ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಅವರ ಕೆಲವು ಶಿಷ್ಯರ ನಡುವೆ ಜೂನ್ 6, 1974 ರಂದು ಜಿನೀವಾದಲ್ಲಿ ಬೆಳಗಿನ ವಾಯು ಸಂಚಾರದ ಸಮಯದಲ್ಲಿ ನಡೆದ ಸಂವಾದ.

ಶ್ರೀಲ ಪ್ರಭುಪಾದ : ಭಗವಂತನನ್ನು ಅರ್ಥ ಮಾಡಿಕೊಳ್ಳಲು ಮಾಂಸ ಭಕ್ಷಣೆಯು ದೊಡ್ಡ ಅಡ್ಡಿ. ಮಾಂಸ ಭಕ್ಷಕರು ಎಂದಿಗೂ ದೇವರನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ.
ಶಿಷ್ಯ : ನಿನ್ನೆ ರಾತ್ರಿ ನೀವು ಮಾತನಾಡುತ್ತಿದ್ದ ಆ ಪಾದ್ರಿಯು ಇದಕ್ಕೆ ಸೂಕ್ತ ಉದಾಹರಣೆ. ಅವರು ನಿಮಗೆಂದರು, “ನಾವು ಉನ್ನತ ವಿಷಯಗಳ ಬಗೆಗೆ ಮಾತನಾಡೋಣ. ಮಾಂಸ ಭಕ್ಷಣೆ ಬಗೆಗೆ ನಾವು ಸಾಕಷ್ಟು ಸಮಯದಿಂದ ಮಾತನಾಡುತ್ತಿದ್ದೇವೆ.”
ಶ್ರೀಲ ಪ್ರಭುಪಾದ : ಹೌದು.
ಶಿಷ್ಯ : ನೀವು ಹೇಳಿದಿರಿ, “ಒಳ್ಳೆಯದು, ನೀವು ಪಾಪಿಗಳಾಗಿದ್ದರೆ, ಉನ್ನತ ವಿಷಯದತ್ತ ಸಾಗುವುದು ವ್ಯರ್ಥ.”
ಶ್ರೀಲ ಪ್ರಭುಪಾದ : ಹೌದು. ಇದೇ ಅಂಶವನ್ನು ಭಾಗವತದಲ್ಲಿ ಒತ್ತಿ ಹೇಳಲಾಗಿದೆ (10.1.4):
ನಿವೃತ್ತ ತರ್ಷೈರ್ ಉಪಗೀಯಮಾನಾದ್
ಭವೌಷಧಾಚ್ ಚೋತ್ರ ಮನೋ ಅಭಿರಾಮಾತ್ ।
ಕ ಉತ್ತಮಶ್ಲೋಕ ಗುಣಾನುವಾದಾತ್
ಪುಮಾನ್ ವಿರಜ್ಯೇತ ವಿನಾ ಪಶುಘ್ನಾತ್ ।।
“ಕಟುಕ ಅಥವಾ ಆತ್ಮಘಾತುಕನನ್ನು ಬಿಟ್ಟು ಉಳಿದ ಪ್ರತಿಯೊಬ್ಬರೂ ಭಗವಂತನನ್ನು ಅರ್ಥಮಾಡಿಕೊಳ್ಳಬಲ್ಲರು. ವಿನಾ ಪಶುಘ್ನಾತ್ ಎಂದರೆ “ಮಾಂಸ ಭಕ್ಷಕರನ್ನು ಬಿಟ್ಟು.” ವಿನಾ ಎಂದರೆ ಬಿಟ್ಟು, ಪಶು ಎಂದರೆ ಪ್ರಾಣಿಗಳು. ಮತ್ತು ಘ್ನಾತ್ ಎಂದರೆ ಕಟುಕ, ಹಂತಕ.”
ಏಸುಕ್ರಿಸ್ತನು ಬೈಬಲ್ ಆದೇಶವನ್ನು ಪುನಃ ದೃಢಪಡಿಸಿದ್ದಾನೆ, “ನೀವು ಕೊಲ್ಲಬಾರದು.” ನೋಡಿ, ಏಸುಕ್ರಿಸ್ತನ ಅನುಯಾಯಿಗಳೆಂದು ಹೇಳಿಕೊಳ್ಳುವ ಇವರು ಆರಂಭದಿಂದಲೂ ಹಂತಕರು. ಏಸುಕ್ರಿಸ್ತನ ಆದೇಶವಿದ್ದರೂ ಕೂಡ ಅವರು ಈಗಲೂ ಕೊಲ್ಲುವುದನ್ನು ಮುಂದುವರಿಸಿದ್ದಾರೆ. ಆದರೆ ವಿನಾ ಪಶುಘ್ನಾತ್ : ಪುಣ್ಯಕಾರ್ಯದಂತೆ ತೋರುವ ಯಾವುದೇ ಕಾರ್ಯ ಮಾಡಿದರೂ ಪ್ರಾಣಿ ಹಂತಕರು, ಮಾಂಸ ಭಕ್ಷಕರು ಎಂದಿಗೂ ಭಗವಂತನನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ.
ಈ ಹುಸಿ ಧಾರ್ಮಿಕ ಜನರು ಯೋಚಿಸುತ್ತಾರೆ, “ನಾವು ತುಂಬ ಒಳ್ಳೆಯ ಕೆಲಸ ಮಾಡುತ್ತಿದ್ದೇವೆ. ಪರೋಪಕಾರ, ಧಾರ್ಮಿಕ ಕೆಲಸ ಮಾಡುತ್ತಿದ್ದೇವೆ. ನಾವು ಆಸ್ಪತ್ರೆಗಳನ್ನು ತೆರೆಯುತ್ತಿದ್ದೇವೆ, ಹೆದ್ದಾರಿಗಳನ್ನು ನಿರ್ಮಿಸುತ್ತಿದ್ದೇವೆ, ಹಸಿದವರಿಗೆ ಆಹಾರ ನೀಡುತ್ತಿದ್ದೇವೆ ಇತ್ಯಾದಿ. ಆದುದರಿಂದ, ನಾವು ಕಸಾಯಿಖಾನೆಗಳನ್ನು ನಡೆಸಿ ದಿನಕ್ಕೆ ಕೋಟಿ ಕೋಟಿ ಪ್ರಾಣಿಗಳನ್ನು ಕೊಂದರೆ ಅದರಿಂದಾಗುವ ವ್ಯತ್ಯಾಸವಾದರೂ ಏನು? ಆದರೆ, ನಮಗೆ ಅರ್ಥವಾಗದ ಕೆಲವು ಕಾರಣಗಳಿಂದ ನಾವು ಆಗಾಗ್ಗೆ ಯುದ್ಧದಲ್ಲಿ ನಿರತರಾಗುತ್ತೇವೆ ಮತ್ತು ನಮ್ಮನ್ನು ಮತ್ತು ಇತರರನ್ನು ಕೊಲ್ಲುತ್ತೇವೆ. ಆದರೆ ನಾವು ಸುಖವಾಗಿದ್ದೇವೆ.”
ಈ ಹುಸಿ ಧಾರ್ಮಿಕ ಜನರು ತಮ್ಮ ಬೃಹತ್ ಕಟ್ಟಡ, ಗಗನಚುಂಬಿ ಮತ್ತು ಕಾರ್ಖಾನೆಗಳ ಬಗೆಗೂ ಹೆಮ್ಮೆಪಟ್ಟುಕೊಳ್ಳುತ್ತಾರೆ. ಆದರೆ ಇವೆಲ್ಲವೂ ದುಷ್ಕೃತಿ – ಅಯೋಗ್ಯ ಕೆಲಸಗಳು. ಏಕೆಂದರೆ, ಇವು ಪಾಪ ಕರ್ಮಗಳನ್ನು ಮಾಡಲೆಂದೇ ಇರುವುದು. ಅವರೆನ್ನುತಾರೆ, “ಹೌದು, ನಾವು ಮದ್ಯ, ಮಹಿಳೆ, ಜೂಜು ಮತ್ತು ಮಾಂಸ ಭಕ್ಷಣೆಯ ಹಿಂದೆ ಬಿದ್ದಿದ್ದೇವೆ. ಆದರೆ ನಾವು ನಾಗರಿಕರು.”
ಶಿಷ್ಯ : ಇತ್ತೀಚೆಗೆ ನಿಮ್ಮ ಶಿಷ್ಯರಲ್ಲಿ ಒಬ್ಬರು ಪೆನ್ಸಿಲ್‌ವೇನಿಯಾದ ಬಟ್ಲರ್‌ಗೆ ಭೇಟಿ ನೀಡಿದ್ದರು. ಆಗ ಅವರು ಒಬ್ಬ ಪಾದ್ರಿಯನ್ನು ಕಂಡರು. ಅವರೆಂದರಂತೆ, “ಹೌದು, ನನಗೆ ನಿಮ್ಮ ಗುರುಗಳ ನೆನಪಿದೆ. ಅವರು 1965ರಲ್ಲಿ ಇಲ್ಲಿದ್ದರು. ಅವರು ಆಗಷ್ಟೇ ಭಾರತದಿಂದ ಬಂದಿದ್ದರು. ಮತ್ತು ಅವರು ನಮ್ಮ ಚರ್ಚ್‌ನಲ್ಲಿ ಉಪನ್ಯಾಸಗಳನ್ನು ನೀಡುತ್ತಿದ್ದರು.”
ಶ್ರೀಲ ಪ್ರಭುಪಾದ : ಹೌದು. ಅಮೆರಿಕಕ್ಕೆ ಆಗಮಿಸಿದ ಮೇಲೆ ನಾನು ಚರ್ಚ್‌ಗಳಲ್ಲಿ ಉಪನ್ಯಾಸ ನೀಡಿದ್ದೆ. ಚರ್ಚ್ ಎಂದರೇನು? ಅದು ಭಗವತ್ ಪ್ರಜ್ಞೆ ಉಳ್ಳ ಜನರಿರುವ ಸ್ಥಳ. ಆದುದರಿಂದ ನಾನು ಎಂದೂ ಚರ್ಚ್ ಅಥವಾ ಮಸೀದಿಯನ್ನು ಟೀಕಿಸಿಲ್ಲ. ಎಂದೂ ಇಲ್ಲ. ಏಕೆಂದರೆ, ಯಾವುದೇ ಗುಂಪಿರಲಿ, ಮುಖ್ಯವಾದ ಅಂಶವೆಂದರೆ, ಅವರು ದೈವ ಪ್ರಜ್ಞೆ ಉಳ್ಳವರು. ಆದುದರಿಂದ ಅವರು ಒಳ್ಳೆಯವರು.
ಆದರೆ ಅವರು ಭಗವಂತನ ಆದೇಶಗಳನ್ನು ಪಾಲಿಸದಿದ್ದರೆ ನಾನು ಟೀಕಿಸಬೇಕಾಗುತ್ತದೆ. ಆದರೂ ಈ ಮೂರ್ಖರನ್ನು, ಯಾರು ತಮ್ಮ ಹಠಮಾರಿತನದಿಂದ ಮಾದರಿ ರೂಪಿಸುವರೋ, ಭಗವಂತನ ಆದೇಶಗಳನ್ನು ಪಾಲಿಸುವುದಿಲ್ಲವೋ ಅಂತಹವರನ್ನು ಮಾತ್ರ ಟೀಕಿಸುವೆ. ಇಲ್ಲವಾದರೆ, ಅವರ ಬಗೆಗೆ ನಮ್ಮ ಟೀಕೆ ಏನೂ ಇಲ್ಲ. ನಮಗೆ ಏನೂ ಸಮಸ್ಯೆ ಇಲ್ಲ.
ಶಿಷ್ಯ : ನಾವು ಪಂಥಾಭಿಮಾನಿಗಳಲ್ಲ.
ಶ್ರೀಲ ಪ್ರಭುಪಾದ : ನಾವು ಯಾಕೆ ಆಗಬೇಕು? ದೇವರು ಒಬ್ಬನೇ. ನಾವು ಯಾಕೆ ಪಂಥೀಯರಾಗಬೇಕು? ಪ್ರತಿಯೊಬ್ಬ ವ್ಯಕ್ತಿಯೂ ತನ್ನ ನಿರ್ದಿಷ್ಟ ಸಾಂಸ್ಕೃತಿಕ ಹಿನ್ನಲೆ ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿ ಭಗವಂತನನ್ನು ಪ್ರಾರ್ಥಿಸುತ್ತಿದ್ದಾನೆ. ಇದು ಭಕ್ತಿಯ ವಿಧಿಗಳಲ್ಲಿ ಒಂದು, ಭಗವಂತನಿಗೆ ಭಕ್ತಿಸೇವೆ.
ಶಿಷ್ಯ : ಈಗ ಅನೇಕ ಯುವ ಜನರು ಬೋಧನೆಗಾಗಿ ಬೈಬಲ್‌ನ ಮೊರೆಹೋಗಬಹುದು. ಆದರೆ ಅವರು ಪೂಜಾರಿಗಳು ಮತ್ತು ಪಾದ್ರಿಗಳಿಂದ ದೂರ ಉಳಿಯುತ್ತಾರೆ. ಅವರು ಆಷಾಡಭೂತಿಗಳೆಂದು ಇವರು ಭಾವಿಸುತ್ತಾರೆ.
ಶ್ರೀಲ ಪ್ರಭುಪಾದ : ಅವರು ಆಷಾಡಭೂತಿಗಳು. ಈ ಪೂಜಾರಿ ಮತ್ತು ಪಾದ್ರಿಗಳೆಲ್ಲ ಆಷಾಡಭೂತಿಗಳು. ಅಧಿಕ ಮೊತ್ತದ ವೇತನ ಪಡೆಯುತ್ತ, ಮದ್ಯ ಸೇವಿಸುತ್ತ, ಕೊಂದ ಪ್ರಾಣಿಗಳನ್ನು ಭಕ್ಷಿಸುವರು. `ನೀವು ಕೊಲ್ಲಬಾರದು’ ಎಂಬುವುದನ್ನು ನಾವು ನೆನಪಿಸಿದರೆ, `ನಾವು ಉನ್ನತ ವಿಷಯಗಳತ್ತ ಸಾಗೋಣ’ ಎಂದು ಅವರು ಹೇಳುತ್ತಾರೆ.
ಈ ಹುಸಿ ಕ್ರಿಶ್ಚಿಯನ್ನರು ಮೂರ್ಖರು. ಏಸುಕ್ರಿಸ್ತ ಮೀನು ತಿಂದಿರಬಹುದೆಂದು ಅವರು ಊಹಿಸಿಕೊಳ್ಳುತ್ತಾರೆ. ಅದು ನಿಜವಾಗಿದ್ದರೂ – ಆ ಕಾಲದಲ್ಲಿ ಅತ್ಯಲ್ಪ ಅಥವಾ ಬೇರಾವ ಆಹಾರವೂ ಲಭ್ಯವಿರಲಿಲ್ಲ. ಆದರೆ ಈ ಮೂರ್ಖರು “ಏಸುಕ್ರಿಸ್ತನು ಮೀನು ತಿಂದ. ಆದುದರಿಂದ ನಾವು ದೊಡ್ಡ ಕಸಾಯಿಖಾನೆಗಳನ್ನು ನಡೆಸೋಣ”ಎಂದು ಯೋಚಿಸುತ್ತಾರೆ.
ಒಬ್ಬ ವ್ಯಕ್ತಿಯು ಸೊಳ್ಳೆಯನ್ನು ನೋಡಿ `ತೋಪು ತನ್ನಿ’ ಎಂದು ಹೇಳಿದ ಕಥೆಯೊಂದು ಬಂಗಾಳದಲ್ಲಿ ಪ್ರಚಲಿತದಲ್ಲಿದೆ.
ಶಿಷ್ಯ : ಆದುದರಿಂದ ಕ್ರಿಶ್ಚಿಯನ್ನರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುವವರ ಅಗತ್ಯ ಈಗಲೂ ಇದೆಯೇ?
ಶ್ರೀಲ ಪ್ರಭುಪಾದ : ಖಂಡಿತ. ಅವರಿಗೆ ಮಾರ್ಗದರ್ಶನ ನೀಡಿ ಮೇಲಕ್ಕೆತ್ತುವುದು ಅವರ ಪೂಜಾರಿ ಮತ್ತು ಪಾದ್ರಿಗಳಿಂದ ಸಾಧ್ಯವಿಲ್ಲ. ಪೂಜಾರಿ ಮತ್ತು ಪಾದ್ರಿಗಳು ಸ್ವತಃ ಪತಿತರಾಗಿದ್ದಾರೆ.
ಇಲ್ಲವಾದರೆ, ಕ್ರಿಶ್ಚಿಯನ್ ಧರ್ಮ ತುಂಬ ಚೆನ್ನಾಗಿದೆ. ಅದನ್ನು ಪರಿಪೂರ್ಣವಾಗಿ ಅನುಸರಿಸಲು ಜನರಿಗೆ ಆಧ್ಯಾತ್ಮಿಕ ಮಾರ್ಗದರ್ಶಕರ ನೆರವು ಇದ್ದರೆ.
ಅನೇಕ ಜನರು ನನ್ನನ್ನು ಕೇಳಿದ್ದಾರೆ, “ನೀವು ಕ್ರಿಶ್ವಿಯನ್ ಧರ್ಮವನ್ನು ಆದರಿಸುವಿರಾ? (ಮಹತ್ತ್ವದೆಂದು ಭಾವಿಸುವಿರಾ?)”
ನಾನು ಹೌದು ಎನ್ನುವೆ. `ನೀವು ನಿಮ್ಮ ಕ್ರಿಶ್ಚಿಯನ್ ಧರ್ಮವನ್ನು ಶ್ರದ್ಧೆಯಿಂದ ಅನುಸರಿಸಿದರೆ, ನೀವು ಪರಿಪೂರ್ಣರಾಗುವಿರಿ’.
ಹೀಗಾಗಿ, ಜಗತ್ತಿನಾದ್ಯಂತ ಜನರಿಗೆ ದೈವ ಪ್ರಜ್ಞೆ, ಧರ್ಮ ಗ್ರಂಥಗಳ ಆಧಾರದ ಮೇಲೆ ಭಗವಂತನನ್ನು ಹೇಗೆ ಪ್ರೀತಿಸಬೇಕೆಂದು ಬೋಧಿಸುವ ಆಧ್ಯಾತ್ಮಿಕ ಮಾರ್ಗದರ್ಶಕರ ಅಗತ್ಯವಿದೆ.






Leave a Reply