ನಾಯಿಯ ಹಠಮಾರಿತನ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಕೆಲವು ಭಕ್ತರ ನಡುವೆ ಸೆಪ್ಟೆಂಬರ್‌ 1975ರಲ್ಲಿ, ವೃಂದಾವನದಲ್ಲಿ, ಬೆಳಗಿನ ವಾಯು ವಿಹಾರ ಸಮಯದಲ್ಲಿ ನಡೆದ ಸಂವಾದ.

ಶ್ರೀಲ ಪ್ರಭುಪಾದ : ಜನರು ಇಂದ್ರಿಯ ತೃಪ್ತಿಗಾಗಿ ಸುಮ್ಮನೆ ಪ್ರಯತ್ನಿಸುತ್ತಿದ್ದಾರೆ. ಅವರಿಗೆ ಬದುಕಿನ ಉದ್ದೇಶವೇ ಗೊತ್ತಿಲ್ಲ. ಈ ಮೌಢ್ಯವನ್ನು ಹೋಗಲಾಡಿಸುವುದೇ ನಮ್ಮ ಧ್ಯೇಯ. ಅವರು ತಪ್ಪು ಗ್ರಹಿಕೆಯ ಬದುಕಿನಲ್ಲಿ ಜೀವಿಸುತ್ತಿದ್ದಾರೆ. ಅದು ಆಧ್ಯಾತ್ಮಿಕ ಬದುಕಲ್ಲ, ಐಹಿಕ ಜೀವನ.

ಭಕ್ತ : ಕಠ್ಮಂಡುವಿನಲ್ಲಿ ನಾನು ಜನರನ್ನು ಕೇಳುತ್ತಿದ್ದೆ, “ಸಿಗರೇಟ್‌ ಸೇವಿಸುವುದರಿಂದ ಅದೆಂತಹ ಆನಂದ ಅನುಭವಿಸುವಿರಿ? ನೀವು ಕೆಮ್ಮುತ್ತಿರುವಿರಿ. ಇಂಟಾಕ್ಸಿಕೇಷನ್‌ – ಟಾಕ್ಸಿನ್‌ ಎಂದರೆ ವಿಷ. ನಿಜವಾಗಿಯೂ ನೀವು ವಿಷವನ್ನು ಸೇವಿಸುತ್ತಿರುವಿರಿ. ಇದು ವಿವೇಕವೇ? ಇದು ಮಾನವ ಜೀವನವೆ?” ಈ ಜನರು ಸಾಮಾನ್ಯವಾಗಿ ನನಗೆ ಹೇಳಿದ್ದು “ಸರಿ, ನಾನು ಸಿಗರೇಟ್‌ ಸೇದುವುದನ್ನು ಅನಂತರ ಬಿಟ್ಟು ಬಿಡುವೆ.”

ಶ್ರೀಲ ಪ್ರಭುಪಾದ : ಕೊನೆ ಪಕ್ಷ ಅವರು ತಪ್ಪು ಒಪ್ಪಿಕೊಂಡಿದ್ದಾರೆ. ಅಲ್ಲವೇ?

ಭಕ್ತ : ಹೌದು ಕೆಲವರು. ನಾನು ಇವರಿಗೆಲ್ಲ ಕರ್ಮದ ಬಗೆಗೆ ನೆನಪು ಮಾಡಿಕೊಟ್ಟೆ. ನಾನು ಅವರಿಗೆ ಹೇಳಿದೆ, “ನಿಮ್ಮ ಈ ಜೀವನದ ಕರ್ಮಕ್ಕೆ ಅನುಗುಣವಾಗಿ ನೀವು ನಿಮ್ಮ ಮುಂದಿನ ಜೀವನದ ಸಿದ್ಧತೆ ಮಾಡಿಕೊಳ್ಳುತ್ತಿರುವಿರಿ. ನೀವು ಆಧ್ಯಾತ್ಮಿಕ ಜೀವನ ನಡೆಸಿದರೆ ನೀವು ಆಧ್ಯಾತ್ಮಿಕ ಲೋಕಕ್ಕೆ ಹೋಗುವಿರಿ. ಲೌಕಿಕ ಜೀವನ ನಡೆಸಿದರೆ ನೀವು ಐಹಿಕ ಜಗತ್ತಿನಲ್ಲಿಯೇ ಇರುವಿರಿ ಮತ್ತು ಪ್ರಾಣಿಯಾಗುವಿರಿ.” ಅವರೆಲ್ಲರೂ ಒಪ್ಪಿಕೊಂಡರು, “ನಮಗೆ ಕರ್ಮದ ಕಾನೂನು ಗೊತ್ತು.” ನಾನು ಅವರಿಗೆ “ಕೃಷ್ಣನ ಸೇವೆ ಮಾಡಬಾರದೇಕೆ?” ಎಂದು ಕೇಳಿದಾಗ ಅವರು, “ಅನಂತರ, ಅನಂತರ” ಎಂದು ಉತ್ತರಿಸಿದರು.

ಶ್ರೀಲ ಪ್ರಭುಪಾದ : ಹರೇ ಕೃಷ್ಣ.

ಭಕ್ತ :  ಆದುದರಿಂದ, ಶ್ರೀಲ ಪ್ರಭುಪಾದರೆ, ಶ್ರೀಮದ್‌ ಭಾಗವತದಲ್ಲಿನ ನಿಮ್ಮ ಬೋಧನೆಯು ಈ ಜನರ ಇಂದ್ರಿಯ ತೃಷ್ಣೆಯನ್ನು ಸ್ಥಗಿತಗೊಳಿಸುವುದೇ? ಅಥವಾ ತಮ್ಮ ಇಂದ್ರಿಯ ತೃಪ್ತಿಯ ಆನಂದವನ್ನು ಅನುಭವಿಸುವ ತಮ್ಮ ಪ್ರಯತ್ನಗಳಲ್ಲಿ ಅವರು ಹೇಗೋ ಹತಾಶರಾಗುವರೆಂದು ನಾವು ಆಶಯ ಇಟ್ಟುಕೊಳ್ಳಬಹುದೇ?

ಶ್ರೀಲ ಪ್ರಭುಪಾದ : ಅವರು ಹತಾಶರಾಗುತ್ತಿದ್ದಾರೆ. ಐಹಿಕ ಲೋಕದಲ್ಲಿ ಯಾರು ತಾನೇ ಯಶಸ್ವಿಯಾಗಿದ್ದಾರೆ? ನಿಜವಾಗಿಯೂ ಯಶಸ್ವಿಯಾದವರ ಉದಾಹರಣೆಯನ್ನು ನೀವು ನೀಡಬಲ್ಲಿರಾ? (ನಗು. ಸ್ವಲ್ಪ ಸಮಯ ಕಳೆದು).

ಭಕ್ತ  : ಈ ಐಹಿಕ ಲೋಕದ ಎಲ್ಲೆಡೆ ಜನರು ದುಃಖಿತರು. ಅಮೆರಿಕದ ಶಿಷ್ಟಾಚಾರ ತಜ್ಞೆ ಅಮಿ ವಂಡರ್‌ಬಿಲ್ಟ್‌ ತನ್ನ ಮನೆಯ ಕಿಟಕಿಯಿಂದ ಧುಮುಕಿದಳು.

ಶ್ರೀಲ ಪ್ರಭುಪಾದ : ಅಂತಹ ಅನೇಕ ಜನರಿದ್ದಾರೆ.

ಭಕ್ತ  : ಹೌದು. ಸ್ಯಾನ್‌ ಡಿಯಾಗೊ ಮತ್ತು ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿಯೂ ಬೇಲಿಗಳನ್ನು ಹಾಕಿದ್ದಾರೆ. ಇದರಿಂದಾಗಿ ಸೇತುವೆಗಳಿಂದ ಧುಮುಕುವವರು ಬೇಲಿಗಳಿಂದ ಹಿಡಿಯಲ್ಪಡುತ್ತಾರೆ.

ಶ್ರೀಲ ಪ್ರಭುಪಾದ : ಬರ್ಕ್ಲಿಯಲ್ಲಿ ಗಡಿಯಾರದ ಗೋಪುರದ ಮೇಲ್ಭಾಗಕ್ಕೆ ಆವರಣ (ಬೇಲಿ) ಹಾಕಬೇಕಾಯಿತಂತೆ?

ಭಕ್ತ  :  ಓ, ಹೌದು. ಯೂನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾದಲ್ಲಿ. ವಿದ್ಯಾರ್ಥಿಗಳು ಅಲ್ಲಿಂದ ಧುಮುಕುವುದನ್ನು ತಡೆಯಲು ಈ ರೀತಿ ಮಾಡಬೇಕಾಯಿತು.

ಶ್ರೀಲ ಪ್ರಭುಪಾದ :  ಜನರೆಷ್ಟು ಹತಾಶರಾಗಿದ್ದಾರೆ, ಐಹಿಕ ಬದುಕಿನಿಂದ ಹೇಗೆ ನಿರಾಶೆ ಹೊಂದಿದ್ದಾರೆ ಎಂಬುವುದರ ಲಕ್ಷಣಗಳಿವು. ಅವರು ಆತ್ಮಹತ್ಯೆ ಮಾಡಿಕೊಳ್ಳಲು ಸದಾ ಸಿದ್ಧರಾಗಿರುತ್ತಾರೆ. ಸುಮಾರು 30 ವರ್ಷಗಳ ಹಿಂದೆ, ಒಬ್ಬ ವ್ಯಕ್ತಿ ರೈಲಿನಲ್ಲಿ ನನ್ನ ಸಮೀಪವೇ ಕುಳಿತಿದ್ದ. ಆಗ ಇದ್ದಕ್ಕಿದಂತೆಯೇ ಅವನು ಕಿಟಕಿಯಿಂದ ಹೊರಗೆ ಹಾರಿದ. ಅವನು ಆರಾಮವಾಗಿಯೇ ಕುಳಿತಿದ್ದ. ಆದರೆ ದಿಢೀರನೆ ಹಾರಿಬಿಟ್ಟ. ಅವನೇನು ಯೋಚಿಸುತ್ತಿದ್ದ ಎಂಬುವುದು ನನಗೆ ಗೊತ್ತಿಲ್ಲ. ಆದರೆ ಅವನು ತೆರೆದ ಕಿಟಕಿಯ ಅವಕಾಶ ಬಳಸಿಕೊಂಡು ಹಾರಿದ. ನಾನು ಅದನ್ನು ನೋಡಿದೆ.

ಭಕ್ತ  : ಯಾವುದೋ ಹುಚ್ಚುತನ ಅವನನ್ನು ಕಂಗೆಡಿಸಿರಬೇಕು.

ಶ್ರೀಲ ಪ್ರಭುಪಾದ : ಹುಚ್ಚುತನ. ಎಲ್ಲರ ಮೇಲೂ ಈ ಅವಿವೇಕತನ ಸವಾರಿ ಮಾಡುತ್ತಿರುತ್ತದೆ. ಈ ಲೌಕಿಕ ಜಗತ್ತಿನಲ್ಲಿ ಸುಖವಾಗಿರಲು ಪ್ರಯತ್ನಿಸುತ್ತಿರುವ ಪ್ರತಿಯೊಬ್ಬರ ಮೇಲೂ ಈ ಹುಚ್ಚುತನ ಪ್ರಬಲವಾಗಿರುತ್ತದೆ. ಕೃಷ್ಣನು ಹೇಳಿರುವಂತೆ, ಸರ್ವ ಧರ್ಮಾನ್‌ ಪರಿತ್ಯಜ್ಯ ಮಾಂ ಏಕಂ ಶರಣಂ ವ್ರಜ : “ಎಲ್ಲ ಧರ್ಮಗಳನ್ನು ಪರಿತ್ಯಜಿಸಿ ನನಗೆ ಶರಣಾಗು” (ಭಗವದ್ಗೀತೆ 18.66) ಎಂಬುವುದೊಂದೇ ಪರಿಹಾರ ಎಂದು ಅವರಿಗೆ ಗೊತ್ತಿಲ್ಲ. ಆದರೆ ಅವರು ಹಾಗೆ ಮಾಡುವುದಿಲ್ಲ. ಕೃಷ್ಣನಿಗೆ ಶರಣಾಗುವುದನ್ನು ಬಿಟ್ಟು ಉಳಿದೆಲ್ಲವನ್ನೂ ಮಾಡುತ್ತಾರೆ.

ಭಕ್ತ  :  ಅಮೆರಿಕದಲ್ಲಿ ದೊಡ್ಡ ವಿಷಯವೆಂದರೆ ಅವರಿಗೆ “ಜೀವನಮಟ್ಟ ಹೆಚ್ಚಿಸಿಕೊಳ್ಳಬೇಕೆಂಬ ಅಪೇಕ್ಷೆ.” ಹಾಗೆ ಜೀವನ ಮಟ್ಟ ಹೆಚ್ಚಿಸಿಕೊಂಡ ಜನರೂ ಆತ್ಮಹತ್ಯೆ  ಮಾಡಿಕೊಳ್ಳುತ್ತಾರೆ ಎಂದು ನಾನು ಈ ಭಾರತೀಯರಿಗೆ ಹೇಳುತ್ತಿದ್ದೆ. ಆದರೆ ಈ ಭಾರತೀಯರಿಗೆ ಅನೇಕ ಬಾರಿ ಕೇಳಿಸಿಕೊಳ್ಳಲೂ ಇಷ್ಟವಿಲ್ಲ. “ಆರ್ಥಿಕ ಅಭಿವೃದ್ಧಿಯೇ ನಮ್ಮ ಗುರಿ” ಎಂದು ಅವರು ಹೇಳುತ್ತಾರೆ. “ನಮಗೆ ಅದೇ ಆದ್ಯತೆ” ಎನ್ನುತ್ತಾರೆ.

ಶ್ರೀಲ ಪ್ರಭುಪಾದ : ಹಠಮಾರಿತನ. ನಾಯಿಯ ಹಠಮಾರಿತನ. ಈಗ ಅವರು ಅನೇಕ ರೀತಿಯ ಧಾರ್ಮಿಕ ಸಾಧನಗಳನ್ನು ತಯಾರಿಸುತ್ತಿದ್ದಾರೆ. ಇದರಿಂದ ಕೃಷ್ಣನಿಗೆ ಶರಣಾಗಬೇಕಾಗಿಲ್ಲ ಎಂಬುವುದು ಅವರ ಉದ್ದೇಶ. ಇದು ನಡೆಯುತ್ತಲೇ ಇದೆ. ದೊಡ್ಡ ದೊಡ್ಡ ಸ್ವಾಮಿಗಳು ಹೇಳುತ್ತಿದ್ದಾರೆ, “ಹೌದು, ನೀವು ಏನು ತಯಾರಿಸಿದರೂ ಅದು ಸರಿ.” ಯಥಾ ಮತ ತಥಾ ಪಥಾ : “ನೀನೇನು ಕಟ್ಟುವೆಯೋ (ಕಥೆ) ಅದೇ ಸರಿ.” ಆದುದರಿಂದ ಜನರು ತೃಪ್ತರು. ಯಾರಾದರೂ “ನೀನು ನನಗೆ ಶರಣಾಗು” ಎಂದರೆ, ಅದು ಹೆಚ್ಚು ಸ್ವಾದಿಷ್ಟವಲ್ಲ. ಯಾರಾದರೂ, “ಇಲ್ಲ, ನೀನು ಯಾರಿಗಾದರೂ ಶರಣಾಗಬಹುದು” ಎಂದರೆ ಅದು ರುಚಿಕರ.

ಭಕ್ತ  : ಏಕೆಂದರೆ ಅದರ ಅರ್ಥ ಶರಣಾಗತಿ ಇಲ್ಲ. ಯಾರಿಗಾದರೂ ಶರಣಾಗು.

ಶ್ರೀಲ ಪ್ರಭುಪಾದ : ಹೌದು.

ಭಕ್ತ  :  ಶರಣಾಗತಿ ಇಲ್ಲ ಎಂದು ಅರ್ಥ…

ಶ್ರೀಲ ಪ್ರಭುಪಾದ : ಹೌದು.

ಭಕ್ತ  : ಕೆಲವು ಬಾರಿ ಜನರು “ನಾನು ಅವನಿಗೆ ಶರಣಾಗಬೇಕೆಂದು ಕೃಷ್ಣನು ಇಚ್ಛಿಸಿದರೆ ನಾನು ಶರಣಾಗುವೆ” ಎಂದು ಹೇಳುತ್ತಾರೆ.

ಶ್ರೀಲ ಪ್ರಭುಪಾದ : ಹೌದು, ಎಂತಹ ಮೂರ್ಖತನ!  ಕೃಷ್ಣನು ಭಗವದ್ಗೀತೆಯಲ್ಲಿ “ನೀನು ಇದನ್ನು ಮಾಡಬೇಕು – ನನಗೆ ಶರಣಾಗಬೇಕು” ಎಂದು ಹೇಳಿರುವಾಗ ಅವನಿಗೆ ಇದು ಇಷ್ಟವಿಲ್ಲ ಎಂದು ಭಾವಿಸುವಿರಾ? ಮೂರ್ಖರು.

ಭಕ್ತ  : “ಕೃಷ್ಣನು ನನ್ನ ಹೃದಯವನ್ನು ಅವನಿಗಾಗಿ ತೆರೆದುಕೊಳ್ಳುವಂತೆ ಮಾಡಿದರೆ, ನಾನು ಅವನಿಗೆ ಶರಣಾಗುವೆ” ಎಂದು ಕೆಲವು ಬಾರಿ ಜನರು ಹೇಳುತ್ತಾರೆ.

ಶ್ರೀಲ ಪ್ರಭುಪಾದ : ಆದರೆ ನಿಮಗೆ ಹೃದಯವೇ ಇಲ್ಲ. ನೀವು ಕಲ್ಲು. ಒಂದು ಭಕ್ತಿ ಗೀತೆಯಂತೆ, “ನನ್ನ ಹೃದಯವು ಕಲ್ಲಿಗಿಂತ ಹೆಚ್ಚು ಗಟ್ಟಿ. ಹರೇ ಕೃಷ್ಣ ಮಂತ್ರವನ್ನು ಜಪಿಸಿದರೆ ಕಲ್ಲು ಕೂಡ ಕರಗಬಹುದು ಎಂದು ನನಗೆ ಗೊತ್ತು. ಆದರೆ ಅದು ನನ್ನ ಹೃದಯವನ್ನು ಕರಗಿಸುವುದಿಲ್ಲ. ಆದುದರಿಂದ ನನ್ನದು ಕಲ್ಲೆದೆ ಎಂದು ನಾನು ಭಾವಿಸುವೆ.”

ಭಕ್ತ  : ದೇವರ ಹೆಸರು ಹೇಳುವುದೂ ಕೂಡ ತಪ್ಪು ಎಂದೂ ಈ ಕೆಲವು ಧಾರ್ಮಿಕ ಪದ್ಧತಿಗಳು ಹೇಳುತ್ತವೆ.

ಶ್ರೀಲ ಪ್ರಭುಪಾದ : ನಾನೇನು ಮಾಡಲಿ? ಈ ಮೂರ್ಖರು ಆ ರೀತಿ ಹೇಳಿದರೆ, ನಾನು ಏನು ಮಾಡಲಿ?

ಭಕ್ತ  : ದೇವರು ಎಂದು ಬರೆಯುವಾಗಲೂ ಅವರು ದೇವರು (God) ಎಂದು ಬರೆಯುವುದಿಲ್ಲ. ಅವರು “G – d” ಎಂದು ಬರೆಯುತ್ತಾರೆ. ಅಂದರೆ ಅವರು ದೇವರು ಎಂದು ಸೂಚಿಸಿರುತ್ತಾರೆ, ಆದರೆ `ದೇವರು’ ಎಂದು ಹೇಳಿರುವುದಿಲ್ಲ. ಉಚ್ಚರಿಸಲು ಅದು ತುಂಬ ಪವಿತ್ರವಾದುದು ಎಂದು ಅವರು ಹೇಳುತ್ತಾರೆ.

ಶ್ರೀಲ ಪ್ರಭುಪಾದ : ಅವರು “G-zero-d” ಎಂದೂ ಹೇಳಬಹುದಾಗಿತ್ತು. (ನಗು) ಅದು ದೇವರನ್ನು ಕುರಿತ ಅವರ ಅಭಿಪ್ರಾಯವನ್ನು ಚೆನ್ನಾಗಿ ತಿಳಿಸುತ್ತಿತ್ತು.

ಭಕ್ತ  : ಸೊನ್ನೆಯು ಭಗವಂತನ ಬಗೆಗೆ ಅವರಿಗಿರುವ ಪ್ರೇಮವನ್ನು  ಸೂಚಿಸುತ್ತದೆ.

ಶ್ರೀಲ ಪ್ರಭುಪಾದ :  ಹೌದು. ಸೊನ್ನೆಯು ಜಿ ಮತ್ತು ಡಿ, ಎರಡೂ ಬದಿಯನ್ನು ನಿಯಂತ್ರಿಸುತ್ತಿದೆ. ನೀವು ಏನನ್ನಾದರೂ ಸೊನ್ನೆಯಿಂದ ಗುಣಿಸಿದರೆ ಅದೇನಾಗುತ್ತದೆ?

ಭಕ್ತ  : ಸೊನ್ನೆ.

ಶ್ರೀಲ ಪ್ರಭುಪಾದ : ಅಷ್ಟೇ. ಇಂತಹ ಚಿಂತನೆಯು ಶೂನ್ಯವಾದಿ. ಇದು ಯಶಸ್ವಿಯಾದ ಆತ್ಮಹತ್ಯೆ. ಆದರೆ ಬದುಕು ಶೂನ್ಯವಲ್ಲ ಎಂದು ನಮಗೆ ಗೊತ್ತು. ಏಕೆಂದರೆ ದೇವರು ಶೂನ್ಯವಲ್ಲ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi