ಆಂಗ್ಲ ಮೂಲ: ಚೈತನ್ಯ ಚರಣ ದಾಸ
ಸಮಸ್ಯೆಯ ಮೂಲಕ್ಕೆ ಹೋಗುವ ಆಧ್ಯಾತ್ಮಿಕ ಪರಿಹಾರವು ಸ್ವಯಂ-ವಿನಾಶ ಪ್ರವೃತ್ತಿಯ ಪ್ರಲೋಭನೆಯ ವಿರುದ್ಧದ ಏಕೈಕ ರಕ್ಷಣೆ.
ಮೀನುಗಾರನ ಆಮಿಷದಲ್ಲಿ ಮೀನು ಸಿಕ್ಕಿಬೀಳುತ್ತದೆ, ಇಲಿಯು ಬೋನಿಗೆ ಬಿದ್ದ ಹಾಗೆ. ಅಸ್ತಿತ್ವದ ಹೋರಾಟದ ವಿಪರ್ಯಾಸವೆಂದರೆ ಜೀವಿಗಳು ಹಲವು ಬಾರಿ ತಮ್ಮ ಆಸೆಗಳಿಂದಲೇ ನಾಶವಾಗುತ್ತಾರೆ. ಮೀನು ಮತ್ತು ಇಲಿಗೆ ಕಡೆಯ ಪಕ್ಷ ನಿಮಿತ್ತಗಳು ಇವೆ : ಬೋನಿನಲ್ಲಿರುವುದು ಉದರಂಭರಣೆಯ ಆಹಾರ ಪದಾರ್ಥ. ಮತ್ತು ಈ ಪ್ರಾಣಿಗಳಿಗೆ ತಾವು ಸಿಕ್ಕಿಬೀಳುತ್ತೇವೆ ಎಂದೂ ಗೊತ್ತಿರುವುದಿಲ್ಲ. ಆದರೆ ಮಾನವ ಜೀವಿಗಳಿಗೆ ಅಂತಹ ಕಾರಣಗಳೇನೂ ಇಲ್ಲ. ಅವರ ಜೀವನವನ್ನು ಹಾಳು ಮಾಡುವ ಪ್ರಲೋಭನೆಗಳು ಅನೇಕ ಬಾರಿ ಅಪಾಯವೆಂದು ಗೊತ್ತಿದ್ದರೂ ಅದರಲ್ಲಿ ತೊಡಗುವುದೇ ಆಗಿದೆ. ಉದಾಹರಣೆಗೆ, ಬದುಕಿರಲು ಯಾರೂ ಧೂಮಪಾನ ಮಾಡಬೇಕಾಗಿಲ್ಲ. ಮತ್ತು ಧೂಮಪಾನವು ಅಪಾಯಕಾರಿ ಎಂಬುವುದು ಅರೆ ಪ್ರಜ್ಞಾವಸ್ಥೆಯಲ್ಲಿರುವ ಮನುಷ್ಯನಿಗೂ ಗೊತ್ತು.

ವಿಶ್ವ ಆರೋಗ್ಯ ಸಂಸ್ಥೆಯ ಈ ಅಂಕಿ ಅಂಶಗಳನ್ನು ಗಮನಿಸಿ :
* ತಂಬಾಕು ಪ್ರತಿ ದಿನ ವಿಶ್ವಾದ್ಯಂತ ಹತ್ತು ಸಾವಿರ ಜನರನ್ನು ಕೊಲ್ಲುತ್ತದೆ.
* 2020ರ ವೇಳೆಗೆ ವಿಶ್ವಾದ್ಯಂತದ ಸಾವಿನ ಪ್ರಮಾಣದಲ್ಲಿ ಶೇಕಡ 12 ರಷ್ಟು ತಂಬಾಕು ಸೇವನೆಯಿಂದಲೇ ಸಂಭವಿಸುತ್ತದೆ. ಇದು ಆತ್ಮಹತ್ಯೆ, ಕೊಲೆ, ಏಯ್ಡ್ಸ್, ಕ್ಷಯ, ಗರ್ಭಿಣಿ ಸಾವು ಮತ್ತು ವಾಹನ ಅಪಘಾತಗಳ ಸಾವುಗಳ ಒಟ್ಟು ಸಂಖ್ಯೆಗಿಂತ ಹೆಚ್ಚು.
* ಹದಿಹರೆಯದಲ್ಲಿ ಧೂಮಪಾನ ಆರಂಭಿಸುವವರಲ್ಲಿ ಅರ್ಧದಷ್ಟು ಜನರು ತಮ್ಮ ಮಧ್ಯ ವಯಸ್ಸಿನಲ್ಲಿಯೇ ಸಾವನ್ನಪ್ಪುತ್ತಾರೆ. ಇದರಿಂದ ಅವರು ತಮ್ಮ ಜೀವನದ ಸುಮಾರು 22 ವರ್ಷಗಳನ್ನು ಕಳೆದುಕೊಳ್ಳುತ್ತಾರೆ.
* ಈ ಅಂಶಗಳನ್ನೂ ಅದಕ್ಕೆ ಸೇರಿಸಿ : ಸರಾಸರಿ ಸಿಗರೆಟ್‌ನಲ್ಲಿ 401 ವಿಷಗಳಿವೆ ಮತ್ತು ಕ್ಯಾನ್ಸರ್‌ಗೆ ಕಾರಣವಾಗುವ 43 ರಾಸಾಯನಿಕಗಳಿವೆ. ಮತ್ತು ವಿಶ್ವಾದ್ಯಂತ ಸುಮಾರು 1.1 ಶತ ಕೋಟಿ (ಬಿಲಿಯನ್) ಧೂಮಪಾನಿಗಳಿದ್ದಾರೆ.
ಮದ್ಯಪಾನ, ಮಾದಕ ವಸ್ತು, ಆತ್ಮಹತ್ಯೆಯಂತಹ ಇನ್ನಿತರ ಸ್ವಯಂ-ವಿನಾಶ ಪ್ರವೃತ್ತಿಯ ಅಂಕಿಅಂಶಗಳೂ ಗಾಬರಿ ಉಂಟುಮಾಡುವಂತಹವು. ಸಾಮಾನ್ಯರೆಂದು ಕರೆದುಕೊಳ್ಳುವ ಇತರರಲ್ಲಿಯೂ ಸ್ವಯಂ-ವಿನಾಶದ ಅಂಶಗಳಿವೆ. ಹಾನಿಕಾರಕ ಅನಪೇಕ್ಷಿತ ಕೋಪ, ಹೃದಯ ವಿದ್ರಾವಕ ನುಡಿಗಳಿಂದ ಜೀವವನ್ನೇ ಹಾಳು ಮಾಡುವ ಪ್ರವೃತ್ತಿ ಕಾಣಬರುತ್ತದೆ.
ಸಹಜವಾಗಿ ಒಂದು ಪ್ರಶ್ನೆ ಏಳುತ್ತದೆ : ಒಬ್ಬ ಬುದ್ಧಿವಂತ ಮನುಷ್ಯ ಅದು ಹೇಗೆ ಅಂತಹ ವಿನಾಶಕಾರಿ ಹಾದಿಯಲ್ಲಿ ತೊಡಗುತ್ತಾನೆ? ಧೂಮಪಾನವನ್ನು ಆರಂಭಿಸಿದಾಗ ತಾವು ಅಪಾಯ ವಲಯದತ್ತ ಹೆಜ್ಜೆಹಾಕುತ್ತಿದ್ದೇವೆಂಬುದು ಬಹಳ ಜನರಿಗೆ ಗೊತ್ತು. ಆದರೆ, ಮಾಧ್ಯಮ, ಮಿತ್ರರು ಮತ್ತು ವ್ಯಾಪಾರಿಗಳು ಒಂದೇ ಒಂದು ಬಾರಿ ಪ್ರಯೋಗ ಮಾಡಲು ಅವರನ್ನು ಪ್ರಚೋದಿಸುತ್ತಾರೆ. ಉತ್ಸಾಹವಿಲ್ಲದ ಆನಂದದ ದಿನನಿತ್ಯದ ಏಕತಾನ ಬದುಕಿನಿಂದ ಕೊಂಚ ಬಿಡುವು ಪಡೆಯಲು ಅವರು ಅಂತಹ ಸಲಹೆಯನ್ನು ಒಪ್ಪುತ್ತಾರೆ. ದಿಢೀರ್ ಆನಂದವು ಅವರ ಮನಸ್ಸಿನಲ್ಲಿ ಅಚ್ಚೊತ್ತುತ್ತದೆ. ಮತ್ತು ಬದುಕಿನಲ್ಲಿ ಹಿಂದೇಟು ಆದಾಗಲೆಲ್ಲ ಧೂಮಪಾನದ ಮೂಲಕ ತತ್‌ಕ್ಷಣದ ಉಪಶಮನಕ್ಕೆ ಅವರು ಪ್ರಯತ್ನಿಸುತ್ತಾರೆ. ಪ್ರತಿ ಬಾರಿ `ದಂ’ ಎಳೆದಾಗಲೂ ಹಿಂದಿನ ಅನುಭವವನ್ನು ಪುನರ್ ಸ್ಥಾಪಿಸುತ್ತದೆ ಮತ್ತು ತತ್‌ಕ್ಷಣದ ಶಮನ ಪಡೆಯುವ ಪ್ರವೃತ್ತಿಯನ್ನು ಬಲಪಡಿಸುತ್ತದೆ. ಇದು ಬುದ್ಧಿ ಮತ್ತು ಪ್ರಜ್ಞೆಯನ್ನು ದುರ್ಬಲಗೊಳಿಸುತ್ತದೆ. ಕ್ರಮೇಣ ಧೂಮಪಾನವು ಚಟವಾಗುತ್ತದೆ.
ಪ್ರಸ್ತುತ ಪರಿಹಾರಗಳು
ಚಟವನ್ನು ದೂರ ಮಾಡಲು ಇಂದು ಬಳಕೆಯಲ್ಲಿರುವ ಕೆಲವು ವಿಧಾನಗಳು ಇಲ್ಲಿವೆ.
1. ಜ್ಞಾನ :
ಅಪಾಯಗಳನ್ನು ಅರಿತರೆ ಜನರು ಅದರಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ಭಾವಿಸಲಾಗಿದೆ. ಅದು ಕೆಲವು ಸಮಯ ನಿಜ. ಆದರೆ ಯಾವಾಗಲೂ ಅಲ್ಲ. ಅರಿವು ವಿರುದ್ಧ ಪರಿಣಾಮವನ್ನೂ ಉಂಟುಮಾಡಬಹುದು. ಉದಾಹರಣೆಗೆ, ಪ್ರತಿ ಸಿಗರೆಟ್ ಪೊಟ್ಟಣ ಮತ್ತು ಜಾಹೀರಾತಿನಲ್ಲಿ `ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ’ ಎಂದು ಮುದ್ರಿಸಬೇಕೆಂಬ ಸರ್ಕಾರದ ಆದೇಶ ಬಂದಾಗ, ಸಿಗರೆಟ್ ಮಾರಾಟ ಹೆಚ್ಚಾಯಿತು! ಈ ಎಚ್ಚರಿಕೆಯು ಯುವ ಜನರಲ್ಲಿ ಸಾಹಸೀ ಉತ್ಸಾಹ ಚಿಮ್ಮಿಸಿದಂತೆ ತೋರಿತು.
2. ಭಾವನಾತ್ಮಕ ಬೆಂಬಲ :
ತಮ್ಮ ಪ್ರೀತಿಪಾತ್ರರು ಭಾವನಾತ್ಮಕವಾಗಿ ಕೈಬಿಟ್ಟಾಗ ಅಥವಾ ವಿಶ್ವಾಸಘಾತವಾದಾಗ ಸಾಮಾನ್ಯವಾಗಿ ಜನರು ಯಾವುದಾದರೂ ಚಟದ ದಾಸರಾಗುತ್ತಾರೆ. ಮುಖ್ಯವಾಗಿ ಹದಿಹರೆಯದವರು ಈ ರೀತಿ ಚಟಕ್ಕೆ ಬಲಿಯಾಗುವರು. ವೈಯಕ್ತಿಕವಾಗಿ ಆಪ್ತ ಸಲಹೆ ಮೂಲಕ ಭಾವನಾತ್ಮಕ ಬೆಂಬಲವನ್ನು ನೀಡುವುದು ಒಂದು ಪರಿಹಾರ. ಆದರೆ ವೃತ್ತಿಪರ ಆಪ್ತ ಸಲಹೆಯು ಸದಾ ಅವರ ಮೇಲೆ ಅವಲಂಬಿತರಾಗುವಂತೆ ಮಾಡಬಹುದು. ಅಲ್ಲದೆ, ವೃತ್ತಿಪರ ಆಪ್ತ ಸಲಹೆಯು ದುಬಾರಿ. ಮಿತ್ರರು ಸಹಾಯ ಮಾಡಬಹುದು. ಆದರೆ ಆಧುನಿಕ ಜೀವನ ಶೈಲಿಯಲ್ಲಿ ಕೆಲವೇ ಕೆಲವು ಮಂದಿಗೆ ಮಾತ್ರ ಇದಕ್ಕೆ ಅಗತ್ಯವಾದ ಸಮಯ ವಿನಿಯೋಗಿಸುವುದು ಸಾಧ್ಯ.
3. ಉನ್ನತೀಕರಣ :
ಒಂದರ ಸ್ಥಳದಲ್ಲಿ ಮತ್ತೊಂದು, ಉತ್ತಮವಾದುದನ್ನು ತರುವುದೇ ಉನ್ನತೀಕರಣ. ಉದಾಹರಣೆಗೆ, ಪಾನಮತ್ತನೊಬ್ಬನು ಮದ್ಯದ ಬದಲು ಸಂಗೀತದಲ್ಲಿ ಆಶ್ರಯ ಪಡೆಯಬಹುದು. ಆದರೆ ಅವನಿಗೆ ಸಂಗೀತದಲ್ಲಿ ತೀವ್ರ ಆಸಕ್ತಿ, ಮತ್ತು ಮದ್ಯಪಾನ ಚಟವು ತೀವ್ರವಾಗಿಲ್ಲದಾಗ ಮಾತ್ರ ಇದು ಸಾಧ್ಯ. ಇಲ್ಲಿ ಮತ್ತೊಂದು ಸಮಸ್ಯೆ ಎಂದರೆ, ಬದಲಿಗಿಂತ ಚಟದಲ್ಲಿನ ಆಸಕ್ತಿ ಹೆಚ್ಚಾಗಿರಬಹುದು.
4. ಮನಃಶಕ್ತಿ :
ತಾನು ಅನುಭವಿಸುತ್ತಿರುವ ಮತ್ತು ತನ್ನ ಪ್ರೀತಿಪಾತ್ರರಿಗೆ ಉಂಟುಮಾಡುತ್ತಿರುವ ದೈಹಿಕ ಮತ್ತು ಭಾವನಾತ್ಮಕ ಯಾತನೆಯನ್ನು ಕಂಡು ವ್ಯಸನಿಯು ತನ್ನ ಕೆಟ್ಟ ಚಟವನ್ನು ಬಿಡಲು ದೃಢ ನಿಶ್ಚಯ ಮಾಡಬಹುದು. ಆದರೆ ಕೆಲವೇ ಜನರಲ್ಲಿ ಅಂತಹ ಮನಃಶಕ್ತಿ ಇರುತ್ತದೆ. ಯಶಸ್ವಿಯಾದರೂ ಅವರು ಇಡೀ ಜೀವನದಲ್ಲಿ ಸಂಘರ್ಷವನ್ನು ಎದುರಿಸಬೇಕಾಗಬಹುದು. ಯಾವುದೇ ಘಳಿಗೆಯಲ್ಲಿ ಪುನಃ ಬಲಿಯಾಗುವ ಭಯವಿರುತ್ತದೆ. ಸೋಲುಂಟಾದರೆ, ಅಪರಾಧಿಪ್ರಜ್ಞೆ ಉಂಟಾಗಿ ಬದುಕು ಇನ್ನಷ್ಟು ಘೋರವಾಗುತ್ತದೆ.
5. ಧರ್ಮ :
ಧಾರ್ಮಿಕವಾಗಿ ಬದ್ಧರಾಗಿರುವವರು ವಿಕೃತ ಆನಂದ ಪಡೆಯುವ ಸಾಧ್ಯತೆ ಕಡಮೆ ಎಂದು ಸಮೀಕ್ಷೆಗಳು ತಿಳಿಸಿವೆ. ಧಾರ್ಮಿಕ ತತ್ತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ವ್ಯಸನಿಗಳು ತಮ್ಮ ಚಟದಿಂದ ಮುಕ್ತರಾಗಬಹುದು.
6. ಪರ್ಯಾಯ :
ವ್ಯಸನಿಗಳು ಅನೇಕ ಬಾರಿ ಕಡಮೆ ಅಪಾಯದ ಚಟವನ್ನು ಪರ್ಯಾಯವಾಗಿ ಕಂಡುಕೊಳ್ಳುತ್ತಾರೆ. ಧೂಮಪಾನಿಗಳು ನಿಕೊಟಿನ್ ತುಂಡು ಅಥವಾ ನಿಕೊಟಿನ್ ಗಮ್ ಅನ್ನು, ಹೆರೋಯಿನ್ ವ್ಯಸನಿಗಳು ಮೆತಡೋನ್ ಅನ್ನು ಪರ್ಯಾಯ ಮಾಡಿಕೊಳ್ಳುತ್ತಾರೆ. ಇದು ಚಟದ ಪ್ರಮಾಣವನ್ನು ಕಡಮೆ ಮಾಡಬಹುದು, ಆದರೆ ವ್ಯಸನಿಯು ಚಟದಿಂದ ಮುಕ್ತನಾಗುವುದಿಲ್ಲ. ಅವನು ತನ್ನ ಮನಃಸ್ಥಿತಿಗಾಗಿ ಬಾಹ್ಯ ವಸ್ತುವಿನ ಮೇಲೆ ಅವಲಂಬಿತನಾಗುವುದು ಮುಂದುವರಿಯುತ್ತದೆ. ಮತ್ತು ಈ ಪರ್ಯಾಯ ಮಾದಕ ವಸ್ತುವು ವ್ಯಸನಿಯ ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿ ಮೇಲೆ ದುಷ್ಪರಿಣಾಮ ಬೀರುವುದೂ ಮುಂದುವರಿಯುತ್ತದೆ. ಆದುದರಿಂದ ಪರ್ಯಾಯ ವಸ್ತುವು ಕೆಡುಕನ್ನು ಕಡಮೆ ಮಾಡುತ್ತದೆಯೆ ವಿನಾ ಮೂಲೋತ್ಪಾಟನೆ ಮಾಡುವುದಿಲ್ಲ.
ಈ ಎಲ್ಲ ವಿಧಾನಗಳಲ್ಲಿ ಅಲ್ಪ ಯಶಸ್ಸು ಇದ್ದರೂ ಸಮಸ್ಯೆಯ ಮೂಲವನ್ನು ಅರ್ಥ ಮಾಡಿಕೊಂಡಾಗ ಸ್ವಯಂ-ವಿನಾಶಕಾರಿ ಚಟಗಳಿಗೆ ನಿಜವಾದ ಪರಿಹಾರ ಕಂಡುಕೊಳ್ಳುವುದು ಸಾಧ್ಯ. ವೈದಿಕ ದೃಷ್ಟಿಕೋನದಿಂದ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ.
ವೈದಿಕ ದೃಷ್ಟಿಕೋನ
ಭಗವದ್ಗೀತೆಯಲ್ಲಿ ಅರ್ಜುನನು ಕೃಷ್ಣನಲ್ಲಿ ಕೇಳುತ್ತಾನೆ, “ಮನುಷ್ಯರು ಇಷ್ಟವಿಲ್ಲದಿದ್ದರೂ ಬಲವಂತದಿಂದ ಪಾಪ ಕಾರ್ಯಗಳನ್ನು ಮಾಡಲು ಯಾವುದರಿಂದ ಪ್ರಚೋದಿತರಾಗುತ್ತಾರೆ?”
ಶ್ರೀ ಕೃಷ್ಣನು ಉತ್ತರಿಸುತ್ತಾನೆ (3.37), “ರಜೋ ಗುಣದ ಸಂಪರ್ಕದಿಂದ ಹುಟ್ಟಿ ಅನಂತರ ಕ್ರೋಧವಾಗಿ ಮಾರ್ಪಾಟಾಗುವ ಕಾಮವೇ ಇದಕ್ಕೆ ಕಾರಣ. ಇದು ಎಲ್ಲವನ್ನೂ ನುಂಗಿ ಹಾಕುವ, ಜಗತ್ತಿನ ಪಾಪಪೂರಿತ ಶತ್ರು.”
ಈ ಸಂವಾದದ ಹಿನ್ನೆಲೆಯು ಭಗವದ್ಗೀತೆಯ ಮೂಲ ಬೋಧನೆಯಾಗಿದೆ : ಬದುಕಿನ ಮೂಲವು ಅಲೌಕಿಕ ವಸ್ತುವಾದ ಆತ್ಮ. ಆತ್ಮದ ಅಪೇಕ್ಷೆ ಪ್ರೀತಿಸುವುದು ಮತ್ತು ಪ್ರೀತಿಸಲ್ಪಡುವುದು. ಮತ್ತು ಪ್ರೀತಿಯ ವಿನಿಮಯದ ಮೂಲಕ ಅಸೀಮಿತ ಆನಂದದ ಅನುಭವವನ್ನು ಪಡೆಯುವುದು. ಆಧ್ಯಾತ್ಮಿಕವಾಗಿರುವ ಆತ್ಮವು ಉನ್ನತ ಆಯಾಮದ ಆಧ್ಯಾತ್ಮಿಕ ಲೋಕಕ್ಕೆ ಸೇರಿದೆ, ಮತ್ತು ಅಲ್ಲಿ ಅದು ಅತ್ಯಂತ ಪ್ರೀತಿಯ ಅತ್ಯಾಕರ್ಷಿತ ವ್ಯಕ್ತಿಯಲ್ಲಿ ತನ್ನ ಸಂತೃಪ್ತಿಯನ್ನು ಕಂಡುಕೊಳ್ಳುತ್ತದೆ. ಪರಾತ್ಪರನು ಆತ್ಮದ ಪ್ರೀತಿಯೊಂದಿಗೆ ಪ್ರತಿಸ್ಪಂದಿಸುತ್ತಾನೆ.
`ಏಕೋ ಬಾಹು ಸ್ಯಾಮ್’ ಎಂದು ವೇದ ಹೇಳಿದೆ : ಪ್ರೀತಿಯ ಸ್ಪಂದನೆಗಾಗಿ ಪರಾತ್ಪರನು ಅನಂತ ವಿಭಿನ್ನಾಂಶವಾಗಿ ವಿಸ್ತರಿಸಿಕೊಂಡಿದ್ದಾನೆ. ತೈತ್ತರೀಯ ಉಪನಿಷದ್, ರಸೋ ವೈ ಸಃ ಎಂದು ವಿವರಿಸಿದೆ : ದೇವೋತ್ತಮನು ಎಲ್ಲ ದೈವ ಪ್ರೇಮದ ಭಾವನೆಗಳ ಭಂಡಾರ. ದೇವೋತ್ತಮ ಪರಮ ಪುರುಷನು ಸರ್ವಾಕರ್ಷಕ ಮತ್ತು `ಕೃಷ್ಣ’ ಎಂಬ ಹೆಸರಿನಿಂದ ಜನಪ್ರಿಯ ಎಂದು ಶ್ರೀಮದ್ ಭಾಗವತವು ಸ್ಪಷ್ಟಪಡಿಸಿದೆ. `ಕೃಷ್ಣ’ ಎಂದರೆ ಆಕರ್ಷಕ ಎಂದು ಅರ್ಥ. ಆಧ್ಯಾತ್ಮಿಕ ಲೋಕದಲ್ಲಿ ಕೃಷ್ಣನು ಎಲ್ಲ ಬಾಂಧವ್ಯಗಳ ಕೇಂದ್ರ ಬಿಂದು. ಅಲ್ಲಿ ಆತ್ಮವು ಅವನ ಸಹವಾಸದಲ್ಲಿ ತೀವ್ರವಾದ ಮತ್ತು ಸದಾ ವಿಸ್ತರಿಸುವ ಪರಮಾನಂದವನ್ನು ಅನುಭವಿಸುತ್ತಿರುತ್ತದೆ.
ಪ್ರೇಮವು ಸ್ವಾತಂತ್ರ್ಯದ ಅಗತ್ಯವನ್ನು ಸಾರುತ್ತದೆ. ಪ್ರೀತಿಯ ವಸ್ತುವು ಪ್ರೇಮವನ್ನು ಮುಕ್ತವಾಗಿ ಸ್ಪಂದಿಸಲು ಸಾಧ್ಯವಾದಾಗ ಮಾತ್ರ ಪ್ರೀತಿಯ ಅನುಭವವು ಸಂತೃಪ್ತವಾಗುತ್ತದೆ. ದೇವೋತ್ತಮ ಪರಮ ಪುರುಷ ಕೃಷ್ಣನನ್ನು ಪ್ರೀತಿಸುವ ಆನಂದವನ್ನು ಅನುಭವಿಸಲು ಆತ್ಮಕ್ಕೆ ಪೂರ್ಣ ಸ್ವಾತಂತ್ರ್ಯ ಕಲ್ಪಿಸಲಾಗಿದೆ. ಆದರೆ ಆತ್ಮವು ಈ ಮುಕ್ತ ಮನಸ್ಸನ್ನು ದುರುಪಯೋಗಪಡಿಸಿಕೊಂಡು ಕೃಷ್ಣನನ್ನು ಪ್ರೀತಿಸಲು ಇಷ್ಟಪಡದಂತಾದರೆ ಅವನು ತನ್ನ ಪ್ರೀತಿಯನ್ನು ಸ್ಪಂದಿಸಲು ಪರ್ಯಾಯ ವ್ಯಕ್ತಿಯನ್ನು ಕಂಡುಕೊಳ್ಳಬೇಕಾಗುತ್ತದೆ. ದೇವೋತ್ತಮನಿಗೆ ಪರ್ಯಾಯ ಇರುವುದು ಸಾಧ್ಯವಿಲ್ಲ. ಅಲ್ಲದೆ, ಆತ್ಮವು ಕೃಷ್ಣನಲ್ಲದೆ ಬೇರಾರಲ್ಲಿಯೂ ಆನಂದ ಪಡೆಯಲಾಗದು. ಅಂತಹ ಪ್ರಯತ್ನ ಮಾಡಲು ಆತ್ಮವು ಪಟ್ಟು ಹಿಡಿದರೆ, ಅಂತಹ ಪ್ರಯೋಗಕ್ಕಾಗಿ ಮತ್ತು ಸರಿಪಡಿಸಿಕೆಗೆ ಈ ಲೋಕವು ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತದೆ.
ನಮ್ಮೊಳಗಿನ ಶತ್ರು
ಆತ್ಮವು ಭೌತಿಕ ಲೋಕಕ್ಕೆ ಬಂದ ಕೂಡಲೇ, ಅದರ ಕೃಷ್ಣಪ್ರೇಮವು ಕಾಮವಾಗಿ ವಿಕೃತಗೊಳ್ಳುತ್ತದೆ. ಕಾಮವು ಮಾಯಾ ಶಕ್ತಿಯಾಗಿದ್ದು, ಅದು ಪ್ರೀತಿಯ ಪ್ರಯೋಗಕ್ಕಾಗಿ ಆತ್ಮಕ್ಕೆ ಅನೇಕ ಪರ್ಯಾಯಗಳನ್ನು ಒದಗಿಸುತ್ತದೆ. ಕಾಮವು ಆತ್ಮವನ್ನು ಲೌಕಿಕ ದೇಹದೊಂದಿಗೆ ತಪ್ಪಾಗಿ ಗುರುತಿಸುವ ವಿಧಾನವನ್ನು ಸೃಷ್ಟಿಸುತ್ತದೆ ಮತ್ತು ಅದು ನಿರಂತರವಾಗಿರುವಂತೆ ಮಾಡುತ್ತದೆ. ಕಾಮವು ಎಲ್ಲ ಜೀವಿಗಳಲ್ಲಿ ಲೈಂಗಿಕ ತೃಷೆ ಮತ್ತು ಐಹಿಕ ಆನಂದಕ್ಕೆ ಕಾರಣವಾಗುತ್ತದೆ.
ಆಧುನಿಕ ನಾಗರಿಕತೆಯು ತನ್ನ ಮಾಧ್ಯಮ, ಸಂಸ್ಕೃತಿ, ಸಾಮಾಜಿಕ ಪರಿಸರ ಮತ್ತು ಒಟ್ಟಾರೆ ಮೌಲ್ಯಗಳಿಂದ ಕಾಮವನ್ನು ಉದ್ರೇಕಿಸುತ್ತದೆ. ಸಿನಿಮಾ ಲೋಕವು ಅಸೀಮಿತ ಲೈಂಗಿಕ ಆನಂದದ ಭರವಸೆ ನೀಡುತ್ತದೆ ಮತ್ತು ಅದು ಕಾಮ ಪ್ರಚೋದನೆಯನ್ನು ಮಾಡುತ್ತದೆ. ಆದರೆ ಲೈಂಗಿಕ ಆನಂದವು ಕ್ಷಣಿಕ, ಮತ್ತು ಅನೇಕ ವರ್ಷಗಳಿಂದ ಕಾಣುವ ಕನಸು ಕ್ಷಣ ಮಾತ್ರದಲ್ಲಿ ಮಾಯವಾಗುತ್ತದೆ. ಆನಂದದ ಅನುಭವ ಕಡಮೆಯಾದರೂ ಮಾಧ್ಯಮಗಳು ಭಾವೋದ್ರೇಕಗೊಳಿಸುತ್ತವೆ.

ಲೈಂಗಿಕತೆ, ಮುಖ್ಯವಾಗಿ ಅನೈತಿಕ ಲೈಂಗಿಕತೆಯು, ಸಮಯ, ಹಣ, ತೀವ್ರವಾದ ಭಾವೋದ್ರೇಕ, ಸಂಬಂಧ ಮತ್ತು ಪ್ರತಿಷ್ಠೆಗೆ ಅಪಾಯ ಮುಂತಾದವುಗಳನ್ನು ಒಳಗೊಂಡು, ಸಂಕೀರ್ಣದ್ದಾಗಿದೆ. ಅಂತಹ ಲೈಂಗಿಕಾನಂದಕ್ಕೆ ಪ್ರಯತ್ನಿಸಿದರೆ, ಯಾರಾದರೂ ಯಶಸ್ವಿಯಾದರೂ ಕೂಡ, ಅದು ವ್ಯಕ್ತಿಯ ಭಾವನೆಗಳನ್ನು ನಿರಾಶೆಗೊಳಿಸುತ್ತದೆ ಮತ್ತು ಮೋಸವಾದಂತೆ ಭಾಸವಾಗುತ್ತದೆ. ಯಶಸ್ವಿಯಾಗದಿದ್ದರೆ, ಅದು ಕೋಪವನ್ನು ಉಂಟುಮಾಡುತ್ತದೆ. ಯಾವುದೇ ರೀತಿಯಾಗಲಿ, ವ್ಯಕ್ತಿಗಳು ಕಾಮದ ಗುಲಾಮರಾಗುತ್ತಾರೆ. ಪ್ರಯತ್ನಿಸಿದಷ್ಟೂ ಅವರು ಹತಾಶರಾಗುತ್ತಾರೆ ಮತ್ತು ಅವರಿಗೆ ಪ್ರಯತ್ನಿಸುತ್ತಲೇ ಇರಬೇಕೆನಿಸುತ್ತದೆ. ಹತಾಶೆಯು ದಿಢೀರ್ ಪರಿಹಾರಕ್ಕಾಗಿ ಹಾತೊರೆಯುತ್ತದೆ ಮತ್ತು ಅಂತಹ ಜನರು ಮಾದಕದ್ರವ್ಯಗಳು ನೀಡುವ ಕ್ಷಿಪ್ರ ತೃಪ್ತಿಯ ಪ್ರಲೋಭನಕ್ಕೆ ಬಲಿಯಾಗುತ್ತಾರೆ.
ಆದುದರಿಂದ ಕಾಮವು ಎಲ್ಲ ಸ್ವಯಂ-ವಿನಾಶ ಚಟಗಳಿಗೆ ಕಾರಣವಾದ ಆಂತರಿಕ ಶತ್ರು. ಗೀತೆಯು ಎಲ್ಲ ರೀತಿಯ ವಿಕೃತ ಆನಂದದ ಸ್ವಭಾವವನ್ನು ವಿವರಿಸುತ್ತದೆ (18.38) : “ಅದು ಆರಂಭದಲ್ಲಿ ಅಮೃತದಂತಿದ್ದು ಕಡೆಗೆ ವಿಷವಾಗುತ್ತದೆ.” ಒಂದೆಡೆ ಶ್ರೀಲ ಪ್ರಭುಪಾದರು ಹೇಳುತ್ತಾರೆ, “ವ್ಯಕ್ತಿಯು ಇಂದ್ರಿಯಸುಖ ಅನುಭವಿಸುವಾಗ ಅಲ್ಲಿ ಆನಂದದ ಭಾವನೆ ಉಂಟಾಗಬಹುದು. ಆದರೆ, ವಾಸ್ತವವಾಗಿ, ಆ ಸಂತೋಷದ ಭಾವನೆಯೇ ಅಂತಿಮವಾಗಿ ಲೈಂಗಿಕ ಕ್ರಿಯೆಯನ್ನು ಆನಂದಿಸುವವರ ಶತ್ರು.” ಏಕೆ? ಏಕೆಂದರೆ ಅದು ಈ ಜಗತ್ತಿನಲ್ಲಿ ನಿಜವಾದ ಆನಂದವನ್ನು ಅನುಭವಿಸಬಹುದು ಎಂಬ ಮಾಯೆಯನ್ನು ಪುನರ್ ಸ್ಥಾಪಿಸುತ್ತದೆ.
ಪ್ರತಿಯೊಬ್ಬರಲ್ಲಿಯೂ ಬೇರೆ ಬೇರೆ ಪ್ರಮಾಣದಲ್ಲಿ ಕಾಮವು ಅಸ್ತಿತ್ವದಲ್ಲಿ ಇದೆ. ಆದುದರಿಂದ, ಲೌಕಿಕವಾಗಿ ಎಷ್ಟೇ ಯಶಸ್ವಿಯಾಗಿದ್ದರೂ ಎಲ್ಲ ವ್ಯಕ್ತಿಗಳಲ್ಲಿಯೂ ಸ್ವಯಂ-ವಿನಾಶ ಚಟಗಳ ಪ್ರವೃತ್ತಿ ಇದ್ದೇ ಇದೆ. ಸಾಮಾಜಿಕವಾಗಿ ಒಪ್ಪಿತವಾದ ಮಿತಿಯನ್ನು ಮೀರಿದಾಗ ಜನರು ಅಂತಹ ಪ್ರವೃತ್ತಿಯ ಬಗೆಗೆ ಆತಂಕ ತೋರುತ್ತಾರೆ. ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ಕಾಮವು ಸ್ವಯಂ-ವಿನಾಶಕ. ಅದು ವ್ಯಕ್ತಿಯ ಜನ್ಮ ಹಕ್ಕಾದ ಅಸೀಮಿತ ಆಧ್ಯಾತ್ಮಿಕ ಆನಂದವನ್ನು ನಾಶ ಮಾಡಿಬಿಡುತ್ತದೆ. ಅವನಿಗೆ ಎಂದೂ ಶಾಶ್ವತ ತೃಪ್ತಿ ನೀಡದ ನಿಕೃಷ್ಟ ಲೌಕಿಕ ತೃಷೆಗೆ ಶ್ರಮಿಸುವಂತೆ ಮಾಡುತ್ತದೆ.
ಕಾಮವನ್ನು ಜಯಿಸಲು ಒಂದೇ ಮಾರ್ಗ
ನಮ್ಮ ಮೂಲ ಸ್ವಭಾವದ ವಿಕೃತ ರೂಪವಾದ ಕಾಮವನ್ನು ನಾಶ, ನಿಗ್ರಹ, ನಿಯಂತ್ರಣ ಅಥವಾ ಪರಿವರ್ತಿಸುವುದು ಸಾಧ್ಯವಿಲ್ಲ. ಆದರೆ ನಾವು ನಮ್ಮ ಪ್ರೀತಿಯ ಒಲವನ್ನು ಭಕ್ತಿಸೇವೆಯ ವೈಜ್ಞಾನಿಕ ವಿಧಾನದ ಮೂಲಕ ಕೃಷ್ಣನಲ್ಲಿಗೆ ಮರಳಿ ತಂದರೆ ಅದು ತನ್ನ ಮೂಲ ಸ್ಥಾನಕ್ಕೆ ಬರುವುದು ಖಚಿತ. ಕಾಮವನ್ನು ಜಯಿಸಲು ಆಧ್ಯಾತ್ಮಿಕ ವೇದಿಕೆಯ ಮೇಲೆ ಕ್ರಿಯಾತ್ಮಕವಾಗಿರಬೇಕೆಂದು ಕೃಷ್ಣನು ಅರ್ಜುನನಿಗೆ ಶಿಫಾರಸು ಮಾಡುತ್ತಾನೆ : “ಮಹಾಬಾಹುವಾದ ಅರ್ಜುನನೇ, ಭೌತಿಕ ಇಂದ್ರಿಯಗಳು, ಮನಸ್ಸು, ಬುದ್ಧಿ ಇವೆಲ್ಲವನ್ನೂ ಆತ್ಮನು ಮೀರಿದವನು. ಇದನ್ನು ಅರಿತು ಮನಸ್ಸನ್ನು ಅಲೌಕಿಕ ಬುದ್ಧಿಯಿಂದ (ಕೃಷ್ಣ ಪ್ರಜ್ಞೆಯಿಂದ) ದೃಢಗೊಳಿಸಬೇಕು. ಹೀಗೆ ಆಧ್ಯಾತ್ಮಿಕ ಶಕ್ತಿಯಿಂದ ತೃಪ್ತಿಪಡಿಸಲು ಸಾಧ್ಯವಿಲ್ಲದ ಈ ಕಾಮ ಎಂಬ ವೈರಿಯನ್ನು ಗೆಲ್ಲಬೇಕು.”

ದೈವೀ ಶಬ್ದದ ಮೂಲಕ (ಕೃಷ್ಣ) ಪ್ರಜ್ಞೆಯನ್ನು ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ಕೃಷ್ಣನಲ್ಲಿಗೆ ಮರಳಿ ತರಬಹುದು. ಸರ್ವ ಶಕ್ತನಾದ ದೇವೋತ್ತಮ ಪರಮ ಪುರುಷ ಕೃಷ್ಣನು ತನ್ನ ಪವಿತ್ರ ನಾಮಗಳಲ್ಲಿ ಸಂಪೂರ್ಣವಾಗಿ ನೆಲೆಸಿದ್ದಾನೆ. ಆದುದರಿಂದ ಪವಿತ್ರ ನಾಮಗಳ ಜಪವು ವ್ಯಕ್ತಿಯನ್ನು ಪರಮ ಆನಂದ ಮಹಿಮನಾದ ಕೃಷ್ಣನ ಜೊತೆಗೆ ಸಂಪರ್ಕಿಸುವುದು. ಪವಿತ್ರ ನಾಮಗಳ ಜಪವನ್ನು ಸತತವಾಗಿ ಮಾಡುತ್ತಿದ್ದರೆ ಆಧ್ಯಾತ್ಮಿಕ ಆಯಾಮದಿಂದ ಹರಿದುಬರುವ ಆನಂದವನ್ನು ವ್ಯಕ್ತಿಯು ಸವಿಯಬಹುದು. ಈ ಆಧ್ಯಾತ್ಮಿಕ ಆನಂದವು ಎಷ್ಟು ತೃಪ್ತಿ ನೀಡುತ್ತದೆ ಎಂದರೆ, ಅದು ಅತಿ ಶೀಘ್ರದಲ್ಲಿ ಮಾದಕ ವಸ್ತು, ಮದ್ಯದಿಂದ ಪಡೆಯುವ ವಿಕೃತ ಆನಂದದಿಂದ ಮುಕ್ತಗೊಳಿಸುವುದು.
ವಿಶ್ವಾದ್ಯಂತ ಜನರು ಭಗವಂತನ ಪವಿತ್ರ ನಾಮಗಳ ಶುದ್ಧೀಕರಣ ಶಕ್ತಿಯನ್ನು ಅರಿತುಕೊಂಡಿದ್ದಾರೆ. 1960 ಮತ್ತು 1970ರ ಕಾಲದಲ್ಲಿ, ಅಮೆರಿಕದಲ್ಲಿ ಪ್ರತಿಸಂಸ್ಕೃತಿಯ ಪ್ರಭಾವವಿತ್ತು. ಆಗ ಶ್ರೀಲ ಪ್ರಭುಪಾದರು ಪವಿತ್ರ ನಾಮಗಳ ಸಮೂಹ ಜಪವನ್ನು ಹರಡಿ ಸಾವಿರಾರು ಯುವ ಜನರನ್ನು ಮಾದಕ ವ್ಯಸನದ ಕೂಪದಿಂದ ಪಾರು ಮಾಡಿದರು. ಪ್ರಪಂಚದಾದ್ಯಂತ ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ / ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ ಮಹಾಮಂತ್ರವನ್ನು ಪ್ರತಿ ದಿನ ಜಪಿಸುವ ಅಸಂಖ್ಯಾತ ಇಸ್ಕಾನ್ ಭಕ್ತರು ಎಲ್ಲ ರೀತಿಯ ಅಮಲು, ಜೂಜು, ಮಾಂಸ ಭಕ್ಷಣೆ, ಮತ್ತು ಅನೈತಿಕ ಲೈಂಗಿಕ ಕ್ರಿಯೆಯನ್ನು ತ್ಯಜಿಸುವುದು ಸುಲಭ ಸಾಧ್ಯವಾಗಿದೆ. ಇವು ಸ್ವಯಂ-ವಿನಾಶದ ಅಂಶಗಳು. ಈ ಚಟುವಟಿಕೆಗಳನ್ನು ತ್ಯಜಿಸಿದ ಮೇಲೆಯೇ ಜಪವನ್ನು ಆರಂಭಿಸಬೇಕೆಂದೇನಿಲ್ಲ, ಆದರೆ, ಅವು ಆತ್ಮದ ಮೂಲ ಪ್ರಜ್ಞೆಯನ್ನು ಹೆಚ್ಚಾಗಿ ಅಡಗಿಸುವುದರಿಂದ, ಅವುಗಳನ್ನು ಬಿಟ್ಟರೆ, ಜಪವು ಶೀಘ್ರ ಪ್ರಭಾವ ಬೀರಬಲ್ಲದು. ಅನೇಕ ಜನರು ಕಾಮಕ್ಕೆ ಗುಲಾಮರಾಗಿ ಈ ಚಟುವಟಿಕೆಗಳಲ್ಲದೆ ಬದುಕಿಲ್ಲ ಎಂದು ಭಾವಿಸಿಕೊಂಡಿದ್ದಾರೆ. ಆದರೆ ಭಕ್ತರು ಸ್ವಾಭಾವಿಕ, ಶಾಂತಿಯುತ, ತೃಪ್ತಿದಾಯಕ, ಅರ್ಥಪೂರ್ಣ ಮತ್ತು ರಚನಾತ್ಮಕ ಬದುಕನ್ನು ತಮ್ಮ ಮಂತ್ರ ಧ್ಯಾನದ ರಕ್ಷಣೆಯಿಂದ ನಡೆಸುತ್ತಿದ್ದಾರೆ.

ಚಟಗಳಿಂದ ಮುಕ್ತಿಯಿಂದಲೇ ಜಪದ ಲಾಭ ಅಂತ್ಯವಾಗದು. ಭಗವಂತನ ಪವಿತ್ರ ನಾಮಗಳ ಜಪವು ಸಾರ್ವತ್ರಿಕ, ಕಾಲಾತೀತ. ಅದು ಭಗವಂತನಿಗೆ ಸಲ್ಲಿಸುವ ಪರಿಶುದ್ಧ ಭಕ್ತಿಯ ಅತ್ಯುತ್ತಮ ವಿಧಾನವಾಗಿದ್ದು, ಎಲ್ಲರಲ್ಲಿಯೂ ಕೃಷ್ಣಪ್ರಜ್ಞೆ ಮೂಡಿಸುವಂತಹುದು. ಜಪವು ವ್ಯಕ್ತಿಯನ್ನು ಸ್ವಾರ್ಥ ಆಸೆಗಳಿಂದ ಮುಕ್ತಗೊಳಿಸುತ್ತದೆ. ದೇಹ ಸ್ಥಿತಿಯಿಂದ ಮತ್ತು ಬಾಹ್ಯ ಜಗತ್ತಿನಿಂದ ಸ್ವತಂತ್ರವಾದ ಸತತ ಆನಂದವನ್ನು ಕಂಡುಕೊಳ್ಳಲು ನೆರವಾಗುತ್ತದೆ. ಭಗವಂತ ಮತ್ತು ಅವನ ಮಕ್ಕಳಿಗೆ ನಿಸ್ವಾರ್ಥ ಆಧ್ಯಾತ್ಮಿಕ ಸೇವೆಯನ್ನು ಸಲ್ಲಿಸುವ ಬದುಕಿನ ಆರಂಭವನ್ನು ಜಪವು ಸಾರುತ್ತದೆ. ವ್ಯಕ್ತಿಗಳಲ್ಲಿನ ಈ ನಿಸ್ವಾರ್ಥವೇ ವಿಶ್ವ ಶಾಂತಿ ಮತ್ತು ಸೌಹಾರ್ದತೆಗೆ ತಳಪಾಯವಾಗಬಹುದು. ಶ್ರೀಲ ಪ್ರಭುಪಾದರು ಸಂಕ್ಷಿಪ್ತಗೊಳಿಸುತ್ತಾರೆ: “ವ್ಯಕ್ತಿಯೊಳಗೆ ದೈವೀ ಪ್ರಜ್ಞೆ ಎಚ್ಚರಗೊಳ್ಳದಿದ್ದರೆ ವಿಶ್ವ ಶಾಂತಿಯ ಕೂಗಿಗೆ ಅರ್ಥವೇ ಇಲ್ಲ.”






Leave a Reply