ಆತ್ಮ ಮತ್ತು ದೇಹ

ಹಳೆಯ ವಸ್ತ್ರಗಳನ್ನು ತೆಗೆದು ಬಿಸಾಡಿ ಹೊಸ ವಸ್ತ್ರಗಳನ್ನು ಮನುಷ್ಯನು ಧರಿಸುವಂತೆ, ಜೀರ್ಣಗೊಂಡ, ಉಪಯೋಗವಿಲ್ಲದ ದೇಹವನ್ನು ತೊರೆದು ಹೊಸದಾದ ದೇಹವನ್ನು ಜೀವಾತ್ಮ ಪಡೆಯುತ್ತದೆ. ಹಾಗಾಗಿ ಹುಟ್ಟಿದ ದೇಹಕ್ಕೆ ಸಾವು ನಿಶ್ಚಿತ ಹಾಗೂ ಮೃತ ಜೀವಿಗೆ ಹುಟ್ಟು ಅನಿವಾರ್ಯವಾಗುತ್ತದೆ. ಈ ಹುಟ್ಟು ಸಾವಿನ ಚಕ್ರದಿಂದ ಆತ್ಮವು ಪಾರಾಗಬೇಕಾದರೆ, ಭಗವಂತನ ನಿತ್ಯ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು.

ಭಗವಂತ  ಸ್ವಾಂಶದಿಂದ ಅನೇಕ ರೂಪಗಳಲ್ಲಿ ತನ್ನನ್ನು ತಾನೇ ವಿಸ್ತರಿಸಿಕೊಳ್ಳುತ್ತಾನೆ. ಆ ಎಲ್ಲ ರೂಪಗಳಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಆ ವಿಸ್ತರಣೆಯನ್ನು ಬ್ರಹ್ಮ ಸಂಹಿತೆಯಲ್ಲಿ ವಿಶದವಾಗಿ ವಿವರಿಸಲಾಗಿದೆ. ಹೇಗೆ ಒಂದು ಜ್ಯೋತಿ ನೂರಾರು ದೀಪಗಳನ್ನು ಬೆಳಗಿಸಿದ ನಂತರವೂ ಕೂಡ ತನ್ನ ಸ್ವಭಾವದಲ್ಲಿ ಯಾವುದೇ ಬದಲಾವಣೆ ಹೊಂದದೆ ಇರುತ್ತದೆಯೋ, ಆ ಎಲ್ಲ ಜ್ಯೋತಿಗಳಲ್ಲಿಯೂ ಯಾವುದೇ ವ್ಯತ್ಯಾಸವಿರುವುದಿಲ್ಲವೋ, ಹಾಗೆಯೇ ಭಗವಂತನ ಸ್ವಾಂಶ ವಿಸ್ತರಣೆಯಲ್ಲಿಯೂ ವ್ಯತ್ಯಾಸ ಇರುವುದಿಲ್ಲ.

ಭಗವಂತನ ಅನಂತ ಶಕ್ತಿಗಳಲ್ಲಿ ಅವನ ವಿಭಿನ್ನಾಂಶವಾದ ಜೀವಾತ್ಮನನ್ನು ತಟಸ್ಥ ಶಕ್ತಿಯೆಂದು ವಿವರಿಸಲಾಗಿದೆ. ಹಾಗಾಗಿ, ಜೀವಾತ್ಮನು ಭಗವಂತನ ಅಂತರಂಗ ಶಕ್ತಿಯ ಸ್ವರೂಪವಾದ ನಿತ್ಯವಾದ ಆಧ್ಯಾತ್ಮಿಕ ಜಗತ್ತಿನಲ್ಲಾಗಲೀ ಅಥವಾ ಬಹಿರಂಗ ಶಕ್ತಿಯ ಸ್ವರೂಪವಾದ ಭೌತಿಕ ಜಗತ್ತಿನಲ್ಲಾಗಲೀ ನೆಲೆಸಬಹುದು.

ಮೂಲತಃ ಜೀವಾತ್ಮ ಆಧ್ಯಾತ್ಮಿಕ ವಸ್ತು. ಆಧ್ಯಾತ್ಮಿಕ ಜಗತ್ತಿನಲ್ಲಿರುವವರೆಗೆ, ಯಾವುದೇ ದುಃಖದ ಛಾಯೆಯಿಲ್ಲದೆ ಸತ್‌ ಚಿತ್‌ ಆನಂದ ಸ್ವರೂಪದಲ್ಲಿ ಅಂದರೆ ನಿತ್ಯ, ಜ್ಞಾನ ಮತ್ತು ಆನಂದದಿಂದ ಕೂಡಿದ ಸ್ವರೂಪದಲ್ಲಿ ಭಗವಂತನ ನಿತ್ಯ ಸೇವೆಯಲ್ಲಿ ತೊಡಗಿರುತ್ತಾನೆ. ಆದರೆ, ಏನಾದರೊಂದು ಕಾರಣದಿಂದ ಅಲ್ಲಿಂದ ಪತಿತನಾಗಿ ಈ ಭೌತಿಕ ಜಗತ್ತಿಗೆ ಬಂದು, ತನ್ನ ಆಧ್ಯಾತ್ಮಿಕ ಸ್ಥಿತಿಯ ಬಗ್ಗೆ ಸಂಪೂರ್ಣವಾಗಿ ಮರೆತು, ಈ ಭೌತಿಕ ಜಗತ್ತೇ ಸಂಪೂರ್ಣ, ಈ ದೇಹವೇ ಶಾಶ್ವತವೆಂದು ತಿಳಿದು ತನ್ನ ನಿತ್ಯ ಸ್ವರೂಪವನ್ನು ಮರೆತುಬಿಡುತ್ತಾನೆ.

ಐದು ಭೌತಿಕ ತತ್ತ್ವಗಳು, ಐದು ಇಂದ್ರಿಯ ವಿಷಯಗಳು, ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಮನಸ್ಸು, ಬುದ್ಧಿ, ಅಹಂಕಾರ ಮತ್ತು ಜೀವಾತ್ಮ ಎಂಬ ಇಪ್ಪತ್ನಾಲ್ಕು ತತ್ತ್ವಗಳಿಂದ ಈ ಭೌತಿಕ ಜಗತ್ತು ಮಾಡಲ್ಪಟ್ಟಿದೆಯೆಂದು ಸಾಂಖ್ಯ ವಿಶ್ಲೇಷಣೆ ತಿಳಿಸುತ್ತದೆ.

ಭಗವದ್ಗೀತೆಯಲ್ಲಿ (7.4) ಹೇಳಿರುವಂತೆ: ಭೂಮಿ, ನೀರು, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ಧಿ ಮತ್ತು ಅಹಂಕಾರಗಳ ಆವರಣದಲ್ಲಿ ಬಂದಿಯಾದ ಜೀವಾತ್ಮ ತನ್ನ ನಿಜ ಸ್ವರೂಪವನ್ನು ಮರೆಯುತ್ತಾನೆ. ತನ್ನ ಶಾಶ್ವತ ಸ್ವರೂಪವನ್ನು ಮರೆತ ಜೀವಾತ್ಮ ಈ ಭೌತಿಕ ವಸ್ತುಗಳಿಂದ ಆವೃತನಾಗಿ, ತನ್ನನ್ನು ಈ ಐಹಿಕ ಲೋಕದಲ್ಲಿ ಬಂಧಿಸುವಂಥ ಕಾರ್ಯಗಳಲ್ಲಿ ತೊಡಗುತ್ತಾನೆ.

ಜೀವಾತ್ಮದ ಅಳತೆಯನ್ನು ಶ್ವೇತಾಶ್ವತರ ಉಪನಿಷತ್ತಿನಲ್ಲಿ ಕೇಶಾಗ್ರದ ಹತ್ತು ಸಾವಿರದ ಒಂದು ಭಾಗವೆಂದು ವಿವರಿಸಲಾಗಿದೆ. ಯಾವುದೇ ಆಧುನಿಕ ಸೂಕ್ಷ್ಮದರ್ಶಕ ಯಂತ್ರದಲ್ಲಿಯೂ ಗೋಚರವಾಗದ ಈ ಸಣ್ಣ ಆಧ್ಯಾತ್ಮಿಕ ಕಿಡಿ, ಭೌತಿಕ ಬಂಧನಕ್ಕೆ ಒಳಗಾಗಿ ಅಹಂಕಾರ, ಬುದ್ಧಿ, ಮನಸ್ಸುಗಳೆಂಬ ಸೂಕ್ಷ್ಮ ತತ್ತ್ವಗಳಿಂದಲೂ ಭೂಮಿ, ನೀರು, ಅಗ್ನಿ, ವಾಯು, ಆಕಾಶಗಳೆಂಬ ಸ್ಥೂಲ ತತ್ತ್ವಗಳಿಂದಲೂ ಆವೃತಗೊಳ್ಳುತ್ತದೆ. ಇದರ ಪ್ರಭಾವದಿಂದ ಜೀವಾತ್ಮ, ಹುಟ್ಟು, ಸಾವು, ರೋಗ, ಮುಪ್ಪುಗಳೆಂಬ ನಾಲ್ಕು ಐಹಿಕ ಕ್ಲೇಶಗಳಿಗೆ ಒಳಪಟ್ಟು ಕರ್ಮದ ಬಂಧನಕ್ಕೆ ಸಿಲುಕಿ ಭಗವಂತನಿಂದ ಬಹಳ ದೂರವಾಗುತ್ತಾನೆ. ನಿತ್ಯ ಕಾಲದ ಪರಿಮಿತಿಯಲ್ಲಿ ಈ ಕ್ಲೇಶಗಳು ಯಾವಾಗ ಉಂಟಾದವೆಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ.

ಹೀಗೆ ಬಂಧನಕ್ಕೊಳಗಾದ ಜೀವಾತ್ಮ ಹುಟ್ಟಿನಿಂದ ಮೊದಲುಗೊಂಡು ಭೌತಿಕ ದೇಹದಲ್ಲಿ ಸಿಲುಕಿ, ಬಿಡುಗಡೆಯ ದಾರಿ ಕಾಣದೆ ಅಂಧಕಾರದ ಸ್ಥಿತಿಯಲ್ಲಿರುವಾಗ ಗುರುವಿನ ಕೃಪೆಯಿಂದ ಉಂಟಾದ ಜ್ಞಾನದ ಬೆಳಕಿನಲ್ಲಿ ವಸ್ತುಸ್ಥಿತಿಯ ಅರಿವಾಗುತ್ತದೆ.

ಐದು ಸ್ಥೂಲ ಹಾಗೂ ಮೂರು ಸೂಕ್ಷ್ಮ ವಸ್ತುಗಳಿಂದ ಮಾಡಲ್ಪಟ್ಟು, ಒಂದು ನಿರ್ದಿಷ್ಟವಾದ ದಿನ ಹುಟ್ಟಿ ಮತ್ತೊಂದು ನಿರ್ದಿಷ್ಟವಾದ ದಿನ ಸಾಯುವುದು ಭೌತಿಕ ದೇಹದ ಲಕ್ಷಣ.

ಈ ಭೌತಿಕ ದೇಹ – ಹುಟ್ಟು, ಬೆಳವಣಿಗೆ, ಸ್ವಲ್ಪ ಕಾಲ ಇರುವಿಕೆ, ಪರಿಣಾಮಗಳ ತಯಾರಿಕೆ, ಕ್ರಮೇಣ ಕುಗ್ಗುವಿಕೆ ಮತ್ತು ಸಾವು ಎಂಬ ಆರು ವಿಕಾರಗಳನ್ನು ಹೊಂದುತ್ತದೆ. ಈ ವಿಕಾರಗಳ ಬಗ್ಗೆ ಚಿಂತಿಸಬೇಕೆಂದು ಭಗವಂತ ಭಗವದ್ಗೀತೆಯಲ್ಲಿ ಹೇಳುತ್ತಾನೆ. ಏಕೆಂದರೆ, ಜೀವಾತ್ಮನು ದೇಹದಲ್ಲಿ ಬಾಲ್ಯದಿಂದ ಕೌಮಾರಕ್ಕೆ, ಯೌವನಕ್ಕೆ ಸಾಗುವಂತೆಯೇ ಸಾವಿನ ಸಮಯದಲ್ಲಿ ಇನ್ನೊಂದು ದೇಹಕ್ಕೆ ಸಾಗುತ್ತಾನೆ. ಹೀಗೆ ನಾಶ ಹೊಂದುವ ದೇಹ ಎಂದಿಗೂ ಸ್ಥಾಯಿಯಲ್ಲ. ಹಾಗೂ ನಾಶ ಹೊಂದದ ಆತ್ಮ ಎಂದಿಗೂ ವಿಕಾರ ಹೊಂದುವುದಿಲ್ಲ.

ದೇಹವನ್ನೆಲ್ಲ ವ್ಯಾಪಿಸಿರುವ ಆತ್ಮವು ಅವಿನಾಶಿಯಾದದ್ದು, ಹುಟ್ಟಿಲ್ಲದ್ದು, ನಿತ್ಯವಾದದ್ದು, ಶಾಶ್ವತವಾದದ್ದು, ಪುರಾತನವಾದದ್ದು,  ಯಾವುದೇ ಶಸ್ತ್ರಗಳಿಂದ ಕತ್ತರಿಸಲಾಗದ್ದು, ಬೆಂಕಿಯಿಂದ ಸುಡಲಾಗದ್ದು, ನೀರಿನಿಂದ ತೇವಗೊಳ್ಳದ್ದು, ಗಾಳಿಯಿಂದ ಒಣಗಿಸಲಾಗದ್ದು, ಮುರಿಯಲಾಗದ್ದು, ಕರಗಿಸಲಾಗದ್ದು, ಅಲುಗಾಡಿಸಲಾಗದ್ದು, ಯಾವುದೇ ಬದಲಾವಣೆಗೆ ಸಿಲುಕದ್ದು, ಅವ್ಯಕ್ತವಾದದ್ದು (ಅಗೋಚರ) ಚಿಂತೆಗೆ ನಿಲುಕದ್ದು ಇವೆಲ್ಲವೂ ಜೀವಾತ್ಮದ ಲಕ್ಷಣಗಳು.

ಹಳೆಯ ವಸ್ತ್ರಗಳನ್ನು ತೆಗೆದು ಬಿಸಾಡಿ ಹೊಸ ವಸ್ತ್ರಗಳನ್ನು ಮನುಷ್ಯನು ಧರಿಸುವಂತೆ, ಜೀರ್ಣಗೊಂಡ, ಉಪಯೋಗವಿಲ್ಲದ ದೇಹವನ್ನು ತೊರೆದು ಹೊಸದಾದ ದೇಹವನ್ನು ಜೀವಾತ್ಮ ಪಡೆಯುತ್ತದೆ. ಹಾಗಾಗಿ, ಹುಟ್ಟಿದ ದೇಹಕ್ಕೆ ಸಾವು ನಿಶ್ಚಿತ ಹಾಗೂ ಮೃತ ಜೀವಿಗೆ ಹುಟ್ಟು ಅನಿವಾರ್ಯವಾಗುತ್ತದೆ. ಈ ಹುಟ್ಟು ಸಾವಿನ ಚಕ್ರದಿಂದ ಆತ್ಮವು ಪಾರಾಗಬೇಕಾದರೆ, ಭಗವಂತನ ನಿತ್ಯ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು.

ಜೀವಾತ್ಮವು ತನ್ನ ದೇಹ ಮತ್ತು ಮನಸ್ಸಿನ ವಿಕಾರಗಳನ್ನು ಮಟ್ಟ ಹಾಕುತ್ತ, ಸತ್ತ್ವಗುಣದಲ್ಲಿ ಸ್ಥಿತನಾಗಿ ಜ್ಞಾನಾರ್ಜನೆ ಮಾಡುತ್ತ, ಗುರುವಿನ ಮಾರ್ಗದರ್ಶನದಲ್ಲಿ ನಡೆಯುತ್ತ ಭಗವಂತನ ಪ್ರಾಪ್ತಿಗೆ ಪ್ರಯತ್ನಿಸಬೇಕು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi