ತುಳಸಿತೋಟದ ಶ್ರೀ ಪ್ರಸನ್ನ ಕೃಷ್ಣಸ್ವಾಮಿ ಮಂದಿರ

ಶ್ರೀ ಪ್ರಸನ್ನ ಕೃಷ್ಣಸ್ವಾಮಿ ಮಂದಿರವು ಬೆಂಗಳೂರಿನ ಮೆಜೆಸ್ಟಿಕ್‌ ಪ್ರದೇಶದಲ್ಲಿರುವ ಚಿಕ್ಕ ಲಾಲ್‌ಬಾಗ್‌ನ ಹಿಂಭಾಗದಲ್ಲಿ, ತುಳಸಿತೋಟದಲ್ಲಿದೆ.

ಎರಡು ಅಡಿ ಎತ್ತರದ ಭಗವಂತನ ಸುಂದರ ಮೂರ್ತಿಯು ಸಾಲಿಗ್ರಾಮ ಶಿಲೆಯದ್ದು. ಅತ್ಯಂತ ಆಕರ್ಷಕವಾದ ಶ್ರೀಕೃಷ್ಣನ ಮೂರ್ತಿಯು ನೃತ್ಯ ಭಂಗಿಯಲ್ಲಿದ್ದು ಎಡಗಾಲು ನೆಲದ ಮೇಲಿದ್ದರೆ ಬಲಗಾಲು ಕಮಲ ಪುಷ್ಪದ ಮೇಲಿದೆ. ಬಲಗೈಯಲ್ಲಿ ಬೆಣ್ಣೆ ಹಿಡಿದಿದ್ದಾನೆ, ಈ ಸುಂದರ ಕೃಷ್ಣ. ಇಲ್ಲಿ ಭಗವಂತನು ಬಾಲಕೃಷ್ಣನ ರೂಪದಲ್ಲಿದ್ದು, ಅವನ ವಾಹನ ಗರುಡನು ಅವನ ಪಾದತಳದಲ್ಲಿದ್ದಾನೆ. ಭಗವಂತನ ಈ ಆಕರ್ಷಕ ರೂಪವು ವಿಶೇಷವಾಗಿದ್ದು, ದರ್ಶನಕ್ಕೆ ಬಂದವರು ಆನಂದಿಸುವುದು ಖಚಿತ.

ಈ ಮಂದಿರದ ಮತ್ತೊಂದು ವಿಶೇಷವೆಂದರೆ ವಿವಿಧ ಯುಗಗಳಲ್ಲಿನ ಅವತಾರವನ್ನು ಪ್ರತಿನಿಧಿಸುವ ನಾಲ್ಕು ದೇವರ ವಿಗ್ರಹಗಳಿರುವ ಸನ್ನಿಧಿಗಳು. ಮುಖ್ಯ ದೇವರಾದ ಶ್ರೀ ಕೃಷ್ಣ (ದ್ವಾಪರ), ಶ್ರೀ ಲಕ್ಷ್ಮೀ ನರಸಿಂಹ (ಕೃತ ಯುಗ), ಶ್ರೀ ಕೋದಂಡ ರಾಮಸ್ವಾಮಿ (ತ್ರೇತಾ ಯುಗ) ಮತ್ತು ಶ್ರೀ ಲಕ್ಷ್ಮೀ ವೆಂಕಟೇಶ್ವರ (ಕಲಿಯುಗ). ಆಂಡಾಳ್‌ (ಭೂದೇವಿ), ಶ್ರೀ ಆಂಜನೇಯ ಸ್ವಾಮಿ, ಶ್ರೀ ರಾಮಾನುಜಾಚಾರ್ಯ ಮತ್ತು ಇತರ ಕೆಲವು ಶ್ರೇಷ್ಠ ಆಳ್ವಾರ್‌ ಮತ್ತು ಆಚಾರ್ಯರ ಸನ್ನಿಧಿಗಳೂ ಇಲ್ಲಿ ಇವೆ.

