ಪರಮೌಷಧ ಇಲ್ಲಿದೆ

ದೇಹವನ್ನು ಗುಣಪಡಿಸುವವರಲ್ಲಿ ನಾವು ನಂಬಿಕೆ ಇಡುತ್ತೇವೆ.
ಆದರೆ ಆತ್ಮದ ನಿಜವಾದ ವೈದ್ಯನಲ್ಲಿ ನಮಗೆ ನಂಬಿಕೆ ಇಲ್ಲ.

ಭಾಗವತದ ಐದನೆಯ ಸ್ಕಂಧದಲ್ಲಿ ಜಡಭರತ ಮತ್ತು ರಹೂಗಣ ಮಹಾರಾಜರ ಪ್ರಸಂಗ ಬರುತ್ತದೆ. ಜಡಭರತನ ಮಾತು ಕೇಳಿದ ರಹೂಗಣ ಹೇಳುತ್ತಾನೆ,  “ನನ್ನ ಮನಸ್ಸನ್ನು ನಿರ್ಬಂಧಿಸಿರುವ ಲೌಕಿಕ ಗ್ರಹಿಕೆಗಳಿಂದಾಗಿ ನಾನು ರೋಗಗ್ರಸ್ತನಾಗಿದ್ದೇನೆ. ಭೌತಿಕ ವಸ್ತುವಿನಿಂದ ಮಾಡಿರುವ ನನ್ನ ದೇಹವು ಕಲ್ಮಷಗಳಿಂದ ತುಂಬಿದೆ. ನನ್ನ ದೃಷ್ಟಿಯು ಗರ್ವದಿಂದ ಮಾಲಿನ್ಯಗೊಂಡಿದೆ. ಸರ್ಪದಿಂದ ಕಚ್ಚಿಸಿಕೊಂಡವರಿಗೆ ಲಸಿಕೆಯಂತೆ ನಿನ್ನ ಅಮೃತದಂತಹ ಮಾತುಗಳು ನನಗೆ ಯೋಗ್ಯ ಔಷಧಗಳಾಗಿವೆ. ತಂಪಾದ ನೀರಿನಂತೆ ನಿನ್ನ ಉಪದೇಶಗಳು ಲೌಕಿಕ ಬಂಧನದ ದಹಿಸುವ ಜ್ವರದಿಂದ ಬಳಲಿದವನಿಗೆ ಉಪಶಮನ ಕೊಡುತ್ತವೆ.”

ಕ್ಯಾನ್ಸರ್‌ನಂತಹ ಮಾರಕ ರೋಗ ಪೀಡಿತರು ಯಾರಾದರೂ ನಿಮಗೆ ಗೊತ್ತೆ? ನಿಜ, ಸಾವು ಎಲ್ಲರಿಗೂ ನಿಶ್ಚಿತವಾಗಿರುವುದರಿಂದ ಪ್ರತಿಯೊಬ್ಬರದೂ ಮಾರಕ ಸ್ಥಿತಿಯೇ. ಆದರೂ ಎಲ್ಲರಿಗೂ ಪೂರ್ಣಾವಧಿ ಬದುಕಬೇಕೆಂಬ ಬಯಕೆ ಉಂಟು. ಅಭಿವೃದ್ಧಿ ಹೊಂದಿದ ಜಗತ್ತಿನಲ್ಲಿ ದೀರ್ಘಾವಧಿ ಜೀವಿಸುವುದು ನಮ್ಮ ಹಕ್ಕು ಎಂದು ನಾವು ನಿರೀಕ್ಷಿಸುತ್ತೇವೆ.  ಸಾಕಷ್ಟು ಆರ್ಥಿಕ ಶಕ್ತಿ ಇರುವ ವಿದ್ಯಾವಂತ ವ್ಯಕ್ತಿಗೆ ತನ್ನ ಸಾವು ಸಮೀಪದಲ್ಲಿದೆ ಎಂದು ವೈದ್ಯಕೀಯ ತಪಾಸಣೆಯಿಂದ ತಿಳಿದುಬಂದರೆ ಏನಾದೀತೆಂದು ಸ್ವಲ್ಪ ಯೋಚಿಸಿ ನೋಡಿ. ಆರಂಭದ ಆಘಾತ ಕಡಿಮೆಯಾದಾಗ ವ್ಯಕ್ತಿಯು ಅತ್ಯುತ್ತಮ ವೈದ್ಯನಿಗಾಗಿ ಹುಡುಕಾಟ ಆರಂಭಿಸುತ್ತಾನೆ. ಪವಾಡ ಸದೃಶ ಗುಣಮುಖಕ್ಕಾಗಿ ವಿಜ್ಞಾನದ ಸಾಧನೆಗಳು ಹೊಸ ಅನ್ವೇಷಣೆಗಳನ್ನು ನಿರಂತರವಾಗಿ ನೀಡುತ್ತಿವೆ ಎಂದು ನಂಬುವಂತೆ ನಮಗೆಲ್ಲ ತರಬೇತಿ ನೀಡಲಾಗಿದೆ.

ಕಾತರ

ಒಬ್ಬ ಶ್ರೀಮಂತ ರೋಗಿಯು ಪ್ರತಿಯೊಂದು ಸೂಚನೆ, ಸಲಹೆಗಳನ್ನೂ ಕಾತರದಿಂದ ಸಂಶೋಧಿಸುತ್ತಾನೆ. ಅಮೆರಿಕದ ಖ್ಯಾತ ಬ್ಯಾಸ್ಕೆಟ್‌ಬಾಲ್‌ ಆಟಗಾರ ಮ್ಯಾಜಿಕ್‌ ಜಾನ್ಸನ್‌ ಅವರ ಉದಾಹರಣೆಯನ್ನೇ ನೋಡಿ.  ತನಗೆ ಏಡ್ಸ್‌ ಇದೆ ಎಂದು ತಿಳಿದ ಕೂಡಲೇ ಅವನು ಅಮೆರಿಕದಲ್ಲಿ ಇರುವ ನುರಿತ ಏಡ್ಸ್‌ ತಜ್ಞರನ್ನು ಪತ್ತೆ ಮಾಡಲು ಸಾಕಷ್ಟು ಹಣ ವೆಚ್ಚಮಾಡಿದನು.

ಮೂಳೆ ಕ್ಯಾನ್ಸರ್‌ ಇದೆ ಎಂದುಕೊಳ್ಳಿ. ಅದೃಷ್ಟವಶಾತ್‌ ಸ್ನೇಹಿತರು ಪರ್ಯಾಯ ವೈದ್ಯ ಕ್ಷೇತ್ರದ ವೈದ್ಯರೊಬ್ಬರ ಯಶಸ್ಸಿನ ಬಗೆಗೆ ಹೇಳುತ್ತಾರೆ. ಈ ವೈದ್ಯರು ತಮ್ಮ ತೀವ್ರವಾದ ಚಿಕಿತ್ಸೆ ವಿಧಾನಗಳಿಗೆ ಒಪ್ಪುವ ರೋಗಿಗಳ ಕ್ಷೀಣ ಸ್ಥಿತಿಯನ್ನೇ ತಿರುಗಾ ಮುರುಗಾ ಮಾಡುವ ಅಪೂರ್ವ ಯಶಸ್ಸು ಸಾಧಿಸಿದ್ದಾರೆ ಎಂದೂ ನಿಮಗೆ ನಿಮ್ಮ ಮಿತ್ರರು ಹೇಳುತ್ತಾರೆ. ವೈದ್ಯರ ಚಿಕಿತ್ಸೆ ಕೇಂದ್ರಕ್ಕೆ ಬಂದಾಗ ನಿಮ್ಮ ಮನಸ್ಥಿತಿ ಏನೆಂಬುದನ್ನು ಸುಮ್ಮನೆ ಕಲ್ಪಿಸಿಕೊಳ್ಳಿ : “ಡಾಕ್ಟರ್‌, ನಾನು ನಿಮ್ಮ ವಿಶೇಷ ಚಿಕಿತ್ಸೆ ಮತ್ತು ಅದರ ಅಸಾಮಾನ್ಯ ಸಾಧ್ಯತೆಗಳ ಬಗೆಗೆ ತುಂಬ ಕೇಳಿರುವೆ. ನನ್ನ ವೈದ್ಯರು ನನಗೆ ಬದುಕುವ ಸಂಭವವೇ ಇಲ್ಲ ಎಂದಿದ್ದಾರೆ. ಆದರೆ ನನ್ನ ಜೀವ ಉಳಿಸುವ ನಿಮ್ಮ ಯಾವುದೇ ಸಲಹೆಯನ್ನೂ ನಾನು ಪಾಲಿಸಲು ಸಿದ್ಧ. ಪರ್ಯಾಯ ಚಿಕಿತ್ಸಾ ವಿಧಾನ ಕುರಿತ ಎಲ್ಲ ಪತ್ರಿಕೆಗಳಲ್ಲಿ ನಿಮ್ಮ ಕೀರ್ತಿಯು ಜನಪ್ರಿಯವಾಗಿದೆ. ದಯೆಯಿಟ್ಟು ನನಗೆ ಚಿಕಿತ್ಸೆ ನೀಡಿ. ಕೊನೆ ಪಕ್ಷ ಕಾಯುವವರ ಪಟ್ಟಿಯಲ್ಲಾದರೂ ಅವಕಾಶ ನೀಡಿ. ನಾನು ನನ್ನ ಬದುಕಿನ ಶೈಲಿಯನ್ನು ಎಷ್ಟೇ ಬದಲಿಸಬೇಕಾದರೂ ಪರವಾಗಿಲ್ಲ, ನಿಮ್ಮ ಪ್ರತಿಯೊಂದು ಸೂಚನೆಯನ್ನೂ ಸಂಪೂರ್ಣವಾಗಿ ಪಾಲಿಸುವೆನೆಂದು ನಿಮಗೆ ಆಶ್ವಾಸನೆ ನೀಡುವೆ.”

ಆಶಯದ ಚಿಕಿತ್ಸೆ

ಪರ್ಯಾಯ ವೈದ್ಯ ಮತ್ತು ಲೇಖಕ ಬರ್ನಿ ಎಸ್‌. ಸೈಗಲ್‌ ನಿರ್ದಿಷ್ಟ ಮನೋಭಾವದ ಚಿಕಿತ್ಸಾ ಕ್ರಮವನ್ನು ಶಿಫಾರಸು ಮಾಡುತ್ತಾರೆ. ಅದನ್ನು ಅವರು “ಆಶಯವೇ ಚಿಕಿತ್ಸಕ” ಎಂದು ಕರೆಯುತ್ತಾರೆ. ಎಕ್ಸ್‌ ಸಂಖ್ಯೆಯಷ್ಟು ಮಾರಕ ಲಕ್ಷಣಗಳಿರುವ ವ್ಯಕ್ತಿಯು ವೈ ತಿಂಗಳುಗಳೊಳಗೆ ಸಾಯುತ್ತಾನೆಂದುಕೊಳ್ಳಿ. ಆದರೂ ಸೈಗಲ್‌ ಆ ರೋಗಿಗೆ ವಿಶೇಷ ಚಿಕಿತ್ಸೆ ಸಾಧ್ಯತೆಗಳ ಬಗೆಗೆ ಹೇಳುತ್ತಾರೆ. ನೀವು ನಿಮ್ಮ ಮನೋಭಾವವನ್ನು ಬದಲಿಸಿಕೊಂಡರೆ ನೀವು ವಿಶೇಷ ವ್ಯಕ್ತಿಗಳಲ್ಲಿ ಒಬ್ಬರಾಗಬಹುದು. ಪ್ರೀತಿ, ನಗೆಯನ್ನು ಪ್ರತಿಪಾದಿಸುವ ಅವರು ನಿಮಗೆ ಇಷ್ಟವಾದುದನ್ನು ಮಾಡುವಂತೆ ಹೇಳುತ್ತಾರೆ. ಮುಖ್ಯವಾಗಿ ನೀವು `ಗರಿಷ್ಠ ಪ್ರಮಾಣದವರೆಗೆ ಬದುಕಬೇಕು.’ ಆಗ ನೀವು ಸಂಪೂರ್ಣ ಉಪಶಮನ ಅಥವಾ ಕೊನೆಪಕ್ಷ ಭಾಗಶಃ ಕಡಮೆ ಗುಣಮುಖಕ್ಕಾದರೂ ಅರ್ಹರಾಗಬಹುದು. ಸಹಜವಾಗಿ ಜನರು ಅವರ ಬಳಿಗೆ ವೈಯಕ್ತಿಕ ಸಲಹೆ, ವೈದ್ಯ ಉಪಚಾರಕ್ಕೆಂದು ಧಾವಿಸಿ ಬರುತ್ತಾರೆ.

ತಮ್ಮನ್ನು ಪಕ್ಕಾ ಆಶಾವಾದಿ ಎಂದು ಸೈಗಲ್‌ ಕರೆದುಕೊಳ್ಳುವುದಿಲ್ಲ. ಜನರಿಗೆ ಬದುಕಲು ಸಹಾಯ ಮಾಡಲೆಂದು ತಾವು ತರಬೇತಿ ಪಡೆದಿರುವುದಾಗಿ ಅವರು ವೈದ್ಯ ಶಿಕ್ಷಣ ಪೂರ್ಣಗೊಂಡಾಗ  ಭಾವಿಸಿದ್ದರು. ಆದರೆ ವಾಸ್ತವವಾಗಿ ಎಲ್ಲರೂ ಸಾಯುತ್ತಾರೆ ಎಂಬುವುದನ್ನು ಅವರು ತಮ್ಮ ವೈದ್ಯ ವೃತ್ತಿಯ ಆರಂಭದಲ್ಲಿಯೇ ಕಂಡುಕೊಂಡರು. ಆದುದರಿಂದ ಬದುಕಿನ ನೋವಿನ ಮಧ್ಯೆ ಸ್ವಲ್ಪವಾದರೂ ಸಂತೋಷವನ್ನು ಹರಡುವುದು ತಮಗೆ ಸಾಧ್ಯವಾದರೆ, ಮಾನವ ಸಮಾಜಕ್ಕೆ ತಾವು ವಿಶಿಷ್ಟ ಕೊಡುಗೆ ನೀಡಿದಂತೆ ಎಂದು ಅವರು ಭಾವಿಸಿದರು. “ನಾನು ವಾಸ್ತವವಾದಿ. ಮುಂದೆ ನೋವು ಮತ್ತು ಕಷ್ಟವಿದೆ ಎಂದು ನನಗೆ ಗೊತ್ತು. ಆದರೆ ನಾನು ಸಂತೋಷವನ್ನು ಆಯ್ಕೆ ಮಾಡಿಕೊಳ್ಳುವೆ. ಜೊಸೆಫ್‌ ಕ್ಯಾಂಪ್‌ಬೆಲ್‌ ಹೇಳಿದಂತೆ `ಜಗತ್ತಿನ ನೋವಿನಲ್ಲಿ ಆನಂದದಿಂದ ಪಾಲ್ಗೊಳ್ಳಲು ನಾನು ಇಲ್ಲಿ ಇರುವೆ.’ ಬದುಕು ಕಠಿಣ, ಆದರೆ ನಾನು ಇಲ್ಲಿ ಅಲ್ಪ ಕಾಲದವರೆಗೆ ಮಾತ್ರ ಇರುವುದರಿಂದ ಸಂತೋಷವನ್ನು ಆಯ್ಕೆಮಾಡಿಕೊಂಡಿರುವೆ. ನಾವೆಲ್ಲರೂ ಅದನ್ನೇ ಆಯ್ಕೆ ಮಾಡಿಕೊಳ್ಳಬೇಕು. ಇಲ್ಲವಾದರೆ ನಾವು ಬದುಕಿಗೆ ಕೃತಜ್ಞರಾಗಿರುವುದಿಲ್ಲ ಅಥವಾ ಸುಖವಾಗಿಯೂ ಇರುವುದಿಲ್ಲ.”

ಸೈಗಲ್‌ನ ಪುಸ್ತಕದ ಮಾರಾಟವನ್ನು ಗಮನಿಸಿ ತೀರ್ಮಾನಿಸುವುದಾದರೆ, ಜನರು ಅವರ ಪ್ರಯತ್ನಗಳನ್ನು ಮೆಚ್ಚಿದ್ದಾರೆ. ದೀಪಕ್‌ ಚೋಪ್ರ, ಲಾರಿ ದೋಸ್ಸೆ, ಆಂಡ್ರೂ ವೈಲ್‌ ಅವರುಗಳಂತಹ ಪರ್ಯಾಯ ವೈದ್ಯ ಲೇಖಕರಂತೆ ಸೈಗಲ್‌ ಕೂಡ ವೈದ್ಯ ಮತ್ತು ರೋಗಿ ಮಧ್ಯೆ ಪರಸ್ಪರ ಪ್ರೀತಿ ಮತ್ತು ವಿಶ್ವಾಸದ ಬಾಂಧವ್ಯವನ್ನು ಪ್ರತಿಪಾದಿಸುತ್ತಾರೆ. ವೈದ್ಯರು ರೋಗಿಯ ಆಂತರಿಕ ಸ್ವಭಾವದೊಂದಿಗೆ ಸ್ಪಂದಿಸಬೇಕು. ಇದರಿಂದ ಗುಣಮುಖವಾಗುವ ವಿಧಾನಕ್ಕೆ ತುಂಬ ಮುಖ್ಯವಾದ ಆಂತರಿಕ ಶಕ್ತಿಯು ಬಲಗೊಳ್ಳುತ್ತದೆ.

ಸೂಕ್ತ ಗ್ರಹಿಕೆ ಬೇಕು

ಸೈಗಲ್‌ ಮತ್ತು ಅವರ ವಿಧಾನಕ್ಕೆ ಇರುವ ನಿಷ್ಠೆಯನ್ನು ಪಾಶ್ಚಿಮಾತ್ಯ ಲೋಕವು ಸುಲಭವಾಗಿ ಒಪ್ಪಿಕೊಂಡಿದೆ. ರೋಗ ಮತ್ತು ಸಾವನ್ನು ಮುಂದೂಡುವ ವಿಷಯದಲ್ಲಿ ಜನಪ್ರಿಯರಾಗಿರುವ ವೈದ್ಯರನ್ನು ನಾವು ಆದರಿಸುತ್ತೇವೆ. ಆದರೆ ಅಲೌಕಿಕವಾದಿಯ ವಿಷಯದಲ್ಲಿ ಸಾರ್ವಜನಿಕರ ಧೋರಣೆ ಭಿನ್ನ. ನಿಜವಾದ ಆಧ್ಯಾತ್ಮಿಕ ಗುರುವನ್ನು ಹೇಗೆ ಪ್ರೋತ್ಸಾಹಿಸಬೇಕೆಂದು ಸಮಾಜಕ್ಕೆ ಗೊತ್ತಿಲ್ಲ. ಯೋಗ್ಯ ಆಧ್ಯಾತ್ಮಿಕ ಮಾರ್ಗದರ್ಶಕ ಮತ್ತು ವಿದ್ಯಾರ್ಥಿ ನಡುವಣ ಬಾಂಧವ್ಯದ ಆಯಾಮವನ್ನು ನಾವು ಅರ್ಥಮಾಡಿಕೊಂಡಿಲ್ಲ. ಅಥವಾ ಆ ಬಾಂಧವ್ಯದ ಧ್ಯೇಯವನ್ನೂ ನಾವು ಅರ್ಥಮಾಡಿಕೊಂಡಿಲ್ಲ.

ಪುರಾಣವನ್ನು ಜನಪ್ರಿಯಗೊಳಿಸಿರುವ ಸುಪ್ರಸಿದ್ಧ ಜೋಸೆಫ್‌ ಕ್ಯಾಂಪ್‌ಬೆಲ್‌ ಅವರ ಉದಾಹರಣೆಯನ್ನೇ ತೆಗೆದುಕೊಳ್ಳಿ. ಆಧ್ಯಾತ್ಮಿಕ ಮಾರ್ಗದರ್ಶಕರನ್ನು ಹುಡುಕುವ ಪಾಶ್ಚಿಮಾತ್ಯರ ಬಗೆಗೆ ವಾಖ್ಯಾನಿಸುತ್ತ, ಈ ವಿದ್ವಾಂಸರು ಹೇಳಿದ್ದಾರೆ, “ಇದು ಕೆಟ್ಟ ಸುದ್ದಿ ಎಂದು ನಾನು ಭಾವಿಸುತ್ತೇನೆ. ಶಿಕ್ಷಕರಿಂದ ನೀವು ಸೂಚನೆ ಪಡೆಯಬಹುದೆಂದು ನಾನು ನಿಜವಾಗಿಯೂ ಭಾವಿಸುತ್ತೇನೆ. ನಿಮಗೆ ಸಾಧ್ಯವೆಂದು ನನಗೆ ಗೊತ್ತು. ಆದರೆ, ನೊಡಿ, ಶಿಷ್ಯನು ತನ್ನ ಗುರುವಿಗೆ ಪೂರ್ಣವಾಗಿ ಶರಣಾಗಬೇಕೆಂಬುವುದು ಪರಂಪರೆಯ ಪ್ರಾಚೀನ ಕಲ್ಪನೆ. ವಾಸ್ತವವಾಗಿ ಗುರುವು ಶಿಷ್ಯನ ನೈತಿಕ ಜೀವನದ ಹೊಣೆ ಹೊರುತ್ತಾನೆ ಮತ್ತು ಅದು ಪೂರ್ಣವಾಗಿ ಅರ್ಪಿಸಿಕೊಂಡಂತೆ. ಪಶ್ಚಿಮದ ವ್ಯಕ್ತಿಗೆ ಅದು ಸೂಕ್ತವೆಂದು ನನಗನಿಸದು. ಪಶ್ಚಿಮಕ್ಕೆ ಇರುವ ದೊಡ್ಡ ಆಧ್ಯಾತ್ಮಿಕ ಸತ್ಯಗಳಲ್ಲಿ ಒಂದೆಂದರೆ ನಾವು ಪ್ರತಿಯೊಬ್ಬರೂ ಅಪೂರ್ವ ಸೃಷ್ಟಿಗಳು ಮತ್ತು ತತ್‌ಪರಿಣಾಮವಾಗಿ ಅಪೂರ್ವ ಪಥವಿದೆ.”

ತನ್ನ ಶಿಷ್ಯನನ್ನು ಪುನಃ ಪುನಃ ಜನ್ಮ, ರೋಗ, ವೃದ್ಧಾಪ್ಯ ಮತ್ತು ಸಾವಿನ ಚಕ್ರದಿಂದ ರಕ್ಷಿಸಲಾಗದವನು ಗುರುವಾಗಕೂಡದೆಂದು ಭಾಗವತವು ಎಚ್ಚರಿಕೆಯನ್ನು ನೀಡುತ್ತದೆ (5.5.18). ವಾಸ್ತವವಾಗಿ, ಈ ಮುಖ್ಯವಾದ ಕಾರ್ಯವನ್ನು ಮಾಡಲಾಗದವನು ತಂದೆ, ತಾಯಿ, ಪತಿ, ಪತ್ನಿ ಕೂಡ ಆಗಬಾರದೆಂದೂ ಭಾಗವತವು ಎಚ್ಚರಿಸುತ್ತದೆ. ಆದುದರಿಂದ ಗುರುವು ಎಲ್ಲ ಆಧ್ಯಾತ್ಮಿಕ ಅಗತ್ಯಗಳನ್ನು ಒದಗಿಸಬಲ್ಲನೆ ಎಂಬುವುದನ್ನು ವಿಚಾರಣೆ ಮಾಡದೆ ಆಧ್ಯಾತ್ಮಿಕ ಮಾರ್ಗದರ್ಶಕನ ಬೋಧನೆಯನ್ನು ಸ್ವೀಕರಿಸಬಾರದೆಂದು ಎಲ್ಲ ಕೃಷ್ಣ ಪ್ರಜ್ಞೆ ಸಾಹಿತ್ಯವು ಸಲಹೆ ಮಾಡುತ್ತದೆ. ಆದರೆ ಭೌತಿಕ ಅಸ್ತಿತ್ವದ ಗೆಡ್ಡೆಯನ್ನು (ಟ್ಯೂಮರ್‌) ನಿಜವಾಗಿಯೂ ಗುಣ ಪಡಿಸುವ ವೈದ್ಯನನ್ನು ಕಂಡಾಗ, ನೀವು ಯಾಕೆ ಪ್ರೀತಿ ಮತ್ತು ವಿಶ್ವಾಸದಿಂದ ಅವರಿಗೆ ಗೌರವ ಸಲ್ಲಿಸಬಾರದು?

ಶಾಶ್ವತ ಪರಿಹಾರ ಅಗತ್ಯ

ಕಠೋರ ಮತ್ತು ಸಂಕಟ ತುಂಬಿರುವ ಲೋಕದಲ್ಲಿ ನೋವನ್ನು ಶಮನಗೊಳಿಸುವುದನ್ನೇ ಬರ್ನಿ ಸೈಗಲ್‌ ಅವರಂತಹ ವೈದ್ಯರು ಅಪೇಕ್ಷಿಸುತ್ತಾರೆ. ನಿಶ್ಚಯವಾಗಿಯೂ ನಾವು ನಮ್ಮ ದೇಹಗಳನ್ನು ಆರೋಗ್ಯದಿಂದ ಇಟ್ಟುಕೊಂಡಿರಬೇಕು ಮತ್ತು ಪ್ರತಿಭಾಪೂರ್ಣ ವೈದ್ಯ ನೆರವಿಗೆ ನಾವು ಕೃತಜ್ಞರಾಗಿರಬೇಕು. ಆದರೆ ತಜ್ಞ ವೈದ್ಯರೂ ಕೂಡ ತಾತ್ಕಾಲಿಕ, ಅನಿಶ್ಚಿತ ಪರಿಸ್ಥಿತಿಯಲ್ಲಿ ಹಂಗಾಮಿ ಕ್ರಮಗಳನ್ನಷ್ಟೇ ನೀಡಬಲ್ಲರು ಎಂಬುವುದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಆನಂದದಂತೆ ಅನುಭವವಾಗುವ ಅಜ್ಞಾನದ ಅನುಸರಣೆಯಲ್ಲಿ ಅವರ  ನೆರವಿಗಾಗಿ ನಾವು ಅವರನ್ನು ಆರಾಧಿಸುತ್ತೇವೆ. ಮುಳುಗುತ್ತಿರುವ ವ್ಯಕ್ತಿಯು ಉಸಿರಾಡಲು ಹೆಣಗಾಡುತ್ತಿರುವಂತೆ ನಾವು ಹತಾಶೆಯಿಂದ ಅವರ ಮಾಗದರ್ಶನ ಕೋರುತ್ತೇವೆ. ಸುಮ್ಮನೆ, “ಡಾಕ್ಟರ್‌, ಬೇರೆ ಎಲ್ಲರೂ ವಿಫಲರಾಗಿರುವೆಡೆ ನೀವು ನನಗೆ ಸಹಾಯ ಮಾಡಬಲ್ಲಿರೆಂದು ನನಗೆ ಗೊತ್ತು. ನೀವು ಏನೇ ಸಲಹೆ ನೀಡಿದರೂ ತುಟಿ ಬಿಚ್ಚದೆ ಒಪ್ಪಿಕೊಳ್ಳುವೆ”ಎಂದು ಹೇಳುವಿರಿ.

ವಾಸ್ತವವಾಗಿ ಎಲ್ಲರೂ ಮಾರಕ ಸ್ಥಿತಿಯಲ್ಲಿಯೇ ಇರುತ್ತಾರೆ – ಸಾವಿನ ಪ್ರಮಾಣ ಶೇಕಡ 100. ಆದರೂ ವಿದ್ವತ್ಪೂರ್ಣ ಮತ್ತು ಜನಪ್ರಿಯವಾದ ತಪ್ಪು ಗ್ರಹಿಕೆಗಳಿಂದ ಬೆಳೆದಿರುವ ನಾವು ನಿಜವಾದ ಚಿಕಿತ್ಸೆ, ನಿಜವಾದ ಔಷಧದ ಮೌಲ್ಯಮಾಪನದಲ್ಲಿ ವಿಫಲರಾಗಿದ್ದೇವೆ ಮತ್ತು ಕೃಷ್ಣ ಪ್ರಜ್ಞೆಯ ಉಪಯೋಗವನ್ನು ಪಡೆದುಕೊಳ್ಳುವಲ್ಲಿಯೂ ವಿಫಲರಾಗಿದ್ದೇವೆ.

“ವೈದ್ಯರೇ, ನೀವೇ ಗುಣಮಾಡಿಕೊಳ್ಳಿ.” ಲೋಕದ ದುಃಖಗಳಲ್ಲಿ ಸಂತೋಷ ಎನ್ನಿಸಿಕೊಳ್ಳುವುದರಲ್ಲಿಯೇ ಏಕೆ ಸುಮ್ಮನೆ ಭಾಗಿಯಾಗಬೇಕು? ಭ್ರಮೆಯನ್ನು ಮೀರುವುದನ್ನು ಏಕೆ ಕಲಿಯಬಾರದು ಮತ್ತು ಇತರರಿಗೂ ಅದನ್ನೇ ಏಕೆ
ಬೋಧಿಸಬಾರದು? ಭಾಗವತವು ಹೇಳುತ್ತದೆ, (5.5.4) 

“ಯಾವಾಗ ಒಬ್ಬನು ಇಂದ್ರಿಯ ಸುಖವು ಜೀವನದ ಧ್ಯೇಯವೆಂದು ಭಾವಿಸುವನೋ ಆಗ ಅವನು ಖಂಡಿತವಾಗಿ ಪ್ರಾಪಂಚಿಕ ಜೀವನದ ಬಗ್ಗೆ ಹುಚ್ಚನಾಗುತ್ತಾನೆ ಮತ್ತು ಎಲ್ಲ ಬಗೆಯ ಪಾಪಕಾರ್ಯಗಳಲ್ಲಿ ತೊಡಗುತ್ತಾನೆ. ಅವನು ತನ್ನ ಪೂರ್ವದ ಪಾಪಕರ್ಮಗಳಿಂದಾಗಿ ತನಗೆ ಈ ದೇಹ ಬಂದಿದೆ, ಅದು ತಾತ್ಕಾಲಿಕವಾದರೂ ತನ್ನ ದುಃಖಕ್ಕೆ ಕಾರಣವೆಂಬುದನ್ನು ತಿಳಿದಿರುವುದಿಲ್ಲ. ವಾಸ್ತವಿಕವಾಗಿ ಜೀವಿಯು ಭೌತಿಕ ದೇಹಧಾರಣೆ ಮಾಡಬಾರದಾಗಿತ್ತು, ಆದರೆ ಇಂದ್ರಿಯತುಷ್ಟಿಗಾಗಿ ಅವನಿಗೆ ಭೌತಿಕ ದೇಹವನ್ನು ನೀಡಲಾಗಿದೆ. ಆದ್ದರಿಂದ ಬುದ್ಧಿವಂತನಾದವನು ಮತ್ತೆ ಮತ್ತೆ ಭೌತಿಕ ದೇಹಗಳನ್ನು ತಂದುಕೊಡುವ ಇಂದ್ರಿಯ ಸುಖದ ಕ್ರಿಯೆಗಳಲ್ಲಿ ಸಿಲುಕಿಕೊಳ್ಳುವುದು ಸರಿಯಲ್ಲ ಎಂದು ನಾನು ಭಾವಿಸುತ್ತೇನೆ.”

ಒಟ್ಟಾರೆ, ಭೌತಿಕ ಅಸ್ತಿತ್ವದಲ್ಲಿ ಸಿಕ್ಕಿಹಾಕಿಕೊಳ್ಳದಂತೆ ಇತರರಿಗೆ ನಾವು ಬೋಧಿಸಬೇಕೆಂಬ ನಿಜವಾದ ಒಳ್ಳೆಯ ಕಾರ್ಯಕ್ಕಾಗಿ ಸ್ಪಷ್ಟ ಆಹ್ವಾನವನ್ನು ಇಲ್ಲಿ ಕಾಣುತ್ತೇವೆ.

ಅದೇ ಅತ್ಯುತ್ತಮ ಉಡುಗೊರೆ. ತಾತ್ಕಾಲಿಕ ಸಹಾಯ ಮಾಡುವ ಬದಲು, ಇಡೀ ಸಮಸ್ಯೆಯ ಪರಿಹಾರದ ಬೇರಿಗೇ ಏಕೆ ಹೋಗಬಾರದು? ದೈಹಿಕ ಬದುಕಿನ ಕಲ್ಪನೆಯನ್ನು ಗುಣಪಡಿಸಿಕೊಳ್ಳಿ. ಮತ್ತು ಸರ್ವಾಕರ್ಷಕನಾದ, ಆನಂದ ಸಾಗರನಾದ ಭಗವಂತನಿಂದ ದೂರ ಸರಿದಿರುವಿರಲ್ಲವೇ? ಮೊದಲು ಅದನ್ನು ಸರಿಪಡಿಸಿಕೊಳ್ಳಿ. ಅದೇ ಪರಮೌಷಧ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi