ಸಂಕೀರ್ತನ ಯಶೋಗಾಥೆ
– ಆಂಗ್ಲಮೂಲ : ರೋಹಿಣೀಸುತ ದಾಸ
ಸಂಕೀರ್ತನೆಯಲ್ಲಿ ತೊಡಗಿರುವವರು ಕೃಷ್ಣನ ವಿಶೇಷ ಕೃಪೆಗೆ ಪಾತ್ರರಾಗುತ್ತಾರೆ.
ಕೃಷ್ಣ ಜನರನ್ನು ಮುಕ್ತರಾಗಿಸಲು ತಾನೇ ವ್ಯವಸ್ಥೆ ಮಾಡಿಕೊಡುತ್ತಾನೆ. ಇಲ್ಲಿ ಭಕ್ತರು ನಿಮಿತ್ತ ಮಾತ್ರರು.

ಪುಸ್ತಕ ಮ್ಯಾರಥಾನ್ ಸಂದರ್ಭದಲ್ಲಿ ಚಕ್ಷುದಾಸರ ಅನುಭವ ಹೀಗಿದೆ:
”ಮ್ಯಾರಥಾನ್ ಬಿರುಸಾಗಿ ನಡೆಯುತ್ತಿತ್ತು, ನಾನು ಸಾಕಷ್ಟು ಜನರನ್ನು ಒಲಿಸಿ ಪುಸ್ತಕ ವಿತರಿಸುತ್ತಿದ್ದೆ. ಒಂದೆಡೆ ಬ್ಯಾಂಕಿನಿಂದ ಹಣ ಪಡೆಯುತ್ತಿದ್ದ ಯುವಕ ನನ್ನ ಗಮನಕ್ಕೆ ಬಂದು ಈತನ ಬಳಿ ಸಾರಿದರೆ ಖಂಡಿತವಾಗಿಯೂ ಪುಸ್ತಕ ಪಡೆಯುವನೆಂದೆನಿಸಿತು.”
ಆದರೆ ಆತನ ಪ್ರತಿಕ್ರಿಯೆ ಪ್ರೋತ್ಸಾಹದಾಯಕವಾಗಿರಲಿಲ್ಲ. ಆ ಯುವಕ ತನಗೆ ಈ ಸಾಹಿತ್ಯದಲ್ಲಿ ಆಸಕ್ತಿ ಇಲ್ಲವೆಂದು ವಾದಿಸಿದ. ನಾನು ಅವನನ್ನು ಒಪ್ಪಿಸಲು ಬಹಳ ಪ್ರಯತ್ನಿಸಿದೆ. ಊಹೂಂ… ಸಾಧ್ಯವಾಗಲೇ ಇಲ್ಲ. ಅವನು ತಾನೆಂದೂ ಭಾರತೀಯ ತತ್ತ್ವಶಾಸ್ತ್ರದ ಪುಸ್ತಕಗಳನ್ನು ಓದಿಯೇ ಇಲ್ಲವೆಂದ.
ನಾನು, “ಹಾಗಾದರೆ ಯಾರಿಗಾದರೂ ಉಡುಗೊರೆ ನೀಡಿ’ ಎಂದು ಹೇಳಿದೆ. ಆತ, ‘ಇಂತಹ ಪುಸ್ತಕಗಳಲ್ಲಿ ಆಸಕ್ತಿ ಇರಿಸಿರಬಹುದಾದ ಯಾರೂ ನನಗೆ ಪರಿಚಯವಿಲ್ಲ’ ಎಂದ.

ಕೂಡಲೇ ನನ್ನ ಬಾಯಿಂದ, ‘ನಿಮಗೆ ನೀವೇ ಉಡುಗೊರೆ ಕೊಟ್ಟುಕೊಳ್ಳಿ, ಹೇಗಿದ್ದರೂ ನಾಳೆ ನಿಮ್ಮ ಹುಟ್ಟುಹಬ್ಬವಲ್ಲವೇ?’ ಎಂಬ ಮಾತು ಹೊರಬಂತು! ಅದನ್ನು ಕೇಳುತ್ತಲೇ ಆತ ದಂಗಾಗಿ ಹೋದ. ನಿಜವಾಗಿಯೂ ಅದರ ಮರುದಿನ ಆತನ ಹುಟ್ಟುಹಬ್ಬವಿತ್ತು !! ಆ ಮಾತುಗಳನ್ನು ನಾನು ಹೇಗೆ ಆಡಿದನೋ ನನಗೇ ಅರಿವಿಲ್ಲ. ನಾನೂ ಅವನಂತೆಯೇ ಆಶ್ಚರ್ಯ ಚಕಿತನಾಗಿದ್ದೆ.
ಆತನಂತೂ, ಆ ಕ್ಷಣದ ಹಿಂದೆ ತನಗೆ ಈ ಪುಸ್ತಕಗಳಲ್ಲಿ ಆಸಕ್ತಿ ಇಲ್ಲ ಎಂದದ್ದನ್ನೇ ಮರೆತಂತಿದ್ದ. ನಾನು ಒಂದಾದ ಮೇಲೊಂದು ಪುಸ್ತಕಗಳನ್ನು ತೋರಿಸುತ್ತ ಹೋದೆ. ಆ ವೇಳೆಗೆ ಆತನ ಮನಸ್ಸು ಕೃಷ್ಣಪಜ್ಞೆಗೆ ತೆರೆದುಕೊಂಡಿತ್ತು. ಅವನು ಪುಸ್ತಕಗಳ ಸಂಪೂರ್ಣ ಸೆಟ್ ಅನ್ನು ಕೊಂಡುಕೊಂಡ!
ನೀವು ಸಂಕೀರ್ತನೆಯಲ್ಲಿ ತೊಡಗಿರುವರೆಂದರೆ, ನೀವು ಕೃಷ್ಣನೊಡನೆ ಇದ್ದೀರೆಂದೇ ಅರ್ಥ. “ಆಭಿನ್ನತ್ವಾನ್ ನಾಮ- ನಾಮಿನೋ” ಕೃಷ್ಣನು ‘ಕೃಷ್ಣ’ ಪುಸ್ತಕ, ಕೃಷ್ಣನ ನುಡಿಗಳು, ಕೃಷ್ಣನ ಹೆಸರು, ಕೀರ್ತಿ, ವೈಭವ, ಪರಿವಾರಗಳಿಂದ ಬೇರೆಯಲ್ಲ. ಕೃಷ್ಣನಿಗೆ ಸಂಬಂಧಿಸಿದ ಪ್ರತಿಯೊಂದು ಕೃಷ್ಣನೇ ಆಗಿದ್ದಾನೆ. ನಿಮಗೆ ಈ ಪರಿಪೂರ್ಣ ಜ್ಞಾನ ಇರುವುದೇ ಆದರೆ, ನೀವು ಯಾವಾಗಲೂ ಕೃಷ್ಣನೊಂದಿಗೇ ಇರುವಿರಿ, ನೀವು ಈಗಾಗಲೇ ವೈಕುಂಠದಲ್ಲಿ ಇದ್ದೀರಿ ಎಂದರ್ಥ.”
– (ಶ್ರೀಲ ಪ್ರಭುಪಾದರು, 19 ಜನವರಿ, 1974, ಉಪನ್ಯಾಸವೊಂದರಲ್ಲಿ)






Leave a Reply