ಬಗೆ ಬಗೆಯ ಹಲ್ವ

ಶ್ರೀಮದ್‌ ಭಾಗವತ ಪುರಾಣದಲ್ಲಿ ನವವಿಧ ಭಕ್ತಿಗಳ ಬಗ್ಗೆ ಹೇಳಲಾಗಿದೆ. ಆರನೆಯ ಶತಮಾನದಲ್ಲಿ ಬದುಕಿದ್ದ ವಿಷ್ಣು ಚಿತ್ತರ್‌ ಎಂಬ ಪೆರಿಯಾಳ್ವಾರ್‌ ಅವರಿಗೆ ಬಾಲಕೃಷ್ಣನಲ್ಲಿ ಇದ್ದ ಭಕ್ತಿಯನ್ನು ವಾತ್ಸಲ್ಯಭರಿತವಾದ  ಪ್ರೇಮ ಎನ್ನಬಹುದು. ಬಾಲಕೃಷ್ಣನ ಲೀಲೆಗಳನ್ನು ಭಾವಾತ್ಮಕವಾಗಿ ಅವರು ಹಾಡಿದ ಪದ್ಯಗಳು ಪೆರಿಯ ತಿರುಮೊಳಿ ಎಂಬ ಪ್ರಖ್ಯಾತ ಪದ್ಯಮಾಲೆಯಾಗಿದೆ. ಅವರು ಹಾಡಿದ ಒಂದು ಸುಂದರವಾದ ಪದ್ಯ ಹೀಗಿದೆ:

ಬೆಣ್ಣೆಯ ಸಹಿತ ಕುಮ್ಮಾಯಮ್‌ ನುಂಗಿ,

ಕೊಡದ ಮೊಸರನ್ನು ಸರಿಸಿ ಕುಡಿದು,

ಅಸುರರನ್ನು ಕೊಂದು ಬಂದು ನಿಂದೆ.

ನಿನ್ನನ್ನು ನನ್ನ ಮಗನೆಂದು ಕರೆಯುವರು,

(ಆದರೆ) ನಾನು ನಿನ್ನನ್ನು ಅರಿತುಕೊಂಡೆ. 

ನಿನಗೆ `ಮಮ್ಮು’ ತಿನ್ನಿಸಲು ನನಗೆ ಅಂಜಿಕೆ.

ಕುಮ್ಮಾಯಮ್‌ ಎಂಬ ತಿನಿಸಿನ ಪ್ರಾಚೀನತೆಗೆ ಈ ಪದ್ಯವೇ ಸಾಕ್ಷಿಯಾಗಿದೆ.  ಮೃದುವಾದ ತಿನಿಸುಗಳೆಂದರೆ, ಅದರಲ್ಲೂ ಸಿಹಿ ತಿನಿಸುಗಳೆಂದರೆ ಮಕ್ಕಳಿಗೆ ಬಲು ಪ್ರೀತಿ. ಚೆಟ್ಟಿನಾಡಿನ ವಿಶೇಷ  ಸಿಹಿ ತಿನಿಸಾದ ಕುಮ್ಮಾಯಮ್‌  ಜೊತೆಗೆ ಇನ್ನೂ ಮೂರು ಬಗೆಯ ಹಲ್ವ ತಯಾರಿಸಿ ಬಾಲಕೃಷ್ಣನಿಗೆ ಅರ್ಪಿಸೋಣವೇ?

ಕುಮ್ಮಾಯಮ್‌ 

ತಯಾರಿಸಲು ಬೇಕಾದ ಪದಾರ್ಥಗಳು

ಹೆಸರು ಬೇಳೆ – 1 ಬಟ್ಟಲು

ಪುಡಿ ಮಾಡಿದ ಬೆಲ್ಲ – 1 ಬಟ್ಟಲು

ತಯಾರು ಮಾಡುವ ವಿಧಾನ

1. ಬರಿ ಬಾಣಲೆಯಲ್ಲಿ ಹೆಸರು ಬೇಳೆಯನ್ನು ಕೆಂಪಾಗಿ ಘಮ್‌ ಎನ್ನುವವರೆಗೆ ಹುರಿದುಕೊಳ್ಳಬೇಕು.

2. ಆರಿದನಂತರ ಮಿಕ್ಸಿಗೆ ಹಾಕಿ ನುಣ್ಣಗೆ  ಬೀಸಿಕೊಳ್ಳಬೇಕು.

3. ಬೆಲ್ಲದ ಪುಡಿಯನ್ನು ಒಂದು ಬಟ್ಟಲು  ಬಿಸಿ ನೀರಿನಲ್ಲಿ ಚೆನ್ನಾಗಿ ಕರಗಿಸಿ ಸೋಸಿಕೊಳ್ಳಬೇಕು.

4. ಒಂದು ಬಟ್ಟಲು ಬೆಲ್ಲದ ನೀರಿಗೆ ಮೂರು ಬಟ್ಟಲು ನೀರು ಸೇರಿಸಿ, ಅದರಲ್ಲಿ ಬೀಸಿದ ಹೆಸರು ಬೇಳೆ ಹಿಟ್ಟನ್ನೂ ಹಾಕಿ ಗಂಟಿಲ್ಲದೆ ಕಲಸಿಕೊಳ್ಳಬೇಕು.

5. ಸಣ್ಣ ಉರಿಯಲ್ಲಿಟ್ಟು ಕುಮ್ಮಾಯಮ್‌  ಹೊಳಪಿನೊಂದಿಗೆ ಕೂಡಿ ಬರುವವರೆಗೆ ಕೈ ಬಿಡದೆ ಕಲಕುತ್ತಲೇ ಇರಬೇಕು.

6. `ಘಮ್‌’ ಎಂಬ ಪರಿಮಳ ಸೂಸುವ ಕುಮ್ಮಾಯಮ್‌  ಅನ್ನು  ಹಲ್ವ ಹದದಲ್ಲಿ ತೆಗೆದು ಬಟ್ಟಲಿಗೆ ಹಾಕಿ, ತುಪ್ಪದೊಂದಿಗೆ ಶ್ರೀ ಬಾಲ ಕೃಷ್ಣನಿಗೆ ಬಡಿಸಬೇಕು.

ದಮ್ರೂಟ್‌ 

ತಯಾರಿಸಲು ಬೇಕಾದ ಪದಾರ್ಥಗಳು

ಬೂದು ಕುಂಬಳಕಾಯಿ ತುರಿ – 1 ಬಟ್ಟಲು

ತುರಿದ ಪನೀರ್‌ – 1 ಬಟ್ಟಲು

ಹಾಲು – 2 ಬಟ್ಟಲು

ಸಕ್ಕರೆ – 1 1/2 ಬಟ್ಟಲು

ತುಪ್ಪ – 1/4 ಬಟ್ಟಲು

ಏಲಕ್ಕಿ ಪುಡಿ – 1 ಚಿಟಿಗೆ

ಉದ್ದಕ್ಕೆ ಹೆಚ್ಚಿದ ಬಾದಾಮಿ ಚೂರುಗಳು

ತಯಾರು ಮಾಡುವ ವಿಧಾನ

1. ಎರಡು ಚಮಚ ತುಪ್ಪವನ್ನು ಬಿಸಿಮಾಡಿ ಕುಂಬಳಕಾಯಿ ತುರಿಯನ್ನು ಹಸಿ ವಾಸನೆ ಹೋಗುವವರೆಗೆ ಹುರಿಯಬೇಕು.

2. ಪನೀರ್‌ ಸೇರಿಸಿ ಇನ್ನೂ ಮೂರು ನಾಲ್ಕು ನಿಮಿಷಗಳು ಬೇಯಿಸಬೇಕು.

3. ಹಾಲು ಸೇರಿಸಿ, ಕುಂಬಳಕಾಯಿ ಪನೀರ್‌ ಮಿಶ್ರಣ ಬೆಂದು ಗಟ್ಟಿಯಾಗುವವರೆಗೆ ಬೇಯಿಸಬೇಕು.

4. ಗಟ್ಟಿಯಾದ ಮಿಶ್ರಣಕ್ಕೆ ಸಕ್ಕರೆ ಸೇರಿಸಿ ಕೈಯಾಡಿಸಬೇಕು.

5. ತುಪ್ಪವನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ ದಮ್ರೂಟ್‌  ಹಲ್ವ ಹದಕ್ಕೆ ತಿರುಗಿದ ಮೇಲೆ   ಏಲಕ್ಕಿ ಪುಡಿ ಸೇರಿಸಿ ಬೇರೆ ಬಟ್ಟಲಿಗೆ ವರ್ಗಾಯಿಸಬೇಕು.

6. ಉದ್ದುದ್ದವಾಗಿ ಹೆಚ್ಚಿಕೊಂಡ ಬಾದಾಮಿ ಚೂರುಗಳಿಂದ ಅಲಂಕರಿಸಿದ ದಮ್ರೂಟನ್ನು ಬಾಲಗೋಪಾಲನಿಗೆ ಬಡಿಸಬೇಕು.

ಮಸ್ಕಟ್‌ ಹಲ್ವ

ತಯಾರಿಸಲು ಬೇಕಾದ ಪದಾರ್ಥಗಳು

ಗೋಧಿ ತರಿ – 1 ಬಟ್ಟಲು

ಒಂದು ತೆಂಗಿನಕಾಯಿಯ ತುರಿ

ಸಕ್ಕರೆ – 2 ಬಟ್ಟಲು

ಗೋಡಂಬಿ ದ್ರಾಕ್ಷಿ

ತುಪ್ಪ – 2 ಟೀ ಚಮಚ

ತಯಾರು ಮಾಡುವ ವಿಧಾನ

1. ಗೋಧಿ ತರಿಯನ್ನು ತೊಳೆದು ರಾತ್ರಿಯೇ ನೆನೆಸಿಡಬೇಕು.

2. ಮರು ದಿನ ನೆನೆದ ತರಿಯನ್ನು ಮಿಕ್ಸಿಗೆ ಹಾಕಿ ನೀರು ಸೇರಿಸಿ ಚೆನ್ನಾಗಿ ರುಬ್ಬಿ, ಹಾಲನ್ನು ತೆಗೆದು ಸೋಸಿಕೊಳ್ಳಬೇಕು.

3. ಕಾಯಿ ತುರಿಯನ್ನು ಹದಿನೈದು ನಿಮಿಷಗಳು ಬಿಸಿನೀರಿನಲ್ಲಿ ನೆನೆಸಿಟ್ಟು, ಮಿಕ್ಸಿಯಲ್ಲಿ ರುಬ್ಬಿ ಹಾಲು ತೆಗೆದುಕೊಳ್ಳಬೇಕು. ಮತ್ತೊಂದು ಬಾರಿಯೂ ರುಬ್ಬಿ ಎರಡನೆಯ ಹಾಲನ್ನು ತೆಗೆದಿಟ್ಟುಕೊಳ್ಳಬೇಕು.

4. ದಪ್ಪ ತಳವಿರುವ ಬಾಣಲೆಗೆ ಗೋಧಿ ಹಾಲು, ಎರಡು ಬಾರಿ ತೆಗೆದ ಕಾಯಿ ಹಾಲು ಮತ್ತು ಸಕ್ಕರೆಯನ್ನು ಹಾಕಿ ಸಣ್ಣ ಉರಿಯಲ್ಲಿಟ್ಟು, ಕೈಬಿಡದೆ ಕೆದಕುತ್ತಾ ಕುದಿಸಬೇಕು.

5. ಹಲ್ವ ಹೊಳಪಿನೊಂದಿಗೆ ಕೂಡಿಕೊಂಡು ಬಂದು, ತೆಂಗಿನ ಎಣ್ಣೆಯ ಪರಿಮಳ ಸೂಸುವಾಗ ತುಪ್ಪ ಸವರಿದ ಪಾತ್ರೆಗೆ ಹಾಕಬೇಕು.

6. ತುಪ್ಪದಲ್ಲಿ ಹುರಿದ ಗೋಡಂಬಿ ದ್ರಾಕ್ಷಿಯಿಂದ ಅಲಂಕರಿಸಿ ಯಶೋದಾ ನಂದನನಿಗೆ ಬಡಿಸಬೇಕು.

ಮಾವಿನ ಹಣ್ಣಿನ ಹಲ್ವ

ತಯಾರಿಸಲು  ಬೇಕಾದ ಪದಾರ್ಥಗಳು

ಮಾವಿನ ಹಣ್ಣಿನ ತಿರುಳು – 2 ಲೋಟ

ಸಕ್ಕರೆ – 2 ಲೋಟ

ಸಿಹಿ ಇಲ್ಲದ  ಕಂಡೆನ್ಸ್ಡ್‌ ಮಿಲ್ಕ್‌ – 1 ಡಬ್ಬಿ

ತುಪ್ಪ – 1 ಲೋಟ

ಕಡಲೆ ಹಿಟ್ಟು – 3 ಟೀ ಚಮಚ

ಏಲಕ್ಕಿ ಪುಡಿ – 1/4 ಚಮಚ

ತಯಾರು ಮಾಡುವ ವಿಧಾನ

1. ದಪ್ಪ ತಳವಿರುವ ಬರಿ ಬಾಣಲೆಯಲ್ಲಿ  ಕಡಲೆ ಹಿಟ್ಟನ್ನು ಘಮ್‌ ಎಂದು ಹುರಿದುಕೊಳ್ಳಬೇಕು.

2. ಹಿಟ್ಟನ್ನು ಮಾವಿನ ಹಣ್ಣಿನ ತಿರುಳು ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು.

3. ರುಬ್ಬಿದ ಮಾವಿನ ಹಣ್ಣು, ಕಂಡೆನ್ಸ್ಡ್‌ ಮಿಲ್ಕ್‌ ಮತ್ತು ಸಕ್ಕರೆಯನ್ನು ದಪ್ಪ ತಳದ ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿಟ್ಟು ಕೈಯಾಡಿಸಬೇಕು.

4. ಹಲ್ವ ಗಟ್ಟಿಯಾಗುತ್ತಿದ್ದ ಹಾಗೆಯೇ ಸ್ವಲ್ಪ ಸ್ವಲ್ಪವಾಗಿ ತುಪ್ಪ ಸೇರಿಸಿ ಕೆದಕುತ್ತಿರಬೇಕು.

5. ಗುಳಿಗಳು ಕಾಣಿಸಿಕೊಂಡು ಹಲ್ವ ತಳವನ್ನು ಬಿಟ್ಟು ಕೂಡಿಕೊಂಡು ಬರುವಾಗ ಇನ್ನಷ್ಟು ತುಪ್ಪ ಸೇರಿಸಿ, ಏಲಕ್ಕಿಪುಡಿಯನ್ನೂ ಸೇರಿಸಿ ಬೇರೆ ಪಾತ್ರೆಗೆ ಹಾಕಿ  ಬಾಲ ಕೃಷ್ಣಚಂದ್ರನಿಗೆ ಬಡಿಸಬೇಕು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi