ಈರುಳ್ಳಿ ಮತ್ತು ಬೆಳ್ಳುಳ್ಳಿ

ಆಂಗ್ಲ ಮೂಲ : ಗೌತಮ್ ಪಾಲ್

ಅಪಾಯಕಾರಿಯೇ? ವಿಷವೇ? ಚರ್ಚೆ ನಡೆಯುತ್ತಲೇ ಇದೆ. ಆದರೆ ಇಲ್ಲಿ ಸಂಶೋಧಕರೊಬ್ಬರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತ ಹೇಗೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಮಾನವ ಜೀವನಕ್ಕೆ ಮಾರಕ ಎನ್ನುವುದನ್ನು ವಿವರಿಸಲು ಪ್ರಯತ್ನಿಸಿದ್ದಾರೆ. ಕುತೂಹಲಕಾರಿ. ಓದಿಕೊಳ್ಳಿ.

ಅದು ಅತ್ಯಂತ ಗಡಿಬಿಡಿಯ ವಾರವಾಗಿತ್ತು. ಮಧ್ಯರಾತ್ರಿವರೆಗೂ ಪ್ರಯೋಗಾಲಯದಲ್ಲಿಯೇ ಇರುತ್ತಿದ್ದೆ. ನನ್ನ ಮಹಾಪ್ರಬಂಧವನ್ನು ಸಲ್ಲಿಸಬೇಕಾದ ಅಂತಿಮ ದಿನ ಸಮೀಪಿಸಿತ್ತು. ಪ್ರಾಧ್ಯಾಪಕರೂ ನನ್ನೊಂದಿಗೆ ಇದ್ದರು. ಅದೊಂದು ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಮ್ಮೇಳನವಾಗಿತ್ತು. ನಮ್ಮ ಫಲಿತಾಂಶಗಳು ಒಳ್ಳೆಯ ಗುಣಮಟ್ಟದ್ದಾಗಿ ಕಂಡು ಬಂದಿತು. ನಾವು ಯಶಸ್ವಿಯಾದೆವೆಂದು ಬೀಗಿದೆವು.

ಆದರೆ ಅಯ್ಯೋ! ಕೆಲವೇ ದಿನಗಳ ಅನಂತರ ನನಗೆ ಅರಿವಾಯಿತು. ನನ್ನ ಪ್ರಯೋಗಗಳಲ್ಲಿ ತಪ್ಪುಗಳನ್ನು ಮಾಡಿಬಿಟ್ಟಿದ್ದೆ. ವಾಸ್ತವವಾಗಿ ನಾವು ಏನು ಮಾಡಿದ್ದೇವೆಂದು ಹೇಳಿದ್ದೇವೋ ಮತ್ತು ಏನು ಮಾಡಿದ್ದೆವೋ ಅದರ ನಡುವೆ ಭಾರೀ ವ್ಯತ್ಯಾಸಗಳಿದ್ದವು. ಮೂರು ತಿಂಗಳ ಅನಂತರ ಹೊರಬೀಳಲಿರುವ ಆ ಪ್ರಬಂಧದ ಫಲಿತಾಂಶವನ್ನು ಊಹಿಸಬಲ್ಲವನಾಗಿದ್ದೆ. (ಮುಂದೆ ತಿರಸ್ಕಾರದ ಪತ್ರ ಬಂದಾಗ ಏನೇನೂ ಅಚ್ಚರಿಯಾಗಲಿಲ್ಲ.) ಆದರೆ ನಾನು ಅದ್ಹೇಗೆ ಅಷ್ಟು ದಡ್ಡನಾದೆ? ಬದುಕಿನಲ್ಲಿ ಎಷ್ಟೋ ಸೋಲುಗಳನ್ನು ಅನುಭವಿಸಿದ್ದೇನೆ. ಆದರೆ ಇಂತಹ ಮರೆಯಲಾಗದಂತಹ ತಿಳಿಗೇಡಿ ತಪ್ಪನ್ನು ಮಾಡುವೆನೆಂದು ಯೋಚಿಸಿರಲಿಲ್ಲ.

ದಿಗ್ಭ್ರಮೆಯು ಸ್ವಲ್ಪ ತಣ್ಣಗಾದ ಮೇಲೆ ಅಂತರಾಳದಲ್ಲಿ ಯಾರೋ ಹೇಳಿದಂತಾಯಿತು, “ಇದು ಈರುಳ್ಳಿ ಕಾರಣದಿಂದ ಅಲ್ಲವೆ?” “ಇರಬಹುದು” ಎಂದು ನಾನು ಉತ್ತರಿಸಿದೆ. ನಿಜ ಹೇಳಬೇಕೆಂದರೆ, ಸರಿಸಮಾರು ಹತ್ತು ವರ್ಷಗಳಿಂದ ನಾನು ಈರುಳ್ಳಿ ಬೆಳ್ಳುಳ್ಳಿ ಇಲ್ಲದ ವೈದಿಕ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದೆ. ನಿಜ, ಈರುಳ್ಳಿ ಬೆಳ್ಳುಳ್ಳಿಯನ್ನು ತ್ಯಜಿಸಿದ ಮೇಲೆ ನಾನು ನನ್ನ ಏಕಾಗ್ರತೆಯ ಮಟ್ಟ ಮತ್ತು ಚಿಂತನಾ ಶಕ್ತಿಯಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಅನುಭವಿಸಿದೆ. ಆದರೆ ಪ್ರಬಂಧವನ್ನು ಸಲ್ಲಿಸುವ ಕೆಲವೇ ದಿನಗಳಿಗೆ ಮೊದಲು ನಾನು ಒತ್ತಡದ ಸನ್ನಿವೇಶದಲ್ಲಿ ಈರುಳ್ಳಿಯನ್ನು ಸೇವಿಸಿದ್ದೆ! ಈರುಳ್ಳಿ ಬೆಳ್ಳುಳ್ಳಿ ನಮ್ಮ ಏಕಾಗ್ರತೆಯ ಮಟ್ಟದ ಮೇಲೆ ತೀವ್ರ ಪರಿಣಾಮವನ್ನು ಉಂಟುಮಾಡುತ್ತದೆ ಮತ್ತು ಮಿದುಳಿನ ಕಾರ್ಯದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ ಎನ್ನುವುದು ದಿಟವಾಯಿತೇನೋ. ಆದರೆ ಈ ಲೋಕದ ಅಸಂಖ್ಯ ಜನರು ಅದನ್ನು ಸೇವಿಸುತ್ತಿರುವಾಗ ಅದು ಅಷ್ಟೊಂದು ಕೆಟ್ಟದ್ದೆ? ಈ ಕುರಿತು ನಾನು ಸಂಶೋಧನೆಯನ್ನು ಆರಂಭಿಸಿದೆ. ಅನೇಕ ಅಚ್ಚರಿಯಾದ ಅಂಶಗಳು ಕಂಡುಬಂದವು. ಇದು “ಇರಬಹುದು” ಎನ್ನುವ ನನ್ನ ಕಲ್ಪನೆಯನ್ನು “ಖಂಡಿತ ಹೌದು” ಎಂದು ಮಾರ್ಪಡಿಸಿತು. ಕೆಲವು ಅಂಶಗಳನ್ನು ನಾನು ಇಲ್ಲಿ ಹಂಚಿಕೊಳ್ಳಲು ಬಯಸುವೆ.

ರಾಸಾಯನಿಕ ಸಂಯೋಜನೆ

ಈರುಳ್ಳಿ ಮತ್ತು ಬೆಳ್ಳುಳ್ಳಿಗಳಲ್ಲಿ ಸಲ್ಫಾಕ್ಸೈಡ್ ಇದೆ. ಇದು ಎರಡು ಕಾರ್ಬನ್ ಆಟಂಗಳೊಂದಿಗೆ ಸೇರಿರುವ, ಸಲ್ಫಿನೈಲ್ ಗುಂಪು ಇರುವ ಒಂದು ಸಂಯೋಜನೆ ಅಥವಾ ಮಿಶ್ರಣ. ಈರುಳ್ಳಿ ಮತ್ತು ಬೆಳ್ಳುಳ್ಳಿ ಬಹಳ ರೀತಿಯಲ್ಲಿ ಬಂದೂಕು ಸಿಡಿಮದ್ದಿನಂತಿದೆ! (ಗನ್ ಪೌಡರ್). ಹೀಗೆಂದು ನ್ಯೂಯಾರ್ಕ್ ಟೈಂಸ್ ಲೇಖನವೊಂದು ತಿಳಿಸಿದೆ. ಈರುಳ್ಳಿ ಮತ್ತು ಬೆಳ್ಳುಳ್ಳಿಗಳು ಷಾಲಟ್, ಲೀಕ್, ಚೈವ್ ಮತ್ತು ರಕ್ಯೊಗಳು ಸೇರಿರುವ ಜೀನಸ್ ಆಲಿಯಂ ಕುಲಕ್ಕೆ ಸೇರಿವೆ. ಇವೆಲ್ಲವೂ ಈರುಳ್ಳಿಯಂತಹ ಗಡ್ಡೆಯ ಗಿಡಗಳಾಗಿವೆ. ಅವುಗಳ ಗಂಧಕ ಆಧಾರಿತ ರಕ್ಷಣಾ ವ್ಯವಸ್ಥೆಯು ಆಲಿಯಂಗಳಿಗೆ ವಿಶೇಷ ಪರಿಮಳ ನೀಡುತ್ತದೆ. ಕಡಿಯುವ, ಜಜ್ಜುವ ಅಥವಾ ಕತ್ತರಿಸುವ ಮೂಲಕ ಈ ಗಿಡಗಳ ಜೀವಕೋಶವನ್ನು (ಟಿಶ್ಯೂ) ಬೇರ್ಪಡಿಸಿದಾಗ ಅವು ಈ ಪರಿಮಳವನ್ನು ಹರಡುತ್ತವೆ. ರಾಸಾಯನಿಕಗಳು ತುಂಬ ಉದ್ರೇಕಕಾರಿಯಾಗಿದ್ದು (ಕಿರಿಕಿರಿ), ಬಹಳಷ್ಟು ಕ್ರಿಮಿಕೀಟಗಳು ಎರಡನೆಯ ಬಾರಿಗೆ ಬರುವುದಕ್ಕೆ ಹಿಂಜರಿಯುತ್ತವೆ.

ಬೆಳ್ಳುಳ್ಳಿಯ ಎಸಳು ಅಲಿಸಿನ್ ಎನ್ನುವ ರಾಸಾಯನಿಕವನ್ನು ಉತ್ಪಾದಿಸುತ್ತದೆ. ಬೆಳ್ಳುಳ್ಳಿಯ ತೀಕ್ಷ್ಣವಾದ ವಾಸನೆಗೆ ಅದೇ ಕಾರಣ. ಅದು ಹೆಚ್ಚೂಕಡಮೆ ಒಂದು ದೊಡ್ಡದಾದ ಅಣುವಾಗಿದೆ. ಈರುಳ್ಳಿ, ಷಾಲಾಟ್, ಸ್ಕಾಲಿಯನ್, ಲೀಕ್ ಗಳು ವಿಶೇಷವಾಗಿ ಸಂಗ್ರಹವಾದ ರಾಸಾಯನಿಕಗಳು ಮತ್ತು ರಕ್ಷಣಾತ್ಮಕ ಕಿಣ್ವ (ಎಂಜೈಮ್) ಗಳನ್ನು ಹೊಂದಿವೆ. ಅವು ಸಲ್ಫರ್ ಮಾಲಿಕ್ಯುಲ್ (ಗಂಧಕ ಅಣು) ಅನ್ನು ಉತ್ಪಾದಿಸುತ್ತವೆ. ಅವು ಗಾಳಿಯಲ್ಲಿ ಹಾರಾಡಲು ಮತ್ತು ನಮ್ಮ ಕಣ್ಣು, ಮೂಗುಗಳ ಮೇಲೆ ದಾಳಿ ಮಾಡಲು ಸಾಕಾಗುವಷ್ಟು ಸಣ್ಣದಾಗಿವೆ ಮತ್ತು ಹಗುರವಾಗಿವೆ. ಈ ಅಸ್ತ್ರವನ್ನು ಕಂಬನಿ ಅಂಶವೆಂದು (ಲಾಚ್ರಿಮೇಟರಿ) ಹೇಳುತ್ತಾರೆ. ಏಕೆಂದರೆ ಅದು ಜನರ ಕಣ್ಣುಗಳಲ್ಲಿ ನೀರು ಬರಿಸುತ್ತದೆ.

ವಿಷಕಾರಿ ಪ್ರಭಾವಗಳು

ಡಿಮೆಥಿಲ್ ಸಲ್ಫ್ ಆಕ್ಸೈಡ್ನಂತೆ (ಡಿಎಂಎಸ್ಒ) ಸಲ್ಫೋನ್ ಹೈಡ್ರಾಕ್ಸಿಲ್ ಅಯಾನ್ ನಮ್ಮ ರಕ್ತ-ಮಿದುಳು ತಡೆಯನ್ನು ಭೇದಿಸಿಕೊಂಡು ಹೋಗುವುದರಿಂದ ಹಾಗೂ ಮಿದುಳು ಕೋಶಕ್ಕೆ ವಿಷವಾಗಿರುವುದರಿಂದ ಬೆಳ್ಳುಳ್ಳಿ ಒಂದು ವಿಷ ಎಂದು ಡಾ. ರಾಬರ್ಟ್ ಬೆಕ್ ಕಂಡುಹಿಡಿದರು.

ಡಾ. ಬೆಕ್ 1950ರ ದಶಕದಲ್ಲಿ, ಡಾಕ್ ಹಾಲನ್ಸ್ ತಂಡದಲ್ಲಿ ವಿಮಾನ ಹಾರಾಟ ಪರೀಕ್ಷಾ ಎಂಜನಿಯರ್ ಆಗಿದ್ದರು. ಅವರು ತಮ್ಮ ಹಾರಾಟ ಸರ್ಜನ್ ಅವರ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ. ಈ ವೈದ್ಯರು ಪ್ರತಿ ತಿಂಗಳೂ ಬಂದು ತಮ್ಮ ಸಹೋದ್ಯೋಗಿಗಳನ್ನು ಎಚ್ಚರಿಸುತ್ತಿದ್ದರು, “ನಮ್ಮ ವಿಮಾನಗಳಲ್ಲಿ ಹಾರಾಟ ಮಾಡುವ 72 ತಾಸುಗಳಿಗೆ ಮುನ್ನ ಯಾರೂ ಕೂಡ ಬೆಳ್ಳುಳ್ಳಿಯನ್ನು ಸೇವಿಸಿರಬಾರದು. ಎಚ್ಚರ! ಏಕೆಂದರೆ, ಅದು ನಿಮ್ಮ ಪ್ರತಿಕ್ರಿಯೆ ಸಮಯವನ್ನು ಇಮ್ಮಡಿ ಮುಮ್ಮಡಿಗೊಳಿಸುತ್ತದೆ. ಕೆಲವೇ ಕೆಲವು ಹನಿಗಳಷ್ಟು ಬೆಳ್ಳುಳ್ಳಿಯನ್ನು ನೀವು ತೆಗೆದುಕೊಂಡಿದ್ದರೆ ನೀವು ಮೂರು ಪಟ್ಟು ನಿಧಾನವಾಗಿ ಪ್ರತಿಕ್ರಿಯಿಸುತ್ತೀರಿ.”

ಡಾ. ಬೆಕ್ ಮತ್ತೂ ಹೇಳುತ್ತಾರೆ, “ನಾವು ಬಯೋಫೀಡ್‌ಬ್ಯಾಕ್‌ ಸಾಧನವನ್ನು ನಿರ್ಮಿಸುತ್ತಿದ್ದೆವು. ಮತ್ತು ಬೆಳ್ಳುಳ್ಳಿ ಸಾಮಾನ್ಯವಾಗಿ ಮಿದುಳಿನ ಅಲೆಗಳ ಸಮನ್ವಯತೆಯನ್ನು ಹಾಳುಮಾಡುತ್ತದೆ ಎನ್ನುವುದನ್ನು ಕಂಡುಕೊಂಡೆವು.” ಈ ವಿಚಿತ್ರ ನೋಡಿ – ಆ ಸಂಸ್ಥೆಯಲ್ಲಿ ಕಲಿಯುತ್ತಿದ್ದವರು ಭೋಜನ ಮಾಡಿ ಬರುತ್ತಿದ್ದರು. ಮಸ್ತಿಷ್ಕ ಚಿತ್ರಗ್ರಾಹಿಯಲ್ಲಿ (ಎನ್ಸ್‌ಫಾಲೋಗ್ರಾಫ್) ಸತ್ತಂತೆ (ಕ್ಲಿನಿಕಲ್) ಕಾಣುತ್ತಿದ್ದರು. ಅವರು ಚಿತ್ರಗ್ರಾಹಿಯನ್ನು ತಮ್ಮ ಪ್ರಗತಿಯ ಪರಿಶೀಲನೆಗಾಗಿ ಬಳಸುತ್ತಿದ್ದರು. ಅವರನ್ನು ನೋಡಿ, “ಅರೆ, ಏನಾಯ್ತು?” ಎಂದು ಕೇಳಿದರೆ, “ನಾನು ಇಟಾಲಿಯನ್ ಹೊಟೇಲಿಗೆ ಹೋಗಿದ್ದೆ. ಅಲ್ಲಿ ಸಲಾಡ್ ಅನ್ನು ಬೆಳ್ಳುಳ್ಳಿಯಿಂದ ಅಲಂಕರಿಸಿದ್ದರು!” ಎಂದರು. ಅನಂತರ ಅವರು ತರಗತಿಗಳಿಗೆ ಮುನ್ನ ಬೆಳ್ಳುಳ್ಳಿಯನ್ನು ಸ್ಪರ್ಶಿಸುವುದಿಲ್ಲ, ಅಥವಾ ತಮ್ಮ ಸಮಯ, ಹಣ ಮತ್ತು ಇತರರ ಸಮಯವನ್ನೂ ಹಾಳುಮಾಡುತ್ತಿದ್ದಾರೆ ಎನ್ನುವ ಪತ್ರಗಳಿಗೆ ಸಹಿ ಹಾಕಬೇಕಾಗುತ್ತಿತ್ತು!

ಅನಂತರದಲ್ಲಿ ಡಾ. ಬೆಕ್ ಸ್ಟಾನ್ಫೋರ್ಡ್ ನಲ್ಲಿ ಅಧ್ಯಯನವೊಂದಕ್ಕೆ ನೆರವು ನೀಡಿದರು. ನಿಜವಾಗಿಯೂ ಬೆಳ್ಳುಳ್ಳಿ ಒಂದು ವಿಷ ಎನ್ನುವುದನ್ನು ಅವರು ಅಲ್ಲಿ ಕಂಡುಹಿಡಿದರು. “ನೀವು ಬೆಳ್ಳುಳ್ಳಿಯ ಎಸಳಿನಿಂದ ನಿಮ್ಮ ಕಾಲನ್ನು ಉಜ್ಜಿಕೊಳ್ಳಿ. ಸ್ವಲ್ಪ ಸಮಯದ ಅನಂತರ ನೀವು ನಿಮ್ಮ ಮಣಿಕಟ್ಟಿನ ಮೇಲೆ ಅದರ ವಾಸನೆಯನ್ನು ಗ್ರಹಿಸಬಹುದು. ಅಂದರೆ ಅದು ನಿಮ್ಮ ಶರೀರವನ್ನು ವ್ಯಾಪಿಸುತ್ತದೆ. ನೀವು ಜೈವಿಕ ಕೃಷಿಕರಾಗಿದ್ದರೆ ನಿಮಗೆ ಇದು ತಿಳಿದಿರುತ್ತದೆ. ನಿಮಗೆ ಡಿಡಿಟಿಯನ್ನು ಬಳಸಲು ಇಷ್ಟವಿಲ್ಲದಿದ್ದರೆ, ಬೆಳ್ಳುಳ್ಳಿಯು ಕೀಟಗಳ ಹಾದಿಯಲ್ಲಿನ ಎಲ್ಲವನ್ನೂ ನಾಶಪಡಿಸುತ್ತದೆ. ಬೆಳ್ಳುಳ್ಳಿಯು ನಿಮ್ಮ ಆರೋಗ್ಯಕ್ಕೆ, ನಿಮ್ಮ ಬದುಕಿಗೆ ತುಂಬಾ ಒಳ್ಳೆಯದೆಂದು ಹೇಳುವುದನ್ನು ಕೇಳಿರಬಹುದು. ಆದರೆ ನಾವು ಅಂತಹ ಜನರನ್ನು ಯಾವ ವರ್ಗಕ್ಕೆ ಸೇರಿಸುತ್ತೇವೆ, ಗೊತ್ತೆ? ಈ ಶತಮಾನದ ಅಂತ್ಯದೊಳಗೆ ತಾಯಂದಿರು ತಮ್ಮ ಮಕ್ಕಳನ್ನು ಮಲಗಿಸಲು ಮಾರ್ಫಿನ್ ಸಲ್ಫೇಟ್ ಅನ್ನು ಔಷಧಿ ಅಂಗಡಿಗಳಲ್ಲಿ ಖರೀದಿಸಿ ಮೂರ್ಖರಾಗುವ ವರ್ಗಕ್ಕೇ ಅವರನ್ನು ಸೇರಿಸುತ್ತೇವೆ.”

ಅವರು ಮುಂದುವರಿಸುತ್ತಾರೆ, “ಕೆಳಮಟ್ಟದ ತಲೆನೋವು ಅಥವಾ ನಿಗಾ ಕೊರತೆ ರೋಗ ಲಕ್ಷಣಗಳಿರುವ ರೋಗಿಗಳಿದ್ದರೆ ಮತ್ತು ಅವರಿಗೆ ಮಧ್ಯಾಹ್ನದ ಹೊತ್ತು ಕಂಪ್ಯೂಟರ್ ನಲ್ಲಿ ಗಮನ ಕೇಂದ್ರೀಕರಿಸುವುದು ಕಷ್ಟವಾದರೆ, ಈ ಒಂದು ಪ್ರಯೋಗವನ್ನು ಮಾಡಿ. ಅವರು ಬೆಳ್ಳುಳ್ಳಿ ಸೇವಿಸದಂತೆ ನೋಡಿಕೊಳ್ಳಿ. ಅತಿ ಶೀಘ್ರದಲ್ಲಿ ಅವರಲ್ಲಿ ಆಗುವ ಸುಧಾರಣೆಯನ್ನು ಗಮನಿಸಿ. ಅನಂತರ ಅವರು ಸುಮಾರು ಮೂರು ವಾರ ಬೆಳ್ಳುಳ್ಳಿಯನ್ನು ತಿನ್ನಲಿ. ಆಗ “ನನ್ನ ಸಮಸ್ಯೆಗಳಿಗೆ ಇದೇ ಕಾರಣವೆಂದು ತಿಳಿದೇ ಇರಲಿಲ್ಲ!” ಎಂದು ಅವರೇ ಹೇಳುತ್ತಾರೆ. ಸತ್ಯ ಏನು? ಏಕಾಗ್ರತೆ ಮತ್ತು ಮಾನಸಿಕ ಚಟುವಟಿಕೆ ಅಗತ್ಯವಿರುವ ಕಾರ್ಯಗಳಲ್ಲಿ ತೊಡಗಬೇಕಾಗಿದ್ದರೆ ತೀಕ್ಷ್ಣ ಪರಿಣಾಮವನ್ನು ಉಂಟುಮಾಡುವ ಬೆಳ್ಳುಳ್ಳಿಯನ್ನು ತಿನ್ನಬೇಡಿ.

ಈರುಳ್ಳಿಯು ಅಲರ್ಜಿ, ಕರುಳಿನಲ್ಲಿ ಅನಿಲ, ವಾಂತಿ ಭೇದಿ, ಎದೆಯಲ್ಲಿ ಉರಿ ಮುಂತಾದವುಗಳಿಗೆ ಕಾರಣವಾಗಬಹುದು ಎಂದು ಇತ್ತೀಚಿನ ಅನೇಕ ಅಧ್ಯಯನಗಳು ದೃಢಪಡಿಸಿವೆ. ಈರುಳ್ಳಿ ಮತ್ತು ಬೆಳ್ಳುಳ್ಳಿಗಳಿಂದ ಕೆಲವು ವೈದ್ಯಕೀಯ ಲಾಭಗಳಿದ್ದರೂ (ಹೋಮಿಯೋಪಥಿಯ ಕೆಲವು ಔಷಧಿಗಳಿಗೆ ಈರುಳ್ಳಿ ಬಳಕೆ ಇದ್ದರೂ) ಆಹಾರ ಪದಾರ್ಥವಾಗಿ ಒಳ್ಳೆಯದಕ್ಕಿಂತ ಕೆಟ್ಟ ಪರಿಣಾಮಗಳೇ ಹೆಚ್ಚು.

ಅನೇಕ ಸಂಸ್ಕೃತಿಗಳಲ್ಲಿ ನಿಷೇಧ

ಆ ಕೆಟ್ಟ ಕಾರಣಕ್ಕಾಗಿ ವಿಶ್ವಾದ್ಯಂತ ಅನೇಕ ಸಂಸ್ಕೃತಿಗಳಲ್ಲಿ ಈರುಳ್ಳಿ ಬೆಳ್ಳುಳ್ಳಿಯನ್ನು ಪರಂಪರಾನುಗತವಾಗಿಯೇ ನಿಷೇಧಿಸಲಾಗಿತ್ತು.

ಆಲಿಯಂ ವರ್ಗದ ಗಿಡಗಳು ಮಾನವನ ಆರೋಗ್ಯಕ್ಕೆ ಮಾರಕ ಎನ್ನುವುದನ್ನು ಟಾವೊಯಿಸ್ಟರು ಸಾವಿರಾರು ವರ್ಷಗಳ ಹಿಂದೆಯೇ ಅರಿತುಕೊಂಡಿದ್ದರು. ಟ್ಸಾಂಗ್ ಟ್ಸಾಸ್ ಎಂಬ ಸಂತರು ತಮ್ಮ ಬರೆಹಗಳಲ್ಲಿ ಆಲಿಯಂಗಳನ್ನು “ಐದು ಸುವಾಸಿತ ಅಥವಾ ಪರಿಮಳಗೊಳಿಸಿದ ತರಕಾರಿಗಳು” ಎಂದು ವಿವರಿಸಿ, ಮುಖ್ಯವಾಗಿ ಈರುಳ್ಳಿ ಶ್ವಾಸಕೋಶಕ್ಕೆ, ಬೆಳ್ಳುಳ್ಳಿ ಹೃದಯಕ್ಕೆ, ಲೀಕ್ ಗುಲ್ಮಕ್ಕೆ, ಚೈವ್ ಯಕೃತ್ತಿಗೆ ಮತ್ತು ವಸಂತದ ಈರುಳ್ಳಿ (ಸ್ಪ್ರಿಂಗ್ ಆನಿಯನ್) ಮೂತ್ರಕೋಶಕ್ಕೆ ಅಪಾಯಕಾರಿ ಎಂದಿದ್ದರು. ಈ ಸುವಾಸಿತ ತರಕಾರಿಗಳಲ್ಲಿ ಐದು ವಿಧವಾದ ಕಿಣ್ವಗಳಿದ್ದು ಅದು ಉಸಿರಾಟ ತೊಂದರೆ, ಬೆವರಿನಿಂದ ಹೆಚ್ಚಿನ ದುರ್ವಾಸನೆ, ಆತಂಕ ಮತ್ತು ಆಕ್ರಮಣಕಾರಿ ಪ್ರವೃತ್ತಿಯನ್ನು ಹೆಚ್ಚಿಸುವುದು ಮುಂತಾದವುಗಳಿಗೆ ಕಾರಣವಾಗುತ್ತದೆ.

ಅಂತಹುದೇ ಅಂಶಗಳನ್ನು ಆಯುರ್ವೇದದಲ್ಲಿಯೂ ತಿಳಿಸಲಾಗಿದೆ. ಅವು ದೈಹಿಕವಾಗಿ, ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಅಪಾಯಕಾರಿ ಎಂದು ಅದು ಹೇಳುತ್ತದೆ. ತಂಬಾಕು, ಮದ್ಯ, ಔಷಧಗಳ ಜೊತೆಗೆ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಜನರ ಜೀವನ ಪದ್ಧತಿಯಿಂದ ಉಚ್ಚಾಟಿಸಬೇಕೆಂದು ರೇಕಿ ವೈದ್ಯರು ಪ್ರತಿಪಾದಿಸಿದ್ದಾರೆ.

ಬೌದ್ಧರು, ವೈಷ್ಣವರು ಮತ್ತು ಜೈನರು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ದೂರವೇ ಇಟ್ಟಿದ್ದಾರೆ.

ಶನಿಯನ್ನು ಸ್ವರ್ಗದಿಂದ ಓಡಿಸಿದಾಗ, ಅವನು ತನ್ನ ಎಡಗಾಲನ್ನು ಮೊದಲು ಇಟ್ಟಾಗ, ಬೆಳ್ಳುಳ್ಳಿ ಹರಡಿತು ಮತ್ತು ಬಲಗಾಲನ್ನು ಇಟ್ಟಾಗ ಈರುಳ್ಳಿಯು ಹರಡಿತು ಎಂದು ಟರ್ಕಿಯ ಪುರಾತನ ಕಥೆಯೊಂದು ವಿವರಿಸುತ್ತದೆ.

ಗ್ರೀಸ್‌ನಲ್ಲಿ ಬೆಳ್ಳುಳ್ಳಿ ವಾಸನೆ ಇದ್ದವರನ್ನು ಕೀಳು ಅಭಿರುಚಿಯವರೆಂದು ಪರಿಗಣಿಸಲಾಗುತ್ತಿತ್ತು ಮತ್ತು ಅವರು ದೇವಸ್ಥಾನ ಪ್ರವೇಶಿಸುವುದನ್ನು ನಿಷೇಧಿಸಲಾಗಿತ್ತು.

ಪಾಶ್ಚಿಮಾತ್ಯ ಅಡುಗೆ ಮತ್ತು ಔಷಧಿಗಳಲ್ಲಿ ಬೆಳ್ಳುಳ್ಳಿಯನ್ನು ಪ್ರಯೋಜನಕಾರಿ ಅಂಶವೆಂದು ಭಾವಿಸಿರಲಿಲ್ಲ. ಬೆಳ್ಳುಳ್ಳಿಯು ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವುದಾದರೂ ಅದು ಜೀರ್ಣಕ್ರಿಯೆಗೆ ನೆರವಾಗುವ ಬ್ಯಾಕ್ಟೀರಿಯಾಗಳನ್ನೂ ನಾಶಪಡಿಸುತ್ತದೆ ಎಂದು ಆರೋಗ್ಯ ಕಾರ್ಯಕರ್ತರು ಒಪ್ಪಿಕೊಂಡಿದ್ದರು.

ಅಂತಿಮವಾಗಿ…

ಅಸಂಖ್ಯ ಜನರು ಪ್ರತಿದಿನ ಈರುಳ್ಳಿ ಬೆಳ್ಳುಳ್ಳಿಯನ್ನು ತಿನ್ನುತ್ತಲೇ ಇದ್ದಾರೆ. ಬಹಳ ಜನರು ಧೂಮಪಾನ ಮಾಡುತ್ತಿದ್ದಾರೆ, ಮದ್ಯಪಾನ ಮಾಡುತ್ತಿದ್ದಾರೆ. ಅವರೆಲ್ಲ ಚೆನ್ನಾಗಿಯೇ ಇದ್ದಾರಲ್ಲ ಎಂದು ವಾದಿಸಬಹುದು. ಅದು ಏನನ್ನೂ ಸಾಬೀತು ಪಡಿಸುವುದಿಲ್ಲ. ಆದರೆ ನಾನು ಅನುಭವಿಸಿದ್ದನ್ನು ನಾನು ನಿರಾಕರಿಸಲಾಗದು. ಈರುಳ್ಳಿ ಬೆಳ್ಳುಳ್ಳಿ ಕೊನೆಪಕ್ಷ ಒಂದು ಬಾರಿಯಾದರೂ ನನ್ನ ಸಂಶೋಧನೆಯನ್ನು ನಾಶಪಡಿಸಿತು. ಅದು ನಿಮ್ಮ ಚಟುವಟಿಕೆಗಳ ಮೇಲೆ ಕೂಡ ಪರಿಣಾಮ ಬೀರಬಹುದು. ಯಾರಿಗೆ ಗೊತ್ತು?

• ಈ ಸಂಶೋಧಕರ ಅನುಭವ ಯಾರಿಗಾದರೂ ಆಗುತ್ತಿರಬಹುದು. ಪರೀಕ್ಷೆ ಮಾಡಿ ನೋಡಿ!

https://www.isical.ac.in/~goutam.paul/onion.pdf

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi