
ಹಾಗಲಕಾಯಿ ಅಥವಾ ಕರೇಲ ಅನೇಕ ಆರೋಗ್ಯ ಲಾಭಕ್ಕೆ ಹೆಸರುವಾಸಿ. ಆದರೆ, ಮಕ್ಕಳಂತೂ ಕಹಿ ಹಾಗಲಕಾಯಿ ಎಂದರೆ ದೂರ ಓಡಿ ಹೋಗುತ್ತಾರೆ. ವಯಸ್ಕರದೂ ಅದೇ ಕಥೆ. ಅವರಿಗೂ ಈ ಆರೋಗ್ಯ ಭಾಗ್ಯದ ತರಕಾರಿ ಬೇಡ. ಮಧುಮೇಹಿಗಳು ಪ್ರತಿದಿನ ಬೆಳಗ್ಗೆ ಕಹಿಯಾದ ಕರೇಲ ಜ್ಯೂಸ್ ಕುಡಿಯುವುದನ್ನು ದ್ವೇಷಿಸುತ್ತಾರೆ. ಆದರೆ ಒಮ್ಮೆ ನೀವು ಹಾಗಲಕಾಯಿಯ ರುಚಿ ಕಂಡುಕೊಂಡರೆ ಆದು ನಿಮ್ಮ ಊಟವನ್ನು ಹೆಚ್ಚು ಪುಷ್ಟಿದಾಯಕವನ್ನಾಗಿ ಮಾಡುತ್ತದೆ. ಹೀಗಾಗಿ ಆಯುರ್ವೇದ ಮತ್ತು ಯುನಾನಿ ವೈದ್ಯ ಪದ್ಧತಿಯಲ್ಲಿ ಈ ತರಕಾರಿಯು ಪ್ರಮುಖ ಸ್ಥಾನ ಪಡೆದಿರುವುದು ಆಶ್ಚರ್ಯವಲ್ಲ. ಹಾಗಲಕಾಯಿಯು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಮೆ ಮಾಡುತ್ತದೆ. ಹಾಗಲಕಾಯಿಯ ವಿಶೇಷವನ್ನು ತಯಾರಿಸಿ ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.
ಗರಿಗರಿಯಾದ ಕರಿದ ಹಾಗಲಕಾಯಿ

ಹಾಗಲಕಾಯಿಯ ಸಿಪ್ಪೆ ತೆಗೆಯಿರಿ. ಅದು ಎಳೆಯದಾಗಿದ್ದರೆ ಸಿಪ್ಪೆ ತೆಗೆಯುವ ಅಗತ್ಯವಿಲ್ಲ. ಅನಂತರ ತೆಳುವಾಗಿ ಕತ್ತರಿಸಿ. ಉಪ್ಪು ಉದುರಿಸಿ ಪಕ್ಕಕ್ಕಿಡಿ. ಸ್ವಲ್ಪ ಸಮಯದ ಅನಂತರ ನೀರನ್ನೆಲ್ಲ ಹಿಂಡಿರಿ. ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿಮಾಡಿ. ಕಾದ ಎಣ್ಣೆಯಲ್ಲಿ ಹಾಗಲಕಾಯಿ ಹೋಳುಗಳನ್ನು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ ಮತ್ತು ಆಗಾಗ್ಗೆ ಕಲಕುತ್ತಿರಿ. ಪೂರ್ತಿ ಎಣ್ಣೆಯಲ್ಲಿ ಮುಳುಗಿಸಿ ಕರಿಯಲು ಇಷ್ಟವಿಲ್ಲದಿದ್ದರೆ, ನಾನ್ ಸ್ಟಿಕ್ ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಕರಿಯಿರಿ. ಹೀಗೆ ಮಾಡಿದರೆ ಗರಿಗರಿಯಾದ ಕರಿದ ಹಾಗಲಕಾಯಿ ಸಿದ್ಧ. ಇದರ ಮೇಲೆ ಮೆಣಸಿಕಾಯಿ ಪುಡಿಯನ್ನು ಉದುರಿಸಿ ಸೇವಿಸಿ.
ಪಾವಕ್ಕಾಯ್ ಪಿತಲೈ

ಇದು ತಮಿಳರ ಸಾಂಪ್ರದಾಯಿಕ ಖಾದ್ಯ. ಹಾಗಲಕಾಯಿಯನ್ನು ಉದ್ದುದ್ದವಾಗಿ ಕತ್ತರಿಸಿ. ಉಪ್ಪಿನ ನೀರಿನಲ್ಲಿ ಸ್ವಲ್ಪ ಸಮಯ ಬೇಯಿಸಿ. ನೀರು ತೆಗೆದು ಬಿಡಿ. ಅನಂತರ ತರಕಾರಿಗೆ ಗಟ್ಟಿಯಾದ ಹುಣಸೇ ರಸ ಮತ್ತು ಒಂದು ಚೂರು ಬೆಲ್ಲವನ್ನು ಹಾಕಿ ಮತ್ತು ದ್ರವದ ಅಂಶವನ್ನು ಕಡಮೆ ಮಾಡಿ. ಸ್ವಲ್ಪ ತೊಗರಿ ಬೇಳೆಯನ್ನು ಬೇಯಿಸಿ ಪಕ್ಕದಲ್ಲಿಡಿ. ಎರಡು ಒಣ ಮೆಣಸಿನಕಾಯಿ, ಉದ್ದಿನ ಬೇಳೆ, ಕರಿ ಮೆಣಸು ಮತ್ತು ಧನಿಯಾವನ್ನು ಹುರಿದು ಸ್ವಲ್ಪ ತೆಂಗಿನಕಾಯಿ ತುರಿ ಹಾಕಿ ರುಬ್ಬಿಕೊಳ್ಳಿ. ರುಬ್ಬಿದ ಪೇಸ್ಟ್ ಅನ್ನು ಮತ್ತು ಬೇಳೆಯನ್ನು ಬೇಯಿಸಿದ ಹಾಗಲಕಾಯಿಗೆ ಹಾಕಿ ಕುದಿಸಿ. ಸ್ವಲ್ಪ ಎಣ್ಣೆ ಬಿಸಿ ಮಾಡಿ ಸಾಸಿವೆ ಕರಿಬೇವಿನ ಒಗ್ಗರಣೆ ಹಾಕಿ ಸೇರಿಸಿ. ಅನ್ನದ ಜೊತೆ ಬಡಿಸಿ. ಬಾಯಲ್ಲಿ ನೀರೂರುವ ಖಾದ್ಯ ಇದು.
ಕರೇಲ ಮಸಾಲ

ಕಾಲ್ ಕೆ.ಜಿ. ಹಾಗಲಕಾಯಿಯನ್ನು ತೊಳೆದು ಸಣ್ಣ ಸಣ್ಣ ಚೂರು ಮಾಡಿ, ಪ್ರೆಷರ್ ಕುಕ್ಕರ್‌ನಲ್ಲಿ ಸ್ವಲ್ಪ ನೀರು ಹಾಕಿ ಬೇಯಿಸಿ. ಒಂದೇ ಕೂಗಿಗೆ ಕುಕ್ಕರ್ ಇಳಿಸಿ. ಅತಿ ಬೇಗ ಕುಕ್ಕರ್ ಮುಚ್ಚಳ ತೆಗೆಯಿರಿ. ತುಂಬ ಹೊತ್ತು ಹಬೆಯಲ್ಲಿದ್ದರೆ ಹಾಗಲಕಾಯಿ ತುಂಬ ಮೃದುವಾಗಿ ಅದರ ಮೂಲ ರುಚಿ ಹಾಳಾಗುತ್ತದೆ. ಅನಂತರ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಕತ್ತರಿಸಿದ ಹಸಿ ಶುಂಠಿ ಮತ್ತು ಒಂದು ಟೊಮಾಟೊ ಚೂರುಗಳನ್ನು ಹಾಕಿ ಬೇಯಿಸಿ. ಅನಂತರ ರುಚಿಗೆ ತಕ್ಕಷ್ಟು ಉಪ್ಪು, ಗರಂ ಮಸಾಲ, ಕೆಂಪು ಮೆಣಸಿನಕಾಯಿ ಪುಡಿ ಮತ್ತು ನಿಮಗಿಷ್ಟವಾದ ಇನ್ನಾವುದೇ ಸಾಂಬಾರ ಪದಾರ್ಥವನ್ನು
ಹಾಕಿ ಬೇಯಿಸಿ. ಹಾಗಲಕಾಯಿಯನ್ನು ಹಾಕಿ ಬಾಣಲೆಯನ್ನು ಮುಚ್ಚಿ ಹತ್ತು ನಿಮಿಷ ಬೇಯಿಸಿ. ಚೆನ್ನಾಗಿ ಬೆಂದ ಹಾಗಲಕಾಯಿ ಮಸಾಲವನ್ನು ಉರಿಯಿಂದ ಇಳಿಸಿ. ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿ ಮೇಲೆ ಉದುರಿಸಿದರೆ ಹಾಗಲಕಾಯಿ ಮಸಾಲ ಸವಿಯಲು ಸಿದ್ಧ.
ಹಾಗಲಕಾಯಿಯಿಂದ ಆಗುವ ಉಪಯೋಗಗಳು :

1. ಜೀರ್ಣಕ್ರಿಯೆಗೆ ಒಳ್ಳೆಯದು :
ಹಾಗಲಕಾಯಿ ನಿಮ್ಮ ಆಹಾರದಲ್ಲಿ ನಾರಿನ ಅಂಶವನ್ನು ನೀಡುತ್ತದೆ. ಪಚನ ಕ್ರಿಯೆಯನ್ನು ಉತ್ತಮಪಡಿಸುತ್ತದೆ ಮತ್ತು ಮಲಬದ್ಧತೆ ಸಮಸ್ಯೆ ಪರಿಹಾರಕ್ಕೆ ನೆರವಾಗುತ್ತದೆ. ಅಲ್ಲದೆ ಹೊಟ್ಟೆಯಲ್ಲಿರುವ ಸೋಂಕು ಹುಳುಗಳನ್ನು ನಾಶ ಪಡಿಸುವ ಮಿಶ್ರಣವೂ ಇದರಲ್ಲಿ ಇದೆ.
2. ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ:
ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ವಿಟಮಿನ್ `ಸಿ’ ಗೆ ಹಾಗಲಕಾಯಿಯು ಅತ್ಯುತ್ತಮ ಮೂಲವಾಗಿದೆ. ರೋಗ ನಿರೋಧಕ ವ್ಯವಸ್ಥೆಯನ್ನು ಉತ್ತೇಜಿಸುವ ಸಾಮರ್ಥ್ಯವುಳ್ಳ ವೈರಲ್ ಪ್ರತಿರೋಧ ಗುಣವನ್ನು ತೋರುತ್ತದೆ ಮತ್ತು ಕರುಳಿನ ಉರಿಯೂತದ ಪ್ರತಿರೋಧ ಪ್ರತಿಕ್ರಿಯೆಯ ಉತ್ತೇಜನಕ್ಕೆ ಇದು ನೆರವಾಗುತ್ತದೆ.
3. ಮಧುಮೇಹಿಗಳಿಗೆ ವರದಾನ :
ಮಧುಮೇಹಿಗಳಲ್ಲಿ ಇನ್ಸುಲಿನ್ ಕ್ರಿಯೆಯನ್ನು ಅನುಕರಿಸುವ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಮೆ ಮಾಡುವ ಕೆಲವು ಪೌಷ್ಟಿಕಾಂಶಗಳು ಹಾಗಲಕಾಯಿಯಲ್ಲಿದೆ.
4. ತೂಕ ಕಡಮೆಗೆ ಸಿದ್ಧೌಷಧ :
ನೂರು ಗ್ರಾಂ ಹಾಗಲಕಾಯಿಯನ್ನು ಸೇವಿಸಿದರೆ ಅದರಲ್ಲಿ ಇರುವುದು ಕೇವಲ 17 ಕ್ಯಾಲೊರಿಗಳು! ಅಂದರೆ ತೂಕ ಇಳಿಸಿಕೊಳ್ಳಬಯಸುವವರಿಗೆ ಇದು ತುಂಬ ಉಪಯೋಗ. ದೇಹದಲ್ಲಿ ಕೊಬ್ಬಿನ ಅಂಶವು ಕರಗಲು ಮುಖ್ಯವಾದ ಪಿತ್ತ ರಸ ಉತ್ಪಾದನೆಗೆ ಇದು ಯಕೃತ್ತನ್ನು ಉತ್ತೇಜಿಸುತ್ತದೆ.
5. ನಂಜನ್ನು ತೆಗೆಯಲು :
ಹಾಗಲಕಾಯಿಯಲ್ಲಿ ನಾರು, ವಿಟಮಿನ್ ಮತ್ತು ಖನಿಜಗಳು ಸಮೃದ್ಧವಾಗಿವೆ. ಇದು ದೇಹದ ವಿಷ ಅಥವಾ ನಂಜಿನ ಅಂಶವನ್ನು ಹೊರಹಾಕಲು ನೆರವಾಗುತ್ತದೆ.






Leave a Reply