ಪ್ರಪಂಚದ ಚರಿತ್ರೆಯಲ್ಲಿ ದ್ವಾಪರಯುಗದಲ್ಲಿ ಭಗವಾನ್ ಶ್ರೀಕೃಷ್ಣ ತನ್ನ ಎಂಟನೆಯ ಅವತಾರ ಕಾಲದಲ್ಲಿ ಕುರುಕ್ಷೇತ್ರ ಯುದ್ಧದಲ್ಲಿ ದುಷ್ಟ ಸಂಹಾರ ಮಾಡಿದ ತೃಪ್ತಿಯೊಂದಿಗೆ ಧರ್ಮಿಷ್ಠರಾದ ಪಾಂಡವರನ್ನು ರಾಜ ಗದ್ದುಗೆಯಲ್ಲಿ ಕುಳ್ಳಿರಿಸಿದ್ದಾನೆ. ಕುರುಕ್ಷೇತ್ರ ಯುದ್ಧದಲ್ಲಿ 10 ದಿನದ ಘನಘೋರ ಯುದ್ಧಮಾಡಿ ಗಾಯಗೊಂಡು ಶರಶಯ್ಯೆಯ ಮೇಲೆ ಮಲಗಿರುವ ಸಕಲ ಶಾಸ್ತ್ರಕೋವಿದ – ಮೇಧಾವಿ – ಅನುಭವಿ – ಭೀಷ್ಮ ಪಿತಾಮಹನಿಂದ ಸೂಕ್ತ ಧರ್ಮಸೂತ್ರಗಳನ್ನು ಧರ್ಮರಾಯನು ಪಡೆಯಲು ಸೂಚಿಸಿದ್ದಾನೆ ಶ್ರೀಕೃಷ್ಣ.
ಶ್ರೀಕೃಷ್ಣನ ಆಜ್ಞಾನುಸಾರ ಪಂಚಪಾಂಡವರು ಭೀಷ್ಮರ ಶರಶಯ್ಯೆಯ ಸನ್ನಿಧಿಯಲ್ಲಿ ಕುಳಿತು ಗೌರವ ಸಮರ್ಪಿಸಿದ್ದಾರೆ. ಹಾಗೆಯೇ ತಮಗೆ ರಾಜನೀತಿಯನ್ನು ಬೋಧಿಸಲು ಬಿನ್ನವಿಸಿಕೊಂಡಿದ್ದಾರೆ.

ಬೃಹಸ್ಪತಿಯಿಂದ ರಾಜ್ಯಶಾಸ್ತ್ರವನ್ನು, ಶುಕ್ರಾಚಾರ್ಯರಿಂದ ನೀತಿಶಾಸ್ತ್ರವನ್ನು, ವಸಿಷ್ಠರ ಬಳಿ ವೇದಾಭ್ಯಾಸವನ್ನು, ಮಾರ್ಕಂಡೇಯರಿಂದ ವೈರಾಗ್ಯ ಲಕ್ಷಣವನ್ನೂ, ಪರಶುರಾಮರಿಂದ ಶಸ್ತ್ರಾಸ್ತ್ರ ಯುದ್ಧ ಪ್ರಾವಿಣ್ಯವನ್ನು ಪಡೆದಿರುವ ಭೀಷ್ಮರೆಂದರೆ ಸರ್ವ ವಿದ್ಯೆಯ ಗಣಿಯೇ ಆಗಿದ್ದಾರೆ. ಅಂತಹ ಮಹಾನ್ ವ್ಯಕ್ತಿಯಿಂದ ಉಪದೇಶ ಪಡೆಯಲು ಭೀಷ್ಮರ ಪದತಲದಲ್ಲಿ ಕುಳಿತು ಜ್ಞಾನವಾಹಿನಿಗಾಗಿ ಕಾದಿದ್ದಾರೆ.
ಈಗಾಗಲೇ ಚಕ್ರವರ್ತಿಯಾಗಿ ಪಟ್ಟಾಭಿಷಿಕ್ತನಾದ ಯುಧಿಷ್ಠಿರ ತನ್ನ ಮಂತ್ರಿ ಮಂಡಳವನ್ನು ಈ ಪ್ರಕರಣದಲ್ಲಿ ಆಯೋಜಿಸಿ ಪ್ರಕಟಿಸಿದ್ದಾನೆ. ಭೀಮಸೇನ – ಯುವರಾಜ, ವಿದುರ – ಸಲಹಾಮಂತ್ರಿ, ಅರ್ಜುನ – ಸೇನಾಪತಿ, ಸಂಜಯ – ವಾಣಿಜ್ಯಮಂತ್ರಿ, ನಕುಲ – ರಕ್ಷಣಾಮಂತ್ರಿ, ಸಹದೇವ – ಚಕ್ರವರ್ತಿಯ ರಕ್ಷಕ, ಧೃತರಾಷ್ಟ್ರ ಪುತ್ರ ಯುಯುತ್ಸು – ಪ್ರಾಂತಗಳ ರಾಜ್ಯಪಾಲ, ಹಾಗೂ ಧೌಮ್ಯ ಮಹರ್ಷಿಗಳನ್ನು ಕುಲಗುರು – ರಾಜಗುರುಗಳನ್ನಾಗಿ ಸ್ವೀಕರಿಸಿ ರಾಜ್ಯಭಾರ ಮಾಡುತ್ತಿದ್ದರು.
ಭೀಷ್ಮರಿಂದ ರಾಜನೀತಿ – ರಾಜಧರ್ಮದ ಉಪದೇಶ
ರಾಜನಾದವನು ತನ್ನ ರಾಜ್ಯದ ನಿಶ್ಚಿತವಾದ ಗಡಿಯನ್ನು ಹೊಂದಿರಬೇಕು. ಗಡಿಯೊಳಗೆ ಸೂಕ್ತವಾದ ಭದ್ರತಾ ಪ್ರದೇಶ, ಅರಣ್ಯ, ವೈರಿಗಳು ನುಗ್ಗದಂತೆ ಕಂದಕಗಳು, ಧನ-ಸಂಪತ್ತು ರಕ್ಷಣೆಗಾಗಿ ಭದ್ರವಾದ ಕೋಟೆ, ಧಾನ್ಯ ಸಂಗ್ರಹಿಸಿಡಲು ಸೂಕ್ತ ಉಗ್ರಾಣಗಳು. ಇಂತಹ ಸುವ್ಯವಸ್ಥೆಯನ್ನು ಹೊಂದಬೇಕು.
ರಾಜನಾದವನು ಧರ್ಮ ತೋರಿದ ದಾರಿಯಲ್ಲಿ ನಡೆಯಬೇಕು, ನ್ಯಾಯಪರನಾಗಬೇಕು, ವ್ಯಾಪಾರ ಚಾಣಾಕ್ಷತೆಯಿರಬೇಕು, ಆಶ್ರಿತರನ್ನು, ಅಶಕ್ತರನ್ನು ದಯೆ-ಕಾರುಣ್ಯದಿಂದ ಸಲಹಬೇಕು.
ಪ್ರಜೆಗಳ ಅಸಂತೋಷಕ್ಕೆ ಅವಕಾಶ ನೀಡಬಾರದು, ವಿಷಮ ಸ್ಥಿತಿಯಲ್ಲಿ ಸತ್ಯದ ದಾರಿಯಲ್ಲಿ ನಡೆಯಬೇಕು, ವ್ಯಾವಹಾರಿಕವಾಗಿಯೂ ನ್ಯಾಯಯುತನಾಗಿರಬೇಕು.
ದೀನರು, ವೃದ್ಧರು, ಅಂಗವಿಕಲರು, ವಿಧವೆಯರು, ಅನಾಥರು ಇವರೆಲ್ಲರ ಯೋಗಕ್ಷೇಮಕ್ಕೆ ಆದ್ಯತೆ, ಇದರಲ್ಲಿ ಸಶಕ್ತರಿಗೆ-ಉದ್ಯೋಗ ಕಲ್ಪಿಸುವುದು, ದೇಶದ ಜೀವನಾಡಿಯಾದ ಕೃಷಿ ಗೋರಕ್ಷಣೆಗೆ ಆದ್ಯತೆ ನೀಡುವುದು, ಕಾರ್ಮಿಕರಿಗೆ ನೀರು ಅನವರತ ದೊರೆಯುವಂತೆ ಮಾಡುವುದು, ಇದು ಉತ್ತಮ ರಾಜನ ಗುಣಗಳಾಗಬೇಕು.
ಪ್ರಜೆಗಳನ್ನು ಸ್ವಂತ ಮಕ್ಕಳಂತೆ ಕಾಪಾಡುವುದು, ಅವರು ಹಗಲಲ್ಲಾಗಲಿ -ರಾತ್ರಿಯಲ್ಲಾಗಲಿ ನಿರ್ಭಯವಾಗಿ ಸಂಚರಿಸುವಂತೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡುವುದು, ಮಾಡಬೇಕು.
ರಾಜನಾದವನು ತನ್ನ ರಾಜ್ಯದ ಬೊಕ್ಕಸ ಸದಾ ತುಂಬಿರುವಂತೆ ನೋಡಿಕೊಳ್ಳುವುದು, ಆದರೆ ತೆರಿಗೆ ವಿಧಿಸುವಲ್ಲಿ-ವ್ಯಾಪಾರಿ-ಉದ್ಯಮಿಗಳಿಂದ ಅವರ ಲಾಭದ ಆರನೆಯ ಒಂದು ಭಾಗವನ್ನು ತೆರಿಗೆಯಾಗಿ ಸಂಗ್ರಹಿಸುವುದು, ರೈತರು ಬೆಳೆಯುವ ಬೆಳೆಯಿಂದ ಆರನೆಯ ಒಂದು ಭಾಗ ಕರರೂಪದಲ್ಲಿ ಪಡೆದು ರಾಜ್ಯದ ತುರ್ತುಸ್ಥಿತಿಗಾಗಿ ಕಾದಿರಿಸುವುದು, ಪದಾರ್ಥಗಳ ಸಾಗಣೆ ಮಾಡುವವರಿಗೆ ರಕ್ಷಣೆ, ರೈತರಿಗೆ ಕಾಡುಪ್ರಾಣಿಗಳಿಂದ ರಕ್ಷಣೆ, ಇತ್ಯಾದಿಗಳನ್ನು ಮಾಡಲೇಬೇಕು.
ಪ್ರಜೆಗಳು ಹಾಗೂ ರೈತರಿಂದ ಕರ ವಸೂಲು ಮಾಡುವಾಗ ನಿಷ್ಕರುಣಿಯಾಗಬಾರದು. ಅವರು ಸ್ವಸಂತೋಷದಿಂದ ಪ್ರಾಮಾಣಿಕವಾಗಿ ತೆರಿಗೆ ಕೊಡುವಂತೆ ಅವಕಾಶ ಕಲ್ಪಿಸಬೇಕು. ಅರ್ಥಾತ್ ಜೇನುಹುಳುವು ವಿವಿಧ ಪುಷ್ಪಗಳಿಂದ ಜೇನು ಸಂಗ್ರಹಿಸುವಂತೆ – ತೆರಿಗೆಯನ್ನು ಸಂಗ್ರಹಿಸಿ ತನ್ನ ಕೋಶಾಗಾರದಲ್ಲಿ ಕೂಡಿಸಿಡಬೇಕು – ಯಾವುದೇ ಸಂದರ್ಭದಲ್ಲಿ ಪ್ರಜೆಗಳ ತೆರಿಗೆ ಹಣವನ್ನು ಸ್ವಂತಕ್ಕೆ ಬಳಸಬಾರದು – ಭಂಡಾರದಲ್ಲಿ ಕೂಡಿಟ್ಟ ಹಣವು ದೇಶದ ರಕ್ಷಣೆ, ಪರಿಸರ ವಿಪತ್ತು – ಕ್ಷಾಮ, ಯುದ್ಧಕಾಲ, ಪ್ರವಾಹ ಇತ್ಯಾದಿಗಾಗಿ ಬಳಸಬೇಕು. ಭಂಡಾರದ ಹಣವನ್ನು ಪ್ರಜೆಗಳ ಉಪಯೋಗದ – ರಸ್ತೆಗಳು, ಚಿಕಿತ್ಸಾಲಯಗಳು, ನೀರಿನ ಅನುಕೂಲ, ವಿದ್ಯಾಗುರುಕುಲಗಳು, ಇತ್ಯಾದಿಗಾಗಿ ವ್ಯಯಿಸಬೇಕು.
ರಾಜನಾದವನು ತನ್ನ ರಾಜ್ಯದ ಆಡಳಿತ ವ್ಯವಸ್ಥೆಗಾಗಿ ಸೂಕ್ತ ಅಧಿಕಾರಿಗಳನ್ನು ನೇಮಿಸುವಾಗ ಅವರ ಗುಣ, ಯೋಗ್ಯತೆ, ಚಾಕಚಕ್ಯ, ರಾಜನಲ್ಲಿ ನಿಷ್ಠೆ, ಪ್ರಾಮಾಣಿಕ ನಡತೆಯನ್ನು ಮಾನದಂಡವಾಗಿಸಬೇಕು. ಪ್ರಮುಖ ಅಧಿಕಾರಿಗಳನ್ನು ಅರ್ಥಾತ್ – ಅಮಾತ್ಯ, ಸೇನಾಪತಿ, ಗೂಢಚಾರ, ಆಸ್ಥಾನಿಕ – ಹಾಗೂ ಗ್ರಾಮಾಧಿಕಾರಿಗಳನ್ನು ನೇಮಿಸುವಾಗ ಎಲ್ಲಾ ವಿಧದ ಅರ್ಹತೆಗಳನ್ನು ಪರೀಕ್ಷಿಸಬೇಕು. ಅಮಾತ್ಯ ಹುದ್ದೆ ಬಹು ಪ್ರಮುಖವಾದುದರಿಂದ ಶೀಲ ಸಂಪನ್ನತೆ, ತಾಳ್ಮೆ, ಸೂಕ್ಷ್ಮದೃಷ್ಟಿ, ಪ್ರಜೆಗಳಲ್ಲಿ ಹಿತಾಸಕ್ತಿ, ಆಡಳಿತದಲ್ಲಿ ಶ್ರದ್ಧೆ, ಧರ್ಮಶಾಸ್ತ್ರದ ತಿಳುವಳಿಕೆ, ಸಾಹಸಿ, ಹಾಗೂ ವಿದ್ವಾಂಸನಾಗಿರಬೇಕು.
ಉತ್ಕಟ ದೇಶಾಭಿಮಾನ, ಪರಾಕ್ರಮಿ, ಚಾಣಾಕ್ಷತೆ, ಯುದ್ಧದಲ್ಲಿ ಬಳಸುವ ವಿವಿಧ ತಂತ್ರಗಳ ಅರಿವು, ವ್ಯೂಹ ರಚನೆ, ಶತ್ರುವಿನ ಚಟುವಟಿಕೆಯ ಅರಿವು, ಸೇನೆಯೊಳಗೆ ಸಾಮರಸ್ಯ, ಆಯುಧಗಳನ್ನು ಬಳಸುವ ವಿಧಾನದ ಸಂಪೂರ್ಣ ತರಬೇತಿ, ಸೇನೆಯಲ್ಲಿ ಶಿಸ್ತು ಇತ್ಯಾದಿ ಇರುವವನೇ ಸೇನಾಧಿಪತಿಯಾಗಬೇಕು. ಸೇನೆಯ ವಿವಿಧ ಹಂತದ ಅಧಿಕಾರಿಗಳಲ್ಲೂ ಇದೆ ಬಗೆಯ ಜ್ಞಾನವಿರಬೇಕು. ಬೇಹುಗಾರರು- ಗೂಢಚಾರರಾಗಬೇಕಾದವರಲ್ಲಿ ಗೂಢಾರ್ಥ ಗ್ರಹಿಸುವ ಶಕ್ತಿ, ಹಸಿವು,ಬಾಯಾರಿಕೆ, ದೇಹಶ್ರಮ ಸಹಿಸಿಕೊಳ್ಳುವಿಕೆ, ಎಂತಹ ಸಂದರ್ಭದಲ್ಲಿಯೂ ತನ್ನ ಮಾತೃದೇಶದ ರಹಸ್ಯವನ್ನು ಕಾಪಾಡಬಲ್ಲ ಮನಸ್ಥಿತಿಯಿರಬೇಕು.
ರಾಜನು ನಾಡಿಗಾಗಿ ಪ್ರಧಾನ ತೀರ್ಮಾನ ತೆಗೆದುಕೊಳ್ಳುವಾಗ ಆಸ್ಥಾನಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು, ಆಸ್ಥಾನಿಕರಲ್ಲಿ ದೇಶಪ್ರೇಮ ದೇಶಹಿತ ಜಾಗೃತವಾಗಿರಬೇಕು. ಆಸ್ಥಾನಿಕರಾದವರು ರಾಜನಿಗೆ ನ್ಯಾಯದ ನಡೆಯಲ್ಲಿ ಚಲಿಸುವಂತೆ ಉತ್ತೇಜಿಸಬೇಕು. ಜೊತೆಯಲ್ಲಿ ಧರ್ಮಸೂಕ್ಷ್ಮ ತಿಳಿಸುವ ಶಕ್ತಿಯನ್ನು ಹೊಂದಿರಬೇಕು.
ರಾಜ್ಯಾಡಳಿತ ಸೂತ್ರ
ರಾಜ್ಯವನ್ನು ಸೂಕ್ತವಾಗಿ ಗ್ರಾಮಗಳನ್ನಾಗಿ ವಿಂಗಡಿಸಬೇಕು, ಆ ಗ್ರಾಮಗಳ ಆಡಳಿತಕ್ಕೆ ಗ್ರಾಮಾಧಿಕಾರಿಯಿರಬೇಕು, ಅಂತಹ ಹತ್ತು ಗ್ರಾಮಗಳಿಗೆ ಒರ್ವ ಮೇಲ್ವಿಚಾರಕ ಅಧಿಕಾರಿಯಿರಬೇಕು. ಅಧಿಕಾರದಲ್ಲಿ ನಾಲ್ಕು ಹಂತವಾದ ಅನಂತರ ಕೊನೆಯ ಸಚಿವನೊಬ್ಬನ ಆಡಳಿತದಲ್ಲಿ ಇವುಗಳು ಸರಪಣಿಯಂತೆ ಬರಬೇಕು. ಗ್ರಾಮಾಧಿಕಾರಿಯಾದವನು ಜನತೆಯ ಮನಸ್ಸನ್ನು ತಿಳಿದವನಿರಬೇಕು.

ರಾಜನಾದವನು ಹೊರಗಿನ ಆಕ್ರಮಣಕಾರರ ಕುರಿತು ನಿರಂತರ ಎಚ್ಚರಿಕೆಯಲ್ಲಿರಬೇಕು. ರಾಜಧಾನಿಯ ಸುತ್ತಲೂ ಸುಭದ್ರಕೋಟೆ-ಕಂದಕಗಳನ್ನು ನಿರ್ಮಿಸಿರಬೇಕು. ಆಯಕಟ್ಟಿನ ಸ್ಥಳಗಳಲ್ಲಿ ಗಸ್ತು ಸೈನಿಕರು ಕಾರ್ಯನಿರತರಿರಬೇಕು. ಒಂದು ಸಂದರ್ಭ ಆಕ್ರಮಣಕಾರರು ಹಲವಾರು ತಿಂಗಳು ಕೋಟೆಯನ್ನು ಆಕ್ರಮಿಸಿಕೊಂಡೇ ಇದ್ದರೂ ಪ್ರಜೆಗಳಿಗೆ ಸಾಕಾಗುವಷ್ಟು ಧಾನ್ಯ, ಆಹಾರ ಸಂಗ್ರಹವನ್ನಿಟ್ಟುಕೊಂಡಿರಬೇಕು. ಸೈನಿಕರಿಗೆ ಉತ್ತಮ ವೇತನವನ್ನು ನೀಡುವುದರ ಮೂಲಕ ಅವರನ್ನು ಖುಷಿಪಡಿಸಿಟ್ಟುಕೊಂಡಿರಬೇಕು.
ರಾಜನಾದವನು ಸ್ವಯಂ-ದೇವ-ಧರ್ಮದಲ್ಲಿ ನಿರಂತರ ನಂಬಿಕೆಯಿಟ್ಟು ಹೋಮ, ಹವನ, ಪೂಜೆ ಇತ್ಯಾದಿಯನ್ನು ದೇವಪ್ರೀತ್ಯರ್ಥವಾಗಿ ಮಾಡುತ್ತಿರಬೇಕು – ಅರ್ಹರಿಗೆ ದಾನಗಳನ್ನು ನೀಡುತ್ತಿರಬೇಕು – ವೃದ್ಧರು-ಹಿರಿಯರನ್ನು ಗೌರವಿಸಬೇಕು. ವೃದ್ಧಾಪ್ಯದಿಂದ ಕಂಗೆಟ್ಟವರ ಪಾಲನೆ ಪೋಷಣೆಗಾಗಿ ವ್ಯವಸ್ಥೆ ಇಟ್ಟಿರಬೇಕು.
ಇಂತಹ ಅಮೂಲ್ಯ ರಾಜಧರ್ಮದ ಉಪದೇಶ ನೀಡಿದ ಭೀಷ್ಮರು ಧರ್ಮರಾಯನಿಗೆ ಆಶೀರ್ವದಿಸಿ ಬೀಳ್ಕೊಟ್ಟರು.
ಉಪಸಂಹಾರ : ದ್ವಾಪರಯುಗವಾಗಲಿ, ಕಲಿಯುಗವಾಗಲಿ, ರಾಜನಾದವನು ಪ್ರಜೆಗಳ ಪೋಷಣೆಯನ್ನು ಹೇಗೆ ಮಾಡಬೇಕು – ಧರ್ಮದ ದಾರಿಯಲ್ಲಿ ಹೇಗೆ ನಡೆಯಬೇಕೆನ್ನುವುದನ್ನು ಭೀಷ್ಮಚಾರ್ಯರು ತಮ್ಮ ರಾಜಧರ್ಮೋಪದೇಶದ ಮೂಲಕ ಜಗತ್ತಿಗೆ ನೀಡಿದರು. ಆದರಿಂದು ಧರ್ಮದ ನೆಲೆಯಿಲ್ಲದ, ಪ್ರಾಮಾಣಿಕತೆ ಶೂನ್ಯವಾಗಿರುವ ವಾತಾವರಣದಲ್ಲಿ ಜೀವಿಸುತ್ತಿದ್ದೇವೆ. ರಾಮಾಯಣದಲ್ಲಿ ಉಲ್ಲೇಖಿತ ರಾಮರಾಜ್ಯದ ಕನಸು ನನಸಾದೀತೆ? ಕಾಲವೇ ಉತ್ತರಿಸಬೇಕು.






Leave a Reply