ತಿಲಕದ ಮಹತ್ತ್ವ

ನಾನು ಕೃಷ್ಣನ ಸೇವಕ – ಎಂಬ ಸರಳ ಸತ್ಯವನ್ನು ಸ್ವೀಕರಿಸಲು ಆಶಿಸುವ ಯಾರಾದರೂ ಕೂಡ ತಿಲಕವನ್ನು ಧರಿಸಬಹುದು. ತಿಲಕವು ಭಕ್ತರು ತಮ್ಮ ಹಣೆ ಮತ್ತು ದೇಹದ ಇತರ ಭಾಗಗಳಲ್ಲಿ ಧರಿಸುವ ಮೃತ್ತಿಕೆಯ ಚಿಹ್ನೆ. ಕೃಷ್ಣನಲ್ಲಿ ಹೆಚ್ಚು ಭಕ್ತಿ ಇಲ್ಲವೆಂಬ ಭಾವನೆ ನಿಮಗಿರಬಹುದು. ಆದರೆ ಅದು ನೀವು ಅವನ ಭಕ್ತನಾಗುತ್ತಿರುವುದರ ಚಿಹ್ನೆಯೂ, ಅದನ್ನು ನೀವು ಧರಿಸಲು ನಿಷೇಧವಿಲ್ಲ. ತಿಲಕವನ್ನು ಧರಿಸುವುದನ್ನು ಕಲಿಯುವ ವ್ಯಕ್ತಿಯಲ್ಲಿ ಕೃಷ್ಣ – ಆಗಿರುವುದರಿಂದ ಭಕ್ತನಾಗುವ ಅರ್ಹತೆಯು ಅತಿ ಶೀಘ್ರ ಬೆಳೆಯುತ್ತದೆ.

ದೇಹಕ್ಕೆ ಏಕೆ ಅಲಂಕಾರ?

ದೇಹವು ಭಗವಂತನ ಮಂದಿರವಾಗಿರುವುದರಿಂದ ಭಕ್ತನು ಅದನ್ನು ಅಲಂಕರಿಸುತ್ತಾನೆ. ದೇಹವೇ ನಾವು ಎಂದುಕೊಂಡು ದೇಹವನ್ನು ಅಲಂಕರಿಸುವ ಅಥವಾ ಕಶ್ಮಲವನ್ನು ಹೊರಸೂಸುತ್ತದೆಂದು ತುಚ್ಛವಾಗಿ ನೋಡುವ ಬದಲು ನಾವು ಅದನ್ನು ದೇವೋತ್ತಮನ ನಿವಾಸವೆಂದು ಗೌರವಿಸಿ ರಕ್ಷಿಸಬಹುದು.  ಆತ್ಮವು ದೇಹದೊಳಗೆ ವಾಸಿಸುತ್ತದೆ ಮತ್ತು ಪರಮಾತ್ಮ ಕೂಡ. ಮಾಲೀಕನ ಸುಖ ಸಂತೋಷಕ್ಕಾಗಿ ಮನೆಯನ್ನು ಕಟ್ಟಿ ಸಂರಕ್ಷಿಸುವಂತೆ ನಮ್ಮ ದೇಹವು ಅದರ ನಿಜವಾದ ಮಾಲೀಕನಾದ ಶ್ರೀ ಕೃಷ್ಣನಿಗಾಗಿ ಇದೆ. ತಿಲಕದಿಂದ ದೇಹವನ್ನು ಅಲಂಕರಿಸುವುದರಿಂದ ಕೃಷ್ಣನಿಗೆ ಆನಂದವಾಗುತ್ತದೆ.

ತಿಲಕವನ್ನು ಹಾಕಿಕೊಳ್ಳುವುದರಿಂದ ನಾವು ಕೃಷ್ಣನಿಗೆ ಸೇರಿದವರೆಂಬುವುದನ್ನು ನೆನಪಿಸಲು ಅದು ನಮಗೆ ಸಹಾಯ ಮಾಡುತ್ತದೆ. ಒಬ್ಬ ವ್ಯಕ್ತಿಯು ತಿಲಕವನ್ನು ಹಾಕಿಕೊಂಡಿರುವುದನ್ನು ಇತರರು ನೋಡಿದಾಗ ಅವರಿಗೆ ಕೃಷ್ಣನ ನೆನಪಾಗುವುದಷ್ಟೆ ಅಲ್ಲ, ಅವರು ಪಾಪ ಕರ್ಮದ ಪ್ರತಿಕ್ರಿಯೆಗಳಿಂದಲೂ ಮುಕ್ತರಾಗುವರು.

ನಾವು ನಮ್ಮ ದೇಹಗಳ ಮೇಲೆ ತಿಲಕವನ್ನು ಧರಿಸಿಕೊಂಡಾಗ, ಭಗವಂತನು ನಮ್ಮನ್ನು ಎಲ್ಲ ಕಡೆಯಿಂದಲೂ ರಕ್ಷಿಸುತ್ತಾನೆ. ಶ್ರೀಲ ಪ್ರಭುಪಾದರು ತಮ್ಮ ಒಬ್ಬ ಶಿಷ್ಯೆಗೆ ತಿಲಕ ದಾಸಿ ಎಂಬ ಹೆಸರು ನೀಡಿದಾಗ, ತಿಲಕ ಎಂದರೆ `ವಿಜಯವೇ ಸಾಕಾರಗೊಂಡಂತೆ’ ಎಂದು ಹೇಳಿದ್ದರು.

ಯಾವಾಗ ತಿಲಕ ಧರಿಸಬೇಕು?

ನೀವು ಯಾವ ಸಮಯದಲ್ಲಾದರೂ ತಿಲಕವನ್ನು ಧರಿಸಬಹುದಾದರೂ ಸ್ನಾನವಾದ ಕೂಡಲೇ ಧರಿಸುವುದು ಅತ್ಯುತ್ತಮ. ಮುಖ್ಯವಾಗಿ, ಪೂಜೆ ಮಾಡುವಾಗ ತಿಲಕ ಧರಿಸುವುದು ಸೂಕ್ತ. ಕುಟುಂಬದಲ್ಲಿ ಪೂಜೆ ನಡೆಸುವಾಗ ಎಲ್ಲರೂ ತಿಲಕ ಹಾಕಿಕೊಳ್ಳಬಹುದು ಅಥವಾ ಆರತಿ ಮಾಡುವವರಾದರೂ (ಪೂಜಾರಿ) ತಿಲಕ ಹಾಕಿಕೊಳ್ಳಬೇಕು. ಮಂದಿರಕ್ಕೆ ಭೇಟಿ ನೀಡುವಾಗ ಅಥವಾ ರಥಯಾತ್ರೆಯಂತಹ ಉತ್ಸವಗಳಲ್ಲಿ ಭಾಗವಹಿಸುವಾಗ ತಿಲಕ ಹಾಕಿಕೊಳ್ಳಬಹುದು.

ತಿಲಕವನ್ನು ಧರಿಸುವ ಒಂದು ಮುಖ್ಯವಾದ ಸಮಯವೆಂದರೆ ಸಾವಿನ ಕಾಲದಲ್ಲಿ. ಯಾರಾದರೂ ಸಾಯುವ ಮುನ್ನ ಅಥವಾ ಸಾವಿನ ಅನಂತರದ ಸಮಯದಲ್ಲಿ ಅವರಿಗೆ ತಿಲಕ ಹಾಕಿದರೆ ಅವರು ಶಾಶ್ವತ ಫಲ ಪಡೆಯುವರು. ನಿಜ, ಸಾವು ಯಾವ ಕ್ಷಣದಲ್ಲಾದರೂ ಬರಬಹುದು. ಆದುದರಿಂದ ಯಾವಾಗಲೂ ತಿಲಕ ಧರಿಸುವುದು ವಿವೇಕ.

ಸಂಕೋಚ ಬೇಡ

ಸಾರ್ವಜನಿಕವಾಗಿ ತಿಲಕ ಧರಿಸುವುದು ನಿಮಗೆ ಸಂಕೋಚವೆನ್ನಿಸಬಹುದು. ಆದರೆ ಬೇರೆಯವರು ಏನಂದುಕೊಳ್ಳುತ್ತಾರೆಂಬ ಬಗೆಗೆ ಅವಸರದ ತೀರ್ಮಾನ ಬೇಡ. ಶ್ರೀಲ ಪ್ರಭುಪಾದರು ಕಥೆಯೊಂದನ್ನು ಹೇಳಿರುವರು. ಭಾರತದ ಕಾರ್ಖಾನೆಯೊಂದರಲ್ಲಿ ಬಹುತೇಕ ಎಲ್ಲ ಹಿಂದೂ ಕಾರ್ಮಿಕರು ತಿಲಕ ಇಟ್ಟುಕೊಂಡು ಕೆಲಸಕ್ಕೆ ಬರುವುದು ರೂಢಿಯಾಗಿತ್ತು. ತಿಲಕ ಇಟ್ಟುಕೊಂಡವರು ಕೆಲಸ ಕಳೆದುಕೊಳ್ಳುತ್ತಾರೆ ಎಂದು ಅವರ ಹೊಸ ಮೇಲಧಿಕಾರಿ, ಒಬ್ಬ ಮುಸಲ್ಮಾನ ಅಧಿಕಾರಿ, ಹೇಳಿದಾಗ,  ಮರುದಿನ ಒಬ್ಬನನ್ನು ಬಿಟ್ಟರೆ ಉಳಿದವರೆಲ್ಲರೂ ಖಾಲಿ ಹಣೆಯಲ್ಲಿ ಕೆಲಸಕ್ಕೆ ಬಂದರು. ಆಗ ಮಾಲೀಕನು ಎಲ್ಲರನ್ನು ಸಭೆಗೆ ಕರೆದನು. ಈ ಒಬ್ಬ ಧೈರ್ಯವಂತನಿಗೆ ಮಾತ್ರ ತಿಲಕ ಇಟ್ಟುಕೊಂಡು ಬರಲು ಅವಕಾಶ ನೀಡಲಾಗುವುದು ಎಂದು ಮಾಲೀಕನು ಪ್ರಕಟಿಸಿದನು.

ವಿವಿಧ ಮಾದರಿಯ ತಿಲಕ

ಭಾರತದಲ್ಲಿ  ನೀವು ಜನರ ಹಣೆ ಮತ್ತು ದೇಹದ ಭಾಗಗಳಲ್ಲಿ ವೈವಿಧ್ಯಮಯವಾದ ತಿಲಕಗಳಿರುವುದನ್ನು ನೋಡುವಿರಿ. ಅಂತಹ ಚಿಹ್ನೆಗಳು ಅವರು ನಿರ್ದಿಷ್ಟ ಗುಂಪಿಗೆ ಸೇರಿರುವುದನ್ನು ಮತ್ತು ದೇವರು ಅಥವಾ ದೇವತೆಗಳ ಕೆಲವು ರೂಪಗಳಲ್ಲಿ ಅವರಿಗಿರುವ ಶ್ರದ್ಧೆಯನ್ನು ಸೂಚಿಸುತ್ತದೆ. ವಿಶಾಲ ದೃಷ್ಟಿಯಿಂದ ಹೇಳುವುದಾದರೆ, ಎರಡು ವಿಧದ ತಿಲಕವನ್ನು ನೋಡುವಿರಿ : ವೈಷ್ಣವರ ಅಥವಾ ಕೃಷ್ಣ ಮತ್ತು ಅವನ ಅವತಾರದ ಭಕ್ತರ ಲಂಬ ರೇಖೆ ಗುರುತು ಅಥವಾ ಮುದ್ರೆ (ಊರ್ಧ್ವಪುಂಡ್ರ). ಮತ್ತೊಂದು, ಶಿವ ಮತ್ತು ನಿರಾಕಾರವಾದಿಗಳ ಗುಂಪಿಗೆ ನಿಷ್ಠೆ ಹೊಂದಿರುವ ಶೈವರ ಮೂರು ಅಡ್ಡ ಗೆರೆ (ತಿರ್ಯಕ್‌ಪುಂಡ್ರ).

ವೈಷ್ಣವರಲ್ಲಿ ಅವರ ತಿಲಕದ ವಿಧದಿಂದ ಗುರುತಿಸುವ ಅನೇಕ ಉಪ ಗುಂಪುಗಳಿವೆ : ಅದು ಅದರ ಆಕಾರ, ಬಣ್ಣ ಮತ್ತು ಅದನ್ನು ತಯಾರಿಸಲು ಬಳಸುವ ವಸ್ತು. ಹರೇ ಕೃಷ್ಣ ಆಂದೋಲನದಲ್ಲಿ ಭಕ್ತರು ಧರಿಸುವ ತಿಲಕವು ನಾವು ಶ್ರೀ ಚೈತನ್ಯ ಮಹಾಪ್ರಭುಗಳ ಪರಂಪರೆಯಲ್ಲಿ ಇರುವುದನ್ನು ಸೂಚಿಸುತ್ತದೆ. ಈ ತಿಲಕದ ಎರಡು ಗೆರೆಗಳು ಶ್ರೀಕೃಷ್ಣನ ಹೆಜ್ಜೆ ಗುರುತನ್ನು ಸೂಚಿಸುತ್ತದೆ. ಮೂಗಿನ ಮೇಲಿನ ಎಲೆ ಆಕಾರದ ಭಾಗವು ಕೃಷ್ಣನ ಪ್ರೀತಿಯ ತುಳಸಿದಳವನ್ನು ಪ್ರತಿನಿಧಿಸುತ್ತದೆ.

ಎರಡು ಗೆರೆಗಳು ರಾಧಾ ಕೃಷ್ಣ ಮಂದಿರದ ಗೋಡೆಗಳನ್ನೂ ಸೂಚಿಸಬಹುದು ಮತ್ತು ಗೆರೆಗಳ ಮಧ್ಯದಲ್ಲಿನ ಸ್ಥಳವು ರಾಧಾ ಮತ್ತು ಕೃಷ್ಣರ ಧಾಮವನ್ನು ಸೂಚಿಸಬಹುದು. ಇತರ ವೈಷ್ಣವರಿಗೆ ಎರಡು ಗೆರೆಗಳು ಬ್ರಹ್ಮ ಮತ್ತು ಶಿವರನ್ನು ಸೂಚಿಸಬಹುದು ಮತ್ತು ಮಧ್ಯದ ಸ್ಥಳವು ವಿಷ್ಣುವಿನ ಧಾಮವನ್ನು ಸೂಚಿಸಬಹುದು. ಮಧ್ಯದಲ್ಲಿನ ಕೆಂಪು ರೇಖೆಯು ವಿಷ್ಣುವಿನ ಸತಿ ಲಕ್ಷ್ಮಿಯನ್ನು ಪ್ರತಿನಿಸಬಹುದು. ಎರಡು ಗೆರೆಗಳು ಯಮುನೆಯ ದಡವನ್ನೂ ಸೂಚಿಸಬಹುದು. ಅಥವಾ ಅವು ರಾಮ ಮತ್ತು ಲಕ್ಷ್ಮಣರು ಸೀತೆಯ ಇಕ್ಕೆಲದಲ್ಲಿ ನಿಂತಿರುವುದನ್ನೂ ಸೂಚಿಸಬಹುದು. ತಿಲಕದ ತಳದ ಗೆರೆಯು ಭಕ್ತನಾದ ಹನುಮಂತನು ಅವರ ಪಾದದ ಬಳಿ ಮಂಡಿಯೂರಿರುವುದನ್ನು ಪ್ರತಿನಿಧಿಸಬಹುದು. ತಿಲಕದ ಶೈಲಿಯು ವೈವಿಧ್ಯಮಯ ಮತ್ತು ಅವುಗಳ ಹಿಂದಿನ ಅರ್ಥಗಳೂ ಕೂಡ ವೈವಿಧ್ಯಮಯ.

ತಿಲಕವನ್ನು ಮಾಡುವುದು ಹೇಗೆ?

ಇಸ್ಕಾನ್‌ ಭಕ್ತರು ಸಾಮಾನ್ಯವಾಗಿ ದ್ವಾರಕೆಯ ಸಮೀಪ ಇರುವ ಪವಿತ್ರ ಕೊಳದಿಂದ ತರುವ ಕೆನೆಬಣ್ಣದ ಮೃತ್ತಿಕೆ, ಗೋಪೀಚಂದನದಿಂದ ತಮ್ಮ ತಿಲಕವನ್ನು ತಯಾರಿಸಿಕೊಳ್ಳುತ್ತಾರೆ. ಕೃಷ್ಣನ ಶ್ರೇಷ್ಠ ಭಕ್ತರಾದ ಗೋಪಿಯರು ಈ ಸರೋವರಕ್ಕೆ ಭೇಟಿ ನೀಡಿದ್ದರು. ನಿಮ್ಮ ಸ್ಥಳೀಯ ದೇವಸ್ಥಾನ ಅಥವಾ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವ ಅಂಗಡಿಗಳಿಂದಲೂ ಇದನ್ನು ಪಡೆಯಬಹುದು. ಇಲ್ಲವಾದರೆ, ವೃಂದಾವನ ಅಥವಾ ಇನ್ನಾವ ಪವಿತ್ರ ಸ್ಥಳದಿಂದಲೂ ಪಡೆಯಬಹುದು. ಕುಂಬಾರನ ಮಣ್ಣನ್ನು ಕೂಡ ಬಳಸಬಹುದು. ವೈಷ್ಣವ ಆಚರಣೆಗಳನ್ನು ಕುರಿತ ಶ್ರೀಲ ಸನಾತನ ಗೋಸ್ವಾಮಿ ಅವರ ಗ್ರಂಥ ಹರಿ ಭಕ್ತಿ ವಿಲಾಸದ ಪ್ರಕಾರ, ತಿಲಕಕ್ಕೆ ಯಾವುದೇ ವಿಧದ ಮೃತ್ತಿಕೆಯನ್ನು ಬಳಸಬಹುದು, ಮುಖ್ಯವಾಗಿ ನದಿ ದಡ ಅಥವಾ ತುಳಸಿ ಗಿಡದ ಕೆಳಗಿನ ಮಣ್ಣನ್ನು ಬಳಸಬಹುದು.

ನಿಮ್ಮ ಎಡ ಅಂಗೈನಲ್ಲಿ ಸ್ವಲ್ಪ ನೀರು ಹಾಕಿಕೊಳ್ಳಿ ಮತ್ತು ಅದರ ಮೇಲೆ ತಿಲಕ ಮಣ್ಣಿನ ಕಲ್ಲು ಅಥವಾ ಮುದ್ದೆಯನ್ನು ಹೊರಳಿಸಿ. ಮೃದುವಾದ ಪೇಸ್ಟ್‌ ಬರುವವರೆಗೆ. ಇದನ್ನು ಮಾಡುವಾಗ ಹರೇ ಕೃಷ್ಣ ಮಂತ್ರವನ್ನು ಜಪಿಸಿ.

ತಿಲಕವನ್ನು ಹೇಗೆ ಧರಿಸುವುದು

ನಿಮ್ಮ ಬಲಗೈ ಉಂಗುರದ ಬೆರಳಿನಿಂದ ತಿಲಕವನ್ನು ಹಾಕಿಕೊಳ್ಳಿ. ನಿಮ್ಮ ಹುಬ್ಬುಗಳ ನಡುವಣ ಜಾಗದಷ್ಟು ಅಗಲವಾಗಿ ಹಣೆಯಲ್ಲಿ ಗುರುತು ಮಾಡಿಕೊಳ್ಳಿ. ಎರಡು ಲಂಬ ರೇಖೆಗಳನ್ನು ರೂಪಿಸಲು ಬಹುಶಃ ಕಿರು ಬೆರಳನ್ನು ಉಪಯೋಗಿಸಿ ಮಧ್ಯದಲ್ಲಿ ಸ್ಪಷ್ಟ ಜಾಗವನ್ನು ಮಾಡಿಕೊಳ್ಳಿ. ಈ ಗೆರೆಗಳು ಸೊಟ್ಟಗಾದರೆ, ನೀವು ಮೂರನೆಯ ಬೆರಳನ್ನು ಉಪಯೋಗಿಸಿ ಅದನ್ನು ನೇರ ಗೆರೆ ಮಾಡಬಹುದು. ಈಗ ಎಲೆ ಆಕಾರದ ಗುರುತು ಮಾಡಿ. ಹಣೆಗೆ ತಿಲಕ ಹಾಕಿಕೊಂಡ ಮೇಲೆ ದೇಹದ ಉಳಿದ 11 ಭಾಗಗಳಲ್ಲಿ ತಿಲಕವನ್ನು ಹಾಕಿಕೊಳ್ಳುತ್ತಿದ್ದಂತೆಯೇ ವಿಷ್ಣುವಿನ ಸೂಕ್ತ ಹೆಸರುಗಳನ್ನು ಹೇಳುತ್ತ ತಿಲಕವನ್ನು ಧರಿಸಿ, ಓಂ ಕೇಶವಾಯ ನಮಃ ಎಂದರೆ “ಓ ನನ್ನ ದೇವರೇ, ಕೇಶವ,  ನಾನು ನಿನಗೆ ನನ್ನ ಗೌರವಪೂರ್ಣ ಪ್ರಣಾಮಗಳನ್ನು ಸಲ್ಲಿಸುವೆ.” ಹೀಗೆ ನಾವು ನಮ್ಮ ದೇಹದಲ್ಲಿ ಚಿಹ್ನೆ ಹಾಕಿಕೊಳ್ಳುತ್ತಿದ್ದಂತೆ ನಾವು ಅವನ ಹೆಸರುಗಳಲ್ಲಿ 12 ಅನ್ನು ಹೇಳುತ್ತೇವೆ.

ತಿಲಕಕ್ಕಾಗಿ ಮೃತ್ತಿಕೆ ಸಿಗದಿದ್ದರೆ (ಅಥವಾ ನಿಮ್ಮ ಮೇಲಧಿಕಾರಿಗೆ ನೀವು ತಿಲಕ ಹಾಕಿಕೊಳ್ಳುವುದು ಸರಿ ಎನಿಸದಿದ್ದರೆ), ನೀವು  ನೀರು ಬಳಸಿ ಇದೇ ವಿಧಾನದಲ್ಲಿ ಸಾಗಬಹುದು. ವಿಗ್ರಹಕ್ಕೆ ಅಭ್ಯಂಜನ ಮಾಡಿದ ಅಥವಾ ಹರೇ ಕೃಷ್ಣ  ಮಹಾ ಮಂತ್ರವನ್ನು ಹೇಳುತ್ತ ಪವಿತ್ರಗೊಳಿಸಿದ ಜಲವನ್ನೇ ಬಳಸಿ.

ತಿಲಕವನ್ನು ಹಾಕಿಕೊಳ್ಳುವಾಗ ಈ ಮಂತ್ರಗಳನ್ನು ಜಪಿಸಬೇಕು :

1.  ಓಂ ಕೇಶವಾಯ ನಮಃ

2. ಓಂ ನಾರಾಯಣಾಯ ನಮಃ

3. ಓಂ ಮಾಧವಾಯ ನಮಃ

4. ಓಂ ಗೋವಿಂದಾಯ ನಮಃ

5. ಓಂ ವಿಷ್ಣವೇ ನಮಃ

6. ಓಂ ಮಧುಸೂದನಾಯ ನಮಃ

7. ಓಂ ತ್ರಿವಿಕ್ರಮಾಯ ನಮಃ

8. ಓಂ ವಾಮನಾಯ ನಮಃ

9. ಓಂ ಶ್ರೀಧರಾಯ ನಮಃ

10. ಓಂ ಹೃಷೀಕೇಶಾಯ ನಮಃ

11. ಓಂ ಪದ್ಮನಾಭಾಯ ನಮಃ

12. ಓಂ ದಾಮೋದರಾಯ ನಮಃ

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi