ವಿಶ್ವರೂಪ ದರ್ಶನ

ಅರ್ಜುನನು ವಿಶ್ವರೂಪದಲ್ಲಿ ಎಲ್ಲ ದೇವತೆಗಳನ್ನೂ, ಎಲ್ಲ ಜೀವಕೋಟಿಗಳನ್ನೂ ನೋಡುತ್ತಾನೆ. ಅಲ್ಲಿ ಕಮಲದ ಹೂವಿನ ಮೇಲೆ ಕುಳಿತ ಬ್ರಹ್ಮನೂ, ಶಿವನೂ, ಎಲ್ಲ ಋಷಿಮುನಿಗಳೂ, ದಿವ್ಯ ಸರ್ಪಗಳೂ ಅರ್ಜುನನಿಗೆ ಕಾಣುತ್ತಾರೆ. ಆದಿಯೂ, ಅಂತ್ಯವೂ, ಅಕ್ಷರನೂ, ಅಕ್ಷಯನೂ ಆದ ಆ ದಿವ್ಯ ಅನಂತರೂಪವು ದ್ಯಾವಾಪೃಥಿವಿಗಳನ್ನು ವ್ಯಾಪಿಸಿತ್ತು. ಸಮಸ್ತ ಕೌರವರೂ, ಭೀಷ್ಮ ದ್ರೋಣಾದಿಗಳೂ ವಿಶ್ವರೂಪದ ಭಯಂಕರ ಬಾಯಿಯೊಳಗೆ ಸಮುದ್ರವನ್ನು ಸೇರುವ ನದಿಗಳಂತೆ ಪ್ರವೇಶಿಸುತ್ತಾರೆ. `ಯಥಾ ಪ್ರದೀಪ್ತಂ ಜ್ವಲನಂ ಪತಂಗಾವಿಶಂತಿ ನಾಶಾಯ ಸಮೃದ್ಧ ವೇಗಾಃ’ ಎಂಬಂತೆ ಬೆಂಕಿಯನ್ನು ಸೇರುವ ಪತಂಗಗಳಂತೆ ಅರ್ಜುನನಿಗೆ ಅವರೆಲ್ಲಾ ಕಂಡುಬರುತ್ತಾರೆ.

ಅನೇಕ ವಕ್ತ್ರ ನಯನಂ ಅನೇಕಾದ್ಭುತ ದರ್ಶನಮ್‌ ।

ಅನೇಕ ದಿವ್ಯಾಭರಣಂ ದಿವ್ಯಾನೇಕ ಉದ್ಯತಾಯುಧಮ್‌ ॥

ದಿವ್ಯ ಮಾಲ್ಯಾಮ್ಬರ ಧರಂ ದಿವ್ಯ ಗನ್ಧಾನುಲೇಪನಮ್‌ ।

ಸರ್ವಾಶ್ಚರ್ಯಮಯಂ ದೇವಂ ಅನನ್ತಂ ವಿಶ್ವತೋಮುಖಮ್‌ ॥

(ಗೀತಾ:11.10-11)

ಅರ್ಜುನನು ಆ ವಿಶ್ವರೂಪದಲ್ಲಿ ಅಸಂಖ್ಯಾತವಾದ  ಬಾಯಿಗಳನ್ನೂ, ಅಸಂಖ್ಯಾತವಾದ ಕಣ್ಣುಗಳನ್ನೂ, ಅಸಂಖ್ಯಾತವಾದ ಅದ್ಭುತ ದರ್ಶನಗಳನ್ನೂ ಕಂಡನು. ಆತನು ದಿವ್ಯಮಾಲೆಗಳನ್ನೂ ವಸ್ತ್ರಗಳನ್ನೂ ಧರಿಸಿದ್ದನು. ಹಲವು ದಿವ್ಯ ಗಂಧಗಳನ್ನು  ಲೇಪಿಸಿಕೊಂಡಿದ್ದನು. ಎಲ್ಲವೂ ಆಶ್ಚರ್ಯಮಯವಾಗಿತ್ತು, ಉಜ್ವಲವಾಗಿತ್ತು, ಅನಂತವಾಗಿತ್ತು, ವಿಶ್ವತೋಮುಖವಾಗಿತ್ತು.

ಭಗವಾನ್‌ ಶ್ರೀ ಕೃಷ್ಣನ ವಿಶ್ವರೂಪವನ್ನು ಕಂಡ ಅರ್ಜುನನು ಉದ್ಗರಿಸುವ ಮಾತಿದು. ಅನೇಕ ಮುಖಗಳು, ಅಸಂಖ್ಯ ಕಣ್ಣುಗಳು, ಅದ್ಭುತ ರೂಪವದು. ದಿವ್ಯಮಾಲೆ, ದಿವ್ಯ ಆಯುಧಗಳು, ದಿವ್ಯ ಆಭರಣಗಳು, ದಿವ್ಯ ಗಂಧಾನುಲೇಪನ, ಆಶ್ಚರ್ಯ, ಉಜ್ವಲ, ಅನಂತತೆಯ ಆ ವಿಶ್ವತೋಮುಖವನ್ನು ಕಂಡು ಅರ್ಜುನ ಮೂಕವಿಸ್ಮಿತನಾಗುತ್ತಾನೆ. ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳಲ್ಲಿ ಹನ್ನೊಂದನೆಯದೇ ವಿಶ್ವರೂಪ ದರ್ಶನ. ಮೊದಲ ಹತ್ತು ಅಧ್ಯಾಯಗಳಲ್ಲಿ ವಿವಿಧ ವಿಚಾರಗಳ ಕುರಿತಾಗಿ ಅರ್ಜುನ ಶ್ರೀಕೃಷ್ಣನೊಂದಿಗೆ ಚರ್ಚಿಸಿರುತ್ತಾನೆ. ಅದರ ಫಲವಾಗಿ ಅರ್ಜುನನಿಗೆ ಭಗವಂತನ ವಿಶ್ವರೂಪವನ್ನು ನೋಡಬೇಕೆಂಬ ಹಂಬಲ ಉಂಟಾಗುತ್ತದೆ.

ಏವಂ ಏತದ್‌ ಯಥಾತ್ಥ  ತ್ವಂ ಆತ್ಮಾನಂ ಪರಮೇಶ್ವರ ।

ದ್ರಷ್ಟುಂ ಇಚ್ಛಾಮಿ ತೇ ರೂಪಂ ಐಶ್ವರಂ ಪುರುಷೋತ್ತಮ ॥

(ಗೀತಾ: 11.3)

ಪರಮ ಪ್ರಭುವೇ, ಪುರುಷೋತ್ತಮನೇ, ನೀನು ನಿನ್ನನ್ನು ವರ್ಣಿಸಿಕೊಂಡಂತೆ, ನಿನ್ನ ವಾಸ್ತವ ಸ್ಥಿತಿಯಲ್ಲಿ ನನ್ನ ಮುಂದೆ ಕಾಣುತ್ತಿದ್ದೇನೆ.  ಆದರೂ ನೀನು ಈ ವಿಶ್ವದ ಅಭಿವ್ಯಕ್ತಿಯಲ್ಲಿ ಹೇಗೆ ಪ್ರವೇಶಿಸಿರುವೆ ಎಂದು ಕಾಣಲು ಬಯಸುತ್ತೇನೆ; ನಿನ್ನ ಆ ರೂಪವನ್ನು ನೋಡಲು ಬಯಸುತ್ತೇನೆ.

ವಿಶ್ವರೂಪವನ್ನು ನೋಡಬೇಕೆಂಬ ಅರ್ಜುನನ ಪ್ರಾರ್ಥನೆಗೆ ಶ್ರೀಕೃಷ್ಣ ಒಪ್ಪುತ್ತಾನೆ. `ಪಶ್ಯ ಮೇ ಪಾರ್ಥ ರೂಪಾಣಿ ಶತಶೋಥ ಸಹಸ್ರಶಃ’ ಎಂದು ತನ್ನ ಸಾವಿರಾರು ದಿವ್ಯಾಕೃತಿಗಳನ್ನು ನೋಡೆಂದು ಸಿದ್ಧನಾಗುತ್ತಾನೆ. ಅದಕ್ಕಾಗಿ `ದಿವ್ಯಂ ದದಾಮಿ ತೇ ಚಕ್ಷುಃ’ ಎಂದು ದಿವ್ಯ ಚಕ್ಷುಗಳನ್ನು ಆರ್ಜುನನಿಗೆ ನೀಡುತ್ತಾನೆ. ಈ ಅನುಗ್ರಹವಿಲ್ಲದೇ ಹೋದರೆ ಅರ್ಜುನನಿಗೆ ಭಗವಂತನ ಐಶ್ವರ್ಯಯೋಗವನ್ನು ನೋಡಲು ಅಸಾಧ್ಯ. ಈ ಹಿಂದೆ ಯಾರೂ ಇಂತಹ ವಿಶ್ವರೂಪವನ್ನು ನೋಡಿದವರಿಲ್ಲ. ಕೌರವ ಪಾಂಡವರ ನಡುವೆ ಸಂಧಾನವನ್ನು ಮಾಡುವುದಕ್ಕಾಗಿ ಶ್ರೀಕೃಷ್ಣ ಹಸ್ತಿನಾವತಿಗೆ ಹೋದಾಗ ದುರ್ಯೋಧನನಿಗೆ ತೋರಿಸಿದ ವಿಶ್ವರೂಪಕ್ಕಿಂತ ಇದು ಬೇರೆಯಾದುದು. ಕುರುಕ್ಷೇತ್ರದಲ್ಲಿ ಅರ್ಜುನನಿಗೆ ತೋರಿಸಿದ ವಿಶ್ವರೂಪದಲ್ಲಿ ವಿರಾಡ್‌ ದರ್ಶನವು ಮೂಡಿರುವುದು ಅದರ ವಿಶೇಷತೆ. ದುರ್ಯೋಧನನೇ ಮೊದಲಾಗಿ ಭೀಷ್ಮ-ದ್ರೋಣ-ಕರ್ಣಾದಿಗಳು ಆ ವಿಶ್ವರೂಪದೊಳಗೆ ಆಹುತಿಯಾಗಿ ಹೋಗುವುದನ್ನು ಕಂಡ ಅರ್ಜುನನಿಗೆ ತಾನು ನಿಮಿತ್ತಮಾತ್ರನೆಂಬ ಅರಿವುಂಟಾಗುತ್ತದೆ. ಈ ವಿರಾಟ್‌ ದರ್ಶನದ ಹಿಂದೆ ಭಾರತೀಯ ಕರ್ಮಸಿದ್ಧಾಂತವೇ ಮಡುಗಟ್ಟಿನಿಂತಿದೆ. ವಿಶ್ವದ ಅನಂತತೆಯನ್ನು ತಿಳಿದ ಅರ್ಜುನನಿಗೆ ತಾನು ಕೇವಲ ಯಃಕಶ್ಚಿತ್‌ ವ್ಯಕ್ತಿಯೆಂಬ ಜ್ಞಾನೋದಯವಾಗುತ್ತದೆ: ಭಗವಾನ್‌ ಶ್ರೀಕೃಷ್ಣನು ಅಖಿಲಾಂಡ ಕೋಟಿ ಬ್ರಹ್ಮಾಂಡನಾಯಕನೆಂದೂ, ಅಣುರೇಣು ತೃಣಕಾಷ್ಠ ಪರಿಪೂರ್ಣನೆಂದೂ ಭಾಸವಾಗಿ ಪರಮಾತ್ಮನ ಪುರುಷೋತ್ತಮ ತತ್ತ್ವದ ದರ್ಶನವಾಗುತ್ತದೆ. ಈ ಆಧ್ಯಾತ್ಮಿಕ ದೃಷ್ಟಿಕೋನದ ಅರ್ಥಾನುಸಂಧಾನವೇ ಭಗವದ್ಗೀತೆಯ `ವಿರಾಡ್‌ದರ್ಶನ’! ಇದುವೇ ನಮ್ಮನ್ನು ಸಂಸಾರ ಸಾಗರದಿಂದ ಪಾರುಮಾಡಬಲ್ಲ ದರ್ಶನ ಸಾರ!

ಪಶ್ಯಾಮಿ ದೇವಾಂಸ್ತವ ದೇವ ದೇಹೇ

ಸರ್ವಾಂಸ್ತಥಾ ಭೂತವಿಶೇಷಸಙ್ಘಾನ್‌ ।

ಬ್ರಹ್ಮಾಣಮೀಶಂ ಕಮಲಾಸನಸ್ಥಮ್‌

ಋಷೀಂಶ್ಚ ಸರ್ವಾನುರುಗಾಂಶ್ಚ ದಿವ್ಯಾನ್‌ ॥

(ಗೀತಾ: 11.15)

ಅರ್ಜುನನು ಹೀಗೆ ಹೇಳಿದನು – ಪ್ರೀತಿಯ ಪ್ರಭು ಶ್ರೀಕೃಷ್ಣನೇ! ಎಲ್ಲ ದೇವತೆಗಳು ಮತ್ತು ಇತರ ಹಲವಾರು ಜೀವಿಗಳು ನಿನ್ನ ದೇಹದಲ್ಲಿ ಸೇರಿರುವುದನ್ನು ಕಾಣುತ್ತಿದ್ದೇನೆ.  ಬ್ರಹ್ಮನು ಕಮಲದ ಮೇಲೆ ಕುಳಿತಿರುವುದನ್ನು, ಶಿವ ಮತ್ತು ಎಲ್ಲ ಋಷಿಗಳನ್ನು ಮತ್ತು ದಿವ್ಯ ಸರ್ಪಗಳನ್ನು ಕಾಣುತ್ತಿದ್ದೇನೆ.

ಅರ್ಜುನನು ವಿಶ್ವರೂಪದಲ್ಲಿ ಎಲ್ಲ ದೇವತೆಗಳನ್ನೂ, ಎಲ್ಲ ಜೀವಕೋಟಿಗಳನ್ನು ನೋಡುತ್ತಾನೆ. ಅಲ್ಲಿ ಕಮಲದ ಹೂವಿನ ಮೇಲೆ ಕುಳಿತ ಬ್ರಹ್ಮನೂ, ಶಿವನೂ, ಎಲ್ಲ ಋಷಿಮುನಿಗಳೂ, ದಿವ್ಯ ಸರ್ಪಗಳೂ ಅರ್ಜುನನಿಗೆ ಕಾಣುತ್ತಾರೆ. ಆದಿಯೂ, ಅಂತ್ಯವೂ, ಅಕ್ಷರನೂ, ಅಕ್ಷಯನೂ ಆದ ಆ ದಿವ್ಯ ಅನಂತರೂಪವು ದ್ಯಾವಾಪೃಥಿವಿಗಳನ್ನು ವ್ಯಾಪಿಸಿತ್ತು. ಸಮಸ್ತ ಕೌರವರೂ, ಭೀಷ್ಮ ದ್ರೋಣಾದಿಗಳೂ ವಿಶ್ವರೂಪದ ಭಯಂಕರ ಬಾಯಿಯೊಳಗೆ ಸಮುದ್ರವನ್ನು ಸೇರುವ ನದಿಗಳಂತೆ ಪ್ರವೇಶಿಸುತ್ತಾರೆ. `ಯಥಾ ಪ್ರದೀಪ್ತಂ ಜ್ವಲನಂ ಪತಂಗಾವಿಶಂತಿ ನಾಶಾಯ ಸಮೃದ್ಧ ವೇಗಾಃ’ ಎಂಬಂತೆ ಬೆಂಕಿಯನ್ನು ಸೇರುವ ಪತಂಗಗಳಂತೆ ಅರ್ಜುನನಿಗೆ ಅವರೆಲ್ಲಾ ಕಂಡುಬರುತ್ತಾರೆ. ಎಷ್ಟು ಸಾರ್ಥಕವಾದ ಉಪಮಾಲಂಕಾರ!

ಆಗ ಕೃಷ್ಣನು ಹೇಳುವ ಮಾತು ಬಹಳ ಅರ್ಥಪೂರ್ಣವಾದುದು.

ತಸ್ಮಾತ್ತ್ವಮುತ್ತಿಷ್ಠ ಯಶೋ ಲಭಸ್ವ

ಜಿತ್ವಾ ಶತ್ರೂನ್‌ ಭುಙ್ಕ್ಷ್ವ ರಾಜ್ಯಂ ಸಮೃದ್ಧಮ್‌ ।

ಮಯೈವೈತೇ ನಿಹತಾಃ ಪೂರ್ವಮೇವ

ನಿಮಿತ್ತಮಾತ್ರಂ ಭವ ಸವ್ಯಸಾಚಿನ್‌ ॥

(ಗೀತಾ: 11.33)

“ಅರ್ಜುನಾ, ಎದ್ದೇಳು, ಯುದ್ಧ ಮಾಡಿ ಕೀರ್ತಿ ಲಾಭವನ್ನು ಪಡೆ. ನಿನ್ನ ಶತ್ರುಗಳನ್ನು ಸೋಲಿಸಿ ಸಮೃದ್ಧವಾದ ರಾಜ್ಯಸುಖವನ್ನು ಅನುಭವಿಸು. ಅವರೆಲ್ಲಾ ಈಗಾಗಲೇ ನನ್ನಿಂದ ಹತರಾಗಿದ್ದಾರೆ. ನೀನೀಗ ಈ ಯುದ್ಧದಲ್ಲಿ ಕೇವಲ ಒಂದು ನಿಮಿತ್ತವಾಗಿದ್ದೀಯಾ, ಅಷ್ಟೇ.”

ಎಂತಹ ಮಾತು! ಕೌರವರೆಲ್ಲರೂ ಭಗವಂತನಿಂದ ಆಗಲೇ ಹತರಾಗಿದ್ದಾರೆ! ಇನ್ನು ಕುರುಕ್ಷೇತ್ರದ ಯುದ್ಧ ಆರಂಭವಾಗಿಲ್ಲ. ಅರ್ಥಾತ್‌ ಮುಂದಾಗುವ ಯುದ್ಧದಲ್ಲಿ ಅರ್ಜುನನಿಂದ ಕೇವಲ ನಿಮಿತ್ತ ಮಾತ್ರವಾಗಿ ಕೌರವಪಕ್ಷದ ವೀರರು ಸಾಯುತ್ತಾರೆ. ಆ ಪರಮಪ್ರಭುವಿನ ಯೋಜನೆಯಂತೆ ಜಗತ್ತು ಹೇಗೆ ಪ್ರವರ್ತಿತವಾಗಿದೆ ಎಂಬುದಕ್ಕೆ ಈ ಮಾತು ಉದಾಹರಣೆಯಾಗಬಲ್ಲದು. ಇದನ್ನು ಅರ್ಥ ಮಾಡಿಕೊಳ್ಳುವುದೇ ನಿಜವಾದ ಕೃಷ್ಣಪ್ರಜ್ಞೆ.

ಆಗ ಅರ್ಜುನನಿಗೆ ಭಗವಂತನ ಸರ್ವನಿಯಾಮಕ ಶಕ್ತಿಯ ಅರಿವಾಗುತ್ತದೆ. ಶ್ರೀಕೃಷ್ಣನ ಮಹಿಮೆಯನ್ನು ತಿಳಿಯದೆ, ಅವನನ್ನು ಕೇವಲ ಗೆಳೆಯನೆಂದು ಭಾವಿಸಿ ಏಕವಚನದಿಂದ ಕರೆದ ಅಪರಾಧಕ್ಕಾಗಿ ಅವನು ಭಗವಂತನಲ್ಲಿ ಕ್ಷಮೆಯನ್ನು ಬೇಡುತ್ತಾನೆ. ವಿಹಾರವೇ ಮೊದಲಾದ ಸಂದರ್ಭಗಳಲ್ಲಿ ಇತರ ಸ್ನೇಹಿತರ ಮುಂದೆ ಕೃಷ್ಣನನ್ನು ಪರಿಹಾಸ್ಯ ಮಾಡಿದೆನಲ್ಲಾ ಎಂಬ ತಪ್ಪಿನ ಅರಿವಾಗುತ್ತದೆ. ಸಮಸ್ತ ಪ್ರಪಂಚಕ್ಕೆ ತಂದೆಯಂತಿರುವ ಭಗವಂತನನ್ನು ತಾನು ಸರಿಯಾಗಿ ತಿಳಿಯದೇ ಹೋದೆನಲ್ಲಾ ಎಂಬ ನೋವು ಅವನನ್ನು ಕಾಡುತ್ತದೆ. ಆದ್ದರಿಂದ ತಸ್ಮಾತ್‌ ಪ್ರಣಮ್ಯ ಪ್ರಣಿಧಾಯ ಕಾಯಮ್‌ ಎಂದು ಅರ್ಜುನ ಶ್ರೀಕೃಷ್ಣನ ಮುಂದೆ ಸಾಷ್ಟಾಂಗ ಪ್ರಣಾಮ ಮಾಡಿ ಪ್ರಾರ್ಥಿಸುತ್ತಾನೆ. ತನ್ನನ್ನು ಕ್ಷಮಿಸೆಂದು ಗೋಗರೆಯುತ್ತಾನೆ.

ವಿರಾಡ್‌ದರ್ಶನವನ್ನು ನೋಡಿ ಭಯಗ್ರಸ್ತನಾದ ಅರ್ಜುನನನ್ನು ಸಂತೈಸಲು ಭಗವಂತನು ಚತುರ್ಭುಜನಾಗಿ ಪ್ರಕಟಗೊಳ್ಳುತ್ತಾನೆ. ಅನಂತರ ದ್ವಿಭುಜನಾಗಿ ಸೌಮ್ಯ ಮಾನುಷರೂಪವನ್ನು ತೋರುತ್ತಾನೆ. ಅರ್ಜುನ ಎಂತಹ ಭಾಗ್ಯಶಾಲಿ? ವಿರಾಡ್‌ ದರ್ಶನದ ವಿಶ್ವರೂಪ, ಸರ್ವಭುಂಜಕವಾದ ಕಾಲಸ್ವರೂಪ, ಚತುರ್ಭುಜ ನಾರಾಯಣ ಸ್ವರೂಪ ಈ ಎಲ್ಲವನ್ನು ಅರ್ಜುನ ನೋಡಿದ್ದಾನೆ. ಭಗವಂತನೇ ಹೇಳಿದಂತೆ ಅದು `ಸುದುರ್ದರ್ಶಂ’ ಅರ್ಥಾತ್‌ ನೋಡಲು ಬಹು ಕಷ್ಟವಾದ ರೂಪ. ಬ್ರಹ್ಮರುದ್ರಾದಿಗಳಿಗೂ ಕಾಣದೇ ಇರುವ ವಿಶೇಷ ರೂಪ. ವೇದಾಧ್ಯಯನದಿಂದಾಗಲೀ, ಯಜ್ಞಯಾಗಾದಿಗಳಿಂದಾಗಲೀ, ದಾನಾದಿ ಪುಣ್ಯಕಾರ್ಯದಿಂದಾಗಲೀ, ಉಗ್ರತಪಸ್ಸಿನಿಂದಾಗಲೀ ಈ ರೂಪವನ್ನು ಐಹಿಕ ಜಗತ್ತಿನಲ್ಲಿ ಯಾರೂ ನೋಡಲು ಸಾಧ್ಯವಿಲ್ಲ. ಇದು ಭಾರತ ಯುದ್ಧಾನಂತರ ಉದಂಕನೆಂಬ ಮಹರ್ಷಿ ನೋಡಿದ ವಿಶ್ವರೂಪಕ್ಕಾಗಲೀ, ಶಾಂತಿಪರ್ವದಲ್ಲಿ ನಾರದರು ಕಂಡ ವಿಶ್ವರೂಪಕ್ಕಾಗಲೀ ಸಮಾನವಾದುದಲ್ಲ. ಹೆಚ್ಚೇಕೆ ತಾಯಿ ಯಶೋದೆ ಬಾಲಕೃಷ್ಣನ ಬಾಯಿಯಲ್ಲಿ ಕಂಡ ಬ್ರಹ್ಮಾಂಡದರ್ಶನಕ್ಕೂ ಮಿಗಿಲಾದ ವಿಶ್ವರೂಪವಿದು.

ಈ ಅಧ್ಯಾಯದ ಕೊನೆಯಲ್ಲಿ ಭಗವಾನ್‌ ಶ್ರೀಕೃಷ್ಣ ಹೇಳುವ ಮಾತು ವಿಶ್ವರೂಪದರ್ಶನದ ಸಾರಸರ್ವಸ್ವ:

ಮತ್ಕರ್ಮಕೃನ್ಮತ್ಪರಮೋ ಮದ್ಭಕ್ತಃ ಸಙ್ಗವರ್ಜಿತಃ ।

ನಿರ್ವೈರಃ ಸರ್ವಭೂತೇಷು ಯಃ ಸ ಮಾಮೇತಿ ಪಾಣ್ಡವ ॥

(ಗೀತಾ: 11.55)

“ಯಾವನು ನನಗಾಗಿ ಕರ್ಮ ಮಾಡುತ್ತಾನೋ, ನನ್ನನ್ನೇ ಪರಮಗತಿಯೆಂದು ಭಾವಿಸುತ್ತಾನೋ, ಸಮಸ್ತ ಜೀವಿಗಳಲ್ಲಿ ಪ್ರೀತಿಯನ್ನು ತೋರಿಸುತ್ತಾನೋ ಅಂತಹ ಭಕ್ತನು ನನ್ನನ್ನೇ ಸೇರುತ್ತಾನೆ.” ಇದು ವಿರಾಡ್‌ದರ್ಶನದ ಭರತವಾಕ್ಯ. ಈ ಕೃಷ್ಣಪ್ರಜ್ಞೆಯನ್ನು ಅರ್ಜುನನಲ್ಲಿ ಉಂಟು ಮಾಡುವುದಕ್ಕೆಂದೇ ಈ ವಿಶ್ವರೂಪದರ್ಶನ. ಭಗವದ್ಗೀತೆಯ ಪಾರಾಯಣದಿಂದ ನಮ್ಮ ಅಂತರಂಗದಲ್ಲೂ ಈ ಕೃಷ್ಣಪ್ರಜ್ಞೆ ಅರಳುವಂತಾಗಲೀ.

ಈಶ್ವರಃ ಪರಮಃ ಕೃಷ್ಣಃ ಸಚ್ಚಿದಾನಂದ ವಿಗ್ರಹಃ ।

ಅನಾದಿರಾದಿರ್ಗೋವಿಂದಃ ಸರ್ವಕಾರಣ ಕಾರಣಮ್‌ ॥

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi