ಅತ್ಯಂತ ಬುದ್ಧಿವಂತ ಜೀವಿಯು ವಿಶ್ವವನ್ನು ಸೃಷ್ಟಿಸಿದನೇ?
ಸೃಷ್ಟಿಯನ್ನು ಕುರಿತ ವಿವರವಾದ ವೈದಿಕ ವರ್ಣನೆಯು ನಾಸ್ತಿಕನಲ್ಲಿಯೂ ಕುತೂಹಲ ಉಂಟುಮಾಡಬಹುದು.
ನಮ್ಮ ಸುತ್ತಲಿನ ವಿಶ್ವವು ಕ್ರಮಬದ್ಧವಾಗಿ ಮತ್ತು ಸಾಮರಸ್ಯದಿಂದ ಇರುವಂತೆ ಕಾಣುತ್ತದೆ. ಗ್ರಹಗಳು ತಮ್ಮ ಕಕ್ಷೆಯಲ್ಲಿ ಪರಿಪೂರ್ಣವಾಗಿ ಸುತ್ತುತ್ತಿವೆ. ನಮ್ಮ ದೇಹಗಳು ಸಂಕೀರ್ಣವಾದ ರಕ್ತ ಪರಿಚಲನೆ, ಉಸಿರಾಟದ ಮತ್ತು ಪಚನಕ್ರಿಯೆ ವ್ಯವಸ್ಥೆಗಳನ್ನು ಹೊಂದಿದೆ. ಅಣುಗಳೂ ಕೂಡ ಉತ್ತಮವಾಗಿ ರಚಿತವಾಗಿವೆ. ಇವೆಲ್ಲವೂ ಬ್ರಹ್ಮಾಂಡವನ್ನು ಆಕಸ್ಮಿಕವಾಗಿ ಅಲ್ಲ, ಬುದ್ಧಿವಂತ ವ್ಯಕ್ತಿಯು ಸೃಷ್ಟಿಸಿದ್ದಾನೆ ಎನ್ನುವುದನ್ನು ಸೂಚಿಸುತ್ತವೆ. ಮಾನವ ಜೀವಿಗಳು ಮನೆ, ಗಗನಚುಂಬಿ ಮತ್ತಿತರ ಕಟ್ಟಡಗಳನ್ನು ಸೃಷ್ಟಿಸಬಲ್ಲವರಾದರೆ, ಮಾನವನಿಗಿಂತ ಹೆಚ್ಚು ಶಕ್ತಿಶಾಲಿಯಾದವನು ಈ ವಿಶ್ವ ಮತ್ತು ಅದರಲ್ಲಿರುವ ಎಲ್ಲವನ್ನೂ ಸೃಷ್ಟಿಸಿದ ಎನ್ನುವುದು ಸಮಂಜಸವಾಗಿ ತೋರುತ್ತದೆ.

ಆದರೆ ಪ್ರಪಂಚದ ಮೂಲೆ ಮೂಲೆಗಳಲ್ಲಿಯೂ ದೃಷ್ಟಿಗೋಚರವಾಗುವ ವಿನ್ಯಾಸಗಳು ಬುದ್ಧಿವಂತ ಸೃಷ್ಟಿಕರ್ತನ (ಭಗವಂತ) ಯೋಜನೆ ಎನ್ನುವುದನ್ನು ಸೂಚಿಸಿದರೂ ತರ್ಕ ಒಂದೇ ದೇವರ ಅಸ್ತಿತ್ವವನ್ನು ಖಚಿತಪಡಿಸುವುದಿಲ್ಲ. ಬ್ರಹ್ಮಾಂಡದ ಮೂಲವು ನಮ್ಮ ಅನುಭವವನ್ನು ಮೀರಿದುದು. ವಿಶ್ವದ ಸೃಷ್ಟಿಯನ್ನು ನಾವು ವೀಕ್ಷಿಸಲಿಲ್ಲ. ನಾವು ಪರಿಗಣಿಸದ ಅಥವಾ ಪರಿಗಣಿಸಲು ಸಾಧ್ಯವಾಗದ ಅನೇಕ ರೀತಿಯಲ್ಲಿ ಅದು ಸಂಭವಿಸಿರಬಹುದು. ಆದುದರಿಂದ ಪರಮಜೀವ, ಸೃಷ್ಟಿಕರ್ತ ಇದ್ದಾನೋ ಇಲ್ಲವೋ ಎನ್ನುವ ಚರ್ಚೆಯು ತರ್ಕದ ವೇದಿಕೆಯ ಮೇಲೆ ಯಥಾಸ್ಥಿತಿಯಲ್ಲಿಯೇ ಅಂತ್ಯಗೊಳ್ಳುತ್ತದೆ.
ತರ್ಕ ಒಂದರಿಂದಲೇ ನಾವು ಪರಮ ಜೀವಿಯನ್ನು ನಿರ್ಣಯಾತ್ಮಕವಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ ಎಂದು ವೈದಿಕ ಸಾಹಿತ್ಯವು ದೃಢಪಡಿಸುತ್ತದೆ. ಶ್ರೀ ಕೃಷ್ಣನು ತನ್ನ ಶ್ರದ್ಧಾವಂತ ಭಕ್ತರಿಗೆ ತನ್ನನ್ನು ಪ್ರಕಟಪಡಿಸಿಕೊಂಡಾಗ, ಅವನ ಕೃಪೆಯಿಂದ ಮಾತ್ರ ಈ ವಿಶ್ವ ಮತ್ತು ಅದರಾಚೆಗಿನ ಆಧ್ಯಾತ್ಮಿಕ ಲೋಕಗಳ ಸೃಷ್ಟಿಕರ್ತ ದೇವೋತ್ತಮ ಪರಮ ಪುರುಷನನ್ನು ಅರ್ಥಮಾಡಿಕೊಳ್ಳುವುದು ಸಾಧ್ಯ ಎಂದು ಭಗವದ್ಗೀತೆಯಲ್ಲಿ ಸಾರಲಾಗಿದೆ. ನಮ್ಮ ತರ್ಕ ಮತ್ತು ಮಾನಸಿಕ ಕಸರತ್ತುಗಳು ಭಗವಂತನನ್ನು ಆಲಿಂಗಿಸಿಕೊಳ್ಳುವಷ್ಟು ಮೇಲೆರದಿದ್ದರೂ ಭಗವಂತನು ತನ್ನ ಅನಂತಶಕ್ತಿಯಿಂದ ತನ್ನ ಶ್ರದ್ಧಾವಂತ ಭಕ್ತರ ಅಸ್ಥಿರ ಮತ್ತು ಅಜ್ಞಾನದ ಮೂಲಕ ಪ್ರವೇಶಿಸಬಹುದು ಮತ್ತು ಅವರಿಗೆ ತನ್ನನ್ನು ಪ್ರಕಟಿಸಬಹುದು. ಆದರೂ ಮಾನವ ತರ್ಕವು ತಪ್ಪಾಗಿರಬಹುದಾದ ಸಂಭವ ಇರಬಹುದೆನ್ನುವುದನ್ನು ಸ್ಪಷ್ಟಪಡಿಸುತ್ತ ವೇದಗಳು ನಾವು ತರ್ಕ ಅಥವಾ ವಿವೇಚನೆಯನ್ನು ಬಿಟ್ಟುಬಿಡಬೇಕೆಂದು ಶಿಫಾರಸು ಮಾಡುವುದಿಲ್ಲ. ಭಗವಂತನನ್ನು ಕುರಿತಂತೆ ನಮಗೆ ಗಾಢವಾದ ತಾತ್ತ್ವಿಕ ಗ್ರಹಿಕೆ ಇಲ್ಲವಾದರೆ ಅವನ ಬಗೆಗಿನ ನಮ್ಮ ಶ್ರದ್ಧೆಯು ಭಾವನಾತ್ಮಕ ಮತ್ತು ಅಂಧಾಭಿಮಾನದ ಒಲವು ತೋರುತ್ತದೆ ಮತ್ತು ನಾಸ್ತಿಕರ ವಾದಕ್ಕೆ ತುಂಬ ಸುಲಭವಾಗಿ ಬಲಿಯಾಗುತ್ತದೆ. ಬ್ರಹ್ಮಾಂಡವು ಪರಮ ಶಕ್ತಿಶಾಲಿಯಾದ ವ್ಯಕ್ತಿಯ ಕೃತಿ ಎನ್ನುವುದನ್ನು ಸೂಚಿಸುವ ವಿನ್ಯಾಸದ ವಾದವೂ ಸೇರಿದಂತೆ ಎಲ್ಲ ರೀತಿಯ ವಾದಗಳೂ ವೈದಿಕ ಸಾಹಿತ್ಯದಲ್ಲಿ ಸೇರಿವೆ. ಆದರೆ ವೈದಿಕ ಸಾಹಿತ್ಯವು ಇನ್ನಷ್ಟು ಮುಂದಕ್ಕೂ ಹೋಗುತ್ತದೆ. ಸೃಷ್ಟಿಯ ವಿವಿಧ ಹಂತ, ವಿಶ್ವದ ಕಾಲ ಮತ್ತು ಆಯಾಮ, ಸೃಷ್ಟಿಯ ಉದ್ದೇಶ ಮತ್ತು ಭೌತಿಕ ವಸ್ತುಗಳ ಮೂಲ ಇವುಗಳ ವಿವರಗಳನ್ನೂ ಅದು ನೀಡುತ್ತದೆ. ಬೇರೆ ಮಾತಿನಲ್ಲಿ ಹೇಳುವುದಾದರೆ, ವೈದಿಕ ಸಾಹಿತ್ಯವು `ದೇವರು ಸೃಷ್ಟಿಸಿದ’ ಎಂದು ಸಾರುವುದಷ್ಟೇ ಅಲ್ಲ, ಅವನು ಹೇಗೆ ಮತ್ತು ಏಕೆ ಸೃಷ್ಟಿಸಿದ ಎನ್ನುವುದನ್ನೂ ಹೇಳುತ್ತದೆ.
ದೇವರಿಗೆ ನಿರ್ಬಂಧವಿಲ್ಲ
ಪರಮ ಪ್ರಭುವಿಗೆ ಸೃಷ್ಟಿ ಕಾರ್ಯದಲ್ಲಿ ನೇರವಾಗಿ ಪಾಲ್ಗೊಳ್ಳಬೇಕೆನ್ನುವ ನಿರ್ಬಂಧವೇನೂ ಇಲ್ಲ ಎಂದು ವೈದಿಕ ಸಾಹಿತ್ಯವು ಆರಂಭದಲ್ಲಿಯೇ ಪ್ರತಿಪಾದಿಸುತ್ತದೆ. ಭಗವಂತನು ಸೃಷ್ಟಿಕರ್ತನ ಕರ್ತವ್ಯದಲ್ಲಿ ಅತ್ಯಲ್ಪ ಬಿಡುವು ದೊರೆಯುವ, ಅತ್ಯಂತ ಶ್ರಮಿಸುವ ವೃದ್ಧ ಎಂದು ದೇವತಾ ಶಾಸ್ತ್ರಜ್ಞರು ಕೆಲವು ಬಾರಿ ಭಾವಿಸಿದರೆ, ಭಗವಂತನು ತನ್ನ ಇಚ್ಛೆಯಂತೆ, ತನಗೆ ಯಾವುದೇ ಶ್ರಮವಿಲ್ಲದಂತೆ ಸೃಷ್ಟಿಸುತ್ತಾನೆ ಎಂದು ವೈದಿಕ ಸಾಹಿತ್ಯವು ವಿವರಿಸುತ್ತದೆ. ಭಗವಂತನು ಅಸೀಮಿತ ಶಕ್ತಿ ಮತ್ತು ಸಂಪತ್ತನ್ನು ಹೊಂದಿರುವುದರಿಂದ ಅವನು ಯಾವುದೇ ಶ್ರೀಮಂತನಂತೆ ತನಗಾಗಿ ಬೇರೆಯವರು ಕೆಲಸಮಾಡುವಂತೆ ಮಾಡಬಲ್ಲ. ಒಬ್ಬ ಶ್ರೀಮಂತ ಬಂಡವಾಳಗಾರನು ಕಚೇರಿ ಕಟ್ಟಡವನ್ನು ನಿರ್ಮಿಸಲು ಬಯಸಿದರೆ, ಅವನು ತಾನೇ ಎಲ್ಲವನ್ನೂ ಮಾಡುವುದಿಲ್ಲ. ಅವನು ಒಂದು ಸಾಮಾನ್ಯ ಯೋಜನೆಯನ್ನು ಸಿದ್ಧಪಡಿಸುತ್ತಾನೆ ಅಥವಾ ನಿವೇಶನವೊಂದನ್ನು ಆಯ್ಕೆಮಾಡಿಕೊಳ್ಳುತ್ತಾನೆ. ಅನಂತರ ವಕೀಲರು, ವಾಸ್ತುಶಿಲ್ಪಿಗಳು, ಎಂಜನಿಯರುಗಳು, ಕಂಟ್ರಕ್ಟರುಗಳು ಮತ್ತಿತರರನ್ನು ತನ್ನ ಯೋಜನೆ ಸಾಕಾರಗೊಳಿಸಲು ಗುತ್ತಿಗೆಗೆ ಪಡೆಯುತ್ತಾನೆ. ಈ ಬಂಡವಾಳಗಾರನು ಶಂಕುಸ್ಥಾಪನೆಗೆ ನೆಲವನ್ನು ಅಗೆಯಬೇಕಾಗಿಲ್ಲ, ಸಿಮೆಂಟ್ ಸುರಿಯಬೇಕಾಗಿಲ್ಲ ಅಥವಾ ಇಟ್ಟಿಗೆಯನ್ನು ಇಡಬೇಕಾಗಿಲ್ಲ.
ಶ್ರೀಮಂತ ಹೂಡಿಕೆದಾರನಂತೆ ದೇವೋತ್ತಮನು ಸೃಷ್ಟಿ ಕ್ರಿಯೆಯಿಂದ ತಟಸ್ಥವಾಗಿರುತ್ತಾನೆ. ಆದರೆ ಅವನು ಸೃಷ್ಟಿ ಕರ್ತವ್ಯಗಳನ್ನು ಹೇಗೆ ನಿಯೋಜಿಸುತ್ತಾನೆ ಮತ್ತು ಯಾರಿಗೆ ಎನ್ನುವುದು ಅನನ್ಯ. ಕೃಷ್ಣನು ಸಾಮಾನ್ಯರಂತೆ ಅಲ್ಲ. ಪೂರ್ಣ ವಿಸ್ತರಣೆ ಎಂದು ಹೇಳುವ ಅಸಂಖ್ಯ ರೂಪಗಳಲ್ಲಿ ಕೃಷ್ಣನು ವಿಸ್ತರಣೆಯಾಗಬಲ್ಲ. ಈ ರೂಪಗಳು ಶಕ್ತಿ ಮತ್ತು ಸಾಮರ್ಥ್ಯದಲ್ಲಿ ಅವನಿಗೆ ಸಮಾನರು. ಈ ಎಲ್ಲ ವಿಸ್ತರಣೆಗಳೂ ದೇವೋತ್ತಮ ಪರಮ ಪುರುಷ ಕೃಷ್ಣನೇ. ಆದರೆ ಅದೇ ಸಮಯದಲ್ಲಿ ಅವರು ಸ್ವತಂತ್ರ ಚಿಂತನೆ ಮತ್ತು ಕ್ರಿಯೆಗಳೊಂದಿಗೆ ಸ್ವತಂತ್ರ ವ್ಯಕ್ತಿಗಳು. ಬ್ರಹ್ಮ ಸಂಹಿತವು ಇದಕ್ಕೊಂದು ವ್ಯಾಖ್ಯಾನವನ್ನು ನೀಡುತ್ತದೆ. ಬೆಳಗಲು ಅಷ್ಟೇ ಶಕ್ತಿ ಉಳ್ಳ ಇತರ ಅನೇಕ ದೀಪಗಳನ್ನು ಒಂದು ದೀಪವು ಹಚ್ಚುವಂತೆ ಮೂಲ ದೇವೋತ್ತಮ ಪರಮ ಪುರುಷ ಕೃಷ್ಣನು ಅಸಂಖ್ಯ ಪೂರ್ಣ ರೂಪದಲ್ಲಿ ವಿಸ್ತರಿಸಿಕೊಳ್ಳುತ್ತಾನೆ ಮತ್ತು ಪರಮ, ಮೂಲ ಪುರುಷನೆಂಬ ತನ್ನ ಗುರುತನ್ನೂ ಉಳಿಸಿಕೊಳ್ಳುತ್ತಾನೆ.
ಒಮ್ಮೆಲೆ ಅಸಂಖ್ಯ ಟೆಲಿವಿಷನ್ ತೆರೆಗಳ ಮೇಲೆ ಒಬ್ಬ ವ್ಯಕ್ತಿಯು ಕಾಣಿಸಿಕೊಳ್ಳುವುದು ಕೃಷ್ಣನ ವಿಸ್ತರಣಾ ಶಕ್ತಿಯನ್ನು ಭಾಗಶಃ ಬಿಂಬಿಸುತ್ತದೆ. ವ್ಯತ್ಯಾಸವೆಂದರೆ, ಟೆಲಿವಿಷನ್ ವಿಸ್ತರಣೆಗಳು ಮೂಲ ವ್ಯಕ್ತಿಯ ಪ್ರತಿಬಿಂಬ ಮಾತ್ರ ಮತ್ತು ಆ ವ್ಯಕ್ತಿಯು ಮಾಡುವಂತೆ ಚಲಿಸಬೇಕು ಮತ್ತು ಮಾತನಾಡಬೇಕು. ಆದರೆ ಕೃಷ್ಣನ ವಿಸ್ತರಣೆಗಳು ಅವನಿಗಿಂತ ಭಿನ್ನವಲ್ಲದಿದ್ದರೂ ಅವುಗಳಿಗಿಷ್ಟ ಬಂದಂತೆ ನಿರ್ವಹಿಸಬಲ್ಲವು. ಅವು ಕೇವಲ ಪ್ರತಿಬಿಂಬಗಳಲ್ಲ, ಆದರೆ ಪರಿಪೂರ್ಣ ವ್ಯಕ್ತಿಗಳು.
