ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಭಕ್ತರ ನಡುವೆ
ರೋಂನಲ್ಲಿ, ಮೇ 1974ರಲ್ಲಿ ನಡೆದ ಸಂವಾದ.

ಶ್ರೀಲ ಪ್ರಭುಪಾದ : ಜನರು ಎಲ್ಲ ರೀತಿಯ ನಿಷಿದ್ಧ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಏಕೆ? ಏನು ಉದ್ದೇಶ? ನೂನಂ ಪ್ರಮತ್ತಃ ಕುರುತೇ ವಿಕರ್ಮ ಯದ್ ಇಂದ್ರಿಯ ಪ್ರೀತಯ. ಏಕೈಕ ಉದ್ದೇಶ ಇಂದ್ರಿಯ ಸುಖ. “ಇಂದ್ರಿಯ ಸುಖಕ್ಕಾಗಿ ನಾನು ಈ ಎಲ್ಲ ಪಾಪ ಕರ್ಮಗಳನ್ನು ಮಾಡುತ್ತಿರುವೆ. ಅದರ ಪರಿಣಾಮವಾಗಿ, ನಾನು ಅತಿಯಾದ ಕೀಳು ದರ್ಜೆಯ ದೇಹವನ್ನು ಸ್ವೀಕರಿಸಬೇಕು” ಎಂದು ಆ ಮೂರ್ಖನು ಯೋಚಿಸುವುದಿಲ್ಲ. ಅದು ಅವನಿಗೆ ಗೊತ್ತಿಲ್ಲ. ಅವನಿಗೆ ಈಗಾಗಲೇ ಒಂದು ಕೆಳ ದರ್ಜೆಯ ದೇಹವಿದೆ. ಅವನು ಸುಮ್ಮನೆ ಸಂಕಷ್ಟ ಅನುಭವಿಸುತ್ತಿದ್ದಾನೆ. ಮತ್ತು ಪ್ರಸ್ತುತದ ಚಟುವಟಿಕೆಗಳಿಂದ ಅವನು ತನಗೆ ಇನ್ನೂ ಕೆಳ ಮಟ್ಟದ ದೇಹ ದೊರೆಯುವ ಹಾಗೆ ಮಾಡುತ್ತಿದ್ದಾನೆ. ಅದು ಇನ್ನಷ್ಟು ಸಂಕಷ್ಟ. ಆದರೂ ಅವನು ಇಂದ್ರಿಯ ಸುಖಕ್ಕಾಗಿ ಎಲ್ಲವನ್ನೂ ಮಾಡುತ್ತಾನೆ.
ಶ್ರೀಮದ್ ಭಾಗವತವು ಅವನನ್ನು ಎಚ್ಚರಿಸುತ್ತದೆ, ನ ಸಾಧು ಮನ್ಯೀ ಯತೋ ಆತ್ಮಾನೋ ಅಯಂ : “ಓ, ಇದು ಸರಿಯಲ್ಲ. ಇಂತಹ ಚಟುವಟಿಕೆಯು ಈಗಾಗಲೇ ನಿನ್ನ ಆತ್ಮವನ್ನು ನಿನ್ನ ದುಃಖದ ದೇಹದಿಂದ ಮುಚ್ಚಿದೆ.”
“ಸರಿ, ಈ ದೇಹವು ತಾತ್ಕಾಲಿಕ. ನನಗೆ ಚಿಂತೆ ಇಲ್ಲ.”
“ಮೂರ್ಖನೆ, ಹಾಗಾದರೆ ಮತ್ತೊಂದು ದೇಹವನ್ನು ಪಡೆದುಕೋ. ಈ ದೇಹವು ತಾತ್ಕಾಲಿಕ. ಆದರೆ, ಈ ಜನ್ಮದ ಅನಂತರ ನಿನಗೆ ಮತ್ತೊಂದು ದೇಹ ಸಿಗುತ್ತದೆ. ಹೆಚ್ಚು ಅಸಹ್ಯಕರವಾದುದು. ಆದುದರಿಂದ ಇಂತಹ ಅವಿವೇಕವನ್ನೇಕೆ ಮಾಡುತ್ತಿರುವೆ? ಹೌದು, ಈ ದೇಹವು ತಾತ್ಕಾಲಿಕ. ಆದರೆ ಇದು ಕ್ಲೇಶದ ಎಂಬುವುದನ್ನೇಕೆ ನೀವು ಅರ್ಥಮಾಡಿಕೊಳ್ಳುವುದಿಲ್ಲ : ಇದು ಯಾವಾಗಲೂ ಲೌಕಿಕ ಲೋಕದ ನೋವಿನ ಸ್ಥಿತಿಗೆ ಒಳಪಟ್ಟಿದೆ? ಈ ದೇಹವು ನೋವಿನದು ಮತ್ತು ನೀವು ಪಡೆಯುವ ಬೇರೆ ಯಾವುದೇ ದೇಹವೂ ನೋವಿನದು ಎಂಬುವುದು ನಿಮಗೆ ಗೊತ್ತು. ಆದುದರಿಂದ ನೀವು ಏಕೆ ಈ ದೇಹಗಳನ್ನು ಹೊಂದುತ್ತಲೇ ಇರುವಿರಿ? ಈ ಚಟುವಟಿಕೆಗಳನ್ನು ನಿಲ್ಲಿಸಿ.”
ಇದು ಕೃಷ್ಣ ಪ್ರಜ್ಞೆ. ಆದರೆ ನೀವು ಸ್ವೀಕರಿಸುವ ಯಾವುದೇ ರೀತಿಯ ಲೌಕಿಕ ದೇಹವು ನೋವುಳ್ಳದ್ದೆಂದು ಜನರಿಗೆ ತಿಳಿಯದು. ಉದಾಹರಣೆಗೆ, ಎಲ್ಲ ಸೌಲಭ್ಯ ಉಳ್ಳ ಈ ಕಟ್ಟಡವನ್ನು ನಿರ್ಮಿಸಿದ್ದಾರೆ. ಆದರೆ ಅಲ್ಲಿ ಕೆಲವೇ ಗಂಟೆಗಳ ಕಾಲ ಚಳಿ ಉಂಟಾದರೆ, ಆ ಕಟ್ಟಡದಲ್ಲಿಯೂ ಅನೇಕ ಜನರು ಸಾಯುತ್ತಾರೆ, ಅಲ್ಲವೇ? ಆದುದರಿಂದ ನೀವು ಈ ಅಥವಾ ಆ ಲೌಕಿಕ ಪರಿಸ್ಥಿತಿಯಲ್ಲಿ ಇದ್ದರೂ ಸಂಕಟ ಇದ್ದೇ ಇದೆ. ಈ ಎತ್ತರದ ಕಟ್ಟಡದ ಸೌಲಭ್ಯ ಪಡೆಯಲು ವ್ಯಕ್ತಿಯು ಎಷ್ಟೆಲ್ಲ ಕಷ್ಟ ಅನುಭವಿಸಬೇಕು.

“ಸ್ವಾಮಿ, ನಾನು ಸಂಕಷ್ಟ ಅನುಭವಿಸುತ್ತಿಲ್ಲ. ಕಾರ್ಮಿಕರು ಅದನ್ನು ಮಾಡುತ್ತಿದ್ದಾರೆ,” ಎಂದು ಮಾಲೀಕನು ಹೇಳುತ್ತಾನೆ.
“ಆದರೆ ಅವರಿಗೆ ನೀಡಲು ನೀವು ಹಣ ಸಂಪಾದಿಸಬೇಕಲ್ಲವೇ? ಕಾರ್ಮಿಕರಿಗೆ ವೇತನ ನೀಡಲು ಹಣ ಹೊಂದಿಸುವುದು ಎಷ್ಟು ಕಷ್ಟ.”
ಜನರು ಹಣದ ವಶಕ್ಕೆ ಒಳಗಾಗಿದ್ದಾರೆ. ಇಲ್ಲವಾದರೆ, ಇಡೀ ವ್ಯವಹಾರ ಸಂಕಷ್ಟದ್ದು. ಕೆಲವು ಸಂದರ್ಭಗಳಲ್ಲಿ ಕಾರ್ಮಿಕರು ಕಟ್ಟಡ ನಿರ್ಮಿಸುವಾಗ ಕೆಳಗೆ ಬಿದ್ದು ಸಾಯುತ್ತಾರಲ್ಲವೆ? ನ್ಯೂಯಾರ್ಕ್ನಲ್ಲಿ ಅನೇಕ ಕಟ್ಟಡಗಳಲ್ಲಿ ಬಾಡಿಗೆದಾರರೇ ಇಲ್ಲವೆಂದು ಕೇಳಿದ್ದೇನೆ. ಅದು ಮತ್ತೊಂದು ಸಂಕಷ್ಟ. ಆ ಸ್ಥಳದ ಮಾಲೀಕ ಕೂಡ ನೋವು ಅನುಭವಿಸುತ್ತಿದ್ದಾನೆ, “ನಾನು ಎಷ್ಟೊಂದು ಖರ್ಚು ಮಾಡಿದೆ. ಆದರೆ ಬಾಡಿಗೆದಾರರೇ ಇಲ್ಲ” ಕಳೆದ ಆರೇಳು ವರ್ಷಗಳಿಂದ ಲಂಡನ್ನಿನ ಅತ್ಯಂತ ಎತ್ತರದ ಕಟ್ಟಡ ಖಾಲಿ ಬಿದ್ದಿದೆ.
ಭಕ್ತ : ಟೋಟೆನ್ಹಂ ಕೋರ್ಟ್ ರಸ್ತೆಯಲ್ಲಿ, ಆ ಎತ್ತರದ ಕಟ್ಟಡವಿದೆ.
ಶ್ರೀಲ ಪ್ರಭುಪಾದ : ಹೌದು (ನಗು). ಮಾಲೀಕನ ಕಷ್ಟವೇನೆಂದರೆ, ಬಾಡಿಗೆದಾರರನ್ನು ಇಟ್ಟುಕೊಂಡರೆ ಅದು ಬಾಡಿಗೆದಾರರು ಇಲ್ಲದಿರುವುದಕ್ಕಿಂತ ಹೆಚ್ಚು ಸಂಕಷ್ಟವಾದುದು. ಏಕೆಂದರೆ ಅವನು ಅನೇಕ ತೆರಿಗೆಗಳನ್ನು ನೀಡಬೇಕಾಗುತ್ತದೆ. ಅದು ಇನ್ನಷ್ಟು ಕಷ್ಟದ್ದು. ಆದುದರಿಂದ ಅವನು ಅವರಿಂದ ದೂರವಿದ್ದಾನೆ. ಸಾರಾಂಶವೆಂದರೆ, ಕಟ್ಟಡ ನಿರ್ಮಾಣವು ತೊಂದರೆಯದಾಗಿತ್ತು. ಈಗ ಅದನ್ನು ಇಟ್ಟುಕೊಳ್ಳುವುದು ಇನ್ನೂ ಹೆಚ್ಚಿನ ತೊಂದರೆಯದು. ಆನಂದಕ್ಕಾಗಿ ಶೋಧಿಸುತ್ತ ಜನರು ಇದನ್ನು ಅದನ್ನು ಎನ್ನುತ್ತ ಅನೇಕವುಗಳನ್ನು ತಯಾರಿಸಿದ್ದಾರೆ. ಆದರೂ ಅವರಿಗೆ ಸುಖಿಸಲಾಗುವುದಿಲ್ಲ. ಕೆಲವು ಕ್ಷಣ ಅವರು ಅದನ್ನು ಆನಂದಿಸಬಹುದು. ಅನಂತರ ಅದು ನಿರುಪಯುಕ್ತ, “ನಾವು ಹೊರಟು ಹೋಗೋಣ.”
ಭಕ್ತ : ಕೆಲವು ಸಂದರ್ಭಗಳಲ್ಲಿ ಜನರು, “ನಾನು ಪಕ್ಷಿ ಅಥವಾ ನಾಯಿಯಾಗುತ್ತೇನೆಯೆ ಎಂಬುವುದು ನನಗೆ ಹೇಗೆ ಖಚಿತವಾಗಿ ತಿಳಿಯುತ್ತದೆ” ಎಂದು ಯೋಚಿಸುತ್ತಾರೆ.
ಶ್ರೀಲ ಪ್ರಭುಪಾದ : ಈ ಎಲ್ಲ ನಾಯಿ ಮತ್ತು ಪಕ್ಷಿಗಳು ಎಲ್ಲಿಂದ ಬರುತ್ತಿವೆ? ಈ ಜನರು ಉತ್ತರಿಸಲಿ. ಈ ಎಲ್ಲ ನಾಯಿ ಮತ್ತು ಪಕ್ಷಿಗಳು ಎಲ್ಲಿಂದ ಬರುತ್ತಿವೆ?
ಭಕ್ತ : ಇತರೆ ಪಕ್ಷಿ ಮತ್ತು ನಾಯಿಗಳಿಂದ ಎಂದು ಬಹುತೇಕ ಜನರು ಹೇಳುತ್ತಾರೆ.
ಶ್ರೀಲ ಪ್ರಭುಪಾದ : ನೀವು ಹಾಗೆ ಯೋಚಿಸುವಿರಿ. ಆದರೆ ನಿಮಗೆ ಪ್ರಕೃತಿ ನಿಯಮ ಗೊತ್ತಿಲ್ಲ. ಪ್ರಕೃತಿಯು ಈ ದೇಹಗಳನ್ನು ಒದಗಿಸುತ್ತಿದೆ. ನಿಮ್ಮ ಹಿಂದಿನ ಚಟುವಟಿಕೆಗಳು ಅದನ್ನು ಒಪ್ಪಿಕೊಳ್ಳುವಂತೆ ನಿಮ್ಮನ್ನು ಒತ್ತಾಯಿಸುತ್ತಿದೆ. ಈ ಮನೆಯನ್ನೇ ತೆಗೆದುಕೊಳ್ಳಿ, ನೀವು ಇದನ್ನು ಸ್ವೀಕರಿಸಿ, ಇಲ್ಲವಾದರೆ ಇನ್ಯಾರಾದರೂ ಅದನ್ನು ಪಡೆಯುವರು. ಅದೇ ರೀತಿ, ಈ ದೇಹವೊಂದು ಮನೆಯಂತೆ ಪ್ರಕೃತಿ ಅದನ್ನು ಒದಗಿಸುತ್ತದೆ. ನೀವು ಅದನ್ನು ಸ್ವೀಕರಿಸಲೇಬೇಕು. ನಾವೆಲ್ಲರೂ ಆಧ್ಯಾತ್ಮಿಕ ಜೀವಿಗಳು, ಮತ್ತು ಪ್ರಕೃತಿಯ ಆದೇಶದಂತೆ ನಾವು ನಮ್ಮ ಲೌಕಿಕ ದೇಹಗಳನ್ನು ಬದಲಿಸುತ್ತಿದ್ದೇವೆ. ನನ್ನ ಹಿಂದಿನ ಕರ್ಮವು ನಾನು ಒಂದು ರೀತಿಯ ದೇಹವನ್ನು ಸ್ವೀಕರಿಸುವಂತೆ ಮಾಡುತ್ತದೆ. ಅವನ ಹಿಂದಿನ ಕರ್ಮವು ಅವನು ಮತ್ತೊಂದು ರೀತಿಯ ದೇಹವನ್ನು ಸ್ವೀಕರಿಸುವಂತೆ ಮಾಡುತ್ತದೆ. ಇದು ಅಸಂಗತವೇ? ನಮ್ಮ ಮುಂದಿನ ಜನ್ಮದಲ್ಲಿ ಈ ವ್ಯಕ್ತಿಯು ನನ್ನ ರೀತಿಯ ದೇಹವನ್ನು ಸ್ವೀಕರಿಸಬಹುದು ಮತ್ತು ನಾನು ಅವನ ರೀತಿಯ ದೇಹವನ್ನು ಪಡೆಯಬಹುದು. ಇದು ಒಂದು ಮನೆ ಬದಲಿಸಿದಂತೆ. ನಾನು ಒಂದು ಬಗೆಯ ಮನೆಗೆ ಹೋಗಬಹುದು. ಅವನು ಇನ್ನೊಂದು ರೀತಿಯ ಮನೆಗೆ ಹೋಗಬಹುದು. ಹೇಗೆ ಆಗಲಿ, ಪ್ರಕೃತಿಯು ಎಷ್ಟೊಂದು ಮನೆಗಳನ್ನು ಒದಗಿಸುತ್ತಿದೆ.

ನೀವು ಹೇಳಬಹುದು, “ಇಲ್ಲ, ಇಲ್ಲ. ನಾನು ಆ ಮನೆಯನ್ನು ಸ್ವೀಕರಿಸುವುದಿಲ್ಲ.”
ಪ್ರಕೃತಿಯು ಉತ್ತರಿಸುತ್ತದೆ, “ಇಲ್ಲ, ಇಲ್ಲ. ಇದು ನಿಮ್ಮ ನಿರ್ಧಾರವಲ್ಲ. ನಿಮ್ಮ ಮನೆಗೆ ನೀಡಲು ನೀವು ಎಷ್ಟು `ಹಣ’ (ಒಳ್ಳೆಯ ಕರ್ಮ) ಕ್ರೋಡೀಕರಿಸಿದ್ದೀರಿ, ಸ್ವಾಮಿ?”
“ನನ್ನ ಬಳಿ ಹಣವಿಲ್ಲ.”
“ಹಾಗಾದರೆ, ಈ ಮನೆಗೆ ಹೋಗಿ.”
ಮತ್ತು ನೀವು ಆ ಮನೆಯನ್ನು ಸ್ವೀಕರಿಸಬೇಕು. ಕರ್ಮಣಾ ದೈವ ನೇತ್ರೇಣ : ನಿಮ್ಮ ಹಿಂದಿನ ಕರ್ಮಗಳಿಂದ ನಿಮಗೆಂತಹ ಮನೆ ಸಿಗುವುದೆಂಬುದು ನಿರ್ಧಾರವಾಗುತ್ತದೆ. ಇದು ನಿಮ್ಮ ನಿರ್ಧಾರವಲ್ಲ.
ಈಗ ಮಾನವ ದೇಹ ಲಭಿಸಿದೆ, ಆದುದರಿಂದ ಮುಂದೆ ಯಾವಾಗಲೂ ತಾನು ಪ್ರಾಣಿ ದರ್ಜೆಗೆ ಹೋಗುವುದಿಲ್ಲ ಎಂದು ಅನೇಕ ಮೂರ್ಖರು ಯೋಚಿಸುತ್ತಾರೆ. ಅದು ಹಿತಕರವಾದುದು (ನಗು). ಆದರೆ ಪ್ರಕೃತಿಯು ಅವನು ಬೆಕ್ಕು ಅಥವಾ ನಾಯಿಯ ದೇಹ ಸ್ವೀಕರಿಸುವಂತೆ ಮಾಡುತ್ತದೆ. ನಿರ್ಧಾರವು ನಿಮ್ಮದಲ್ಲ, ಅದು ಉನ್ನತ ಅಕಾರಿಗಳದ್ದು. ಕಚೇರಿಯಲ್ಲಿದ್ದಂತೆ. ನಿಮಗೆ ಭಡ್ತಿ ನೀಡಿದಾಗ ಅಥವಾ ಕೆಳ ದರ್ಜೆಗೆ ವರ್ಗಾಯಿಸಿದಾಗ, ನಿರ್ಧಾರವು ನಿಮ್ಮದಲ್ಲ, ನಿರ್ದೇಶಕರದಾಗಿರುತ್ತದೆ. “ನಾನು ಈ ಹೊಸ ಹುದ್ದೆಯನ್ನು ಸ್ವೀಕರಿಸುವುದಿಲ್ಲ”, ಎಂದು ನೀವು ಹೇಳಲಾಗದು. ನೀವು ಸ್ವೀಕರಿಸಲೇ ಬೇಕು.
ಕಾರಣಂ ಗುಣ ಸಂಗಃ ಅಸ್ಯ ಸದ್ ಅಸದ್ ಯೋನಿ ಜನ್ಮಸು : ಈ ಭಿನ್ನ ರೀತಿಯ ದೇಹಗಳಿಗೆ ನೀವು ಹಿಂದಿನ ಜನ್ಮದಲ್ಲಿ ಪ್ರಕೃತಿಯ ಭಿನ್ನ ಗುಣಗಳೊಡನೆ ಹೊಂದಿದ್ದ ಸಹಯೋಗವೇ ಕಾರಣ. ಇಲ್ಲವಾದರೆ, ಏಕೆ ಇಷ್ಟೊಂದು ವಿಧಗಳು? ಒಬ್ಬನು ಕಾಗೆಯಾಗಿದ್ದಾನೆ, ಮತ್ತೊಬ್ಬನು ಗುಬ್ಬಚ್ಚಿ, ಮಗದೊಬ್ಬನು ನಾಯಿ, ಬೆಕ್ಕು, ಮರ, ಗರಿಕೆಯಾಗಿದ್ದಾನೆ. ಪ್ರಕೃತಿಯು ಎಷ್ಟು ನಿಪುಣೆಯೆಂದರೆ ಅವಳು ಇಂತಹ ಭಿನ್ನವಾದ ನೋವುಗಳಿದ್ದರೂ ಅದನ್ನು ಯಾವ ರೀತಿ ಜೋಡಿಸುತ್ತಾಳೆಂದರೆ ಅದು ತುಂಬ ಸುಂದರವಾಗಿ ಕಾಣುತ್ತದೆ.






Leave a Reply