ವಿಶ್ವಭ್ರಾತೃತ್ವಕ್ಕಾಗಿ ಕೃಷ್ಣಪ್ರೇಮ…

ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಸಂಸ್ಥಾಪನಾಚಾರ್ಯರು, ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘ

– ಸಂಗ್ರಹಾನುವಾದ : ಡಾ.ಕೆ. ವೈ. ಬಾಲರಾಜ್, ಆಧಾರ : ಪ್ರಹ್ಲಾದ ಮಹಾರಾಜರ ಪಾರಮಾರ್ಥಿಕ ಬೋಧನೆಗಳು

ವಿಶ್ವಭ್ರಾತೃತ್ವದ ಕಲ್ಪನೆಯನ್ನು ಅನುಷ್ಠಾನಕ್ಕೆ ತರಬೇಕಾದರೆ ನಾವು ಕೃಷ್ಣಪ್ರಜ್ಞೆಯ ನೆಲೆಯಲ್ಲಿ ನಿಂತು ಯೋಚಿಸಬೇಕೇ ಹೊರತು ಪ್ರಾಪಂಚಿಕ ಪ್ರಜ್ಞೆಯ ನೆಲೆಯಿಂದ ಏನೂ ಆಗದು. ಮಾನವ ಪ್ರಾಪಂಚಿಕತೆಯಲ್ಲಿರುವಾಗ ಅವನ ಪ್ರೀತಿಯ ವಸ್ತುಗಳು ಬಹಳ ಕಡಮೆಯಲ್ಲಿರುತ್ತವೆ.

ಅಂದರೆ ಕೇವಲ ತನಗೆ ಸೇರಿದ ವಸ್ತುಗಳು, ಸಂಬಂಧಗಳಲ್ಲಿ ಮಾತ್ರ ಅವನಿಗೆ ಪ್ರೀತಿ ಇರುತ್ತದೆ. ಯಾವಾಗ ನಾವು ಕೃಷ್ಣ ಪ್ರಜ್ಞೆಯುತರಾದಾಗ ಪ್ರತಿಯೊಂದರಲ್ಲೂ ಭಗವಂತನ ಆವಿರ್ಭಾವವನ್ನು ಕಾಣುತ್ತೇವೆ. ಅದು ಸಾರ್ವತ್ರಿಕ ಪ್ರೀತಿಯಾಗುತ್ತದೆ. ಅಣು ರೇಣು, ತೃಣ, ಕಾಷ್ಠಗಳಿಂದ ಹಿಡಿದು ಅತ್ಯುನ್ನತ ಜೀವಿಯಾದ ಬ್ರಹ್ಮನಲ್ಲೂ ದೇವೋತ್ತಮ ಪರಮ ಪುರುಷ ನೆಲೆಸಿದ್ದಾನೆ.

ಕೃಷ್ಣನಿಗೆ ಸಂಬಂಧಪಟ್ಟಂತೆ ಪ್ರತಿಯೊಂದು ವಸ್ತು ವಿಷಯಗಳು ಜೀವಿಯಿಂದ ಪ್ರೀತಿಸಲ್ಪಡಲು ನಮಗೆ ಅದು ಪ್ರಚೋದಿಸುತ್ತದೆ. ದುರದೃಷ್ಟವಶಾತ್, ಕೃಷ್ಣ ಅಥವಾ ಭಗವಂತನು ಸರ್ವವ್ಯಾಪಕವೆಂಬುದನ್ನು ನಾವು ಮರೆತಿದ್ದೇವೆ. ಇದನ್ನು ಮತ್ತೆ ನೆನಪಿಗೆ ತಂದುಕೊಳ್ಳಬೇಕು.

ಲೌಕಿಕ ಜೀವನದಲ್ಲಿ ಗೃಹಸ್ಥನು ತನ್ನದೇ ಆದ ತೊಡಕುಗಳನ್ನು ಹೆಣೆದುಕೊಂಡು ಅದರ ಬಂಧನದಲ್ಲಿ ಸಿಕ್ಕಿಕೊಂಡು ಅದರಿಂದ ಹೊರಬರಲಾರದೆ ಚಡಪಡಿಸುತ್ತಾನೆ. ಹೇಗೆ ರೇಷ್ಮೆ ಹುಳು ತನ್ನ ನೂಲಿನಿಂದ ತನ್ನನ್ನು ಸುತ್ತಿಕೊಂಡು ಅದರಲ್ಲಿ ಸಿಕ್ಕಿಹಾಕಿಕೊಳ್ಳುವುದು. ಅದೇ ಅದರ ಕಾರಾಗೃಹವಾಗುತ್ತದೆ.

ಅದರಿಂದ ಅದಕ್ಕೆ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಹಾಗೆಯೇ ಪ್ರಾಪಂಚಿಕ ಅಮಲಿನಲ್ಲಿರುವ ಗೃಹಸ್ಥನು ತನ್ನ ಕುಟುಂಬದ ಮೋಹ, ಪ್ರೀತಿಗಳಿಂದ ಹೊರಬರಲಾರ. ಅಲ್ಲಿಯೂ ಅವನಿಗೆ ಬೇಕಾದಷ್ಟು ದುಃಖ, ತೊಡಕುಗಳಿದ್ದರೂ ಅದನ್ನು ಅವನು ಬಿಡಲಾರ. ಲೈಂಗಿಕ ಭೋಗಜೀವನ, ಬಾಯಿ ಚಪಲ ಇವೇ ಜೀವನದಲ್ಲಿ ಅತ್ಯಂತ ಮುಖ್ಯವಾದುವುದು ಎಂಬುದಾಗಿ ಭಾವಿಸುತ್ತಾನೆ.

ತನ್ನ ಸೀಮಿತ ಆಯುಷ್ಯವನ್ನು ಕೇವಲ ಕೌಟುಂಬಿಕ ಮೋಹದಲ್ಲಿ ಪೋಲು ಮಾಡುತ್ತಿದ್ದೇನೆ ಎನ್ನುವುದು ಅವನಿಗೆ ತಿಳಿಯದು. ಪ್ರಾಪಂಚಿಕ ದುಃಖತ್ರಯಗಳಿಂದ ಪೀಡಿತನಾಗಿ ಅದರಲ್ಲಿಯೇ ಬಂಧಿಸಿಕೊಳ್ಳುತ್ತಾನೆ. ಶಾಶ್ವತವಾದ ಆತ್ಮವನ್ನು ತನ್ನ ನಿಜವಾದ ಆಧ್ಯಾತ್ಮಿಕ ಜೀವನವನ್ನು ಅರಿಯಲು ನಿರ್ದಿಷ್ಟವಾಗಿರುವ ಜೀವಿತವನ್ನು ಅವನು ಹಾಳು ಮಾಡಿಕೊಳ್ಳುತ್ತಿದ್ದಾನೆ.

ಕೇವಲ ಲೌಕಿಕ ಸುಖವನ್ನು ಅರಸುತ್ತಿರುವ ಜನರ ಸಹವಾಸವನ್ನು ತೊರೆಯಬೇಕು. ಕೃಷ್ಣಪ್ರಜ್ಞೆಯನ್ನು ಆಚರಿಸುತ್ತಿರುವವರ ಸಂಗವನ್ನು ಬೆಳೆಸಿಕೊಳ್ಳಬೇಕು. ಕೃಷ್ಣಪ್ರಜ್ಞೆ ಬೆಳೆಸಿಕೊಂಡಾಗ ಅದು ನಮಗೆ ಸುಲಭ ಮತ್ತು ಪ್ರಿಯವಾಗುತ್ತದೆ. ಯಾರು ಈ ಸಾಧನೆಯನ್ನು ಹೆಚ್ಚು ಹೆಚ್ಚು ಕೈಗೊಳ್ಳುವನೋ ಅವನು ಪ್ರಾಪಂಚಿಕ ಪ್ರಜ್ಞೆಯನ್ನು ಮರೆಯುತ್ತಾನೆ.

ಹೇಗೆ ತಾಯಿ, ತಂದೆ ಸ್ವಲ್ಪ ಕಾಲ ತಮ್ಮ ಕೆಲಸ ಕಾರ್ಯದಲ್ಲಿ ಮಗುವನ್ನು ಮರೆತರೂ ಅದನ್ನು ನೋಡಿದ ತತ್‌ಕ್ಷಣ ವಾತ್ಸಲ್ಯ ತಾನಾಗಿಯೇ ಮೂಡಿ ಬರುತ್ತದೋ ಹಾಗೆಯೇ ಕೃಷ್ಣನ ಬಗಗಿನ ಪ್ರೀತಿ ಎಷ್ಟು ಆತ್ಮೀಯವಾಗಿದೆಯೆಂದರೆ ಕೃಷ್ಣ ಪ್ರಜ್ಞೆಯ ಸ್ಪರ್ಶವಾದೊಡನೆಯೇ ನಾವು ಅವನೊಂದಿಗೆ ನಮ್ಮ ಬಾಂಧವ್ಯವನ್ನು ಮರಳಿ ಬೆಳೆಸಿಕೊಳ್ಳುತ್ತೇವೆ.

ನಿರ್ಮಲವಾಗಿರುವ ನಮ್ಮ ಪ್ರಜ್ಞೆಯು ನಮಗೆ ಕೃಷ್ಣನೊಂದಿಗೆ ಇರುವ ಸಂಬಂಧ ಸ್ವರೂಪವನ್ನು ಅರ್ಥಮಾಡಿಸುತ್ತದೆ. ಕೃಷ್ಣನೊಂದಿಗೆ ನಮ್ಮ ನಂಟು ಒಬ್ಬ ಮಗನಂತೆ, ಮಿತ್ರನಂತೆ, ತಂದೆಯಂತೆ, ಪ್ರೇಮಿಯಂತೆ ಅಥವಾ ಸೇವಕನಂತೆ ಇರಬಹುದು. ಆದರೆ ಈ ಎಲ್ಲ ಸಂಬಂಧಗಳು ನಮ್ಮ ವ್ಯಾವಹಾರಿಕವಾದ ಭೌತಿಕ ಜಗತ್ತಿನಲ್ಲಿ ಕೇವಲ ವಿಕೃತವಾಗಿ ಪ್ರತಿಬಿಂಬಿತವಾಗುತ್ತದೆ.

ನಾನು, ನನ್ನದು ಎಂಬುದರ ವ್ಯಾಮೋಹ, ಕ್ಷುಲ್ಲಕವಾದ ಪ್ರೀತಿಗಳು ಮಾತ್ರ ಅಲ್ಲಿರುತ್ತವೆ. ಆದರೆ ನಾವು ಕೃಷ್ಣ ಪ್ರಜ್ಞೆಯ ನೆಲೆಗೆ ಬಂದೊಡನೆಯೇ ಕೃಷ್ಣನೊಂದಿಗೆ ನಾವು ತಳೆದಿದ್ದ ನಂಟು ಮರುಕಳಿಸುತ್ತದೆ.

ನಾವು ಪ್ರತಿಯೊಬ್ಬರೂ ಪ್ರೀತಿಸುತ್ತೇವೆ. ಮೊದಲು ನಾನು ನನ್ನ ದೇಹವನ್ನು ಪ್ರೀತಿಸುತ್ತೇನೆ. ಏಕೆಂದರೆ ನನ್ನ ಆತ್ಮವು ಈ ದೇಹದಲ್ಲಿದೆ. ಆದ್ದರಿಂದ ನಿಜದಲ್ಲಿ ನನ್ನ ದೇಹಕ್ಕಿಂತ ಹೆಚ್ಚಾಗಿ ನನ್ನ ಆತ್ಮವನ್ನು ನಾನು ಪ್ರೀತಿಸುತ್ತೇನೆ. ಆದರೆ ಆ ಆತ್ಮವು ಕೃಷ್ಣನೊಂದಿಗೆ ಆತ್ಮೀಯವಾದ ಸಂಬಂಧವನ್ನು ಹೊಂದಿದೆ. ಏಕೆಂದರೆ ಆತ್ಮವು ಕೃಷ್ಣನ ವಿಭಿನ್ನಾಂಶವಾಗಿದೆ. ಆದ್ದರಿಂದ ಕೃಷ್ಣನನ್ನು ನಾನು ಎಲ್ಲಕ್ಕಿಂತ ಮಿಗಿಲಾಗಿ ಪ್ರೀತಿಸುತ್ತೇನೆ. ಕೃಷ್ಣನು ಸರ್ವವ್ಯಾಪಕನಾದುದರಿಂದ ನಾನು ಎಲ್ಲವನ್ನು ಪ್ರೀತಿಸುತ್ತೇನೆ.

ಪ್ರೇಮವೆ೦ಬುದು ಈಗ ಈ ನಶ್ವರವಾದ ದೇಹದ ಸ್ತರದಲ್ಲಿದೆ. ಆದರೆ ಕೃಷ್ಣ ಪ್ರೇಮವು ಬೆಳೆದಾಗ ನಾನು ನನ್ನನ್ನು ಮಾತ್ರವಲ್ಲದೆ ಪ್ರತಿಯೊಂದು ಜೀವಿಯನ್ನು ಪ್ರೀತಿಸುತ್ತೇನೆ. ಏಕೆಂದರೆ ಆಗ ಬಹಿರಂಗ ಉಪಾಧಿಯಾದ ದೇಹವು ಮರೆತುಹೋಗುತ್ತದೆ. ವ್ಯಕ್ತಿಯು ಪೂರ್ತಿಯಾಗಿ ಕೃಷ್ಣ ಪ್ರಜ್ಞನಾದಾಗ ಇಲ್ಲೊಬ್ಬ ಮನುಷ್ಯ, ಇಲ್ಲೊಂದು ಪ್ರಾಣಿ, ಇದು ನಾಯಿ ಬೆಕ್ಕು ಎಂದು ಆಲೋಚಿಸುವುದಿಲ್ಲ. ಎಲ್ಲವೂ ಭಗವ೦ತನ ಅಂದರೆ ಕೃಷ್ಣನ ವಿಭಿನ್ನಾಂಶವಾಗಿಯೇ ನೋಡುತ್ತಾನೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi