ವ್ಯಾಸಪೂಜೆಯ ಮಹತ್ತ್ವ

ವ್ಯಾಸಪೂಜೆ ಎಂದರೆ ವರ್ಷದಲ್ಲಿ ಒಂದು ದಿನ, ಆಧ್ಯಾತ್ಮಿಕ ಗುರುವಿನ ಜನ್ಮ ದಿನಾಚರಣೆ ಎಂದು ಅರ್ಥ. ಅವರು ವ್ಯಾಸರ ಪ್ರತಿನಿಧಿ. ಅವರು ಗುರು ಪರಂಪರೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ ಜ್ಞಾನವನ್ನು ನೀಡುತ್ತಿದ್ದಾರೆ. ಅವರಿಗೆ ಗೌರವ ಸಲ್ಲಿಸಲಾಗುತ್ತದೆ. ಇದನ್ನೇ ವ್ಯಾಸಪೂಜೆ ಎಂದು ಕರೆಯುವುದು. ಆಧ್ಯಾತ್ಮಿಕ ಗುರುವು ತಮಗಾಗಿ ಅಲ್ಲ, ದೇವೋತ್ತಮ ಪರಮ ಪುರುಷನ ಪರವಾಗಿ ಎಲ್ಲ ಗೌರವ, ಎಲ್ಲ ಕೊಡುಗೆಯನ್ನು ಸ್ವೀಕರಿಸುತ್ತಾರೆ. ಬ್ರಿಟಿಷರ ಆಡಳಿತವಿದ್ದಾಗ, ರಾಜನ ಪ್ರತಿನಿಧಿಯಾಗಿ ವೈಸ್‌ರಾಯ್‌ ಇದ್ದರು. ಸಹಜವಾಗಿ, ವೈಸ್‌ರಾಯ್‌ ಯಾವುದೇ ಸಭೆಗೆ ಹೋದಾಗ ಅನೇಕ ಜನರು ಅವರಿಗೆ ಅಮೂಲ್ಯ ಆಭರಣಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಇದು ಅವರಿಗೆ ಗೌರವ ಸೂಚಿಸಲು. ಆದರೆ ಕಾನೂನಿನಂತೆ ವೈಸ್‌ರಾಯ್‌ ತಾವು ಸ್ವೀಕರಿಸಿದ ಒಂದೇ ಒಂದು ಉಡುಗೊರೆಯನ್ನೂ ಮುಟ್ಟುವಂತಿರಲಿಲ್ಲ. ಅದು ಅರಸುಗಳ ಖಜಾನೆಗೆ ಹೋಗುತ್ತಿತ್ತು. ವೈಸ್‌ರಾಯ್‌ ರಾಜನ ಪರವಾಗಿ ಎಲ್ಲ ಕೊಡುಗೆಗಳನ್ನು ಸ್ವೀಕರಿಸಬಹುದಿತ್ತು. ಆದರೆ ಅದು ರಾಜನಿಗೆ ಹೋಗುತ್ತಿತ್ತು. ಅದೇ ರೀತಿ, ಈ ದಿನ, ವ್ಯಾಸ ಪೂಜೆ ದಿನ, ಆಧ್ಯಾತ್ಮಿಕ ಗುರುವಿಗೆ ಏನೇ ಗೌರವ, ಕೊಡುಗೆ ಮತ್ತು ಭಾವನೆಯನ್ನು ಸಲ್ಲಿಸಿದರೂ ಅದು… ಮೇಲಿನಿಂದ ನಾವು ಜ್ಞಾನವನ್ನು ಪಡೆದಂತೆ, ಪುನಃ ಈ ಗೌರವವು ತಳದಿಂದ ಮೇಲಕ್ಕೇ ಹೋಗುತ್ತದೆ. ಇದೆ ವಿಧಾನ. ಆದುದರಿಂದ, ಗುರುವು ವಿದ್ಯಾರ್ಥಿಯ ಶಿಕ್ಷಕನಾಗಿರುವುದರಿಂದ ಶಿಷ್ಯರು ತಮ್ಮ ಗೌರವ ಮತ್ತು ಕೊಡುಗೆಯನ್ನು ಭಗವಂತನಿಗೆ ಹೇಗೆ ಹಿಂದಿರುಗಿಸಬೇಕೆಂಬುವುದನ್ನು ಗುರುಗಳು ಬೋಧಿಸಬೇಕು. ಇದನ್ನು ವ್ಯಾಸಪೂಜೆ ಎಂದು ಕರೆಯುತ್ತಾರೆ.

ಆದುದರಿಂದ ಗುರುಗಳನ್ನು ಭಗವಂತನಂತೆ ಗೌರವಿಸಲಾಗುವುದು. ಏಕೆ? ಸಾಕ್ಷಾದ್‌ ಹರಿತ್ವೇನ ಸಮಸ್ತ ಶಾಸ್ತ್ರೈಃ (ಗುರು ಅಷ್ಟಕ 7). ಸಮಸ್ತ ಶಾಸ್ತ್ರೈಃ ಎಂದರೆ ಎಲ್ಲ ವೈದಿಕ ಸಾಹಿತ್ಯದಲ್ಲಿ ಎಂದು. ವೈದಿಕ ಸಾಹಿತ್ಯದಲ್ಲಿ ಗುರುವು ದೇವರಂತೆ ಎಂದು ಸಾರಲಾಗಿದೆ. ದೇವರಲ್ಲ, ದೇವರಂತೆ. ಮಾಯಾವಾದಿಗಳು ಗುರುಗಳನ್ನೂ ದೇವರೆಂದು ಭಾವಿಸುತ್ತಾರೆ. ಇಲ್ಲ. ನಾವು ವೈಷ್ಣವರು ಈ ತತ್ತ್ವವನ್ನು ಒಪ್ಪುವುದಿಲ್ಲ. ವಾಸ್ತವವಾಗಿ, ಮಾನವನು ದೇವರಾಗುವುದು ಹೇಗೆ ಸಾಧ್ಯ? ಇಲ್ಲ. ಅವರು ದೇವರ ಪ್ರತಿನಿಧಿಯಾಗಿರುವುದರಿಂದ ಅವರನ್ನು ದೇವರಂತೆ ಗೌರವಿಸಲಾಗುವುದು. ಅವರು ದೇವರಾಗಿಬಿಟ್ಟಿದ್ದಾರೆಂದಲ್ಲ. ಕಿಂತು ಪ್ರಭೋರ್‌ ಯಃ ಪ್ರಿಯ ಏವ ತಸ್ಯ. ನಿಮಗೆ ಪ್ರೀತಿಯ ಮಗನಿದ್ದಂತೆ. ಯಾರಾದರೂ ಪ್ರೀತಿಯಿಂದ ನಿಮ್ಮ ಮಗನ ಅಥವಾ ನಿಮ್ಮ ಶ್ವಾನದ ಬೆನ್ನು ತಟ್ಟಿದರೂ ನಿಮಗೆ ಆನಂದವಾಗುತ್ತದೆ.

ಆದುದರಿಂದ ಗುರುವು ಭಗವಂತನ ಅತ್ಯಂತ ವಿಶ್ವಸನೀಯ ಸೇವಕ. ಆದುದರಿಂದ ನೀವು ಅವರನ್ನು ಸಂತೋಷಪಡಿಸಿದರೆ, ಯಸ್ಯ ಪ್ರಸಾದಾದ್‌, ಭಗವತ್‌ ಪ್ರಸಾದಃ. ನಿಮಗೆ ಗುರುವನ್ನು ತೃಪ್ತಿ ಪಡಿಸುವುದು ಸಾಧ್ಯವಾದರೆ, ಭಗವಂತನು ತೃಪ್ತಿಪಡುವನು. ನಿಮ್ಮ ಪುಟ್ಟ ಮಗುವಿನಂತೆ. ಯಾರಾದರೂ ಮಗುವನ್ನು ಸಂತೊಷಪಡಿಸಿದರೆ, ನೀವು ತಂತಾನೇ ಸಂತೊಷಪಡುವಿರಿ. ನೀವು ಮಗುವನ್ನು ಸ್ವಲ್ಪ ಮಿಠಾಯಿಯಿಂದ ತೃಪ್ತಿಪಡಿಸಬಹುದು, ಆದರೆ ನಿಮ್ಮನ್ನು ತೃಪ್ತಿಪಡಿಸಲು ಸಾವಿರಾರು ರೂಪಾಯಿಗಳು ಅಗತ್ಯವಾಗಬಹುದು. ಆದುದರಿಂದ ನೀವು ಸ್ವಲ್ಪ ಮಿಠಾಯಿ ನೀಡಿ ವ್ಯವಹಾರವನ್ನು ಮುಗಿಸಬಹುದು.
ಇದು ಆಧ್ಯಾತ್ಮಿಕ ಗುರುವಿನ ಸ್ಥಾನ. “ಈ ವ್ಯಕ್ತಿಯು ಆರಾಮವಾಗಿ ಕುಳಿತ್ತಿದ್ದಾನೆ ಮತ್ತು ಎಲ್ಲ ಗೌರವ ಹಾಗೂ ಕೊಡುಗೆಗಳನ್ನು ಪಡೆಯುತ್ತಿದ್ದಾನೆ” ಎಂದು ತಪ್ಪು ಅರ್ಥಮಾಡಿಕೊಳ್ಳಬಾರದು. ಭಗವಂತನ ಪ್ರತಿನಿಧಿಯನ್ನು ಹೇಗೆ ಗೌರವಿಸಬೇಕೆಂಬುವುದನ್ನು ಅವರಿಗೆ ಬೋಧಿಸುವುದು ಅಗತ್ಯವಷ್ಟೆ. ಇದು ವ್ಯಾಸಪೂಜೆಯ ಒಟ್ಟಾರೆ ಸಾರ.” (ಶ್ರೀಲ ಪ್ರಭುಪಾದ ಉಪನ್ಯಾಸ, ಸೆಪ್ಟೆಂಬರ್‌ 2, 1972.)

“ವಾಸ್ತವವಾಗಿ ನೇರವಾಗಿ ಕೃಷ್ಣನಿಂದ ಕೇಳುವುದರಲ್ಲಿ ಮತ್ತು ಕೃಷ್ಣನ ಪ್ರತಿನಿಧಿಯಾದ ವ್ಯಾಸರಂತಹ ಸದ್ಗುರುವಿನಿಂದ ಆಲಿಸುವುದರಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಗುರುವು ವ್ಯಾಸರ ಪ್ರತಿನಿಧಿಯೂ ಹೌದು. ಆದುದರಿಂದ, ವೈದಿಕ ಪದ್ಧತಿಯಂತೆ, ಗುರುವಿನ ಜನ್ಮ ದಿನವನ್ನು ಶಿಷ್ಯರು ವ್ಯಾಸಪೂಜೆ ಎಂದು ಆಚರಿಸುತ್ತಾರೆ.” (ಭಗವದ್ಗೀತೆ, 18.75, ಭಾವಾರ್ಥ)

“ನಾವು ಅನೇಕ ಜನರ ಋಣದಲ್ಲಿದ್ದೇವೆ. ಮೊದಲ ಋಣಭಾರವು ದೇವತೆಗಳಿಗೆ. ಸೂರ್ಯ ದೇವ, ಚಂದ್ರ ದೇವ ಇತ್ಯಾದಿ ನಮಗೆ ಶಾಖ ಮತ್ತು ಬೆಳಕನ್ನು ಪೂರೈಸುತ್ತಿದ್ದಾರೆ. ಈ ಭೌತಿಕ ಲೋಕದಲ್ಲಿ ನಮಗೆ ಅನೇಕ ಋಣಗಳಿವೆ. ಆದರೆ ಜನರು ಅದನ್ನು ಲಕ್ಷಿಸುವುದಿಲ್ಲ. ನಾವು ಸೂರ್ಯನಿಂದ ಬೆಳಕು ಪಡೆಯುತ್ತಿರುವಂತೆ. ಆದರೆ ನಾವು ಸೂರ್ಯನಿಗೆ ಏನು ಕೊಡುತ್ತಿದ್ದೇವೆ? ಆದುದರಿಂದ ನಾವು ಸಾಲಗಾರರಾಗಿ ಉಳಿಯುತ್ತೇವೆ. ಇದು ವೈದಿಕ ದೃಷ್ಟಿಕೋನ. ನಿಮಗೆ ವಿದ್ಯುತ್‌ ಸಿಗುತ್ತಿದೆ. ನೀವು ಬಿಲ್‌ ಪಾವತಿಸದಿದ್ದರೆ, ನೀವು ಅದನ್ನು ಎಷ್ಟು ಕಾಲ ಬಳಸಬಹುದು? ಸ್ವಲ್ಪ ಸಮಯದ ನಂತರ ವಿದ್ಯುತ್‌ ಸಂಪರ್ಕವನ್ನು ಕಡಿದುಹಾಕುತ್ತಾರೆ. ಆದರೆ, ನಾವು ಸೂರ್ಯನ ಬೆಳಕಿಗೆ ಏನೂ ಹಣವನ್ನು ಪಾವತಿಸದಿದ್ದರೂ ಕೃಷ್ಣನ ಆದೇಶದಿಂದ ಅದು ನಮಗೆ ಬೆಳಕು ನೀಡುತ್ತಿದೆ. ಆದರೆ ಇದು ಎಷ್ಟು ಕಾಲ ನಡೆಯಬಹುದು? ಇದು ಪಾಪ. ನೀವು ಯಾರಿಂದಲಾದರೂ ಏನ್ನಾದರೂ ಪಡೆದರೆ ಮತ್ತು ಅವರಿಗೆ ಏನೂ ನೀಡದದ್ದಿರೆ, ಅದು ಪಾಪ. ಋಣ. ಅದನ್ನು ಋಣ ಎನ್ನುತ್ತಾರೆ.

ಹೀಗೆ ಅನೇಕ ಋಣಗಳಿವೆ. ಮೊದಲು ದೇವತೆಗಳಿಗೆ, ನಂತರ ಋಷಿ, ಸಂತರಿಗೆ. ಋಷಿಗಳಿಂದ ನಮಗೆ ವೈದಿಕ ಜ್ಞಾನ ಲಭಿಸುವುದರಿಂದ ನಾವು ಅವರಿಗೆ ಋಣಿಗಳು. ಗುರು ಋಣ : ಗುರುಗಳಿಗೆ, ಸಂತರಿಗೆ ಋಣಿಗಳು. ಏಕೆಂದರೆ ನಾವು ಅವರಿಂದ ಜ್ಞಾನವನ್ನು ಪಡೆಯುತ್ತಿದ್ದೇವೆ. ಆದುದರಿಂದ ವ್ಯಾಸಪೂಜೆ ಇದೆ. ಪ್ರತಿ ವರ್ಷ ಶಿಷ್ಯರು ಗುರುಗಳನ್ನು ಪೂಜಿಸುತ್ತಾರೆ ಮತ್ತು ಅವರಿಂದ ಪಡೆದುದಕ್ಕೆ ಪ್ರತಿಫಲ ನೀಡಲು ಪ್ರಯತ್ನಿಸುತ್ತಾರೆ. “ (ಶ್ರೀಲ ಪ್ರಭುಪಾದ ಉಪನ್ಯಾಸ, ಜುಲೈ 11, 1974)

“ಕೃಷ್ಣನು ಬ್ರಹ್ಮನಿಗೆ ಬೋಧಿಸಿದನು. ಬ್ರಹ್ಮನು ನಾರದರಿಗೆ ಬೋಧಿಸಿದನು. ನಾರದರು ವ್ಯಾಸರಿಗೆ ಬೋಧಿಸಿದರು. ವ್ಯಾಸರು ಶುಕದೇವರಿಗೆ ಬೋಧಿಸಿದರು. ಈ ರೀತಿ ನಮ್ಮ ಗುರು ಪರಂಪರೆ ಪದ್ಧತಿ. ವ್ಯಾಸರ ಪ್ರತಿನಿಧಿಯಾದ ಕಾರಣ ನಾವು ನಮ್ಮ ಗುರುಗಳನ್ನು ವ್ಯಾಸಪೂಜೆಯಾಗಿ ಆರಾಧಿಸುತ್ತೇವೆ. ವ್ಯಾಸ ಯಾರು? ನಾರದರ ಪ್ರತಿನಿಧಿ. ನಾರದರೇನು? ಬ್ರಹ್ಮನ ಪ್ರತಿನಿಧಿ. ಬ್ರಹ್ಮ ಏನು? ಕೃಷ್ಣನ ಪ್ರತಿನಿಧಿ. ಇದನ್ನು ಪರಂಪರೆ ಪದ್ಧತಿ ಎನ್ನುತ್ತಾರೆ.” (ಶ್ರೀಲ ಪ್ರಭುಪಾದ ಉಪನ್ಯಾಸ, ಮಾರ್ಚ್‌ 13, 1976)

“ಭಗವಂತನು ಮೂಲ ಗುರುವಾದ ಕಾರಣ ವ್ಯಾಸಪೂಜೆಯು ನಾವು ದೇವೋತ್ತಮ ಪರಮ ಪುರುಷನಿಗೆ ಸಲ್ಲಿಸುವ ಕೃತಜ್ಞತೆ. ಕೃಷ್ಣನಿಂದ ಬ್ರಹ್ಮನಿಗೆ, ಬ್ರಹ್ಮನಿಂದ ನಾರದರಿಗೆ, ನಾರದರಿಂದ ವ್ಯಾಸರಿಗೆ ಮತ್ತು ವ್ಯಾಸರಿಂದ ಮದ್ವಾಚಾರ್ಯರಿಗೆ, ಈ ರೀತಿ ಮಾಧವೇಂದ್ರ ಪುರಿ, ನಂತರ ಈಶ್ವರ ಪುರಿ, ನಂತರ ಚೈತನ್ಯ ಮಹಾಪ್ರಭು, ನಂತರ ಆರು ಗೋಸ್ವಾಮಿಗಳು, ನಂತರ ಇತರರು, ಭಕ್ತಿವಿನೋದ ಠಾಕುರರು, ಜಗನ್ನಾಥ ದಾಸ ಬಾಬಾಜಿ, ಗೌರ ಕಿಶೋರ ದಾಸ ಬಾಬಾಜಿ ಮಹಾರಾಜ್‌, ಭಕ್ತಿಸಿದ್ಧಾಂತ ಸರಸ್ವತೀ. ಅನಂತರ ನಾವು ಸ್ವೀಕರಿಸಿದ್ದೇವೆ.

ಆದುದರಿಂದ ಇದು… ಈ ದೀರ್ಘವಾದ ಪರಂಪರೆಯ ಮೂಲಕ ಅರ್ಥ ಮಾಡಿಕೊಳ್ಳುತ್ತ ನಾವು ಕೃಷ್ಣ ಪ್ರಜ್ಞೆಗೆ ಬಂದಂತೆ, ಅದೇ ರೀತಿ, ವ್ಯಾಸಪೂಜೆ ಆಚರಣೆಯಲ್ಲಿ ನೀವು ನೀಡುವ ಗೌರವ, ಕೊಡುಗೆಗಳು ಆ ಪರಂಪರೆ ಪದ್ಧತಿ ಮೂಲಕ ಕೃಷ್ಣನಿಗೆ ಹೋಗುತ್ತದೆ. ಇದನ್ನು ಪರಂಪರೆ ಪದ್ಧತಿಯಲ್ಲಿ ಸ್ವೀಕರಿಸುವುದರಿಂದ, ಅದೇ ರೀತಿ ನೀವು ಅರ್ಪಿಸುವುದು ಪರಂಪರೆ ಪದ್ಧತಿಯ ಮೂಲಕ ಭಗವಂತನನ್ನು ತಲಪುತ್ತದೆ. ಅದು ಸಂಪರ್ಕ, ಸಂಬಂಧ.
ನಮ್ಮ ವ್ಯವಸ್ಥೆಯು ಗೋಪೀ ಭರ್ತುರ್‌ ಪದ-ಕಮಲಯೋರ್‌ ದಾಸ-ದಾಸಾನುದಾಸಃ (ಚೈತನ್ಯ ಚರಿತಾಮೃತ, ಮಧ್ಯ 13.80) ಇದನ್ನು ಕೆಲವು ಬಾರಿ ಅಧಿಕಾರಶಾಹಿ ಎನ್ನುತ್ತಾರೆ. ಭಾರತದಲ್ಲಿ ನೀವು ರಾಷ್ಟ್ರಪತಿಗೆ ಏನನ್ನಾದರೂ ಸಲ್ಲಿಸಬೇಕಿದ್ದರೆ ನೀವು ಸ್ಥಳೀಯ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು. ಜಿಲ್ಲಾಧಿಕಾರಿಯು ಇನ್ಯಾರಿಗೋ, ಇನ್ಯಾರಿಗೋ, ನಂತರ ಕಾರ್ಯದರ್ಶಿಗೆ ನೀಡುವರು. ಅನಂತರ ಅದು ರಾಷ್ಟ್ರಪತಿಯನ್ನು ತಲಪುತ್ತದೆ. ಅದು ನಮ್ಮ ವ್ಯವಸ್ಥೆ. ಆದುದರಿಂದ ಇದು ನಾನು ನನ್ನ ಶಿಷ್ಯರನ್ನು ನನ್ನನ್ನು ಪೂಜಿಸಲೆಂದು ತರಬೇತಿ ನೀಡುತ್ತಿರುವೆನೆಂದಲ್ಲ, ವ್ಯಕ್ತಿ ಪೂಜೆ. ನನಗೆ ಪುಕ್ಕಟೆಯಾಗಿ (ವ್ಯರ್ಥವಾಗಿ) ಅವರಿಂದ ಏನೋ ಗೌರವ ದೊರೆಯುತ್ತಿದೆ ಎಂದಲ್ಲ. ಅದು ಹಾಗಲ್ಲ. ನಿಮ್ಮ ಆಧ್ಯಾತ್ಮಿಕ ಗುರುವಿಗೆ ನೀವು ಏನೇ ಗೌರವ, ಏನೇ ಮರ್ಯಾದೆ, ಏನೇ ಕಾಣಿಕೆ ನೀಡಿದರೂ ಅದು ಪರಂಪರೆ ವ್ಯವಸ್ಥೆಯಿಂದ ಕೃಷ್ಣನಿಗೆ ಹೋಗುತ್ತದೆ. ಇದು ವ್ಯಾಸಪೂಜೆ.” (ಶ್ರೀಲ ಪ್ರಭುಪಾದ ಉಪನ್ಯಾಸ, ಆಗಸ್ಟ್‌ 22, 1973)

ಯಸ್ಯ ದೇವೇ ಪರಾ ಭಕ್ತಿರ್‌ ಯಥಾ ದೇವೇ ತಥಾ ಗುರೌ. ಇದು ವಿಧಾನ, ವೈದಿಕ ವಿಧಾನ. ವ್ಯಕ್ತಿಗೆ ಭಗವಂತ ಮತ್ತು ಗುರುವಿನಲ್ಲಿ ಹಿಂಜರಿಕೆ ಇಲ್ಲದ ಶ್ರದ್ಧೆ ಇರಬೇಕು. ಗುರುಗಳನ್ನು ದಾಟಿ ಭಗವಂತನ ಬಳಿಗೆ ನುಗ್ಗಬೇಡಿ. ಅದು ನಿಷ್ಫಲವಾಗುತ್ತದೆ. ನೀವು (ಗುರುವಿನ) ಮೂಲಕವೇ ಹೋಗಬೇಕು. ನಾವು ನಮ್ಮ ಗುರು ಮಹಾರಾಜ್‌ ಅವರ ಜನ್ಮ ದಿನೋತ್ಸವ, ವ್ಯಾಸಪೂಜೆಯನ್ನು ಆಚರಿಸುತ್ತಿದ್ದೇವೆ. ಏಕೆ? ಗುರುಗಳಿಲ್ಲದೆ ನಮಗೆ ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಯಾರಿಗಾದರೂ ಗುರುವನ್ನು ದಾಟಿ, ಮುನ್ನುಗ್ಗಿ ಕೃಷ್ಣನನ್ನು ಅರ್ಥಮಾಡಿಕೊಳ್ಳಬೇಕೆಂಬ ಇಚ್ಛೆ ಇದ್ದರೆ, ತತ್‌ಕ್ಷಣ ಅವರು ವಿಫಲರಾಗುತ್ತಾರೆ. ಆದುದರಿಂದ ಚೈತನ್ಯ ಮಹಾಪ್ರಭುಗಳು ಹೇಳುತ್ತಾರೆ, ಗುರು ಕೃಷ್ಣ ಕೃಪಾಯ ಪಾಯ ಭಕ್ತಿ ಲತಾ ಬೀಜ (ಚೈತನ್ಯ ಚರಿತಾಮೃತ, ಮಧ್ಯ 19.151) ಅದು ವೈದಿಕ ಆದೇಶ. ತದ್‌ ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ (ಭಗವದ್ಗೀತೆ 4.34) ಕೃಷ್ಣನ ಅತ್ಯಂತ ವಿಶ್ವಸನೀಯ ಸೇವಕನ ಮೂಲಕ ಹೋಗದದ್ದಿರೆ ಯಾರಿಗೂ ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಇದೇ ವ್ಯಾಸಪೂಜೆಯ ಅರ್ಥ. ನೀವು ದಾಟಿ ಹೋಗುವುದು ಸಾಧ್ಯವಿಲ್ಲ. ವಿದ್ವಾಂಸನಾಗಿದ್ದೇನೆ, ಪ್ರಗತಿ ಹೊಂದಿದ್ದೇನೆ, ಗುರುವನ್ನು ಬಿಟ್ಟು ಕೃಷ್ಣನನ್ನು ಅರ್ಥಮಾಡಿಕೊಂಡಿದ್ದೇನೆ ಎಂದು ನೀವು ಭಾವಿಸಿದರೆ, ಅದು ಮೂರ್ಖತನ. ಅದೇ ವ್ಯಾಸಪೂಜೆ ಆಚರಣೆಯ ಅರ್ಥ. ನಾವು ಯಾವಾಗಲು ಪ್ರಾರ್ಥಿಸಬೇಕು, ಯಸ್ಯ ಪ್ರಸಾದಾದ್‌ ಭಗವತ್‌ ಪ್ರಸಾದಃ (ಗುರು ಅಷ್ಟಕ 8) ಯಸ್ಯ ಪ್ರಸಾದಾತ್‌ : ಗುರುವಿನ ಅನುಗ್ರಹದಿಂದ ಮಾತ್ರ ನಾವು ಕೃಷ್ಣನ ಕೃಪೆಗೆ ಪಾತ್ರರಾಗುವುದು ಸಾಧ್ಯ. ಇದು ವ್ಯಾಸಪೂಜೆಯ ಅರ್ಥ, ಪರಂಪರೆ ಪದ್ಧತಿಯ ಮೂಲಕ ಗೌರವ ಅರ್ಪಿಸುವುದು.” (ಶ್ರೀಲ ಪ್ರಭುಪಾದ ಉಪನ್ಯಾಸ, ಮಾರ್ಚ್‌ 2, 1975)

“ಯಾರಿಗೆ ಗುರುವಿನ ಅಗತ್ಯವಿದೆ? ಮೂರನೆಯ, ನಾಲ್ಕನೆಯ ವರ್ಗದ ವ್ಯಕ್ತಿಗೆ, ಸಾಮಾನ್ಯ ಮನುಷ್ಯನಿಗೆ ಗುರುವಿನ ಅಗತ್ಯವಿಲ್ಲ. ಗುರುವನ್ನು ಇಟ್ಟುಕೊಳ್ಳುವುದು ಅಥವಾ ಗುರುವನ್ನು ಹೊಂದುವುದು ಷೋಕಿಯಲ್ಲ. ಯಾರಿಗೆ ಆಧ್ಯಾತ್ಮಿಕ ಜೀವನವನ್ನು ದಿಟವಾಗಿ ಅರ್ಥಮಾಡಿಕೊಳ್ಳುವ ಇಷ್ಟವಿದೆಯೊ ಅವರಿಗೆ ಗುರುವಿನ ಅಗತ್ಯವಿದೆ. ಇಲ್ಲವಾದರೆ, ಗುರುವಿನ ಅಗತ್ಯವಿಲ್ಲ. ಷೋಕಿಗಾಗಿ ಶ್ವಾನವನ್ನು ಇಟ್ಟುಕೊಳ್ಳುವಂತೆ ಗುರುವನ್ನು ಇಟ್ಟುಕೊಳ್ಳಬೇಡಿ. ಗುರು ಎಂದರೆ… ಇದು ಅಗತ್ಯದ ಪ್ರಶ್ನೆ. ಆಧ್ಯಾತ್ಮಿಕ ಜೀವನ ಎಂದರೇನು, ದೇವರೆಂದರೆ ಏನು, ದೇವರೊಂದಿಗೆ ನನ್ನ ಬಾಂಧವ್ಯವೇನು, ಹೇಗೆ ನಡೆದುಕೊಳ್ಳಬೇಕು ಎಂಬುವುದನ್ನು ಅರ್ಥಮಾಡಿಕೊಳ್ಳುವ ನಿಜವಾದ ಬಯಕೆ ಇರಬೇಕು. ಈ ವಿಷಯಗಳ ಬಗೆಗೆ ನಾವು ತುಂಬ ಪ್ರಾಮಾಣಿಕವಾಗಿದ್ದರೆ, ಆಗ ನಮಗೆ ಗುರುವಿನ ಅಗತ್ಯವಿರುತ್ತದೆ. ಷೋಕಿಗಾಗಿ ಗುರುವಿನ ಬಳಿಗೆ ಹೋಗಬೇಡಿ. ಅದು ನಿಷ್ಪ್ರಯೋಜಕ. ಆದುದರಿಂದ ಶಾಸ್ತ್ರವು ಹೇಳುತ್ತದೆ, ತಸ್ಮಾದ್‌ ಗುರುಂ ಪ್ರಪದ್ಯೇತ. ಏಕೆಂದರೆ ನಾವು ಗುರುವಿನ ಬಳಿಗೆ ಹೋಗಬೇಕು ಮತ್ತು ಶರಣಾಗಬೇಕು. ಶರಣಾಗದೆ ನೀವು ಏನನ್ನೂ ಕಲಿಯಲಾರಿರಿ. ನಿಮಗೆ ಗುರುವಿಗೆ ಸವಾಲು ಒಡ್ಡಬೇಕೆಂದರೆ, ಅದು ಸಾಧ್ಯವಿಲ್ಲ. ಆಗ ನೀವು ಏನನ್ನೂ ಕಲಿಯುವುದಿಲ್ಲ.” (ಶ್ರೀಲ ಪ್ರಭುಪಾದ ಉಪನ್ಯಾಸ,
ಆಗಸ್ಟ್‌ 22, 1973)

“ಆದುದರಿಂದ ಗುರುವು ಭಗವಂತನ ಪ್ರತಿನಿಧಿ. ಆದುದರಿಂದ ಶಾಸ್ತ್ರ ಹೇಳುತ್ತದೆ, ಸಾಕ್ಷಾದ್‌ ಹರಿತ್ವೇನ ಸಮಸ್ತ ಶಾಸ್ತ್ರೈರ್‌ (ಶ್ರೀ ಗುರು ಅಷ್ಟಕ 7) ಗುರುವು ದೇವರಂತೆ. ಇಲ್ಲಿ, ವ್ಯಾಸಪೂಜೆಯ ದಿನದಂದು, ನಾವು ಬೋಧಿಸುತ್ತಿದ್ದೇವೆ ಅಥವಾ ಅವರು ಗುರುವಿಗೆ ಗೌರವ ಸಲ್ಲಿಸುತ್ತಿದ್ದಾರೆ. ಅಂದರೆ ಭಗವಂತನಿಗೆ ಹೇಗೆ ಗೌರವ ಸಲ್ಲಿಸಬೇಕೆಂಬುವುದನ್ನು ಅವರು ಕಲಿಯುತ್ತಿದ್ದಾರೆ. ಇದು ವೈಯಕ್ತಿಕ ವ್ಯವಹಾರವಲ್ಲ, ಇದರ ಅಗತ್ಯವಿದೆ. ಭಗವತ್‌ ಪ್ರಜ್ಞಾವಂತರಾಗಲು ಅವರು ಪ್ರಯತ್ನಿಸುತ್ತಿರುವುದರಿಂದ, ಅವರು ಪ್ರಭುವಿಗೆ ಅಥವಾ ಭಗವಂತನ ಪ್ರತಿನಿಧಿಗೆ ಹೇಗೆ ಗೌರವ ಸಲ್ಲಿಸಬೇಕೆಂಬುವುದನ್ನು ಕಲಿಯಬೇಕು. ಅದರ ಅಗತ್ಯವಿದೆ. ಸಾಕ್ಷಾದ್‌ ಹರಿತ್ವೇನ ಸಮಸ್ತ ಶಾಸ್ತ್ರೈರ್‌. ವೈದಿಕ ಸಾಹಿತ್ಯದಲ್ಲಿ, ಎಲ್ಲ ಶಾಸ್ತ್ರಗಳಲ್ಲಿ ಗುರುವನ್ನು ಭಗವಂತನಂತೆ ಎಂದು ವಿವರಿಸಲಾಗಿದೆ. ಆದರೆ ಗುರುವು ಎಂದಿಗೂ ನಾನು ದೇವರು' ಎಂದು ಹೇಳುವುದಿಲ್ಲ. ಗುರುವು ಭಗವಂತನಿಗೆ ಗೌರವ ಸಲ್ಲಿಸುವಂತೆ ಗುರುವಿಗೆ ಗೌರವ ಅರ್ಪಿಸುವುದು ಶಿಷ್ಯರ ಕರ್ತವ್ಯ. ನಾನು… ನನ್ನ ಶಿಷ್ಯರು ದೇವರಿಗೆ ಕೊಡುವಂತೆ ನನಗೆ ಗೌರವ ನೀಡುತ್ತಿರುವುದರಿಂದ ನಾನೇ ದೇವರಾಗಿ ಬಿಟ್ಟಿರುವೆ ಎಂದು ಗುರುವು ಎಂದಿಗೂ ಹೇಳುವುದಿಲ್ಲ.’ ಅವರು ಹಾಗೆ ಭಾವಿಸಿದ ಕೂಡಲೇ ಅವರು ಶ್ವಾನವಾಗುತ್ತಾರೆ.

ಪರಂಪರೆ ಪದ್ಧತಿಯ ಮೂಲಕ ಆಧ್ಯಾತ್ಮಿಕ ಜ್ಞಾನವನ್ನು ಪಡೆಯುವುದು ಮತ್ತು ಗುರುವಿಗೆ ನೀಡುವ ಗೌರವವು ಕೃಷ್ಣನಿಗೆ ಸಲ್ಲುತ್ತದೆ ಎಂಬುವುದು ವಿಧಾನ, ವೈದಿಕ ವಿಧಾನ. ಗುರುವು
ಅಧಿಕೃತ ಸಂಗ್ರಹಕಾರ. ಸರಕಾರದಲ್ಲಿ ಜಿಲ್ಲಾಧಿಕಾರಿ ಇರುವಂತೆ. ಅವರು ತಮಗಾಗಿ ಅಲ್ಲ, ಸರಕಾರಕ್ಕಾಗಿ ಪ್ರಜೆಗಳಿಂದ ತೆರಿಗೆಯನ್ನು ಸ್ವೀಕರಿಸುತ್ತಾರೆ. ಅದೇ ರೀತಿ, ಪಾರದರ್ಶಕ ಮಾಧ್ಯಮ, ಗುರುವಿನಿಂದ ಜ್ಞಾನವನ್ನು ಸ್ವೀಕರಿಸುವುದು ವೈದಿಕ ಪದ್ಧತಿ… ಗುರು ಎಂದರೆ ಗೌರವವು ಕೃಷ್ಣನಿಗೆ ಸಲ್ಲುತ್ತದೆ. ಆದುದರಿಂದ ಇದು ಅಗತ್ಯ. ಇದು ಕೃತಕವಲ್ಲ, ಆದರೆ ಆಧ್ಯಾತ್ಮಿಕವಾಗಿ ಅಗತ್ಯ. ಆದುದರಿಂದ ನಾವು ವ್ಯಾಸಪೂಜೆ ದಿನವನ್ನು ಆಚರಿಸುತ್ತೇವೆ.” (ಶ್ರೀಲ ಪ್ರಭುಪಾದ ಉಪನ್ಯಾಸ, ಜುಲೈ 8, 1974)

“ವ್ಯಾಸ ಎಂದರೆ ಗುರು, ಏಕೆಂದರೆ ಅವರು ನಮ್ಮ ಮೂಲ ಗುರು. ಗುರುವಿನ ಜನ್ಮ ದಿನವನ್ನು ಆಚರಿಸಿದಾಗ ಅದನ್ನು ವ್ಯಾಸಪೂಜೆ ಎಂದು ಕರೆಯಲಾಗುವುದು. ವ್ಯಾಸಪೂಜೆ ಎಂದರೆ ಗುರುವು ವ್ಯಾಸರ ಪ್ರತಿನಿಧಿ ಎಂದು ಅರ್ಥ. ನಾವು ಭಾಗವತ ಧರ್ಮ, ಭಾಗವತವನ್ನು ಬೋಧಿಸುತ್ತಿರುವಂತೆ, ನಾವು ವ್ಯಾಸರ ಹೆಜ್ಜೆಗಳನ್ನು ಅನುಸರಿಸುತ್ತಿದ್ದೇವೆ. ಆದುದರಿಂದ ವಾಸ್ತವವಾಗಿ, ಉಪದೇಶಕನ ಪೀಠವು ವ್ಯಾಸರ ಆಸನ. ಅದು ವ್ಯಾಸರ ಪೀಠ. ಶ್ರೇಷ್ಠ ನ್ಯಾಯಾಲಯದಲ್ಲಿ, ನ್ಯಾಯ ಪೀಠದ, ಅಥವಾ… ಏನು ಹೇಳುತ್ತಾರೆ? ಆ ಪೀಠದಲ್ಲಿ, ಬೇರೆ ಯಾರೂ ಕುಳಿತುಕೊಳ್ಳುವಂತಿಲ್ಲ. ನ್ಯಾಯಾಲಯದ ನ್ಯಾಯಾಧೀಶ, ರಾಜನ ಪ್ರತಿನಿಧಿ ಅಥವಾ ಯಾರು ಪ್ರಜೆಗಳಿಗೆ ನ್ಯಾಯ ನೀಡುವರೋ ಅವನು ಆ ಪೀಠದಲ್ಲಿ ಕುಳಿತುಕೊಳ್ಳಬಹುದು. ಅದೇ ರೀತಿ, ವ್ಯಾಸರ ಪರವಾಗಿ ಮಾತನಾಡುವವರು, ವ್ಯಾಸರ ಪ್ರತಿನಿಧಿಯು ವ್ಯಾಸಾಸನದಲ್ಲಿ ಕುಳಿತುಕೊಳ್ಳುವರು. ಇದು ವ್ಯವಸ್ಥೆ.” (ಶ್ರೀಲ ಪ್ರಭುಪಾದ ಉಪನ್ಯಾಸ, ಆಗಸ್ಟ್‌ 23, 1971)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi