– ಆಕರ: ದೆಹಲಿಯಲ್ಲಿ ವಿಶ್ವ ಪುರಾತತ್ತ್ವ ಸಮ್ಮೇಳನದಲ್ಲಿ ಧೃತಕರ್ಮದಾಸರು ಮಂಡಿಸಿದ ಪ್ರಬಂಧ, ಸಂಗ್ರಹಾನುವಾದ : ಚೇತನಾ ತೀರ್ಥಹಳ್ಳಿ
ಇಂದಿನ ಆಧುನಿಕ ಐತಿಹಾಸಿಕ ವಿಜ್ಞಾನಿಗಳು ಮತ್ತು ಪುರಾತತ್ತ್ವಜ್ಞರು ಕಾಲಗಣನೆಗಾಗಿ ಜ್ಯುಡೋ ಕ್ರಿಶ್ಚಿಯನ್ ಪದ್ಧತಿಯನ್ನು ಹೋಲುವ ಬಗೆಯನ್ನೇ ಅನುಸರಿಸುತ್ತಿದ್ದಾರೆ ಮತ್ತು ಅದು, ಪ್ರಾಚೀನ ಭಾರತೀಯ ಮತ್ತು ಗ್ರೀಕಿನ ಕಾಲಗಣನೆ ಪದ್ಧತಿಗಳಿಂದ ಸಂಪೂರ್ಣ ಭಿನ್ನವಾಗಿದೆ. ಈ ಗ್ರಹಿಕೆಯನ್ನು ಖಂಡಿತ ಸಾಮಾನ್ಯೀಕರಣವೆನಿಸಬಹುದು.

ಏಕೆಂದರೆ, ಒಂದೇ ನಾಗರಿಕತೆಯ ಹಲವು ಬಣಗಳಲ್ಲಿ ನಾವು ಕಾಲಗಣನೆಗೆ ವಿಭಿನ್ನ ಪದ್ಧತಿಗಳನ್ನು ಬಳಸುವುದನ್ನು ಗಮನಿಸಬಹುದು. ಈವರೆಗಿನ ಖ್ಯಾತ ಚಿಂತಕರಲ್ಲಿ ಕೆಲವರು ಕಾಲದ ಚಕ್ರೀಯ ಗತಿಯನ್ನು ಮತ್ತು ಕೆಲವರು ರೇಖೀಯ ಗತಿಯನ್ನು ಅನುಸರಿಸಿ ಸಂಶೋಧನೆಗಳನ್ನು ನಡೆಸಿರುವರು.
ಆದರೆ ಗ್ರೀಕ್ನ ಪದ್ಧತಿಗಳು ಮತ್ತು ಭಾರತೀಯ ಪದ್ಧತಿಗಳಲ್ಲಿ ನಾವು ಕೆಲವು ಸಮಾನತೆಗಳನ್ನು ಕಾಣಬಹುದು. ಉದಾಹರಣೆಗೆ, ಹೆಸಿಡೋನ ಪ್ರಕಾರ; ಸುವರ್ಣ, ರಜತ, ತಾಮ್ರ, ಹಿರೋಯಿಕ್ ಮತ್ತು ಕಬ್ಬಿಣ ಯುಗಗಳಿವೆ. ಭಾರತೀಯ ಶಾಸ್ತ್ರಗಳು ಕೂಡ ಕಾಲದಿಂದ ಕಾಲಕ್ಕೆ ಮಾನವೀಯ ಮೌಲ್ಯಗಳು ಕುಸಿಯುತ್ತ ಸಾಗುವ ನಾಲ್ಕು ಯುಗಗಳನ್ನು ಉಲ್ಲೇಖಿಸುತ್ತವೆ.
ಪ್ಲೇಟೋನು ಸಮಯವು ಚಕ್ರದಂತೆ ತಿರುಗುವುದನ್ನೂ ಕುರಿತು ಹೇಳಿದ್ದಾನೆ. ಪ್ಲೇಟೋ, ಅರಿಸ್ಟಾಟಲ್, ಪೈಥಾಗೊರಸ್, ಎಂಪೆಡೋಕಲ್ಸ್ ಇವರೆಲ್ಲ ಆತ್ಮದ ಅಲೆತವನ್ನೂ, ಕಾಲದ ಚಕ್ರಗತಿಯು ವ್ಯಕ್ತಿಯ ಅಸ್ತಿತ್ವದ ಮೇಲೆ ಪ್ರಭಾವ ಬೀರುವುದನ್ನು ಕುರಿತು ಹಲವು ಬರಹಗಳಲ್ಲಿ ನಿರೂಪಿಸಿದ್ದಾರೆ.
ಆದರೆ ಯೂರೋಪಿನಲ್ಲಿ ಜ್ಯುಡೋ ಕ್ರಿಶ್ಚಿಯನ್ ನಾಗರಿಕತೆಯ ಉಗಮದೊಂದಿಗೆ ಮತ್ತೊಂದು ಬಗೆಯ ಕಾಲಗಣನೆ ಪದ್ಧತಿಯ ಸ್ಥಾನ ಪಡೆದುಕೊಂಡಿತು. ಅದರಂತೆ, ಸಮಯವು ಸರಳರೇಖೆಯಂತೆ ನೇರವಾಗಿ ಸಾಗುವುದು ಎಂದು. ಅಂದರೆ, ಈ ಚಿಂತನೆಯ ಪ್ರಕಾರ, ಸಮಯಕ್ಕೊಂದು ಆದಿಯಿದೆ.
ಅದು ವಿಶ್ವದ ಉಗಮದೊಂದಿಗೆ ಆರಂಭವಾಗುತ್ತದೆ. ಕಾಲಾನಂತರದ ನಿರ್ದಿಷ್ಟ ಸಮಯದಲ್ಲಿ ಇತರ ಜೀವಿಗಳ ಉಗಮ. ಮತ್ತೊಂದು ಹಂತದಲ್ಲಿ ಮಾನವರ ಆವಿರ್ಭಾವ, ದೀರ್ಘಕಾಲದ ಅನಂತರ ಮಾನವ ಜೀವಿಗಳೆಲ್ಲರ ಮುಕ್ತಿ, ಅಂತಿಮವಾಗಿ – ವಿಶ್ವದ ಅಂತ್ಯ. ಇಲ್ಲಿಗೆ ಎಲ್ಲವೂ ಮುಗಿಯಿತು. ಇಂತಹ ಚಿಂತನೆಗೆ ಕಾರಣ, ಕೆಲವು ಸಾಂಪ್ರದಾಯಿಕ ಮನೋಭಾವದ ಕ್ರೈಸ್ತರು ಆತ್ಮದ ಪುನರ್ವಸತಿಯಲ್ಲಿ ನಂಬಿಕೆ ಹೊಂದಿಲ್ಲದಿರುವುದು.
ಇಂದಿನ ವಿಜ್ಞಾನಿಗಳು ಜ್ಯುಡೋ ಕ್ರಿಶ್ಚಿಯನ್ನರ ಈ ಚಿಂತನೆಯ ಜಾಡು ಹಿಡಿದು ತಮ್ಮ ಪ್ರಯೋಗ – ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಈ ವಿಜ್ಞಾನಿಗಳ ಮೇಲೆ ಜ್ಯುಡೋ ಕ್ರಿಶ್ಚಿಯಾನಿಟಿಯ ಪ್ರಭಾವ ಎಷ್ಟಿದೆಯೆಂದರೆ, ಅವರು ಪ್ರತಿಪಾದಿಸುವ ಎವಲ್ಯೂಶನ್ ಥಿಯರಿ ಮತ್ತು ನಾಗರಿಕತೆಯ ಉಗಮದ ಕುರಿತಾದ ವಾದಗಳು ಕೂಡ ಅವುಗಳ ಹಾದಿಯಲ್ಲಿಯೇ ಸಾಗುತ್ತವೆ.

ಜ್ಯುಡೋ ಕ್ರಿಶ್ಚಿಯಾನಿಟಿಯ ವಾದದಂತೆಯೇ ಆಧುನಿಕ ಮಾನವನ ವಿಕಾಸವಾದವು ಇನ್ನಿತರ ಜೀವಿಗಳ ಉಗಮದ ಮುಂದಿನ ಹಂತವಾಗಿ ನಿರೂಪಿಸಲ್ಪಡುತ್ತದೆ. ಕ್ರಿಶ್ಚಿಯನ್ ನಂಬಿಕೆಯಂತೆ ಭಗವಂತನು ಮೊದಲು ಐದು ದಿನಗಳ ಕಾಲ ಭೂಮಿ ಮತ್ತು ಜೀವಿಗಳನ್ನೂ, ಆರನೆಯ ದಿನ ಮಾನವನನ್ನೂ ಸೃಷ್ಟಿಸಿದನು.
ಡಾರ್ವಿನ್ನನ ಕಾಲಕ್ಕೆ ಈ ನಂಬಿಕೆಯು ಸ್ವಲ್ಪ ವಿಸ್ಕೃತಗೊಂಡು, ಸಹಸ್ರ ಮಾನಗಳ ಅಂತರದಲ್ಲಿ ಆದರೆ ಅದೇ ಹಂತಗಳ – ಅದೇ ಕ್ರಮದಲ್ಲಿ ಜಗತ್ತಿನ ಮತ್ತು ಮಾನವನ ಸೃಷ್ಟಿಯಾಯಿತೆಂಬ ವಾದವು ರೂಪುಗೊಂಡಿತು. ಆನಂತರದ ವಿಜ್ಞಾನಿಗಳ ಚಿಂತನೆ ಮುಂದುವರಿದಿದ್ದೂ ಇದೇ ಕ್ರಮದಲ್ಲಿಯೇ ಆಧುನಿಕ ವಿಕಾಸವಾದದ ಪ್ರಕಾರ, ಆಧುನಿಕ ಮಾನವನ ದೈಹಿಕ ಮತ್ತು ಮಾನಸಿಕ ವಿಕಸನ ನಡೆದಿದ್ದು ಭೂಮಿಯ ಉಗಮಕ್ಕೆ ಹೋಲಿಸಿದರೆ ತೀರಾ ಇತ್ತೀಚೆಗೆ!
ಅದು ಕೂಡ ವಾನರ ಜಾತಿಯ ಪ್ರಾಣಿಯ ವಿಕಾಸದ ಮುಂದಿನ ಹಂತವಾಗಿ, 100,000 ವರ್ಷಗಳೆಂದು ನಿಗದಿಪಡಿಸಿದರೂ ಕೂಡ, ಜ್ಯೂಡೋ ಕ್ರೈಸ್ತ ತತ್ತ್ವಗಳಿಗೆ ಸಹಮತವುಳ್ಳ ಆಧುನಿಕ ಪುರಾತತ್ತ್ವಜ್ಞರು ಮತ್ತು ಇತಿಹಾಸಕಾರರು ನಾಗರಿಕತೆಯ ಕಾಲಮಾನವನ್ನು ಕೆಲವೇ ಸಾವಿರ ವರ್ಷಗಳ ಈಚಿನದು ಎಂದು ಲೆಕ್ಕ ಹಾಕುತ್ತಾರೆ.
ಮತ್ತೆ ಜ್ಯೂಡೋ ಕ್ರೈಸ್ತರ ವಾದದಂತೆಯೇ – ಅದು ಹುಟ್ಟಿ ಬೆಳೆದಿದ್ದು ಮಧ್ಯ ಪ್ರಾಚ್ಯದಲ್ಲಿ ಎಂಬುದು ಅವರ ಅಭಿಮತವಾಗಿದೆ. ಇಲ್ಲಿ ಆಧುನಿಕ ವಿಜ್ಞಾನಿಗಳ ಚಿಂತನೆ ಮತ್ತು ಜ್ಯೂಡೋ ಕ್ರೈಸ್ತವಾದದ ಚಿಂತನೆ ಪರಸ್ಪರ ಸಂಬಂಧ ಹೊಂದಿದೆ ಎಂದು ಹೇಳುತ್ತಿಲ್ಲ. ಆದರೆ, ಇವೆರಡೂ ತತ್ತ್ವಗಳಲ್ಲಿ ಹಲವು ಸಾಮಾನ್ಯ ಚಿಂತನಗಳಿರುವುದನ್ನು ನಾವು ಧಾರಾಳವಾಗಿ ಕಾಣಬಹುದಾಗಿದೆ.
ಕಾಲಗಣನೆಯ ವಿಷಯಕ್ಕೆ ಬಂದಾಗ ಆಧುನಿಕ ವಿಜ್ಞಾನ ಮತ್ತು ಜ್ಯೂಡೋಕ್ರಿಶ್ಚಿಯನ್ ವಾದಗಳಲ್ಲಿ ನಾವು ಸಾಮ್ಯವನ್ನು ಕಾಣುತ್ತೇವೆ. ಇವೆರಡೂ ಪರಸ್ಪರ ಸಂಬಂಧ ಹೊಂದಿದ್ದರೂ, ಹೊಂದಿಲ್ಲವಾದರೂ, ಅಲ್ಲೊಂದು ಏಕಸೂತ್ರವಿದೆ. ಇದು ʼಸಮಯದ ನೇರ ಚಲನೆ’ ಗೆ ಸಂಬಂಧಪಟ್ಟಿದ್ದು, ನಾನೀಗ ಇದಕ್ಕೆ ತೀರಾ ವಿರುದ್ಧವಾದ, ಸಮಯದ ಚಕ್ರೀಯ ಗತಿಯ ಸಿದ್ಧಾಂತವನ್ನು ಹೇಳ ಬಯಸುತ್ತೇನೆ. ಇದರ ಮಾಹಿತಿ, ಆಧಾರಗಳು ಭಾರತೀಯ ಪುರಾಣ ಮತ್ತು ಐತಿಹಾಸಿಕ ಗ್ರಂಥಗಳಲ್ಲಿ ಲಭ್ಯವಿದೆ.