ಶ್ರೀಮಂತ ಬಂಡವಾಳಗಾರನು ತನ್ನ ಅಪೇಕ್ಷೆಗಳ ಈಡೇರಿಕೆಗಾಗಿ ಇತರರನ್ನು ನೇಮಕಮಾಡಿಕೊಳ್ಳಬೇಕು. ಆದರೆ ಕೃಷ್ಣನು ತನ್ನದೇ ಈ ಸ್ವತಂತ್ರ ವಿಸ್ತರಣೆಗಳ ಮೂಲಕ ವಿಶ್ವವನ್ನು ಸೃಷ್ಟಿಸುತ್ತಾನೆ. ಈ ಅಲೌಕಿಕ ವಿಷಯವನ್ನು ಇನ್ನಷ್ಟು ವಿಶದಪಡಿಸುತ್ತ ನಮ್ಮ ಗುರಿಗಳನ್ನು ಪಡೆಯಲು ನಾವು ಮೂರು ಲಕ್ಷಣಗಳ ಮೇಲೆ ಅವಲಂಬಿತರಾಗುತ್ತೇವೆ. ಅವುಗಳೆಂದರೆ ಜ್ಞಾನ, ಬಲ ಮತ್ತು ಕ್ರಿಯೆ. ಉದಾಹರಣೆಗೆ ಒಂದು ದೊಡ್ಡ ಕಟ್ಟಡವನ್ನು ನಿರ್ಮಿಸಲು ವಾಸ್ತು ಶಿಲ್ಪಿ ಮತ್ತು ಎಂಜನಿಯರುಗಳಿಗೆ ಕಟ್ಟಡ ವಿಜ್ಞಾನದ ಬಗೆಗೆ ಸಾಕಷ್ಟು ಜ್ಞಾನದ ಅಗತ್ಯವಿದೆ ಮತ್ತು ನಿರ್ಮಾಣ ಸಂಸ್ಥೆಗೆ ಮಾನವ ಶಕ್ತಿ ಮತ್ತು ಯಂತ್ರಗಳ ರೂಪದಲ್ಲಿ ಸಾಕಷ್ಟು ಬಲವಿರಬೇಕು. ಹಾಗೂ ಎಲ್ಲರೂ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿರಬೇಕು. ಆದರೆ ದೇವೋತ್ತಮ ಪರಮ ಪುರುಷನು ಕ್ರಿಯೆಗೆ ಅಗತ್ಯವಾದ ಎಲ್ಲ ಜ್ಞಾನ, ಶಕ್ತಿ ಮತ್ತು ಸಾಮರ್ಥ್ಯವನ್ನು ಹೊಂದಿದ್ದಾನೆ ಮತ್ತು ತಾನು ಬಯಸಿದ್ದನ್ನು ಈಡೇರಿಸಬಲ್ಲವನಾಗಿದ್ದಾನೆ. ತನ್ನ ವಿವಿಧ ವಿಸ್ತರಣೆಗಳಲ್ಲಿ ಈ ಶಕ್ತಿಗಳನ್ನು ಹೂಡುವ ಮೂಲಕ ಕೃಷ್ಣನು ಶ್ರಮವಿಲ್ಲದೆ ಸೃಷ್ಟಿಯ ವ್ಯವಹಾರವನ್ನು ನಡೆಸುತ್ತಾನೆ. ಬಂಡವಾಳಗಾರನು ಹಣದ ಮೂಲಕ ಕೆಲಸ ಮಾಡಿದರೆ ಕೃಷ್ಣನು ತನ್ನ ಸ್ವತಂತ್ರ ವಿಸ್ತರಣೆಗಳು ಮತ್ತು ಶಕ್ತಿಯ ಮೂಲಕ ನಿರ್ವಹಿಸುತ್ತಾನೆ.

ಸ್ವತಃ ವಿಸ್ತರಿಸಿಕೊಳ್ಳುವ ಕೃಷ್ಣನ ಸಾಮರ್ಥ್ಯವು ಸಾಮಾನ್ಯ ತರ್ಕದ ಆಚೆಗೆ ಕಲ್ಪನಾತೀತವಾದುದು. ಆದರೆ ಅದು ಊಹಾತೀತ, ಏಕೆಂದರೆ ನಮಗೆ, ಮಾನವ ಜೀವಿಗಳಿಗೆ ಅದನ್ನು ಮಾಡುವುದು ಸಾಧ್ಯವಿಲ್ಲ ಮತ್ತು ಬೇರೆ ಯಾರಾದರೂ ಮಾಡಿರುವುದನ್ನು ನೋಡಿರುವುದಿಲ್ಲ. ಭಗವಂತನು ಸರ್ವಶಕ್ತ ಎನ್ನುವುದನ್ನು ಸ್ವೀಕರಿಸಿದಾಗ ಅವನು ಮಾಡುವುದು ಯಾವುದೂ ಕೂಡ ಊಹಾತೀತವಲ್ಲ ಎನ್ನುವುದು ತಿಳಿಯುತ್ತದೆ. ಬದಲಿಗೆ, ಅವನ ಅಸಾಧಾರಣ ಗುಣ ಲಕ್ಷಣಗಳು ಅವನ ಸರ್ವಶಕ್ತಿಗೆ ಸಾಕ್ಷಿಯಾಗಿದೆ. ಆದುದರಿಂದ ವೈದಿಕ ಸಾಹಿತ್ಯವು ಕೃಷ್ಣನ ಗುಣಲಕ್ಷಣಗಳನ್ನು ವಿವರವಾಗಿ ವರ್ಣಿಸುವ ಮೂಲಕ ದೇವೋತ್ತಮನನ್ನು ಅರಿಯುವ ತರ್ಕಬದ್ಧವಾದ ಮಾರ್ಗಕ್ಕೆ ತಡೆಹಾಕುವುದಿಲ್ಲ. ಆದರೆ, ಬದಲಿಗೆ, ತರ್ಕವನ್ನು ಉನ್ನತ, ಅಲೌಕಿಕ ವೇದಿಕೆಯಲ್ಲಿ ಬಳಸಲು ಪ್ರೇರೇಪಿಸುತ್ತದೆ.
ಮಹಾ ವಿಷ್ಣು ವಿಸ್ತರಣೆ
ಸೃಷ್ಟಿಗೆ ಕೃಷ್ಣನ ಮೊದಲ ವಿಸ್ತರಣೆಯೇ ಮಹಾ ವಿಷ್ಣು. ಅವನು ತನ್ನ ಅಲೌಕಿಕ ದೇಹದಿಂದ ಭೌತಿಕ ವಸ್ತುಗಳನ್ನು ಪ್ರಕಟಪಡಿಸಲಾರಂಭಿಸುತ್ತಾನೆ. ಸೃಷ್ಟಿಕರ್ತ ಎಂದು ಹೇಳಿದರೆ ಆಧುನಿಕ ವಿಜ್ಞಾನಿಗಳು ಆಕ್ಷೇಪಿಸುತ್ತಾರೆ. ಭೌತಿಕ ಶಕ್ತಿಯು ಶಾಶ್ವತವಾಗಿರುವುದರಿಂದ ದೇವರನ್ನೇಕೆ ತರುವಿರಿ ಎಂದು ಅವರು ಹೇಳುತ್ತಾರೆ. ಆದರೆ ಮಹಾ ವಿಷ್ಣು ಕೂಡ ಶಾಶ್ವತ ಮತ್ತು ಭೌತಿಕ ವಸ್ತುಗಳು ಅವನ ಶಾಶ್ವತ ಶಕ್ತಿ ಎಂದು ವೈದಿಕ ಸಾಹಿತ್ಯವು ಉತ್ತರಿಸುತ್ತದೆ. ದೇವರು ಮತ್ತು ಅವನ ಶಕ್ತಿಯು ಸೂರ್ಯ ಮತ್ತು ಅವನ ಬೆಳಕಿನಂತೆ. ಒಂದು ಮತ್ತೊಂದರ ಮೂಲವಾದರೂ ಅವು ಏಕ ಕಾಲದಲ್ಲಿ ಅಸ್ತಿತ್ವದಲ್ಲಿ ಇರುತ್ತವೆ. ಭಗವಂತ ಮತ್ತು ಭೌತಿಕ ಶಕ್ತಿ ಎರಡೂ ಕೂಡ ಶಾಶ್ವತ. ಆದರೂ ದೇವರು ಭೌತಿಕ ಶಕ್ತಿಗೆ ಮೂಲ.
ಸಂಪೂರ್ಣವಾಗಿ ಕುಗ್ಗದೆ, ಮೂಲಭೂತ ಸೃಷ್ಟಿಗೆ ತನ್ನನ್ನು ಹರಡಿಕೊಳ್ಳದೆ ಎಲ್ಲ ಭೌತಿಕ ವಸ್ತುಗಳನ್ನು ಸೃಷ್ಟಿಸುವ ಮಹಾನ್ ಕಾರ್ಯದಲ್ಲಿ ಮಹಾ ವಿಷ್ಣುವು ಅದು ಹೇಗೆ ತೊಡಗಿದ್ದಾನೆ ಎನ್ನುವ ಅಚ್ಚರಿ ನಮಗೆ ಉಂಟಾಗುತ್ತದೆ. ಲೌಕಿಕವಾಗಿ ಹೇಳುವುದಾದರೆ, ನಾವು ಏನನ್ನಾದರೂ ಒಂದು ನಿರ್ದಿಷ್ಟ ಮೂಲದಿಂದ ತೆಗೆದುಕೊಂಡರೆ, ಆ ಮೂಲವು ನಮಗೆ ಕ್ರಮೇಣ ಬರಿದಾಗಿಬಿಡುತ್ತದೆ. ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಪಡೆಯಿರಿ. ಖಾತೆಯಲ್ಲಿನ ಉಳಿಕೆ ಹಣವು ಕಡಮೆಯಾಗುತ್ತ ಹೋಗುತ್ತದೆ. ಲೋಟದಿಂದ ನೀರನ್ನು ಸುರಿಯಿರಿ. ಲೋಟವು ಬರಿದಾಗುತ್ತದೆ. ಹಸುವಿನಿಂದ ಹಾಲು ಪಡೆದುಕೊಳ್ಳಿ. ನಾವು ಗೋವಿಗೆ ಮೇವು ನೀಡದಿದ್ದರೆ ಕ್ರಮೇಣ ಅದರಲ್ಲಿ ಹಾಲು ಬತ್ತಿಹೋಗುತ್ತದೆ. ನಿರೂಪಣೆಯಂತೆ ಭಗವಂತನು ಎಲ್ಲದರ ಮೂಲ, ಅವನಲ್ಲಿ ತುಂಬುವ ಯಾವುದೂ ಅವನ ಆಚೆಗೆ, ಹೊರಗೆ ಇಲ್ಲ. ಆದುದರಿಂದ ಮಹಾ ವಿಷ್ಣುವು ತನ್ನಿಂದ ಭೌತಿಕ ವಸ್ತುಗಳನ್ನು ಸೃಷ್ಟಿಸಿದರೆ ಏನಾಗುತ್ತದೆ?
ಅವನಿಗೆ ಏನೂ ಆಗುವುದಿಲ್ಲ ಎಂದು ಈಶೋಪನಿಷತ್ ಹೇಳುತ್ತದೆ. ಅಸೀಮಿತ ಪ್ರಮಾಣದಷ್ಟು ವಸ್ತುಗಳನ್ನು ಪೂರೈಸುತ್ತಿದ್ದರೂ ಮಹಾ ವಿಷ್ಣುವಿನ ಮೇಲೆ ಏನೂ ಪ್ರಭಾವ ಉಂಟಾಗುವುದಿಲ್ಲ ಮತ್ತು ಅವನು ಬದಲಾಗುವುದಿಲ್ಲ. ಇದು ಹೇಗೆ ಸಾಧ್ಯ? ಏಕೆಂದರೆ ಕುಗ್ಗುವುದು ಮತ್ತು ಬರಿದಾಗುವುದು ವಸ್ತುವಿನ ಲಕ್ಷಣ. ಆದರೆ ಮಹಾ ವಿಷ್ಣುವು ವಸ್ತುವಲ್ಲ, ಅವನು ಪರಿಶುದ್ಧ ಆತ್ಮ, ಅಲೌಕಿಕ. ಆದುದರಿಂದ ಅವನಿಗೆ ಭೌತಿಕ ಗುಣಗಳಿಲ್ಲ. ಅವನು ತನ್ನದೇ ರೂಪದಿಂದ ಬ್ರಹ್ಮಾಂಡದ ಸಂಪೂರ್ಣ ಸ್ವರೂಪವನ್ನು ಉತ್ಪಾದಿಸುತ್ತಾನೆ. ಆದರೂ ಪರಿಪೂರ್ಣನಾಗಿ ಉಳಿಯುತ್ತಾನೆ. ಕೃಷ್ಣನು ತನ್ನ ರೂಪ ಅಥವಾ ಗುರುತನ್ನು ಬದಲಿಸಿಕೊಳ್ಳದೆ ಮಹಾ ವಿಷ್ಣುವಾಗಿ ವಿಸ್ತರಿಸಿಕೊಳ್ಳುವಂತೆ ಮಹಾ ವಿಷ್ಣುವು ಭೌತಿಕ ವಸ್ತುಗಳನ್ನು ಸೃಷ್ಟಿಸುತ್ತಾನೆ, ಆದರೂ ಸಂಪೂರ್ಣವಾಗಿ ತಾನಿರುವಂತೆಯೇ ಉಳಿಯುತ್ತಾನೆ. ಮಹಾ ವಿಷ್ಣುವು ಭೌತಿಕ ವಸ್ತುಗಳಿಂದ ಒಂದಲ್ಲ ಅಸಂಖ್ಯ ಬ್ರಹ್ಮಾಂಡಗಳನ್ನು ಅಥವಾ ವಿಶ್ವ ಕೋಶಗಳನ್ನು ಉತ್ಪಾದಿಸುತ್ತಾನೆ ಎಂದು ಭಾಗವತವು ನಮಗೆ ತಿಳಿಸುತ್ತದೆ. ಈ ಬೃಹತ್ ಕೋಶಗಳು ಟೊಳ್ಳು ಗೋಳಾಕಾರದಲ್ಲಿವೆ. ಕೆಳ ಅರ್ಧ ಭಾಗವು ನೀರಿನಿಂದ ತುಂಬಿದೆ. ಮೇಲಿನ ಅರ್ಧ ಭಾಗವು ಕೊನೆ ಪಕ್ಷ ಆರಂಭದಲ್ಲಿ ಖಾಲಿ. ನಮ್ಮ ವಿಶ್ವವು ಎಲ್ಲ ವಿಶ್ವಗಳಿಗಿಂತ ಚಿಕ್ಕದೆಂದು ಭಾಗವತವು ಹೇಳುತ್ತದೆ. ಆದರೂ ಕೋಶದ ಒಳಗಿನ ಸ್ಥಳವು ವ್ಯಾಸದಲ್ಲಿ 400 ಕೋಟಿ ಮೈಲಿಯಾಗಿದ್ದರೆ, ಕೋಶವು ಸ್ವತಃ ಕೋಟ್ಯಂತರ ಮೈಲಿಯಷ್ಟು ದಪ್ಪನಾಗಿದೆ.
ಮಹಾ ವಿಷ್ಣುವು ತನ್ನ ವ್ಯಕ್ತಿತ್ವವನ್ನು ವಿಸ್ತರಿಸಿಕೊಳ್ಳುತ್ತಾನೆ ಮತ್ತು ಗರ್ಭೋದಕಶಾಯಿ ವಿಷ್ಣುವಾಗಿ ಪ್ರತಿಯೊಂದು ವಿಶ್ವವನ್ನೂ ಪ್ರವೇಶಿಸುತ್ತಾನೆ. ಅನಂತರ ಗರ್ಭೋದಕಶಾಯಿ ವಿಷ್ಣುವು ವಿಶ್ವದ ಮೊದಲ ಜೀವಿ ಬ್ರಹ್ಮನನ್ನು ಸೃಷ್ಟಿಸುತ್ತಾನೆ.
ಬ್ರಹ್ಮನು ಶಾಶ್ವತ, ವೈಯಕ್ತಿಕ ವ್ಯಕ್ತಿಯಾದರೂ ಕೂಡ ಅವನು ಭಗವಂತನ ಪೂರ್ಣ ವಿಸ್ತರಣೆ ಅಲ್ಲ. ಅವನು ನಮ್ಮ ನಿಮ್ಮಂತೆ ಜೀವ-ತತ್ತ್ವ ವಿಸ್ತರಣೆ. ಗುಣಮಟ್ಟದಲ್ಲಿ ಕೃಷ್ಣನಿಗೆ ಸಮ, ಆದರೆ ಪ್ರಮಾಣದಲ್ಲಿ ತೃಣ. ಜೀವ-ತತ್ತ್ವ ವಿಸ್ತರಣೆಗಳು ಕೃಷ್ಣನ ವಿಭಿನ್ನಾಂಶ ಮತ್ತು ಭಗವಂತನಿಗೆ ಪ್ರೀತಿಯ ಸೇವೆ ಸಲ್ಲಿಸುವುದು ಅವುಗಳ ಶಾಶ್ವತ, ಆನಂದಮಯ ಕಾರ್ಯವಾಗಿದೆ. ವಾಸ್ತವವಾಗಿ ಅವುಗಳಿಗೆ ಇನ್ನಾವ ಕೆಲಸವೂ ಇಲ್ಲ. ಬೆರಳುಗಳಿಗೆ ಇಡೀ ದೇಹಕ್ಕೆ ಸೇವೆ ಸಲ್ಲಿಸುವುದೇ ಕೆಲಸವಾಗಿರುವ ಹಾಗೆ. ಬೆರಳುಗಳನ್ನು ದೇಹದಿಂದ ಕತ್ತರಿಸಿಬಿಟ್ಟರೆ ಅವು ತಮ್ಮ ಜೀವವನ್ನೇ ಕಳೆದುಕೊಳ್ಳುತ್ತವೆ ಅದೇ ರೀತಿ ಜೀವಾತ್ಮಗಳನ್ನು ಕೃಷ್ಣನ ಶಾಶ್ವತ ಸೇವೆಯಿಂದ ಪ್ರತ್ಯೇಕಿಸಿಬಿಟ್ಟರೆ ಅವು ತಮ್ಮ ಶಾಶ್ವತ ಆನಂದಮಯ ಗುಣವನ್ನು ಕಳೆದುಕೊಳ್ಳುತ್ತವೆ.
ಭೌತಿಕ ಸೃಷ್ಟಿಗೆ ಬರುವ ಮುನ್ನ ಜೀವ ಆತ್ಮಗಳು ಭೌತಿಕ ವಿಶ್ವಗಳ ಆಚೆಗಿನ ಆಧ್ಯಾತ್ಮಿಕ ಲೋಕದಲ್ಲಿ ಇರುತ್ತವೆ. ಅಲ್ಲಿ ಅವು ದೇವೋತ್ತಮ ಪರಮ ಪುರುಷ ಕೃಷ್ಣನ ಸೇವಕರು, ಮಿತ್ರರು, ಸಹವರ್ತಿಗಳಾಗಿ ತಮ್ಮ ಬಾಂಧವ್ಯದಂತೆ ಕ್ರಿಯಾಶೀಲರಾಗಿರುವರು. ಕೃಷ್ಣನೊಂದಿಗಿನ ಈ ಬಾಂಧವ್ಯಕ್ಕೆ ಪ್ರೀತಿ ಆಧಾರವಾಗಿರುವುದರಿಂದ ಜೀವಾತ್ಮಗಳಿಗೆ ಅತ್ಯಲ್ಪ ಸ್ವಾತಂತ್ರ್ಯವಿರುತ್ತದೆ: ಸರ್ವ ಶಕ್ತ ಪರಮ ಪುರುಷನಿಗೆ ಅಧೀನರಾಗಿ ಉಳಿಯುವ ಆಯ್ಕೆ ಮಾಡಿಕೊಳ್ಳಬಹುದು ಅಥವಾ ಅವನ ಸೇವೆಯನ್ನು ನಿರ್ಲಕ್ಷಿಸಿ ತಾವೇ ಸ್ವತಂತ್ರ ದೇವರಾಗಬಹುದು. ಸೇವೆ ಸಲ್ಲಿಸಬೇಕೆ ಅಥವಾ ಬೇಡವೇ ಎನ್ನುವ ಸ್ವಾತಂತ್ರ್ಯದ ಈ ಆಯ್ಕೆ ಇಲ್ಲದೆ ಭಗವಂತನನ್ನು ಪ್ರೀತಿಸುವ ಪ್ರಶ್ನೆಯೇ ಇಲ್ಲ. ಏಕೆಂದರೆ ಪ್ರೀತಿಯು ಸ್ವತಂತ್ರ ಮನಸ್ಸಿನ ಅಗತ್ಯ ಕ್ರಿಯೆ. ಕೆಲವು ಅಲ್ಪ ಸಂಖ್ಯಾತ ಜೀವಾತ್ಮಗಳು ತಮ್ಮ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡು ಕೃಷ್ಣನಿಲ್ಲದೆ ತಮ್ಮ ಜೀವನವನ್ನು ಆನಂದಿಸಲು ಅಪೇಕ್ಷಿಸುತ್ತವೆ.

ಸಣ್ಣ ಸಂಖ್ಯೆಯ ಜೀವಿಗಳ ಈ ಅಸ್ವಾಭಾವಿಕ ಅಪೇಕ್ಷೆಯನ್ನು ಈಡೇರಿಸಲು ಮತ್ತು ಸುಧಾರಿಸಲು ಶ್ರೀ ಕೃಷ್ಣನು ಭೌತಿಕ ಲೋಕವನ್ನು ಸೃಷ್ಟಿಸುತ್ತಾನೆ. ಭೌತಿಕ ವಿಶ್ವಗಳ ಕೋಶಗಳೊಳಗೆ ಬಂಧಿತವಾಗುವ ಸ್ವತಂತ್ರ ಮನೋಭಾವದ ಜೀವಗಳಿಗೆ ಲಕ್ಷಾಂತರ ಜೀವಜಾತಿಗಳ ದೇಹಗಳಲ್ಲಿ ಒಂದನ್ನು ನೀಡಲಾಗುತ್ತದೆ ಮತ್ತು ಕೃಷ್ಣನೊಂದಿಗಿನ ಆನಂದಮಯ ಮತ್ತು ಜ್ಞಾನದ ಶಾಶ್ವತ ಜೀವನವನ್ನು ಮರೆಯಲು ಅವಕಾಶ ಕಲ್ಪಿಸಲಾಗುತ್ತದೆ. ಭಗವದ್ಗೀತೆಯ ಪ್ರಕಾರ, ಕಾರಿನಲ್ಲಿ ಚಾಲಕನು ಇರುವಂತೆ ಪ್ರತಿಯೊಂದು ಜೀವಿಯಲ್ಲಿಯೂ ಜೀವಾತ್ಮವು ನೆಲೆಸಿರುತ್ತದೆ. ಮೋಟಾರಿನ ಚಲನೆಯನ್ನು ನಿರ್ದೇಶಿಸಿದರೂ ಚಾಲಕನು ಕಾರಿಗಿಂತ ಭಿನ್ನ. ಅದೇ ರೀತಿ ಭೌತಿಕ ವಸ್ತುಗಳಿಂದ ಮಾಡಿರುವ ದೇಹವನ್ನು ಸುಖಿಸಲು ಪಟ್ಟುಬಿಡದೆ ಪ್ರಯತ್ನಿಸುತ್ತಿದ್ದರೂ ಜೀವಾತ್ಮವು ಅದರಿಂದ ಭಿನ್ನ. ಸೂಕ್ಷ್ಮ ಜೀವಿಯಿಂದ ಮಾನವ ಜೀವಿಯವರೆಗೆ ಪ್ರತಿಯೊಂದು ರೀತಿಯ ದೇಹವೂ ಜೀವಕ್ಕೆ ಒಂದು ನಿರ್ದಿಷ್ಟ ವಿಧದ ಇಂದ್ರಿಯ ಸುಖವನ್ನು ನೀಡುತ್ತದೆ, ಅದರ ನಾಸ್ತಿಕ ಹಂಬಲವನ್ನು ತೃಪ್ತಿಪಡಿಸುವ ಪ್ರಯತ್ನವಾಗಿ ಒಂದು ಭಿನ್ನ ಮಾರ್ಗ.
ಗರ್ಭೋದಕಶಾಯಿ ವಿಷ್ಣುವು ಅಸಂಖ್ಯ ವಿಶ್ವಗಳಲ್ಲಿ ಕ್ಷೀರೋದಕಶಾಯಿ ವಿಷ್ಣುವಾಗಿ ವಿಸ್ತರಣೆಗೊಳ್ಳುತ್ತಾನೆ. ಅನಂತರ ಕ್ಷೀರೋದಕಶಾಯಿ ವಿಷ್ಣುವು ಅಸೀಮಿತವಾಗಿ ಎಲ್ಲ ಜೀವಿಗಳ ಹೃದಯಗಳಲ್ಲಿ ಪ್ರವೇಶಿಸಲು ವಿಸ್ತರಣೆಗೊಳ್ಳುತ್ತಾನೆ. ಕೃಷ್ಣನ ಈ ವಿಸ್ತರಣೆಯನ್ನು ಪರಮಾತ್ಮ ಎನ್ನುತ್ತಾರೆ. ಪರಮಾತ್ಮನು ಲೌಕಿಕ ಆನಂದವನ್ನು ಅರಸುವ ಪ್ರತಿಯೊಂದು ಜೀವ ಆತ್ಮದ ಜೊತೆಗೂಡುತ್ತಾನೆ. ಶ್ರೀಕೃಷ್ಣನು ಅದನ್ನು ಪರಮಾತ್ಮನಾಗಿ ಹೇಳುತ್ತಾನೆ, ಅವನು ನೆನಪು, ಜ್ಞಾನ ಮತ್ತು ಮರೆವುಗಳನ್ನು ಪೂರೈಸುತ್ತ ಜೀವಗಳ ಇಂದ್ರಿಯ ಆನಂದದ ಶೋಧವನ್ನು ನಿರ್ದೇಶಿಸುತ್ತಾನೆ. ಸಾವಿನ ಸಮಯದಲ್ಲಿ ಜೀವ ಆತ್ಮವನ್ನು ಈ ದೇಹದಿಂದ ತೆಗೆದು 84,00,000 ಜೀವಜಾತಿಗಳಲ್ಲಿ ಯಾವುದಾದರೂ ಒಂದರಲ್ಲಿ ಮುಂದಿನ ಜನ್ಮಕ್ಕಾಗಿ ಸಿದ್ಧಗೊಳಿಸಲಾಗುವುದು. ಇದೆಲ್ಲವನ್ನೂ ಭಗವಂತನು ಹೃದಯಗಳಲ್ಲಿ ವ್ಯವಸ್ಥೆ ಮಾಡುತ್ತಾನೆ. ಮಾನವ ದೇಹವು ವ್ರತಾಚರಣೆ, ಆತ್ಮ ಸಾಕ್ಷಾತ್ಕಾರ ಮತ್ತು ಕೃಷ್ಣಪ್ರಜ್ಞೆಯನ್ನು ಪುನರ್ ಎಚ್ಚರಿಸಲು ಸೂಕ್ತವಾಗಿದೆ. ಆದರೆ ಮಾನವ ಜೀವಿಯು ಪ್ರಾಣಿಯಂತೆ ಇರಲು ಅಪೇಕ್ಷಿಸಿ ನಡೆದುಕೊಂಡರೆ ಅವನಿಗೆ ಅವನ ಮುಂದಿನ ಜನ್ಮದಲ್ಲಿ ಪ್ರಾಣಿಯ ದೇಹದಲ್ಲಿ ಸುಖಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಹಕ್ಕಿಗಳ ಹೋಲಿಕೆ
ಜೀವಾತ್ಮಕ್ಕೆ ಎದ್ದು ಕಾಣುವ ವ್ಯತ್ಯಾಸವಾಗಿ ಪರಮಾತ್ಮನು ಲೌಕಿಕ ದೇಹದಲ್ಲಿ ನೆಲೆಸಿದ್ದರೂ ಲೌಕಿಕ ವಸ್ತುಗಳ ಅಪೇಕ್ಷೆಯಿಂದ ಎಂದಿಗೂ ನಿಯಂತ್ರಿಸಲ್ಪಡುವುದಿಲ್ಲ. ಕೃಷ್ಣ ಮತ್ತು ಅವನ ವಿಸ್ತರಣೆಗಳು ಭೌತಿಕ ಶಕ್ತಿಯ ನಿಯಂತ್ರಕರು. ಹಾಗೆಯೇ ಕೃಷ್ಣನನ್ನು ಮರೆಯಬೇಕೆಂಬ ಅಪೇಕ್ಷೆ ಇರುವವರೆಗೂ ಜೀವ ಕೂಡ ಅದೇ ಶಕ್ತಿಯಿಂದ ನಿಯಂತ್ರಿಸಲ್ಪಟ್ಟಿದ್ದಾನೆ. ಉಪನಿಷತ್ಗಳಲ್ಲಿ ಜೀವಾತ್ಮ ಮತ್ತು ಪರಮಾತ್ಮರನ್ನು ದೇಹದ ಒಂದೇ ಮರದ ಮೇಲೆ ಕುಳಿತ ಎರಡು ಪಕ್ಷಿಗಳಿಗೆ ಹೋಲಿಸಲಾಗಿದೆ. ತಾಳ್ಮೆಯಿಂದ ನೋಡುತ್ತಿರುವ ಒಂದು ಪಕ್ಷಿಯನ್ನು (ಪರಮಾತ್ಮ) ಮರೆತು ಮತ್ತೊಂದು ಪಕ್ಷಿಯು (ಜೀವ) ಮರದ ಮೇಲೆ ಲೌಕಿಕ ಸುಖದ ಫಲವನ್ನು ಆನಂದಿಸಲು ಪ್ರಯತ್ನಿಸುತ್ತದೆ. ಲೌಕಿಕ ಆಸೆಗಳಿಂದ ಕಿಂಚಿತ್ತೂ ಪ್ರಭಾವಿತವಾಗದ ಪರಮಾತ್ಮನು ಜೀವದ ಚಟುವಟಿಕೆಗಳನ್ನು ನೋಡುತ್ತಾನೆ ಮತ್ತು ನಿರ್ದೇಶಿಸುತ್ತಾನೆ. ಜೀವಾತ್ಮಗಳು ಮಾತ್ರ ಲೌಕಿಕ ದೇಹಗಳನ್ನು ಪಡೆಯುತ್ತವೆ ಮತ್ತು ವಸ್ತುವನ್ನು ಆನಂದಿಸಲು ಪ್ರಯತ್ನಿಸುತ್ತವೆ.

ಆದಾಗ್ಯೂ, ಈ ಭೌತಿಕ ಲೋಕವು ಪರಿಶುದ್ಧ ಸುಖದ ಸ್ಥಳ ಅಲ್ಲ ಎನ್ನುವುದನ್ನು ನಾವೆಲ್ಲರೂ ಅನುಭವಿಸಿದ್ದೇವೆ. ದೇವರಿದ್ದರೂ ಅವನ ಸೃಷ್ಟಿಯು ರೋಗ, ವೃದ್ಧಾಪ್ಯ, ಸಾವು ಮತ್ತಿತರ ನೋವುಗಳಿಂದ ತುಂಬಿರುವುದರಿಂದ ಅವನು ಒಳ್ಳೆಯವನಲ್ಲ ಅಥವಾ ನಿಷ್ಪಕ್ಷಪಾತಿಯಲ್ಲ ಎಂದು ಕೆಲವು ಬಾರಿ ವಾದಿಸಲಾಗುತ್ತದೆ. ಆದಾಗ್ಯೂ ಕೃಷ್ಣನು ಭೌತಿಕ ಲೋಕವನ್ನು ಸೃಷ್ಟಿಸುತ್ತಾನೆ. ನಮ್ಮ ಸ್ವತಂತ್ರ ಇಂದ್ರಿಯ ಸುಖಕ್ಕಾಗಿ ಮಾತ್ರವಲ್ಲ, ಅವನ ಸೇವೆಯ ಆಚೆಗಿನ ಸುಖವು ಮಾಯೆ ಎನ್ನುವುದನ್ನು ನಮಗೆ ನೆನಪಿಸಲೂ ಭೌತಿಕ ಲೋಕವನ್ನು ಸೃಷ್ಟಿಸುತ್ತಾನೆ. ಒಬ್ಬ ವ್ಯಕ್ತಿಯು ತನ್ನ ಮಿತ್ರರು, ಬಂಧುಗಳು ಮತ್ತು ತನ್ನನ್ನೇ ಮರೆತು ಹುಚ್ಚನಾದಾಗ, ಅವನು ಆ ಸ್ಥಿತಿಯಲ್ಲಿ ಅನುಭವಿಸುವ ಸುಖವೆಲ್ಲವೂ ಕೆಲಸಕ್ಕೆ ಬಾರದವು. ಅದೇ ರೀತಿ ಜೀವಾತ್ಮಗಳು ತಮ್ಮ ಪ್ರೀತಿಯ ಸ್ನೇಹಿತ ಕೃಷ್ಣನೊಂದಿಗೆ ತಮ್ಮ ಶಾಶ್ವತ ಬಾಂಧವ್ಯವನ್ನು ಮರೆತಿದ್ದಾರೆ. ಅವರು ತಮ್ಮ ಬಾಂಧವ್ಯವನ್ನು ಪುನರ್ ಸ್ಥಾಪಿಸುವವರೆಗೂ ಅವರು ಸಂಪತ್ತು, ಕೀರ್ತಿ, ಸೌಂದರ್ಯ, ಶಿಕ್ಷಣ, ಮತ್ತಿತರ ತಾತ್ಕಾಲಿಕ ಲೌಕಿಕ ಪ್ರಯೋಜನಗಳನ್ನು ಪಡೆದುಕೊಂಡರೂ ಅವರು ತಮ್ಮ ಸುಖದ ಪ್ರಮಾಣದಲ್ಲಿ ಅತ್ಯಲ್ಪ ಭಾಗವನ್ನಷ್ಟೇ ಸಾಕ್ಷಾತ್ಕರಿಸಿಕೊಳ್ಳಬಲ್ಲರು. ಲೌಕಿಕ ಸೃಷ್ಟಿಯು ಅನ್ಯವಾದದ್ದು ಎನ್ನುವುದನ್ನು ಜೀವಕ್ಕೆ ನೆನಪಿಸಲು ಲೌಕಿಕ ಅಪೇಕ್ಷೆಗಳನ್ನು ರೂಪಿಸಲಾಗಿದೆ ಮತ್ತು ಅವರು ನಮ್ಮ ಒಳಿತಿಗಾಗಿ ಭಗವಂತನ ಕಾಳಜಿಯನ್ನು ವ್ಯಕ್ತಪಡಿಸಬೇಕು. ತನ್ನ ಪ್ರಜ್ಞೆಗೆ ಬಂದು ಕೃಷ್ಣಪ್ರಜ್ಞೆಯನ್ನು ಆಚರಿಸುವ ಜೀವನು ಅತಿ ಕ್ಷಿಪ್ರವಾಗಿ ಆಧ್ಯಾತ್ಮಿಕ ಲೋಕಕ್ಕೆ ಹಿಂದಿರುಗುತ್ತಾನೆ.
ಬ್ರಹ್ಮನ ಉಸ್ತುವಾರಿ
ಪ್ರತಿಯೊಂದು ವಿಶ್ವದಲ್ಲಿಯೂ ಪ್ರಥಮ ಜೀವಿಯಾದ ಬ್ರಹ್ಮನು ಎಲ್ಲ ಗ್ರಹ ಲೋಕಗಳನ್ನು ಮತ್ತು ಗ್ರಹ ವ್ಯವಸ್ಥೆಯನ್ನು ನಿರ್ಮಿಸುವ ಉಸ್ತುವಾರಿ ವಹಿಸಿದ್ದಾನೆ. ಜಲಜೀವಿ, ಕ್ರಿಮಿಕೀಟ, ಗಿಡಗಳು, ಹಕ್ಕಿಗಳು, ಪ್ರಾಣಿಗಳು ಮತ್ತು ಮಾನವ ಜೀವಿಗಳೂ ಸೇರಿದಂತೆ 84,00,000 ಜೀವಜಾತಿಗಳ ಸೃಷ್ಟಿಯ ಉಸ್ತುವಾರಿಯನ್ನೂ ವಹಿಸಿದ್ದಾನೆ. ಗರ್ಭೋದಕಶಾಯಿ ವಿಷ್ಣುವಿನ ಪ್ರೇರಣೆ ಮತ್ತು ಸಬಲೀಕರಣದಿಂದ ಬ್ರಹ್ಮನು ಭೌತಿಕ ವಸ್ತುಗಳನ್ನು ಬಳಸಿ ಸೃಷ್ಟಿಯನ್ನು ಸಂಯೋಜಿಸುತ್ತಾನೆ. ವಿಶ್ವದ ಅರ್ಧ ಭಾಗವನ್ನು ತುಂಬಿರುವ ಸಮುದ್ರದ ನೀರಿನ ಮೇಲಿನಿಂದ ಆರಂಭಿಸಿ ಸಾರ್ವತ್ರಿಕ ಸ್ಥಳದ ಶಿಖರದ ಅತಿ ಹೆಚ್ಚು ಎತ್ತರದಲ್ಲಿ ತನ್ನದೇ ಲೋಕದವರೆಗೆ ವಿಸ್ತರಿಸುವವರೆಗೆ ಬ್ರಹ್ಮನು ಒಂದರ ಮೇಲೆ ಒಂದರಂತೆ 14 ಗ್ರಹ ಲೋಕಗಳನ್ನು ನಿರ್ಮಿಸುತ್ತಾನೆ. ಆ 14 ಗ್ರಹ ವ್ಯವಸ್ಥೆಯಲ್ಲಿ ಭೂಲೋಕವು 7ನೆಯದಾಗಿದೆ.
ಬ್ರಹ್ಮನು ತನ್ನದೇ ಲೌಕಿಕ ವಸ್ತುಗಳನ್ನು ಸೃಷ್ಟಿಸುವುದಿಲ್ಲ. ಅವುಗಳನ್ನು ಕುಶಲತೆಯಿಂದ ಬಳಸಲೂ ಕೂಡ ಅವನು ಶ್ರೀ ವಿಷ್ಣುವಿನ ಮಾರ್ಗದರ್ಶನ ಮತ್ತು ಪ್ರೇರಣೆಗೆ ಅವಲಂಬಿತ. ಜೀವವು ಲೌಕಿಕ ವಸ್ತುಗಳ ಸಂಯೋಜನೆಯಲ್ಲದಿರುವುದರಿಂದ ಪ್ರತಿಯೊಂದು ದೇಹವನ್ನೂ ಚೈತನ್ಯವಾಗಿಡುವ ಜೀವವನ್ನೂ ಬ್ರಹ್ಮನು ಸೃಷ್ಟಿಸುವುದಿಲ್ಲ. ಬ್ರಹ್ಮನು ದೈಹಿಕ ವಾಹನಗಳನ್ನು ಸೃಷ್ಟಿಸಲು ಮಾತ್ರ ನೆರವಾಗುತ್ತಾನೆ. ಶಾಶ್ವತವಾದ ಜೀವ, ಜೀವಾತ್ಮಗಳನ್ನು ದೇವೋತ್ತಮನು ಪೂರೈಸುತ್ತಾನೆ.

ಬ್ರಹ್ಮನ ಸೃಷ್ಟಿಯ ಈ ಸಂಕ್ಷಿಪ್ತ ವಿವರಣೆ ಮತ್ತು ಪ್ರಸ್ತುತ ಜನಪ್ರಿಯ ವೈಜ್ಞಾನಿಕ ವಿವರಣೆಗಳ ನಡುವೆ ಇರುವ ಅನೇಕ ವ್ಯತ್ಯಾಸಗಳಲ್ಲಿ ಎರಡು ತುಂಬ ಮುಖ್ಯವಾಗಿವೆ. ಮೊದಲನೆಯದೆಂದರೆ, ವೈದಿಕ ಸಾಹಿತ್ಯವು ಪ್ರತಿ ವಿಶ್ವದಲ್ಲಿನ ಮೂಲ ಸೃಷ್ಟಿಯು ಆಧುನಿಕ ವಿಜ್ಞಾನಿಗಿಂತ ಹೆಚ್ಚು ಬುದ್ಧಿವಂತನೆಂದು ಬಿಂಬಿಸುತ್ತದೆ. ಬ್ರಹ್ಮನ ಬುದ್ಧಿ ಮತ್ತು ಅವನ ಪರಿಣಾಮಕಾರಕ ಸೃಷ್ಟಿ ಸಾಧನೆಗಳು ಶ್ರೀ ವಿಷ್ಣುವಿನಿಂದ ಮಾತ್ರ ಮೀರಿದೆ. ಇತ್ತ ಆಧುನಿಕ ವಿಜ್ಞಾನಿಗಳು ವಿಶ್ವದಲ್ಲಿನ ಮೂಲ ಸೃಷ್ಟಿಯು ಒಂದು ಸೂಕ್ಷ್ಮಜೀವಿ ಮತ್ತು ಆಧುನಿಕ ಮಾನವನ ಪೂರ್ವಜರು ಮಂಗ ಮತ್ತು ಗುಹೆ ವಾಸಿಗಳಾಗಿದ್ದರು ಎಂದು ಪ್ರತಿಪಾದಿಸುತ್ತಾರೆ.
ಎರಡನೆಯ ವ್ಯತ್ಯಾಸವೆಂದರೆ, ಎಲ್ಲ ಜೀವಜಾತಿಗಳನ್ನು ಹೆಚ್ಚೂಕಡಮೆ ಸೃಷ್ಟಿಯ ಆರಂಭದಲ್ಲಿ, ಏಕ ಕಾಲದಲ್ಲಿ ಉತ್ಪಾದಿಸಲಾಯಿತು ಎಂದು ವೈದಿಕ ಸಾಹಿತ್ಯವು ಪ್ರತಿಪಾದಿಸುತ್ತದೆ. ಆದರೆ ಜೀವಜಾತಿಗಳು ಕ್ರಮೇಣ ವಿಕಸನಗೊಂಡವು ಎಂದು ಜನಪ್ರಿಯ ವಿಕಾಸವಾದವು ಹೇಳುತ್ತದೆ. ವಿಕಾಸವಾದಿಗಳ ಪ್ರಕಾರ, ಜಲಜೀವಿಗಳು ಭೂ ಪ್ರಾಣಿಗಳಾಗಿ ವಿಕಾಸಗೊಂಡವು ಮತ್ತು ಭೂ ಪ್ರಾಣಿಗಳು ಹೆಚ್ಚೂ ಕಡಮೆ ಅತ್ಯಲ್ಪ ಕಾಲದ ಹಿಂದೆ ಮಾನವ ಜೀವಿಗಳಾಗಿ ವಿಕಾಸಗೊಂಡವು. ತಮ್ಮ ವಾದಗಳಲ್ಲಿನ ಲೋಪಗಳಲ್ಲಿ ಒಂದನ್ನು ವಿಕಾಸವಾದಿಗಳು ಒಪ್ಪಿಕೊಳ್ಳುತ್ತಾರೆ. ಅದೆಂದರೆ, ಡಾರ್ವಿನ್ ಸಿದ್ಧಾಂತವು ಶತಮಾನವನ್ನು ಮೀರಿದ್ದರೂ ಒಂದು ಜೀವಜಾತಿಯು ಮತ್ತೊಂದರಿಂದ ವಿಕಾಸಗೊಂಡಿತು ಎನ್ನುವುದನ್ನು ತೋರಿಸಲು ಪಳೆಯುಳಿಕೆಯ ದಾಖಲೆಗಳಿಲ್ಲದಿರುವುದು. ಈ ಪುರಾವೆ ಇಲ್ಲದಿರುವುದು ಬದ್ಧ ಡಾರ್ವಿನ್ನರಿಗೆ ತಮ್ಮ ವಾದಗಳ ಪರಿಷ್ಕರಣೆಗೆ ಒಂದು ಪ್ರೇರಣೆಯಾಗಿದೆ. ಆದರೆ ಕೃಷ್ಣನ ಶ್ರದ್ಧಾವಂತ ಭಕ್ತರಿಗೆ ನಾಗರಿಕ ಮಾನವ ಜೀವಿಗಳೂ ಸೇರಿದಂತೆ ಎಲ್ಲ ಜೀವ ಜಾತಿಗಳು ಸೃಷ್ಟಿಯ ಆರಂಭದಿಂದಲೂ ಅಸ್ತಿತ್ವದಲ್ಲಿವೆ ಎನ್ನುವ ವೈದಿಕ ವಾದದ ಸ್ಪಷ್ಟನೆಯಾಗಿದೆ.
ಈ ಸಂದರ್ಭದಲ್ಲಿ ಬ್ರಹ್ಮಾಂಡದ ವಯೋಮಾನವನ್ನು ಕುರಿತ ವೈದಿಕ ಲೆಕ್ಕಾಚಾರವು ಗಮನಾರ್ಹ. ಬ್ರಹ್ಮನು ಮಹಾ ವಿಷ್ಣುವಿನ ಒಂದು ಉಸಿರಿನಷ್ಟು ಕಾಲ ಜೀವಿಸುತ್ತಾನೆ ಎಂದು ವೈದಿಕ ಸಾಹಿತ್ಯವು ಹೇಳುತ್ತದೆ. ಮಹಾ ವಿಷ್ಣುವು ಉಸಿರನ್ನು ಹೊರಹಾಕಿದಾಗ ಭೌತಿಕ ವಸ್ತುಗಳು ಮತ್ತು ವಿಶ್ವಗಳು ಅವನಿಂದ ಹೊರಹೊಮ್ಮುತ್ತವೆ. ಅವನು ಉಸಿರನ್ನು ಒಳಕ್ಕೆ ಎಳೆದುಕೊಂಡಾಗ ವಿಶ್ವಗಳು ನಾಶವಾಗುತ್ತವೆ ಮತ್ತು ಅವನ ದೇಹದೊಳಗೆ ವಿಲೀನವಾಗುತ್ತವೆ. ಈ ರೀತಿ ಮಹಾ ವಿಷ್ಣುವಿನ ಪ್ರತಿಯೊಂದು ಉಸಿರಿನಿಂದಲೂ ವಿಶ್ವಗಳು ಮತ್ತು ಅವುಗಳ ಬ್ರಹ್ಮರನ್ನು ಸೃಷ್ಟಿಸಲಾಗುತ್ತದೆ ಮತ್ತು ನಾಶಪಡಿಸಲಾಗುತ್ತದೆ. ಮಹಾ ವಿಷ್ಣುವಿನ ಒಂದು ಉಸಿರು ಅಥವಾ ಬ್ರಹ್ಮನ ಒಂದು ಜೀವಿತ ಕಾಲದ ಒಂದು ವೃತ್ತಕ್ಕೆ 310 ಲಕ್ಷ ಕೋಟಿ ಸೌರ ವರ್ಷಗಳು ಬೇಕಾಗುತ್ತದೆ. (ಟ್ರಿಲಿಯನ್). ಭಾಗವತದ ಪ್ರಕಾರ, ಬ್ರಹ್ಮನ ಜೀವಿತಾವಧಿಯು ಈ ಅರ್ಧ ಭಾಗ ಕಳೆದಿದೆ. ಅಂದರೆ, ಈ ಬ್ರಹ್ಮಾಂಡವು ಎಲ್ಲ ಜೀವಜಾತಿಗಳೊಂದಿಗೆ 155 ಲಕ್ಷ ಕೋಟಿ ವರ್ಷಗಳಿಂದ ಅಸ್ತಿತ್ವದಲ್ಲಿದೆ.
ಸೃಷ್ಟಿಯನ್ನು ಕುರಿತಂತೆ ವೈದಿಕ ನಿರೂಪಣೆ ಮತ್ತು ಆಸ್ತಿಕ ನಿರೂಪಣೆ ಹಾಗೂ ನಾಸ್ತಿಕ ನಿರೂಪಣೆಗಳ ಮಧ್ಯೆ ಅನೇಕ ವ್ಯತ್ಯಾಸಗಳಿವೆ. ಬ್ರಹ್ಮಾಂಡ ಮತ್ತು ದೇವೋತ್ತಮನೊಂದಿಗೆ ಕಾಲದ ಸಂಬಂಧ, ಪ್ರತಿಯೊಂದು ಭೌತಿಕ ವಸ್ತುಗಳ ಪಾತ್ರ ಮತ್ತು ಬೆಳವಣಿಗೆ, ಗುರುತ್ವದ ಮೂಲ ಮತ್ತು ಸೃಷ್ಟಿಯನ್ನು ಕುರಿತ ಇತರ ವಿವರಗಳನ್ನು ಭಾಗವತ ಮತ್ತು ಇತರ ವೈದಿಕ ಗ್ರಂಥಗಳು ವಿಶ್ಲೇಷಿಸಿವೆ. ಪ್ರತಿಯೊಂದು ಹಂತದಲ್ಲಿಯೂ ವೇದಗಳು ಸೃಷ್ಟಿ ವಿಧಾನಗಳ ಅನನ್ಯ ಗ್ರಹಿಕೆಯನ್ನು ಹೊರಗೆಡಹುತ್ತವೆ.
ವೈದಿಕ ನಿರೂಪಣೆಗಳಲ್ಲಿ ಕೆಲವನ್ನಾದರೂ ವೈಜ್ಞಾನಿಕವಾಗಿ ಸಾಬೀತುಪಡಿಸುವುದು ಸಾಧ್ಯವೇ ಎಂದು ಅನೇಕ ಜನರು ವಾದಿಸುತ್ತಾರೆ. ಆದರೆ ಅವುಗಳನ್ನು `ವೈಜ್ಞಾನಿಕವಾಗಿ’ ಅಲ್ಲಗಳೆಯುವುದೂ ಸಾಧ್ಯವಿಲ್ಲ. ಮಹಾ ವಿಷ್ಣುವಿನ ಬೃಹತ್ ರೂಪವನ್ನು ನೀವು ಹೇಗೆ ಸಾಬೀತು ಅಥವಾ ಅಲ್ಲಗಳೆಯುವುದು ಸಾಧ್ಯ?
ವೈದಿಕ ಸಾಹಿತ್ಯವೇ ಪುರಾವೆ

ಕೊನೆ ಪಕ್ಷ ನಾವು ವೈದಿಕ ಸಾಹಿತ್ಯವನ್ನು ಪರಾವೆಗಳೆಂದು ಏಕೆ ಪರಿಗಣಿಸಬಾರದು? ಇದು ಮಾನವನಿಗೆ ತಿಳಿದಿರುವ ಅತ್ಯಂತ ಪುರಾತನ, ಅತ್ಯಂತ ಬೃಹತ್ತಾದ ಮತ್ತು ಸ್ಥಿರವಾದ ಸಾಹಿತ್ಯವಾಗಿದೆ. ಇದರಲ್ಲಿ ಸೃಷ್ಟಿಯ ವಿಧಾನಗಳನ್ನು ಕುರಿತಂತೆ ಮಾತ್ರವಲ್ಲ, ಔಷಧ, ಅರ್ಥಶಾಸ್ತ್ರ ಮತ್ತು ಮಾನವ ಸಮಾಜಕ್ಕೆ ಅಗತ್ಯವಾದ ಇತರ ಪ್ರತಿಯೊಂದು ವಿಜ್ಞಾನದ ಬಗೆಗೂ ಮಾಹಿತಿಗಳಿವೆ. ತನ್ನ ವ್ಯಾಪಕ ಗುಣದಿಂದಲೇ ವೈದಿಕ ಸಾಹಿತ್ಯವು ಪ್ರತಿಯೊಂದು ಕ್ಷೇತ್ರದಿಂದಲೂ ಅಧ್ಯಯನಕ್ಕೆ ಯೋಗ್ಯವಾಗಿದೆ. ಕೃಷ್ಣನ ಭಕ್ತರು ವೈದಿಕ ಹೇಳಿಕೆಗಳನ್ನು ಸ್ವಯಂವೇದ್ಯವಾದ ಸತ್ಯಗಳೆಂದು ಪುರಾವೆಯಾಗಿ ಒಪ್ಪಿಕೊಂಡಿದ್ದಾರೆ. ಅವರ ಈ ಸ್ವೀಕಾರಕ್ಕೆ ವೈದಿಕ ಗ್ರಂಥಗಳು ಬೃಹತ್ತಾಗಿವೆ ಮತ್ತು ವಿವರಣಾತ್ಮಕವಾಗಿವೆ ಎನ್ನುವುದಷ್ಟೇ ಕಾರಣವಲ್ಲ. ವೇದಗಳ ಕರ್ತೃ ಶ್ರೀ ಕೃಷ್ಣ ಎನ್ನುವುದೇ ಅದಕ್ಕೆ ಮುಖ್ಯ ಕಾರಣ. ಭಗವದ್ಗೀತೆಯಲ್ಲಿ ಕೃಷ್ಣನು ಹೇಳುತ್ತಾನೆ, “ಎಲ್ಲ ವೇದಗಳಿಂದ ತಿಳಿಯಬೇಕಾದವನು ನಾನು. ವೇದಾಂತ ಕರ್ತೃ ನಾನು. ವೇದಗಳನ್ನು ತಿಳಿದವನೂ ನಾನೇ.” ಕೊನೆಪಕ್ಷ ಭಕ್ತರಿಗಾದರೂ ಪರಮಸತ್ಯನು ನೀಡಿರುವ ಹೇಳಿಕೆಗಳು ಪರಿಪೂರ್ಣ ಪುರಾವೆ, ನಿರಾಕರಿಸಲಾಗದ ಪ್ರಮಾಣ.






Leave a Reply