
ಹೆಸರೇ ಸೂಚಿಸುವಂತೆ, ಶ್ರೀರಾಮಚಂದ್ರನ ಹೆಸರನ್ನು ಈ ರಾಮನಗರ ಪಟ್ಟಣಕ್ಕೆ ಇಡಲಾಗಿದೆ. ಪ್ರಕೃತಿ ಸೌಂದರ್ಯದ ಮಧ್ಯೆ ಇರುವ ಶ್ರೀ ರಾಮಗಿರಿ ಅಥವಾ ಶ್ರೀ ರಾಮದೇವರ ಬೆಟ್ಟವು ಶ್ರೀರಾಮಚಂದ್ರನಿಗೆ ಅರ್ಪಿತ ಪವಿತ್ರ ಗಿರಿ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ, ಬೆಂಗಳೂರಿನಿಂದ 50 ಕಿ.ಮೀ. ದೂರದಲ್ಲಿ ಈ ಸ್ಥಳವು ಇದೆ. ಭಾರಿ ಕಲ್ಲು ಬಂಡೆಗಳ ಮಧ್ಯೆ, ಬೆಟ್ಟದ ಮೇಲೆ ಇರುವ ಈ ಸಣ್ಣ ಮಂದಿರದಲ್ಲಿ ಅತಿ ಸುಂದರವಾದ ಶ್ರೀ ಪಟ್ಟಾಭಿರಾಮ ಮೂರ್ತಿ ನಿಮ್ಮ ಕಣ್ಮನ ಸೆಳೆಯುತ್ತದೆ. ಮಂದಿರ ತಲಪಲು ನೀವು ಹಿತವಾದ ದಟ್ಟ ಅರಣ್ಯ ಮತ್ತು ಸೊಂಪಾದ ಹಸಿರಿನ ಮಧ್ಯೆ 400 ಮೆಟ್ಟಿಲುಗಳನ್ನು ಹತ್ತಬೇಕು.

ಸ್ಥಳ ಪುರಾಣ
ರಾಕ್ಷಸ ರಾವಣನನ್ನು ಸಂಹರಿಸಿದ ಮೇಲೆ ಶ್ರೀರಾಮಚಂದ್ರನು ಅಯೋಧ್ಯೆಗೆ ಹಿಂತಿರುಗಿದ. ಅಯೋಧ್ಯೆಯ ರಾಜನಾಗಿ ಶ್ರೀರಾಮನಿಗೆ ಪಟ್ಟಾಭಿಷೇಕವಾಯಿತು. ಶ್ರೀ ರಾಮನ ಈ ವೈಭವ ಮತ್ತು ಸೌಂದರ್ಯದಿಂದ ಆಕರ್ಷಿತನಾದ ಸುಗ್ರೀವನಿಗೆ ಶ್ರೀರಾಮನನ್ನು ಈ ರಾಜನ ರೂಪದಲ್ಲಿ ಪೂಜಿಸಬೇಕೆನಿಸಿತು. ಆದುದರಿಂದ ಅವನು ಸಿಂಹಾಸನದ ಮೇಲೆ ಶ್ರೀರಾಮಚಂದ್ರ ವಿರಾಜಮಾನನಾಗಿರುವ, ಅವನ ಎಡತೊಡೆಯ ಮೇಲೆ ಸೀತಾಮಾತೆ ಆಸೀನಳಾಗಿರುವ ಮತ್ತು ಅವನ ಬಲ ಭಾಗದಲ್ಲಿ ಲಕ್ಷ್ಮಣ, ಹನುಮಂತ ನಿಂತಿರುವ ಮೂರ್ತಿಯನ್ನು ಸಿದ್ಧಪಡಿಸಿಕೊಂಡ. ಅದನ್ನು ಪ್ರತಿಷ್ಠಾಪಿಸಿ ಪೂಜಿಸಲು ಕಿಷ್ಕಿಂಧೆಗೆ ಒಯ್ಯುತ್ತಿದ್ದ. ಅವನು ಈ ಸ್ಥಳವನ್ನು ತಲಪಿದಾಗ, ಅವನ ಮೇಲೆ ರಾಕ್ಷಸ ಸುಖಾಸುರ ಆಕ್ರಮಣ ಮಾಡಿದ. ಆಗ ಅವನು ಮೂರ್ತಿಯನ್ನು ಒಂದು ಪಕ್ಕಕ್ಕೆ ಇಟ್ಟು ರಾಕ್ಷಸನೊಂದಿಗೆ ಹೋರಾಡಿದ. ತೀವ್ರ ಕಾದಾಟದ ಅನಂತರ ರಾಕ್ಷಸನನ್ನು ಸುಗ್ರೀವ ಸಂಹರಿಸಿದ. ಅನಂತರ ಅವನು ತನ್ನ ಪ್ರಯಾಣ ಮುಂದುವರಿಸಲು ಮೂರ್ತಿಯನ್ನು ಎತ್ತಿಕೊಳ್ಳಲು ಮುಂದಾದ. ಆದರೆ ಮೂರ್ತಿಯನ್ನು ಸ್ವಲ್ಪವೂ ಸರಿಸಲು ಅವನಿಂದ ಸಾಧ್ಯವಾಗಲಿಲ್ಲ. ಸೊಂಪಾದ ಮರಗಳು ಮತ್ತು ಬೆಟ್ಟಗಳ ಮಧ್ಯೆ, ಈ ಸುಂದರ ಪರಿಸರದಲ್ಲಿ ಪೂಜಿಸಲ್ಪಡಬೇಕೆಂಬುದು ಶ್ರೀರಾಮನ ಇಚ್ಛೆಯಾಗಿದೆ ಎಂಬ ಆಕಾಶವಾಣಿಯನ್ನು ಸುಗ್ರೀವ ಕೇಳಿದ. ಅದರಂತೆ ಸುಗ್ರೀವನು ಮೂರ್ತಿಯನ್ನು ಇಲ್ಲಿಯೇ ಪ್ರತಿಷ್ಠಾಪಿಸಿದ. ಇಂದಿಗೂ ಇಲ್ಲಿ ಪೂಜೆ ನಡೆದುಕೊಂಡು ಬರುತ್ತಿದೆ.

ಕಾಗೆಗಳ ರಾಜ ಕಾಕಾಸುರನಿಗೆ ಶಿಕ್ಷೆ
ಮತ್ತೊಂದು ಲೀಲೆಯನ್ನೂ ಹೇಳಲಾಗುತ್ತದೆ. ವನವಾಸ ಕಾಲದಲ್ಲಿ ಶ್ರೀರಾಮಚಂದ್ರ ಮತ್ತು ಸೀತಾಮಾತೆ ಇಲ್ಲಿ ತಂಗಿದ್ದರು. ಆ ಸಂದರ್ಭದಲ್ಲಿ ಒಂದು ದಿನ ಶ್ರೀರಾಮನು ಸೀತೆಯ ಮಡಿಲಲ್ಲಿ ತಲೆಯಿಟ್ಟು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ. ಆಗ ಕಾಗೆಗಳ ರಾಜ ಕಾಕಾಸುರನು ಸೀತಾದೇವಿಯ ಮೇಲೆ ಹಲ್ಲೆ ಮಾಡಿದ. ರಾಮನಿಗೆ ತೊಂದರೆಯಾಗಬಾರದೆಂದು ಅವಳು ನೋವನ್ನು ತಡೆದುಕೊಂಡಳು. ಆದರೆ ಅವಳ ದೇಹದಿಂದ ತೊಟ್ಟಿಕ್ಕಿದ ರಕ್ತವು ರಾಮನ ಮೇಲೆ ಬಿದ್ದು ಅವನು ಎಚ್ಚರಗೊಂಡ. ಗಾಯ ನೋಡಿ ಸಿಟ್ಟಾದ ರಾಮನು ದರ್ಭೆ ಹುಲ್ಲನ್ನು ಬಾಣವಾಗಿ ಮಾಡಿಕೊಂಡ. ಈ ಬಾಣವು ಕಾಕಾಸುರನನ್ನು ಎಲ್ಲ ದಿಕ್ಕಿನತ್ತಲೂ ಅಟ್ಟಿಸಿಕೊಂಡು ಹೋಯಿತು. ಅವನು ಬ್ರಹ್ಮ ಮತ್ತು ಶಿವ ಸೇರಿದಂತೆ ದೇವತೆಗಳ ಮೊರೆ ಹೊಕ್ಕು ರಾಮನ ಶಿಕ್ಷೆಯಿಂದ ಕಾಪಾಡಲು ಸಹಾಯ ಕೋರಿದ. ದೇವೋತ್ತಮ ಪರಮ ಪುರುಷನಾದ ಶ್ರೀರಾಮನ ಬಾಣವನ್ನು ತಡೆಯುವ ಶಕ್ತಿ ತಮಗಿಲ್ಲವೆಂದು ಅವರೆಲ್ಲ ಅವನ ಕೋರಿಕೆಯನ್ನು ತಿರಸ್ಕರಿಸಿದರು. ಆದರೆ, ರಾಮನ ಬಳಿಗೆ ಹೋಗಿ ಕ್ಷಮೆ ಯಾಚಿಸಲು ಸಲಹೆ ನೀಡಿದರು. ಅನಂತರ ಕಾಕಾಸುರನು ರಾಮನ ಪಾದಗಳಿಗೆರಗಿ ಕ್ಷಮೆ ಕೋರಿದ. ದಯಾಶೀಲನಾದ ರಾಮನು ರಾಕ್ಷಸನನ್ನು ಕ್ಷಮಿಸಿದ. ಆದರೆ, ಬಾಣವು ಏನನ್ನಾದರು ನಾಶ ಪಡಿಸಲೇಬೇಕಾಗಿರುವುದರಿಂದ ಏನನ್ನಾದರು ತ್ಯಾಗ ಮಾಡಲು ರಾಮ ಅವನಿಗೆ ಸೂಚಿಸಿದ. ಆಗ ಕಾಕಾಸುರನು ತನ್ನ ಎಡಗಣ್ಣನ್ನು ತ್ಯಾಗ ಮಾಡಿ ಪ್ರಾಣ ಉಳಿಸಿಕೊಂಡ. ಅಂದಿನಿಂದ ಕಾಗೆಗಳು ತಮ್ಮ ಎಡಗಣ್ಣಿನಿಂದ ನೋಡಲಾರವು ಎಂದು ಪ್ರತೀತಿ. ಈ ಲೀಲೆ ಕಾರಣ, ಇಲ್ಲಿ ಒಂದೂ ಕಾಗೆ ಕಾಣುವುದಿಲ್ಲ.
ಶ್ರೀರಾಮ ತೀರ್ಥ

ಗಿರಿಯ ಮೇಲಿನ ಶ್ರೀ ಪಟ್ಟಾಭಿರಾಮ ಮಂದಿರದ ಪಕ್ಕದಲ್ಲಿ ಶ್ರೀರಾಮ ತೀರ್ಥವಿದೆ. ಸೀತಾಮಾತೆಯ ಬಾಯಾರಿಕೆಗೆ ನೀರಿನ ಅಗತ್ಯವಾಗಿತ್ತು. ಆಗ ರಾಮನು ಬಾಣದಿಂದ ಈ ತೀರ್ಥವನ್ನು ಸೃಷ್ಟಿಸಿದ. ಈ ಪವಿತ್ರ ತೀರ್ಥವು ತನ್ನ ಮಿನುಗುವ ಮತ್ತು ಪ್ರಶಾಂತತೆಯಿಂದ ಅತ್ಯಂತ ಸುಂದರವಾಗಿದೆ. ಈ ತೀರ್ಥದ ನೀರು ಅತ್ಯಂತ ಸಿಹಿಯಾಗಿದ್ದು ಅತಿ ಸ್ವಚ್ಛವಾಗಿದೆ. ಆದುದರಿಂದ ಇದು ಕುಡಿಯಲು ಯೋಗ್ಯವಾಗಿದೆ. ಈ ತೀರ್ಥದ ಜಲವನ್ನು ದೇವರಪೂಜೆ ಮತ್ತು ನೈವೇದ್ಯಕ್ಕೆ ಬಳಸಲಾಗುತ್ತದೆ. ಈ ತೀರ್ಥದಲ್ಲಿ ನೀರು ಎಂದಿಗೂ ಬತ್ತಿ ಹೋಗದು ಮತ್ತು ಇದರ ಆಳವೂ ತಿಳಿದಿಲ್ಲ.
ಸಪ್ತ ಋಷಿಗಳ ತಪೋಭೂಮಿ
ಈ ಪವಿತ್ರ ಗಿರಿಯ ಮೇಲೆ ಸಪ್ತ ಋಷಿಗಳು ತಪಸ್ಸು ಮಾಡಿದ್ದರು. ಅದರ ವೈಶಿಷ್ಟ್ಯವನ್ನು ಸಾರಲೋ ಎಂಬಂತೆ ಮಂದಿರದ ಎದುರುಗಡೆ ಏಳು ಭಾರೀ ಬಂಡೆಗಳಿವೆ. ಸೀತಾಮಾತೆಯು ರಾಮತೀರ್ಥದಲ್ಲಿ ಸ್ನಾನ ಮಾಡುತ್ತಿದ್ದಾಗ, ಅರಿವಿಲ್ಲದಂತೆ, ತಪ್ಪಾಗಿ ಋಷಿಗಳು ಅವಳತ್ತ ನೋಟ ಹರಿಸಿದರಂತೆ ಮತ್ತು ಅವಳು ಅವರಿಗೆ ಕಲ್ಲಾಗುವಂತೆ ಶಾಪವಿತ್ತಳೆಂದು ಸ್ಥಳ ಪುರಾಣ ಹೇಳುತ್ತದೆ.
ರಾಮಗಿರಿಗೆ ಹೋಗುವುದು ಹೇಗೆ?
ಈ ಸ್ಥಳವನ್ನು ಮುಟ್ಟಲು ನೀವು ರಾಮನಗರದ ಗೌಸಿಯ ಎಂಜನಿಯರಿಂಗ್ ಕಾಲೇಜಿನ ಅನಂತರ ಮೊದಲ ಬಲಕ್ಕೆ ತಿರುಗಬೇಕು. ಇದು ವಾರಾಂತ್ಯದ ಅತಿ ಚಿಕ್ಕ ಮತ್ತು ಸುಂದರ ಯಾತ್ರೆಯಾದೀತು. ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಅನೇಕ ಬಸ್ಸುಗಳಿವೆ. ಅಲ್ಪ ದರದಲ್ಲಿ ನೀವು ಪ್ರಸಾದ ಮಾಡಲು ಮೊದಲೇ ಸೂಚಿಸಬಹುದು. ಶ್ರೀ ನಾಗರಾಜ ಭಟ್ಟರ್ ಇಲ್ಲಿನ ಪೂಜಾರಿ. ಅವರನ್ನು 09844783393 / 09964112629 ನಲ್ಲಿ ಸಂಪರ್ಕಿಸಬಹುದು. ನೀವು ಮೊದಲೇ ಅವರನ್ನು ಸಂಪರ್ಕಿಸಿ ಪ್ರಸಾದದ ಅಗತ್ಯವನ್ನು ತಿಳಿಸಬಹುದು. ಅವರು ತುಂಬ ಸ್ನೇಹಮಯಿ.
ದೇವಸ್ಥಾನದ ವೇಳೆ
ದೇವಸ್ಥಾನವು ವಾರದ ದಿನಗಳಲ್ಲಿ ಬೆಳಗ್ಗೆ 9 ರಿಂದ 12 ಗಂಟೆವರೆಗೆ ಮತ್ತು ಶನಿವಾರ, ಭಾನುವಾರಗಳಂದು ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ.






Leave a Reply