ಸತ್ಸೇವಯಾದೀರ್ಘಯಾಪಿ ಜಾತಾ ಮಯಿ ದೃಢಾ ಮತಿಃ ।
ಹಿತ್ವಾವದ್ಯಮಿಮಂ ಲೋಕಂ ಗಂತಾ ಮಜ್ಜನತಾಮಸಿ ॥
“ಕೆಲವೇ ದಿನಗಳ ಮಟ್ಟಿಗಾದರೂ ಪರಾತ್ಪರ ಸತ್ಯದ ಸೇವೆ ಮಾಡುವುದರಿಂದ ಭಕ್ತನು ನನ್ನಲ್ಲಿ ಸ್ಥಿರವಾದ, ದೃಢವಾದ ಬುದ್ಧಿಯನ್ನು ಹೊಂದುವನು. ತತ್ಪರಿಣಾಮವಾಗಿ ಸದ್ಯದ ದುಃಖಕಾರಕವಾದ ಐಹಿಕ ಜಗತ್ತನ್ನು ತೊರೆದು ಅಲೌಕಿಕ ಜಗತ್ತಿನಲ್ಲಿ ನನ್ನ ಸಹವಾಸಿಯಾಗುತ್ತ ಹೋಗುವನು.” (ಶ್ರೀಮದ್ ಭಾಗವತ, 1.6.23)
ಈ ಲೌಕಿಕ ದೇಹವನ್ನು ತ್ಯಜಿಸಿದ ಮೇಲೆ ನೀನು ಅಲೌಕಿಕ ಲೋಕದಲ್ಲಿ ನನ್ನ ಸಹವಾಸಿಯಾಗುವೆ ಎಂದು ಭಗವಂತನು ನಾರದರಿಗೆ ಹೇಳುತ್ತಿದ್ದಾನೆ. ಈ ಐಹಿಕ ಲೋಕದಲ್ಲಿ ನಾವು ಪರಿಶುದ್ಧ ಆತ್ಮಗಳಾಗಿದ್ದರೂ ನಾವು ಲೌಕಿಕ ದೇಹವೆಂದು ಯೋಚಿಸುತ್ತಿದ್ದೇವೆ. ಏಕೆಂದರೆ ಕೃಷ್ಣನನ್ನು ಮರೆತು ನಾವು ಐಹಿಕ ಜೀವನವನ್ನು ಬಯಸುತ್ತೇವೆ.

ಈಗ ನಾವು ಭಾಗವತದ ತರಗತಿಯಲ್ಲಿ ಇದ್ದೇವೆ. ಇಲ್ಲಿ ಕೃಷ್ಣನಿದ್ದಾನೆ. ನಾವು ಅವನ ವೈಭವಗಳ ಬಗೆಗೆ ಮಾತನಾಡುತ್ತಿದ್ದೇವೆ. ಆದುದರಿಂದ ಈ ಸನ್ನಿವೇಶದಲ್ಲಿ ಕೃಷ್ಣನು ಭೋಕ್ತ. ತರಗತಿಯ ಅನಂತರ ನಿಮಗೆ ಪ್ರಸಾದ ಸಿಗುತ್ತದೆ. ಯಾರು ಆನಂದಿಸುವವರು? ಕೃಷ್ಣ. ಆದರೆ ನೀವೂ ಆನಂದಿಸುತ್ತಿರುವಿರಿ. ಭಾಗವತ ತರಗತಿಯಲ್ಲಿ ಭಗವಂತನ ವೈಭವಗಳನ್ನು ಕೇಳಿ ನೀವು ಆನಂದಿಸುವಿರಿ. ಇದು ಪರಮ ಸಂತೋಷ. ಕೃಷ್ಣನು ಆನಂದಿಸುತ್ತಾನೆ, ಭಕ್ತರೂ ಆನಂದಿಸುತ್ತಾರೆ. ಇತರ ವಿಧದ ಸೇವೆಗಳನ್ನು ನೀವು ಆನಂದಿಸುವುದಿಲ್ಲ – ಅದು ತಪಸ್ಸು. ಜನ್ಮಾಷ್ಟಮಿಯಂದು ಇಡೀ ದಿನ ಉಪವಾಸ. ಕೃಷ್ಣನು ಆನಂದಿಸುವವನು. ನೀವು ನೋವು ಅನುಭವಿಸುವವರು. ಮೊದಲ ಬಾರಿ, ಆರಂಭಿಕರಾದ ಯಾರಿಗಾದರೂ ನೀವು ಹೇಳಿದಾಗ, ಅವರು ಯೋಚಿಸಬಹುದು, “ಓ, ನಾನು ಉಪವಾಸವಿರಬೇಕು. ಕೃಷ್ಣನಿಗಾಗಿ ನೋವು ಅನುಭವಿಸಬೇಕು.” ಆದರೆ ಸ್ವಲ್ಪ ಸಮಯದ ಅನಂತರ, ಅವರು ಹೇಳುತ್ತಾರೆ, “ಕೃಷ್ಣನಿಗಾಗಿ ಈ ರೀತಿಯಲ್ಲಿ ನನ್ನ ದೇಹ ಮತ್ತು ಮನಸ್ಸನ್ನು ದಂಡಿಸುವುದನ್ನು ನಾನು ಆನಂದಿಸುವೆ.” ಹೀಗೆ ನೀವು ನಿಮ್ಮ ದೇಹ ಮತ್ತು ಮನಸ್ಸನ್ನು ನಿಮ್ಮಿಂದ ಪ್ರತ್ಯೇಕಗೊಳಿಸುವಿರಿ. ಆದರೆ ನನ್ನ ಆತ್ಮವು ನನ್ನ ದೇಹ ಮತ್ತು ಮನಸ್ಸು ಎಂದು ನೀವು ಯೋಚಿಸಬಯಸಿದರೆ, ನೀವು ಭಕ್ತಿ ಸೇವೆಯನ್ನು ಆನಂದಿಸುವಿರೆಂದು ಖಚಿತವಾಗಿ ಹೇಳಲಾಗದು.
ಸೇವಾ ಭಾವ
ಭಗವಂತನಿಗೆ ಸೇವೆ ಸಲ್ಲಿಸಬೇಕೆಂಬ ಉದ್ದೇಶದಿಂದ ಭಕ್ತರು ತಮ್ಮ ದೇಹ ಮತ್ತು ಮನಸ್ಸಿನಲ್ಲಿ ಅನೇಕ ಏರಿಳಿತಗಳನ್ನು ಅನುಭವಿಸುವರು. ಹುಟ್ಟು, ಸಾವು, ವೃದ್ಧಾಪ್ಯ ಮತ್ತು ರೋಗದ ಈ ಲೌಕಿಕ ಜಗತ್ತಿನಲ್ಲಿ ನೀವು ಮತ್ತೆ ಜನಿಸುವ ಅಗತ್ಯವೇ ಇಲ್ಲ ಎಂದು ಪ್ರಭುಪಾದರು ಹೇಳುತ್ತಾರೆ. ಆಧ್ಯಾತ್ಮಿಕ ಲೋಕದಲ್ಲಿ ಭಗವಂತನ ಸಹವಾಸಿಯಾಗುವ ಮೂಲಕ ನೀವು ಕಾಯಂ ಆಧ್ಯಾತ್ಮಿಕ ಸ್ಥಾನ ಪಡೆಯಬಹುದು. ನಮ್ಮ ಸುಖಿಸುವ ಭಾವನೆ ದೂರವಾಗಬೇಕು, ಸೇವಾ ಭಾವ ಬರಬೇಕು. ಆರಂಭಿಕನಿಗೆ ಪ್ರಸಾದ ಸ್ವೀಕರಿಸುವಾಗ ಕೃಷ್ಣನು ಚಿತ್ರದಲ್ಲಿರುವುದಿಲ್ಲ, ಕೇವಲ ರುಚಿಯಾದ ಪ್ರಸಾದ ಮಾತ್ರ ಕಾಣುತ್ತದೆ. ಆದುದರಿಂದಲೇ ಪ್ರಾರ್ಥನೆಗಳನ್ನು ಜಪಿಸಲು ತರಬೇತಿ ನೀಡಲಾಗುವುದು. ಇದರಿಂದ ನೀವು ಭಗವಂತನ ಉಳಿಕೆಯಾದ ಪ್ರಸಾದವನ್ನು ಸ್ವೀಕರಿಸುವಾಗ ಕೃಷ್ಣನನ್ನು ನೆನಪು ಮಾಡಿಕೊಳ್ಳಬಹುದು ಮತ್ತು ಪ್ರಸಾದವನ್ನು ಗೌರವಿಸಬಹುದು. ನೀವು ಕೃಷ್ಣ ಪ್ರಸಾದವನ್ನು ಸ್ವೀಕರಿಸಿದಾಗ ಅದು ಪ್ರಸಾದವನ್ನು ನೀಡುವ ಕೃಪೆ ತೋರಿದ ಪ್ರಭುವಿಗೆ ತೋರುವ ಕೃತಜ್ಞತೆಯಾಗುತ್ತದೆ.

ಈ ಲೌಕಿಕ ಲೋಕದಲ್ಲಿ ಎಲ್ಲರ ಧೋರಣೆಯೂ ತಮ್ಮ ಅಥವಾ ತಮ್ಮ ಕುಟುಂಬದವರ ಇಂದ್ರಿಯ ತೃಪ್ತಿಯನ್ನು ಹೆಚ್ಚಿಸುವುದೇ ಅಗಿದೆ. ಅಂತಹ ಭಾವನೆಯಿಂದ ನೀವು ದೇವೋತ್ತಮನ ಬಳಿಗೆ ಮರಳಿ ಹೋಗುವುದು ಸಾಧ್ಯವಿಲ್ಲ. ಆಧ್ಯಾತ್ಮಿಕ ಆನಂದವು ಸತ್ ಸೇವಯಾ, ಹೃಷಿಕೇಣ ಹೃಷಿಕೇಶ ಸೇವನಂ ಭಕ್ತಿರ್ ಉಚ್ಯತೇ, ಆನಂದದಿಂದ ಬರುತ್ತದೆ. ಅಂದರೆ ನನ್ನ ಇಂದ್ರಿಯಗಳಿಂದ ಭಗವಂತನ ಸೇವೆ ಮಾಡುವುದು. ಲೌಕಿಕ ಜಗತ್ತಿನಲ್ಲಿ ಕೊಡುವುದು ಮತ್ತು ಪಡೆಯುವುದು ನಡೆಯುತ್ತಿರುತ್ತದೆ. ಪಡೆಯುವುದು ಸೊನ್ನೆಯಾದರೆ, ಕೊಡುವುದೂ ಶೂನ್ಯವಾಗುತ್ತದೆ. ಆಧ್ಯಾತ್ಮಿಕ ಲೋಕದಲ್ಲಿನ ಧೋರಣೆ ಎಂದರೆ ಕೊಡುವುದು, ತೆಗೆದುಕೊಳ್ಳುವುದಲ್ಲ. ಏಕೆಂದರೆ ಕೃಷ್ಣನಿಗೆ ಆನಂದ ನೀಡಲು ನಾನು ಕೆಲಸ ಮಾಡಬೇಕು, ಕೊಡುವುದು ಬಿಡುವುದು ಅವನ ಇಷ್ಟ ಎಂಬುವುದರಲ್ಲಿ ಭಕ್ತರಿಗೆ ಪೂರ್ಣ ವಿಶ್ವಾಸವಿದೆ.

ಲೌಕಿಕ ಲೋಕದಲ್ಲಿ ಪ್ರತಿಯೊಬ್ಬರೂ ಅಹಂಕಾರದಿಂದ ನಡೆಯುತ್ತಿದ್ದಾರೆ. ಮತ್ತು ನಿಜವಾದ ಅಹಂ ನಿದ್ರಿಸುತ್ತಿದೆ. ನಿಮ್ಮ ಲೌಕಿಕ ದೇಹವು ಪ್ರಜ್ಞಾವಸ್ಥೆಯಲ್ಲಿ ಇಲ್ಲದಿದ್ದರೆ ನೀವು ಆನಂದಿಸಲಾಗುವುದಿಲ್ಲ. ಅದೇ ರೀತಿ, ಆತ್ಮವು ಈಗ ಪ್ರಜ್ಞಾ ಶೂನ್ಯವಾಗಿದೆ, ಆದುದರಿಂದ ನೀವು ಸೇವೆಯನ್ನು ಆಸ್ವಾದಿಸಲಾರಿರಿ. ಅಹಂಕಾರಕ್ಕೆ ಸೇವೆಯು ಶಿಕ್ಷೆ. “ನನಗೆ ಸೇವೆ ಸಲ್ಲಿಸಿ, ನನ್ನನ್ನು ವೈಭವೀಕರಿಸಿ, ನಾನೇ ಕೇಂದ್ರ” ಎಂದು ಅಹಂಕಾರವು ಸದಾ ಬಯಸುತ್ತದೆ. ಆತ್ಮದ ಸ್ವಭಾವ ಅದಕ್ಕೆ ವಿರುದ್ಧವಾದುದು.
ಒಬ್ಬ ಬಾಲಕನಿಗೆ ಸಹಾಯ ಮಾಡಬೇಕೆಂದು ನೀವು ಇಚ್ಛಿಸುವಿರೆಂದುಕೊಳ್ಳೋಣ. ಆ ಹುಡುಗ ಕೊಳಕ, ಅವನಿಗೆ ಮನೆ ಇಲ್ಲ. ಅವನನ್ನು ನಿಮ್ಮ ಕುಟುಂಬದೊಳಗೆ ಕರೆದುಕೊಳ್ಳಬೇಕೆಂದು ನೀವು ನಿರ್ಧರಿಸಬಹುದು. ಆಗ ನೀವು ಮಾಡುವ ಮೊದಲ ಕೆಲಸ ಅವನನ್ನು ಸ್ವಚ್ಛಗೊಳಿಸುವುದು. ಪ್ರಭುಪಾದರೂ ಹಾಗೆಯೇ, ತುಂಬ ಕರುಣೆ. ಇವರೆಲ್ಲರನ್ನೂ ಹೇಗೆ ಪುನಃ ಕೃಷ್ಣನ ಕುಟುಂಬದೊಳಗೆ ಕರೆದುಕೊಳ್ಳುವುದು ಎಂದು ಯೋಚಿಸುವರು. ನೀವು ಶುದ್ಧವಾಗದಿದ್ದರೆ ನೀವು ಅಲ್ಲಿಗೆ ಹೋಗುವುದು ಸಾಧ್ಯವಿಲ್ಲ. ನೀವು ಆ ಹುಡುಗನಿಗೆ ಸ್ನಾನ ಮಾಡಿಸುವಿರಿ. ಅವನು ಮರುದಿನವೇ ಚಿಂದಿ ಆಯಲು ಹೋದರೆ? ಹಳೇ ಹವ್ಯಾಸಗಳನ್ನು ಬಿಡುವುದು ಕಷ್ಟ. ನೀವು ಮತ್ತು ನಿಮ್ಮ ಕುಟುಂಬದವರು ಅವನಿಗೆ ಅವನ ಹವ್ಯಾಸವನ್ನು ನಿಲ್ಲಿಸಲು ಅನೇಕ ಬಾರಿ ಹೇಳುವಿರಿ. ಆಗಲೂ ಅವನು ಅದೇ ರೀತಿ ಇದ್ದರೆ, ನೀವು ಅವನನ್ನು ಹೊರಗೆ ಕಳುಹಿಸುತ್ತಾ, “ನೀನು ಸಿದ್ಧವಾದಾಗ ಪುನಃ ನಿನ್ನನ್ನು ಒಳಗೆ ಬರಮಾಡಿಕೊಳ್ಳುತ್ತೇವೆ” ಎನ್ನುವಿರಿ. ಇಲ್ಲಿಯೂ ಕೂಡ ಅದೇ ಕಥೆ. ನಮ್ಮ ಆತ್ಮಗಳನ್ನು ಹೇಗೆ ಶುದ್ಧಪಡಿಸಿಕೊಳ್ಳಬೇಕು, ಸೇವೆಯನ್ನು ಹೇಗೆ ಆಸ್ವಾದಿಸಬೇಕು ಎಂಬುದರ ಬಗೆಗೆ ನಮ್ಮ ಆಧ್ಯಾತ್ಮಿಕ ಗುರು ನಮಗೆ ಬೋಧಿಸಿದ್ದಾರೆ. ಆದುದರಿಂದ, ಮದ್ಯವಿಲ್ಲ, ಮಾಂಸವಿಲ್ಲ, ಅನೈತಿಕ ಲೈಂಗಿಕ ಕ್ರಿಯೆ ಇಲ್ಲ ಮತ್ತು ಜೂಜು ಇಲ್ಲ. ಇವೆಲ್ಲವೂ ಆತ್ಮಕ್ಕೆ ಅಶುದ್ಧವಾದವು, ಆತ್ಮ ನಾಶನ. ಇವೆಲ್ಲವನ್ನೂ ಬಿಟ್ಟು ಬಿಡಿ, ಕೃಷ್ಣನ ಸೇವೆ ಮಾಡಿ. ನಿಮಗೆ ಎಲ್ಲವೂ ಲಭಿಸುತ್ತದೆ.
ಕೃಷ್ಣನಂತೆ ವ್ಯಕ್ತಿತ್ವ

ಆದುದರಿಂದ, ಆಧ್ಯಾತ್ಮಿಕ ಗುರುವಿನ ಸಹವಾಸ ಮಾಡುವುದರಿಂದ, ಅವರ ಪುಸ್ತಕಗಳನ್ನು ಓದುವುದರಿಂದ ಅವರ ಗುಣಮಟ್ಟ ನಮಗೆ ಅರ್ಥವಾಗುತ್ತದೆ. ಮಗುವು ನಡಿಗೆ ಕಲಿಯುವಾಗ ಅನೇಕ ಬಾರಿ ಬೀಳುತ್ತದೆ. ಆದರೆ ನಡೆಯುವ ಪ್ರವೃತ್ತಿ ಅದರಲ್ಲಿರುವುದರಿಂದ ಅಂತಿಮವಾಗಿ ಅದು ನಡೆಯುತ್ತದೆ. ಅದು ಅಭ್ಯಾಸ ಮಾಡಬೇಕಷ್ಟೇ. ಅದೇ ರೀತಿ ಆತ್ಮದ ಸ್ವಭಾವ ಸೇವೆ. ಸೇವೆ ಅದಾಗಲೇ ಇರುತ್ತದೆ. ಕೆಲವು ಬಾರಿ ನೀವು ಇಂದ್ರಿಯ ಸುಖಕ್ಕಾಗಿ ಸೇವೆಯಿಂದ ಪತನಹೊಂದಬಹುದು. ಆದರೆ ಬಿಡಬೇಡಿ. ಮತ್ತೆ ಎದ್ದು ನಿಲ್ಲಿ. ನಿಮ್ಮ ಇಂದ್ರಿಯಗಳ ನಿಯಂತ್ರಣಕ್ಕೆ ನೀವು ಪ್ರತ್ಯೇಕ ಹೋರಾಟ ನಡೆಸಬೇಕಾಗಿಲ್ಲ. ಹೆಚ್ಚು ಸೇವೆ ಮಾಡಬೇಕೆಂದು ಅರ್ಥ ಮಾಡಿಕೊಂಡರೆ ಹೋರಾಟ ಕಡಮೆಯಾಗುತ್ತದೆ ಮತ್ತು ಉನ್ನತ ಸ್ವಾದ ಬರುತ್ತದೆ. ಭಗವಂತನು ಪವಿತ್ರ, ಸಂಪೂರ್ಣ ಪರಿಶುದ್ಧ. ನೀವೂ ಪರಿಶುದ್ಧರಾಗದಿದ್ದರೆ ನೀವು ಭಗವಂತನ ಮುಂದೆ ನಿಲ್ಲಲಾರಿರಿ. ಆದುದರಿಂದ ಕೃಷ್ಣನ ಬಳಿಗೆ ಹೋಗಲು ನಮ್ಮ ವ್ಯಕ್ತಿತ್ವವು ಕೃಷ್ಣನದಂತಾಗಬೇಕು. ವಿಷ್ಣುವಿನ ವ್ಯಕ್ತಿತ್ವದಂತೆ ನಿಮ್ಮ ಆತ್ಮಕ್ಕೆ ರೂಪ ನೀಡುವುದೇ ಆಧ್ಯಾತ್ಮಿಕ ಗುರುವಿನ ಕೆಲಸ. ಆದುದರಿಂದ ನಿಮ್ಮನ್ನು ವೈಷ್ಣವ ಎಂದು ಕರೆಯುತ್ತಾರೆ.
ಪಠಣ ಮಾಡುತ್ತಿರಿ

ಬದುಕಿನಲ್ಲಿ ನಿಮಗೆ ಅನೇಕ ತೊಡಕುಗಳಿರಬಹುದು, ಆದುದರಿಂದಲೇ ನೀವು ಬ್ರಹ್ಮ ಮುಹೂರ್ತದಲ್ಲಿ ಎದ್ದು 16 ಸುತ್ತು ಜಪ ಪೂರ್ಣಗೊಳಿಸಿ. ಆಗ ನಿಮ್ಮನ್ನು ಯಾರೂ ಅಡ್ಡಿ ಮಾಡುವುದಿಲ್ಲ. ನೀವು ಎದ್ದಾಗ ಮನಸ್ಸೂ ಉತ್ಸಾಹದಿಂದ ಇರುತ್ತದೆ. ಆದುದರಿಂದ ಕಚೇರಿ ಸಮಸ್ಯೆ, ಮನೆ ಸಮಸ್ಯೆಗಳಿಗೆ ಮುನ್ನ ಎದ್ದು 16 ಸುತ್ತು ಪೂರ್ಣಗೊಳಿಸಿ. ಇಡೀ ದಿನ ಆ ಕೃಷ್ಣ ಶಕ್ತಿಯು ನಿಮಗಿರುತ್ತದೆ. ಹರೇ ಕೃಷ್ಣ ಮಂತ್ರವನ್ನು ಪಠಿಸಲು ನಿಯಮ ಮತ್ತು ನಿಯಂತ್ರಣಗಳಿಲ್ಲ. ಏಕೆಂದರೆ, ಈ ಹರೇ ಕೃಷ್ಣ ಮಂತ್ರವು ದೇಹಕ್ಕಲ್ಲ, ಆತ್ಮಕ್ಕೆ ಆಹಾರ. ನೂರಕ್ಕೆ ನೂರರಷ್ಟು ನೀವು ನವೋತ್ಸಾಹ ಅನುಭವಿಸುವಿರಿ. ಆ ಹೊಸತನವು ಅಸಾಮಾನ್ಯವಾದುದು. ನೀವು ಸರಿಯಾಗಿ ಕೇಳಿಸಿಕೊಂಡರೆ ಅದು ನಿಮ್ಮ ಆತ್ಮವನ್ನು ತಟ್ಟುತ್ತದೆ. ಆ ಕ್ಷಣ, ನೀವು ಜಪ ಮಾಡುವಾಗ, ತಾಜಾತನದ ಭಾವ ನಿಮಗೆ ಉಂಟಾಗುತ್ತದೆ. ನಿಮ್ಮ ಮನಸ್ಸಿಗೆ ಬೇರೆ ಏನನ್ನೂ ಯೋಚಿಸಲು ಬಿಡಬೇಡಿ. ಭಗವಂತನ ನಾಮದೊಂದಿಗೆ ಸತತ ಸಂಪರ್ಕ ಹೊಂದಿರಲು ಸಾಧ್ಯವಾದರೆ, ನವೋತ್ಸಾಹ ಖಚಿತ. ಅದು ಹರೇ ಕೃಷ್ಣ ಮಹಾ ಮಂತ್ರದ ಶಕ್ತಿ.






Leave a Reply