ಕೃಷ್ಣನನ್ನು ಪ್ರೀತಿಸುವ ಮತ್ತು ಅವನಿಗೆ ಸೇವೆ ಸಲ್ಲಿಸುವ ನಮ್ಮ ಸ್ಥಾನವನ್ನು ನೆನಪು ಮಾಡಿಕೊಡಲು ಭಗವದ್ಗೀತೆ ಮತ್ತು ಇತರ ವೈದಿಕ ಶಾಸ್ತ್ರಗಳಿವೆ.

ಈ ಲೋಕಕ್ಕೆ ಯಾವಾಗ ಬಂದೆವೆಂಬುದನ್ನು ಖಚಿತವಾಗಿ ನಮಗೆ ಹೇಳಲಾಗುವುದಿಲ್ಲ. ಆದರೆ ಅನಾದಿ ಕಾಲದಿಂದಲೂ ನಾವು ಕೃಷ್ಣನನ್ನು ಮರೆತಿದ್ದೇವೆ. ಜನ್ಮದಿಂದ ಜನ್ಮಕ್ಕೆ ನಾವು ದೇಹವನ್ನು ಬದಲಿಸಿಕೊಂಡು ನೋವು ಅನುಭವಿಸುತ್ತಿದ್ದೇವೆ. ಈಗ, ಇಲ್ಲಿ, ನಮ್ಮ ಮಾನವ ರೂಪದ ಜೀವನದಲ್ಲಿ ನಮಗೆ ನಮ್ಮ ಮೂಲ ಸ್ಥಾನವನ್ನು ಪುನರ್‌ ಸ್ಥಾಪಿಸುವ ಅವಕಾಶ ದೊರೆತಿದೆ. ಆದರೆ ನಮಗೆ ಜ್ಞಾನದ, ಪರಿಪೂರ್ಣ ಜ್ಞಾನದ ನೆರವಿನ ಅಗತ್ಯವಿದೆ. ಅದು ವೈದಿಕ ಸಾಹಿತ್ಯದಲ್ಲಿ ಲಭ್ಯವಿದೆ.

ಆದುದರಿಂದ, ನಾವು ಭಗವದ್ಗೀತೆಯನ್ನು ಓದುತ್ತಾ ಅದರ ಜ್ಞಾನದ ಲಾಭ ಪಡೆದುಕೊಳ್ಳದೆ ಮನಸೋ ಇಚ್ಛೆ ನಡೆದುಕೊಂಡರೆ ನಾವು ನೋವು ಅನುಭವಿಸುತ್ತೇವೆ. ಕೃಷ್ಣನೊಂದಿಗಿನ ಸಹಕಾರವನ್ನು ನೀವು ತಡೆಯಲಾಗದು. ನೀವು ಸಹಕರಿಸಲೇಬೇಕು. ಪರ್ಯಾಯದ ಪ್ರಶ್ನೆಯೇ ಇಲ್ಲ. ನೀವು ಸಹಕರಿಸಲೇಬೇಕು. ಇಲ್ಲವಾದರೆ ನೀವು ಎಂದಿಗೂ ಸುಖವಾಗಿರುವುದು ಸಾಧ್ಯವಿಲ್ಲ.

ದುಃಖದ ಅಂತ್ಯವೇ ನಮ್ಮ ಬದುಕಿನ ಧ್ಯೇಯವಾಗಬೇಕು. (ಆತ್ಯಂತಿಕ ದುಃಖ ನಿವೃತ್ತಿಃ) ಉದಾಹರಣೆಗೆ, ನಾನು ಈ ಐಹಿಕ ಲೋಕದಲ್ಲಿದ್ದೇನೆ, ನಾನು ಐಹಿಕ ದೇಹಹೊಂದಿದ್ದೇನೆ. ಆದುದರಿಂದ ನಾನು ಮಂಡಿ ನೋವನ್ನು ಅನುಭವಿಸುತ್ತಿದ್ದೇನೆ. ಆದುದರಿಂದ ಆತ್ಯಂತಿಕ ದುಃಖ ನಿವೃತ್ತಿಃ ಎಂದರೆ ಇನ್ನು ಲೌಕಿಕ ಲೋಕ ಬೇಡ, ಇನ್ನು ಲೌಕಿಕ ದೇಹ ಬೇಡ, ಮತ್ತು ಇನ್ನು ದುಃಖ ಬೇಡ. ಆ ಉದ್ದೇಶಕ್ಕಾಗಿಯೇ ನಾವು ಕೃಷ್ಣನೊಂದಿಗೆ ಸಹಕರಿಸಬೇಕು. ಇಲ್ಲವಾದರೆ, ನಮ್ಮ ದುಃಖವನ್ನು ಅಂತ್ಯಗೊಳಿಸುವುದು ಸಾಧ್ಯವಿಲ್ಲ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi