ವಿಜಯದ ಸಂಕೇತ ದಸರಾ

– ಗಾಯತ್ರಿ ದೇವಿ

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ ।
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ।।

ಸಜ್ಜನರನ್ನು ರಕ್ಷಿಸುವುದಕ್ಕಾಗಿಯೂ ದುಷ್ಟರನ್ನು ನಾಶಮಾಡುವುದಕ್ಕಾಗಿಯೂ ಮತ್ತು ಧರ್ಮದ ತತ್ತ್ವಗಳನ್ನು ಮತ್ತೆ ಸ್ಥಾಪಿಸುವುದಕ್ಕಾಗಿಯೂ ನಾನು ಪ್ರತಿಯುಗದಲ್ಲಿ ಅವತರಿಸುತ್ತೇನೆ.

(ಭಗವದ್ಗೀತೆ 4.8)

ದುಷ್ಟಶಕ್ತಿಯ ಸಂಹಾರ ಮತ್ತು ಶಿಷ್ಟಶಕ್ತಿಯ ಜಯಭೇರಿ. ಇದೇ ದಸರಾ. ಸಡಗರ ಸಂಭ್ರಮದ ದಸರಾವು ಭಗವಂತನನ್ನು ಕೊಂಡಾಡುವ ಹಬ್ಬ. ರಾವಣನ ವಿರುದ್ಧ ರಾಮನ ವಿಜಯೋತ್ಸವದ ಆಚರಣೆ, ಮಹಿಷಾಸುರನನ್ನು ದುರ್ಗೆಯು ಸಂಹರಿಸಿದ ಸಂಭ್ರಮದ ಆಚರಣೆ. ವಿಜಯದಶಮಿಯು ಅಸುರಶಕ್ತಿ ವಿರುದ್ಧ ದೈವೀಶಕ್ತಿಯ ವಿಜಯದ ಸಂಕೇತ.

ಇನ್ನೇನು ಹತ್ತು ದಿನಗಳ ದಸರಾ ಉತ್ಸವ ಆರಂಭಗೊಳ್ಳಲಿದೆ. ಅದರತ್ತ ಒಂದು ನೋಟ.
ರಾವಣನ ವಿರುದ್ಧ ರಾಮನ ವಿಜಯದ ಉತ್ಸವ. ಇದನ್ನು ದಸರಾ ಎನ್ನುತ್ತಾರೆ. ದಶ ಮತ್ತು ಹರಾ. ಅಂದರೆ ದಶಶಿರದ ರಾವಣನ ಸಂಹಾರ. ರಾವಣ, ಕುಂಭಕರ್ಣ ಮತ್ತು ಮೇಘನಾಥರ ಪ್ರತಿಕೃತಿಗಳನ್ನು ದಹನ ಮಾಡಲಾಗುವುದು.

ದೇವತೆಗಳ ವಿರುದ್ಧ ಸಮರದಲ್ಲಿ ತೊಡಗಿದ್ದ ಮಹಿಷಾಸುರನು ಅತ್ಯಂತ ಶಕ್ತಿಶಾಲಿ ರಾಕ್ಷಸ. ದೇವತೆಗಳು ದೇವಿ ದುರ್ಗೆಯ ಸಹಾಯ ಕೋರುತ್ತಾರೆ. ದಿವ್ಯಮಾತೆ ದುರ್ಗಾದೇವಿಯು ಸಿಂಹದ ಮೇಲೇರಿ ಬಂದು ಒಂಬತ್ತು ದಿನಗಳ ಕಾಲ ಮಹಿಷಾಸುರನೊಡನೆ ಘೋರ ಕಾಳಗ ನಡೆಸುತ್ತಾಳೆ. ಹತ್ತನೆಯ ದಿನ ಅವನನ್ನು ಸಂಹರಿಸುತ್ತಾಳೆ. ಈ ಕಾರಣದಿಂದಾಗಿ ದಸರಾದಲ್ಲಿ ಶಸ್ತ್ರಪೂಜೆ, ದುರ್ಗಾಪೂಜೆ, ರಾಮಲೀಲ ಮತ್ತು ಶಮಿ ಪೂಜೆಯನ್ನು ಮಾಡುವ ಪದ್ಧತಿಯಿದೆ. ವಿಜಯದಶಮಿಗೆ ಮುನ್ನ 9 ದಿನಗಳ ಕಾಲ ಶಕ್ತಿದೇವತೆ ದುರ್ಗೆಯನ್ನು ವಿವಿಧ ರೂಪಗಳಲ್ಲಿ ಆರಾಧಿಸಲಾಗುತ್ತದೆ.

ಉತ್ತರದಲ್ಲಿ ದುರ್ಗಾಪೂಜೆ ಮತ್ತು ರಾಮ್‌‍ ಲೀಲಾ ತುಂಬಾ ಜನಪ್ರಿಯ. ದುರ್ಗಾಪೂಜೆಯನ್ನು ಐದು ದಿನಗಳ ಕಾಲ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುವುದು. ವಿಜಯದಶಮಿಯಂದು ಸಮಾರೋಪ. ಮಹಿಷಾಸುರನನ್ನು ಸಂಹರಿಸುವ ರೂಪದಲ್ಲಿ ದೇವಿ ದುರ್ಗೆಯ ಬೃಹತ್‌‍ ಶಿಲ್ಪವನ್ನು ಅಲಂಕೃತ ವೇದಿಕೆಯಲ್ಲಿ ಪ್ರತಿಷ್ಠಾಪಿಸಲಾಗುವುದು. ವಿಜಯದಶಮಿಯಂದು ಶಿಲ್ಪವನ್ನು ಮೆರವಣಿಗೆಯಲ್ಲಿ ಕರೆದೊಯ್ದು ನದಿಯಲ್ಲಿ ವಿಸರ್ಜಿಸಲಾಗುವುದು. ಅಸಂಖ್ಯ ಭಕ್ತರು ಇವುಗಳಲ್ಲಿ ಪಾಲ್ಗೊಳ್ಳುವರು. ಬಂಗಾಳದಲ್ಲಿ ಇದು ಪ್ರಮುಖ ಉತ್ಸವ.

ವಾರಾಣಸಿ, ಲಖನೌ ಮತ್ತು ಕಾನ್ಪುರ ಮತ್ತಿತರ ಕಡೆಗಳಲ್ಲಿ ರಾಮ ಕಥೆಯ ರಾಮ್‌‍ ಲೀಲಾ ಪ್ರದರ್ಶನಗೊಳ್ಳುತ್ತವೆ. ವಿಜಯದಶಮಿಯಂದು ರಾವಣ, ಕುಂಭಕರ್ಣ ಮತ್ತು ಮೇಘನಾಥರ ಪ್ರತಿಕೃತಿಗಳ ದಹನ ಮತ್ತು ಜನರಿಗೆ ರೋಮಾಂಚನ.

ಗುಜರಾತ್‌‍ ನಲ್ಲಿ ದಸರಾವನ್ನು ನವರಾತ್ರಿ ಎಂದು ಆಚರಿಸಲಾಗುವುದು. ಜನಪ್ರಿಯ ಜಾನಪದ ನೃತ್ಯ ಗರ್ಭಾ ನೃತ್ಯವು ಪ್ರಮುಖ ಆಕರ್ಷಣೆ.

ಮೈಸೂರು ದಸರಾ

ದಸರಾ ಎಂದರೆ ಮೈಸೂರು ದಸರಾ. ಇತಿಹಾಸದೊಂದಿಗೆ ಸಂಪ್ರದಾಯದ ಲೇಪನದಲ್ಲಿ ಹೊಸತನಕ್ಕೆ ತೆರೆದುಕೊಂಡು, ಕಲೆ, ಸಂಸ್ಕೃತಿಯನ್ನು ಬಿಂಬಿಸುತ್ತಾ ಸಡಗರ ಸಂಭ್ರಮದಲ್ಲಿ ಸಾಗುತ್ತಾ ಬಂದಿರುವ ಮೈಸೂರು ದಸರಾ ಎಂದೆಂದಿಗೂ ವಿಶ್ವ ದಸರಾ ಆಗಿಯೇ ಉಳಿದಿದೆ. ಸಾಂಸ್ಕೃತಿಕ ಭದ್ರನೆಲೆಗಟ್ಟಿನಲ್ಲಿ ಸಾಗಿ ಬಂದಿರುವುದೇ ಅದಕ್ಕೆ ಕಾರಣ. ರಾಜರ ಕಾಲದಲ್ಲಿ ರಾಜ ವೈಭವದಿಂದ ಆರಂಭವಾಗಿ ಇವತ್ತಿನ ಜನತಾ ದಸರಾವರೆಗಿನ ಸಡಗರ ಸಂಭ್ರಮವನ್ನು ಆಚರಿಸಿಕೊಂಡು ಬಂದಿರುವುದೇ ಇದಕ್ಕೆ ಸಾಕ್ಷಿ.

ವಿದ್ಯುತ್‌‍ ದೀಪಗಳ ಬೆಳಕಿನಲ್ಲಿ ಬೆಳಗುವ ಭವ್ಯ ಅರಮನೆ, ರಾಜವೈಭವ ನೆನಪಿಸುವ ಖಾಸಗಿ ದರ್ಬಾರ್, ಪೈಲ್ವಾನರ ಕುಸ್ತಿ, ಉದರ ತಣಿಸುವ ಆಹಾರ ಮೇಳ, ಸಾಹಿತ್ಯ ಪ್ರಿಯರಿಗೆ ಪುಸ್ತಕಗಳ ಮೇಳ, ಮಹಿಳೆ ಮಕ್ಕಳಿಗೆ ಮುದ ನೀಡಲು ಮಹಿಳಾ ಮಕ್ಕಳ ದಸರಾವನ್ನು ಇತ್ತೀಚಿನ ವರ್ಷಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಅಷ್ಟೇ ಅಲ್ಲದೆ ಖರೀದಿ ಮತ್ತು ಮನರಂಜನೆಗೆ ವಸ್ತುಪ್ರದರ್ಶನ, ಯುವಕ ಯುವತಿಯರಿಗೆ ಯುವ ದಸರಾ, ಇದೆಲ್ಲವನ್ನು ಮೀರಿ ಇತಿಹಾಸ ನೆನಪಿಸುವ ಜಂಬೂಸವಾರಿ. …ಇದು ಮೈಸೂರು ದಸರಾದ ವೈಭವ.

ವಿಜಯದಶಮಿಯನ್ನು ವಿಜಯನಗರದ ಅರಸರು ಆಚರಿಸಿಕೊಂಡು ಬರುತ್ತಿದ್ದರಂತೆ. ಆದರೆ ಅವರ ಸಾಮ್ರಾಜ್ಯ ಪತನಗೊಂಡ ಬಳಿಕ ಸಾಮಂತ ರಾಜರಾಗಿದ್ದ ಮೈಸೂರಿನ ಯದುವಂಶಸ್ಥರು ಇದನ್ನು ಮುಂದುವರಿಸಿಕೊಂಡು ಬಂದರು ಎಂದು ಹೇಳಲಾಗುತ್ತಿದೆ. ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿಸಿಕೊಂಡಿದ್ದ ರಾಜಒಡೆಯರ್‌‍ 1610ರಲ್ಲಿ ವಿಜಯನಗರ ಪರಂಪರೆಯ ಪ್ರತೀಕವಾಗಿದ್ದ ವಿಜಯದಶಮಿ ಆಚರಣೆಯನ್ನು ಮೊದಲ ಬಾರಿಗೆ ಆಚರಿಸಿದರು ಎಂಬುದು ಇತಿಹಾಸದಲ್ಲಿದೆ. ಆನಂತರ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ (1799-1868) ರಾಜಧಾನಿಯನ್ನು ಮೈಸೂರಿಗೆ ಬದಲಾಯಿಸಲಾಯಿತು ಮತ್ತು ಅವರು ಮೈಸೂರಿನಲ್ಲಿ ದಸರಾ ಆಚರಣೆಯನ್ನು ಮುಂದುವರೆಸಿದರು. ಕ್ರಮೇಣ ಇದು ತನ್ನದೇ ಆದ ವೈಭವದೊಂದಿಗೆ ವಿಶ್ವವಿಖ್ಯಾತಿ ಪಡೆಯಿತು.

ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಧಿವಿಧಾನದಂತೆ ಪೂಜೆ ಸಲ್ಲಿಸಿ ದಸರಾಕ್ಕೆ ವಿಧ್ಯುಕ್ತ ಚಾಲನೆ ನೀಡುವುದು ಸಂಪ್ರದಾಯವಾಗಿದೆ. ಬಳಿಕ ಪ್ರತಿದಿನವೂ ದಸರಾ ಸಂಗೀತೋತ್ಸವ, ದಸರಾ ನಾಟಕೋತ್ಸವ, ದಸರಾ ಜನಪದೋತ್ಸವ, ದಸರಾ ಕವಿಗೋಷ್ಠಿ, ದಸರಾ ಫಲಪುಷ್ಪಪ್ರದರ್ಶನ, ದಸರಾ ಕುಸ್ತಿ ಪ್ರದರ್ಶನ, ಬೊಂಬೆ ಪ್ರದರ್ಶನ, ದಸರಾ ಆಹಾರ ಮೇಳ, ಯುವದಸರಾ ಹೀಗೆ ವಿವಿಧ ಕಾರ್ಯಕ್ರಮಗಳು ನಡೆದರೆ, ದಸರಾ ಪ್ರಯುಕ್ತ ಕೆಲವು ಸಂಘಟನೆಗಳು ಹಲವು ಕಾರ್ಯಕ್ರಮಗಳನ್ನು ನಡೆಸುತ್ತವೆ.

ರಾಜವೈಭವ : ಇದೆಲ್ಲದರ ನಡುವೆ ಅಂಬಾವಿಲಾಸ ಅರಮನೆಯಲ್ಲಿ ನಡೆಯುವ ದಸರಾ ಖಾಸಗಿ ದರ್ಬಾರ್‌‍ ರಾಜವೈಭವವನ್ನು ಮತ್ತೆ ನಮ್ಮ ಕಣ್ಮುಂದೆ ತೆರೆದಿಡುತ್ತದೆ. ನವರಾತ್ರಿಗೆ ಮೊದಲೇ ಅರಮನೆಯ ದರ್ಬಾರ್‌‍ ಹಾಲ್ನಲ್ಲಿ ರತ್ನಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭವಾಗುತ್ತದೆ. ನವರಾತ್ರಿ ಸಂದರ್ಭ ಅರಮನೆಯ ಸಂಪ್ರದಾಯದಂತೆ ಪೂಜಾಕಾರ್ಯವನ್ನು ನೆರವೇರಿಸಿ ಒಡೆಯರ್‌‍ ಮನೆತನದ ರಾಜವಂಶಸ್ಥ ಯದುವೀರ್‌‍ ಒಡೆಯರ್‌‍ ಸಿಂಹಾಸನವನ್ನು ಅಲಂಕರಿಸುತ್ತಾರೆ. ನವರಾತ್ರಿಯ ಮೊದಲ ದಿನ ಅಂದರೆ ಪಾಡ್ಯದಂದು ಬೆಳಿಗ್ಗೆಯಿಂದ ಖಾಸಗಿ ದರ್ಬಾರ್‌‍ ನಡೆದರೆ, ಉಳಿದಂತೆ ಸಂಜೆ ವೇಳೆಯಲ್ಲಿ ಕಾರ್ಯಕ್ರಮ ನಡೆಯುತ್ತದೆ. ಪ್ರತಿ ದಿನ ಖಾಸಗಿ ದರ್ಬಾರ್‌‍ ನಡೆಯುವ ಮುನ್ನ ಕೆಲವು ವಿಧಿವಿಧಾನಗಳು ಕೂಡ ಇಲ್ಲಿ ನಡೆಯುತ್ತವೆ. ಅದರಂತೆ ಪಟ್ಟದ ಆನೆ, ಹಸು, ಕುದುರೆಗಳಿಗೆ ಅಲಂಕಾರ ಮಾಡಿ ಕೋಟೆ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಅರಮನೆಗೆ ಇವುಗಳ ಪ್ರವೇಶವಾಗುತ್ತದೆ. ಅನಂತರ ದರ್ಬಾರ್‌‍ ಆರಂಭವಾಗುತ್ತದೆ.

ಜಂಬೂ ಸವಾರಿ

ವಿಜಯದಶಮಿಯಂದು ನಡೆಯುವ ಜಂಬೂ ಸವಾರಿ ಅತ್ಯದ್ಭುತ. ಮೆರವಣಿಗೆಯ ಪ್ರಮುಖ ಆಕರ್ಷಣೆಯೇ ಚಿನ್ನದ ಅಂಬಾರಿ. ಮೊದಲು ಮಹಾರಾಜರು ಇದರಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗುತ್ತಿದ್ದರೆ ಈಗ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನಿಟ್ಟು ಮೆರವಣಿಗೆ ನಡೆಯುತ್ತದೆ. ದಸರಾ ದಿನದಂದು ನಿಗದಿತ ಮುಹೂರ್ತದಲ್ಲಿ ವಿಧಿ ವಿಧಾನದಂತೆ ಅಂಬಾರಿಯನ್ನು ಆನೆಗೆ ಹೊರಿಸಲಾಗುತ್ತದೆ. ಇದರೊಂದಿಗೆ ಸಿಂಗಾರಗೊಂಡ ಇತರ ಆನೆಗಳು ಹೆಜ್ಜೆ ಹಾಕುತ್ತವೆ.

ಜಂಬೂ ಸವಾರಿಯಲ್ಲಿ ವಿವಿಧ ಜಾನಪದ ಕಲಾತಂಡಗಳು, ವಿವಿಧ ಇಲಾಖೆಗಳಲ್ಲದೆ, ವಿವಿಧ ಜಿಲ್ಲೆಯ ಸ್ತಬ್ಧ ಚಿತ್ರಗಳು ಪಾಲ್ಗೊಂಡು ಮನಸ್ಸೆಳೆಯುತ್ತವೆ. ಅರಮನೆಯ ಆವರಣದಿಂದ ಆರಂಭವಾಗುವ ಜಂಬೂಸವಾರಿ ಸಯ್ಯಾಜಿರಾವ್‌‍ ರಸ್ತೆ ಮೂಲಕ ಸಾಗಿ ಬನ್ನಿಮಂಟಪದಲ್ಲಿ ಬನ್ನಿ ಕಡಿಯುವುದರೊಂದಿಗೆ ಅಂತ್ಯಗೊಳ್ಳುತ್ತದೆ. ಬಳಿಕ ಬನ್ನಿಮಂಟಪದ ಮೈದಾನದಲ್ಲಿ ಅಂದು ರಾತ್ರಿ ನಡೆಯುವ ಪಂಜಿನ ಮೆರವಣಿಗೆ, ಬೈಕ್‌‍ ರೇಸ್, ಬಾಣಬಿರುಸು ಪ್ರದರ್ಶನದೊಂದಿಗೆ ದಸರಾಕ್ಕೆ ವಿದಾಯ ಹೇಳಲಾಗುತ್ತದೆ.

ಬನ್ನಿಮರದ ಪೂಜೆ ಏಕೆ? ಇದಕ್ಕೆ ಮಹಾಭಾರತದ ಹಿನ್ನೆಲೆ ಇದೆ. ಪಾಂಡವರು ಅಜ್ಞಾತವಾಸಕ್ಕೆ ತೆರಳುವ ಮುನ್ನ ತಮ್ಮ ದಿವ್ಯ ಅಸ್ತ್ರಗಳನ್ನು ಬಟ್ಟೆಯಲ್ಲಿ ಸುತ್ತಿ ಶಮಿ (ಬನ್ನಿ) ಮರದ ಮೇಲಿನ ಕೊಂಬೆಗೆ ಕಟ್ಟಿ ವಿರಾಟನ ರಾಜನಲ್ಲಿಗೆ ಹೋದರಂತೆ. ಒಂದು ವರ್ಷದ ಅಜ್ಞಾತವಾಸದ ಅನಂತರ ವಿಜಯದಶಮಿಯಂದು ಅರ್ಜುನನು ಆ ಶಸ್ತ್ರಗಳನ್ನು ತೆಗೆದುಕೊಂಡು ಬಂದನು ಮತ್ತು ರಾಜ ವಿರಾಟನ ಗೋವುಗಳನ್ನು ಕದಿಯಲು ಪ್ರಯತ್ನಿಸಿದ ಕೌರವರನ್ನು ಪರಾಜಯಗೊಳಿಸಿದನೆಂದು ಇತಿಹಾಸ ಹೇಳುತ್ತದೆ.

ಸರಸ್ವತಿ ಪೂಜೆ ಮತ್ತು ವಿದ್ಯಾರಂಭ : ಒಂಬತ್ತನೆಯ ದಿನ ಸರಸ್ವತಿ ಪೂಜೆಯನ್ನು ಆಚರಿಸಲಾಗುತ್ತದೆ. ಪುಸ್ತಕಗಳನ್ನು ಇಟ್ಟು ಪೂಜಿಸಲಾಗುವುದು. ವಿದ್ಯೆಯನ್ನು ಆರಂಭಿಸಲು ಶುಭದಿನವೆಂದು ಪರಿಗಣಿಸಲಾಗಿದೆ. ಮಕ್ಕಳಿಗೆ ಸಂಗೀತ, ನೃತ್ಯ , ಇತರ ಜಾನಪದ ಕಲೆಗಳನ್ನು ಕಲಿಸಲು ಅಂದು ಆರಂಭಿಸಲಾಗುತ್ತದೆ. ಅಕ್ಕಿ ಅಥವಾ ಮರಳಿನ ಮೇಲೆ ಮಂತ್ರವನ್ನು ಮಕ್ಕಳ ಕೈಹಿಡಿದು ಬರೆಸುವ ಮೂಲಕ ವಿದ್ಯಾರಂಭ ಮಾಡಲಾಗುತ್ತದೆ. ತಂದೆ ಅಥವಾ ಕುಟುಂಬದ ಹಿರಿಯರು ಬರೆಸುತ್ತಾರೆ.

ಸುಗ್ಗಿಯ ಆರಂಭ : ವಿಜಯದಶಮಿ ಸುಗ್ಗಿಯ ಆರಂಭ. ಜನರು ಉತ್ತಮ ಮಳೆಬೆಳೆಗಾಗಿ ಮತ್ತು ಶಾಂತಿ ಸಮೃದ್ಧಿಗಾಗಿ ಭೂತಾಯಿಯ ಕೃಪೆಯನ್ನು ಕೋರುತ್ತಾರೆ. ಭಗವದ್ಗೀತೆಯಲ್ಲಿ ಕೃಷ್ಣನು ಯಜ್ಞದ ಪ್ರಾಮುಖ್ಯವನ್ನು ತಿಳಿಸಿದ್ದಾನೆ. ಆಹಾರ ಪದಾರ್ಥಗಳ ಮೇಲೆ ಎಲ್ಲರೂ ಅವಲಂಬಿತರು. ಬೆಳೆಗೆ ಮಳೆ ಆಧಾರ. ಮಳೆಗಾಗಿ ಯಜ್ಞವನ್ನು ಆಚರಿಸಬೇಕು.
ಕಲಿಯುಗದಲ್ಲಿ ಸಂಕೀರ್ತನಯಜ್ಞದ ಆಚರಣೆಯೇ ಮಾಡಬೇಕು. ಹೀಗಾಗಿ ಹರೇ ಕೃಷ್ಣ ಮಹಾಮಂತ್ರದ ಪಠಣವನ್ನು ಶಿಫಾರಸು ಮಾಡಲಾಗಿದೆ.

ಶ್ರೀ ಮಧ್ವಾಚಾರ್ಯರ ಅವತಾರ : ಶ್ರೇಷ್ಠ ವೈಷ್ಣವ ಆಚಾರ್ಯರಾದ ಶ್ರೀ ಮಧ್ವಾಚಾರ್ಯರು ವಿಜಯದಶಮಿಯಂದು ಅವತರಿಸಿದರು. ಹೀಗಾಗಿ ಇದಕ್ಕೆ ಮಹತ್ವ. ಅವರು ಶ್ರೀ ವ್ಯಾಸದೇವರನ್ನು ಕಾಣಲು ಹಿಮಾಲಯಕ್ಕೆ ತೆರಳಿದರು ಮತ್ತು ಅವರಿಂದ ಅಲೌಕಿಕ ಜ್ಞಾನವನ್ನು ಪಡೆದರು. ಅನಂತರ ಅವರು ಉಡುಪಿಯಲ್ಲಿ ಶ್ರೀ ಕೃಷ್ಣನ ಮಠವನ್ನು ಸ್ಥಾಪಿಸಿದರು ಮತ್ತು ಅವರ ಶಿಷ್ಯರು ಅಷ್ಠ ಮಠಗಳನ್ನು ಸ್ಥಾಪಿಸಿದರು.

ಭಗವದ್ಗೀತೆಯ ಈ ಶ್ಲೋಕವನ್ನು ಉಲ್ಲೇಖಿಸುತ್ತ ಲೇಖನ ಸಮಾಪ್ತಮಾಡಬಹುದು.

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ।
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ ।।

ಭರತ ವಂಶಜನಾದ ಅರ್ಜುನನೇ, ಯಾವಾಗ ಎಲ್ಲೆಲ್ಲಿ ಧರ್ಮದ ಅವನತಿಯಾಗುತ್ತದೋ ಮತ್ತು ಅಧರ್ಮವು ಹೆಚ್ಚುತ್ತದೋ ಆಗ ಸ್ವಯಂ ಅವತಾರ ಮಾಡುತ್ತೇನೆ. (ಭಗವದ್ಗೀತೆ 4.7)

ಆದುದರಿಂದ ವಿಜಯದಶಮಿಯು ಅಸುರಶಕ್ತಿ ವಿರುದ್ಧ ದೈವೀಶಕ್ತಿಯ ವಿಜಯದ ಸಂಕೇತ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi