ಶ್ರೀ ಕೃಷ್ಣನ ಸ್ವಾಂಶ ವಿಸ್ತರಣೆಯೇ ಬಲರಾಮ. ದ್ವಾಪರ ಯುಗದಲ್ಲಿ ವಸುದೇವ ಮತ್ತು ರೋಹಿಣಿಯ ಪುತ್ರನಾಗಿ ಅವತರಿಸಿದ ಬಲರಾಮನು ಕೃಷ್ಣನ ಸೋದರ. ಇಬ್ಬರ ಲೀಲೆಗಳು ಅಪರಿಮಿತ.

ಶ್ರೀ ಕೃಷ್ಣನ ಅವತಾರದಂತೆ ಬಲರಾಮನ ಆವಿರ್ಭಾವವೂ ವಿಶಿಷ್ಟ. ಕೃಷ್ಣನಂತೆ ಸೆರೆಮನೆಯಲ್ಲಿ ಅವನ ಜನನವಾಗದಿದ್ದರೂ ಅದಕ್ಕೆ ಅಲ್ಲಿಯೇ ಅಂಕಿತ ಹಾಕಲಾಗಿರುತ್ತದೆ. ದೇವಕಿಯ ಎಂಟನೆಯ ಮಗುವು ತನ್ನನ್ನು ಸಂಹರಿಸುತ್ತದೆ ಎನ್ನುವ ಅಶರೀರವಾಣಿಯಿಂದ ಭಯಭೀತನಾದ ಕಂಸನು ತನ್ನ ಸೋದರಿ ದೇವಕಿ ಮತ್ತು ಅವಳ ಪತಿ ವಸುದೇವನನ್ನು ಸೆರೆಮನೆಯಲ್ಲಿ ಇಟ್ಟಿರುತ್ತಾನೆ. ಸಾಲು ಸಾಲಾಗಿ ಆರು ಮಕ್ಕಳನ್ನು ಕಂಸನು ಕೊಲ್ಲುತ್ತಾ ಹೋಗುತ್ತಾನೆ. ಆದರೆ ಭಗವಂತನ ಇಚ್ಛೆಗೆ ವಿರುದ್ಧವಾಗಿ ನಡೆಯುವುದು ಸಾಧ್ಯವೇ? ಏಳನೆಯ ಮಗು ಬಲರಾಮನು ಹೇಗೆ ರೋಹಿಣಿಯ ಪುತ್ರನಾದನು ಮತ್ತು ಕಂಸನ ಹಸ್ತದಿಂದ ತಪ್ಪಿಸಿಕೊಂಡನು ಎನ್ನುವುದೇ ಸ್ವಾರಸ್ಯಕರ. ದೇವಕಿಯ ಏಳನೆಯ ಗರ್ಭದಲ್ಲಿ ಬೆಳೆಯುತ್ತಿರುವ ತನ್ನ ಅಂಶದ ಶಿಶುವನ್ನು ರೋಹಿಣಿಯ ಗರ್ಭಕ್ಕೆ ಸ್ಥಳಾಂತರಿಸುವಂತೆ ಕೃಷ್ಣನು ಯೋಗಮಾಯೆಗೆ ಆದೇಶಿಸಿದ ಕೂಡಲೇ ಅವಳು ಅದನ್ನು ಶಿರಸಾವಹಿಸಿ ಮಾಡುತ್ತಾಳೆ. ಗೋಕುಲದಲ್ಲಿದ್ದ ರೋಹಿಣಿಯ ಗರ್ಭದಲ್ಲಿ ಕೃಷ್ಣನ ಅಂಶ ಪ್ರವೇಶಿಸುತ್ತದೆ. ಹೀಗೆ ಬಲರಾಮನ ಜನನ, ಕೃಷ್ಣನ ಸ್ವಾಂಶ ವಿಸ್ತರಣೆ. ಇದಲ್ಲವೆ ಭಗವಂತನ ಲೀಲೆ!

ಬಲರಾಮ ಮಹಾಬಲಶಾಲಿ. ಸಾವಿರಾರು ಆನೆ ಬಲ ಉಳ್ಳ ರಾಕ್ಷಸರನ್ನು ಲೀಲಾಜಾಲವಾಗಿ ಸಂಹರಿಸಿದ ಸಂಕರ್ಷಣ. ಗರ್ಗಮುನಿಗಳು ಮಗುವಿಗೆ ಹೆಸರಿಡುವಾಗ, “ಇವನು ಸಕಲರಿಗೂ ಆನಂದದಾಯಕನಾಗುತ್ತಾನೆ, ಇವನು ರಾಮ. ಮತ್ತು ಅತ್ಯಂತ ಬಲಶಾಲಿಯಾಗುವುದರಿಂದ ಬಲದೇವ, ಬಲರಾಮ” ಎನ್ನುತ್ತಾರೆ. ಬಲರಾಮನ ಅಪರಿಮಿತ ಲೀಲೆಗಳಲ್ಲಿ ಅವು ವ್ಯಕ್ತವಾಗಿವೆ. ಶಿಷ್ಟ ರಕ್ಷಣೆಯಲ್ಲಿ, ದುಷ್ಟರ ಶಿಕ್ಷೆಯಲ್ಲಿ ಬಲರಾಮನು ಅಸಾಧಾರಣ ಶಕ್ತಿಯನ್ನು ತೋರಿದ್ದರೆ, ತನ್ನ ಪ್ರೀತಿಪಾತ್ರರಿಗೆ ಆನಂದ ಉಂಟುಮಾಡಲು ಅಷ್ಟೇ ಉತ್ಸುಕನಾಗಿದ್ದಾನೆ. ಬಹುಶಃ ಅವನ ಕೆಲವು ಲೀಲೆಗಳತ್ತ ನೋಟ ಹರಿಸಿದರೆ ಅದು ವೇದ್ಯವಾಗುತ್ತದೆ. ಬಲರಾಮನ ಶಕ್ತಿ ಮತ್ತು ಯುಕ್ತಿ ಪ್ರದರ್ಶನದ ಕೆಲವು ಲೀಲೆಗಳನ್ನು ನೋಡೋಣ.
ಪ್ರಲಂಬಾಸುರ ಸಂಹಾರ

ಬಲರಾಮ ಮತ್ತು ಕೃಷ್ಣರು ತಮ್ಮ ಗೆಳೆಯರೊಂದಿಗೆ ವನದಲ್ಲಿ ಆಡುತ್ತಿದ್ದಾಗ ಪ್ರಲಂಬಾಸುರ ಎನ್ನುವ ದೊಡ್ಡ ರಾಕ್ಷಸನು ಅವರೊಡನೆ ಸೇರಿಕೊಂಡನು. ಬಲರಾಮ ಮತ್ತು ಕೃಷ್ಣರನ್ನು ಅಪಹರಿಸುವುದೇ ಅವನ ಉದ್ಧೇಶವಾಗಿತ್ತು. ಪ್ರಲಂಬಾಸುರನು ಅವರ ಗುಂಪಿನಲ್ಲಿ ಸೇರಿಕೊಂಡಾಗ ಭಗವಂತನಾದ ಕೃಷ್ಣನಿಗೆ ಅದು ತಿಳಿಯಿತು ಮತ್ತು ಅವನನ್ನು ಕೊಲ್ಲುವುದು ಹೇಗೆ ಎಂದು ಯೋಚಿಸಿದನು. ಬಹಿರಂಗವಾಗಿ ಅವನನ್ನು ಗೆಳೆಯನಂತೆ ಗುಂಪಿಗೆ ಸೇರಿಸಿಕೊಂಡನು. ಕೃಷ್ಣನ ತಂಡ ಮತ್ತು ಬಲರಾಮನ ತಂಡ. ಜೋಡಿಗಳಾಗಿ ಸವಾಲು ಹಾಕುವ ಆಟ. ಆಟವಾಡುತ್ತಲೇ ಅವರು ಕಾಡಿನಲ್ಲಿ ಸಾಗಿದರು. ಬಲರಾಮನ ಪಕ್ಷ ಗೆದ್ದಿತು ಮತ್ತು ಕೃಷ್ಣನಿದ್ದ ಪಕ್ಷ ಸೋತಿತು! ಇದೂ ಕೂಡ ಕೃಷ್ಣಲೀಲೆ! ಗೆದ್ದವರನ್ನು ಬೆನ್ನಿನ ಮೇಲೆ ಕೂರಿಸಿಕೊಂಡು ವನದಲ್ಲಿ ಹೋಗಬೇಕಾಗಿತ್ತು. ಕೃಷ್ಣನು ಶ್ರೀಧಾಮನನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡ. ಅದನ್ನು ಅನುಕರಿಸುತ್ತ ಗೋಪಾಲಕನ ವೇಷದಲ್ಲಿದ್ದ ಪ್ರಲಂಬಾಸುರನು ಬಲರಾಮನನ್ನು ತನ್ನ ಬೆನ್ನ ಮೇಲೆ ಕೂರಿಸಕೊಂಡ! ಕೃಷ್ಣನು ಅತ್ಯಂತ ಬಲಶಾಲಿ ಎಂದು ಭಾವಿಸಿದ್ದ ಅವನು ಕೃಷ್ಣನ ಸಹವಾಸದಿಂದ ದೂರವಿರಲು ಬಲರಾಮನನ್ನು ವನದೊಳಗೆ ಬಹುದೂರ ಕರೆದೊಯ್ದನು. ಅಸುರ ಬಲಶಾಲಿ, ನಿಜ. ಆದರೆ ಅವನು ಪರ್ವತ ಸದೃಶನಾದ ಬಲರಾಮನನ್ನು ಬೆನ್ನಿನ ಮೇಲೆ ಕೂರಿಸಿಕೊಂಡಿದ್ದ. ಅವನಿಗೆ ಬಲರಾಮನ ಭಾರದ ಅರಿವಾಯಿತು. ಆಗ ಅವನು ತನ್ನ ನಿಜವಾದ ರೂಪವನ್ನು ತೋರಿದನು. ರಾಕ್ಷಸನ ದೇಹ ವಿಸ್ತಾರವಾಯಿತು, ಕಣ್ಣುಗಳು ಉರಿಯಂತೆ ಪ್ರಜ್ವಲಿಸಿತು. ಗೋಪಾಲಕನ ವೇಷದಿಂದ ರಾಕ್ಷಸನ ಸ್ವರೂಪಕ್ಕೆ ಬದಲಾದುದನ್ನು ಕಂಡು ಮೊದಲು ಬಲರಾಮನಿಗೆ ಆಶ್ಚರ್ಯವಾಯಿತು. ಅನಂತರ ಇವನು ತನ್ನನ್ನು ಕೊಲ್ಲಲು ಕರೆದುಕೊಂಡು ಹೋಗುತ್ತಿದ್ದಾನೆ ಎನ್ನುವುದು ಅರ್ಥವಾಯಿತು. ಕೂಡಲೇ ಅವನು ರಾಕ್ಷಸನ ತಲೆಗೆ ಹೊಡೆದನು. ಬಲರಾಮನ ಮುಷ್ಟಿಯ ಹೊಡೆತದಿಂದ ರಾಕ್ಷಸನು ಸತ್ತು ಕೆಳಗೆ ಬಿದ್ದನು. ಆಗ ದೊಡ್ಡ ಬೆಟ್ಟವೊಂದು ಉರುಳಿದಂತೆ ಜೋರಾಗಿ ಶಬ್ದವಾಯಿತು. ಗೋಪಾಲಕ ಬಾಲಕರೆಲ್ಲಾ ಓಡಿ ಬಂದರು. ಭಯಂಕರ ದೃಶ್ಯವನ್ನು ನೋಡಿ “ಭಲೇ, ಭಲೇ” ಎಂದು ಬಲರಾಮನನ್ನು ಕೊಂಡಾಡಿದರು.
ಧೇನುಕಾಸುರ ವಧೆ : ಒಮ್ಮೆ ತಾಲವನದಲ್ಲಿ ಕತ್ತೆರೂಪದ ಧೇನುಕಾಸುರನು ಬಲರಾಮನನ್ನು ಕೊಲ್ಲಲು ಒದೆಯತೊಡಗಿದನು. ಆಗ ಬಲರಾಮನು ರಾಕ್ಷಸನ ಹಿಂಗಾಲುಗಳನ್ನು ಹಿಡಿದು ಗಿರಗಿರನೆ ತಿರುಗಿಸಿ ದೂರಕ್ಕೆಸೆದನು. ಅಸುರನ ಸಂಹಾರದಿಂದ ಗೋಪಾಲಕ ಬಾಲಕರು ಸಂತಸದಿಂದ ಕುಣಿದಾಡಿದರು ಮತ್ತು ನಿರಾತಂಕವಾಗಿ ವನದ
ಹಣ್ಣುಗಳನ್ನು ತಿಂದರು!

ಕಂಸ, ಸೋದರರ ಸಂಹಾರ
ಕಂಸವಧೆಯು ಕೃಷ್ಣ, ಬಲರಾಮರ ಅವತಾರದ ಮಹದುದ್ದೇಶವಲ್ಲವೇ? ವೃಂದಾವನದಲ್ಲಿ ತಮ್ಮ ಲೀಲೆಗಳನ್ನು ತೋರಿದ ಸೋದರರು ಈಗ ಮಥರಾದಲ್ಲಿ ತಮ್ಮ ಶಕ್ತಿ ಪ್ರದರ್ಶಿಸಿದರು. ಕೃಷ್ಣ ಬಲರಾಮರನ್ನು ಹೇಗಾದರೂ ಸಂಹರಿಸಬೇಕೆನ್ನುವ ಹಠ ಕಂಸನದು. ಮೊದಲು ಜೆಟ್ಟಿಗಳ ಮತ್ತು ಮಲ್ಲರ ವಿರುದ್ಧ ಕಾಳಗಕ್ಕೆ ಕಂಸನು ಆದೇಶಿಸುತ್ತಾನೆ. ಮುಷ್ಟಿಕನು ಬಲರಾಮನಿಗೆ ಬಲವಾಗಿ ಹೊಡೆದಾಗ, ಬಲರಾಮನು ಅವನನ್ನು ತಿರುಗಿಸಿ ಬಲವಾದ ಪೆಟ್ಟನ್ನು ಕೊಟ್ಟನು. ಮುಷ್ಟಿಕನು ಗಡಗಡ ನಡುಗಲಾರಂಭಿಸಿದನು ಮತ್ತು ಅವನ ಬಾಯಿಂದ ರಕ್ತ ಹರಿಯಿತು. ಯಾತನೆಯಿಂದ ಸತ್ತನು. ಈ ಜೆಟ್ಟಿಯು ಸತ್ತ ಮೇಲೆ ಕೂಟ ಎನ್ನುವ ಮಲ್ಲನು ಮುಂದೆ ಬಂದನು. ಬಲರಾಮನು ಕೂಡಲೇ ಅವನನ್ನು ಹಿಡಿದುಕೊಂಡು ಲೀಲಾಜಾಲವಾಗಿ ಕೊಂದನು. ಕೃಷ್ಣ ಬಲರಾಮರು ಹೀಗೆ ಅನೇಕ ಮಲ್ಲರನ್ನು ಕೊಂದರು.

ಕೃಷ್ಣನಿಂದ ಕಂಸನ ವಧೆಯಾದ ಮೇಲೆ ಬಲರಾಮನು ಕಂಸನ ಎಂಟು ಸೋದರರ ಸಂಹಾರದ ಹೊಣೆಯನ್ನು ವಹಿಸಿಕೊಂಡನು. ಅವನು ತನ್ನ ಕೈಗೆ ಸಿಕ್ಕ ಶಸ್ತ್ರವನ್ನು ತೆಗೆದುಕೊಂಡು ಒಬ್ಬರಾದನಂತರ ಒಬ್ಬರಂತೆ ಅವರನ್ನೆಲ್ಲ ವಧಿಸಿದನು. ಹೀಗೆ ದೇವೋತ್ತಮ ಪರಮ ಪುರುಷನು ಅಧರ್ಮಿ ರಾಕ್ಷಸರನ್ನು ಕೊಲ್ಲಲು ಅವತರಿಸುತ್ತಾನೆ ಮತ್ತು ಶಿಷ್ಟರನ್ನು ರಕ್ಷಿಸುತ್ತಾನೆ ಎನ್ನುವ ಸತ್ಯವನ್ನು ಕೃಷ್ಣ ಬಲರಾಮರು ತೋರಿಸಿಕೊಟ್ಟರು.
ದ್ವಿವಿದನನಿಗೆ ಮುಕ್ತಿ

ದ್ವಿವಿದ ಎನ್ನುವ ವಾನರ ರಾಕ್ಷಸನು ಭೌಮಾಸುರನ ಮಿತ್ರ. ಕೃಷ್ಣನು ಭೌಮಾಸುರನನ್ನು ಕೊಂದ ಮೇಲೆ ಸಿಟ್ಟಿನಿಂದ ಸೇಡಿಗೆ ಮುಂದಾಗುತ್ತಾನೆ. ದ್ವಿವಿದನು ಮಹಾಬಲಶಾಲಿ. ಋಷಿಮುನಿಗಳ ಆಶ್ರಮಕ್ಕೆ ಹೋಗಿ ಯಜ್ಞವೇದಿಕಗಳ ಮೇಲೆ ಹೇಸಿಗೆ ಮಾಡಿ ವಾತಾವರಣವನ್ನು ಮಲಿನಗೊಳಿಸುತ್ತಿದ್ದನು. ಅದನ್ನು ತಿಳಿದ ಬಲರಾಮನು ಮುನಿಗಳಿಗೆ ಸಹಾಯ ಮಾಡಲು ಅಸುರನನ್ನು ಕೊಲ್ಲಲು ತೀರ್ಮಾನಿಸಿ ತನ್ನ ಗಧೆಯನ್ನು ಎತ್ತಿಕೊಂಡು ಬಂದನು. ಅದನ್ನು ನೋಡಿ ವಾನರನು ದೊಡ್ಡ ಮರವನ್ನು ಕಿತ್ತುಕೊಂಡು ಬಲರಾಮನ ತಲೆಗೆ ಹೊಡೆದನು. ಆದರೆ ಬಲರಾಮನು ಆ ಮರವನ್ನು ತನ್ನ ಕೈಯಲ್ಲಿ ಹಿಡಿದುಕೊಂಡನು! ಪ್ರತೀಕಾರವಾಗಿ ಬಲರಾಮನು ಸುನಂದ ಎನ್ನುವ ತನ್ನ ಗಧೆಯನ್ನು ತೆಗೆದುಕೊಂಡು ವಾನರನನ್ನು ಸದೆಬಡಿಯಲು ಆರಂಭಿಸಿದನು. ವಾನರನ ತಲೆಗೆ ಪೆಟ್ಟಾಗಿ ರಕ್ತ ಸುರಿಯಿತು. ವಿಚಲಿತನಾಗದೆ ವಾನರನು ಬಲರಾಮನ ಮುಂದೆ ನಿಂತು ಮುಷ್ಟಿ ಪ್ರಹಾರ ಮಾಡಿದನು. ಬಲರಾಮನಿಗೆ ಸಿಟ್ಟು ಬಂದಿತು, ತನ್ನ ಮುಷ್ಟಿಯಿಂದ ವಾನರನಿಗೆ ಹೊಡೆದನು. ವಾನರನು ರಕ್ತಕಾರಿಕೊಂಡು ಬಿದ್ದನು. ಬಲರಾಮನ ಮಹಿಮೆಯನ್ನು ಕೊಂಡಾಡುತ್ತ ದೇವತೆಗಳು ಹೂಮಳೆಗರೆದರು.
ರೋಮಹರ್ಷಣರ ಸಂಹಾರ

ಬಲರಾಮನು ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಯಾವ ಪಕ್ಷವನ್ನೂ ಬೆಂಬಲಿಸಲು ಇಷ್ಟಪಡದೆ ತೀರ್ಥಯಾತ್ರೆಗೆ ಹೊರಟುಬಿಟ್ಟನು. ಪ್ರಮುಖ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ನೈಮಿಷಾರಣ್ಯಕ್ಕೆ ಬಂದನು. ಈ ಪವಿತ್ರ ಕ್ಷೇತ್ರ ಈಗಲೂ ಇದೆ. ಪ್ರಾಚೀನ ಕಾಲದಲ್ಲಿ ಆಧ್ಯಾತ್ಮಿಕ ಬದುಕು ಮತ್ತು ಆತ್ಮಸಾಕ್ಷಾತ್ಕಾರಗಳನ್ನು ಅರ್ಥಮಾಡಿಕೊಳ್ಳಲು ಸಾಧು ಸಂತರು ವಿದ್ವಾಂಸರು ಅಲ್ಲಿ ಸೇರುತ್ತಿದ್ದರು. ಶ್ರೇಷ್ಠ ಯಜ್ಞಗಳು ನಡೆಯುತ್ತಿದ್ದವು. ಬಲರಾಮನು ತೀರ್ಥಯಾತ್ರೆ ಮುಗಿಸಿ ಬಂದಾಗ ಅಲ್ಲಿ ಮಹಾಸಭೆ ನಡೆದಿತ್ತು. ಅಲ್ಲಿದ್ದ ಋಷಿಗಳು, ಬ್ರಾಹ್ಮಣರು ಮತ್ತು ವಿದ್ವಾಂಸರು ಎದ್ದು ನಿಂತು ಗೌರವದಿಂದ ಬಲರಾಮನನ್ನು ಬರಮಾಡಿಕೊಂಡರು. ಬಲರಾಮನು ದೇವೋತ್ತಮ ಎಂದು ತಿಳಿದಿದ್ದರಿಂದ ಅವರೆಲ್ಲರೂ ಅವನಿಗೆ ಗೌರವ ಅರ್ಪಿಸಿದರು. ಆದರೆ ವ್ಯಾಸ ಮಹರ್ಷಿಗಳ ಶಿಷ್ಯರಾದ ರೋಮಹರ್ಷಣರು ಇನ್ನೂ ವ್ಯಾಸಪೀಠದ ಮೇಲೆ ಕುಳಿತಿದ್ದುದನ್ನು ಬಲರಾಮನು ಕಂಡನು. ಅವರು ತಮ್ಮ ಆಸನದಿಂದ ಎದ್ದು ಗೌರವ ಸಲ್ಲಿಸಲಿಲ್ಲ. ವ್ಯಾಸಾಸನದ ಮೇಲೆ ಕುಳಿತಿದ್ದರಿಂದ ತಾನು ಪ್ರಭುವಿಗಿಂತ ಶ್ರೇಷ್ಠ ಎಂದುಕೊಂಡನು. ಅಲ್ಲಿ ಅನೇಕ ಬ್ರಾಹ್ಮಣ ವಿದ್ವಾಂಸರಿದ್ದರು, ಸಾಧು ಸಂತರಿದ್ದರು, ರೋಮಹರ್ಷಣ ಎತ್ತರದ ಪೀಠವನ್ನು ಸ್ವೀಕರಿಸಬಾರದಿತ್ತು ಎಂದು ಬಲರಾಮನಿಗೆ ತೋರಿತು. ಅವನ ಉದ್ಧಟತನ ಅವನಿಗೆ ಒಪ್ಪಿಗೆಯಾಗಲಿಲ್ಲ. ವ್ಯಾಸಾಸನದ ಮೇಲೆ ಕುಳಿತವರು ಯಾರನ್ನಾದರೂ ಸ್ವಾಗತಿಸಲು ಎದ್ದು ನಿಲ್ಲ ಬೇಕಾಗಿಲ್ಲ. ಆದರೆ, ಅದು ಸಾಮಾನ್ಯರ ವಿಷಯದಲ್ಲಿ ಸರಿ. ಬಲರಾನು ಸಾಮಾನ್ಯನಾಗಿರಲಿಲ್ಲ. ಕೃಷ್ಣ ಮತ್ತು ಬಲರಾಮರ ಆವಿರ್ಭಾವದ ಉದ್ದೇಶ ಧಾರ್ಮಿಕ ತತ್ತ್ವಗಳನ್ನು ಮತ್ತೆ ಸ್ಥಾಪಿಸುವುದು. ಧರ್ಮದ ಅತ್ಯುತ್ತಮ ತತ್ತ್ವವೆಂದರೆ ದೇವೋತ್ತಮ ಪರಮ ಪುರುಷನಿಗೆ ಶರಣಾಗುವುದು. ವೇದಗಳನ್ನು ಅಭ್ಯಾಸ ಮಾಡಿದ್ದರೂ ರೋಮಹರ್ಷಣನಿಗೆ ಧಾರ್ಮಿಕ ಮನೋಭಾವದ ಅತ್ಯುನ್ನತ ತತ್ತ್ವವು ಅರ್ಥವಾಗಿಲ್ಲ ಎಂದು ಬಲರಾಮನಿಗೆ ಅನ್ನಿಸಿತು. ಅವನ ಅಹಂಕಾರಕ್ಕಾಗಿ ಅವನಿಗೆ ಶಿಕ್ಷೆ ನೀಡಲು ಬಲರಾಮನು ನಿರ್ಧರಿಸಿದನು. “ಈ ಮನುಷ್ಯನು ವ್ಯಾಸರಿಂದ ವೈದಿಕ ಸಾಹಿತ್ಯವನ್ನೆಲ್ಲ ಅಭ್ಯಾಸ ಮಾಡಿದ್ದರೂ ದೇವೋತ್ತಮ ಪರಮ ಪುರುಷನ ಸನ್ನಿಧಿಯಲ್ಲಿ ನಮ್ರನಾಗಿರಲಿಲ್ಲ. ಆದುದರಿಂದ ಇವನಿಗೆ ಮರಣ ದಂಡನೆಯನ್ನು ನೀಡುವುದು ನ್ಯಾಯವಾಗಿದೆ” ಎಂದು ಬಲರಾಮನ ಯೋಚಿಸಿದ.
ಅವನು ಮತ್ತೂ ಯೋಚಿಸಿದ, “ಅಂತರಂಗದಲ್ಲಿ ಅಶುದ್ಧರಾಗಿದ್ದು ಬಹಿರಂಗವಾಗಿ ದೊಡ್ಡ ವಿದ್ವಾಂಸರು ಮತ್ತು ಧರ್ಮನಿಷ್ಠರು ಎಂದು ತೋರಿಸಿಕೊಳ್ಳುವ ವಂಚಕರಿಗೆ ಶಿಕ್ಷೆ ಕೊಡಲೆಂದೇ ನಾನು ಆವಿರ್ಭವಿಸಿದ್ದೇನೆ. ಅವರು ಇನ್ನಷ್ಟು ಪಾಪ ಮಾಡದಂತೆ ಅವರನ್ನು ಕೊಲ್ಲುವುದು ಯೋಗ್ಯವಾಗಿದೆ.”

ಬಲರಾಮನು ಕುರುಕ್ಷೇತ್ರ ಯುದ್ಧದಲ್ಲಿ ಭಾಗವಹಿಸದೆ ಶಾಂತಿ ಮಂತ್ರವನ್ನು ಜಪಿಸಿದ್ದನು. ಆದರೆ ತನ್ನ ಸ್ಥಾನದಿಂದ ಧಾರ್ಮಿಕತತ್ತ್ವಗಳ ಪುನರ್ ಸ್ಥಾಪನೆಯೂ ಮುಖ್ಯ ಕರ್ತವ್ಯ ಎಂದು ಯೋಚಿಸಿ ಬಲರಾಮನು ಒಂದು ಕುಶ ಅಥವಾ ದರ್ಭೆಯ ಒಂದು ಕಡ್ಡಿಯಿಂದ ರೋಮಹರ್ಷಣನನ್ನು ಹೊಡೆದು ಕೊಂದನು. ಕುಶ ಹುಲ್ಲಿನ ಎಸಳಿನಿಂದ ಹೊಡೆದು ಕೊಲ್ಲುವುದು ಹೇಗೆ ಸಾಧ್ಯವಾಯಿತು ಎಂದು ಯಾರಾದರೂ ಕೇಳಿದರೆ, ಪ್ರಭುವಿನ ಸ್ಥಾನವು ಅಲೌಕಿಕವಾಗಿದ್ದು, ಅವನು ತನ್ನ ಇಚ್ಛೆಯಂತೆ ಮಾಡಬಹುದು ಎಂದಷ್ಟೇ ಹೇಳಬಹುದು.
ರೋಮಹರ್ಷಣನ ಸಾವಿನಿಂದ ಅಲ್ಲಿದ್ದವರಿಗೆ ದುಃಖವಾಯಿತು. ಅಲ್ಲಿದ್ದ ಬ್ರಾಹ್ಮಣರು ಮತ್ತು ಸಾಧುಸಂತರಿಗೆ ಬಲರಾಮನು ದೇವೋತ್ತಮ ಎಂದು ತಿಳಿದಿದ್ದರೂ ಪ್ರಭುವಿನ ಕಾರ್ಯಕ್ಕೆ ಆಕ್ಷೇಪಣೆ ಮಾಡಲು ಹಿಂಜರಿಯಲಿಲ್ಲ. ಅವರು ಹೇಳಿದರು, ”ಪ್ರಭು, ನಿನ್ನ ಕಾರ್ಯವು ಧರ್ಮತತ್ತ್ವಗಳಿಗೆ ಅನುಗುಣವಾಗಿಲ್ಲ ಎಂದು ನಮಗೆ ತೋರುತ್ತದೆ. ನಾವು ಬ್ರಾಹ್ಮಣರು, ಈ ಮಹಾಯಜ್ಞದ ಅವಧಿಗೆ ರೋಮಹರ್ಷಣನನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಿದ್ದೆವು. ಅದಕ್ಕೆ ಅನುಗುಣವಾಗಿ ಅವನು ವ್ಯಾಸಾಸನದ ಮೇಲೆ ಕುಳಿತಿದ್ದನು. ವ್ಯಾಸಾಸನದ ಮೇಲೆ ಕುಳಿತವನು ಯಾರನ್ನಾದರೂ ಬರಮಾಡಿಕೊಳ್ಳಲು ನಿಲ್ಲುವುದು ಅನುಚಿತವಾಗುತ್ತದೆ. ಅಲ್ಲದೆ, ನಾವು ರೋಮಹರ್ಷಣನಿಗೆ ಆಯುಷ್ಯವನ್ನು ನೀಡಿದೆವು. ಈ ಎಲ್ಲ ವಾಸ್ತವಾಂಶಗಳನ್ನು ತಿಳಿದುಕೊಳ್ಳದೆ ನೀನು ಅವನನ್ನು ಕೊಂದದ್ದರಿಂದ ನಿನ್ನ ಕೃತ್ಯವು ಬ್ರಾಹ್ಮಣ ಹತ್ಯಗೆ ಸಮಾನ ಎನ್ನುವುದು ನಮ್ಮ ಅಭಿಪ್ರಾಯ. ನಿನಗೆ ಎಲ್ಲ ವೈದಿಕ ತತ್ತ್ವಗಳು ತಿಳಿದಿವೆ ಎಂದು ನಮಗೆ ಗೊತ್ತು. ನೀನು ಎಲ್ಲ ಯೋಗಶಕ್ತಿಯ ಒಡೆಯನು. ಆದುದರಿಂದ ಸಾಮಾನ್ಯವಾಗಿ ವೈದಿಕ ನಿಯಮಗಳು ನಿನಗೆ ಅನ್ವಯವಾಗುವುದಿಲ್ಲ. ಆದರೂ ರೋಮಹರ್ಷಣನನ್ನು ಕೊಂದದ್ದಕ್ಕಾಗಿ ದಯೆಯಿಟ್ಟು ಪ್ರಾಯಶ್ಚಿತ ಮಾಡಿಕೊಂಡು ನಿನ್ನ ನಿಷ್ಕಾರುಣ ದಯೆಯನ್ನು ತೋರಿಸಬೇಕೆಂದು ಪ್ರಾರ್ಥಿಸುತ್ತೇವೆ. ಯಾವ ರೀತಿ ಪ್ರಾಯಶ್ಚಿತ ಮಾಡಿಕೊಳ್ಳಬೇಕು ಎಂದು ನಾವು ಸೂಚಿಸುವುದಿಲ್ಲ. ಇತರರು ನಿನ್ನ ಹೆಜ್ಜೆಯಲ್ಲಿಯೇ ನಡೆಯುವಂತೆ ಯಾವುದಾದರೊಂದು ರೀತಿಯಲ್ಲಿ ಪ್ರಾಯಶ್ಚಿತವನ್ನು ಮಾಡಿಕೊಳ್ಳಬೇಕು ಎಂದಷ್ಟೇ ನಾವು ಸೂಚಿಸುತ್ತೇವೆ. ಮಹಾಪುರುಷರು ಮಾಡಿದಂತೆ ಸಾಮಾನ್ಯ ಪುರುಷನೂ ಮಾಡುತ್ತಾನೆ.”
ಬಲರಾಮ ಹೇಳಿದನು, “ಹೌದು, ಈ ಕೃತ್ಯವು ನನಗೆ ಯೋಗ್ಯವಾದದ್ದಾಗಿರಬಹುದು. ಆದರೆ ಇತರರಿಗೆ ಅಯೋಗ್ಯವಾಗುತ್ತದೆ. ಆದುದರಿಂದ ಶಾಸ್ತ್ರಗಳು ಹೇಳುವ ರೀತಿಯಲ್ಲಿ ಪ್ರಾಯಶ್ಚಿತ ಮಾಡಿಕೊಳ್ಳುವುದು ನನ್ನ ಕರ್ತವ್ಯ. ಅದರೊಂದಿಗೆ ನಾನು ರೋಮಹರ್ಷಣನಿಗೆ ಮತ್ತೆ ಪ್ರಾಣ ನೀಡಿ ದೀರ್ಘಾಯುಷ್ಯವನ್ನು ನೀಡುತ್ತೇನೆ. ಇಷ್ಟು ಮಾತ್ರವಲ್ಲ, ನೀವು ಅಪೇಕ್ಷಿಸಿದ್ದಲ್ಲಿ ನೀವು ಏನು ಕೇಳಿದರೂ ಕೊಡುತ್ತೇನೆ. ನಿಮ್ಮ ಅಪೇಕ್ಷೆಗಳನ್ನು ಈಡೇರಿಸಲು ನಾನು ಎಲ್ಲ ವರಗಳನ್ನೂ ಸಂತೋಷದಿಂದ ಕೊಡುತ್ತೇನೆ.”
ಬಲರಾಮನ ಈ ಮಾತುಗಳು ದೇವೋತ್ತಮ ಪರಮ ಪುರುಷನು ಏನನ್ನೂ ಮಾಡಲು ಸ್ವತಂತ್ರನು ಎನ್ನುವುದನ್ನು ದೃಢಪಡಿಸುತ್ತದೆ. ರೋಮಹರ್ಷಣನನ್ನು ಕೊಂದದ್ದು ಉಚಿತವಲ್ಲ ಎಂದೇ ಭಾವಿಸಿದರೂ ಅವನು ಎಲ್ಲರಿಗೂ ಲಾಭವಾಗುವ ರೀತಿಯಲ್ಲಿ ಪ್ರತಿಕಾರ್ಯವನ್ನು ಮಾಡಬಲ್ಲವನಾಗಿದ್ದನು.
ಅಲ್ಲಿದ್ದ ಪ್ರಾಜ್ಞರು ಬಲರಾಮನ ಕೃತ್ಯವನ್ನು ಅನುಚಿತ ಎಂದು ಭಾವಿಸಿದರೂ ಪ್ರಭುವು ಇನ್ನೂ ಹೆಚ್ಚಿನ ಲಾಭವಾಗುವಂತೆ ಪರಿಹಾರವನ್ನು ನೀಡಬಲ್ಲ ಎನ್ನುವುದನ್ನು ಅರ್ಥಮಾಡಿಕೊಂಡರು. ಬಲರಾಮನು ರೋಮಹರ್ಷಣನನ್ನು ಕೊಂದ ಮಹತ್ಕಾರ್ಯದ ಯಶಸ್ಸನ್ನು ಕುಂದಿಸಬಾರದೆಂದು ಅವರು ಈ ರೀತಿ ಕೋರಿದರು, “ರೋಮಹರ್ಷಣನನ್ನು ಕೊಲ್ಲಲು ನೀನು ಕುಶದ ಆಯುಧವನ್ನು ಅಸಾಧಾರಣವಾಗಿ ಬಳಸಿರುವೆ. ಅವನನ್ನು ಕೊಲ್ಲಬೇಕೆಂದು ನೀನು ಉದ್ದೇಶಿಸಿದ್ದರಿಂದ ಅವನಿಗೆ ಮತ್ತೆ ಪ್ರಾಣವನ್ನು ಕೊಡಬಾರದು. ಹಾಗೆಯೇ ಸಾಧುಸಂತರೂ ಬ್ರಾಹ್ಮಣರೂ ಅದ ನಾವು ಸ್ವಪ್ರೇರಣೆಯಿಂದ ಅವನಿಗೆ ದೀರ್ಘಾಯುಸ್ಸನ್ನು ನೀಡಿದೆವು. ಅದೂ ನಿರರ್ಥಕವಾಗಬಾರದು.” ಹೀಗೆ ಸಭೆಯಲ್ಲಿದ್ದ ಬ್ರಾಹ್ಮಣ ವಿದ್ವಾಂಸರ ಪ್ರಾರ್ಥನೆಯು ಸಂದಿಗ್ಧವಾಯಿತು. ಆದುದರಿಂದ ದೇವೋತ್ತಮ ಪರಮ ಪುರುಷನು ತನ್ನ ಉನ್ನತ ಸ್ಥಾನಕ್ಕೆ ಯೋಗ್ಯವಾದ ರೀತಿಯಲ್ಲಿ ಸಮಸ್ಯೆಯನ್ನು ಬಿಡಿಸಿದನು, “ಮಗನು ತಂದೆಯ ದೇಹದಿಂದ ಬಂದಿರುವುದರಿಂದ ಮಗನು ತಂದೆಯ ಪ್ರತಿನಿಧಿ ಎಂದು ವೇದಗಳ ಆದೇಶವಿದೆ. ರೋಮಹರ್ಷಣನ ಮಗ ಉಗ್ರಶ್ರವನು ಇನ್ನು ಮುಂದೆ ತನ್ನ ತಂದೆಯ ಸ್ಥಾನವನ್ನು ಪಡೆದುಕೊಂಡು ಪುರಾಣ ಪ್ರವಚನವನ್ನು ಮುಂದುವರಿಸಲಿ. ರೋಮಹರ್ಷಣನಿಗೆ ದೀರ್ಘಾಯುಷ್ಯ ಇರಲಿ ಎಂದು ನೀವು ಅಪೇಕ್ಷಿಸಿದುದರಿಂದ ಅವನ ಮಗನು ಈ ವರವನ್ನು ಪಡೆಯುತ್ತಾನೆ.”
ಅನಂತರ ಬಲರಾಮನು ರೋಮಹರ್ಷಣನ ಮಗನಿಗೆ ವರವನ್ನು ಕೊಡುವುದಲ್ಲದೆ ತನ್ನಿಂದ ಬೇರೆ ಯಾವುದಾದರೂ ವರವನ್ನು ಕೇಳಬೇಕು, ಅದನ್ನು ತಾನು ಕೂಡಲೇ ನಡೆಸಿಕೊಡುತ್ತೇನೆ ಎಂದು ಸಾಧುಸಂತರಿಗೆ ಮತ್ತು ಬ್ರಾಹ್ಮಣರಿಗೆ ಹೇಳಿದನು. ಬಲರಾಮನು ಕ್ಷತ್ರಿಯ ಸ್ಥಾನದಲ್ಲಿ ನಿಂತು ರೋಮಹರ್ಷಣನನ್ನು ಕೊಂದದಕ್ಕೆ ಪ್ರಾಯಶ್ಚಿತವನ್ನು ಮಾಡಿಕೊಳ್ಳಲು ಮುಂದಾದನು. ಈ ವಿಷಯದಲ್ಲಿ ಅವರ ಸಲಹೆಯನ್ನು ಸಂತೋಷದಿಂದ ಒಪ್ಪಿಕೊಳ್ಳುವ ಸರಳತೆಯನ್ನು ತೋರಿದನು. ಅವನ ಉದ್ದೇಶವು ಬ್ರಾಹ್ಮಣರಿಗೆ ಅರ್ಥವಾಯಿತು. ತಮಗೆ ಉಪಯೋಗವಾಗುವಂತಹ ರೀತಿಯಲ್ಲಿ ಅವನು ತನ್ನ ಕೃತ್ಯಕ್ಕಾಗಿ ಪ್ರಾಯಶ್ಚಿತ ಮಾಡಿಕೊಳ್ಳಬಹುದು ಎಂದು ಸೂಚಿಸಿದರು. ಅನಂತರ ಹೇಳಿದರು, “ಬಲ್ವಲ ಎನ್ನುವ ಬಲಶಾಲಿಯಾದ ಅಸುರನಿದ್ದಾನೆ. ಯಜ್ಞ ಮಾಡುವ ಸ್ಥಳಗಳಿಗೆ ಬಂದು ನಮ್ಮ ಕಾರ್ಯಗಳಿಗೆ ವಿಘ್ನವನ್ನು ಮಾಡುತ್ತಾನೆ. ಈ ರಾಕ್ಷಸನನ್ನು ಕೊಲ್ಲಬೇಕೆಂದು ಪ್ರಾರ್ಥಿಸುತ್ತೇವೆ. ನೀನು ಅವನನ್ನು ಕೊಂದರೆ, ನಮ್ಮ ಅಭಿಪ್ರಾಯದಂತೆ ಪ್ರಾಯಶ್ಚಿತವಾಗುತ್ತದೆ. ಬಲ್ವಲನನ್ನು ಕೊಂದ ಮೇಲೆ ನೀನು 12 ತಿಂಗಳ ಕಾಲ ತೀರ್ಥಯಾತ್ರೆಯನ್ನು ಮುಂದುವರಿಸಬಹುದು. ಹಾಗೂ ನೀನು ಕಲ್ಮಷದಿಂದ ಸಂಪೂರ್ಣವಾಗಿ ಮುಕ್ತನಾಗುತ್ತೀಯೆ. ಇದು ನಮ್ಮ ಸಲಹೆ.”
ಬಲ್ವಲನ ಮುಕ್ತಿ
ಬಲರಾಮನು ಬಲ್ವಲ ರಾಕ್ಷಸನನ್ನು ಎದುರಿಸಲು ಸಿದ್ಧತೆ ಮಾಡಿಕೊಂಡನು. ಬಲ್ವಲನು ಆಕಾಶದಲ್ಲಿ ಹಾರಾಡುತ್ತಿದ್ದನು. ಬಲರಾಮನು ಅವನನ್ನು ತನ್ನ ಹಲಾಯುಧದಿಂದ ಕೆಳಕ್ಕೆಳೆದು ಗಧೆಯಿಂದ ಅವನ ತಲೆಯನ್ನು ಜಜ್ಜಿಹಾಕಿದನು. ಅವನ ತಲೆ ಸೀಳಿತು ಮತ್ತು ರಕ್ತ ಹರಿಯಿತು. ಹೀಗೆ ಧರ್ಮನಿಷ್ಠ ಬ್ರಾಹ್ಮಣರಿಗೆ ದೊಡ್ಡ ಪೀಡೆಯಾಗಿದ್ದ ರಾಕ್ಷಸನು ನೆಲಕ್ಕೆ ಬಿದ್ದನು. ಇದನ್ನು ಕಂಡು ನೈಮಿಷಾರಣ್ಯದ ನಿವಾಸಿಗಳು, ಸಾಧುಗಳು ಮತ್ತು ಬ್ರಾಹ್ಮಣರು ಆನಂದತುಂದಿಲರಾದರು.

ಈ ಘಟನೆಯ ಅನಂತರ ಬಲರಾಮನು ತೀರ್ಥಯಾತ್ರೆಯನ್ನು ಆರಂಭಿಸಿದನು. ಶ್ರೀಮದ್ ಭಾಗವತದ ವರ್ಣನೆಗಳಿಂದ ಬಲರಾಮನು ವಿವಿಧ ಯತ್ರಾಸ್ಥಳಗಳಿಗೆ ಹೋದಾಗ ತಪ್ಪದೆ ವೈದಿಕ ಪದ್ಧತಿಯನ್ನು ಅನುಸರಿಸಿದನು ಎನ್ನುವುದು ಸ್ಪಷ್ಟವಾಗುತ್ತದೆ.
ಅವನು ತನ್ನ 12 ತಿಂಗಳ ಯಾತ್ರೆಯನ್ನು ಮುಗಿಸಿ ಪುನಃ ಪ್ರಭಾಸ ಕ್ಷೇತ್ರಕ್ಕೆ ಹಿಂದಿರುಗಿದನು. ಅಲ್ಲಿ ಅವನಿಗೆ ಕುರುಕ್ಷೇತ್ರ ಯುದ್ಧದಲ್ಲಿ ಅಪಾರ ಸಾವು ನೋವಾಗಿದ್ದು ತಿಳಿದು ಬರುತ್ತದೆ. ಇದರಿಂದ ಭೂಭಾರವು ಕಡಮೆಯಾಯಿತೆಂಬ ಅಭಿಪ್ರಾಯದಿಂದ ಸಮಾಧಾನವಾಗುತ್ತದೆ. ಕುರುಕ್ಷೇತ್ರದಲ್ಲಿ ಅಂತಿಮ ಹೋರಾಟ ನಡೆದಿದೆ ಎಂದು ತಿಳಿದಾಗ ಬಲರಾಮನು ಅಲ್ಲಿಗೆ ತೆರಳಿದನು. ಭೀಮಸೇನ ಮತ್ತು ದುರ್ಯೋಧನ ದ್ವಂಧ್ವ ಯುದ್ಧದಲ್ಲಿ ತೊಡಗಿರುತ್ತಾರೆ. ಇಬ್ಬರಿಗೂ ಹಿತೈಷಿಯಾಗಿ ಯುದ್ಧವನ್ನು ತಡೆಯಲು ಬಲರಾಮನು ಪ್ರಯತ್ನಿಸುತ್ತಾನೆ. ಆದರೆ ಅವರಿಬ್ಬರೂ ಗಧಾಯುದ್ಧವನ್ನು ಮಾಡಲು ಉತ್ಸುಕರಾಗಿದ್ದರು. ಆದುದರಿಂದ ಬಲರಾಮನು ವಿಷಯವನ್ನು ಬೆಳೆಸಲು ಇಚ್ಛಿಸದೆ ದ್ವಾರಕಾಗೆ ಹಿಂದಿರುಗಿದನು.
ಬಲರಾಮನು ಪುನಃ ನೈಮಿಷಾರಣ್ಯಕ್ಕೆ ಬಂದನು. ಸಾಧುಸಂತರು ಸ್ವಾಗತಿಸಿದರು. ಪುಣ್ಯಸ್ಥಳ ನೈಮಿಷಾರಣ್ಯದಲ್ಲಿ ಹಲವು ಯಜ್ಞಗಳನ್ನು ಮಾಡುವಂತೆ ಅವರು ಅವನ ಮನವೊಲಿಸಿದರು. ಸಾಮಾನ್ಯರ ಕರ್ತವ್ಯದ ಯಾಗಗಳನ್ನು ಬಲರಾಮನು ಮಾಡಬೇಕಾಗಿರಲಿಲ್ಲ. ದಿವ್ಯ ಪುರುಷನಾದ ಬಲರಾಮನು ಎಲ್ಲ ಯಜ್ಞಗಳ ಭೋಕ್ತೃ. ಆದರೆ ಅವನು ಮಾಡಿದುದರಲ್ಲಿ ಉದ್ದೇಶವಿತ್ತು – ಸಾಮಾನ್ಯ ಮನುಷ್ಯರಿಗೆ ವೇದಗಳ ಆದೇಶದಂತೆ ಹೇಗೆ ನಡೆದುಕೊಳ್ಳಬೇಕು ಎನ್ನುವುದರ ಮೇಲ್ಪಂಕ್ತಿ ಹಾಕಿಕೊಡುವುದು. ದೇವೋತ್ತಮ ಪರಮ ಪುರುಷನಾದ ಬಲರಾಮನು ಅಲ್ಲಿದ್ದವರಿಗೆ ಜೀವಿ ಮತ್ತು ಬ್ರಹ್ಮಾಂಡದ ನಡುವಣ ಸಂಬಂಧ, ಪರಿಪೂರ್ಣತೆಯ ಅತ್ಯುತ್ತಮ ಗುರಿ ಹೀಗೆ ಅನೇಕ ವಿಷಯಗಳ ಬಗೆಗೆ ಬೋಧಿಸಿದನು.
ವೃಂದಾವನಕ್ಕೆ ಭೇಟಿ, ದಿವ್ಯಲೀಲೆ
ತನ್ನನ್ನು ಪೋಷಿಸಿದ ನಂದ, ಯಶೋದೆಯರನ್ನು ನೋಡಬೇಕೆಂದು ಬಲರಾಮನಿಗೆ ಮನಸ್ಸಾಗುತ್ತದೆ. ಕೃಷ್ಣಬಲರಾಮರನ್ನು ನೋಡಬೇಕೆಂದು ವೃಂದಾವನ ನಿವಾಸಿಗಳೂ ಕಾದಿದ್ದರು. ಬಲರಾಮನು ವೃಂದಾವನಕ್ಕೆ ಹಿಂದಿರುಗಿದಾಗ ಗೋಪ ಬಾಲಕರು ಮತ್ತು ಗೋಪಿಯರು ಬೆಳೆದು ದೊಡ್ಡವರಾಗಿದ್ದರು. ಆದರೆ ಅವನನ್ನು ನೋಡುತ್ತಲೇ ಆಲಿಂಗಿಸಿಕೊಂಡರು. ಅನಂತರ ಅವನು ನಂದ ಮಹಾರಾಜ ಮತ್ತು ಮಾತೆ ಯಶೋದಾಗೆ ಪ್ರಣಾಮ ಅರ್ಪಿಸಿದನು. ಭಾವೋದ್ರೇಕಗೊಂಡ ಅವರು ಬಲರಾಮನನ್ನು ತಮ್ಮ ಬಳಿ ಕೂರಿಸಿಕೊಂಡು ಪ್ರೀತಿಯ ಮಳೆಗರೆದರು.

ಎಲ್ಲರೂ ಬಲರಾಮನನ್ನು ಸುತ್ತುವರಿದು ಕುಳಿತರು. ವೃಂದಾವನ ನಿವಾಸಿಗಳು ಕೃಷ್ಣನಿಗಾಗಿ ಸರ್ವತ್ಯಾಗಮಾಡಿದ್ದರು. ತಮ್ಮ ಗಾಢವಾದ ಕೃಷ್ಣಪ್ರೇಮದಿಂದ ಅವರು ಸ್ವರ್ಗಲೋಕಗಳಿಗೆ ಹೋಗಬೇಕೆಂದಾಗಲಿ, ಶ್ರೀಮಂತಿಕೆ ಜೀವನವನ್ನಾಗಲೀ ಬಯಸಿರಲಿಲ್ಲ. ಗೋಪಾಲಕರಾಗಿ ಹಳ್ಳಿಯ ಸರಳ ಜೀವನದಲ್ಲಿ ತೃಪ್ತರಾಗಿದ್ದರು. ಸದಾ ಕೃಷ್ಣನ ಯೋಚನೆಯಲ್ಲಿ ಮಗ್ನರಾಗಿದ್ದರು. ಯಾವ ಲಾಭವನ್ನೂ ಬಯಸಲಿಲ್ಲ. ಬಲರಾಮನನ್ನು ನೋಡಿ ಗೋಪಿಯರು ಹರ್ಷದಿಂದ ಕೃಷ್ಣನ ಯೋಗಕ್ಷೇಮ ವಿಚಾರಿಸಿದರು. ನಮ್ಮನ್ನು, ಸ್ನೇಹಿತರನ್ನು ನೆನಪು ಮಾಡಿಕೊಳ್ಳುತ್ತಾನೆಯೆ? ತಂದೆ ನಂದ ತಾಯಿ ಯಶೋದಳನ್ನು ಸ್ಮರಿಸುತ್ತಾನಾ? ಅವರನ್ನು ನೋಡಲು ಬರುವ ಆಲೋಚನೆ ಅವನಿಗಿದೆಯೇ? ದ್ವಾರಕೆಯ ಸುಸಂಸ್ಕೃತ ಸ್ತ್ರೀಯರ ಮಧ್ಯೆ ಕೃಷ್ಣನು ನಮ್ಮನ್ನು ಮರೆತಿರಬಹುದು. ನಮ್ಮ ಆತ್ಮೀಯ ಸಂಬಂಧವನ್ನು ಬಿಟ್ಟು ಹೊರಟು ಹೋದನು. ನಾವು ಅವನನ್ನು ಸದಾ ಸ್ಮರಿಸಿಕೊಳ್ಳುತ್ತೇವೆ. ನಮಗೆ ಸವಿ ಮಾತಿನಿಂದ ಮೋಸ ಮಾಡಿದನು. ನಾವಂತೂ ಹಳ್ಳಿ ಹುಡುಗಿಯರು. ಆದುದರಿಂದ ಕೃಷ್ಣನು ನಮಗೆ ಮೋಸ ಮಾಡುವುದು ಸಾಧ್ಯವಾಯಿತು. ಆದರೆ ದ್ವಾರಕೆಯ ಹೆಂಗಸರ ವಿಷಯವೇನು? ಅವರು ನಮ್ಮಷ್ಟು ದಡ್ಡರಲ್ಲ! ಅವರು ನಮ್ಮಂತೆ ಅವನ ಮಾತಿಗೆ ದಾರಿ ತಪ್ಪಲಾರರು. ಆದರೆ ಅವನ ಸಿಹಿ ಮಾತಿನಿಂದ ಯಾರಾದರೂ ಮರುಳಾಗಿಬಿಡುತ್ತಾರೆ.“
ಕೃಷ್ಣನ ನೆನಪಿನಿಂದ ಗೋಪಿಯರಿಗೆ ಕಣ್ಣಿರು ತಡೆಯಲಾಗಲಿಲ್ಲ. ಅವರ ಭಾವೋನ್ಮಾದ ಬಲರಾಮನಿಗೆ ಅರ್ಥವಾಯಿತು. ಅವರನ್ನು ಸಮಾಧಾನ ಮಾಡಲು ಬಯಸಿದನು. ಅವನು ಮಾತಿನಲ್ಲಿ ನಿಪುಣ. ಕೃಷ್ಣನ ಕಥೆಯನ್ನು ಎಷ್ಟು ಚೆನ್ನಾಗಿ ಹೇಳಿದನೆಂದರೆ, ಗೋಪಿಯರಿಗೆ ತೃಪ್ತಿಯಾಯಿತು. ವೃಂದಾವನದ ಕಾಡಿನಲ್ಲಿ ತನ್ನದೇ ಆದ ಸಖಿಯರೊಂದಿಗೆ ಸುತ್ತಾಡಿದನು. ರಾಸನೃತ್ಯ ಸವಿದನು. ಯಮುನೆಯಲ್ಲಿ ಜಲಕ್ರೀಡೆಯಾಡಿದನು. ಹೀಗೆ ಬಲರಾಮನು ಎರಡು ತಿಂಗಳ ಕಾಲ ಗೋಪಿಯರ ಜೊತೆಯಲ್ಲಿ ದಿವ್ಯಲೀಲೆಗಳಲ್ಲಿ ತೊಡಗಿದ್ದನು.
ಯಮುನೆಗೆ ಶಿಕ್ಷೆ

ಬಲರಾಮನು ಯಮುನಾ ನದಿಯಲ್ಲಿ ತನ್ನ ಸಖಿಯರ ಸಹವಾಸ ಸವಿಯಲು ಬಯುಸಿದನು. ಆದುದರಿಂದ ಹತ್ತಿರಕ್ಕೆ ಬರುವಂತೆ ಯಮುನಾ ನದಿಯನ್ನು ಕರೆದನು. ಅವನು ಮತ್ತಿನಲ್ಲಿದ್ದಾನೆ ಎಂದು ಭಾವಿಸಿ ಯಮುನೆ ಅವನ ಅಪ್ಪಣೆಯನ್ನು ಅಲಕ್ಷಿಸಿದಳು. ಬಲರಾಮನಿಗೆ ಸಿಟ್ಟು ಬಂದಿತು. ತನ್ನ ನೇಗಿಲಿನಿಂದ ಭೂಮಿಯನ್ನು ಕೆರೆದು ಯಮುನೆಗೆ ಶಿಕ್ಷೆ ಕೊಡಲು ನಿರ್ಧರಿಸಿದ. ಯಮುನಾ ನದಿಯನ್ನು ಸಣ್ಣ ಸಣ್ಣ ಹೊಳೆಗಳನ್ನಾಗಿ ಮಾಡುವುದಾಗಿ ಬೆದರಿಸಿದ. ಯುಮುನೆಯು ಹೆದರಿಕೊಂಡು ಬಲರಾಮನಲ್ಲಿ ಕ್ಷಮೆ ಯಾಚಿಸಿದಳು. ಬಲರಾಮನು ಅವಳನ್ನು ಕ್ಷಮಿಸಿದನು. ನದಿಯು ಹತ್ತಿರ ಬಂದಾಗ ಬಲರಾಮನು ತನ್ನ ಸಖಿಯರೊಂದಿಗೆ ಜಲಕ್ರೀಡೆಯಾಡಿದನು. ನೇಗಿಲು ಕೆರೆದಿದ್ದರಿಂದ ಈಗಲೂ ಯಮುನಾ ನದಿಗೆ ಹಲವು ಸಣ್ಣ ಸಣ್ಣ ಶಾಖೆಗಳುಂಟು.
ರುಕ್ಮಿಯ ವಧೆ

ಅನಿರುದ್ಧನ ಮದುವೆಯಲ್ಲಿ ಬಲರಾಮ, ಕೃಷ್ಣ ಮತ್ತಿತರರು ರುಕ್ಮಿಯ ಅರಮನೆಗೆ ಹೋದರು. ವಿವಾಹ ಸಮಾರಂಭ ಮುಗಿದ ಮೇಲೆ ರುಕ್ಮಿಯು ಬಲರಾಮನನ್ನು ಪಗಡೆಯಾಟಕ್ಕೆ ಆಹ್ವಾನಿಸುತ್ತಾನೆ. ಮೊದಲನೆಯ ಆಟದಲ್ಲಿ ರುಕ್ಮಿಯು ಗೆಲ್ಲುತ್ತಾನೆ. ಆಗ ಕಲಿಂಗ ರಾಜನು ನಕ್ಕುಬಿಟ್ಟನು. ಮುಂದಿನ ಆಟದಲ್ಲಿ ಬಲರಾಮನು ಗೆದ್ದನು. ಆದರೆ ರುಕ್ಮಿಯು ಸೋಲನ್ನು ಒಪ್ಪಲಿಲ್ಲ. ಬಲರಾಮ ಗೆದ್ದಿದ್ದಾನೆ ಎಂದು ಅಶರೀರವಾಣಿಯಾಯಿತು. ಆದರೂ ರುಕ್ಮಿ ಒಪ್ಪದೆ, ಬೇರೆ ರಾಜರ ಕುಮ್ಮಕ್ಕಿನಿಂದ ಬಲರಾಮನು ದನಕಾಯಲು ಯೋಗ್ಯನೆಂದೂ ಪಗಡೆಯಾಟ ಅವನಿಗೆ ಗೊತ್ತೇ ಇಲ್ಲ ಎಂದೂ ಅಪಹಾಸ್ಯ ಮಾಡಿದನು. ಹೀಗೆ ಅವಮಾನಗೊಂಡ ಬಲರಾಮನು ಕೋಪಗೊಂಡು ತನ್ನ ಗಧೆಯಿಂದ ರುಕ್ಮಿಯನ್ನು ಹೊಡೆದು ಕೊಂದು ಹಾಕಿದನು. ಅಪಹಾಸ್ಯ ಮಾಡಿದ ಇತರರನ್ನು ಅಟ್ಟಿಸಿಕೊಂಡು ಹೋಗಿ ಬಡಿದನು.
ಸಾಂಬನ ವಿವಾಹ

ಶ್ರೀಕೃಷ್ಣನ ಮಗನಾದ ಸಾಂಬನು ದುರ್ಯೋಧನನ ಮಗಳು ಲಕ್ಷ್ಮಣೆಯನ್ನು ವಿವಾಹವಾಗಲು ಸ್ವಯಂವರದ ಸಭೆಯಿಂದ ಅವಳನ್ನು ಅಪಹರಿಸಿಕೊಂಡು ಹೋದನು. ಇದರಿಂದ ಕುಪಿತರಾದ ಕೌರವರು ಸಾಂಬನನ್ನು ಬಂಧಿಸಿದರು. ಶಾಂತಿಯ ಪ್ರತಿಪಾದಕನಾದ ಬಲರಾಮನು ಕೌರವರೊಂದಿಗೆ ಯುದ್ಧ ಮಾಡುವುದು ಬೇಡ, ತಾನೇ ಅವರೊಡನೆ ಮಾತನಾಡಿ ಸಾಂಬನನ್ನು ಅವನ ಹೆಂಡತಿ ಲಕ್ಷ್ಮಣೆಯನ್ನು ಕರೆತರುತ್ತೇನೆ ಎಂದು ಯಾದವರಿಗೆ ಹೇಳಿ, ಹಸ್ತಿನಾಪುರಕ್ಕೆ ಬರುತ್ತಾನೆ. ಕೌರವರಿಗೆ ತಾನು ಬಂದಿರುವ ವಿಷಯವನ್ನು ಹೇಳಿ ಕಳುಹಿಸುತ್ತಾನೆ. ಆದರೆ ಕೌರವರು ಯಾದವರನ್ನು ತಮ್ಮ ದಾಸರೆಂದೂ, ತಾವು ಯಾರ ಅಪ್ಪಣೆಯನ್ನು ಪಾಲಿಸುವುದಿಲ್ಲವೆಂದೂ ಹೇಳಿದರು. ಶಾಂತಿ ಸಂಧಾನಕ್ಕೆ ಬಂದಿದ್ದ ಬಲರಾಮನು ಎಷ್ಟು ಕುಪಿತನಾದನೆಂದರೆ ಇಡೀ ಬ್ರಹ್ಮಾಂಡವನ್ನು ಸುಟ್ಟು ಬೂದಿ ಮಾಡುವ ಹಾಗೆ ಕಂಡನು. ಅವನು ತನ್ನ ಹಲಾಯುಧವನ್ನು ತೆಗೆದುಕೊಂಡು ಅದರಿಂದ ನೆಲವನ್ನು ಕುಟ್ಟಲು ಪ್ರಾರಂಭಿಸಿದನು. ಇದರಿಂದ ಇಡೀ ಹಸ್ತಿನಾಪುರವು ಭೂಮಿಯಿಂದ ಬೇರೆಯಾಯಿತು. ಆನಂತರ ಬಲರಾಮನು ಹಸ್ತಿನಾಪುರವನ್ನು ಹರಿಯುತ್ತಿದ್ದ ಗಂಗೆಯ ನೀರಿನ ಕಡೆಗೆ ಎಳೆಯಲು ಪ್ರಾರಂಭಿಸಿದನು. ಇದನ್ನು ನೋಡಿ ಹೆದರಿದ ಕೌರವರು ತತ್ಕ್ಷಣ ಸಾಂಬನನ್ನು ಅವನ ಪತ್ನಿ ಲಕ್ಷ್ಮಣೆಯನ್ನು ಬಲರಾಮನಿಗೆ ತಂದೊಪ್ಪಿಸಿ ಅವನ ಕ್ಷಮೆ ಬೇಡಿದರು.

ಹೀಗೆ ಬಲರಾಮನ ಯುಕ್ತಿ, ಶಕ್ತಿ ಅಪರಮಿತ. ಅವನು ಶ್ರೀ ಕೃಷ್ಣನ ಮೊದಲ ವಿಸ್ತರಣೆ. ಅವನು ಸರ್ವಶಕ್ತ. ಬಲವೆಂದರೆ ಕೇವಲ ದೈಹಿಕ ಬಲವಲ್ಲ, ಆಧ್ಯಾತ್ಮಿಕ ಶಕ್ತಿ ಕೂಡ. ಆದುದರಿಂದ ಬಲರಾಮ ಜಯಂತಿಯಂದು ಭಕ್ತರು ಅವನಿಗೆ ಅತ್ಯಂತ ನಿಷ್ಠೆಯಿಂದ ಪ್ರಾರ್ಥನೆ ಸಲ್ಲಿಸಿದರೆ, ಅವನು ಅವರನ್ನು ಅನುಗ್ರಹಿಸುತ್ತಾನೆ.






Leave a Reply