ಬೀಟ್‌ರೂಟ್‌ನ ಅಚ್ಚರಿಯ ಆರೋಗ್ಯ ಲಾಭ

ಬೀಟ್‌ ರೂಟ್‌ ಸ್ವಾದಿಷ್ಟವಷ್ಟೇ ಅಲ್ಲ, ಅದರಲ್ಲಿ ವಿಟಮಿನ್‌ ಮತ್ತು ಪೌಷ್ಟಿಕಾಂಶಗಳ ಕಣಜವೇ ಅಡಗಿದೆ. ಬೀಟ್‌ರೂಟ್‌ನಲ್ಲಿರುವ ಸಮೃದ್ಧ ಪೋಷಕಾಂಶವೇ ಅದನ್ನು ಅನೇಕ ಲಾಭದಾಯಕ ಗುಣಗಳ, ಶಕ್ತಿಶಾಲಿಯಾದ ಆರೋಗ್ಯಕರ ಆಹಾರವಾಗಿ ಮಾಡಿದೆ. ದೇಹದ ಪ್ರತಿಯೊಂದು ಅಂಗಕ್ಕೂ ವಿಸ್ಮಯಕಾರಿಯಾದ ಆರೋಗ್ಯ ಲಾಭವನ್ನು ನೀಡುವುದಕ್ಕೆ ಬೀಟ್‌ರೂಟ್‌ ದೀರ್ಘ ಕಾಲದಿಂದಲೂ ಹೆಸರುವಾಸಿಯಾಗಿದೆ. ಬೀಟ್‌ರೂಟ್‌ನ ತಿನಿಸುಗಳನ್ನು ತಯಾರಿಸಿ ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.

ಬೀಟ್‌ ಪಡ್ಡು

ಬೇಕಾಗುವ ಪದಾರ್ಥಗಳು

ಬೇಯಿಸಿ ಸಿಪ್ಪೆ ತೆಗೆದು ತುರಿದ ಬೀಟ್‌ರೂಟ್‌ – 2 ಕಪ್‌

ಅಕ್ಕಿ ಹಿಟ್ಟು – 2 ಕಪ್‌

ಸೋಯ ಹಿಟ್ಟು – 1 ಚಮಚ

ಎಳ್ಳು – 2 ಚಮಚ

ಎಣ್ಣೆ – ಅಗತ್ಯವಿದ್ದಷ್ಟು

ಉಪ್ಪು – ರುಚಿಗೆ

ಮಾಡುವ ವಿಧಾನ : ಎಲ್ಲ ಪದಾರ್ಥಗಳನ್ನು ಒಂದು ಬಟ್ಟಲಿನಲ್ಲಿ ಹಾಕಿಕೊಂಡು ನೀರಿನೊಂದಿಗೆ ಚೆನ್ನಾಗಿ ಕಲೆಸಿ. ಇಡ್ಲಿ ಹಿಟ್ಟು ಹಾಕುವ ರೀತಿಯಲ್ಲಿ ಈ ಹಿಟ್ಟು ಇರಲಿ. ಅರ್ಧ ಟೇಬಲ್‌ ಸ್ಪೂನ್‌ ಎಣ್ಣೆಯನ್ನು ಫಡ್ಡು ಪ್ಯಾನ್‌ನಲ್ಲಿ ಸವರಿ. ಪ್ಯಾನ್‌ನ ಪ್ರತಿಯೊಂದು ಅಚ್ಚಿನಲ್ಲಿ ಹಿಟ್ಟು ಹಾಕಿ ಮೇಲೆ ಸ್ವಲ್ಪ ಎಣ್ಣೆ ಹಾಕಿ ಬೇಯಿಸಿ. ಎರಡು ಬದಿಯು ಕಂದು ಬಣ್ಣ ಬರುವಂತೆ ಬೇಯಿಸಿ. ಇದನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಿರಿ.

ಬೀಟ್‌ರೂಟ್‌  ಜ್ಯೂಸ್‌

ಬೇಕಾಗುವ ಪದಾರ್ಥಗಳು

ಕ್ಯಾರೆಟ್‌ – 2

ಬೀಟ್‌ರೂಟ್‌ – 2

ಆ್ಯಪಲ್‌ – 1

ಐಸ್‌ – 3

ಉಪ್ಪು – 1 ಚಿಟಿಕೆ

ಕಾಳು ಮೆಣಸಿನ ಪುಡಿ – 1/4 ಚಮಚ

ಮಾಡುವ ವಿಧಾನ: ಕ್ಯಾರೆಟ್‌, ಬೀಟ್‌ ರೂಟ್‌, ಆ್ಯಪಲ್‌  ಇವುಗಳನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಕತ್ತರಿಸಿ ಮಿಕ್ಸಿ ಜಾರಿನಲ್ಲಿ ನೀರನ್ನು ಹಾಕಿ ಜ್ಯೂಸ್‌ ಅನ್ನು ತಯಾರಿಸಿಕೊಳ್ಳಿ. ಅನಂತರ ಇದನ್ನು ಶೋಧಿಸಿಕೊಂಡು ಲೋಟಗಳಲ್ಲಿ ಪುಡಿ ಮಾಡಿದ ಐಸ್‌, ಉಪ್ಪು, ಮೆಣಸಿನ ಪುಡಿ ಜ್ಯೂಸ್‌ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ ಸೇವಿಸಿ.

ಬೀಟ್‌ರೂಟ್‌ ಟಿಕ್ಕೀ

ಬೇಕಾಗುವ ಪದಾರ್ಥಗಳು :

ಬೇಯಿಸಿ ಸಿಪ್ಪೆ ತೆಗೆದು ತುರಿದ ಬೀಟ್‌ರೂಟ್‌ – 1 ಕಪ್‌

ಕ್ಯಾರೆಟ್‌ ತುರಿ – 1/2  ಕಪ್‌

ಓಟ್ಸ್‌ – 3 ಚಮಚ

ಹೆಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ

ಚಾಟ್‌ ಮಸಾಲ – 1/2  ಚಮಚ

ಗರಂ ಮಸಾಲ – 1/2  ಚಮಚ

ಒಣಮೆಣಸಿನಕಾಯಿ ಪುಡಿ – 1 ಚಮಚ

ನಿಂಬೆ ರಸ – 1 ಚಮಚ

ಉಪ್ಪು – ರುಚಿಗೆ

ಎಣ್ಣೆ – ಅಗತ್ಯವಿದ್ದಷ್ಟು

ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಎಲ್ಲ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತೆಗೆದುಕೊಂಡು ಚಿಕ್ಕದಾಗಿ ಗುಂಡಾಗಿ ಟಿಕ್ಕಿ ಮಾಡಿ. ನಾನ್‌ ಸ್ಟಿಕ್‌ ತವಾವನ್ನು ಬಿಸಿ ಮಾಡಿ ಇದಕ್ಕೆ ಸ್ವಲ್ಪ ಎಣ್ಣೆಯನ್ನು ಸವರಿ ಟಿಕ್ಕಿಗಳನ್ನು ತವಾ ಮೇಲೆ ಹಾಕಿ ಮೇಲೆ ಎಣ್ಣೆಯನ್ನು ಹಾಕಿ ಬೇಯಿಸಿ. ಎರಡು ಕಡೆ ಚೆನ್ನಾಗಿ ಬೆಂದ ಮೇಲೆ ಕೆಳಗಿಳಿಸಿ. ಇದು ಟೊಮೊಟೊ ಸಾಸ್‌ ಜೊತೆ ಸವಿಯಲು ರುಚಿಯಾಗಿರುತ್ತದೆ.

ಕಿವಿ ಮಾತು

*   ಗುಂಡಗಿನ ತಳ ಇರುವ ಬೀಟ್‌ರೂಟ್‌ ತುಂಬ ಸಿಹಿಯಾಗಿರುತ್ತದೆ.

*   ಬೀಟ್‌ರೂಟ್‌ ಅನ್ನು ಹೆಚ್ಚು ಬೇಯಿಸಬೇಡಿ. ಏಕೆಂದರೆ ಅಧಿಕ ಬಿಸಿಯು  ಪೌಷ್ಟಿಕಾಂಶಗಳನ್ನು ನಾಶಪಡಿಸುತ್ತದೆ.

*   ಬೇಯಿಸುವ ಮುನ್ನ ಸಿಪ್ಪೆ ತೆಗೆಯಿರಿ.

*   ಗಟ್ಟಿಯಾದ ಬೀಟ್‌ರೂಟ್‌ ಅನ್ನೇ ಆರಿಸಿ.

*   ಜ್ಯೂಸ್‌ ಮಾಡುತ್ತಿದ್ದರೆ ಬೀಟ್‌ರೂಟ್‌ ರಸಕ್ಕೆ ಅರ್ಧ ಚಮಚ ನಿಂಬೆರಸ ಹಾಕಿದರೆ ರುಚಿ ಹೆಚ್ಚುತ್ತದೆ.


ಬೀಟ್‌ರೂಟ್‌ನಿಂದ ಆಗುವ ಉಪಯೋಗಗಳು:

1.  ರಕ್ತದ ಒತ್ತಡ ಮಟ್ಟವನ್ನು ಕಡಮೆ ಮಾಡುತ್ತದೆ :  ಬೀಟ್‌ರೂಟ್‌ ನೈಟ್ರೈಟ್‌ಗಳಿಗೆ ಬಹು ದೊಡ್ಡ ಮೂಲವಾಗಿದೆ. ಇದನ್ನು ಸೇವಿಸಿದಾಗ, ಅದು ನೈಟ್ರೈಟ್‌ ಮತ್ತು ನೈಟ್ರಿಕ್‌ ಆಕ್ಸೈಡ್‌ ಎಂಬ ಅನಿಲವಾಗಿ ಪರಿವರ್ತನೆಗೊಳ್ಳುತ್ತದೆ. ಈ ಎರಡೂ ಮಿಶ್ರಣಗಳು ರಕ್ತನಾಳಗಳನ್ನು ಅಗಲಗೊಳಿಸುತ್ತವೆ  ಮತ್ತು ರಕ್ತದ ಒತ್ತಡವನ್ನು ಕಡಮೆ ಮಾಡುತ್ತದೆ.

2. `ಕೆಟ್ಟ’ ಕೊಲೆಸ್ಟೆರಾಲ್‌ ಅನ್ನು ಕಡಮೆ ಮಾಡುತ್ತದೆ :  ಬೀಟ್‌ರೂಟ್‌ನಲ್ಲಿ ಅಪಾರ ಪ್ರಮಾಣದಲ್ಲಿ ಕರಗುವ ನಾರಿನಂಶ, ಫ್ಲವನಾಯ್ಟ್‌ ಮತ್ತು ಬೀಟಸಿಯಾನಿನ್‌ ಇದೆ. ಇದು ಸಂಭವನೀಯ ಹೃದಯಾಘಾತವನ್ನು ತಡೆಯುತ್ತದೆ. ಇದರಿಂದ ವೈದ್ಯರ ನೆರವಿನ ಅಗತ್ಯ ಕಡಮೆಯಾಗುತ್ತದೆ.

3. ಮೂಳೆಗಳ ಗಟ್ಟಿಗಾಗಿ : ಕ್ಯಾಲ್ಸಿಯಂ ಅನ್ನು ಸಮರ್ಥವಾಗಿ ಬಳಸಿಕೊಳ್ಳಲು ದೇಹಕ್ಕೆ ಅಗತ್ಯವಾದ ಪ್ರಮುಖ ಆಂಶವು ಬೀಟ್‌ರೂಟ್‌ನಲ್ಲಿ ಸಮೃದ್ಧವಾಗಿದೆ. ನಮ್ಮ ಮೂಳೆ ಮತ್ತು ಹಲ್ಲುಗಳ ಗಟ್ಟಿಗೆ ಕ್ಯಾಲ್ಸಿಯಂ ಅಗತ್ಯವಾಗಿದ್ದು, ಪ್ರತಿ ದಿನ ಒಂದು ಲೋಟ ಜ್ಯೂಸ್‌ ಕುಡಿದರೆ ಮೂಳೆ ಸವೆತ ಮತ್ತು ಮೂಳೆ ಮುರಿಯುವ ರೋಗಗಳಿಂದ ದೂರ ಇರಬಹುದು.

4. ಮಧುಮೇಹಕ್ಕೆ ತಡೆ : ಮಧುಮೇಹದಿಂದ ಬಳಲುತ್ತಿರುವವರು ಸಿಹಿ ಸೇವಿಸಲಾಗದೆ ಸಂಕಟಪಡುತ್ತಿದ್ದರೆ ಬೀಟ್‌ರೂಟ್‌ ಅವರಿಗೆ ಪರಮಾನ್ನ. ಅವರು ತಮ್ಮ ಆಹಾರದಲ್ಲಿ ಒಂದಷ್ಟು ಬೀಟ್‌ರೂಟ್‌ ಸೇರಿಸಿದರೆ ಈ ಸಿಹಿ ಅವರಿಗೆ ಲಭ್ಯ. ರಕ್ತಕ್ಕೆ ನಿಧಾನವಾಗಿ ಸಕ್ಕರೆಯನ್ನು ಬಿಡುಗಡೆ ಮಾಡುವ ತರಕಾರಿಯಾದ ಕಾರಣ ಇದು ನಿಮ್ಮ ಸಕ್ಕರೆ ಬಯಕೆಯನ್ನು ಕಡಮೆ ಮಾಡುವುದರೊಂದಿಗೆ ರಕ್ತದಲ್ಲಿನ ಸಕ್ಕರೆಯ ಕೆಳಮಟ್ಟವನ್ನು ಕಾಪಾಡುತ್ತದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi