ಶ್ರೀ ಲೋಕನಾಥ ಗೋಸ್ವಾಮಿಗಳು ಶ್ರೀ ಚೈತನ್ಯ ಮಹಾಪ್ರಭುಗಳ ಆಪ್ತ ಸಹಚರರಾಗಿದ್ದರು. ಅವರು ವಾಸವಿದ್ದುದು ಬಂಗಾಳದ “ತಾಲಖಡಿ” ಎನ್ನುವ ಗ್ರಾಮದಲ್ಲಿ. ಆದರೆ, ಮಹಾಪ್ರಭುಗಳ ಆದೇಶದ ಮೇರೆಗೆ ಅವರು ವೃಂದಾವನಕ್ಕೆ ತೆರಳಿ, ಅಲ್ಲಿಯೇ ನೆಲೆ ನಿಂತರು. ವೃಂದಾವನದಲ್ಲಿ ಶ್ರೀ ಗೋಕುಲನಂದ ದೇವಾಲಯವನ್ನೂ ಪ್ರತಿಷ್ಠಾಪಿಸಿದರು.

ಶ್ರೀ ಲೋಕನಾಥ ಗೋಸ್ವಾಮಿಗಳು ಶ್ರೀಲ ನರೋತ್ತಮ ದಾಸ ಠಾಕುರರ ಆಧ್ಯಾತ್ಮಿಕ ಗುರುಗಳಾಗಿದ್ದರು ಮತ್ತು ನರೋತ್ತಮ ದಾಸ ಠಾಕುರರು ಅವರ ಏಕಮಾತ್ರ ಶಿಷ್ಯರು. ಶ್ರೀ ಲೋಕನಾಥರು ಚೈತನ್ಯ ಚರಿತಾಮೃತದಲ್ಲಿ ತಮ್ಮ ಹೆಸರನ್ನು ಉಲ್ಲೇಖಿಸಬಾರದೆಂದು ನಿರ್ದೇಶಿಸಿದ್ದರು.
ಆದ್ದರಿಂದ ಈ ಮಹತ್ಕೃತಿಯಲ್ಲಿ ಅವರ ಬಗ್ಗೆ ವಿವರಗಳು ದೊರೆಯದು. ಆದರೆ ಶ್ರೀ ನರೋತ್ತಮ ದಾಸರು ತಮ್ಮ ಆಧ್ಯಾತ್ಮಿಕ ಗುರುಗಳನ್ನು ಕುರಿತು “ಪ್ರಣಾಮ ಮಂತ್ರ” ರಚಿಸಿರುವರು.
ಶ್ರೀ ಅದ್ವೈತಾಚಾರ್ಯರ ಅನುಯಾಯಿಗಳಾಗಿದ್ದ ಶ್ರೀ ಪದ್ಮನಾಭ ಭಟ್ಟಾಚಾರ್ಯ, ಶ್ರೀಮತಿ ಸೀತಾದೇವಿಯರ ಪುತ್ರ ಶ್ರೀ ಲೋಕನಾಥರು ಬಾಲ್ಯದಿಂದಲೂ ಭಕ್ತಿಭಾವವನ್ನು ಪ್ರಕಟಿಸುತ್ತಿದ್ದರು.
ತಾರುಣ್ಯಕ್ಕೆ ಕಾಲಿಟ್ಟ ಮೇಲೆ ಒಂದು ದಿನ ಅವರು ತಮ್ಮ ಮನೆ, ತಂದೆ-ತಾಯಿಗಳೆಲ್ಲರನ್ನು ಬಿಟ್ಟು ಮಹಾಪ್ರಭುಗಳ ದರ್ಶನಕ್ಕೆಂದು ನವದ್ವೀಪಕ್ಕೆ ಹೊರಟುಬಿಟ್ಟರು. ಅಲ್ಲಿಂದ, ಅವರ ಆದೇಶದ ಮೇರೆಗೆ ವೃಂದಾವನಕ್ಕೆ ತೆರಳಿದರು. ಮತ್ತೆಂದೂ ಅವರು ತಮ್ಮ ಮನೆಗೆ ಮರಳಲಿಲ್ಲ.

ಮುಂದಿನ ದಿನಗಳಲ್ಲಿ ಸಂನ್ಯಾಸಾನಂತರ ಶ್ರೀ ಚೈತನ್ಯ ಮಹಾಪ್ರಭುಗಳು ದಕ್ಷಿಣ ಭಾರತ ಯಾತ್ರೆ ಕೈಗೊಂಡಾಗ ಶ್ರೀ ಲೋಕನಾಥರು ಅವರನ್ನು ಹುಡುಕುತ್ತ ದಕ್ಷಿಣಕ್ಕೆ ಹೊರಟರು. ಆದರೆ ಅವರಿಂದ ಮಹಾಪ್ರಭುಗಳ ಭೇಟಿ ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಅವರು ವೃಂದಾವನಕ್ಕೆ ತೆರಳಿದ್ದರು.
ಹೀಗೆ ಲೋಕನಾಥರಿಗೆ ಮಹಾಪ್ರಭುಗಳನ್ನು ಕಾಣುವುದು ಸಾಧ್ಯವೇ ಆಗಲಿಲ್ಲ. ಅವರ ದೈನ್ಯವನ್ನು ಮನಗಂಡ ಮಹಾಪ್ರಭುಗಳು ಕನಸಿನಲ್ಲಿ ದರ್ಶನವಿತ್ತು ಲೋಕನಾಥರಿಗೆ ಸಾಂತ್ವನ ನೀಡಿ ಹರಸಿದರು.
ಮಹಾಪ್ರಭುಗಳ ಭಕ್ತರೆಲ್ಲ ಶ್ರೀ ಚೈತನ್ಯ ಲೀಲೆಯಲ್ಲಿನ ತಮ್ಮ ಪಾತ್ರ ಮುಗಿಸಿ ಭಗವದ್ಧಾಮಕ್ಕೆ ಮರಳಿದ ಅನಂತರವೂ ಲೋಕನಾಥರು ಬಹಳ ಕಾಲ ಭಕ್ತಿಸೇವೆಯಲ್ಲಿ ನಿರತರಾಗಿದ್ದು, ಕೃಷ್ಣಾಷ್ಟಮಿಯ ದಿನ ತಾವೂ ಅವರನ್ನು ಕೂಡಿಕೊಂಡರು.






Leave a Reply