ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಕೆಲವು ಶಿಷ್ಯರ ನಡುವೆ
ಜಿನೀವಾದಲ್ಲಿ ಜೂನ್ 6, 1974ರಂದು ನಡೆದ ಸಂವಾದ.

ಶ್ರೀಲ ಪ್ರಭುಪಾದ : ಈ ಅಂಜೂರವನ್ನು ನೋಡಿ. ಈ ಒಂದು ಅಂಜೂರದಲ್ಲಿ ನೀವು ಸಾವಿರಾರು ಬೀಜಗಳನ್ನು ನೋಡುವಿರಿ. ಒಂದು ಸಣ್ಣ ಬೀಜವೂ ಮೂಲ ಮರದಂತೆ ದೊಡ್ಡ ಮರವನ್ನು ಬೆಳೆಸಬಲ್ಲದು. ಸಣ್ಣ ಬೀಜದ ಒಳಗಡೆ ಇಡೀ ಹೊಸ ಅಂಜೂರದ ಮರವಿದೆ.
ಈಗ ಹೇಳಿ, ಅಂತಹುದನ್ನು ಮಾಡುವ ರಾಸಾಯನಿಕ ವಿಜ್ಞಾನಿ ಎಲ್ಲಿದ್ದಾನೆ – ಮೊದಲು ಮರ ಮಾಡಬೇಕು, ಅನಂತರ ಮರದಲ್ಲಿ ಹಣ್ಣು ಬಿಡುವಂತೆ ಮಾಡಬೇಕು, ಅನಂತರ ಹಣ್ಣು ಬೀಜವನ್ನು ಉತ್ಪಾದಿಸಬೇಕು. ಮತ್ತು ಅಂತಿಮವಾಗಿ ಬೀಜಗಳು ಇನ್ನಷ್ಟು ಮರಗಳನ್ನು ಮಾಡಬೇಕು. ಹೇಳಿ, ಅಂತಹ ವಿಜ್ಞಾನಿ ಎಲ್ಲಿದ್ದಾನೆ?
ಶಿಷ್ಯ: ಶ್ರೀಲ ಪ್ರಭುಪಾದರೆ. ಅವರು ಹೆಮ್ಮೆಯಿಂದ ಮಾತನಾಡುವರು. ಆದರೆ ಈ ರಾಸಾಯನಿಕ ವಿಜ್ಞಾನಿ ಮತ್ತು ಅಂತಹವರಿಗೆ ಇಂತಹುದೇನನ್ನೂ ಮಾಡುವುದು ಸಾಧ್ಯವಿಲ್ಲ.
ಶ್ರೀಲ ಪ್ರಭುಪಾದ : ಒಮ್ಮೆ ಒಬ್ಬ ದೊಡ್ಡ ರಾಸಾಯನಿಕ ವಿಜ್ಞಾನಿಯು ನನ್ನ ಬಳಿ ಬಂದು ಒಪ್ಪಿಕೊಂಡರು : “ನಮ್ಮ ರಾಸಾಯನಿಕ ಪ್ರಗತಿ, ನಮ್ಮ ವೈಜ್ಞಾನಿಕ ಅಭಿವೃದ್ಧಿಯು ಬಗುಳಲು ಕಲಿತ ಮನುಷ್ಯನಂತೆ. ಈಗಾಗಲೇ ಎಷ್ಟೊಂದು ಸಹಜವಾದ ಶ್ವಾನಗಳು ಕಿರುಚುತ್ತಿವೆ. ಆದರೆ ಯಾರೂ ಅತ್ತ ಗಮನ ಹರಿಸುವುದಿಲ್ಲ. ಆದರೆ ವ್ಯಕ್ತಿಯು ಕೃತಕವಾಗಿ ಬಗುಳುವ ಕಲೆಯನ್ನು ಕಲಿತರೆ, ಓ! ಅಸಂಖ್ಯ ಜನರು ನೋಡಲು ಹೋಗುವರು – ಅಷ್ಟೇ ಅಲ್ಲ, ಅದಕ್ಕಾಗಿ 10, 20 ಡಾಲರ್ ನೀಡಿ ಟಿಕೆಟ್ ಅನ್ನೂ ಖರೀದಿಸುವರು. ಅದೂ ಒಂದು ಕೃತಕ ಶ್ವಾನವನ್ನು ನೋಡಲು. ನಮ್ಮ ವೈಜ್ಞಾನಿಕ ಪ್ರಗತಿ ಹಾಗಿದೆ.”
ವ್ಯಕ್ತಿಯು ಪ್ರಕೃತಿಯ ಕೃತಕ ಅನುಕರಣೆ ಮಾಡಿದರೆ ಜನರು ಹಣಕೊಟ್ಟು ನೋಡಲು ಹೋಗುವರು. ಸಹಜವಾಗಿ ಬಗುಳುವುದನ್ನು ಯಾರೂ ಲಕ್ಷಿಸುವುದಿಲ್ಲ. ಮತ್ತು ದೊಡ್ಡವರೆನ್ನಿಸಿಕೊಳ್ಳುವ ಈ ಮೂರ್ಖ ವಿಜ್ಞಾನಿಗಳು ತಾವು ಜೀವಿಗಳನ್ನು ಸೃಷ್ಟಿಸುತ್ತೇವೆ ಎಂದು ಹೇಳಿಕೊಂಡರೆ ಜನರು ಎಲ್ಲ ಶ್ಲಾಘನೆ ಮತ್ತು ಪ್ರಶಸ್ತಿಗಳನ್ನು ನೀಡುತ್ತಾರೆ. ಪ್ರತಿ ಕ್ಷಣ ಸಾವಿರಾರು ಲಕ್ಷಾಂತರ ಜೀವಿಗಳು ಹುಟ್ಟುವಂತೆ ಮಾಡುವ ಭಗವಂತನ ಪರಿಪೂರ್ಣ ಮತ್ತು ಸಹಜ ವಿಧಾನವನ್ನು ಯಾರೂ ಲಕ್ಷಿಸುವುದಿಲ್ಲ. ದೇವರ ಪ್ರಕ್ರಿಯೆಗೆ ಜನರು ಹೆಚ್ಚಿನ ಮನ್ನಣೆ ನೀಡುವುದಿಲ್ಲ.
ನಿರ್ಜೀವ ರಾಸಾಯನಿಕ ವಸ್ತುಗಳಿಂದ ಜೀವಗಳನ್ನು ಸೃಷ್ಟಿಸಲು ಯಾವುದೋ ಆದರ್ಶವಾದಿ ಯೋಜನೆಯನ್ನು ಕಲ್ಪಿಸುವ ಮೂರ್ಖನಿಗೆ ಎಲ್ಲ ಮನ್ನಣೆ ನೀಡಲಾಗುತ್ತದೆ, ನೊಬೆಲ್ ಪ್ರಶಸ್ತಿಯನ್ನೂ ಕೊಡುತ್ತಾರೆ. “ಓ, ಅವನು ಸೃಜನಾತ್ಮಕ ಪ್ರತಿಭೆ” ಎಂದು ಕೊಂಡಾಡುತ್ತಾರೆ. ಇತ್ತ ಪ್ರಕೃತಿಯು ಭಗವಂತನು ಮಾಡಿರುವ ವ್ಯವಸ್ಥೆಯಂತೆ ಪ್ರತಿ ಕ್ಷಣವೂ ಲಕ್ಷಾಂತರ ಆತ್ಮಗಳನ್ನು ಲೌಕಿಕ ದೇಹಗಳೊಂದಿಗೆ ಸೇರಿಸುತ್ತದೆ. ಆದರೆ ಯಾರೂ ಅದನ್ನು ಲಕ್ಷಿಸುವುದಿಲ್ಲ. ಇದು ಮೂರ್ಖತನ.
ನಿಮ್ಮ ಪ್ರಯೋಗಾಲಯದಲ್ಲಿ ನೀವು ಒಬ್ಬ ಮನುಷ್ಯ ಅಥವಾ ಒಂದು ಪ್ರಾಣಿಯನ್ನು ಉತ್ಪತ್ತಿಸಿದಿರೆಂದೇ ಇಟ್ಟುಕೊಳ್ಳೋಣ. ನಿಮಗೆ ಲಭ್ಯವಾಗುವ ಕೀರ್ತಿ ಏನಿರಬಹುದು? ಇದೇನು ಮಹಾ, ಒಂದು ವ್ಯಕ್ತಿ ಅಥವಾ ಪ್ರಾಣಿ ನಿಮ್ಮಿಂದ ಸೃಷ್ಟಿಸಲ್ಪಟ್ಟರೆ, ಭಗವಂತನಿಂದ ಲಕ್ಷಾಂತರ ಜೀವಿಗಳ ಸೃಷ್ಟಿಯಾಗುತ್ತದೆ. ಆದುದರಿಂದ ನಾವು ಪ್ರತಿ ದಿನ ನೋಡುತ್ತಿರುವ ಜೀವಿಗಳನ್ನು ನಿಜವಾಗಿಯೂ ಸೃಷ್ಟಿಸುತ್ತಿರುವ ಕೃಷ್ಣನಿಗೆ ಎಲ್ಲ ಕೀರ್ತಿಯನ್ನು ನೀಡಲು ಇಷ್ಟಪಡುತ್ತೇವೆ.
ಶಿಷ್ಯ: ಪ್ರಭುಪಾದರೇ, ನಿಮಗೆ ಆಲ್ಡಸ್ ಹಕ್ಸ್‌ಲೇ ನೆನಪಿದೆಯೆ? ಅವನು ಬ್ರೇವ್ ನ್ಯೂ ವರ್ಲ್ಡ್‌ನಲ್ಲಿ ನಿರ್ದಿಷ್ಟ ವಿಶೇಷ ಗುಣ, ಲಕ್ಷಣಗಳಿಗಾಗಿ ತಳಿ ವಿಜ್ಞಾನದಂತೆ ಮಕ್ಕಳ ಪರೀಕ್ಷೆ, ವ್ಯಕ್ತಿಗಳನ್ನು ಬೆಳೆಸುವ ವಿಧಾನದ ಬಗೆಗೆ ಭವಿಷ್ಯ ನುಡಿದಿದ್ದನು. ಒಂದು ವಿಶೇಷ ಗುಣದ ಜಾತಿಯ ಜೀವಾಣುವನ್ನು ಪಡೆದು ಶ್ರಮಿಕರ ವರ್ಗವನ್ನು ಬೆಳೆಸುವುದು. ಮತ್ತೊಂದು ವಿಶೇಷ ಗುಣ ಜಾತಿಯ ಜೀವಾಣುವನ್ನು ತೆಗೆದುಕೊಂಡು ಆಡಳಿತ ವರ್ಗವನ್ನು ಬೆಳೆಸುವುದು. ಮತ್ತೂ ಒಂದು ವಿಶೇಷ ಗುಣದ ಜಾತಿಯ ಜೀವಾಣವನ್ನು ಪಡೆದು ಸುಸಂಸ್ಕೃತ ಸಲಹೆಗಾರರು ಮತ್ತು ವಿದ್ವಾಂಸರನ್ನು ರೂಪಿಸುವುದು ಇದರ ಉದ್ದೇಶ.
ಶ್ರೀಲ ಪ್ರಭುಪಾದ : ಇದೂ ಕೂಡ ಈಗಾಗಲೇ ಭಗವಂತನ ಸಹಜ ವ್ಯವಸ್ಥೆಯಲ್ಲಿದೆ. ಗುಣ ಕರ್ಮ ವಿಭಾಗಶಃ ಹಿಂದಿನ ಜನ್ಮದ ಗುಣ ಮತ್ತು ಕರ್ಮಕ್ಕೆ ಅನುಗುಣವಾಗಿ ಈ ಜನ್ಮದಲ್ಲಿ ವ್ಯಕ್ತಿಗೆ ಸೂಕ್ತವಾದ ದೇಹ ಲಭಿಸುತ್ತದೆ. ಯಾರು ಅಜ್ಞಾನದ ಗುಣ ಮತ್ತು ಕರ್ಮವನ್ನು ಬೆಳೆಸಿಕೊಂಡಿರುತ್ತಾರೋ ಅವರಿಗೆ ಅಜ್ಞಾನಿಯ ದೇಹ ದೊರೆಯುತ್ತದೆ ಮತ್ತು ಅವರು ಶ್ರಮಿಕನಾಗಿ ಬದುಕಬೇಕು. ಯಾರು ಕೆಲಸ ಮಾಡುವ ಉತ್ಸಾಹದ ಗುಣ ಮತ್ತು ಕರ್ಮವನ್ನು ಬೆಳೆಸಿಕೊಂಡಿರುತ್ತಾರೋ ಅವರಿಗೆ ತೀವ್ರಾಸಕ್ತಿಯ ದೇಹ ದೊರೆಯುತ್ತದೆ ಮತ್ತು ಅವರು ಆಡಳಿತವನ್ನು ನಿರ್ವಹಿಸುತ್ತಾರೆ. ಯಾರು ಅರಿವು ಮೂಡಿಸುವ ಗುಣ ಮತ್ತು ಕರ್ಮವನ್ನು ಬೆಳೆಸಿಕೊಂಡಿರುತ್ತಾರೋ ಅವರು ಇತರರಿಗೆ ಜ್ಞಾನ ಪ್ರಸಾರ ಮತ್ತು ಸಲಹೆ ನೀಡುತ್ತ ಬದುಕಬೇಕು.
ನೋಡಿದಿರಾ, ದೇವರು ಈಗಾಗಲೇ ಎಂತಹ ಪರಿಪೂರ್ಣ ವ್ಯವಸ್ಥೆ ಮಾಡಿಬಿಟ್ಟಿದ್ದಾನೆ. ಪ್ರತಿಯೊಂದು ಆತ್ಮವೂ ಅದು ಅಪೇಕ್ಷಿಸಿದ ಮತ್ತು ಅರ್ಹ ದೇಹವನ್ನು ಪಡೆಯುತ್ತದೆ ಹಾಗೂ ಸಾಮಾಜಿಕ ವ್ಯವಸ್ಥೆಯು ಅಗತ್ಯ ಗುಣ ಲಕ್ಷಣಗಳುಳ್ಳ ನಾಗರಿಕರನ್ನು ಪಡೆಯುತ್ತದೆ. ನೀವು ಈ ಗುಣ ಲಕ್ಷಣಗಳನ್ನು ಬೆಳೆಸಬೇಕಾಗಿಲ್ಲ ಅಥವಾ ಉತ್ಪಾದಿಸಬೇಕಾಗಿಲ್ಲ. ತನ್ನ ಸಹಜ ವ್ಯವಸ್ಥೆಯಂತೆ ಭಗವಂತನು ನಿರ್ದಿಷ್ಟ ಆತ್ಮಕ್ಕೆ ನಿರ್ದಿಷ್ಟ ದೇಹಗಳನ್ನು ನೀಡುತ್ತಾನೆ. ದೇವರು ಮತ್ತು ಪ್ರಕೃತಿಯು ಪರಿಪೂರ್ಣವಾಗಿ ಮಾಡುವುದನ್ನು ಅನುಕರಣೆ ಮಾಡಲು ಏಕೆ ಪ್ರಯತ್ನಿಸುವಿರಿ?

ನನ್ನನ್ನು ಭೇಟಿ ಮಾಡಿದ ವಿಜ್ಞಾನಿಗೆ ನಾನು ಹೇಳಿದೆ. “ನೀವು ವಿಜ್ಞಾನಿಗಳು, ಸುಮ್ಮನೆ ಕಾಲಹರಣ ಮಾಡುತ್ತಿರುವಿರಿ.” ಬಾಲಿಶ. ಅವರು ನಾಯಿಯ ಕಿರುಚಾಟವನ್ನು ಅನುಕರಣೆ ಮಾಡುತ್ತಿದ್ದಾರಷ್ಟೆ. ನಿಜವಾದ ನಾಯಿಯು ನಿಜವಾಗಿಯೂ ಬಗುಳುತ್ತಿದ್ದರೂ ವಿಜ್ಞಾನಿಗಳು ಲಕ್ಷಿಸುವುದೂ ಇಲ್ಲ, ಕೀರ್ತಿಯನ್ನೂ ನೀಡುವುದಿಲ್ಲ. ವಾಸ್ತವವಾಗಿ ಅದೇ ಇಂದಿನ ನಿಜವಾದ ಪರಿಸ್ಥಿತಿ. ನಿಜವಾದ ನಾಯಿ ಬಗುಳಿದರೆ ಅದು ವಿಜ್ಞಾನವಲ್ಲ. ಕೃತಕ, ಅನುಕರಣೆಯ ನಾಯಿ ಬಗುಳಿದರೆ ಅದು ವಿಜ್ಞಾನ. ಅದು ಹಾಗಲ್ಲವೆ? ಭಗವಂತನ ಸಹಜ ವ್ಯವಸ್ಥೆಯು ಈಗಾಗಲೇ ಮಾಡುತ್ತಿರುವುದನ್ನೇ ಕೃತಕವಾಗಿ ಅನುಕರಣೆಮಾಡುವಲ್ಲಿ ವಿಜ್ಞಾನಿಗಳು ಎಷ್ಟು ಯಶಸ್ವಿಯಾಗುವರೋ ಅದೇ ವಿಜ್ಞಾನ.
ಶಿಷ್ಯ: ಪ್ರನಾಳದಲ್ಲಿ ಮಗುವನ್ನು ಉತ್ಪಾದಿಸಬಹುದೆಂದು ವಿಜ್ಞಾನಿಗಳು ಹೇಳಿದ್ದನ್ನು ಕೇಳಿದಾಗ ನೀವು, “ಅದು ಈಗಾಗಲೇ ತಾಯಿಯ ಗರ್ಭದಲ್ಲಿ ನಡೆಯುತ್ತಿದೆ. ಗರ್ಭವೇ ಅತ್ಯುತ್ತಮ ಪ್ರನಾಳ” ಎಂದು ಹೇಳಿದಿರಿ.
ಶ್ರೀಲ ಪ್ರಭುಪಾದ : ಹೌದು. ಪ್ರಕೃತಿಯೇ ಎಲ್ಲವನ್ನೂ ಪರಿಪೂರ್ಣವಾಗಿ ಮಾಡುತ್ತಿದೆ. ಆದರೆ ಹೆಮ್ಮೆಯಿಂದ ಹಿಗ್ಗಿದ ಕೆಲವು ವಿಜ್ಞಾನಿಗಳು ಪ್ರಕೃತಿದತ್ತ ಅಂಶಗಳನ್ನು ಬಳಸಿಕೊಂಡು ಕೀಳಾಗಿ ಅನುಕರಣೆ ಮಾಡುತ್ತಾರೆ ಮತ್ತು ನೊಬೆಲ್ ಪ್ರಶಸ್ತಿ ಪಡೆಯುತ್ತಾರೆ.
ಇನ್ನು ಮಗುವೊಂದನ್ನು ವಾಸ್ತವವಾಗಿ ಸೃಷ್ಟಿಸುವ ಬಗೆಗೆ ಹೇಳುವುದೇನಿದೆ? ವಿಜ್ಞಾನಿಗಳು ತಮ್ಮ ಪ್ರಯೋಗಾಲಯದಲ್ಲಿ ಒಂದು ಹುಲ್ಲಿನ ಗರಿಕೆಯನ್ನಾದರೂ ಉತ್ಪಾದಿಸಲಿ, ನೋಡೋಣ.
ಶಿಷ್ಯ: ಭಗವಂತ ಮತ್ತು ಪ್ರಕೃತಿ ಮಾತೆಗೆ ಅವರು ನೊಬೆಲ್ ಬಹುಮಾನ ನೀಡಬೇಕು.
ಶ್ರೀಲ ಪ್ರಭುಪಾದ : ಹೌದು, ಹೌದು.
ಶಿಷ್ಯ: ನಿಜವಾಗಿಯೂ ನಿಮಗೆ ನೊಬೆಲ್ ಪ್ರಶಸ್ತಿ ನೀಡಬೇಕೆಂದು ನನಗೆ ಅನ್ನಿಸುತ್ತದೆ. ನೀವು ಎಷ್ಟೊಂದು ಮೂರ್ಖ ನಾಸ್ತಿಕರನ್ನು ಭಗವಂತನ ಭಕ್ತರನ್ನಾಗಿ ಮಾಡಿರುವಿರಿ.
ಶ್ರೀಲ ಪ್ರಭುಪಾದ : ಓ ನಾನು “ನೈಜ ಶ್ವಾನ.” ಆದುದರಿಂದ ಅವರು ನನಗೆ ಯಾವುದೇ ಬಹುಮಾನ ನೀಡುವುದಿಲ್ಲ. (ನಗು). ಅವರು ಕೃತಕ ಶ್ವಾನಗಳಿಗೆ ಬಹುಮಾನ ನೀಡುತ್ತಾರೆ.






Leave a Reply