ಉಪವಾಸವು ಆಧ್ಯಾತ್ಮಿಕ ಶಿಸ್ತು ಎಂದು ಕೆಲವರು ಹೇಳುತ್ತಾರೆ. ಹಿಂದೂ, ಕ್ರಿಶ್ಚಿಯನ್ ಮತ್ತು ಇಸ್ಲಾಂ ಸೇರಿದಂತೆ ಅನೇಕ ಧರ್ಮಗಳು ವರ್ಷದ ವಿಶೇಷ ದಿನಗಳಲ್ಲಿ ಉಪವಾಸ ಕೈಗೊಳ್ಳಲು ಸೂಚಿಸುತ್ತವೆ. ಏಪ್ರಿಲ್ ತಿಂಗಳಿನಲ್ಲಿ ಬರುವ ಬೂದಿ ಬುಧವಾರ ಮತ್ತು ಶುಭ ಶುಕ್ರವಾರದಂದು ಉಪವಾಸ ಕೈಗೊಳ್ಳುವುದು ಕ್ಯಾಥೊಲಿಕರಿಗೆ ಕರ್ತವ್ಯವೆನಿಸಿದೆ. ಹಾಗೆಯೇ ಇಸ್ಲಾಂನ ಚಾಂದ್ರಮಾನ ಪಂಚಾಂಗದಂತೆ ಒಂಬತ್ತನೇ ತಿಂಗಳಿನಲ್ಲಿ ರಂಜಾನ್ ಉಪವಾಸ ಮಾಡುವುದು ಮುಸ್ಲಿಮರಿಗೆ ಕರ್ತವ್ಯವಾಗಿದೆ. ಮುಂಜಾನೆ ಆರಂಭವಾಗುವ ಉಪವಾಸವು ಸೂರ್ಯ್ಸ್ತದಲ್ಲಿ ಅಂತ್ಯಗೊಳ್ಳುತ್ತದೆ. ತಿಂಗಳಲ್ಲಿ ಎರಡು ಬಾರಿ ಬರುವ ಏಕಾದಶಿಯಂದು ಪೂರ್ಣ ಉಪವಾಸ ಅಥವಾ ಧಾನ್ಯಗಳನ್ನು ವರ್ಜಿಸುವುದು ಹಿಂದೂಗಳ ಕರ್ತವ್ಯ ಅಥವಾ ಪದ್ಧತಿಯಾಗಿದೆ.
ಉಪವಾಸವನ್ನು ದ್ವೇಷಿಸುವಿರಾ? ನಿಮಗೆ ಈಗ ಇಲ್ಲೊಂದು ಶುಭವಾರ್ತೆ. ಒಂದು ವರ್ಷದಲ್ಲಿ ಕೇವಲ ಎಂಟು ದಿನ ಉಪವಾಸವಿದ್ದರೆ ನಿಮ್ಮ ಪ್ರತಿರಕ್ಷಿತ ವ್ಯವಸ್ಥೆಗೆ (ಇಮ್ಯೂನ್ ಸಿಸ್ಟಂ) ಹಿಂದೆಂದೂ ಕಾಣದಷ್ಟು ಆಸರೆ ಸಿಗುತ್ತದೆ. ಉಪವಾಸವು ಹಳೆಯ ಮತ್ತು ಹಾಳಾದ ಜೀವ ಕೋಶಗಳನ್ನು ಪುನರ್ ಸ್ಥಾಪಿಸಲು ದೇಹಕ್ಕೆ ಉತ್ತೇಜನ ನೀಡುತ್ತದೆ. ಮುಖ್ಯವಾಗಿ ವೃದ್ಧಾಪ್ಯ ಅಥವಾ ಕ್ಯಾನ್ಸರ್ನಿಂದ ಪ್ರತಿರಕ್ಷಿತ ವ್ಯವಸ್ಥೆ ಹಾಳಾಗಿದ್ದರೆ ಅದನ್ನು ಉಪವಾಸ ಸರಿಪಡಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
“ಹೊಟ್ಟೆಗೆ ಆಹಾರವಿಲ್ಲದಿದ್ದಾಗ, ಶಕ್ತಿಯನ್ನು ಕಾಪಾಡಿಕೊಳ್ಳಲು ದೈಹಿಕ ಪ್ರಕೃತಿ ಅಥವಾ ವ್ಯವಸ್ಥೆಯು ಪ್ರಯತ್ನಿಸುತ್ತದೆ. ಆ ರೀತಿ ಶಕ್ತಿ ಸಂರಕ್ಷಣೆಗೆ ಮಾಡಬಹುದಾದ ಒಂದು ಕ್ರಮವೆಂದರೆ ಅಗತ್ಯವಿಲ್ಲದ ಅಥವಾ ನಾಶವಾಗಬಹುದಾದ ಅಪಾರ ಸಂಖ್ಯೆಯ ಪ್ರತಿರಕ್ಷಿತ ಕೋಶಗಳ ಮರುಬಳಕೆ,” ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ದೀರ್ಘಾಯುಷ್ಯ ವೃತ್ತಿಪರ ವಾಲ್ಟರ್ ಲಾಂಗೋ ವಿವರಿಸಿದ್ದಾರೆ.
ಪ್ರತಿ ಆರು ತಿಂಗಳಿನಲ್ಲಿ ಎರಡು ಅಥವಾ ನಾಲ್ಕು ದಿನಗಳ ಕಾಲ ಉಪವಾಸವಿದ್ದರೆ, ಶೇಖರಗೊಂಡಿದ್ದ ಕೊಬ್ಬು ಮತ್ತು ಸಕ್ಕರೆಯನ್ನು ಬಳಸಿ ಮತ್ತು ಸವೆದ ಕೋಶಗಳನ್ನು ಬೇರ್ಪಡಿಸಿ ದೇಹವು ಜೀವಂತ ಸ್ಥಿತಿಯಲ್ಲಿರುವುದನ್ನು ಸಂಶೋಧಕರು ಅಧ್ಯಯನದ ಸಂದರ್ಭದಲ್ಲಿ ಕಂಡುಕೊಂಡರು. ಇಡೀ ವ್ಯವಸ್ಥೆಯನ್ನು ಪುನರ್ ಉತ್ಪಾದಿಸು ಮತ್ತು ಪುನರ್ ನಿರ್ಮಿಸು ಎಂದು ದೇಹವು ಅನಂತರ ಕಾಂಡ ಕೋಶಕ್ಕೆ ಸೂಚನೆ ನೀಡುತ್ತದೆ.
“ಕಿಮೊತೆರಪಿ ಅಥವಾ ವೃದ್ಧಾಪ್ಯದಿಂದ ಭಾರಿ ಹಾನಿಗೊಳಗಾಗಿರುವ ದೈಹಿಕ ವ್ಯವಸ್ಥೆ ಸಂದರ್ಭದಲ್ಲಿ ಉಪವಾಸ ವೃತ್ತವು ಹೊಸ ಪ್ರತಿರಕ್ಷಿತ ವ್ಯವಸ್ಥೆಯನ್ನು ಪುನರ್ ಉತ್ಪಾದಿಸಬಲ್ಲದು ಮತ್ತು ಪುನರ್ ನಿರ್ಮಿಸಬಹುದು,” ಎಂದು ಲಾಂಗೋ ಹೇಳಿದ್ದಾರೆ. ಪ್ರಯೋಗಾಲಯದಲ್ಲಿ ಕಿಮೊತೆರಪಿ ಔಷಧಗಳಿಗೆ ಒಳಪಡಿಸಿದ್ದ ಇಲಿಗಳ ಮೇಲೆ ಉಪವಾಸವು ದುಷ್ಪರಿಣಾಮ ಮತ್ತು ಸಾವನ್ನು ಕಡಮೆ ಮಾಡಿತು ಮತ್ತು ವೃದ್ಧ ಇಲಿಗಳ ಪ್ರತಿರಕ್ಷಿತ ಶಕ್ತಿಯನ್ನು ಹೆಚ್ಚಿಸಿತು.
“ನಿಮಗೆ ಅನಾರೋಗ್ಯವಾಗಿದ್ದರೆ ಉಪವಾಸ ಅತ್ಯುತ್ತಮ ಔಷಧ. ಕಾಯಿಲೆ ಮತ್ತು ಅನಪೇಕ್ಷಿತ ಅತಿಥಿಗಳಿಗೆ ನೀವು ಆಹಾರ ನೀಡಬೇಡಿ, ಅವರು ತಾವೇ ಹೊರಟುಹೋಗುತ್ತಾರೆ,” ಎಂದು ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಸ್ಥಾಪಕರು ಮತ್ತು ಆಚಾರ್ಯರು ಆದ ಶ್ರೀಲ ಪ್ರಭುಪಾದರು ಹೇಳಿದ್ದಾರೆ.
ಮಾನಸಿಕ ಶಕ್ತಿಗೆ ಪುನರುಜ್ಜೀವ
ಆಯುರ್ವೇದದ ಪ್ರಕಾರ ಉಪವಾಸವು ಮಾನಸಿಕ ಶಕ್ತಿ ಮತ್ತು ದೈಹಿಕ ಆರೋಗ್ಯವನ್ನು ಬಲಗೊಳಿಸುತ್ತದೆ. ಆಗಾಗ ಉಪವಾಸ ಕೈಗೊಂಡರೆ ಅದು ಜೀರ್ಣಕಾರಿ ವ್ಯವಸ್ಥೆಗೆ ವಿಶ್ರಾಮ ನೀಡುತ್ತದೆ ಮತ್ತು ಭಾವನೆ, ಪ್ರಜ್ಞೆ ಮತ್ತು ಮನಸ್ಸನ್ನು ಪುನರುಜ್ಜೀವಗೊಳಿಸುತ್ತದೆ. ಬಹುತೇಕ ಸಂದರ್ಭಗಳಲ್ಲಿ ಆಯುರ್ವೇದವು ಜಲ ನಿರಶನವನ್ನು ಶಿಫಾರಸು ಮಾಡುತ್ತದೆ. ಪಶ್ಚಿಮದಲ್ಲಿ ಹಣ್ಣು ಅಥವಾ ತರಕಾರಿ ರಸದ ಉಪವಾಸ ವ್ಯಾಪಕವಾಗಿದೆ. ಏಕೆಂದರೆ ಪಾಶ್ಚಿಮಾತ್ಯ ವಿಧಾನಗಳು ದೀರ್ಘ ಉಪವಾಸವನ್ನು ಉತ್ತೇಜಿಸುತ್ತದೆ. ಆದರೆ ಆಯುರ್ವೇದ ಚಿಕಿತ್ಸೆಯಲ್ಲಿ ಅನೇಕ ಉಪವಾಸಗಳು ಅಲ್ಪಾವಯದ್ದು. ಅದು 1 ರಿಂದ 3 ದಿನಗಳದ್ದು. ಉಪವಾಸ ಮಾಡುವಾಗ, ಬಾಯಾರಿಕೆ ನೀಗಲು ಬೇಕಾದ ಪ್ರಮಾಣಕ್ಕಿಂತ ಹೆಚ್ಚು ನೀರು ಕುಡಿಯಬಾರದು. ಆಹಾರ ಜೀರ್ಣ ಕ್ರಿಯೆಯ ಕೆಲಸದಿಂದ ಮುಕ್ತಗೊಂಡಾಗ ಜೀರ್ಣ ಕ್ರಿಯೆಯ ಬೆಂಕಿ – ಜಠರಾಗ್ನಿಯು ದೇಹದಲ್ಲಿ ಸಂಗ್ರಹವಾಗಿರುವ ವ್ಯರ್ಥ ಪದಾರ್ಥಗಳನ್ನು ಕರಗಿಸುವ ಕ್ರಿಯೆಯಲ್ಲಿ ತೊಡಗಿರುತ್ತದೆ ಮತ್ತು ಅಧಿಕ ನೀರು ಈ ಪ್ರಕ್ರಿಯೆಯನ್ನು ತಡೆಯುತ್ತದೆ.

ಅನೇಕ ಜನರು ಧಾರ್ಮಿಕ ನಿರ್ಬಂಧಗಳಿಂದ ಉಪವಾಸ ಮಾಡುತ್ತಾರೆ. ಆದರೆ ಇದರ ಆರೋಗ್ಯ ಲಾಭದ ಗುಟ್ಟು ಬಹಳ ಜನರಿಗೆ ಗೊತ್ತಿಲ್ಲ. ಉಪವಾಸವು ದೇಹದಿಂದ ವಿಷಯುಕ್ತ ಪದಾರ್ಥಗಳನ್ನು ಹೊರಹಾಕುವ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ, ರಕ್ತದಲ್ಲಿನ ಗ್ಲೂಕೋಸಿನ ಪ್ರಮಾಣವನ್ನು ಮತ್ತು ಶೇಖರಣೆಯಾಗಿರುವ ಕೊಬ್ಬನ್ನು ಕಡಮೆ ಮಾಡುತ್ತದೆ. ಅದು ಆರೋಗ್ಯಪೂರ್ಣ ಆಹಾರ ಪದ್ಧತಿಯನ್ನು ಉತ್ತೇಜಿಸುತ್ತದೆಯಲ್ಲದೆ ಪ್ರತಿರಕ್ಷಿತ ಶಕ್ತಿಯನ್ನು ವರ್ಧಿಸುತ್ತದೆ.
ಉಪವಾಸವು ಹೃದಯ ರೋಗ ಮತ್ತು ಸಕ್ಕರೆ ರೋಗದ ಪ್ರಮಾಣ ಕಡಮೆ ಮಾಡಬಹುದೆಂಬುದನ್ನು ಇತ್ತೀಚಿನ ಸಂಶೋಧನೆಗಳು ಸ್ಪಷ್ಟಪಡಿಸಿವೆ. ಉತಾದ ಮರ್ರೆಯಲ್ಲಿನ ಅಂತಾರಾಷ್ಟ್ರೀಯ ಹೃದಯ ಸಂಸ್ಥೆಯು ಈ ಅಧ್ಯಯನವನ್ನು ನಡೆಸಿತ್ತು. 10-12 ಗಂಟೆಯ ಉಪವಾಸವು ಶೇಖರವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಕೊಬ್ಬಿನ ಕೋಶಗಳಲ್ಲಿ ಶೇಖರಣೆಯಾಗಿರುವ ಎಲ್ಡಿಎಲ್ ಅನ್ನು ಬಳಸಿಕೊಳ್ಳಲು ದೇಹಕ್ಕೆ ನೆರವಾಗುತ್ತದೆ ಎಂದು ವರದಿಯಾಗಿದೆ. ಈ ಪ್ರಕ್ರಿಯೆಯು ಸಕ್ಕರೆ ರೋಗದಿಂದ ನರಳುತ್ತಿರುವವರ ಮೇಲೆ ಪ್ರಭಾವ ಬೀರುತ್ತದೆ ಮತ್ತು ಮುಂದಿನ ದಿನಗಳಲ್ಲಿ ಉಪವಾಸವು ಸಕ್ಕರೆ ರೋಗ ತಡೆಯ ಪ್ರಧಾನ ಅಂಶವಾಗಬಹುದು.
ಉಪವಾಸವು ನಿರ್ವಿಷೀಕರಣವನ್ನು ಉತ್ತೇಜಿಸುತ್ತದೆ
ಸಂಸ್ಕರಿಸಿದ ಆಹಾರದಲ್ಲಿ ಅನೇಕ ಸಂಯೋಜಿತ ವಸ್ತುಗಳಿರುತ್ತವೆ. ಅವು ದೇಹದಲ್ಲಿ ವಿಷಪೂರಿತವಾಗಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಅವು ಕೊಬ್ಬಿನಲ್ಲಿ ಶೇಖರಣೆಯಾಗುತ್ತವೆ. ಉಪವಾಸದ ಸಂದರ್ಭದಲ್ಲಿ ಕೊಬ್ಬು ಕರಗುತ್ತದೆ, ದೀರ್ಘ ಕಾಲದಲ್ಲಿ ಹೆಚ್ಚು. ಅನಂತರ ವಿಷ ಪದಾರ್ಥಗಳು ಹೊರಬರುತ್ತವೆ. ಮೂತ್ರಪಿಂಡ, ಪಿತ್ತಜನಕಾಂಗ ಮತ್ತಿತರ ಅಂಗಗಳು ಈ ನಿರ್ವಿಷೀಕರಣದಲ್ಲಿ ಭಾಗಿಯಾಗುತ್ತವೆ.
ಉಪವಾಸದಿಂದ ಜೀರ್ಣಕಾರಿ ವ್ಯವಸ್ಥೆಗೆ ವಿಶ್ರಾಂತಿ
ಉಪವಾಸ ಕೈಗೊಂಡಾಗ ಜೀರ್ಣಕ್ರಿಯೆ ಅಂಗಗಳು ವಿಶ್ರಾಂತಿ ತೆಗೆದುಕೊಳ್ಳುತ್ತವೆ. ಮತ್ತು ಕಡಮೆ ಪ್ರಮಾಣದಲ್ಲಿ ಸಾಮಾನ್ಯ ಶಾರೀರಕ ಕ್ರಿಯೆಗಳು ಮುಂದುವರಿಯುತ್ತವೆ. ಈ ಕ್ರಿಯೆಯು ದೇಹದಲ್ಲಿ ದ್ರವದ ಸಮತೋಲನವನ್ನು ಕಾಪಾಡುತ್ತದೆ.
ಉಪವಾಸವು ಉರಿಯುವ ಪ್ರಕ್ರಿಯೆಯನ್ನು ಉಪಶಮನಗೊಳಿಸುತ್ತದೆ
ಉಪವಾಸವು ಉರಿಯುವ ಕಾಯಿಲೆ ಮತ್ತು ಅಲರ್ಜಿಗಳನ್ನು ಉಪಶಮನಗೊಳಿಸುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ಅಂತಹ ಕೆಲವು ಉರಿಯುವ ರೋಗಗಳೆಂದರೆ ಸಂವಾತ ಕೀಲು ನೋವು, ಚರ್ಮ ಬಾಧೆಗಳು.
ಉಪವಾಸವು ಕೊಬ್ಬು ಕರಗುವುದನ್ನು ಹೆಚ್ಚಿಸುತ್ತದೆ
ಗ್ಲೂಕೋಸ್ ಕರಗುವಿಕೆ ಮೂಲಕ ದೇಹವು ಉಪವಾಸಕ್ಕೆ ಪ್ರತಿಕ್ರಿಯಿಸುತ್ತದೆ. ಶೇಖರಣೆಯಾಗಿದ್ದ ಗ್ಲೂಕೋಸ್ ಪೂರ್ಣ ಖಾಲಿಯಾದ ಮೇಲೆ ಕಿಟೋಸಿಸ್ ಶುರುವಾಗುತ್ತದೆ. ಇದು ಶಕ್ತಿಯನ್ನು ಬಿಡುಗಡೆ ಮಾಡಲು ಕೊಬ್ಬಿನ ಕರಗುವಿಕೆ. ಮೂತ್ರ ಪಿಂಡ ಮತ್ತು ಮಾಂಸ ಖಂಡಗಳಲ್ಲಿ ಸಂಗ್ರಹವಾಗಿರುವ ಕೊಬ್ಬು ಶಕ್ತಿ ಬಿಡುಗಡೆಗಾಗಿ ಕರಗುತ್ತದೆ.
ಉಪವಾಸವು ಅಧಿಕ ರಕ್ತದೊತ್ತಡವನ್ನು ಸರಿಪಡಿಸುತ್ತದೆ
ಉಪವಾಸದಿಂದ ನಾಡಿಗಳನ್ನು ಪ್ರತಿಬಂಧಿಸುವ ಕೊಬ್ಬಿನ ಅಂಶವು ಕರಗುತ್ತದೆ. ಇದರ ಪರಿಣಾಮವೇ ಇಳಿಮುಖ ರಕ್ತದೊತ್ತಡ.
ಉಪವಾಸವು ಆರೋಗ್ಯಪೂರ್ಣ ಆಹಾರಕ್ಕೆ ಉತ್ತೇಜನ
ಉಪವಾಸದಿಂದ ಸಂಸ್ಕರಿಸಿದ ಆಹಾರ ಅಪೇಕ್ಷೆ ಕಡಮೆಯಾಗುತ್ತದೆ. ನೀರು ಮತ್ತು ಹಣ್ಣಿನಂತಹ ಪ್ರಾಕೃತಿಕ ಆಹಾರವನ್ನೇ ಇಷ್ಟಪಡುವಂತೆ ಮಾಡುತ್ತದೆ. ಇದು ಆರೋಗ್ಯಪೂರ್ಣ ಜೀವನ ಶೈಲಿಗೆ ಉತ್ತೇಜನ ನೀಡುತ್ತದೆ.
ಉಪವಾಸವು ಪ್ರತಿರಕ್ಷಿತ ಶಕ್ತಿಯನ್ನು ಹೆಚ್ಚಿಸುತ್ತದೆ
ಉಪವಾಸಗಳ ಮಧ್ಯೆ ಸಮತೋಲನ ಆಹಾರ ಸೇವಿಸುತ್ತಿದ್ದರೆ ಅದು ಪ್ರತಿರಕ್ಷಿತ ಶಕ್ತಿಯನ್ನು ಉತ್ತೇಜಿಸುತ್ತದೆ. ಉಪವಾಸ ಅಂತ್ಯಗೊಳಿಸಲು ಹಣ್ಣು ಸೇವಿಸಿದರೆ, ಅದು ದೇಹಕ್ಕೆ ಅಗತ್ಯವಾದ ವಿಟಮಿನ್ ಮತ್ತು ಖನಿಜಗಳನ್ನು ಒದಗಿಸುತ್ತದೆ.
ಉಪವಾಸವು ಚಟಗಳಿಗೆ ಮುಕ್ತಿ ನೀಡಲು ನೆರವಾಗುತ್ತದೆ
ಉಪವಾಸವು ಜನರಿಗೆ ಚಟಗಳಿಂದ ಮುಕ್ತವಾಗಲು ನೆರವಾಗುತ್ತದೆ. ತಂಬಾಕು, ಮದ್ಯ, ಕೆಫಿನ್ ಮತ್ತಿತರ ಚಟ ಉಳ್ಳವರಿಗೆ ಅದನ್ನು ಕಡಮೆ ಮಾಡಿಕೊಳ್ಳಲು ಉಪವಾಸ ಸಹಾಯ ಮಾಡುತ್ತದೆ.






Leave a Reply