ದೇವಸ್ಥಾನದ ಇತಿಹಾಸ

ಮೈಸೂರು ದಿವಾನರಾಗಿದ್ದ ಶ್ರೀ ರಾವ್‌ ಬಹಾದ್ದೂರ್‌ ಬಿ.ಕೆ. ಗರುಡಾಚಾರ್‌ (1844-1948) ಅವರ ಮುತ್ತಜ್ಜ ಶ್ರೀ ವೆಂಕಟಾಚಲ ಅವರು 17ನೇ ಶತಮಾನದಲ್ಲಿ ಈ ಮಂದಿರವನ್ನು ನಿರ್ಮಿಸಿದರು. ಶ್ರೀ ಪ್ರಸನ್ನ ಕೃಷ್ಣಸ್ವಾಮಿ, ಶ್ರೀ ಆಂಡಾಳ್‌ದೇವಿ ಮತ್ತು ಶ್ರೀ ರುಕ್ಮಿಣಿದೇವಿಯ ವಿಗ್ರಹಗಳನ್ನು ಮೈಸೂರು ಮಹಾರಾಜ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್‌ ಕೊಡುಗೆ ನೀಡಿದರು. ಅದರೊಂದಿಗೆ ಮಂದಿರದ ನಿರ್ವಹಣೆಗೆಂದು 75,000 ರೂಪಾಯಿಗಳ ದೇಣಿಗೆ ನೀಡಿದರು. ಮೈಸೂರು ಮಹಾರಾಜರು ಅಂದು ನೀಡಿದ್ದ ದೇಣಿಗೆಯ ಬಡ್ಡಿ ಹಣವು ಈಗಲೂ ಮಂದಿರದ ನಿರ್ವಹಣೆಗೆ ದೊರೆಯುತ್ತಿದೆ.

ಅನಂತರ ಮಹಾರಾಜ ಶ್ರೀ ಚಾಮರಾಜ ಒಡೆಯರ್‌ ಅವರು ಮಂದಿರದ ಅಭಿವೃದ್ಧಿಗೆ 44 ಎಕರೆ ಭೂಮಿಯನ್ನು ನೀಡಿದರು. ದೇವಸ್ಥಾನದ ಶಾಸನದ ಪ್ರಕಾರ ಈ ಭೂಮಿಯು ವಿವಿಧ ದಿಕ್ಕಿನಲ್ಲಿ ಧರ್ಮಾಂಬು ಕೆರೆ, ಮಸ್ತಾನಸಾಬಿ ದರ್ಗಾ ಮತ್ತು ತರಗುಪೇಟೆವರೆಗೆ ವಿಸ್ತರಿಸಿತ್ತು. ಆದರೆ ಈಗ ದೇವಸ್ಥಾನಕ್ಕೆ ಉಳಿದಿರುವುದು 3 ಎಕರೆ ಮಾತ್ರ.

ಶ್ರೀ ರಾಮ ವಿಗ್ರಹ ಪ್ರತಿಷ್ಠಾಪನೆಗೆ ಕುತೂಹಲದಾಯಕ ಐತಿಹಾಸಿಕ ಹಿನ್ನೆಲೆ ಇದೆ. ಶ್ರೇಷ್ಠ ಸಂತರಾದ ತುಳಸಿ ರಾಮದಾಸ್‌ ಅವರು ಭಾರತ, ಶ್ರೀಲಂಕಾ, ಮಲೇಷಿಯಾ, ಸಿಂಗಪುರ ಮತ್ತು ಆಗಿನ ಬರ್ಮಾದಲ್ಲಿ ವ್ಯಾಪಕವಾಗಿ ಸಂಚರಿಸಿದ್ದರು. ಅವರು ಎಲ್ಲ ಕಡೆ ಶ್ರೀರಾಮ, ಸೀತೆ ಹಾಗೂ ಪರಿವಾರದ ಉತ್ಸವ ಮೂರ್ತಿಗಳನ್ನು ಒಯ್ಯುತ್ತಿದ್ದರು. ಅವರು ಪ್ರತಿ ತಿಂಗಳೂ ಪುನರ್ವಸು ನಕ್ಷತ್ರದಂದು ಶ್ರೀ ರಾಮ ಪಟ್ಟಾಭಿಷೇಕ ಮಾಡುತ್ತಿದ್ದರು. ತಮ್ಮ ಬದುಕಿನ ಅಂತ್ಯದಲ್ಲಿ ಅವರು ವಿಗ್ರಹಗಳನ್ನು ಶ್ರೀ ಗರುಡಾಚಾರ್‌ ಅವರಿಗೆ ಒಪ್ಪಿಸಿ ಶ್ರೀ ರಾಮನಿಗೆ ಕ್ರಮಬದ್ಧ ಪೂಜೆ ಮತ್ತು ಪಟ್ಟಾಭಿಷೇಕವನ್ನು ನಡೆಸುತ್ತಾ ಹೋಗಬೇಕೆಂದು ತಿಳಿಸಿದರು.

ಶ್ರೀ ಗರುಡಾಚಾರ್‌ ಅವರು ಸಂತ ತುಳಸಿರಾಮದಾಸರ ಆಶಯದಂತೆ 1908ರಲ್ಲಿ ಸನ್ನಿಧಿಗಳನ್ನು ನಿರ್ಮಿಸಿ ಶ್ರೀರಾಮ ವಿಗ್ರಹ ಮತ್ತು ಮಂದಿರದ ಮೂಲ ದೇವರ ವಿಗ್ರಹಗಳ ಪ್ರತಿಷ್ಠಾಪನೆ ಕಾರ್ಯ ಕೈಗೊಂಡರು. ಈ ಶುಭಾಚರಣೆಯ ಅನಂತರ ಮಂದಿರವು ಎಲ್ಲೆಡೆ ಪ್ರಸಿದ್ಧಿಯಾಯಿತು. ಸಂತರ ಕೊಡುಗೆಯ ಸ್ಮರಣಾರ್ಥ ಇದನ್ನು ತುಳಸೀವನಂ ಶ್ರೀ ಪ್ರಸನ್ನ ಕೃಷ್ಣಸ್ವಾಮಿ ಮಂದಿರ ಎಂದು ಕರೆಯಲಾಯಿತು.

ಅದಾದಮೇಲೆ ಮಂದಿರದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸಗಳು ನಡೆದಿವೆ. 1973ರಲ್ಲಿ ಮಂದಿರದ ರಾಜ ಗೋಪುರ ಮತ್ತು ಉತ್ತರ ಭಾಗದಲ್ಲಿ ಮಹಾದ್ವಾರವನ್ನು ನಿರ್ಮಿಸಲಾಯಿತು. ಶ್ರೀ ರಾಮನಿಗೆ ವಿಮಾನ ಗೋಪುರವನ್ನು 1998ರಲ್ಲಿ ಪುನರ್‌ ನಿರ್ಮಿಸಲಾಯಿತು. ಭಕ್ತರ ಅಪೇಕ್ಷೆಯಂತೆ 1996ರಲ್ಲಿ, ಮೂಲ ದೇವರ ಎಡ ಭಾಗದಲ್ಲಿ ಶ್ರೀ ವೆಂಕಟೇಶ್ವರನಿಗೆ ಪ್ರತ್ಯೇಕ ಸನ್ನಿಧಿ ನಿರ್ಮಿಸಲಾಯಿತು. ಮಂದಿರದ ಜೀರ್ಣೋದ್ಧಾರ ಕಾರ್ಯದಲ್ಲಿ ಎಲ್ಲ ಮೂರ್ತಿಗಳ ವಿಮಾನ ಗೋಪುರಗಳು, ಶ್ರೀ ರುಕ್ಮಿಣಿ ತಾಯಾರ್‌, ಶ್ರೀ ಆಂಡಾಳ್‌ ತಾಯಾರ್‌ ಮತ್ತು ಆಚಾರ್ಯರ ಸನ್ನಿಧಿಗಳ ಪುನರ್‌ ನಿರ್ಮಾಣ. ಶ್ರೀ ಆಂಜನೇಯ ಸ್ವಾಮಿ ವಿಗಹ್ರದ ಪ್ರತಿಷ್ಠಾಪನೆ ಮತ್ತು ವಿಮಾನ ಗೋಪುರ ನಿರ್ಮಾಣವು 2007 ರಲ್ಲಿ ನೆರವೇರಿತು. ಯಾಗಶಾಲೆ ಮತ್ತು ಪಾಕಶಾಲೆಯನ್ನೂ ನಿರ್ಮಿಸಲಾಯಿತು.

ಪೂಜೆ ಮತ್ತು ಉತ್ಸವ

ದೇವಸ್ಥಾನದಲ್ಲಿ ಪೂಜೆ ಮತ್ತು ಉತ್ಸವಗಳಲ್ಲಿ ವಿಶಿಷ್ಟಾದ್ವೈತ ಪರಂಪರೆಯನ್ನು ಅನುಸರಿಸಲಾಗುತ್ತಿದೆ. ಮಂದಿರದ ದಿನನಿತ್ಯ ಪೂಜೆಯು ಪಂಚರಾತ್ರ ಆಗಮ ಶಾಸ್ತ್ರದಂತೆ ನಡೆಯುತ್ತಿದೆ ಮತ್ತು ಶ್ರೀರಾಮಾನುಜಾಚಾರ್ಯರ ಬೋಧನೆಯಂತೆ ಶ್ರೀಮನ್‌ ನಾರಾಯಣನಿಗೆ ಎಲ್ಲ ಅರ್ಪಣೆ ಸಲ್ಲುತ್ತದೆ.

ವರ್ಷಾದ್ಯಂತ ವಿವಿಧ ಉತ್ಸವಗಳನ್ನು ಆಚರಿಸಲಾಗುತ್ತದೆ. ಬ್ರಹ್ಮರಥೋತ್ಸವ, ರಾಮೋತ್ಸವ, ಗೋಕುಲಾಷ್ಟಮಿ, ಪವಿತ್ರೋತ್ಸವ, ಶ್ರೀಜಯಂತಿ, ನರಸಿಂಹ ಜಯಂತಿ, ತಿರು ಅಧ್ಯಯನೋತ್ಸವ, ವಿಷ್ಣು ದೀಪೋತ್ಸವ ಮತ್ತು ಲಕ್ಷದೀಪೋತ್ಸವಗಳು ಪ್ರಮುಖವಾದವು. ಮೂಲ ದೇವರ ಮುಖ್ಯ ಉತ್ಸವವು ಚೈತ್ರ ಶುದ್ಧ ತೃತೀಯ ಭರಣಿ ನಕ್ಷತ್ರದಂದು ನಡೆಯುವ ಬ್ರಹ್ಮರಥೋತ್ಸವ ಮತ್ತು ಚೈತ್ರ ಶುದ್ಧ ಪಂಚಮಿ ರೋಹಿಣಿ ನಕ್ಷತ್ರದಂದು ನಡೆಯುವ ಅವಭೃತ ಸ್ನಾನ. ರಾಮೋತ್ಸವವನ್ನು ಶ್ರೀರಾಮ ನವಮಿಯಿಂದ ಪಟ್ಟಾಭಿಷೇಕದವರೆಗೆ 13 ದಿನ ಆಚರಿಸಲಾಗುತ್ತದೆ. ಈ ಎಲ್ಲ ದಿನಗಳೂ ವಾಲ್ಮೀಕಿ ರಾಮಾಯಣವನ್ನು ಪಠಿಸಲಾಗುವುದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi