ಭಾರತ ದೇಶವನ್ನು ಪರಕೀಯರ ಕೈಯಿಂದ ಮುಕ್ತವಾಗಿಸಲೆಂದು ಹೋರಾಡಿ, ಸೆರೆಮನೆಗೆ ಹೋದವರಿಗೆ ಅಪಾರ ಗೌರವ ಸಲ್ಲುತ್ತಿದ್ದ ಕಾಲವೊಂದಿತ್ತು. ಇಂದಿನ ಕಾಲದಲ್ಲೂ ಸೆರೆಮನೆಗೆ ಹೋಗುತ್ತಿರುವ ಜನಪ್ರತಿನಿಧಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ; ಆದರೆ ಅದಕ್ಕೆ ಕಾರಣ ಮಾತ್ರ ತಲೆತಗ್ಗಿಸುವಂಥದ್ದು. ನಿಜಕ್ಕೂ ಇದೊಂದು ಅವಮಾನಕಾರಿ ಸಂಗತಿ. ಇವರು ಈ ನೆಲದ ಭವ್ಯ ಸಂಸ್ಕೃತಿ, ಪರಂಪರೆ ಮತ್ತು ಸಂಪ್ರದಾಯಗಳೆಲ್ಲವನ್ನೂ ಗಾಳಿಗೆ ತೂರಿದ್ದಾರೆ. ಈ ಪರಿಸ್ಥಿತಿಯನ್ನು ನೋಡಿದರೆ “ಜನ ಮರುಳೋ ಜಾತ್ರೆ ಮರುಳೋ” ಎಂದು ಕೇಳುವ ಪರಿಸ್ಥಿತಿ ಬಂದೊದಗಿದೆ. ಏಕೆಂದರೆ, ಆಡಳಿತ ಸೂತ್ರ ಹಿಡಿದಿರುವಂಥವರಲ್ಲಿ ಬಹುಪಾಲು ಜನರು ಅನರ್ಹರೇ. ಅದು ಶೈಕ್ಷಣಿಕವಾಗಿರಬಹುದು ಅಥವಾ ನೈತಿಕವಾಗಿರಬಹುದು. ಆದರೂ ಜನರು ಅಂಥವರನ್ನು ಚುನಾಯಿಸುತ್ತಾರಲ್ಲ ಎಂದು ಆಶ್ಚರ್ಯವಾಗುತ್ತದೆ, ಅಷ್ಟೇ ಖೇದವೂ ಆಗುತ್ತದೆ. ಇದರಿಂದಾಗಿ ಪ್ರಜಾಪ್ರಭುತ್ವ ಪದ್ಧತಿಯ ಮೇಲೆ ಸಂದೇಹ ಪಡುವಂತಾಗಿದೆ.

ಪ್ರಜೆಗಳು ತಮ್ಮ ನಾಯಕನನ್ನು ಆಯ್ಕೆ ಮಾಡುವ ಪ್ರಜಾಪ್ರಭುತ್ವಕ್ಕಿಂತ ಸಕಲವಿದ್ಯಾ ಪಾರಂಗತನಾಗಿರುವ, ನಿಸ್ವಾರ್ಥ ಮನೋಭಾವದ ಮತ್ತು ಭಗವತ್ಪ್ರಜ್ಞೆಯುಳ್ಳ ಒಬ್ಬ ರಾಜರ್ಷಿಯ ಆಳ್ವಿಕೆಗೆ ಒಳಪಡುವ ನಿರಂಕುಶಪ್ರಭುತ್ವವೇ ಲೇಸು. ನಾವು ಇತಿಹಾಸವನ್ನು ಪರಿಶೀಲಿಸಿದಾಗ ಪರೀಕ್ಷಿತ, ಯುಧಿಷ್ಠಿರ ಮತ್ತು ಶ್ರೀರಾಮಚಂದ್ರರಂತಹ ರಾಜರ್ಷಿಗಳ ಆಳ್ವಿಕೆಯ ಉದಾಹರಣೆಗಳು ಸಿಗುತ್ತವೆ. ಪರೀಕ್ಷಿತ ಮಹಾರಾಜನು ತನ್ನ ಆಳ್ವಿಕೆಯಲ್ಲಿ ಕಲಿಯನ್ನು ದೂರವಿಟ್ಟು, ಪ್ರಜೆಗಳ ಸುಖ, ನೆಮ್ಮದಿ ಮತ್ತು ಆರೋಗ್ಯವನ್ನು ಕಾಪಾಡಿದನು. ಯುಧಿಷ್ಠಿರ ಮಹಾರಾಜನು ಧರ್ಮನಿಷ್ಠ ಮತ್ತು ನ್ಯಾಯಯುತ ಆಳ್ವಿಕೆಗೆ ಹೆಸರುವಾಸಿಯಾದಂತಹ ರಾಜರ್ಷಿಯಾಗಿದ್ದನು. ಅವನ ಆಳ್ವಿಕೆಯಲ್ಲಿ ಎಲ್ಲವೂ ಸಮೃದ್ಧವಾಗಿತ್ತು ಮತ್ತು ಪ್ರಜೆಗಳು ಸದಾ ಸಂತೋಷದಿಂದಿದ್ದರು. ಇನ್ನು ಶ್ರೀರಾಮಚಂದ್ರನ ಆಳ್ವಿಕೆಯಲ್ಲಿ ಕೂಡ ಅಯೋಧ್ಯೆಯು ಸ್ವರ್ಗಸದೃಶವಾಗಿತ್ತು. ಆದ್ದರಿಂದಲೇ ಜನರು ಈಗಲೂ ಕೂಡ “ರಾಮರಾಜ್ಯ”ಕ್ಕಾಗಿ ಹಾತೊರೆಯುತ್ತಾರೆ. ಇವರೆಲ್ಲರೂ ಆಳಬೇಕು, ತಮ್ಮ ಅಧಿಕಾರ ಜನರ ಮೇಲೆ ಚಲಾಯಿಸಬೇಕು ಎಂದು ಸಿಂಹಾಸನವನ್ನೇರಲಿಲ್ಲ; ಪ್ರಜೆಗಳ ಸೇವೆ, ಯೋಗಕ್ಷೇಮ ಮತ್ತು ಅಭಿವೃದ್ಧಿಯೊಂದನ್ನೇ ತಮ್ಮ ಆಳ್ವಿಕೆಯ ಧ್ಯೇಯವಾಗಿಸಿಕೊಂಡು, ಭಗವತ್ಪ್ರಜ್ಞೆ ಮತ್ತು ನಿಸ್ವಾರ್ಥ ಪ್ರವೃತ್ತಿಯೊಂದಿಗೆ ರಾಜ್ಯವಾಳುತ್ತಿದ್ದ ರಾಜರ್ಷಿಗಳಾಗಿದ್ದರು.

ಆದರೆ ಇಂದು, ಅಂತಹ ಆಡಳಿತಗಾರರು ತುಂಬ ವಿರಳವಾಗಿಬಿಟ್ಟಿದ್ದಾರೆ. ಇದಕ್ಕೆಲ್ಲ ಕಾರಣ, ಅವರು ಆಧ್ಯಾತ್ಮಿಕ ತರಬೇತಿಯನ್ನು ಹೊಂದದೇ ಇರುವುದು ಅಥವಾ ಕೃಷ್ಣಪ್ರಜ್ಞೆಯನ್ನು ಅಭ್ಯಸಿಸದೇ ಇರುವುದು. ಕೃಷ್ಣಪ್ರಜ್ಞೆಯನ್ನು ಪ್ರಜೆಗಳು ಮತ್ತು ಆಳುವವರು ಅನುಸರಿಸಬೇಕು. ನಿತ್ಯವೂ ಹರೇಕೃಷ್ಣ ಮಹಾಮಂತ್ರವನ್ನು ಪಠಿಸಬೇಕು ಮತ್ತು ಭಗವಂತನ ಸೇವೆಯಲ್ಲಿ ತಲ್ಲೀನರಾಗಬೇಕು. ಈ ರೀತಿ ಮಾಡುವ ಮೂಲಕ ಆತ್ಮಶುದ್ಧಿಯಾಗುವುದಲ್ಲದೇ, ದುಷ್ಚಟಗಳಿಗೆ ಮನಸ್ಸಿನಲ್ಲಿ ಮನೆಮಾಡಲು ಅವಕಾಶವೇ ಇರುವುದಿಲ್ಲ. ಆಗ ಆಳುವವರೂ ಪರಿಶುದ್ಧರಾಗುವರು, ಪ್ರಜೆಗಳೂ ಆಧ್ಯಾತ್ಮಿಕ ಮಾರ್ಗದಲ್ಲಿ ಸಾಗುವರು. ಭ್ರಷ್ಟಾಚಾರ ಸೇರಿದಂತೆ ಅನೇಕ ಹಗರಣಗಳ ಪಿಶಾಚಿಗಳು ತೊಲಗಿ ರಾಜ್ಯವು ರಾಮರಾಜ್ಯವಾಗುವುದು.






Leave a Reply