ನನ್ನ ಆಸಕ್ತಿಯು ನನ್ನನ್ನು ಭಾರತದ ವೈಷ್ಣವ ಸಂಪ್ರದಾಯದ ಕಡೆಗೆ ಸೆಳೆದೊಯ್ದಿತು. ಅದು ನನಗೆ ಜೀವನದ ಪ್ರಾಥಮಿಕ ಪಾಠಗಳನ್ನೂ ದೃಷ್ಟಿಗೆ ನಿಲುಕುವ ವಿಶ್ವ ಮತ್ತು ಅದರಾಚೆಗಿನ ಜಗತ್ತಿನ ಬಗ್ಗೆ ಜ್ಞಾನವನ್ನೂ ಒದಗಿಸಿತು. ಧಾರ್ಮಿಕ ಗ್ರಂಥಗಳಲ್ಲಿ ದೊರೆಯುವ ಮಾಹಿತಿಯನ್ನು ವೈಜ್ಞಾನಿಕವಾಗಿ ಅಭ್ಯಸಿಸುವುದನ್ನು ಪುರಾತತ್ತ್ವ ಶಾಸ್ತ್ರವು ಖಡಾಖಂಡಿತವಾಗಿ ತಿರಸ್ಕರಿಸಿತ್ತು.

ಆದರೆ, ವಿಜ್ಞಾನಿಗಳು ತಮ್ಮ ದೈನಂದಿನ ಸಂಶೋಧನೆಗಳಲ್ಲಿ, ಅಧ್ಯಯನಗಳಲ್ಲಿ, ತಮಗರಿವಿದ್ದೋ – ಇಲ್ಲದೆಯೋ ತಮ್ಮ ಕ್ರೈಸ್ತ ಮೂಲಭೂತ ವಾದದೊಂದಿಗೆ, ಅದರ ಚಿಂತನೆಯನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮನ್ನು ಜೋಡಿಸಿಕೊಂಡಿದ್ದರು.
ಆದರೆ, ಜಗತ್ತನ್ನು ಬೇರೊಂದು ದೃಷ್ಟಿಕೋನದಿಂದ – ಭಾರತದ ಪೌರಾಣಿಕ ಕಾಲಗಣನೆಯ ಪದ್ಧತಿಯ ಪ್ರಕಾರ – ಗಮನಿಸಿದಾಗ ಸಂಪೂರ್ಣ ವಿಭಿನ್ನವಾದ ಸಂಗತಿಗಳು ಗೋಚರಿಸುತ್ತವೆ. ಈ ಮಾತನ್ನು ಹೇಳುತ್ತಿರುವ ಮೊದಲ ವ್ಯಕ್ತಿಯೇನೂ ನಾನಲ್ಲ. ಈಗಾಗಲೇ ಜೀನ್ಸೆಗರ್ ರಂತಹ ಹಲವಾರು ವಿದ್ವಾಂಸರು, ತತ್ತ್ವಶಾಸ್ತ್ರಜ್ಞರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪೌರಾಣಿಕ ಪದ್ಧತಿಯ ಕಾಲಗಣನೆಯು ನಾಲ್ಕು ಯುಗಗಳ ಚಕ್ರವನ್ನು ಒಳಗೊಂಡಿರುತ್ತದೆ. ಮೊದಲನೆಯದು ಸತ್ಯಯುಗ, ಇದು 1,728,000 ವರ್ಷಾವಧಿಯದ್ದಾಗಿರುತ್ತದೆ. ಎರಡನೆಯದು ತ್ರೇತಾಯುಗ, ಇದರ ಕಾಲಾವಧಿ 1,296,000 ವರ್ಷಗಳು, ಮೂರನೆಯ ದ್ವಾಪರ ಯುಗವು 864,000 ವರ್ಷಗಳದ್ದಾಗಿದೆ. ನಾಲ್ಕನೆಯ ಯುಗ ಕಲಿಯುಗ.
ಇದು 432,000 ವರ್ಷಾವಧಿ ಯದ್ದಾಗಿದೆ. ನಾಲ್ಕೂ ಯುಗಗಳು ಸೇರಿ ಒಟ್ಟಾರೆಯಾಗಿ 4.32 ಮಿಲಿಯ ವರ್ಷಗಳ ಒಂದ ಯುಗಚಕ್ರವಾಗುತ್ತದೆ. ಈ ಬಗೆಯ ಒಂದು ಸಾವಿರ ಯುಗಚಕ್ರಗಳು ಬ್ರಹ್ಮನ ಒಂದು ದಿನಕ್ಕೆ ಸಮನಾಗಿದೆ. ಬ್ರಹ್ಮನ ಒಂದು ದಿನವನ್ನು ‘ಕಲ್ಪ’ ಎಂದು ಕರೆಯಲಾಗಿದೆ. ಬ್ರಹ್ಮನ ರಾತ್ರಿಯು ಹಗಲಿನಷ್ಟೇ ದೀರ್ಘವಾಗಿರುತ್ತದೆ. ಬ್ರಹ್ಮನಿಗೆ ರಾತ್ರಿಯಾದಾಗ, ಇಡಿಯ ಜಗತ್ತು ನಾಶಗೊಂಡು ದೀರ್ಘ ಕತ್ತಲಲ್ಲಿ ಮುಳುಗಿಹೋಗುತ್ತದೆ. ಬ್ರಹ್ಮನ ಮತ್ತೊಂದು ದಿನದ ಆರಂಭದೊಡನೆ ಜಗತ್ತಿನ ಪುನರ್ಸೃಷ್ಟಿಯೂ ಮೊದಲಾಗುತ್ತದೆ.
ಬ್ರಹ್ಮನ ಪ್ರತಿಯೊಂದು ದಿನವನ್ನೂ 14 ಮನ್ವಂತರಗಳಾಗಿ ವಿಭಾಗಿಸಲಾಗಿದೆ. ಪ್ರತಿಯೊಂದೂ 71 ಯುಗ ಚಕ್ರಗಳ ಅವಧಿ ಪರ್ಯಂತ ಇರುತ್ತವೆ. ಪ್ರತಿಯೊಂದು ಮನ್ವಂತರದ ಅ೦ತ್ಯ ಮತ್ತು ಇನ್ನೊಂದರ ಆರಂಭದ ನಡುವಿನ ಸಂಧಿ ಕಾಲವನ್ನು ‘ಯುಗಸಂಧ್ಯಾ’ ಎಂದು ಕರೆಯಲಾಗಿದೆ. ಪ್ರತಿಯೊಂದು ಮನ್ವಂತರವೂ ಆ೦ಶಿಕ ಪ್ರಳಯದೊಂದಿಗೆ ಕೊನೆಯಾಗುತ್ತದೆ.
ಪೌರಾಣಿಕ ಮಾಹಿತಿಗಳ ಪ್ರಕಾರ, ನಾವಿಂದು ಮನ್ಯ೦ತರಾವಧಿಯ 28ನೆಯ ಯುಗ ಚಕ್ರದಲ್ಲಿದ್ದೇವೆ. ಇದರ ಪ್ರಕಾರ ಭೂಮಿ ಆಯಸ್ಸು 2.3 ಬಿಲಿಯನ್ ವರ್ಷಗಳಷ್ಟು. ಕುತೂಹಲಕರ ಸಂಗತಿಯೆಂದರೆ, ಅತ್ಯಂತ ಪುರಾತನ ಜೀವಿ ಆಲ್ಗೇಯ ಪಳೆಯುಳಿಕೆಯ ವಯಸ್ಸನ್ನು ಸರಿ ಸುಮಾರು ಅಷ್ಟೇ ವರ್ಷಗಳೆಂದು ಅಂದಾಜು ಮಾಡಲಾಗಿದೆ.

ಬ್ರಹ್ಮನ ದಿನ ಆರಂಭವಾದಾಗಿನಿಂದ ಭೂಮಿಯ ಮೇಲೆ ಈವರೆಗೆ 453 ಯುಗಚಕ್ರಗಳು ಕಳೆದಿವೆ. ಪ್ರತಿಯೊಂದು ಯುಗಚಕ್ರವೂ ಶಾಂತಿ ನೆಮ್ಮದಿಗಳ – ಆಧ್ಯಾತ್ಮ ಅನುಭೂತಿಯ ಸುವರ್ಣ ಯುಗದಿಂದ ಆರಂಭಗೊಂಡು ಹಿಂಸೆ ಮತ್ತು ಆಧ್ಯಾತ್ಮಿಕ ಅಧಃಪತನದ ಅಂತಿಮ ಯುಗದೊಡನೆ ಕೊನೆಗೊಳ್ಳುತ್ತದೆ. ಪ್ರತಿ ಕಲಿಯುಗದ ಕೊನೆಯಲ್ಲಿ ಭೂಮಿಯು ಆಂಶಿಕವಾಗಿ ಪ್ರಳಯಕ್ಕೊಳಗಾಗಿ ಜೀವಿಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತದೆ.
ಯುಗಚಕ್ರಗಳಲ್ಲಿ ಮಾನವ ಜೀವಿಗಳು ಇತರ ಮಾನವರನ್ನು ಹೋಲುವ ಜೀವಿಗಳೊಡನೆ ಸಾಂಗತ್ಯ ಹೊಂದಿದ್ದ ಪುರಾವೆಗಳಿವೆ. ಉದಾಹರಣೆಗೆ, ಭಾಗವತ ಪುರಾಣದಲ್ಲಿ (9.10.20) ನಾವು ದಿವ್ಯ ಅವತಾರನಾದ ಶ್ರೀರಾಮನು ಕಾಡುಗಳಲ್ಲಿ ವಾಸಿಸಿದ್ದ ವಾನರರ ಸಹಕಾರದಿಂದ ರಾವಣನ ಲಂಕೆಯನ್ನು ಪ್ರವೇಶಿಸಿ, ಆತನೊಡನೆ ಯುದ್ಧಮಾಡಿದನು. ಇದು ನಡೆದದ್ದು ಒಂದು ಮಿಲಿಯನ್ ವರ್ಷಗಳ ಹಿಂದೆ – ತ್ರೇತಾಯುಗದಲ್ಲಿ.
ಯುಗಚಕ್ರಗಳಲ್ಲಿ ನಡೆಯಿತೆನ್ನಲಾದ, ಪ್ರತಿ ಮನ್ವಂತರದ ಅಂತ್ಯ ಕಾಲದ ಮತ್ತು ಮಾನವ ಹಾಗೂ ವಾನರ ಜೀವಿಗಳ ಸಾಹಚರ್ಯಗಳು ಇಂದಿನ ಪುರಾತತ್ತ್ವ ದಾಖಲಾತಿಗೆ ಯಾವ ಮಾಹಿತಿಯನ್ನು ಉಳಿಸಿಹೋಗಿವೆ? ಈ ಪ್ರಶ್ನೆಗೆ ಉತ್ತರಿಸುವ ಮೊದಲು ನಾವು ಪುರಾತತ್ತ್ವ ಉತ್ಖನನದಿಂದ ಶೋಧಿಸಿ ತೆಗೆಯಲಾದ ಮಾನವನ ಪೂರ್ವಜರದೆಂದು ಹೇಳಲಾಗುವ ಹೊಮಿನಿಡ್ ಪಳೆಯುಳಿಕೆಗಳ ಆಪರಿಪೂರ್ಣತೆಯ ಬಗೆಗೂ ಯೋಚಿಸಬೇಕು.
ಈ ಪಳೆಯುಳಿಕೆಗಳು ಅತಿ ಅಪರೂಪವೆನಿಸುವಷ್ಟು ಸಂಖ್ಯೆಯಲ್ಲಿ, ಭೂಮಿಯ ಮೇಲ್ಪದರದ ಯಾವುದೋ ಒಂದು ಭಾಗದಲ್ಲಿ ದೊರೆತಿವೆಯಷ್ಟೆ. ಪೌರಾಣಿಕ ದೃಷ್ಟಿಯ ಕಾಲ ಮತ್ತು ಇತಿಹಾಸದಲ್ಲಿ ನಾವು ನರ ಮತ್ತು ವಾನರರ, ನಾಗರಿಕ ಮತ್ತು ಗ್ರಾಮ್ಯ ಜೀವನಗಳ ಸಂಮಿಶ್ರಣವನ್ನು ನೋಡಬಹುದು.
ಒಂದೆಡೆ ತಾಂತ್ರಿಕತೆಯ ಔನ್ನತ್ಯ ಕಂಡರೆ, ಮತ್ತೊಂದೆಡೆ ಅದರ ಗಂಧಗಾಳಿಯೇ ಇಲ್ಲದ ಜನರನ್ನೂ ನೋಡಬಹುದು. ಈಗಿನ ಪುರಾತತ್ತ್ವಜ್ಞರು ಮಾಡುತ್ತಿರುವಂತೆ ಕೆಲವು ಮಡಿಕೆ ಚೂರುಗಳನ್ನು ಕೆಲವು ಮೂಳೆಗಳನ್ನು ಇಟ್ಟುಕೊಂಡು ಕಾಲವನ್ನು ಅಳೆಯಲು ಬರುವುದಿಲ್ಲ ಮತ್ತು ಅದರ ಆಧಾರದ ಮೇಲೆ ಅಂದಿನ ಜನ ಜೀವನದ ರೀತಿಯನ್ನು ‘ಇದಮಿತ್ಥಮ್’ ಎನ್ನುವಂತೆ ಸಾಮಾನ್ಯೀಕರಿಸಿ ಹೇಳಲೂ ಬರುವುದಿಲ್ಲ.
ಇವೆಲ್ಲವನ್ನೂ ಪರಿಗಣಿಸಿ, ಪೌರಾಣಿಕ ದೃಷ್ಟಿಕೋನದಿಂದ ಕಾಲ ಮತ್ತು ಇತಿಹಾಸವನ್ನು ನಾನು ನೋಡಬಯಸುತ್ತೇನೆ. ಅದರ ವಿವರಗಳು ಹಾಗೂ ದೊರೆತಿರುವ ಆಧಾರಗಳನ್ನು ತಾಳೆ ಹಾಕಿದರೆ, ಮಿಲಿಯಾಂತರ ವರ್ಷಗಳ ಹಿಂದೆ ಭೂಗೋಳದ ವಿವಿಧ ಭಾಗಗಳಲ್ಲಿ, ವಿವಿಧ ಅಂಗ ರಚನೆ, ಜೀವನ ಶೈಲಿಯ ಮಾನವನ ಇರುವು ದೃಢವಾಗುತ್ತದೆ.

ಹಾಗೆಯೇ, ಕಳೆದ ನೂರೈವತ್ತು ವರ್ಷಗಳಿಂದ ಪುರಾತತ್ತ್ವ ಶಾಸ್ತ್ರಜ್ಞರು ಹಾಗೂ ಜೀವ ಇತಿಹಾಸಕಾರರು ಸರಳ-ನೇರ ಹಾಗೂ ವಿಕಾಸಾತ್ಮಕ ನಿರೂಪಣೆಯ ಮಾನವ ಉಗಮ ಹಾಗೂ ಬೆಳವಣಿಗೆಯ ವಾದವನ್ನು ಸಮರ್ಥಿಸಲೆಂದೇ ಈ ಪಳೆಯುಳಿಕೆಗಳು ಹಾಗೂ ಪರಿಕರಗಳ ಸಂಮಿಶ್ರಣದ ಕುರುಹುಗಳನ್ನು ಅಡಗಿಸಿಟ್ಟಿರುವುದು ಖಾತ್ರಿಯಾಗುತ್ತದೆ.
ನಾನು ಹಾಗೂ ರಿಚರ್ಡ್ ಥಾಮಸನ್ ಪುರಾತತ್ತ್ವ ದಾಖಲೆಗಳನ್ನು ಅನ್ವೇಷಿಸಿ ಪ್ರಕಟಿಸಿದ್ದೆವು. ನಮ್ಮ ಸಂಶೋಧನೆಗಳು “ಫಾರ್ ಬಿಡನ್ ಆರ್ಕಿಯಾಲಜಿ’” (Forbidden Archaeology) ಪುಸ್ತಕದಲ್ಲಿ ದಾಖಲಿಸಿರುವೆವು.
ಎಲ್ಲಕ್ಕಿಂತ ಮೊದಲು, ಮಾನವ ನಿರ್ಮಿತಿಯ ಹಲವಾರು ವಸ್ತುಗಳು ಉತ್ತಮ ಪುರಾವೆಯಾಗಿ ಉಳಿದಿವೆ. ಆದರಿಲ್ಲಿ ನಾವು ಕೆಲವನ್ನು ಮಾತ್ರ ಉದಾಹರಿಸಿದ್ದೇವೆ. ಈ ಪುರಾವೆಗಳು ಹಲವು ವಿಭಾಗಗಳಲ್ಲಿ ಕವಲೊಡೆದಿವೆ. ಮೊದಲನೆಯದಾಗಿ, ಮನುಷ್ಯನ ಕೈಚಳಕಕ್ಕೊಳಪಟ್ಟ ಪ್ರಾಣಿಗಳ ಎಲುಬುಗಳು.
ಅವುಗಳ ಮೇಲೆ ಕಲ್ಲಿನ ಆಯುಧಗಳಿಂದ ಒಡಮೂಡಿದ ಗುರುತುಗಳಿವೆ. 211 ಮಿಲಿಯ ವರ್ಷಗಳ ಹಿಂದಿನ ಇಂತಹ ಎಲುಬುಗಳನ್ನು ಯೂರೋಪಿನ ವಿಜ್ಞಾನಿಗಳು ಸಂಶೋಧಿಸಿದ್ದರು. ಇನ್ನು ಕೆಲವು ವಸ್ತುಗಳ ಮೇಲೆ ಕಲಾತ್ಮಕ ಚಿತ್ರಗಳಿದ್ದ ನಿದರ್ಶನಗಳೂ ಇವೆ. ಉದಾಹರಣೆಗೆ, 1881 ರಲ್ಲಿ ಬ್ರಿಟಿಷ್ ಭೂಗರ್ಭಶಾಸ್ತ್ರಜ್ಞ ಹೆನ್ರಿ ಸ್ಟೋಪ್ಸ್ಗೆ ಮಾನವನ ಮುಖ ಕೊರೆದ ದೊಡ್ಡ ಚಿಪ್ಪೊಂದು ದೊರೆತಿತ್ತು, ಮತ್ತದು 2 ಮಿಲಿಯನ್ ವರ್ಷಗಳ ಹಿ೦ದಿನದೆಂದು ಸಾಬೀತಾಯ್ತು.
ಇನ್ನು ಕಲ್ಲಿನ ಆಯುಧಗಳು ಹಾಗೂ ಕರಕುಶಲ ವಸ್ತುಗಳಂತೂ ಹೇರಳವಾಗಿ ದೊರೆತಿವೆ. 300 ಮಿಲಿಯ ವರ್ಷ ಹಳತಾದ ಕಲ್ಲಿದ್ದಲ ರಾಶಿಯಿಂದ ಬಂಗಾರದ ಸರ, ಕಬ್ಬಿಣದ ಮಡಿಕೆ, ಕಲ್ಲಿನ ಕೆತ್ತನೆಗಳನ್ನು ಹೊರತೆಗೆಯಲಾಗಿದೆ. ಇಲಿನಾಯ್ಸ್ ಕಲ್ಲಿದ್ದಲ ಗಣಿಯಲ್ಲಿ ದೊರೆತ ಮಾನವ ತಲೆಬುರುಡೆಯೂ ಕೆಂಟುಕಿಯಲ್ಲಿ ಕಂಡು ಬಂದ ಮಾನವ ಹೆಜ್ಜೆಗುರುತುಗಳೂ 300 ಮಿಲಿಯ ವರ್ಷಗಳಷ್ಟು ಹಳತೇ!
ಆದರೆ ನಮ್ಮ ಜೀವ ವಿಕಾಸ ಹಾಗೂ ಭೂಗರ್ಭ ಶಾಸ್ತ್ರಜ್ಞರು ಅಷ್ಟು ಹಿಂದಿನ ಕಾಲದಲ್ಲಿ ಮಾನವನು ಸಂಪೂರ್ಣ ಪ್ರಗತಿ ಹೊಂದಿದ್ದನೆಂದು ಊಹಿಸಲೂ ಹೋಗುವುದಿಲ್ಲ!! ಬಹುಶಃ ಇದಕ್ಕೆ ಪಾಶ್ಚಾತ್ಯ ಇತಿಹಾಸಕಾರರ ಹಾಗೂ ಮಾನವಶಾಸ್ತ್ರಜ್ಞರ ಧಾರ್ಮಿಕ ಪ್ರತಿಪಾದಿತ ವಾದಗಳ ನಂಬಿಕೆಯೇ ಕಾರಣವಿರಬಹುದು.
ಆಧುನಿಕ ಮಾನವ ಶಾಸ್ತ್ರಜ್ಞರು ತಮ್ಮ ಮುಸುಕನ್ನು ಸರಿಸಿ ಕೂಲಂಕಷವಾಗಿ ಪರಿಶೀಲಿಸಿದರೆ, ಆಗ ತಮ್ಮ ಹಿಂದಿನ ಅಧ್ಯಯನಗಳಲ್ಲಿ ಧಾರ್ಮಿಕ ಪ್ರಭಾವಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಮತ್ತು ಈ ಕಾರಣದಿಂದಲೇ ಪುರಾಣೋಕ್ತ ಕಾಲ ಪರಿಕಲ್ಪನೆಯೆಡೆಗಿನ ಅವಜ್ಞೆಯನ್ನು ಅರಿಯಬಹುದು.






Leave a Reply