ಸ್ಥಳ: ನವವೃಂದಾವನ, ವೆಸ್ಟ್ ವರ್ಜೀನಿಯಾ, ದಿನಾಂಕ: 25ನೇ ಜೂನ್, 1976 ಶ್ರೀಲ ಪ್ರಭುಪಾದರು ಮತ್ತು ಅವರ ಕೆಲವು ಶಿಷ್ಯರುಗಳೊಂದಿಗೆ ನಡೆದ ಸಂವಾದ
– ಅನುವಾದ: ಡಾ.ಕೆ.ವೈ.ಬಾಲರಾಜ್
ಶ್ರೀಲ ಪ್ರಭುಪಾದ : ನೀವು ಸೂಕ್ಷ್ಮವಾಗಿ ಪರಿಗಣಿಸಿ ನೋಡಿದರೆ ಈ ಎಲ್ಲ ದೈವೀಕ ಗುಣಗಳು ಜೀವನದ ಅಭಿವೃದ್ಧಿಗಾಗಿಯೇ ಎಂಬುದು ಆಧುನಿಕ ಮನುಷ್ಯನಿಗೆ ಗೊತ್ತಿಲ್ಲ. ಇದನ್ನು ಭಗವದ್ಗೀತೆಯ 16ನೇ ಅಧ್ಯಾಯದಲ್ಲಿ ವಿವರಿಸಲಾಗಿದೆ. ಇಂದು ದೈವೀಕ ಗುಣಗಳನ್ನು ಹೊಂದಿರುವ ಯಾವ ಶಿಕ್ಷಣವು ಇಲ್ಲ ಮತ್ತು ಜನರಿಗೆ ಅದರಲ್ಲಿ ಆಸಕ್ತಿಯೂ ಇಲ್ಲ.

ಈಗಿನ ವಿದ್ಯಾರ್ಥಿಗಳು ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಕಲೆಯ ವಿಭಾಗಗಳಿಗೆ (Arts Classes)ಸೇರುವುದಿಲ್ಲ ಅವರು ಕೇವಲ ತಾಂತ್ರಿಕ ಪ್ರಕ್ರಿಯೆಗಳನ್ನು ಕಲಿಯುತ್ತಿದ್ದಾರೆ.
(ಶಿಷ್ಯನಿಗೆ 🙂 ಓದುತ್ತಾ ಹೋಗಿ.
ಶಿಷ್ಯ : ”ಯಾರು ಪಾರಮಾರ್ಥಿಕ ಪ್ರಕೃತಿಯಲ್ಲಿ ಸ್ಥಿತರಾಗಿರುತ್ತಾರೋ ಅವರು ಮೋಕ್ಷದ ಪಥದಲ್ಲಿ ಪ್ರಗತಿಯನ್ನು ಹೊಂದುತ್ತಾರೆ. ಯಾರು ತಾಮಸಿಕ ಗುಣ ಮತ್ತು ರಾಜಸಿಕ ಗುಣದಲ್ಲಿ ಕಾರ್ಯ ಮಾಡುತ್ತಾರೋ ಅಂತಹವರಿಗೆ ಮೋಕ್ಷದ ಸಾಧ್ಯತೆ ಇಲ್ಲ.”
ಶ್ರೀಲ ಪ್ರಭುಪಾದ : ಜನರು ಹೇಳುತ್ತಾರೆ ! ”ಮೋಕ್ಷದ ಬಗ್ಗೆ ನಮಗೇಕೆ ಕಾಳಜಿ. ಅದು ಕಷ್ಟಕರವಾದದ್ದು. ನಾವು ಅನೇಕ ವಸ್ತುಗಳನ್ನು ತ್ಯಾಗಮಾಡಬೇಕು. ನಮಗೆ ಮೋಕ್ಷಬೇಡ. ಅದು ತೀರ ಅಸಂಬದ್ಧವಾದದ್ದು. ನೀವು ನಿಮ್ಮ ಮೋಕ್ಷವನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ, ನಮಗೆ ಅದು ಬೇಡ.”
ಇದೇ ಒಂದು ಸಮಸ್ಯೆ. ನೀವು ಈ ಹಿಂದೆ ಹೇಳಿದಂತೆ ಈ ಜನರಿಗೆ ”ಮೋಕ್ಷ’ ಎಂದರೆ ”ನಾನು ನನ್ನ ಇಷ್ಟ ಬಂದಂತೆ ಏನು ಬೇಕಾದರೂ ಮಾಡಬಹುದು. ಆದರೆ ನಿಜವಾಗಿಯೂ ಯಾರೂ ಆ ರೀತಿ ಮಾಡುವ ಹಾಗಿಲ್ಲ. ಆದರೂ ವ್ಯಕ್ತಿಯು ತಾನು ಸ್ವತಂತ್ರನು ಎಂದು ತಿಳಿದುಕೊಳ್ಳುತ್ತಿದ್ದಾನೆ.
“ನಿಮ್ಮ ಇಷ್ಟದ ಹಾಗೆ ನೀವು ಏನಾದರೂ ಮಾಡಲು ಸಾಧ್ಯವೇ?
“ಇಲ್ಲ, ನಿಜವಾಗಿಯೂ ಇಲ್ಲ.”
ಆದರೂ ಅವನು ತಾನು ಸ್ವತಂತ್ರನು ಎಂದು ತಿಳಿದುಕೊಳ್ಳುತ್ತಿದ್ದಾನೆ. ಆದ್ದರಿಂದಲೇ – ಅವನು ಮೂಢ. ಅವನದು ನಾಯಿಯ ಜೀವನ.
ನಾಯಿಯು ತಾನು ಸ್ವತಂತ್ರವೆಂದುಕೊಂಡು ಜಿಗಿಯುತ್ತದೆ ಮತ್ತು ಬೊಗಳುತ್ತದೆ. ಆದರೆ ತನ್ನ ಒಡೆಯ ಬಂದಕೂಡಲೇ ತನ್ನನ್ನು ಸರಪಳಿಯಿಂದ ಕಟ್ಟಿಹಾಕುತ್ತಾನೆ ಎಂದು ಅದು ಮರೆಯುತ್ತದೆ. ಅದರ ಒಡೆಯ ಹಾಗೇ ಮಾಡುತ್ತಾನೆ. ಆದರೂ ನಾಯಿಯು ”ನಾನು ಮುಕ್ತ ಅಥವಾ ಸ್ವತಂತ್ರನೆಂದು ತಿಳಿದುಕೊಳ್ಳುತ್ತದೆ.

ಇದೇ ಒಂದು ಸಮಸ್ಯೆ. ಆಧುನಿಕ ಮನುಷ್ಯನಿಗೆ ”ಮೋಕ್ಷ” ಎಂದರೇನು?
ಅವನಿಗೆ ಮೋಕ್ಷ ಏನು ಎಂಬುದೇ ಗೊತ್ತಿಲ್ಲ.
ಶಿಷ್ಯ : (ಭಗವದ್ಗೀತೆ ಓದುವುದನ್ನು ಮುಂದುವರಿಸುತ್ತಾ) “ಅವರು ಐಹಿಕ ಜಗತ್ತಿನಲ್ಲಿ ಮನುಷ್ಯರಾಗಿಯೇ ಉಳಿಯಬೇಕಾಗುತ್ತದೆ ಅಥವಾ ಪ್ರಾಣಿವರ್ಗಗಳ ಅಥವಾ ಇನ್ನೂ ಕೆಳಮಟ್ಟದ ಜೀವರೂಪಗಳ ಮಟ್ಟಕ್ಕೆ ಇಳಿಯಬೇಕಾಗುತ್ತದೆ.”
ಶ್ರೀಲ ಪ್ರಭುಪಾದ : ”ಹಾ” ಜನರು ಹೇಳುತ್ತಾರೆ – ” ಈ ಜೀವನವೆಲ್ಲ ಮಿಥ್ಯವಾದುದ್ದು. ಈ ಜೀವನ ಅನಂತರ ಎಲ್ಲವೂ ಮುಗಿಯುತ್ತದೆ. ನಾನು ಮುಕ್ತ” ಇದು ಸಮಸ್ಯೆಯಾಗಿದೆ. ಇದು ಅವರ ಸ್ಥಿತಿ.
ಶಿಷ್ಯ : ಶ್ರೀಲ ಪ್ರಭುಪಾದರೇ, ನಾವು ಶಾಲಾ-ಕಾಲೇಜುಗಳಲ್ಲಿ ಮಾತನಾಡಿದಾಗ ಜನರು ನಿಮ್ಮ ಹೇಳಿಕೆಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂಬುದನ್ನು ನಾವು ಕಾಣುತ್ತೇವೆ. “ಹೌದು, ನಮ್ಮ ಸಮಾಜದಲ್ಲಿ ಅನೇಕ ನ್ಯೂನತೆಗಳಿವೆ. ಇವೆಲ್ಲವನ್ನೂ ಸರಿಪಡಿಸಿ ನಾಗರಿಕರನ್ನು ಹೇಗೆ ಸಂತೋಷವಾಗಿಡಬೇಕು ಎಂಬುದು ನಮಗೆ ಗೊತ್ತಾಗುತ್ತಿಲ್ಲ” ಎಂದು ಅವರು ಒಪ್ಪಿಕೊಳ್ಳಲೇಬೇಕು.
ಮತ್ತು ಜನರು ಕೂಡ ಈ ವಿಚಾರವನ್ನು ಒಪ್ಪಿಕೊಳ್ಳಲೇಬೇಕು. ಏನೆಂದರೆ “ಹೌದು, ಮರಣದ ಅನಂತರ ಜೀವನ ಮತ್ತು ಆತ್ಮಗಳ ಜನ್ಮಾಂತರದ ಸಂಭವನೀಯತೆ ಇದೆ. ನಮ್ಮ ಸಮಾಜದ ದೊಡ್ಡ ನ್ಯೂನತೆಯೇನೆಂದರೆ ಅದು ಆಧ್ಯಾತ್ಮಿಕವಾದದ್ದನ್ನು ಮತ್ತು ಮರಣದ ಅನಂತರದ ಜೀವನದ ತಯಾರಿಯನ್ನು ಕಲಿಸುವುದಿಲ್ಲವೆಂದು.”
ಜನರು ಕಾಲೇಜು ಮಟ್ಟವನ್ನು ತಲಪಿದರೂ ಕೂಡ ಅವರು “ನಾನು ಈ ಐಹಿಕ ದೇಹವಲ್ಲ, ನಾನು ಆಧ್ಯಾತ್ಮಿಕ ಜೀವಿ” ಎಂದು ಅರ್ಥಮಾಡಿಕೊಳ್ಳಲು ಕಷ್ಟಪಡುತ್ತಾರೆ.
ಶ್ರೀಲ ಪ್ರಭುಪಾದ : ಅವರು ಅರ್ಥಮಾಡಿಕೊಳ್ಳುತ್ತಾರೆ. ನಾನು ಕೇವಲ ಬೋಧನೆಯ ಕಷ್ಟತೆಯನ್ನು ವಿವರಿಸುತ್ತಿದ್ದೇನೆ. ನೀವು ಇವೆಲ್ಲ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಐಹಿಕವಾದ ಸಮಾಜದಲ್ಲಿ ಜನರು ನಾಯಿಗಳು ಮತ್ತು ಬೆಕ್ಕುಗಳಾಗಿದ್ದಾರೆ. ಆದ್ದರಿಂದ ಬೋಧನೆಯ ಕಾರ್ಯವು ಸ್ವಲ್ಪ ಕಷ್ಟಕರವಾದದ್ದು. ನೀವು ನಾಯಿ ಮತ್ತು ಬೆಕ್ಕುಗಳೊಂದಿಗೆ ವ್ಯವಹರಿಸಬೇಕಾಗುತ್ತದೆ. ಆದರೂ ಭರವಸೆ ಇದೆ, ಏಕೆಂದರೆ ಅವರು ಈ ಮಾನವರೂಪದ ಜೀವನವನ್ನು ಪಡೆದಿದ್ದಾರೆ.
ಭರವಸೆ ಇದೆ. ಅದು ಭರವಸೆ ರಹಿತವಾದುದಲ್ಲ. ನಿರಾಶರಾಗಬೇಡಿರಿ. ಇದುವೇ ನಿಮ್ಮ ಕೆಲಸ. ನೀವು ನಿಮ್ಮ ಕೆಲಸದಲ್ಲಿ ನಾಯಿ, ಬೆಕ್ಕುಗಳನ್ನು ಕೂಡ ಭೇಟಿ ಮಾಡಬೇಕಾಗುತ್ತದೆ. ಅದು ನನ್ನ ವಿಚಾರ. ನೀವು ಬೋಧಿಸಲು ಹೋದಾಗ ”ನಾನು ನಾಯಿ ಮತ್ತು ಬೆಕ್ಕುಗಳಿಗೆ ಬೋಧಿಸಲು ಬಂದಿರುವೆನು ಮತ್ತು ನಾನು ಎಚ್ಚರಿಕೆಯಿಂದ ಅವರೊಂದಿಗೆ ವ್ಯವಹರಿಸಬೇಕು. ಇಲ್ಲದಿದ್ದರೆ ಅವು ಬೊಗಳುತ್ತವೆ” ಎಂದು ನಿಮಗೆ ಗೊತ್ತಿರಬೇಕು.
ಆದ್ದರಿಂದ ನಿಮ್ಮ ದೇಶಕ್ಕೆ ಆಗಮಿಸಿದ ಅನಂತರ ನಾನು ಅಸಮಾಧಾನ, ನಿರಾಶೆ ತುಂಬಿಕೊಂಡಿರುವ ಒಂದು ಕವಿತೆಯನ್ನು ಬರೆದೆ. ಅದರ ಅರ್ಥ ”ಈ ಜನರಿಗೇನು ಸೂಕ್ಷ್ಮವಾದ ಆಧ್ಯಾತ್ಮಿಕ ತತ್ತ್ವಶಾಸ್ತ್ರ ಅರ್ಥಮಾಡಿಕೊಳ್ಳಲು ಸಾಧ್ಯವೇ?’

(ಶಿಷ್ಯನಿಗೆ ) ಓದುತ್ತಾ ಹೋಗು.
ಶಿಷ್ಯ : ಈ ಹದಿನಾರನೆಯ ಅಧ್ಯಾಯದಲ್ಲಿ ಪ್ರಭುಕೃಷ್ಣ ಪಾರಮಾರ್ಥಿಕ ಪ್ರಕೃತಿ ಮತ್ತು ಅದರ ಗುಣಗಳು ಹಾಗು ಆಸುರೀ ಪ್ರಕೃತಿ ಮತ್ತು ಅದರ ಗುಣಗಳನ್ನು ವಿವರಿಸುತ್ತಾನೆ. ಅವನು ಈ ಗುಣಗಳ ಅನುಕೂಲ ಮತ್ತು ಪ್ರತಿಕೂಲಗಳನ್ನು ಕೂಡ ವಿವರಿಸುತ್ತಾನೆ.
ಪಾರಮಾರ್ಥಿಕ ಗುಣಗಳು ಮತ್ತು ದೈವತ್ವದ ಒಲವು ಪಡೆದುಕೊಂಡು ಹುಟ್ಟಿರುವಂತವರಿಗೆ ಅಭಿಜಾತಸ್ಯ ಎಂಬ ಪದವು ತುಂಬಾ ಅರ್ಥಗರ್ಭಿತವಾಗಿದೆ. ದೈವೀಕ ಪರಿಸರದಲ್ಲಿ ಮಗುವನ್ನು ಜನ್ಮ ನೀಡುವುದಕ್ಕೆ ವೈದಿಕ ಶಾಸ್ತ್ರಗಳಲ್ಲಿ ಗರ್ಭಧಾರಣ ಸಂಸ್ಕಾರವೆಂದು ಹೇಳಲಾಗುತ್ತದೆ.
ದೈವೀಕ ಗುಣಗಳನ್ನು ಹೊಂದಿರುವ ಮಗು ಬೇಕಾದರೆ ತಂದೆ ತಾಯಿಯರು ಮಾನವ ಜೀವಿಯ ಸಾಮಾಜಿಕ ಜೀವನಕ್ಕೆ ಸೂಚಿಸಿರುವ 10 ಸಿದ್ಧಾಂತಗಳನ್ನು ಅನುಸರಿಸಬೇಕು. ಭಗವದ್ಗೀತೆಯಲ್ಲಿ ಈ ರೀತಿ ವಿವರಿಸಲಾಗಿದೆ – ಲೈಂಗಿಕ ಜೀವನದಿಂದ ಒಳ್ಳೆಯ ಮಗು ಹುಟ್ಟಿದರೆ ಅಂತಹ ಲೈಂಗಿಕ ಜೀವನ ಕೃಷ್ಣನೇ ಎನ್ನಲಾಗಿದೆ.
ಲೈಂಗಿಕ ಜೀವನವನ್ನು ನಿರ್ಬಂಧಿಸಿಲ್ಲ. ಆದರೆ ಅದು ಕೃಷ್ಣ ಪ್ರಜ್ಞೆಯಲ್ಲಿ ಉಪಯೋಗವಾಗಿರಬೇಕು. ಕೃಷ್ಣಪ್ರಜ್ಞೆಯಲ್ಲಿ ಇದ್ದವರು ಕನಿಷ್ಠಪಕ್ಷ ನಾಯಿ-ಬೆಕ್ಕುಗಳಂತೆ ಮಕ್ಕಳಿಗೆ ಜನ್ಮ ನೀಡಬಾರದು. ಆದರೆ ಕೃಷ್ಣ ಪ್ರಜ್ಞಾವಂತ ಮಗುವಿಗೆ ಜನ್ಮ ನೀಡಬೇಕು. ಇದು ಕೃಷ್ಣ ಪ್ರಜ್ಞೆಯಲ್ಲಿ ಮುಳುಗಿರುವ ತಂದೆ- ತಾಯಿಯರಿಗೆ ಮತ್ತು ಹುಟ್ಟಲಿರುವ ಮಗುವಿಗೆ ಅನುಕೂಲವಾಗಿರಬೇಕು.
”ವರ್ಣಾಶ್ರಮ ಧರ್ಮವೆಂದು ಕರೆಯಲಾಗಿರುವ ಸಾಮಾಜಿಕ ಸಂಸ್ಥೆಯನ್ನು ಸಾಮಾಜಿಕ ಜೀವನದ ನಾಲ್ಕು ವೃತ್ತಿ ಅಥವಾ ವರ್ಣ ವಿಭಾಗಗಳಲ್ಲಿ ವಿಭಜಿಸಲಾಗಿದೆ. ಆದರೆ ಹುಟ್ಟಿದ ವರ್ಣದ ಪ್ರಕಾರ ಸಮಾಜದ ವಿಭಜನೆ ಅಲ್ಲ. ಇಂತಹ ವಿಭಜನೆಗಳು ಅವರವರ ಶೈಕ್ಷಣಿಕ ಅರ್ಹತೆಗಳ ಎಲ್ಲೆ ಮೇಲಿದೆ.
ಅವು ಸಮಾಜವನ್ನು ಶಾಂತಿ ಮತ್ತು ಸಮೃದ್ಧಿಗೊಳಿಸಲು ಇವೆ. ಇಲ್ಲಿ ಉಲ್ಲೇಖಿಸಿರುವ ಗುಣಗಳು ದಿವ್ಯಗುಣಗಳಾಗಿವೆ ಎಂದು ವಿವರಿಸಲಾಗಿದೆ. ಈ ಗುಣಗಳು ಮನುಷ್ಯನನ್ನು ಐಹಿಕ ಜಗತ್ತಿನಿಂದ ಬಿಡುಗಡೆಗೊಳಿಸುತ್ತವೆ. ಅವನ ಆಧ್ಯಾತ್ಮಿಕ ತಿಳುವಳಿಕೆಯಲ್ಲಿ ಪ್ರಗತಿಯನ್ನುಂಟುಮಾಡುತ್ತವೆ.
ಶ್ರೀಲ ಪ್ರಭುಪಾದ : ಆದರೆ ಜನರಿಗೆ ದಿವ್ಯಗುಣಗಳನ್ನು ಪಡೆಯುವುದರಲ್ಲಿ ತರಬೇತಿ ಕೊಡುವಂತಹ ಸಂಸ್ಥೆ ಎಲ್ಲಿದೆ? ಅಂತಹ ಸಂಸ್ಥೆ ಎಲ್ಲಿಯೂ ಇಲ್ಲ. ನಾವು ಜನರಿಗೆ ದಿವ್ಯಗುಣಗಳನ್ನು ಪಡೆಯುವುದರಲ್ಲಿ ತರಬೇತಿಯನ್ನು ಕೊಡಲು ಪ್ರಯತ್ನಿಸುತ್ತಿದ್ದೇವೆ. ಈ ಕೃಷ್ಣ ಪ್ರಜ್ಞಾ ಸಂಸ್ಥೆಯೊಂದೇ ಇಂತಹ ತರಬೇತಿಯನ್ನು ಕೊಡುತ್ತಿದೆ.
ನಮ್ಮ ಅಂತಾ ರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಸ್ಥೆಯ ಹೊರತಾಗಿ ಬೇರೆ ಯಾವುದಾದರೂ ಸಂಸ್ಥೆಯು ಜನರಿಗೆ ದಿವ್ಯಗುಣಗಳನ್ನು ಬೆಳೆಸಿಕೊಳ್ಳುವಲ್ಲಿ ತರಬೇತಿಯನ್ನು ಕೊಡುತ್ತಿದೆಯೇ? ಜಗತ್ತಿನಾದ್ಯಾಂತ ಎಲ್ಲಿಯೂ ಕೂಡ ದಿವ್ಯಗುಣಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ಕೊಡುವಂತಹ ಸಂಸ್ಥೆ ಇಲ್ಲ ಎಂದು ನನಗನ್ನಿಸುತ್ತದೆ. ಯಾರಿಗೆ ಈ ದಿವ್ಯಗುಣಗಳ ಬಗ್ಗೆ ಕಾಳಜಿ ಇದೆ?






Leave a Reply