ವಿಭಿನ್ನ ಸಂಸ್ಕೃತಿಗಳಲ್ಲಿ ವೈದಿಕ ನಾಗರಿಕತೆಯ ಕುರುಹುಗಳು…

ಕನ್ಯಾ ರಾಶಿಯನ್ನು ಕುರಿತು ಪ್ರಾಚೀನ ಗ್ರೀಕ್ ಲೇಖಕ ಅರಟೋಸ್ ಕೆಳಕಂಡ ಕಥೆಯನ್ನು ಹೇಳಿದ್ದಾನೆ. ಪುರಾತನ ನಕ್ಷತ್ರಗಳ ಪೂರ್ವಜರಾಗಿದ್ದ ನಕ್ಷತ್ರ ಜನಾಂಗಕ್ಕೆ ಕನ್ಯೆ ಸೇರಿದ್ದಿರಬಹುದು ಎಂದು ಅವನು ಹೇಳುತ್ತಾನೆ. ಸೃಷ್ಟ್ಯಾದಿಯ ಕಾಲದಲ್ಲಿ, ಸುವರ್ಣಯುಗದಲ್ಲಿ, ಅವಳು ಸಾಕಾರಗೊಂಡ ನ್ಯಾಯದೇವತೆಯಾಗಿ ಮನುಕುಲದಲ್ಲಿ ವಾಸಿಸುತ್ತಿದ್ದಳು.

ಜನರು ಸತ್ಯನಿಷ್ಠರಾಗಿರುವಂತೆ ಪ್ರೇರೇಪಿಸುತ್ತಿದ್ದಳು. ಈ ಕಾಲದಲ್ಲಿ ಜನರು ಆಷಾಢಭೂತಿತನ ಅಥವಾ ಜಗಳವಿಲ್ಲದೆ ಶಾಂತಿಯಿಂದ ಜೀವನ ಮಾಡುತ್ತಿದ್ದರು. ಅನಂತರ ರಜತಯುಗದಲ್ಲಿ ಅವಳು ಪರ್ವತಗಳಲ್ಲಿ ಅವಿತಿಟ್ಟು ಕೊಂಡಳು. ಆದರೆ ಜನರ ದುಷ್ಟಮಾರ್ಗಗಳಿಗೆ ಛೀಮಾರಿ ಹಾಕಲು ಅವಳು ಆಗಾಗ ಕೆಳಗಿಳಿದು ಬರುತ್ತಿದ್ದಳು.

ಕೊನೆಗೆ ಕಂಚಿನ ಯುಗ ಬಂತು. ಜನರು ಕತ್ತಿಯನ್ನು ಆವಿಷ್ಕರಿಸಿದರು. “ಅವರು ಗೋಮಾಂಸದ ರುಚಿ ನೋಡಿದರು. ಹಾಗೆ ಮಾಡಿದವರಲ್ಲಿ ಅವರೇ ಪ್ರಥಮ.” ಆ ಕ್ಷಣದಲ್ಲಿ ಕನ್ಯೆ “ನಭೋಮಂಡಲಕ್ಕೆ ಹಾರಿಹೋದಳು.” ಅಂದರೆ ಆವಳು ಸ್ವರ್ಗಕ್ಕೆ ತೆರಳಿದಳು.

ಭಾರತದ ವೈದಿಕ ಸಾಹಿತ್ಯವು ವಿಶ್ವವನ್ನು ಕುರಿತು ಒಂದು ವಿಸ್ತಾರವಾದ ವರ್ಣನೆಯನ್ನು ನೀಡುತ್ತದೆ. ಅದೊಂದು ಸುಸಂಗತವಾದ, ಸುವ್ಯವಸ್ಥಿತವಾದ ಬ್ರಹ್ಮಾಂಡ. ಜೀವಿಗಳ ವಾಸಸ್ಥಾನವಾಗಿ ಅದನ್ನು ಒಂದು ಚತುರ ಯೋಜನೆಗೆ ಅನುಸಾರವಾಗಿ ಸೃಷ್ಟಿಸಲಾಗಿದೆ. ವಿಶ್ವವನ್ನು ಕುರಿತ ಆಧುನಿಕ ದೃಷ್ಟಿಕೋನವು ವೈದಿಕ ದೃಷ್ಟಿಕೋನಕ್ಕಿಂತ ತೀರ ವಿಭಿನ್ನವಾಗಿದೆ.

ವೈದಿಕ ದೃಷ್ಟಿಕೋನವನ್ನು ಪ್ರಸ್ತುತ ಗ್ರಹಿಸುವುದು ಕಷ್ಟ. ಆದರೆ ಪ್ರಾಚೀನ ಕಾಲದಲ್ಲಿ ವೈದಿಕ ಪದ್ಧತಿಗೆ ಅನುರೂಪವಾದ ವಿಶ್ವ ವಿಜ್ಞಾನಗಳು ಜಗತ್ತಿನಾದ್ಯಂತ ವಿವಿಧ ಜನಾಂಗಗಳಲ್ಲಿ ವ್ಯಾಪಕವಾಗಿ ಹಬ್ಬಿದ್ದವು. ಇಂದಿನ ಸುಶಿಕ್ಷಿತ ಜನರು ಈ ಚಿಂತನ ಪದ್ಧತಿಗಳನ್ನು ಪುರಾಣಕಥೆಗಳೆಂದು ಥಟ್ಟನೆ ನಿರಾಕರಿಸುವ ಪ್ರವೃತ್ತಿಯವರಾಗಿದ್ದಾರೆ. ಅವೆಲ್ಲ ಕೇವಲ ಕಲ್ಪನಾವಿಲಾಸದ ಫಲಗಳೆನ್ನುವುದಕ್ಕೆ ಈ ಚಿಂತನೆಗಳಲ್ಲಿರುವ ಅಸಾದೃಶ್ಯ ಮತ್ತು ಅವುಗಳ ವಿಚಿತ್ರ ಕಲ್ಪನೆಗಳನ್ನು ಪುರಾವೆ ಮಾಡಿ ಬೆರಳು ತೋರುತ್ತಾರೆ.

ಆದರೆ ನಾವೂ ಹೀಗೆ ಮಾಡಿದರೆ, ಲಿಖಿತ ಮಾನವ ಇತಿಹಾಸದ ಸಂಕ್ಷಿಪ್ತ ಅವಧಿಗಿಂತ ಹಿಂದೆ ಇದ್ದ ಸುದೀರ್ಘವಾದ ವಿಸ್ಮೃತ ಅವಧಿಯ ಮೇಲೆ ಬೆಳಕು ಚೆಲ್ಲುವಂತಹ ಪ್ರಮುಖ ಮಾಹಿತಿಯನ್ನು ಉಪೇಕ್ಷಿಸಿದಂತಾಗುತ್ತದೆ. ವಿವಿಧ ಸಂಸ್ಕೃತಿಗಳ ಸಂಪ್ರದಾಯಗಳಲ್ಲಿ ಸ್ವತಂತ್ರವಾಗಿ ಕಥೆ ಹೇಳುವುದನ್ನು ಗಮನಿಸಿದರೆ ಖಂಡಿತವಾಗಿಯೂ ಸಾಕಷ್ಟು ಸಾಕ್ಷ್ಯಾಧಾರಗಳಿರುವುದು ಕಂಡುಬರುತ್ತದೆ.

ಆದರೆ ಅನೇಕ ಸಾಮಾನ್ಯ ಕಥಾವಸ್ತುಗಳಿರುವುದನ್ನೂ ಕಾಣಬಹುದು. ಈ ವಸ್ತುಗಳಲ್ಲಿ ಕೆಲವು, ವೈದಿಕ ಸಾಹಿತ್ಯದಲ್ಲಿ ಅತ್ಯುನ್ನತವಾಗಿ ವಿಕಾಸಹೊಂದಿದ ಸ್ಥಿತಿಯಲ್ಲಿ ಕಂಡುಬರುತ್ತವೆ. ಪ್ರಪಂಚದಾದ್ಯಂತ ಸಂಸ್ಕೃತಿಗಳಲ್ಲಿನ ಅವುಗಳ ಉಪಸ್ಥಿತಿಯು ಏಕರೂಪವಾಗಿದೆ. ಇದರಿಂದ ಪ್ರಾಚೀನ ಕಾಲದಲ್ಲಿ ವೈದಿಕ ಸಂಸ್ಕೃತಿಯು ಪ್ರಪಂಚದಾದ್ಯಂತ ತನ್ನ ಪ್ರಭಾವವನ್ನು ಬೀರಿತ್ತು ಎನ್ನುವುದು ವಿದಿತವಾಗುತ್ತದೆ.

ವಿವಿಧ ಸಂಪ್ರದಾಯಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುವ ಕಾಲ ಮತ್ತು ಮಾನವನ ದೀರ್ಘಾಯುಷ್ಯಕ್ಕೆ ಸಂಬಂಧಿಸಿದಂತೆ ವೈದಿಕ ಕಲ್ಪನೆಗಳ ಕೆಲವು ನಿದರ್ಶನಗಳನ್ನು ಈ ಲೇಖನದಲ್ಲಿ ಕೊಡುತ್ತೇವೆ. ಮೊದಲು ನಾವು ಈ ಕಲ್ಪನೆಗಳಲ್ಲಿ ಕೆಲವನ್ನು ಪರೀಕ್ಷಿಸೋಣ, ಅನಂತರ ಅವುಗಳ ಅಂತರಾರ್ಥವೇನು, ಅವುಗಳನ್ನು ಹೇಗೆ ಅರ್ಥೈಸಬೇಕು ಎನ್ನುವುದಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕುರಿತು ಚರ್ಚಿಸೋಣ.

ವೈದಿಕ ಸಾಹಿತ್ಯದಲ್ಲಿ ಕಾಲವನ್ನು ಪರಮಜೀವಿ ಕೃಷ್ಣನ ಒಂದು ಪ್ರಕಟರೂಪ ಎಂದು ಪರಿಗಣಿಸಲಾಗಿದೆ. ಹೀಗಿರುತ್ತ ಕಾಲವು ಒಂದು ನಿಯಂತ್ರಕ ಶಕ್ತಿಯಾಗಿದೆ. ಅದು ಬ್ರಹ್ಮಾಂಡದ ಯೋಜನೆಗೆ ಅನುಗುಣವಾಗಿ ಜೀವಿಗಳ ಜೀವಗಳನ್ನು ನಿಯಂತ್ರಿಸುತ್ತದೆ. ಈ ಯೋಜನೆಯಲ್ಲಿ ವಿವಿಧ ಅವಧಿಗಳ ಸೃಷ್ಟಿ ಮತ್ತು ಲಯದ ಪುನರಾವರ್ತಿತ ಮಂಡಲಗಳಿವೆ.

ಈ ಪುನರಾವರ್ತಿತ ಮಂಡಲಗಳಲ್ಲಿ ಅತ್ಯಂತ ಚಿಕ್ಕದೂ ಮತ್ತು ಅತ್ಯಂತ ಪ್ರಮುಖವೂ ಆದದ್ದೆಂದರೆ, ಸತ್ಯ, ತ್ರೇತಾ, ದ್ವಾಪರ ಮತ್ತು ಕಲಿಯುಗ ಎ೦ಬ ನಾಲ್ಕು ಯುಗಗಳು. ಅನುಕ್ರಮವಾದ ಈ ಯುಗಗಳಲ್ಲಿ ಮನುಕುಲವು ಒಂದು ಉನ್ನತ ಆಧ್ಯಾತ್ಮಿಕ ವೇದಿಕೆಯಿಂದ ಹೀನ ಸ್ಥಿತಿಗೆ ಕ್ರಮೇಣ ಕುಸಿಯುತ್ತಿದೆ. ಅನಂತರ, ಹೊಸದಾದ ಸತ್ಯಯುಗದ ಪ್ರಾರಂಭದೊಡನೆ ಮೂಲದ ಪರಿಶುದ್ಧ ಸ್ಥಿತಿಯು ಪುನಃ ಸ್ಥಾಪಿತವಾಗುತ್ತದೆ. ಮಂಡಲವು ಮತ್ತೆ ಪ್ರಾರಂಭವಾಗುತ್ತದೆ.

ಕನ್ಯೆಯ ಕಥೆಯು ನಿದರ್ಶಿಸುವುದೇನೆಂದರೆ ಪ್ರಾಚೀನ ಮೆಡಿಟರೇನಿಯನ್ ಜಗತ್ತಿನಲ್ಲಿ ಇದೇ ರೀತಿಯ ನಾಲ್ಕು ಯುಗಗಳ ಅನುಕ್ರಮವನ್ನು ಕುರಿತಂತೆ ನಂಬಿಕೆಯು ವ್ಯಾಪಕವಾಗಿತ್ತು. ಅವನ್ನು ಸುವರ್ಣ, ರಜತ, ಕಂಚು ಮತ್ತು ಕಬ್ಬಿಣದ ಯುಗಗಳೆಂದು ಕರೆಯಲಾಗುತ್ತಿತ್ತು. ಈ ಪದ್ಧತಿಯಲ್ಲಿ ಮಾನವ ಕುಲ ಕೂಡ ಮೊದಲನೆಯ ಯುಗದಲ್ಲಿ ಅತ್ಯಂತ ಮುಂದುವರಿದ ಪ್ರಜ್ಞೆಯಲ್ಲಿ ಪ್ರಾರಂಭವಾಗಿ ಕ್ರಮೇಣ ಹೀನಸ್ಥಿತಿಗೆ ಇಳಿಯುತ್ತದೆ.

ಇಲ್ಲೂ ಕೂಡ, ಮಾನವ ಸಮಾಜದಲ್ಲಿನ ಪ್ರಗತಿಪರ ವಿಕಾಸಗಳು, ಕೇವಲ ಭೌತಿಕ ಪ್ರಕ್ರಿಯೆಯಿಂದ ಹೊರಸೂಸುವುದಿಲ್ಲ. ಬದಲಿಗೆ ಉನ್ನತ ನಿಯಂತ್ರಕ ಬುದ್ಧಿಮತ್ತೆಯ ಮೇಲ್ವಿಚಾರಣೆಗೆ ಒಳಪಡುತ್ತವೆ.

ಅರಟೋಸನ ಕಥೆಯಲ್ಲಿ, ಹಸುಗಳನ್ನು ತಿನ್ನುವ ಪಾಪಕಾರ್ಯದಿಂದ ಸ್ವರ್ಗದ ಜೀವಿಗಳೊಡನೆ ಮನುಕುಲದ ನೇರ ಸಂಪರ್ಕವು ಕಡಿದು ಹೋಯಿತು ಎನ್ನುವುದು ಗಮನಾರ್ಹ ಅಂಶವಾಗಿದೆ. ಈ ವಿವರವು ಗೋರಕ್ಷಣೆಯ ಪ್ರಾಚೀನ ಭಾರತೀಯ ಸಂಪ್ರದಾಯಕ್ಕೆ ಸೊಗಸಾಗಿ ಹೊಂದಿಕೊಳ್ಳುತ್ತದೆ. ಆದರೆ ಗ್ರೀಕ್ ಅಥವಾ ಐರೋಪ್ಯ ಸಂಸ್ಕೃತಿಯ ಸಂದರ್ಭದಲ್ಲಿ ಅದು ಅನಿರೀಕ್ಷಿತವಾಗಿ ತೋರುತ್ತದೆ.

ವಿವಿಧ ಸಂಸ್ಕೃತಿಗಳಲ್ಲಿ ಕಂಡುಬರುವ ಕಲ್ಪನೆಗಳ ಅನುರೂಪತೆಯನ್ನು ಕುರಿತಂತೆ ಒಂದು ವಿವರಣೆಯನ್ನು ಕೊಡಬಹುದೆಂದರೆ, ಎಲ್ಲೆಲ್ಲೂ ಮನುಷ್ಯರ ಮಾನಸಿಕ ವ್ಯವಸ್ಥೆಯು ಮುಖ್ಯವಾಗಿ ಒಂದೇ ರೀತಿಯಾಗಿರುತ್ತದೆ, ಆದ್ದರಿಂದ ಸ್ವತಂತ್ರವಾಗಿಯೂ ಅವರು ಅನುರೂಪವಾದ ಭಾವನೆಗಳನ್ನೇ ರೂಪಿಸಿಕೊಳ್ಳುತ್ತಾರೆ. ಆದರೆ ಗೋಹತ್ಯೆಯಂತಹ ವಿವರವು ಸೂಚಿಸುವುದೇನೆಂದರೆ ನಾವು ಸ್ವತಂತ್ರ ಆವಿಷ್ಕಾರಗಳಿಗಿಂತ ಹೆಚ್ಚಾಗಿ ಉಭಯ ಸಾಮಾನ್ಯ ಸಂಪ್ರದಾಯಗಳನ್ನು ಕುರಿತು ಇಲ್ಲಿ ವ್ಯವಹರಿಸುತ್ತಿದ್ದೇವೆ.

ಸಂಸ್ಕೃತಿಗಳ ನಡುವಣ ಅನುರೂಪತೆಗಳನ್ನು ಕುರಿತ ಇನ್ನೊಂದು ಉದಾಹರಣೆಯನ್ನು ಉತ್ತರ ಅಮೆರಿಕದ ಆದಿವಾಸಿಗಳಲ್ಲಿ ಕಾಣಬಹುದು. ಸ್ವರ್ಗದ ಸ್ತ್ರೀಯೊಬ್ಬಳು ತಮ್ಮ ಪೂರ್ವಜರನ್ನು ಭೇಟಿ ಮಾಡಿ ತಮ್ಮ ಧರ್ಮ ವ್ಯವಸ್ಥೆಯನ್ನು ನೀಡಿದಳು ಎಂದು ಸಿಯೋಕ್ಸ್‌ ಇಂಡಿಯನ್ನರು ಹೇಳುತ್ತಾರೆ.

ಅವಳು ಅವರಿಗೆ ನಾಲ್ಕು ಯುಗಗಳನ್ನು ಕುರಿತು ಹೇಳುತ್ತಾಳೆ, ಮತ್ತು ಒಂದು ಪವಿತ್ರವಾದ ಎಮ್ಮೆ ಇದ್ದು ಅದು ಪ್ರತಿಯುಗದಲ್ಲೂ ಒಂದು ಕಾಲನ್ನು ಕಳೆದುಕೊಳ್ಳುತ್ತದೆ ಎಂದು ಹೇಳುತ್ತಾಳೆ. ಪ್ರಸ್ತುತ ನಾವು ಕೊನೆಯ ಯುಗದಲ್ಲಿದ್ದೇವೆ. ಅದು ಅರ್ಧಪತನದ ಯುಗ. ಇಲ್ಲಿ ಎಮ್ಮೆಗೆ ಒಂದೇ ಕಾಲು ಇದೆ.

ಈ ಕಥೆಯು ಶ್ರೀಮದ್ ಭಾಗವತದಲ್ಲಿನ ಪರೀಕ್ಷಿತ ಮಹಾರಾಜ ಮತ್ತು ಧರ್ಮವೃಷಭನ ಮುಖಾಮುಖಿಯ ಪ್ರಸಂಗಕ್ಕೆ ಬಹಳ ಹತ್ತಿರವಾಗಿದೆ. ಅಲ್ಲಿ ಪ್ರತಿಯೊಂದು ಅನುಕ್ರಮ ಯುಗದಲ್ಲೂ ಧರ್ಮವು ಒಂದೊಂದು ಕಾಲನ್ನು ಕಳೆದುಕೊಂಡು, ಪ್ರಸ್ತುತ ಕಲಿಯುಗದಲ್ಲಿ ಒಂದು ಕಾಲಿನ ಮೇಲೆ ನಿಂತಿರುತ್ತದೆ ಎಂದು ಹೇಳಲಾಗಿದೆ.

ವೈದಿಕ ಪದ್ಧತಿಯ ಪ್ರಕಾರ ಸತ್ಯ, ತ್ರೇತಾ, ದ್ವಾಪರ ಮತ್ತು ಕಲಿಯುಗಗಳ ಅವಧಿಯು 4,32,000 ವರ್ಷಗಳ 4,3,2 ಮತ್ತು 1 ರ ಗುಣಕಗಳಲ್ಲಿ ಇರುತ್ತದೆ. ಈ ಅಗಾಧವಾದ ಕಾಲದ ಅವಧಿಯಲ್ಲಿ ಮನುಷ್ಯನ ಆಯುಷ್ಯವು ಸತ್ಯ ಯುಗದಲ್ಲಿ 1,00,000 ವರ್ಷಗಳು, ತ್ರೇತಾಯುಗದಲ್ಲಿ 10,000 ವರ್ಷಗಳು, ದ್ವಾಪರಯುಗದಲ್ಲಿ 1,000 ವರ್ಷಗಳು ಮತ್ತು ಅಂತಿಮವಾಗಿ ಕಲಿಯುಗದಲ್ಲಿ 100 ವರ್ಷಗಳು ಹೀಗೆ ಕ್ಷೀಣಿಸುತ್ತಾ ಹೋಗುತ್ತದೆ.

ಸಹಜವಾಗಿಯೇ ಈ ಕಲ್ಪನೆಯು ಭೂತಕಾಲವನ್ನು ಕುರಿತ ಆಧುನಿಕ ವಿಕಾಸವಾದಕ್ಕೆ ತೀರ ತದ್ವಿರುದ್ಧವಾಗಿದೆ. ಆದರೆ ಪ್ರಾಚೀನ ಮೆಡಿಟರೇನಿಯನ್ ಜಗತ್ತಿನಲ್ಲಿ ವ್ಯಾಪಕವಾಗಿ ನಂಬಿಕೊಂಡು ಬಂದಿರುವ ಸ೦ಗತಿಯೇನೆಂದರೆ ಮಾನವನ ಇತಿಹಾಸವು ಅತ್ಯಂತ ದೀರ್ಘಕಾಲಾವಧಿಯವರೆಗೆ ವಿಸ್ತರಿಸಿದೆ.

ಉದಾಹರಣೆಗೆ, ಪ್ರಾಚೀನ ಐತಿಹಾಸಿಕ ದಾಖಲೆಗಳ ಪ್ರಕಾರ, ಪಾರ್ಫಿರಿಯು (ಸು.ಕ್ರಿ.ಶ.300) ಹೇಳಿರುವುದು ಏನೆಂದರೆ ಪರ್ಷಿಯನ್ ಯುದ್ಧದಲ್ಲಿ ಅಲೆಕ್ಸಾಂಡರ್‌ನ ಸಂಗಾತಿಯಾಗಿದ್ದ ಕ್ಯಾಲಿಸ್ತೆನೀಸ್‌ ನನ್ನು ಬ್ಯಾಬಿಲೋನಿಯದ ಗ್ರಹಣಗಳ ದಾಖಲೆಗಳೊಡನೆ ಅರಿಸ್ಟಾಟಲ್ ಕಡೆಗೆ ಕಳುಹಿಸಲಾಯಿತು.

ಈ ದಾಖಲೆಗಳು 31,000 ವರ್ಷಗಳ ಅವಧಿಗೆ ಸಂಬಂಧಿಸಿದ್ದವು. ಇದೇ ರೀತಿಯಲ್ಲಿ ಪ್ರಾಚೀನ ಗ್ರೀಕ್ ಖಗೋಳಶಾಸ್ತ್ರಜ್ಞ ಹಿಪ್ಪ‌ರ್‌ಕಸ್‌ನ ಪ್ರಾಮಾಣ್ಯವನ್ನು ಕುರಿತಂತೆ ಇಯಾಬ್ಲಿಕಸ್ (ನಾಲ್ಕನೆಯ ಶತಮಾನ) ಹೇಳಿರುವುದೇನೆಂದರೆ ಅಸ್ಸಿರಿಯನ್ನರು 2, 70,000 ವರ್ಷಗಳ ಕಾಲ ವೀಕ್ಷಣೆಗಳನ್ನು ಮಾಡಿದ್ದು ಎಲ್ಲ ಏಳು ಗ್ರಹಗಳು ಒಂದೇ ಸ್ಥಾನಕ್ಕೆ ಬಂದ ಸಂದರ್ಭಗಳ ಪುನರಾವರ್ತನೆಯ ದಾಖಲೆಗಳನ್ನು ಇರಿಸಿದ್ದಾರೆ.

ಅಂತಿಮವಾಗಿ ಬ್ಯಾಬಿಲೋನಿಯಾದ ಇತಿಹಾಸಕಾರ ಬೆರೋಸಸ್, ಜಲಪ್ರಳಯಕ್ಕೆ ಮೊದಲು ಬ್ಯಾಬಿಲೋನಿಯದ ರಾಜರು 4,32,000 ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದಾರೆಂದು ನಿರ್ಧರಿಸಿದ್ದಾನೆ.

ಈ ಹೇಳಿಕೆಗಳು ಸತ್ಯವೆಂದು (ಅಥವಾ ಸುಳ್ಳೆಂದು) ಸೂಚಿಸಲು ನಾವು ಇಷ್ಟಪಡುವುದಿಲ್ಲ. ಇಲ್ಲಿ ಗಮನಿಸಬೇಕಾದ ಸಂಗತಿಯೇನೆಂದರೆ, ಹಳೆಯ ಮೆಡಿಟರೇನಿಯನ್ ನಾಗರಿಕತೆಯ ಜನರು, ಭೂತಕಾಲವನ್ನು ಕುರಿತು ಇಂದು ಪ್ರಧಾನವಾಗಿ ಪ್ರಚಲಿತವಾಗಿರುವುದಕ್ಕಿಂತ ತೀರ ವಿಭಿನ್ನವಾದ ದೃಷ್ಟಿಕೋನವನ್ನು ಹೊಂದಿದ್ದರು. ಮತ್ತು ಈ ದೃಷ್ಟಿಕೋನವು ವೈದಿಕ ಅನುಕ್ರಮಣಿಕೆಗೆ ವಿಶಾಲಾರ್ಥದಲ್ಲಿ ಸಂವಾದಿಯಾಗಿದೆ.

ಮಾನವನ ಇತಿಹಾಸಕ್ಕೆ ಅತ್ಯಂತ ಕಡಿಮೆ ಅವಧಿಯನ್ನು ಪ್ರತಿಪಾದಿಸಿರುವುದಕ್ಕೆ ಬೈಬಲ್ ಪ್ರಸಿದ್ಧವಾಗಿದ್ದರೂ, ಒಂದು ಕಾಲದಲ್ಲಿ ಮನುಷ್ಯರು ಸುಮಾರು 1,000 ವರ್ಷ ಬದುಕಿರುತ್ತಿದ್ದರು ಎಂದು ಸೂಚಿಸುವ ಮಾಹಿತಿ ಅದರಲ್ಲಿದೆ ಎನ್ನುವುದನ್ನು ಗಮನಿಸುವುದು ಆಸಕ್ತಿಪೂರ್ಣವಾಗಿದೆ. ಹಳೆಯ ಒಡಂಬಡಿಕೆಯಲ್ಲಿ ಬೈಬಲ್ಲಿನ ಜಲಪ್ರಳಯಕ್ಕೆ ಮೊದಲು ಜೀವಿಸಿದ್ದ ಜನರಿಗೆ ಕೆಳಕಂಡಂತೆ ಆಯುಷ್ಯವನ್ನು ಪಟ್ಟಿಮಾಡಲಾಗಿದೆ :

ಆಡಂ,930; ಸೇಟ್‌,912; ಇನೋಸ್‌ 905; ಕೆನನ್‌, 910; ಮಹಲೀಲ್‌,895; ಜರೇಡ್‌, 962; ಇನೋಕ್, 365; ಮೆಟುಸೆಲಾ, 969, ಲಮೇಕ್, 777; ಮತ್ತು ನೋವಾ, 950. (ಸಶರೀರಿಯಾಗಿ ಸ್ವರ್ಗಕ್ಕೆ ಹೋದನೆಂದು ಹೇಳಲಾಗುವ) ಇನೋಕ್‌ನನ್ನು ಹೊರತುಪಡಿಸಿದರೆ ಉಳಿದವರ ಸರಾಸರಿ ಆಯುಷ್ಯ 912 ವರ್ಷಗಳಾಗುತ್ತದೆ.

ಜಲಪ್ರಳಯದ ಅನಂತರ ಕೆಳಕಂಡ ಆಯುಷ್ಯಗಳನ್ನು ದಾಖಲೆ ಮಾಡಲಾಗಿದೆ: ಷೆಮ್‌,600; ಅರ್ಫಕ್ಷಡ್, 438; ಸಲಾ,433; ಈಬರ್ 464; ಪ್ಲೆಲ್ಗ್‌ 239, ರಿಯು,239; ಸೆರಗ್, 230; ನಹೋರ್,148; ತೇರಾ, 205, ಅವ್ರಹಾಂ, 175; ಐಸಾಕ್‌, 180; ಜಾಬ್‌,210; ಜೇಕಬ್‌,147; ಲೆವಿ, 137; ಕೋಹತ್, 133; ಅಮರಮ್, 137; ಮೋಸೆಸ್, 120; ಮತ್ತು ಜೋಶುವ, 110. ಈ ಆಯುಷ್ಯಗಳು ಕ್ರಮೇಣ ಸುಮಾರು 100 ವರ್ಷಗಳಿಗೆ ಇಳಿಮುಖವಾಗಿರುವುದನ್ನು ತೋರಿಸುತ್ತವೆ.

ಇದು ವೈದಿಕ ಪದ್ಧತಿಯ ಪ್ರಕಾರ ಕಲಿಯುಗದ ಪ್ರಾರಂಭದ ಅನಂತರ ಏನು ಸಂಭವಿಸಿರಬಹುದೋ ಅದಕ್ಕೆ ಅನುರೂಪವಾಗಿದೆ.

ಇಲ್ಲಿ ನಾವು ಪ್ರಾಸಂಗಿಕವಾಗಿ ಪ್ರಸ್ತಾವಿಸಬೇಕಾದ ಸಂಗತಿ ಎಂದರೆ ಬೈಬಲ್‌ ನಲ್ಲಿ ಹೇಳಿರುವ ಜಲಪ್ರಳಯವು ಕ್ರಿ.ಪೂ. ಎರಡು ಅಥವಾ ಮೂರನೆಯ ಸಹಸ್ರ ವರ್ಷದಲ್ಲಿ ಸಂಭವಿಸಿದ್ದಿರಬೇಕು. ಭಾರತದಲ್ಲಿ ಕಲಿಯುಗದ ಪ್ರಾರಂಭವನ್ನು ಹೇಳುವ ಸಾಂಪ್ರದಾಯಿಕ ದಿನಾಂಕವು ಕ್ರಿ.ಪೂ. ಫೆಬ್ರವರಿ 18, 3102 ಆಗಿರುತ್ತದೆ. ಕ್ರಿ.ಶ. ಆರರಿಂದ ಹದಿನಾಲ್ಕನೆಯ ಶತಮಾನದವರೆಗಿನ ವಿವಿಧ ಪರ್ಷಿಯನ್, ಇಸ್ಲಾಮಿಕ್ ಮತ್ತು ಐರೋಪ್ಯ ಬರವಣಿಗೆಗಳಲ್ಲಿ ಇದೇ ದಿನಾಂಕವನ್ನೇ ಜಲಪ್ರಳಯದ ಸಮಯವೆಂದು ಪ್ರಸ್ತಾವಿಸಲಾಗಿದೆ.

ಮಧ್ಯ ಪ್ರಾಚ್ಯದ ಜಲಪ್ರಳಯವು ಕಲಿಯುಗದ ಪ್ರಾರಂಭಕ್ಕೆ ಹೇಗೆ ತಳಕು ಹಾಕಿಕೊಂಡಿತು? ಭೂತಕಾಲದ ಬಗೆಗೆ ನಮಗೆ ಎಷ್ಟು ಅಲ್ಪಸಂಗತಿ ತಿಳಿದಿದೆ. ಎನ್ನುವುದನ್ನು ಈ ಕಥೆ ತೋರಿಸುತ್ತದೆ ಎನ್ನುವುದೊಂದೇ ನಾವು ಮಾಡಬಹುದಾದ ಟಿಪ್ಪಣಿ.

ಪ್ರಾಚೀನ ಕಾಲದಲ್ಲಿ ಮನುಷ್ಯರು ದೀರ್ಘಕಾಲ ಬದುಕುತ್ತಿದ್ದರು ಎಂಬ ಬೈಬಲ್ ಕಥೆಗೆ ಸಮರ್ಥನೆಯಾಗಿ ರೋಮನ್ ಇತಿಹಾಸಕಾರ ಫ್ಲೇವಿಯಸ್ ಜೋಸೆಫಸ್‌ ತನ್ನ ಕಾಲದಲ್ಲಿ ಉಪಲಬ್ಧವಾಗಿದ್ದ ಅನೇಕ ಐತಿಹಾಸಿಕ ಗ್ರಂಥಗಳನ್ನು ಪ್ರಸ್ತಾವಿಸಿದ್ದಾನೆ:

ಜಲಪ್ರಳಯದ ಅನಂತರ ನೋವಾ 350 ವರ್ಷಗಳ ಕಾಲ ಸಂತೋಷವಾಗಿ ಬಾಳಿದ್ದ. ಅವನು ಮೃತನಾದಾಗ ಅವನಿಗೆ 950 ವರ್ಷ ವಯಸ್ಸಾಗಿತ್ತು. ಆದರೆ ಪ್ರಾಚೀನರ ಜೀವನವನ್ನು ನಮ್ಮ ಜೀವನದೊಡನೆ ಹೋಲಿಸಿ….. ನಮ್ಮ ಆಯುಷ್ಯದ ಹ್ರಸ್ವತೆಯನ್ನು ಆಧಾರವನ್ನಾಗಿ ಇಟ್ಟುಕೊಂಡು ಪ್ರಾಚೀನರು ಅಷ್ಟು ದೀರ್ಘಕಾಲ ಬಾಳಿರಲಿಲ್ಲ ಎಂದು ಯಾರೂ ವಾದ ಮಂಡಿಸದಿರಲಿ…

ಈಗ ನಾನು ಹೇಳಿದ್ದಕ್ಕೆ ಸಾಕ್ಷಿಯಾಗಿ ಪೂರ್ವಾಚಾರಗಳನ್ನು ಕುರಿತು ಬರೆದವರೆಲ್ಲ ಇದ್ದಾರೆ. ಗ್ರೀಕರು ಮತ್ತು ಬರ್ಬರರು ಇಬ್ಬರಲ್ಲೂ ಇದ್ದಾರೆ. ಅಷ್ಟೇಕೆ ಈಜಿಪ್ಟಿಯನ್ ಇತಿಹಾಸವನ್ನು ಬರೆದ ಮನೆತೊ, ಕಾಲ್ಡೀಯನ್ ಸ್ಮಾರಕಗಳನ್ನು ಸಂಗ್ರಹಿಸಿದ ಬೆರೋಸಸ್, ಮತ್ತು ಮೋಕಸ್ ಮತ್ತು ಹೆಸ್ಟೀಯಅಸ್ ಮತ್ತು ಇವರಲ್ಲದೆ ಈಜಿಪ್ಟಿನ ಹಿರ್ನೋನಿಮಸ್ ಮತ್ತು ಫಿನಿಷಿಯದ ಇತಿಹಾಸವನ್ನು ರಚಿಸಿದವರು, ನಾನು ಇಲ್ಲಿ ಏನನ್ನು ಹೇಳುತ್ತಿದ್ದೇನೆಯೋ ಅದನ್ನು ಒಪ್ಪಿದ್ದಾರೆ:

ಹೀಸಿಯಸ್ ಕೂಡ, ಅಲ್ಲದೆ ಹೆಕ್ಟಟೇಅಸ್, ಹೆಲ್ಲನಿಕಸ್ ಮತ್ತು ಅಕು ಜಿಲಅಸ್ ಅಲ್ಲದೆ ಇಫೋರಸ್‌ ಹಾಗೂ ನಿಕೊಲಅಸ್ ಇವರೆಲ್ಲ, ಪ್ರಾಚೀನರು ಒಂದು ಸಾವಿರ ವರ್ಷ ಬದುಕುತ್ತಿದ್ದರು ಎಂದು ನಿರೂಪಿಸಿದ್ದಾರೆ. ಆದರೆ ಈ ವಿಚಾರವಾಗಿ ಪ್ರತಿಯೊಬ್ಬನೂ ತನಗೆ ಯೋಗ್ಯವೆಂದು ತೋರಿದ ರೀತಿಯಲ್ಲಿ ನೋಡಲಿ.

ದುರದೃಷ್ಟವಶಾತ್ ಜೋಸೆಫಸ್‌ ಪ್ರಸ್ತಾವಿಸಿದ ಯಾವ ಗ್ರಂಥವೂ ಈಗ ಉಪಲಬ್ಧವಾಗಿಲ್ಲ. ಭೂತಕಾಲವನ್ನು ಕುರಿತು ನಮಗೆ ಎಷ್ಟು ಕಡಮೆ ತಿಳಿದಿದ ಎನ್ನುವುದನ್ನು ಇದು ಮತ್ತೆ ತೋರಿಸುತ್ತದೆ. ಆದರೆ ಅಸ್ತಿತ್ವದಲ್ಲಿರುವ ನೋರ್ಸ್ ಕಥನಗಳಲ್ಲಿ ಪ್ರಾಚೀನ ಕಾಲದಲ್ಲಿ ಜನರು ಅನೇಕ ಶತಮಾನಗಳ ಕಾಲ ಬದುಕಿರುತ್ತಿದ್ದರು ಎಂದು ಹೇಳಲಾಗಿದೆ.

ಇದರ ಜೊತೆಗೆ ನೋರ್ಸ್ ಕಥನಗಳು ಯುಗಗಳ ಮುನ್ನಡೆಯನ್ನು ವರ್ಣಿಸುತ್ತವೆ. ಅವುಗಳಲ್ಲಿ ವಿವಿಧ ಸಮಾಜ ವ್ಯವಸ್ಥೆಗಳನ್ನು ಆಚರಣೆಗೆ ತಂದ ಶಾಂತಿಯುಗ, ಹಿಂಸಾಚಾರ ಹೆಚ್ಚುತ್ತಲೇ ಹೋದ ಯುಗ, ಸೀಳಿದ ಗುರಾಣಿಗಳಿಂದ ಕೂಡಿದ ಅಧಃಪತನದ ‘ಚಾಕುಯುಗ, ಕೊಡಲಿಯುಗ’ ಸೇರಿವೆ. ಕೊನೆಯ ಯುಗದ ಅನಂತರ ಬಂದದ್ದು ರ್ಯಾಗನೋರ್ಕ್ ಎಂಬ ಸರ್ವನಾಶದ ಅವಧಿ. ಇದು ಆದ ಅನಂತರ ಜಗತ್ತಿನಲ್ಲಿ ಒಳ್ಳೆಯತನವು ಪುನಃ ಸ್ಥಾಪಿತವಾಯಿತು.

ನೋರ್ಸ್‌ ರ್ಯಾಗನೋರ್ಕ್‌ನಲ್ಲಿ ಭೂಮಿಯ ವಿನಾಶ ಮತ್ತು ನೋರ್ಸ್ ದೇವತೆಗಳ ( ಅವನ್ನು ಅಸ್ ಗರ್ಡ್ ಎಂದು ಕರೆಯುತ್ತಾರೆ) ನೆಲೆಗಳ ವಿನಾಶ ಸೇರಿದೆ. ಹೀಗೆ ಇದು ವೇದಕಾಲದ ಅನುಕ್ರಮಣಿಕೆಯ ಮೂರು ಲೋಕಗಳ ವಿನಾಶಕ್ಕೆ ಸಂವಾದಿಯಾಗಿದೆ. ಅದರ ಅನಂತರ ಬಂದದ್ದು 1,000 ಯುಗ ಚಕ್ರಗಳು ಅಥವಾ ಬ್ರಹ್ಮನ ಒಂದು ದಿನ.

ರ್ಯಾಗನೋರ್ಕ್ ಸಮಯದಲ್ಲಿ ಸುರ್ತ್ ಎಂಬ ಜೀವಿಯ ಜ್ವಾಲೆಗಳಿಂದ ಜಗತ್ತು ನಾಶವಾಯಿತು ಎಂದು ಹೇಳಲಾಗಿದೆ. ಅದು ಅಧೋಲೋಕ ಅಥವಾ ನರಕದಲ್ಲಿ ವಾಸ ಮಾಡುತ್ತದೆ. ಭೂಮಿಯ ಸೃಷ್ಟಿಯಲ್ಲೂ ಇದು ತೊಡಗಿಕೊಂಡಿತ್ತು. ಇದಕ್ಕೆ ಹೋಲಿಕೆಯಾಗಿ, ಶ್ರೀಮದ್ ಭಾಗವತದಲ್ಲಿ (3.11.30) ಬ್ರಹ್ಮನ ದಿನದ ಕೊನೆಯಲ್ಲಿ “ಸಂಕರ್ಷಣನ ಬಾಯಿಂದ ಹೊರಬೀಳುವ ಅಗ್ನಿಯಿಂದ ವಿನಾಶವು ಸಂಭವಿಸುತ್ತದೆ” ಎಂದು ಹೇಳಲಾಗಿದೆ.

ಸಂಕರ್ಷಣನು ಕೃಷ್ಣನ ಸ್ವಾಂಶ ವಿಸ್ತರಣೆ. ಅವನು “ಬ್ರಹ್ಮಾಂಡದ ತಳಭಾಗದಲ್ಲಿ ಕುಳಿತಿರುತ್ತಾನೆ” (ಶ್ರೀಮದ್ ಭಾಗವತ 3.8.3). ಅದು ಕಳಭಾಗದ ಗ್ರಹವ್ಯೂಹಗಳ ಅಡಿಯಲ್ಲಿದೆ.

ನೋರ್ಸ್ ಮತ್ತು ವೈದಿಕ ವಿಶ್ವವಿಜ್ಞಾನಗಳಲ್ಲಿ ಅನೇಕ ಹೋಲಿಕೆಗಳಿವೆ. ಹಾಗೆಯೇ ಭಾರಿ ವ್ಯತ್ಯಾಸಗಳೂ ಇವೆ. ಒಂದು ಮುಖ್ಯ ವ್ಯತ್ಯಾಸವೆಂದರೆ ಬ್ರಹ್ಮಾ೦ಡದಲ್ಲಿರುವ ಎಲ್ಲ ಜೀವಿಗಳು ಮತ್ತು ವಿದ್ಯಮಾನಗಳೂ ದೇವೋತ್ತಮ ಪರಮ ಪುರುಷನಾದ ಕೃಷ್ಣನ ದೈವಿಕ ಯೋಜನೆಯ ಅಂಗ ಎಂದು ಶ್ರೀಮದ್ ಭಾಗವತದಲ್ಲಿ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುವುದಾಗಿದೆ.

ಇದಕ್ಕೆ ವೈದ್ಯಶ್ಯವಾಗಿ ನೋರ್ಸ್ ಪುರಾಣ ಕಥೆಯಲ್ಲಿ ದೇವರ ಅನುಪಸ್ಥಿತಿಯು ಎದ್ದು ಕಾಣುತ್ತದೆ. ಈ ಬ್ರಹ್ಮಾಂಡದ ನಾಟಕದಲ್ಲಿನ ಪ್ರಮುಖ ಪಾತ್ರಗಳ ಮೂಲ ಮತ್ತು ಉದ್ದೇಶ ತೀರ ಅಸ್ಪಷ್ಟವಾಗಿದೆ. ಸುರ್ತ್ ಮುಖ್ಯವಾಗಿ ಒಬ್ಬ ಬೆಂಕಿ ರಾಕ್ಷಸ. ನೋರ್ಸ್ ಸಾಹಿತ್ಯದಲ್ಲಿ ಪಾರಂಗತರಾದವರಿಗೂ ಅವನ ಮೂಲ ಮತ್ತು ಉದ್ದೇಶಗಳು ಅಸ್ಪಷ್ಟವಾಗಿವೆ.

ವೈದಿಕ ವಸ್ತುಗಳ ವಿವಿಧ ಸಮಾಜಗಳಲ್ಲಿ ಕಾಣಿಸಿಕೊಂಡರೆ ಅವು ಪ್ರಾಚೀನ ವೈದಿಕ ನಾಗರಿಕತೆಯಿಂದ ನಿಷ್ಪನ್ನವಾಗಿವೆ ಎಂದು ತೀರ್ಮಾನಕ್ಕೆ ಬರಲು ಹೇಗೆ ಸಾಧ್ಯ ಎಂದು ಯಾರಾದರೂ ಕೇಳಬಹುದು.

ಪ್ರಾಯಃ ಅವುಗಳನ್ನು ವಿವಿಧ ಪ್ರದೇಶಗಳಲ್ಲಿ ಸ್ವತಂತ್ರವಾಗಿ ಸೃಷ್ಟಿಸಿರಬಹುದು ಅಥವಾ ನಾವೆಲ್ಲ ವೈದಿಕ ಸಂಸ್ಕೃತಿ ಎಂದು ಯಾವುದನ್ನು ಕರೆಯುತ್ತೇವೆಯೋ ಅದಕ್ಕಿಂತ ಪ್ರಾಚೀನವಾದ ಒಂದು ಅಜ್ಞಾತ ಸಂಸ್ಕೃತಿಯಿಂದ ಅವು ಪ್ರಾಯಃ ಇಳಿದು ಬಂದಿರಬಹುದು. ಹೀಗೆ ಸುರ್ತ್ ಮತ್ತು ಸಂಕರ್ಷಣರ ವೃತ್ತಾಂತಗಳ ನಡುವಣ ಹೋಲಿಕೆಯು ಕಾಕತಾಳೀಯವಿರಬಹುದು, ಅಥವಾ ವೈದಿಕ ವಿವರಣೆಯು ಸುರ್ತ್ ಕಥೆಗೆ ಹೋಲುವಂತಹ ಇನ್ನೊಂದರಿಂದ ನಿಷ್ಪನ್ನವಾಗಿರಬಹುದು.

ಪ್ರಶ್ನೆಗೆ ನಮ್ಮ ಉತ್ತರ ಹೀಗಿದೆ: ಪ್ರಾಚೀನ ವೈದಿಕ ಸಂಸ್ಕೃತಿಯೊಂದರಿಂದ ಅವತರಣವಾಯಿತು ಎಂಬ ಊಹನೆಯನ್ನು ಸಮರ್ಥಿಸಲು ಉಪಲಬ್ಧ ಅನುಭವ ಜನ್ಯ ಸಾಕ್ಷ್ಯಾಧಾರಗಳು ಸಾಕಾಗುವುದಿಲ್ಲ ಏಕೆಂದರೆ ಎಲ್ಲ  ಅನುಭವಜನ್ಯ ಸಾಕ್ಷ್ಯಾಧಾರಗಳೂ ಅಪರಿಪೂರ್ಣವಾಗಿರುತ್ತವೆ ಮತ್ತು ವಿವಿಧ ವ್ಯಾಖ್ಯಾನಗಳಿಗೆ ಬದ್ಧವಾಗಿರುತ್ತವೆ. ಆದರೆ ಈ ಊಹನೆಯೊಡನೆ ಸಾಕ್ಷ್ಯಾಧಾರವು ಸುಸಂಗತವಾಗಿದೆಯೋ ಇಲ್ಲವೋ ಎನ್ನುವುದನ್ನು ನಾವು ನಿರ್ಣಯಿಸಬಹುದು.

ಪ್ರಾಚೀನ ವೈದಿಕ ಜಾಗತಿಕ ನಾಗರಿಕತೆ ಎಂಬುದೊಂದು ಇದ್ದಿದ್ದರೆ, ಜಗತ್ತಿನಾದ್ಯಂತ ಅನೇಕ ಸಂಸ್ಕೃತಿಗಳಲ್ಲಿ ಅದರ ಕುರುಹುಗಳನ್ನು ನಾವು ನಿರೀಕ್ಷಿಸಬಹುದಾಗಿತ್ತು. ಕೆಲವು ನಿರ್ದಿಷ್ಟ ವಿವರಗಳಲ್ಲಿ ವೈದಿಕ ನಿರೂಪಣೆಗಳನ್ನು ಅನೇಕರು ಒಪ್ಪುತ್ತಾರೆ ( ಉದಾಹರಣೆಗೆ ಸುರ್ತ್‌ ನೆಲೆ ಇರುವ ಸ್ಥಳ ಅಥವಾ ಪವಿತ್ರ ಎಮ್ಮೆಯು ಯುಗಕ್ಕೊಂದು ಕಾಲನ್ನು ಕಳೆದುಕೊಳ್ಳುವುದು).

ಈ ನಾಗರಿಕತೆಯು, ಕಲಿಯುಗದ ಪ್ರಾರಂಭದಲ್ಲಿ, ಸಾವಿರಾರು ವರ್ಷಗಳ ಹಿಂದೆ ತನ್ನ ಪ್ರಭಾವವನ್ನು ಕಳೆದುಕೊಳ್ಳಲು ಪ್ರಾರಂಭಿಸಿದ್ದರಿಂದ, ಅದರ ಅನೇಕ ಕುರುಹುಗಳು ಅಸಮಗ್ರವೂ, ಅನಂತರದ ಕಾಲದ ಪ್ರಕ್ಷೇಪಗಳಿಂದ ಇಡುಕಿರಿದದ್ದೂ ಆಗಿರಬೇಕೆಂದು ನಾವು ನಿರೀಕ್ಷಿಸಹುದು. ಇದನ್ನು ನಾವೂ ಕೂಡ ಕಂಡಿದ್ದೇವೆ. ಹೀಗೆ ಉಪಲಬ್ಧ ಸಾಕ್ಷ್ಯಾಧಾರವು ಒಂದು ವೈದಿಕ ಮೂಲದ ಊಹನೆಯೊಡನೆ ಸುಸಂಗತವಾಗಿರುವಂತೆ ತೋರುತ್ತದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi