ದೇವೋತ್ತಮ ಪರಮ ಪುರುಷನ ಲೀಲೆಗಳು ಮಾನವ ಮಾತ್ರರಿಗೆ ಅಚಿಂತ್ಯ. ನಟನೊಬ್ಬನು ವಿವಿಧ ವೇಷಗಳನ್ನು ಧರಿಸಿ ವೇದಿಕೆಯ ಮೇಲೆ ವಿಜೃಂಭಿಸುವಂತೆ, ಭಗವಂತನು ವಿವಿಧ ರೂಪಗಳಲ್ಲಿ ಮಾಡುವ ಲೀಲೆಗಳು ಅಸಂಖ್ಯ, ಅಸಾಮಾನ್ಯ! ಅವನು ನಮ್ಮಂತೆಯೇ ಭೂಮಿಯ ಮೇಲೆ ಜನಿಸಿ ಸಾಮಾನ್ಯ ಮಾನವನಂತೆ ಕಾಣಿಸಿಕೊಂಡರೂ ಅವನ ಜನ್ಮ, ಕರ್ಮಗಳಿಗೆ ಅವನ ಪಾಪಪುಣ್ಯಗಳು ಕಾರಣವಾಗಿರದೇ ಸ್ವಯಿಚ್ಛೆಯಿಂದ ಆಚರಿಸಿದವುಗಳಾಗಿರುತ್ತವೆ. ದುಷ್ಟ ಶಿಕ್ಷಣ, ಶಿಷ್ಟ ರಕ್ಷಣವಷ್ಟೇ ಅಲ್ಲದೇ, ತನ್ನ ಭಕ್ತರಿಗೆ ಆನಂದವುಂಟುಮಾಡಲೂ ಜಟಿಲವಾದ ತತ್ತ್ವಗಳನ್ನು ನಿರೂಪಿಸಲು ಅವನು ಕರುಣೆಯಿಂದ ಅವತರಿಸುತ್ತಾನೆ!
ಈಗ ಅಂಥದ್ದೇ ಒಂದು ಅವತಾರಕ್ಕಾಗಿ ವೇದಿಕೆ ಸಿದ್ಧಗೊಳ್ಳುತ್ತಿತ್ತು.
ಅಗ್ನೀಧ್ರನ ಮಗನಾದ ನಾಭಿರಾಜ, ಪುತ್ರಕಾಮನಾಗಿ ಯಜ್ಞವೊಂದನ್ನಾಚರಿಸುತ್ತಿದ್ದನು. ಅವನು ಮೇರುದೇವಿಯನ್ನು ಮದುವೆಯಾಗಿ ಅನೇಕ ವರ್ಷಗಳಾಗಿದ್ದರೂ ಅವನಿಗೆ ಮಕ್ಕಳಾಗಿರಲಿಲ್ಲ. ಅವನಿಗಾದರೋ ಪರಮ ಪುರುಷ ವಿಷ್ಣುವಿನಂತಹ ಮಗನೇ ಬೇಕೆಂಬ ಹೆಬ್ಬಯಕೆ ಇತ್ತು! ಆದ್ದರಿಂದ ಅವನು ತನ್ನ ಪತ್ನಿಯೊಡಗೂಡಿ ಸಕಲ ಯಜ್ಞಗಳ ಭೋಕ್ತೃವಾದ ಶ್ರೀಮನ್ನಾರಾಯಣನನ್ನು ಭಕ್ತಿಯಿಂದ ಅರ್ಚಿಸುತ್ತಾ ದ್ರವ್ಯ, ದೇಶ, ಕಾಲ, ಮಂತ್ರ, ವಿಧಿಗಳನ್ನು ಸಮರ್ಪಕವಾಗಿ ಬಳಸಿಕೊಂಡು ಋತ್ವಿಜರನ್ನು ದಾನದಕ್ಷಿಣೆಗಳಿಂದ ತುಷ್ಟಿಗೊಳಿಸುತ್ತಾ ಶುದ್ಧ ಭಾವದಿಂದ ಯಜ್ಞವನ್ನಾಚರಿಸಿದನು. ನಾಭಿರಾಜನ ಭಕ್ತಿಯನ್ನು ಮೆಚ್ಚಿದ ಭಗವಂತನು, ಅತ್ಯಂತ ದುರ್ಲಭವಾದರೂ, ನಯನಮನೋಹರವಾದ ತನ್ನ ದಿವ್ಯರೂಪದ ದರ್ಶನವನ್ನು ಅವನಿಗೆ ನೀಡಿದನು!

ಶ್ರೀವತ್ಸಲಾಂಛನದ ವಕ್ಷಸ್ಥಳದಿಂದಲೂ ಹೊಳೆಯುವ ಪೀತಾಂಬರದಿಂದಲೂ ಶೋಭಿಸುತ್ತಾ, ಶಂಖಚಕ್ರಗದಾಪದ್ಮಗಳನ್ನು ಹಿಡಿದಿದ್ದ ಚತುರ್ಭುಜಗಳಿಂದ ಮೆರೆಯುತ್ತಾ, ಕೊರಳಿನಲ್ಲಿ ವನಮಾಲೆ, ಕೌಸ್ತುಭರತ್ನ, ಮುತ್ತಿನ ಸರಗಳನ್ನು ಧರಿಸಿ, ಕಿರೀಟ ಕುಂಡಲ ಕಂಕಣ ಕೇಯೂರ ಒಡ್ಯಾಣ ಕಿರುಗೆಜ್ಜೆಗಳಿಂದ ಅಲಂಕೃತನಾಗಿ, ಮೆಲ್ಲನೆ ಮುಗುಳ್ನಗುತ್ತಾ ದೇದೀಪ್ಯಮಾನವಾಗಿ ಪ್ರಕಾಶಿಸುತ್ತಿದ್ದ ಪುರುಷೋತ್ತಮನ ಆ ದಿವ್ಯರೂಪವನ್ನು ಕಂಡ ನಾಭಿಯೂ ಋತ್ವಿಜರೂ ನಿರ್ಧನರಿಗೆ ಒಡನೆಯೇ ಧನ ದೊರೆತಂತಾಗಿ ವಿಸ್ಮಯಾನಂದಗಳಿಂದ ತಲೆಬಾಗಿ ಪ್ರಾರ್ಥಿಸಿದರು.
“ಪರಮ ಪುರುಷನೇ! ಅರ್ಚಿಸಲು ಅತ್ಯಂತ ಯೋಗ್ಯನಾದ ಪ್ರಭುವೇ! ನಿನ್ನ ಸೇವಕರಾದ ನಮ್ಮ ನಮಸ್ಕಾರಗಳನ್ನು ಸ್ವೀಕರಿಸು! ಪ್ರಕೃತಿಯ ತ್ರಿಗುಣಗಳಿಂದ ಬದ್ಧರಾದ ಯಾರು ತಾನೇ ಆ ತ್ರಿಗುಣಗಳನ್ನು ಮೀರಿದ ನಿನ್ನನ್ನು ಅರಿಯಬಲ್ಲರು? ನಾವಾದರೋ ಭೌತಿಕವಾದ ನಾಮ, ರೂಪ, ಶಬ್ದಗಳನ್ನಷ್ಟೇ ಅರಿಯಬಲ್ಲೆವು. ಆದ್ದರಿಂದ ಅತ್ಯಂತ ಪವಿತ್ರವಾದ ನಿನ್ನ ನಾಮ, ಗುಣ, ಕಥಾಶ್ರವಣಕೀರ್ತನಗಳನ್ನು ಮಾಡುವುದನ್ನು ಬಿಟ್ಟರೆ ನಿನ್ನನ್ನು ಅರಿಯಲು ಬೇರೆ ದಾರಿ ಇರುವುದಿಲ್ಲ! ಭಗವಂತ, ನಿನ್ನನ್ನು ಅರ್ಚಿಸುವುದು ಬಹಳ ಸುಲಭವೇ ಹೌದು! ಭಕ್ತಿಯಿಂದ ತುಳಸೀದಳಗಳನ್ನೂ ನೀರನ್ನೂ ಚಿಗುರೆಲೆ, ಗರಿಕೆಗಳನ್ನೂ ಅರ್ಪಿಸಿದರೆ ನೀನು ಅಷ್ಟರಿಂದಲೇ ಸಂತುಷ್ಟನಾಗುವೆ! ನಾವು ಇಷ್ಟೆಲ್ಲ ದ್ರವ್ಯವನ್ನು ಬಳಸಿ ವಿಜೃಂಭಣೆಯಿಂದ ಪೂಜಿಸುವ ಅಗತ್ಯವೂ ಇಲ್ಲ! ಕ್ಷಣಕ್ಷಣವೂ ಸಕಲ ಪುರುಷಾರ್ಥಗಳೂ ನಿನ್ನಲ್ಲಿ ವರ್ಧಿಸುತ್ತಿರುತ್ತವೆ! ಆದ್ದರಿಂದ ಈ ಪೂಜೆ, ಯಜ್ಞಗಳೆಲ್ಲ ನಿನಗೆ ಬೇಕಿಲ್ಲ; ಅವು ನಿಜವಾಗಿ ನಮ್ಮ ಆಸೆಗಳ ಪೂರೈಕೆಗಾಗಿ! ನೀನು ನಿಜವಾಗಿ ಇಲ್ಲಿ ಯಜ್ಞಾಹುತಿಗಳನ್ನು ಸ್ವೀಕರಿಸಲು ಬಂದಿಲ್ಲ ನಿನ್ನ ಕರುಣಾತಿಶಯದಿಂದ, ನಮ್ಮನ್ನು ಉದ್ಧರಿಸಲು ಹೀಗೆ ಪ್ರತ್ಯಕ್ಷನಾಗಿರುವೆ! ಆದರೆ ಬಾಲಿಶ ಬುದ್ಧಿಯ ನಾವು ನಿನ್ನನ್ನು ಸರಿಯಾಗಿ ಪೂಜಿಸುತ್ತಲೂ ಇಲ್ಲ! ದೇವೋತ್ತಮ ಪುರುಷನೇ! ವರಗಳನ್ನು ನೀಡುವುದರಲ್ಲಿ ಅತ್ಯುತ್ತಮನೇ! ವರಕ್ಕಾಗಿಯಜ್ಞ ಮಾಡಿದ ನಮಗೆ ನಿನ್ನ ದರ್ಶನವೇ ವರದಂತಾಗಿದೆ! ಆದರೂ ಪ್ರಭು, ಎಡವಿದಾಗ, ಹಸಿವಾದಾಗ, ಬಿದ್ದಾಗ, ಆಕಳಿಸಿದಾಗ, ಜ್ವರವೇ ಮೊದಲಾಗಿ ತೀವ್ರರೋಗವಿರುವಾಗ, ಮರಣವೊದಗಿದಾಗ ನಿನ್ನ ನಾಮಸ್ಮರಣೆಯನ್ನು ಮರೆಯುವ ನಮಗೆ ಆ ಪವಿತ್ರ ನಾಮೋಚ್ಚಾರಣೆ ಮಾಡುವಂತಾಗಲೆಂದು ಕರುಣಿಸು!”
ಭಗವಂತನು ಅವರ ಪ್ರಾರ್ಥನೆಯಿಂದ ಸಂತುಷ್ಟನಾದನು. ಈಗ ಋತ್ವಿಜರು ನಾಭಿಯನ್ನು ತೋರಿಸಿ ಪ್ರಾರ್ಥಿಸಿದರು, “ಪ್ರಭು! ಈ ನಾಭಿರಾಜನ ಪರಮೋದ್ದೇಶವು ನಿನ್ನಂಥ ಒಬ್ಬ ಪುತ್ರನನ್ನು ಪಡೆಯುವುದಾಗಿದೆ. ಸ್ವರ್ಗವನ್ನೂ ಮೋಕ್ಷವನ್ನೂ ನೀನು ಕರುಣಿಸುವಾಗ, ಕೇವಲ ಒಬ್ಬ ಪುತ್ರನಿಗಾಗಿ ಪ್ರಾರ್ಥಿಸುವುದು, ಶ್ರೀಮಂತನಲ್ಲಿಗೆ ಹೋಗಿ ಒಂದಿಷ್ಟು ಧಾನ್ಯವನ್ನು ಬೇಡಿದಂತೆ ಎಂದು ನಮಗೆ ತಿಳಿದಿದೆ! ಆದರೆ ನಮ್ಮ ಯಜ್ಞದ ಉದ್ದೇಶವು ಅದೇ ಆಗಿರುವುದು! ಮಂದಮತಿಗಳಾದ ನಾವು ಜೀವನದ ಪರಮ ಗುರಿಯನ್ನು ನಿರ್ಧರಿಸಲಾಗದೇ ಅದ್ಭುತ ಲೀಲೆಗಳನ್ನೆಸಗುವ ನಿನ್ನನ್ನು ಅವಹೇಳನ ಮಾಡಿದಂತಾಗಿರಬಹುದು! ಆದರೆ ನಮ್ಮನ್ನು ದಯವಿಟ್ಟು ಮನ್ನಿಸಿ ನಮ್ಮ ಆಸೆಯನ್ನು ನೆರವೇರಿಸು ದೇವ!”
ಭಗವಂತನು ಪ್ರಸನ್ನನಾಗಿ ಹೇಳಿದನು, “ಋತ್ವಿಜರೇ, ನಿಮ್ಮ ಪ್ರಾರ್ಥನೆಯಿಂದ ನಾನು ಸಂತುಷ್ಟನಾಗಿರುವೆನು. ನೀವು ಹೇಳಿರುವುದೆಲ್ಲ ಸತ್ಯವೇ ಆದರೂ ನೀವು ಯಾಚಿಸುತ್ತಿರುವ ವರವನ್ನು ನೀಡುವುದು ಬಹಳ ಕಷ್ಟ! ಏಕೆಂದರೆ ನಾನು ಏಕಮಾತ್ರನಾದ ಪರಮ ಪುರುಷನಾಗಿದ್ದೇನೆ. ನನಗೆ ಸಮರಾದವರಾರೂ ಇಲ್ಲದಿರುವುದರಿಂದ ನನ್ನಂತಹ ಮಗನನ್ನು ಕರುಣಿಸಲಾಗದು! ಆದರೆ ಯಾರನ್ನು ನನ್ನ ಮುಖವೆಂದೇ ಭಾವಿಸುವೆನೋ ಅಂಥ ಶ್ರೋತ್ರಿಯ ಬ್ರಾಹ್ಮಣರಾದ ನಿಮ್ಮ ಮಂತ್ರೋಚ್ಚಾರಣೆಗಳು ಹುಸಿಯಾಗಬಾರದು. ಆದ್ದರಿಂದ ಸ್ವಯಂ ನಾನೇ ನನ್ನ ಅಂಶಕಲೆಯಿಂದ ಮೇರುದೇವಿಯ ಗರ್ಭದಲ್ಲಿ ಅವತರಿಸಿ ನಾಭಿರಾಜನ ಮಗನಾಗುತ್ತೇನೆ!”
ಹೀಗೆ ಹೇಳಿ ಭಗವಂತನು ಅಂತರ್ಧಾನನಾದನು. ನಾಭಿರಾಜನ ಆಸೆಯನ್ನು ಪೂರ್ಣಗೊಳಿಸಿ, ಜಗತ್ತಿನಲ್ಲಿ ತನ್ನ ಆದರ್ಶ ಜೀವನದಿಂದ, ಬ್ರಹ್ಮಚಾರಿಗಳಿಗೂ ಗೃಹಸ್ಥರಿಗೂ ವಾನಪ್ರಸ್ಥಿಗಳಿಗೂ ಸಂನ್ಯಾಸಿಗಳಿಗೂ ಅವರವರ ಧರ್ಮಗಳನ್ನು ನಿರೂಪಿಸಲು ದಿವ್ಯದೇಹವನ್ನು ಧರಿಸಿ ಅವತರಿಸಲು ಅವನು ನಿರ್ಧರಿಸಿದನು.
ನಾಭಿರಾಜನ ಸನಿಹವೇ ನಿಂತು ಭಗವಂತನು ಹೇಳುವುದನ್ನು ತದೇಕಚಿತ್ತದಿಂದ ಕೇಳುತ್ತಿದ್ದ ಅವನ ಪತ್ನಿ ಮೇರುದೇವಿಯ ಕಂಗಳಲ್ಲಿ ಆಶ್ಚರ್ಯ ಮಿಂಚು ಹೊಳೆಯಿತು!
* * * * *
ಮೇರುದೇವಿಯು ಕಾಲಕ್ರಮದಲ್ಲಿ ಗರ್ಭಧರಿಸಿ, ನವಮಾಸಗಳು ಕಳೆದ ಬಳಿಕ, ಸುಂದರ ಗಂಡು ಶಿಶುವೊಂದನ್ನು ಹೆತ್ತಳು. ಭಗವಂತನ ಅವತಾರವಾದ ಆ ಶಿಶು, ತನ್ನ ಪಾದಗಳಲ್ಲಿ ಧ್ವಜ ವಜ್ರಾಂಕುಶ ರೇಖೆಗಳನ್ನು ಹೊಂದಿದ್ದು, ಅದು ಸಾಮಾನ್ಯ ಶಿಶುವಲ್ಲವೆಂದು ನೋಡಿದ ಕೂಡಲೇ ತಿಳಿಯುತ್ತಿತ್ತು! ಅವನು ಬೆಳೆಯುತ್ತಿದ್ದಂತೆ, ಸದೃಢವಾದ ಶರೀರ, ಭಗವಂತನ ದಿವ್ಯಗುಣಗಳಾದ ಸೌಂದರ್ಯ, ಧರ್ಮ, ಕೀರ್ತಿ, ಐಶ್ವರ್ಯ, ಶೌರ್ಯ, ವೈರಾಗ್ಯ, ಜ್ಞಾನಗಳನ್ನು ಬೆಳೆಸಿಕೊಂಡನು. ಮಹಾಕವಿಗಳು ವರ್ಣಿಸುವ ಉತ್ತಮ ಗುಣಗಳನ್ನು ಅವನು ಮೈಗೂಡಿಸಿಕೊಂಡನು. ಬಾಲ್ಯದಲ್ಲೇ ಅವನು ಎಲ್ಲರನ್ನೂ ಸಮದೃಷ್ಟಿಯಿಂದ ನೋಡುತ್ತಾ ಗುರುಹಿರಿಯರಲ್ಲಿ ಬಹಳ ಭಕ್ತಿಯುಳ್ಳವನಾಗಿರುತ್ತಾ ಭೌತಿಕ ಸುಖಗಳನ್ನು ಹೆಚ್ಚಾಗಿ ಬಯಸದೇ ಜಿತೇಂದ್ರಿಯನಾಗಿದ್ದನು. ನಾಭಿರಾಜನು ಅವನ ಇಂಥ ಸಚ್ಚಾರಿತ್ರ್ಯವನ್ನು ಗಮನಿಸಿ ಅವನನ್ನು ಪುರುಷರಲ್ಲಿ ಉತ್ತಮನೆಂಬ ಅರ್ಥದಲ್ಲಿ ಋಷಭ ಎಂದು ಕರೆಯತೊಡಗಿದ.
ಋಷಭನನ್ನು ನೋಡಿದಾಗ, ಅವನೊಂದಿಗೆ ಮಾತನಾಡಿದಾಗ, ನಾಭಿಯು ಬಹಳ ಮುದಗೊಳ್ಳುತ್ತಿದ್ದ; ದಿವ್ಯಾನಂದ ಹೊಂದುತ್ತಿದ್ದ! ಯೋಗಮಾಯೆಯಿಂದ ಆವೃತ್ತನಾಗಿ ಋಷಭನು ಭಗವಂತನೇ ಆದರೂ ಅವನು ತನ್ನ ಮಗನೆಂದು ಭಾವಿಸುತ್ತಾ ಅವನ ಮೇಲಿನ ಮಮಕಾರದಿಂದ, “ಕಂದ! ವತ್ಸ!” ಎನ್ನುತ್ತಾ ಪ್ರೀತಿಯಿಂದ ಮುದ್ದಿಸುತ್ತಿದ್ದ! ಆದರೆ ಇದು ಸಾಮಾನ್ಯ ಜನರನ್ನು ಆವರಿಸುವ ರೀತಿಯ ಮಾಯೆಯಾಗಿರಲಿಲ್ಲ. ಮಹಾಭಕ್ತನಾಗಿದ್ದ ನಾಭಿ, ಜಗತ್ತಿಗೇ ತಂದೆಯಾಗಿದ್ದ ಭಗವಂತನೊಡನೆ ತಂದೆ, ಮಗನ ಸಂಬಂಧದ ಮೂಲಕ ತನ್ನ ಭಕ್ತಿ ಪ್ರೀತಿಗಳನ್ನು ವ್ಯಕ್ತಪಡಿಸುತ್ತಿದ್ದ, ಅಷ್ಟೇ! ಭಗವಂತನೂ ಅದಕ್ಕೆ ತಕ್ಕಂತೆ ಉತ್ತಮ ಮಗನಾಗಿ ಸ್ಪಂದಿಸುತ್ತಿದ್ದ!
ಋಷಭದೇವನು ಉತ್ತಮ ರಾಜಕುಮಾರನೆಂದು ಬಹಳ ಪ್ರಸಿದ್ಧನಾಗಲು, ಪ್ರಜೆಗಳೂ ವಿಪ್ರೋತ್ತಮರೂ, ಮಂತ್ರಿಗಳೂ, ಅಷ್ಟೇ ಏಕೆ, ದೇವತೆಗಳೂ ಅವನು ಭೂಮಂಡಲದ ಚಕ್ರವರ್ತಿಯಾಗಲೆಂದು ಆಸೆಪಟ್ಟರು. ಜನತೆಯ ನಡುವೆಯೂ ಮಂತ್ರಿಗಳ ನಡುವೆಯೂ ಅವನು ಇಷ್ಟೊಂದು ಪ್ರಸಿದ್ಧನಾಗಿರುವುದನ್ನು ಮನಗಂಡ ನಾಭಿಯು, ಒಂದು ಶುಭದಿನದಂದು ಅವನಿಗೆ ಪಟ್ಟಗಟ್ಟಿ ಧರ್ಮ ಮತ್ತು ರಾಜ್ಯಾಡಳಿತದ ಸೂತ್ರಗಳನ್ನು ಕಲಿಯಲು ಬ್ರಾಹ್ಮಣೋತ್ತಮರ ಹಾಗೂ ಮಂತ್ರಿಗಳ ಕೈಗೆ ಅವನನ್ನೊಪ್ಪಿಸಿದನು. ಅನಂತರ, ಅವನು ನಿಶ್ಚಿಂತನಾಗಿ ತನ್ನ ಪತ್ನಿ ಮೇರುದೇವಿಯೊಂದಿಗೆ ವಾನಪ್ರಸ್ಥಿಯಾಗಿ ಹಿಮಾಲಯದಲ್ಲಿನ ಬದರಿಕಾಶ್ರಮಕ್ಕೆ ಹೋದನು. ಅಲ್ಲಿ ಅವನು ಪತ್ನೀಸಮೇತನಾಗಿ ಭಗವಂತನ ಅವತಾರಗಳಾದ ನರನಾರಾಯಣ ಋಷಿಗಳನ್ನು ಸಂಪೂಜಿಸಿ ತಪಶ್ಚರಣೆಗೈಯುತ್ತಾ ಪರಂಧಾಮವನ್ನೈದಿದನು.
ಮಹಾರಾಜ ನಾಭಿಯ ಭಾಗ್ಯ ಯಾರಿಗೆ ದೊರೆತೀತು?! ಅವನಂತೆ ಬ್ರಾಹ್ಮಣರನ್ನು ಯಾರು ತಾನೇ ಪೂಜಿಸಿಯಾರು? ಅವನ ಶ್ರದ್ಧಾಭಕ್ತಿಗಳಿಗೆ ಮಣಿದ ಬ್ರಾಹ್ಮಣೋತ್ತಮರು ಅವನಿಂದ ಯಜ್ಞ ಮಾಡಿಸಿ ಸಾಕ್ಷಾತ್ ಶ್ರೀಮನ್ನಾರಾಯಣನೇ ಪ್ರತ್ಯಕ್ಷವಾಗುವಂತೆ ಮಾಡಿದರಲ್ಲಾ! ಅಷ್ಟೇ ಅಲ್ಲದೇ ಆ ಶ್ರೀಹರಿಯೇ ಅವನ ಪುತ್ರನಾಗಿ ಜನಿಸಿದನು! ಇದಕ್ಕಿಂತಲೂ ಇನ್ನೇನು ಭಾಗ್ಯ ಬೇಕು?!
ಪಟ್ಟಾಭಿಷಿಕ್ತನಾದ ಋಷಭದೇವನು ತನ್ನ ರಾಜ್ಯವೇ ತನ್ನ ಕಾರ್ಯಕ್ಷೇತ್ರವೆಂದು ಮನಗಂಡು, ಆದರ್ಶರಾಜನಂತೆ ರಾಜ್ಯವಾಳತೊಡಗಿದನು.
ಒಮ್ಮೆ, ದೇವರಾಜನಾದ ಇಂದ್ರನಿಗೆ ಋಷಭದೇವನ ಐಶ್ವರ್ಯ, ಸದ್ಗುಣಗಳನ್ನು ಕಂಡು ಮಾತ್ಸರ್ಯವುಂಟಾಯಿತು! ಆಗ ಅವನು ಭೂಮಿಯ ಮೇಲೆ ಮಳೆಗರೆಯುವುದನ್ನು ನಿಲ್ಲಿಸಿ ಬಿಟ್ಟ! ದೇವೇಂದ್ರನಿಗೇ ಮಾತ್ಸರ್ಯ ಉಂಟಾಗಬೇಕಾದರೆ ಋಷಭನ ಮಹಿಮೆ ಎಷ್ಟಿರಬೇಡ?! ಪ್ರಜೆಗಳು ಕಂಗೆಟ್ಟರು! ಆದರೆ ಋಷಭನು ಧೃತಿಗೆಡಲಿಲ್ಲ; ಒಂದು ಬಾರಿ ಮುಗುಳ್ನಕ್ಕು ತನ್ನ ಯೋಗಮಾಯಾಶಕ್ತಿಯಿಂದ ತಾನು ಆಳುತ್ತಿದ್ದ ಅಜನಾಭವರ್ಷದ ಮೇಲೆ ತಾನೇ ಮಳೆಗರೆದ! ಅವನ ಈ ಅದ್ಭುತ ಲೀಲೆಯನ್ನು ಕಂಡು ನಿಬ್ಬೆರಗಾದ ಇಂದ್ರ, ತಾನು ಮಾಡಿದ ಮೂರ್ಖಕೆಲಸಕ್ಕೆ ನಾಚಿದ! ತನ್ನ ತಪ್ಪನ್ನು ಸರಿಪಡಿಸುವುದು ಹೇಗೆಂದು ಯೋಚಿಸಿದ; ಕಡೆಗೆ ಅವನು ಧರೆಗಿಳಿದು ಬಂದು ಋಷಭದೇವನಿಗೆ ವಂದಿಸಿ ಅವನ ಕ್ಷಮೆಯಾಚಿಸಿ ತನ್ನ ಸುಂದರ ಮಗಳಾದ ಜಯಂತಿಯನ್ನು ಅವನಿಗೆ ಅರ್ಪಿಸಿದ.
ಋಷಭದೇವನು ಜನರಿಗೆ ಗಾರ್ಹಸ್ಥ್ಯ ಧರ್ಮವನ್ನು ನಿರೂಪಿಸಬೇಕೆಂದು ಯೋಚಿಸಿದ. ವರ್ಣಾಶ್ರಮಧರ್ಮಗಳನ್ನು ನಿಷ್ಠೆಯಿಂದ ಪಾಲಿಸುತ್ತಾ ಜನತೆಗೆ ತಾನೇ ಆದರ್ಶವಾಗಿರುವುದು ಅವನ ಉದ್ದೇಶವಾಗಿತ್ತು. ಅವನು ಈಗಾಗಲೇ ಬ್ರಹ್ಮಚರ್ಯೆಯನ್ನು ಆಚರಿಸಲು ಗುರುಕುಲಕ್ಕೆ ಹೋಗಿ ಗುರುಗಳ ಸೇವೆ ಮಾಡುತ್ತಾ ಶಮದಮಾದಿಗಳಿಂದ ಜಿತೇಂದ್ರಿಯನಾಗಿ ಸಕಲ ವಿದ್ಯೆಗಳನ್ನೂ ಅಭ್ಯಾಸ ಮಾಡಿದ್ದ. ಗುರುಗಳಿಗೆ ಸೂಕ್ತ ಗುರುದಕ್ಷಿಣೆಗಳನ್ನೂ ನೀಡಿ ಅವರನ್ನು ತುಷ್ಟಿಗೊಳಿಸಿ ಅವರ ಆಶೀರ್ವಾದ ಪಡೆದು ಹಿಂದಿರುಗಿದ್ದ ಈಗ ಅವನು ವಿವಾಹವಾಗಿ ಸತ್ಸಂತಾನ ಪಡೆದು ಗೃಹಸ್ಥಾಶ್ರಮವನ್ನು ಪಾಲಿಸಬೇಕಾಗಿತ್ತು. ಆದ್ದರಿಂದ ಅವನು ಗುರುಹಿರಿಯರ ಅನುಮತಿ ಪಡೆದು ಜಯಂತಿಯನ್ನು ತನ್ನ ಪತ್ನಿಯನ್ನಾಗಿ ಸ್ವೀಕರಿಸಿದ. ಜಯಂತಿಯೊಡನೆ ಅವನು ಶ್ರುತಿಸ್ಮೃತಿಗಳ ನಿರ್ದೇಶನಾನುಸಾರವಾಗಿ ಹಲವಾರು ಯಜ್ಞಯಾಗಗಳನ್ನಾಚರಿಸುತ್ತಾ ಗೃಹಸ್ಥಾಶ್ರಮವನ್ನು ಪಾಲಿಸಿದ.
ಋಷಭದೇವನು ತನ್ನ ಪತ್ನಿ ಜಯಂತಿಯೊಡನೆ ಪ್ರೇಮದಿಂದಿರುತ್ತಾ ಅವಳಲ್ಲಿ ನೂರು ಪುತ್ರರನ್ನು ಪಡೆದ. ಅವರಲ್ಲಿ ಮೊದಲನೆಯವನಾದ ಭರತನು ಮಹಾಯೋಗಿಯೂ ಮಹಾಭಕ್ತನೂ ಶ್ರೇಷ್ಠ ಗುಣಗಳಿಂದ ಕೂಡಿದವನೂ ಆಗಿದ್ದ. ಅವನಿಂದಲೇ ಈ ಭೂಮಿಗೆ ಭಾರತವರ್ಷವೆಂಬ ಹೆಸರು ಪ್ರಾಪ್ತವಾಯಿತು. ಭರತನ ಬಳಿಕ, ಕುಶಾವರ್ತ, ಇಳಾವರ್ತ, ಬ್ರಹ್ಮಾವರ್ತ, ಮಲಯ, ಕೇತು, ಭದ್ರಸೇನ, ಇಂದ್ರಸ್ಪೃಕ್, ವಿದರ್ಭ, ಮತ್ತು ಕೀಕಟರೆಂಬ ಒಂಬತ್ತು ಶ್ರೇಷ್ಠ ಪುತ್ರರಿದ್ದರು. ಇವರಲ್ಲದೆ ಕವಿ, ಹವಿ, ಅಂತರಿಕ್ಷ, ಪ್ರಬುದ್ಧ, ಪಿಪ್ಪಲಾಯನ, ಆವಿರ್ಹೋತ್ರ, ದ್ರುಮಿಲ, ಚಮಸ, ಮತ್ತು ಕರಭಾಜನರೆಂಬ ಶ್ರೇಷ್ಠ ಪುತ್ರರಿದ್ದರು. ಈ ಒಂಬತ್ತು ಪುತ್ರರು ಮುಂದೆ ಮಹಾನ್ ಭಕ್ತರೂ ವಿರಾಗಿಗಳೂ ನವಯೋಗೇಂದ್ರ ಎಂದು ಖ್ಯಾತರಾದರು. ಇವರು, ಮಹಾಭಕ್ತರಾಗಿದ್ದು, ಭಾಗವತಧರ್ಮವನ್ನು ಪಾಲಿಸುತ್ತಾ ದಾರ್ಶನಿಕರಾಗಿ ಅದನ್ನು ಪ್ರಚಾರ ಮಾಡಿದರು. ಈ ಹಿರಿಯ ಪುತ್ರರಲ್ಲದೆ, ಎಂಬತ್ತೊಂದು ಕಿರಿಯ ಪುತ್ರರೂ ತಂದೆಯ ಆದೇಶವನ್ನು ಪರಿಪಾಲಿಸುತ್ತಾ ಶೀಲಗುಣಸಂಪನ್ನರೂ ಯಜ್ಞಶೀಲರೂ ವೇದವಿದರೂ ಆದರು. ಅವರು ಹುಟ್ಟಿನಿಂದ ಕ್ಷತ್ರಿಯರಾದರೂ ತಮ್ಮ ಗುಣಕರ್ಮಗಳಿಂದ ಪರಿಶುದ್ಧರಾಗಿ ಬ್ರಾಹ್ಮಣರಾದರು!
ಋಷಭದೇವನು ಸಾಕ್ಷಾತ್ ಭಗವಂತನೇ ಆದುದರಿಂದ ಅವನು ಸರ್ವತಂತ್ರ ಸ್ವತಂತ್ರನಾಗಿದ್ದನು. ಸಂಸಾರದ ದುಃಖಪರಂಪರೆಯಿಂದ ದೂರಾಗಿ ಆನಂದಾನುಭವದ ಸ್ಥಿತಿಯಲ್ಲೇ ಇದ್ದನು; ವಿಷಯ ಸುಖಗಳಲ್ಲಿ ಅನಾಸಕ್ತನಾಗಿದ್ದ ಅವನು ಏನೊಂದನ್ನೂ ಪಾಲಿಸಬೇಕಿರಲಿಲ್ಲ. ಆದರೂ, ಎಲ್ಲ ಜೀವಿಗಳ ಮಿತ್ರನೂ ಕರುಣಾಸಂಪನ್ನನೂ ಆಗಿದ್ದ ಅವನು, ಜನರ ಒಳತಿಗಾಗಿ, ಅವರಿಗೆ ಶಿಕ್ಷಣ ನೀಡುವ ಸಲುವಾಗಿ ತಾನೊಬ್ಬ ಸಾಮಾನ್ಯನಂತೆ ನಟಿಸುತ್ತಾ ವರ್ಣಾಶ್ರಮಧರ್ಮಗಳನ್ನು ನಿಯಮಿತವಾಗಿ ಪಾಲಿಸಿದನು; ಜೀವನದ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ಯಥಾವತ್ತಾಗಿ ಹೇಗೆ ಸಾಧಿಸಿಕೊಳ್ಳಬೇಕೆಂದು ತೋರಿಸಿದನು. ಶ್ರೇಷ್ಠ ವ್ಯಕ್ತಿಗಳು ಏನನ್ನು ಆಚರಿಸುವರೋ, ಸಾಮಾನ್ಯರು ಅದನ್ನೇ ಅನುಸರಿಸುವರಲ್ಲವೇ?
ಭಗವಾನ್ ಋಷಭನು ಸಕಲ ಧರ್ಮಗಳನ್ನೂ ಬಲ್ಲವನಾಗಿದ್ದನು; ವೇದಶಾಸ್ತ್ರಪಾರಂಗತನಾಗಿದ್ದನು. ಭಗವಂತನಿಗೆ ತಿಳಿಯದುದಾದರೂ ಏನಿರುತ್ತದೆ? ಆದರೂ ತಾನೊಬ್ಬ ಕ್ಷತ್ರಿಯನಾದುದರಿಂದ, ಜನತೆಯ ಅನುಶಾಸನಕ್ಕಾಗಿ ಸಾಮ, ದಾನ, ಭೇದ, ದಂಡಗಳೆಂಬ ಚತುರ್ವಿಧ ಉಪಾಯಗಳ, ರಾಜನೀತಿ, ಧರ್ಮ, ಮೊದಲಾದ ವಿಷಯಗಳ ಕುರಿತು ಹಿರಿಯ ಬ್ರಾಹ್ಮಣರ ಸಲಹೆ ಪಡೆಯುತ್ತಿದ್ದನು.
ಋಷಭನು ವೇದವಿಧಿಗಳಿಗನುಸಾರವಾಗಿ ಎಲ್ಲ ವಿಧದ ಯಜ್ಞಗಳನ್ನೂ ನೂರು ಬಾರಿ ಆಚರಿಸಿದನು. ಆ ಯಜ್ಞಗಳಿಗೆ ದೇಶ, ಕಾಲ, ದ್ರವ್ಯಗಳು ಸಮರ್ಪಕವಾಗಿದ್ದು, ಶ್ರೇಷ್ಠ ಋತ್ವಿಜರಿಂದ ಆಚರಿಸಲ್ಪಟ್ಟುದರಿಂದ ಭಗವಾನ್ ವಿಷ್ಣುವೂ ಇತರ ಎಲ್ಲ ದೇವತೆಗಳೂ ತೃಪ್ತರಾದರು.
ಋಷಭದೇವನ ರಾಜ್ಯ ಸದಾ ಸುಭಿಕ್ಷವಾಗಿತ್ತು. ಅವನ ಆಳ್ವಿಕೆ, ಅದ್ಭುತವಾಗಿತ್ತು. ಪ್ರಜೆಗಳಿಗೆ ಯಾವೊಂದಕ್ಕೂ ಕೊರತೆಯಿರಲಿಲ್ಲ. ಸದಾ ಸಂತೃಪ್ತರಾಗಿರುತ್ತಿದ್ದ ಜನರು ಏನೊಂದನ್ನೂ ಬಯಸುತ್ತಿರಲಿಲ್ಲ.!
* * * * *
ಒಮ್ಮೆ ಭಗವಾನ್ ಋಷಭನು ಲೋಕ ಸಂಚಾರ ಮಾಡುತ್ತಾ ಬ್ರಹ್ಮಾವರ್ತವೆಂಬ ಪ್ರದೇಶಕ್ಕೆ ಆಗಮಿಸಿದನು. ಅಲ್ಲಿ ಬ್ರಹ್ಮರ್ಷಿಗಳ ಒಂದು ದೊಡ್ಡ ಸಭೆ ನಡೆಯುತ್ತಿತ್ತು.
ಆಧ್ಯಾತ್ಮಿಕ ವಿಚಾರಗಳ ಚರ್ಚೆ ನಡೆಯುತ್ತಿದ್ದ ಆ ಸಭೆಯಲ್ಲಿ ಅವನ ಪುತ್ರರೂ ನೆರೆದಿದ್ದರು. ತಂದೆಗೆ ಬಹಳ ವಿಧೇಯರಾದ ಅವರು ಅವನು ಬಂದೊಡನೆ ಎದ್ದು ನಿಂತು ಗೌರವಿಸಿದರು. ಬ್ರಹ್ಮರ್ಷಿಗಳೂ ತಮ್ಮ ಮಹಾರಾಜನನ್ನು ಪ್ರೀತ್ಯಾದರಗಳಿಂದ ಸ್ವಾಗತಿಸಿ ಅವನಿಗೆ ಉಚಿತಾಸನವನ್ನು ಅರ್ಪಿಸಿದರು. ಮಹಾಜ್ಞಾನಿಯೂ ಸ್ವಯಂ ಭಗವಂತನೂ ಆದ ಋಷಭನೂ ಆ ಚರ್ಚೆಯಲ್ಲಿ ಭಾಗವಹಿಸಿದನು. ಅವನ ಮಕ್ಕಳೆಲ್ಲರೂ ಜ್ಞಾನಿಗಳೂ ಗುಣವಂತರೂ ಆಗಿದ್ದರೂ ಅವರನ್ನು ಕುರಿತು ಅವನು ಉಪದೇಶಿಸಿದನು.

“ನನ್ನ ಪ್ರೀತಿಯ ಪುತ್ರರೇ,” ಋಷಭದೇವನು ಹೇಳತೊಡಗಿದನು, “ಮನುಷ್ಯ ಜನ್ಮದ ಈ ದೇಹವು ನಾಯಿ, ಹಂದಿಗಳಿಗೂ ದೊರೆಯುವಂಥ ಕಾಮಸುಖಗಳಿಗಾಗಿ ಕಷ್ಟ ಪಡುವುದಕ್ಕೆ ಸೀಮಿತವಾಗಿರಬಾರದು. ಇದು ದಿವ್ಯವಾದ ತಪಸ್ಸಿಗೆ ಅರ್ಹವಾದುದು; ಅದರಿಂದ ಸತ್ತ್ವಶುದ್ಧಿಯಾಗಿ ದಿವ್ಯಾನಂದ ದೊರೆಯುವುದು. ನಮ್ಮ ನಿಜವಾದ ಗುರಿಯು ಇದಾಗಿರಬೇಕು. ಇಂಥ ನಿರಂತರ ದಿವ್ಯಾನಂದ ನೀಡುವ ಮುಕ್ತಿಗೆ ದ್ವಾರವೆಂದರೆ ಮಹಾತ್ಮರ ಸೇವೆ. ಆದರೆ ಸದಾ ಹೆಣ್ಣಿನ ಸಂಗದಲ್ಲಿ ಮುಳುಗಿರುವ ಕಾಮಿಗಳ ಸಂಗ, ನರಕಕ್ಕೆ ದಾರಿ ಮಾಡುತ್ತದೆ! ಈ ಮಹಾತ್ಮರೆಂದರೆ ಯಾರು? ಎಲ್ಲರನ್ನೂ ಸಮದೃಷ್ಟಿಯಿಂದ ನೋಡುವವರೂ, ಪ್ರಶಾಂತ ಮನಸ್ಕರೂ, ಕೋಪರಹಿತರೂ, ಎಲ್ಲರಲ್ಲೂ ಸ್ನೇಹವನ್ನು ತೋರುವವರೂ ಭಗವದ್ಭಕ್ತರಾದ ಸಾಧುಗಳೂ ಮಹಾತ್ಮರೆನಿಸುವರು. ಭಗವಂತನಲ್ಲಿ ಪ್ರೀತಿಯನ್ನು ಅಧಿಕಗೊಳಿಸಬಯಸುವವರು, ಕೇವಲ, ಮನೆ, ಪತ್ನಿ, ಮಕ್ಕಳು, ಧನಾರ್ಜನೆಗಳಲ್ಲಿ ಮಾತ್ರ ಆಸಕ್ತರಾಗಿರುವವರೊಡನೆ ಹೆಚ್ಚಾಗಿ ಬೆರೆಯಲು ಇಷ್ಟಪಡದೇ, ತಮ್ಮ ಜೀವನ ನಿರ್ವಹಣೆಗೆ ಅಗತ್ಯವಿರುವಷ್ಟು ಧನವನ್ನು ಮಾತ್ರ ಸಂಗ್ರಹಿಸುತ್ತಾರೆ. ಪೂರ್ವಕರ್ಮಗಳಿಗನುಸಾರವಾಗಿ, ಇಂದ್ರಿಯ ಸುಖ ಪಡೆಯಲೆಂದೇ ಈ ಅನಿತ್ಯವಾದ ದೇಹವನ್ನು ಎಲ್ಲರೂ ಪಡೆದಿರುವರು. ಪುನಃ ಇಂಥ ಅನಿತ್ಯವಾದ ದೇಹವನ್ನೇ ಪಡೆಯಲು ಇಂದ್ರಿಯಸುಖಗಳನ್ನೇ ಅನುಭವಿಸಲು, ಪಾಪ ಕಾರ್ಯಗಳನ್ನೂ ಮಾಡುವುದು ಮೂರ್ಖತನವಾದೀತು!
“ಆತ್ಮ ತತ್ತ್ವವನ್ನು ಕುರಿತು ಎಂದಿನವರೆಗೆ ಜಿಜ್ಞಾಸೆ ಮಾಡುವುದಿಲ್ಲವೋ ಅಂದಿನವರೆಗೆ ಶೋಕಮೋಹಗಳು ಹೋಗುವುದಿಲ್ಲ; ಎಂದಿನವರೆಗೆ ಕರ್ಮಾಚರಣೆ ಇರುವುದೋ ಅಂದಿನವರೆಗೆ ಮನವು ಕರ್ಮಾತ್ಮಕವಾಗಿರುತ್ತಾ ಶರೀರ ಬಂಧನವಿರುತ್ತದೆ. ಮನಸ್ಸು ಎಲ್ಲಿಯವರೆಗೆ ಹೀಗೆ ಕರ್ಮವಶವಾಗಿರುವುದೋ ಅಲ್ಲಿಯವರೆಗೆ ಅಜ್ಞಾನ ಆವರಿಸಿರುತ್ತದೆ. ವಾಸುದೇವನಾದ ನನ್ನಲ್ಲಿ ಭಕ್ತಿಯುಂಟಾಗುವವರೆಗೂ ಈ ಕರ್ಮ, ಅಜ್ಞಾನ ದೇಹಬಂಧನ ಇರುತ್ತವೆ.
“ಸಂಸಾರಬಂಧನವುಂಟಾಗಲು ಗಂಡು ಹೆಣ್ಣಿನ ನಡುವೆ ಇರುವ ಆಕರ್ಷಣೆ, ಹಾಗೂ ಮೈಥುನವೇ ಮುಖ್ಯ ಕಾರಣವಾಗುತ್ತದೆ; ಇದರಿಂದ ಮನೆ, ಮಕ್ಕಳು, ಬಂಧುಬಾಂಧವರು, ಧನ ಮೊದಲಾದವುಗಳಲ್ಲಿ ಪ್ರಬಲ ಆಕರ್ಷಣೆಯಾಗಿ, ವ್ಯಕ್ತಿಯು `ನಾನು’ `ನನ್ನದು’ ಎಂಬ ಅಂಹಕಾರದಲ್ಲಿ ಮುಳುಗುತ್ತಾನೆ. ಹೃದಯದಲ್ಲಿ ಉಂಟಾಗುವ ಈ ಬಂಧನದ ಗಂಟು ಕಳಚಿದರೆ, ಆಗ ವ್ಯಕ್ತಿಗೆ ಸಂಸಾರದಲ್ಲಿ ಮೋಹವು ಕಡಮೆಯಾಗಿ ಮನಸ್ಸು ಮುಕ್ತಿಯ ಕಡೆ ತಿರುಗುತ್ತದೆ. ಇದು ಸಾಧ್ಯವಾಗಬೇಕಾದರೆ, ಪರಮಹಂಸನಾದ ಗುರುವೊಬ್ಬನನ್ನು ಸ್ವೀಕರಿಸಿ, ಅವನ ಮಾರ್ಗದರ್ಶನದಲ್ಲಿ, ನನ್ನಲ್ಲಿ ಭಕ್ತಿಯಿಡಬೇಕು. ಸುಖ, ದುಃಖಗಳಂಥ ದ್ವಂದ್ವಗಳನ್ನು ಸಹಿಸಲು ಕಲಿಯುತ್ತಾ, ಆಶಾರಹಿತರಾಗಿರುತ್ತಾ, ಎಲ್ಲೆಲ್ಲೂ ದುಃಖವು ತುಂಬಿರುವುದನ್ನು ಅರ್ಥ ಮಾಡಿಕೊಂಡು ಪರಮ ಸತ್ಯದ ಬಗ್ಗೆ ಜಿಜ್ಞಾಸೆ ನಡೆಸುತ್ತಾ ತಪಶ್ಚರ್ಯೆಗಳನ್ನು ಕೈಗೊಳ್ಳಬೇಕು. ಭಗವಂತನಾದ ನನಗಾಗಿ ಕರ್ಮಗಳನ್ನು ಮಾಡುತ್ತಾ ನನ್ನ ಕಥೆಗಳನ್ನು ಕೇಳುತ್ತಾ ನನ್ನ ಗುಣಕೀರ್ತನೆ ಮಾಡುತ್ತಾ, ಯಾರಲ್ಲೂ ವೈರವಿಲ್ಲದೆ, ಎಲ್ಲರನ್ನೂ ಸಮದೃಷ್ಟಿಯಿಂದ ನೋಡುತ್ತಾ, ನಿಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡುತ್ತಾ, ಬ್ರಹ್ಮಚರ್ಯೆ, ಯಮ, ನಿಯಮಗಳಿಂದ ಎಲ್ಲೆಲ್ಲೂ ನನ್ನ ಭಾವವನ್ನು ಕಾಣುತ್ತಾ ನನ್ನನ್ನೇ ಸ್ಮರಿಸುತ್ತಾ ಜ್ಞಾನಯುಕ್ತರಾಗಿ ಕ್ರಮೇಣವಾಗಿ `ನಾನು’ `ನನ್ನದು’ ಎಂಬ ಅಹಂಕಾರದಿಂದ ನೀವು ದೂರಾಗಬಹುದು.
“ನನ್ನ ಪುತ್ರರೇ, ಈ ನನ್ನ ಉಪದೇಶವನ್ನು ಯಥಾವತ್ತಾಗಿ ಪಾಲಿಸಿರಿ; ಇದನ್ನು ತಿಳಿಯದ ಇತರರಿಗೂ ಬೋಧಿಸಿರಿ. ಮಕ್ಕಳ ತಂದೆಯಾಗಲೀ, ಶಿಷ್ಯರ ಗುರುವಾಗಲೀ, ಪ್ರಜೆಗಳನ್ನಾಳುವ ರಾಜನಾಗಲೀ ಸಹನೆಯಿಂದ ಇದನ್ನು ಬೋಧಿಸಬೇಕು; ಈ ಆಧ್ಯಾತ್ಮಿಕ ಜ್ಞಾನವಿಲ್ಲದೆ ಬರಿಯ ಕಾಮ್ಯ ಕರ್ಮಗಳಲ್ಲಿ ತೊಡಗಿಸಿದರೆ ಕುರುಡನಿಗೆ ಹಳ್ಳವನ್ನು ತೋರಿದಂತಾಗುತ್ತದೆ! ಯಾರು ತನ್ನನ್ನು ಅವಲಂಬಿಸಿರುವವರನ್ನು ಜನನ ಮರಣವೆಂಬ ಸಂಸಾರಚಕ್ರದಿಂದ ಬಿಡಿಸುವುದಿಲ್ಲವೋ ಅವನು ತಂದೆ, ಗುರು, ತಾಯಿ, ಪತಿ, ಅಥವಾ ದೇವತೆಯಾಗಲು ಯೋಗ್ಯನಾಗಿರುವುದಿಲ್ಲ.
“ಪುತ್ರರೇ, ಈ ನನ್ನ ದೇಹವು ನೋಡಲು ಮನುಷ್ಯದೇಹದಂತಿದ್ದರೂ ಇದು ಸತ್ತ್ವಮಯವಾದುದು, ಹಾಗೂ ಸುಲಭವಾಗಿ ಗ್ರಹಿಸಲಾರದು. ಇದರ ಹೃದಯದಲ್ಲಿ ಧರ್ಮವಿದೆ; ಬೆನ್ನಿಗೆ ಅಧರ್ಮವಿದೆ. ಆದ್ದರಿಂದಲೇ ನನ್ನನ್ನು ಋಷಭ ಎನ್ನುತ್ತಾರೆ. ನೀವಾದರೋ ನನ್ನ ಹೃದಯದಿಂದ ಜನಿಸಿರುವುದರಿಂದ ನನ್ನಂತೆಯೇ ಗುಣವಂತರಾಗಿರುವಿರಿ. ಆದ್ದರಿಂದ ಮಾತ್ಸರ್ಯರಹಿತರಾಗಿ ನಿಮ್ಮ ಹಿರಿಯಣ್ಣನಾದ ಭರತನನ್ನು ಸೇವಿಸಿರಿ. ಭಕ್ತಿಸೇವೆಯಲ್ಲೂ ಆತ್ಮಜ್ಞಾನದಲ್ಲೂ ಅತ್ಯುತ್ತಮನಾದ ಅವನನ್ನು ಸೇವಿಸುವುದರ ಮೂಲಕ ಪ್ರಜೆಗಳನ್ನೂ ನನ್ನನ್ನೂ ಸೇವಿಸುವಿರಿ.
“ಈ ಸೃಷ್ಟಿಯಲ್ಲಿರುವ ಜಡ ಮತ್ತು ಜೀವಶಕ್ತಿಗಳಲ್ಲಿ, ಕಲ್ಲು ಮಣ್ಣು ಮೊದಲಾದ ಜಡಶಕ್ತಿಗಿಂತಲೂ, ಜೀವಶಕ್ತಿಯಿರುವ ಗಿಡ, ಮರಗಳು ಉತ್ತಮವಾದವು. ಚಲಿಸಲಾರದ ಈ ಸ್ಥಾವರಗಳಿಗಿಂತಲೂ ಚಲಿಸುವ ಹಾವು, ಹುಳು ಮೊದಲಾದ ಜಂಗಮಗಳು ಮಿಗಿಲಾದವು. ಇವುಗಳಿಗಿಂತ ಬುದ್ಧಿಯಿರುವ ಪ್ರಾಣಿಗಳು ಮಿಗಿಲಾದವು. ಪ್ರಾಣಿಗಳಿಗಿಂತ ಮನುಷ್ಯರು ಉತ್ತಮರು. ಮನುಷ್ಯರಿಗಿಂತಲೂ ಪ್ರೇತಗಳು ಮಿಗಿಲಾದವು; ಕಾರಣ, ಅವು ದೇಹವಿಲ್ಲದೆ ಚಲಿಸಬಲ್ಲವು. ಪ್ರೇತಗಳಿಗಿಂತ ಗಂಧರ್ವರು, ಗಂಧರ್ವರಿಗಿಂತ ಸಿದ್ಧರು, ಸಿದ್ಧರಿಗಿಂತ ಕಿನ್ನರರು, ಕಿನ್ನರರಿಗಿಂತ ಅಸುರರು ಉತ್ತಮರು. ಅಸುರರಿಗಿಂತ ದೇವತೆಗಳು ಮಿಗಿಲಾದವರು. ದೇವತೆಗಳಲ್ಲಿ ಇಂದ್ರನು ಅತ್ಯತ್ತಮನು. ಇಂದ್ರನಿಗಿಂತಲೂ ಬ್ರಹ್ಮದೇವನ ಪುತ್ರರಾದ ದಕ್ಷಾದಿಗಳು ಮಿಗಿಲು. ಅವರಲ್ಲೆಲ್ಲಾ ಶಿವನು ಉತ್ತಮನು. ಅವನಿಗಿಂತಲೂ ಅವನ ಪಿತನಾದ ಬ್ರಹ್ಮನು ಮಿಗಿಲು. ಬ್ರಹ್ಮದೇವನಿಗಿಂತಲೂ ಪರಮ ಪುರುಷನಾದ ನಾನೇ ಮಿಗಿಲಾದವನು. ನಾನಾದರೋ, ಬ್ರಾಹ್ಮಣರನ್ನು ಗೌರವಿಸುವುದರಿಂದ ಬ್ರಾಹ್ಮಣರೇ ಎಲ್ಲರಿಗಿಂತಲೂ ಮಿಗಿಲಾದವರು!
“ಬ್ರಾಹ್ಮಣರಿಗೆ ಸಮಾನರಾದವರಾರನ್ನೂ ಈ ಸೃಷ್ಟಿಯಲ್ಲಿ ನಾನು ಕಾಣೆ. ಇನ್ನು ಅವರಿಗೆ ಮಿಗಿಲಾದವರಾರು?! ಅಗ್ನಿಯಲ್ಲಿ ಅರ್ಪಿಸುವ ಆಹುತಿಯನ್ನು ಸೇವಿಸುವುದಕ್ಕಿಂತಲೂ ಬ್ರಾಹ್ಮಣನೊಬ್ಬನ ಬಾಯ ಮೂಲಕ ಸೇವಿಸುವ ಆಹಾರದಿಂದ ನನಗೆ ಹೆಚ್ಚಿನ ತೃಪ್ತಿಯಾಗುತ್ತದೆ! ನನ್ನದೇ ರೂಪವಾದ ವೇದಗಳನ್ನು ರಕ್ಷಿಸುತ್ತಾ, ಶಮ, ದಮ, ಸತ್ಯ, ಕರುಣೆ, ತಪಸ್ಸು, ತಾಳ್ಮೆಗಳೆಂಬ ಗುಣಗಳನ್ನು ಮೈಗೂಡಿಸಿಕೊಳ್ಳುವ ಬ್ರಾಹ್ಮಣರು ನನಗೆ ಅತ್ಯಂತ ಪ್ರಿಯರಾಗಿದ್ದಾರೆ.
“ಪುತ್ರರೇ! ಸಕಲ ಚರಾಚರಗಳಲ್ಲೂ ನಾನು ಪರಮಾತ್ಮನಾಗಿ ನೆಲೆಸಿರುವುದರಿಂದ ನೀವು ಎಲ್ಲ ಜೀವಿಗಳಿಗೂ ಗೌರವ ಸಲ್ಲಿಸಬೇಕು; ತನ್ಮೂಲಕ ನನಗೇ ಗೌರವ ಸಲ್ಲಿಸಿದಂತಾಗುತ್ತದೆ. ಪುತ್ರರೇ, ಮನಸ್ಸು, ಮಾತು, ದೃಷ್ಟಿ ಮುಂತಾದ ಇಂದ್ರಿಯಗಳ ಮೂಲಕ ನನ್ನನ್ನು ಪೂಜಿಸಬೇಕು; ಇಲ್ಲವಾದರೆ, ಯಮಪಾಶದಂತಿರುವ ಮೋಹದ ಮಾಯೆಯಿಂದ ಬಿಡುಗಡೆಯಾಗುವುದು ಬಹು ಕಷ್ಟವಾಗುತ್ತದೆ.”
ಋಷಭದೇವನು ಹೀಗೆ ತನ್ನ ಮಕ್ಕಳಿಗೆ ಜ್ಞಾನೋಪದೇಶ ಮಾಡಿದನು. ಅವರೆಲ್ಲರೂ ಜ್ಞಾನಿಗಳಾಗಿದ್ದರೂ, ಭಗವಂತನು ತಂದೆಯೊಬ್ಬನು ಮಕ್ಕಳಿಗೆ ಹೇಗೆ ಉಪದೇಶಿಸಬೇಕೆಂದು ತೋರಿಸಲು ಹಾಗೆ ಉಪದೇಶಿಸಿದನು; ಅಲ್ಲದೇ, ಅದು ಪ್ರಜೆಗಳಿಗೂ ಬ್ರಾಹ್ಮಣೋತ್ತಮರಿಗೂ, ಅಷ್ಟೇ ಏಕೆ, ಸಂನ್ಯಾಸಿಗಳಿಗೂ ಜ್ಞಾನ, ಭಕ್ತಿ ವೈರಾಗ್ಯಗಳನ್ನು ನೀಡುವ ಅತ್ಯಂತ ಶ್ರೇಷ್ಠ ಉಪದೇಶವಾಗಿತ್ತು! ಅಮೃತೋಪಮವಾದ ಆ ಜ್ಞಾನೋಪದೇಶದಿಂದ ಅವನ ಮಕ್ಕಳೂ ಬ್ರಹ್ಮರ್ಷಿಗಳೂ ಪ್ರಜೆಗಳೂ ಬಹಳ ಸಂತೋಷಗೊಂಡರು.
* * * * *
ಭಗವಾನ್ ಋಷಭನು ಒಂದು ಶುಭದಿನದಂದು, ಮಹಾಭಾಗವತನೂ ಪರಮಜ್ಞಾನಿಯೂ ಭಕ್ತರನ್ನು ಗೌರವಿಸುವವನೂ ಆದ ಅವನ ಹಿರಿಯ ಮಗ ಭರತನಿಗೆ ಪಟ್ಟಗಟ್ಟಿದ. ಅನಂತರ, ಋಷಭದೇವನು ರಾಜ್ಯ ಹಾಗೂ ಭೌತಿಕ ವಿಷಯಗಳಲ್ಲಿ ಸಂಪೂರ್ಣ ವಿರಕ್ತನಾದ. ಕಾಲಕ್ರಮದಲ್ಲಿ ಅವನಿಗೆ ತನ್ನ ವಸ್ತ್ರಾಲಂಕಾರಗಳ ವಿಚಾರದಲ್ಲೂ ಗಮನವಿಲ್ಲದಂತಾಗಿ ಕೂದಲನ್ನು ಕೆದರಿಕೊಂಡು ದಿಗಂಬರನಾಗಿ ಹುಚ್ಚನಂತಿರತೊಡಗಿದ! ಹೀಗಿರುತ್ತಾ, ಒಂದು ದಿನ, ಅವನು ವೈದಿಕ ಅಗ್ನಿಯನ್ನು ತನ್ನಲ್ಲಿ ಆರೋಪಿಸಿಕೊಂಡು ಬ್ರಹ್ಮಾವರ್ತವನ್ನೇ ಬಿಟ್ಟು ಹೊರಟ!
ಭಗವಾನ್ ಋಷಭನು ಈಗ ಭೌತಿಕ ವಿಚಾರಗಳಿಂದ ಸಂಪೂರ್ಣ ದೂರಾದ ಅವಧೂತ ಧರ್ಮವನ್ನು ಪಾಲಿಸತೊಡಗಿದ. ಕೆದರಿದ ಕೂದಲು, ಮುಖದ ತುಂಬ ಗಡ್ಡ, ಸ್ನಾನಾಲಂಕಾರಗಳಿಲ್ಲದೆ ಮಲಿನವಾದ ದಿಗಂಬರ ದೇಹ, ಸದಾ ಅಧ್ಯಾತ್ಮಚಿಂತನೆಯಲ್ಲೇ ಮುಳುಗಿದ್ದ ಮನಸ್ಸಿನಿಂದ ಮೌನ ಮುಖಮುದ್ರೆ, ಇಂಥ ಲಕ್ಷಣಗಳಿಂದ ಕೂಡಿದ್ದು ಮೂಗನಂತೆಯೂ, ಕಿವುಡನಂತೆಯೂ, ಕುರುಡನಂತೆಯೂ ಓಡಾಡುತ್ತಿದ್ದ ಅವನನ್ನು `ಜಡ’, `ಅಂಧ, `ಬಧಿರ’, `ಮೂಗ’, `ಪಿಶಾಚಿ’, `ಹುಚ್ಚ’ ಎಂದೆಲ್ಲ ಜನರು ಟೀಕಿಸತೊಡಗಿದರು! ಆದರೆ ಅವನು ಸದಾ ಮೌನವಾಗಿರುತ್ತಿದ್ದ!

ಋಷಭನು ಗ್ರಾಮಗಳಲ್ಲೂ ನಗರಗಳಲ್ಲೂ ಗಣಿಗಳಲ್ಲೂ ಕಣಿವೆಗಳಲ್ಲೂ ಯೋಧರ ಶಿಬಿರಗಳಲ್ಲೂ ಋಷ್ಯಾಶ್ರಮಗಳಲ್ಲೂ ಉಪಹಾರಮಂದಿರಗಳಲ್ಲೂ ದನದ ಕೊಟ್ಟಿಗೆಗಳಲ್ಲೂ ಗಿರಿವನಗಳಲ್ಲೂ ಸಂಚರಿಸತೊಡಗಿದ. ಅವನು ಹೋದಲ್ಲೆಲ್ಲಾ, ಕಾಡಿನಿಂದ ಬರುವ ಆನೆಯನ್ನು ನೊಣಗಳು ಸುತ್ತವರಿಯುಂತೆ ದುಷ್ಟಜನರೂ ದುಷ್ಟ ಅಂಶಗಳೂ ಅವನನ್ನು ಸುತ್ತುವರಿಯುತ್ತಿದ್ದರು. ಅವನು ಒಬ್ಬ ಹುಚ್ಚನೆಂದು ತಿಳಿದು ಜನರು ಹೊಡೆಯುತ್ತಿದ್ದರು; ಅವನ ಮೈಮೇಲೆ ಉಗಿಯುವುದು, ಮೂತ್ರ, ಕಲ್ಲು, ಕಸಗಳನ್ನೆಸೆಯುವುದು, ಕೆಟ್ಟ ಮಾತುಗಳಿಂದ ಅವನನ್ನು ನಿಂದಿಸುವುದು, ಬೈಯ್ಯುವುದು, ಹೀಗೆಲ್ಲ ಮಾಡುತ್ತಾ ಅವನಿಗೆ ಬಹುವಿಧವಾಗಿ ತೊಂದರೆ ಉಂಟುಮಾಡಿದರು! ಹೀಗೆ ದುಷ್ಟ ಅಂಶಗಳಿಂದ ಸುತ್ತುವರಿದಿದ್ದರೂ ಋಷಭದೇವನು ಇವಾವುದನ್ನೂ ಗಣನೆಗೆ ತೆಗೆದುಕೊಳ್ಳಲಿಲ್ಲ. ಭೌತಿಕ ಪ್ರಪಂಚವೂ ದೇಹವೂ ಆತ್ಮನಿಂದ ಬೇರೆ, ಹಾಗೂ ಅಶಾಶ್ವತವಾದ ಅವು ಹೀಗೆಯೇ ಕೊನೆಗೊಳ್ಳುವವೆಂದು ಚೆನ್ನಾಗಿ ಅರಿತಿದ್ದ ಅವನು ದೇಹಭಾವನೆಯಿಂದ ದೂರಾಗಿದ್ದನು; ತನ್ನ ಆಧ್ಯಾತ್ಮಿಕ ದಿವ್ಯ ನೆಲೆಯಲ್ಲೇ ಸ್ಥಿತನಾಗಿದ್ದನು. ಆದ್ದರಿಂದ ಅವನು ಯಾರಲ್ಲೂ ಕೋಪಗೊಳ್ಳದೇ ಏಕಾಂಗಿಯಾಗಿ ಪ್ರಪಂಚದಲ್ಲಿ ಸುತ್ತಾಡತೊಡಗಿದನು.
ಭಗವಾನ್ ಋಷಭನ ತೋಳುಗಳೂ ಕಾಲುಗಳೂ ನೀಳವಾಗಿ ಸುಕುಮಾರವಾಗಿದ್ದವು! ಅವನ ವೃಕ್ಷಸ್ಥಳ ವಿಶಾಲವಾಗಿತ್ತು. ಅಗಲವಾದ ಹಣೆ, ತಾವರೆ ಹೂವಿನ ದಳಗಳಂತಹ ಕಂಗಳು, ನೇರವಾದ ಮೂಗು, ಉದ್ದವಾದ ಕಿವಿಗಳು, ಸದಾ ಮುಗುಳ್ನಗೆಯಿಂದ ಕೂಡಿರುತ್ತಿದ್ದ ಕೆಂಪು ತುಟಿಗಳು, ತುಂಬಿದ ಕೆನ್ನೆಗಳು, ಕಂಬುಕಂಠ, ಇವುಗಳಿಂದ ಅವನ ಮುಖ ಬಹಳ ಸುಂದರವಾಗಿ ಕಾಣುತ್ತಿತ್ತು. ಅವನು ಎಷ್ಟು ಸುಂದರನಾಗಿದ್ದನೆಂದರೆ, ವಿವಾಹವಾದ ಸ್ತ್ರೀಯರೂ ಅವನನ್ನು ಕಂಡೊಡನೆ ಸ್ಮರಬಾಧೆಗೊಳಗಾಗುತ್ತಿದ್ದರು! ಆದರೆ ಕೆದರಿದ ಕೇಶರಾಶಿಯಿಂದಲೂ ಮಲಿನವಾದ ಶರೀರದಿಂದಲೂ ಅವನು ಪ್ರೇತದಿಂದ ಆವೇಶಿತನಾದಂತೆ ಕಾಣುತ್ತಿದ್ದನು!
ಋಷಭದೇವನು ತಾನು ಪ್ರಪಂಚಪರ್ಯಟನೆ ಮಾಡುವುದರಿಂದ ಎಲ್ಲರಿಂದಲೂ ತೊಂದರೆಯಾಗುತ್ತಿದ್ದುದನ್ನು ಮನಗಂಡು, ಯೋಗವನ್ನು ಸಾಧಿಸಲು ಒಂದೇ ಸ್ಥಳದಲ್ಲಿ ನೆಲೆಸಿದನು. ಆಗ ಅವನು ಅಜಗರ ವ್ರತವನ್ನು ಆಚರಿಸತೊಡಗಿದನು! ಅದರಂತೆ ಅವನು ಅಜಗರ (ಹೆಬ್ಬಾವು)ದಂತೆ ಒಂದೆಡೆ ಸುಮ್ಮನೆ ಮಲಗಿಕೊಂಡಿದ್ದು ಅಲ್ಲೇ ಆಹಾರ ಮತ್ತು ಜಲಸೇವನೆ, ಹಾಗೂ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದನು! ಯಾರೂ ಅವನಿಗೆ ತೊಂದರೆ ಕೊಡದಿರಲೆಂದು ಅವನು ತನ್ನ ಮಲಮೂತ್ರಗಳಲ್ಲೇ ಹೊರಳಾಡುತ್ತಾ ಅವನ್ನು ತನ್ನ ಮೈಗೆಲ್ಲ ಮೆತ್ತಿಕೊಂಡನು! ಇದರಿಂದ ಜನರು ಅವನಿಗೆ ತೊಂದರೆಯುಂಟುಮಾಡಲಿಲ್ಲ. ಆದರೆ ವಿಶೇಷವೆಂದರೆ, ಅವನ ಮಲಮೂತ್ರಗಳಿಂದ ದುರ್ವಾಸನೆಯೇನೂ ಹೊರಡಲಿಲ್ಲ; ಬದಲಿಗೆ ಅವು ಸುಗಂಧವನ್ನು ಬೀರತೊಡಗಿದವು! ಆ ಸುಗಂಧ ಹತ್ತು ಯೋಜನಗಳವರೆಗೂ ಹರಡಿರುತ್ತಿತ್ತು!
ಋಷಭದೇವನು ಇದೇ ರೀತಿಯಲ್ಲಿ ಹಸುಗಳ, ಜಿಂಕೆಗಳ, ಕಾಗೆಗಳ ವರ್ತನೆಯನ್ನು ಅನುಸರಿಸಿದನು! ಅವನು ಕೆಲವೊಮ್ಮೆ ನಡೆಯುವುದು, ಕೆಲವೊಮ್ಮೆ ಒಂದೆಡೆ ಕುಳಿತಿರುವುದು, ಕೆಲವೊಮ್ಮೆ ಮಲಗಿರುವುದು ಮಾಡುತ್ತಾ ದೇಹವ್ಯಾಪಾರಗಳನ್ನೆಲ್ಲಾ ಇದ್ದಲ್ಲೇ ನಡೆಸುತ್ತಿದ್ದನು! ಅವನು ಈ ರೀತಿ ಮಾಡುತ್ತಾ ತನಗೆ ತೊಂದರೆಯುಂಟುಮಾಡುತ್ತಿದ್ದ ಜನರನ್ನು ತಾನೊಬ್ಬ ಹುಚ್ಚನೆಂಬಂತೆ ವಂಚಿಸಿದನು. ಆದರೆ ಅವನು ಮಹಾಯೋಗಿಯಾಗಿದ್ದನು! ತಾನೇ ಮೋಕ್ಷವನ್ನು ಕರುಣಿಸುವ ಭಗವಂತನಾದರೂ ಯೋಗಿಗಳಿಗೆ ಶಿಕ್ಷಣ ನೀಡಲು ನಾನಾ ರೀತಿಯ ಯೋಗಾಚರಣೆಗಳನ್ನು ಮಾಡುತ್ತಾ ಭಾವಪ್ರಾಪ್ತಿ ಅಥವಾ ಭಗವತೆ್ಪ್ರೕಮದ ಸ್ಥಿತಿಯನ್ನು ಹೊಂದಿದನು. ಈ ಸ್ಥಿತಿಯಲ್ಲಿ ಒಮ್ಮೊಮ್ಮೆ ಅಳುವುದು, ಒಮ್ಮೊಮ್ಮೆ ನಗುವುದು, ಮೊದಲಾದ ಲಕ್ಷಣಗಳನ್ನು ತೋರಿಸುತ್ತಾ ಸದಾ ದಿವ್ಯಾನಂದವನ್ನು ಅನುಭವಿಸುತ್ತಿದ್ದನು. ಆಗ ಅವನಿಗೆ ವಿವಿಧ ಸಿದ್ಧಿಗಳು ಪ್ರಾಪ್ತವಾದವು. ಆ ಸಿದ್ಧಿಗಳ ಬಲದಿಂದ ಅವನು ಮನೋವೇಗದಲ್ಲಿ ಆಕಾಶದಲ್ಲಿ ಸಂಚರಿಸಬಹುದಿತ್ತು! ಅಂತರ್ಧಾನ ಹೊಂದಬಹುದಿತ್ತು! ಪರಕಾಯ ಪ್ರವೇಶ ಮಾಡಬಹುದಿತ್ತು! ದೂರದಲ್ಲೆಲ್ಲೋ ನಡೆದ ಘಟನೆಯನ್ನು ಕುಳಿತಲ್ಲಿಂದಲೇ ಕಾಣಬಹುದಿತ್ತು! ಇಂಥ ಸಿದ್ಧಿಗಳೆಲ್ಲಾ ತಾವಾಗಿಯೇ ಅವನ ಬಳಿ ಬಂದರೂ ಅವನು ಅವನ್ನು ಬಳಸಲಿಲ್ಲ! ಭಕ್ತಿಯಿಂದಲೂ ಜ್ಞಾನದಿಂದಲೂ ತಮ್ಮ ಕರ್ಮಬೀಜಗಳನ್ನೆಲ್ಲ ಸುಟ್ಟು ಹಾಕಿರುವ ಋಷಭನಂಥ ಆತ್ಮಾರಾಮರು ಇಂಥ ಸಿದ್ಧಿಗಳನ್ನು ಬಳಸುವುದರಿಂದ ಯಾವುದೇ ತೊಂದರೆಗೊಳ ಗಾಗುವುದಿಲ್ಲ. ಆದರೂ ಋಷಭನು ಅವನ್ನು ಬಳಸಲಿಲ್ಲ. ಏಕೆಂದರೆ ಅಧ್ಯಾತ್ಮದಲ್ಲಿ ಪ್ರಗತಿ ಹೊಂದಿದ ಬುದ್ಧಿವಂತನು ಚಂಚಲವಾದ ಮನಸ್ಸಿನಲ್ಲಿ ಎಂದಿಗೂ ವಿಶ್ವಾಸವಿಡುವುದಿಲ್ಲ. ಬೇಟೆಯನ್ನು ಹಿಡಿದ ಕಿರಾತನೊಬ್ಬನು ಆ ಪ್ರಾಣಿಯಲ್ಲಿ ವಿಶ್ವಾಸವಿಡುವುದಿಲ್ಲವಷ್ಟೇ? ಹಾಗೆಯೇ, ಮನಸ್ಸನ್ನು ನಿಯಂತ್ರಿಸಿರುವ ಯೋಗಿಯೊಬ್ಬನು ಅದನ್ನು ಸಿದ್ಧಿಗಳ ಕಡೆಗೆ ಹರಿಯಲು ಬಿಟ್ಟರೆ, ಅದು ಪುನಃ ಅವುಗಳ ಮೂಲಕ ಅಶಾಶ್ವತವಾದ ಈ ಭೌತಿಕ ಜಗತ್ತಿಗೇ ಅಂಟಿಕೊಂಡೀತು!
ಈ ರೀತಿ, ಋಷಭದೇವನು ಅಖಿಲ ಭೂಮಂಡಲದ ಚಕ್ರವರ್ತಿಯಾಗಿದ್ದರೂ, ಒಬ್ಬ ಜಡನಂತೆ, ಅವಧೂತರ ವರ್ತನೆಯನ್ನನುಸರಿಸಿ ತನ್ನ ದಿವ್ಯ ಪ್ರಭಾವವನ್ನು ಮರೆಮಾಚಿದನು. ದೇಹವೇ ತಾನೆಂಬ ಮಿಥ್ಯಾಭಾವನೆಯನ್ನು ಹೋಗಲಾಡಿಸುವ ಶಿಕ್ಷಣವನ್ನು ಯೋಗಿಗಳಿಗೆ ನೀಡಲು ಅವನು ಹೀಗೆಲ್ಲ ಮಾಡಿದನು. ಆದರೆ ಅವನು ಸದಾ ತನ್ನ ದಿವ್ಯ ನೆಲೆಯಲ್ಲೇ ಇರುತ್ತಿದ್ದನು. ಹೀಗಿರಲು, ಅವನ ಅವತಾರಕಾಲದ ಕೊನೆ ಸಮೀಪಿಸಿತು. ಈಗ ಅವನು ಭೌತಿಕ ದೇಹವನ್ನು ತ್ಯಜಿಸುವ ಬಗೆಯನ್ನು ಯೋಗಿಗಳಿಗೆ ತೋರಿಸಲು ಇಚ್ಛಿಸಿದನು; ತನ್ನನ್ನು ಭಗವಂತನಾದ ವಾಸುದೇವನಲ್ಲಿ ಸಂಪೂರ್ಣ ನಿಯೋಜಿಸಿ, ಮಾಯಾರಹಿತನಾಗಿ ಸ್ಥೂಲ ಹಾಗೂ ಸೂಕ್ಷ್ಮ ದೇಹಗಳ ಭಾವವನ್ನು ಹೋಗಲಾಡಿಸಿದನು. ಹೀಗೆ ದೇಹ ಬಂಧನದಿಂದ ಮುಕ್ತನಾಗಿದ್ದರೂ ಅವನ ದೇಹವೂ ನಿಜವಾಗಿ ಭೌತಿಕವಲ್ಲದಿದ್ದರೂ ಯೋಗಮಾಯೆಯಿಂದ ಅದನ್ನು ಭೌತಿಕವೆಂಬಂತೆ ಪರಿಗಣಿಸುತ್ತಾ ಸಂಚರಿಸುತ್ತಿದ್ದನು. ….. ಹೀಗೆ ಅವನು ಸಂಚರಿಸುತ್ತಾ ದಕ್ಷಿಣದೇಶಕ್ಕೆ ಆಗಮಿಸಿ, ಕೊಂಕ, ವೆಂಕ, ಕುಟಕ, ಕರ್ಣಾಟಕ ರಾಜ್ಯಗಳಲ್ಲಿ ಸಂಚರಿಸಿದನು. ಅವನು ಆಗ ಬಾಯಲ್ಲಿ ಕಲ್ಲುಗಳನ್ನು ತುಂಬಿಕೊಂಡು, ನಗ್ನನಾಗಿರುತ್ತಾ, ಕೂದಲನ್ನು ಕೆದರಿಕೊಂಡು ಹುಚ್ಚನಂತೆ ಕುಟಕಾಚಲದ ಅರಣ್ಯವೊಂದನ್ನು ಪ್ರವೇಶಿಸಿದನು. ಅಲ್ಲಿ ಇದ್ದಕ್ಕಿದ್ದಂತೆ ಬಿದಿರುಮೆಳೆಗಳ ಘರ್ಷಣೆಯಿಂದ ಭಯಂಕರವಾದ ಕಾಡ್ಗಿಚ್ಚು ಹೊರಟು ಆ ಇಡೀ ಅರಣ್ಯವನ್ನೂ ಋಷಭದೇವನ ದೇಹವನ್ನೂ ಆಹುತಿ ತೆಗೆದುಕೊಂಡಿತು! ಅಲ್ಲಿಗೆ ಅವನ ಅವತಾರ ಸಮಾಪ್ತವಾಯಿತು.
ಋಷಭದೇವನ ಕಥೆಯನ್ನೂ ಅವನ ವಿಚಿತ್ರ ವರ್ತನೆಗಳ ಬಗ್ಗೆಯೂ ಕೇಳಿದ ಕೊಂಕವೆಂಕ ಕುಟಕಗಳ ರಾಜನೊಬ್ಬನು ಅವನನ್ನೇ ಅನುಕರಿಸಿ ವೇದವಿಧಿಗಳಿಗೆ ದೂರವಾದ ಉಪಧರ್ಮವೊಂದನ್ನು ಆರಂಭಿಸಿದನು. ಮಂದಭಾಗ್ಯರಾದ ಕಲಿಯುಗದ ಜನರು, ವೇದಗಳನ್ನೂ ಯಜ್ಞಯಾಗಾದಿಗಳನ್ನೂ ಜರಿಯುತ್ತಾ ಶೌಚ, ಸ್ನಾನಾದಿಗಳಿಂದ ರಹಿತರಾಗಿ ಕೇಶವನ್ನು ಕೀಳುವುದೇ ಮೊದಲಾದ ಅಭ್ಯಾಸಗಳನ್ನಿಟ್ಟು ಕೊಂಡು ಈ ಉಪಧರ್ಮವನ್ನು ಪಾಲಿಸುತ್ತಾರೆ!
ಋಷಭದೇವನು ಜನರನ್ನು ಮಾಯಾಮೋಹದಿಂದ ಬಿಡಿಸಲು ಹೀಗೆ ಅವತರಿಸಿ, ಅದ್ಭುತ ಲೀಲೆಗಳನ್ನಾಚರಿಸಿದ. ಅವನ ಬಗ್ಗೆ ಪಂಡಿತೋತ್ತಮರು ಪ್ರಶಂಸನೆಯ ಮಾತುಗಳನ್ನಾಡಿದ್ದಾರೆ; “ಆಹಾ! ಸಪ್ತ ಸಮುದ್ರಗಳಿಂದ ಆವರಿಸಲ್ಪಟ್ಟು ಅನೇಕ ದ್ವೀಪಗಳಿಂದಲೂ ವರ್ಷಗಳಿಂದಲೂ ಕೂಡಿರುವ ಈ ಭೂಮಂಡಲದಲ್ಲಿ ಭಾರತವರ್ಷ ಬಹು ಪುಣ್ಯದಿಂದ ಸಂಪನ್ನವಾಗಿದೆ! ಆದ್ದರಿಂದಲೇ ಇಲ್ಲಿನ ಜನರು ಭಗವಂತನ ಅವತಾರ ಕಥನಗಳ ಗಾಯನ ಮಾಡುತ್ತಿರುತ್ತಾರೆ! ಆ ಪ್ರಿಯವ್ರತನ ವಂಶ ಎಂಥ ಅಪೂರ್ವ ಯಶಸ್ಸಿನಿಂದ ಕೂಡಿದೆ! ಈ ವಂಶದಲ್ಲಿ ದೇವೋತ್ತಮ ಪರಮ ಪುರುಷನೇ ಆವತರಿಸಿ ಕರ್ಮಬಂಧನದಿಂದ ಬಿಡುಗಡೆ ತರುವ ಧರ್ಮವನ್ನಾಚರಿಸಿದ! ಆಹಾ! ಋಷಭದೇವನೆಂಥ ವೈರಾಗ್ಯಮೂರ್ತಿ! ಯಾವ ಸಿದ್ಧಿಗಳ ಪ್ರಾಪ್ತಿಗಾಗಿ ಎಲ್ಲ ಯೋಗಿಗಳೂ ಹಾತೊರೆಯುವರೋ, ಅಂಥ ಮಹಾಸಿದ್ಧಿಗಳು ತಾವಾಗಿಯೇ ದೊರಕಿದರೂ ಅವನು ಅವನ್ನು ತ್ಯಜಿಸಿದ ಇದು ಇತರ ಯೋಗಿಗಳಿಗೆ ಮನಸ್ಸಿನಿಂದಲೂ ದುಸ್ಸಾಧ್ಯ!”
ಭಗವಾನ್ ಋಷಭದೇವನು ಸಕಲ ವೈದಿಕ ಜ್ಞಾನಕ್ಕೂ, ಗೋಬ್ರಾಹ್ಮಣ ದೇವತೆಗಳಿಗೂ ಇಡೀ ಮನುಕುಲಕ್ಕೂ ಪರಮ ಗುರು. ಅವನ ಶುದ್ಧವಾದ ದಿವ್ಯಲೀಲೆಗಳ ಕಥೆಯನ್ನು ಶ್ರದ್ಧೆಯಿಂದ ಕೇಳುವುದರಿಂದಲೂ ಹೇಳುವುದರಿಂದಲೂ ಸಕಲ ಪಾಪಗಳೂ ನಾಶವಾಗಿ ಪರಮ ಪುರುಷ ವಾಸುದೇವನಲ್ಲಿ ಅನನ್ಯ ಭಕ್ತಿಯುಂಟಾಗುತ್ತದೆ.






Leave a Reply