ಸರಳವಾಗಿ ತಯಾರಿಸಿ ಆಸ್ವಾದಿಸುವ ವಿಧವಿಧವಾದ ತಿನಿಸುಗಳ ಬಗ್ಗೆ ವಿವರಿಸಿದ್ದೇವೆ. ಇವುಗಳನ್ನು ಶ್ರದ್ಧೆಯಿಂದ ತಯಾರಿಸಿ, ಕೃಷ್ಣನಿಗೆ ಅರ್ಪಿಸಿ ಮನೆ ಮಂದಿಗೆ ತಿನ್ನಲು ಕೊಡಿ.
ಪಾಲಕ್ ಪರೋಟ

ಬೇಕಾಗುವ ಪದಾರ್ಥಗಳು
ಪಾಲಕ್ ಸೊಪ್ಪು – 1 ಕಟ್ಟು
ಕ್ಯಾರೆಟ್ – 2
ಧನಿಯಾ ಪುಡಿ – 2 ಚಮಚ
ಮೆಣಸಿನಕಾಯಿ ಪುಡಿ – 1 ಚಮಚ
ಗರಂ ಮಸಾಲೆ – 1/2 ಚಮಚ
ಜೀರಿಗೆ – 1 ಚಮಚ
ಶುಂಠಿ ಪುಡಿ – 1/2 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ
ಗೋಧಿಹಿಟ್ಟು
ಮಾಡುವ ವಿಧಾನ : ಪಾಲಕ್ ಸೊಪ್ಪನ್ನು ತೊಳೆದು ಇಟ್ಟಿರಬೇಕು. ಅನಂತರ ಪಾಲಕ್ ಸೊಪ್ಪನ್ನು ಹೆಚ್ಚಿ ಕ್ಯಾರೆಟ್ ಅನ್ನು ತುರಿದು ಇಟ್ಟುಕೊಳ್ಳಬೇಕು. ಗೋಧಿಹಿಟ್ಟಿಗೆ ಉಪ್ಪು, ಎಣ್ಣೆ ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಇಡಬೇಕು. ಬಾಂಡಲೆಗೆ 2 ಚಮಚ ಎಣ್ಣೆ ಹಾಕಿ ಕಾದ ಮೇಲೆ ಜೀರಿಗೆ ಕ್ಯಾರೆಟ್ ತುರಿ ಹಾಕಿ 2 ನಿಮಿಷ ಹುರಿದು ಮಸಾಲೆ ಪುಡಿಯನ್ನು (ಕೊತ್ತಂಬರಿ ಬೀಜದ ಪುಡಿ, ಮೆಣಸಿನಕಾಯಿ ಪುಡಿ, ಗರಂ ಮಸಾಲೆ, ಶುಂಠಿಪುಡಿ, ಉಪ್ಪು, ಅರಿಶಿನ) ಎಲ್ಲ ಮಸಾಲೆ ಹಾಕಿ ಎಣ್ಣೆ ಬಿಡುವವರೆಗೆ ಹುರಿದು ಅನಂತರ ಪಾಲಕ್ ಸೊಪ್ಪನ್ನು ಹಾಕಿ ಕೆದಕಿ ಮುಚ್ಚಿ ಇಡಬೇಕು. 5 ನಿಮಿಷ ಸೊಪ್ಪು ಬೆಂದ ಅನಂತರ 2 ಚಮಚ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಬೇಯಿಸಬೇಕು. ಪಲ್ಯ ಚೆನ್ನಾಗಿ ಉಂಡೆ ಮಾಡುವಷ್ಟು ಗಟ್ಟಿ ಇರಬೇಕು. ಪಲ್ಯ ಮೆತ್ತಗಿದ್ದರೆ ಇನ್ನೂ ಸ್ವಲ್ಪ ಅಕ್ಕಿಹಟ್ಟು ಹಾಕಿ ಬೇಯಿಸಬೇಕು. ಸ್ವಲ್ಪ ಆರಿದ ಮೇಲೆ ಉಂಡೆಗಳನ್ನು ಮಾಡಿ ಇಟ್ಟುಕೊಳ್ಳಬೇಕು. ಗೋಧಿಹಿಟ್ಟನ್ನು ಉಂಡೆಗಳಾಗಿ ಮಾಡಿಕೊಳ್ಳಬೇಕು. ಗೋಧಿಹಿಟ್ಟು ಪಲ್ಯದ ಉಂಡೆ ಎರಡೂ ಸಮನಾಗಿರಬೇಕು. ಹಿಟ್ಟನ್ನು ಸ್ವಲ್ಪ ಲಟ್ಟಿಸಿ ಎಣ್ಣೆ ಹಚ್ಚಿ ಅದರಲ್ಲಿ ಪಲ್ಯದ ಉಂಡೆ ಇಟ್ಟು ಮುಚ್ಚಿ ಅದನ್ನು ಅಂಗೈನಲ್ಲಿ ಇಟ್ಟುಕೊಂಡು ಚೆನ್ನಾಗಿ ತಿರುಗಿಸಿದರೆ ಪಲ್ಯ ಎಲ್ಲ ಕಡೆ ಹರಡಿಕೊಳ್ಳುತ್ತೆ. ಅನಂತರ ಲಟ್ಟಿಸಿ ತವದ ಮೇಲೆ ಹಾಕಿ ಬೆಂದ ಮೇಲೆ ತಿರುಗಿಸಿ ಅನಂತರ ಎಣ್ಣೆ ಹಾಕಿ ಎರಡೂ ಕಡೆಯೂ ಬೇಯಿಸಬೇಕು.
ಮೆಂತ್ಯದ ಇಡ್ಲಿ

ಬೇಕಾಗುವ ಪದಾರ್ಥಗಳು
ಇಡ್ಲಿರವೆ – 1 ಪಾವು
ಲೋಕಲ್ ರವೆ ಹುರಿದದ್ದು – 1/2 ಪಾವು
ಕಡಲೆಬೇಳೆ – 1 ಟೇಬಲ್ ಚಮಚ
ಉದ್ದಿನ ಬೇಳೆ – 1 ಚಮಚ
ಕಡಲೆ ಬೇಳೆ – 1 ಚಮಚ
ಮೆಂತ್ಯಕಾಳು – 2 ಚಮಚ
ಅವಲಕ್ಕಿ (ದಪ್ಪದು) – 1/2 ಪಾವು
ಮಾಡುವ ವಿಧಾನ : ಇಡ್ಲಿರವೆಯನ್ನು ಬಿಸಿನೀರಿನಲ್ಲಿ (ಸಾಧಾರಣ ಬಿಸಿ) ನೆನೆಹಾಕಿ ಇಡಬೇಕು. ಉದ್ದಿನಬೇಳೆ, ಕಡಲೆಬೇಳೆ, ಮೆಂತ್ಯ ಮೂರನ್ನು ಬೇರೆಯಾಗಿ ನೆನಸಬೇಕು. ದಪ್ಪ ಅವಲಕ್ಕಿಯನ್ನು ಬೇರೆಯಾಗಿ ನೆನೆಸಬೇಕು.
ಎಲ್ಲ ಪದಾರ್ಥಗಳೂ ಎಂಟು ಗಂಟೆ ನೆನೆಯಬೇಕು. ಅನಂತರ ಬೇಳೆಗಳು ಮತ್ತು ಮೆಂತ್ಯವನ್ನು ರುಬ್ಬಿ. ಬಿಸಿ ನೀರಿನಲ್ಲಿ ನೆನಸಿಟ್ಟ ರವೆಯಲ್ಲಿ ಜಾಸ್ತಿ ನೀರಿದ್ದರೆ ತೆಗೆದು ಅದಕ್ಕೆ ರುಬ್ಬಿದ ಪದಾರ್ಥ ಹಾಕಿ ರಾತ್ರಿಯೆಲ್ಲ ಇಡಬೇಕು. ಬೆಳಗ್ಗೆ ಅದಕ್ಕೆ ಹಸಿರು ಮೆಣಸಿನಕಾಯಿ ಹೆಚ್ಚಿ ಶುಂಠಿಯನ್ನು ತುರಿದು ಎಣ್ಣೆ ಸಾಸಿವೆ ಒಗ್ಗರಣೆ ಹಿಟ್ಟಿಗೆ ಹಾಕಿ, ಉಪ್ಪು ಹಾಕಿ ಕಲಸಿ ಇಡ್ಲಿ ಪಾತ್ರೆಯಲ್ಲಿ ಬೇಯಿಸಬೇಕು.
ಸೌತೆಕಾಯಿ ಚಟ್ನಿ

ಬೇಕಾಗುವ ಪದಾರ್ಥಗಳು
ಕಡಲೆ ಬೇಳೆ – 1 ಚಿಕ್ಕ ಲೋಟ
ಮೆಂತ್ಯ – 1/2 ಚಮಚ
ಜೀರಿಗೆ – 1 ಚಮಚ
ಒಣ ಮೆಣಸಿನಕಾಯಿ – 6 (ಬ್ಯಾಡಗಿ)
ಸೌತೆಕಾಯಿ – 1
ಹುಣಸೇಹಣ್ಣು – ಸ್ವಲ್ಪ
ಬೆಲ್ಲ – ಸ್ವಲ್ಪ
ಎಣ್ಣೆ – ಸ್ವಲ್ಪ
ಸಾಸಿವೆ – ಒಗ್ಗರಣೆಗೆ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ : ಬೇಳೆ, ಮೆಂತ್ಯ, ಜೀರಿಗೆ, ಮೆಣಸಿನಕಾಯಿ ಎಲ್ಲ ಸ್ವಲ್ಪ ಎಣ್ಣೆ ಹಾಕಿ ಹುರಿದು ಅದಕ್ಕೆ ಹೆಚ್ಚಿದ ಸೌತೆಕಾಯಿ, ಹುಣಸೇಹಣ್ಣು, ಉಪ್ಪು, ಬೆಲ್ಲ ಎಲ್ಲ ಹಾಕಿ. ಆರಿದ ಅನಂತರ ರುಬ್ಬಿ, ಎಣ್ಣೆ ಸಾಸಿವೆ ಒಗ್ಗರಣೆ ಹಾಕಿದರೆ ಚಟ್ನಿ ತಯಾರು.






Leave a Reply